ಪುಸ್ತಕದ ಶೀರ್ಷಿಕೆ : ಎಡಕಲ್ಲು ಗುಡ್ಡದ ಮೇಲೆ
ಲೇಖಕರು : ಭಾರತೀಸುತ
ಪ್ರಕಾಶಕರು : ರವೀಂದ್ರ ಪುಸ್ತಕಾಲಯ
ಮೊದಲನೇ ಮುದ್ರಣ : 1967
ನನ್ನ ಓದಿಗೆ ಸಿಕ್ಕಿದ್ದು : 2020 ರ ಮುದ್ರಣ
ಪುಟಗಳು : 144
ಬೆಲೆ : 125 ರೂ.
ಸುಧಾದಲ್ಲಿ ಕಾದಂಬರಿಯಾಗಿ ಮೂಡಿ ಬಂದಿರುವ, ಸಿನಿಮಾ ಕೂಡಾ ಆಗಿ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿರುವ ಕಾದಂಬರಿ "ಎಡಕಲ್ಲು ಗುಡ್ಡದ ಮೇಲೆ". ಡಿ. ಎಚ್
ಲಾರೆನ್ಸ್ ನ 'ಲೇಡಿ ಚಟರ್ಲೆಸ್ ಲವರ್' ಎನ್ನುವ ಕಾದಂಬರಿಯಿಂದ ಪ್ರೇರಿತ ಎಂದಿದ್ದಾರೆ ಲೇಖಕರು. ಆಗಿನ ಮನಸ್ಥಿತಿಯಲ್ಲಿ ವಿವಾಹಿತ ಹೆಣ್ಣಿನ ಪ್ರೇಮದ ಹೆಸರಿನ ಅನೈತಿಕ ಸಂಬಂಧ ಒಪ್ಪುವಂತಹಾ ವಿಚಾರವಾಗಿರಲಿಲ್ಲ. ಈಗ ನೈತಿಕ ಹಾಗೂ ಅನೈತಿಕತೆಯ ನಡುವೆ ಇರುವ ಗೆರೆ ಅಳಿಸಿ ಹೋಗುತ್ತಿದ್ದರೂ ಈಗಲೂ ಇದನ್ನು ಬಿಡುಬೀಸಾಗಿ ಒಪ್ಪುವುದು ಕಡಿಮೆಯೇ..
ಭೂ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದ ನಿವೃತ್ತ ಯೋಧ ಕುಮಾರ ಮೇನನ್ ಭೀಕರ ವಿಮಾನ ದಾಳಿಯಿಂದ ಕಾಲು ಊನಗೊಂಡು ಸೇವೆ ಸಲ್ಲಿಸದೆ ಮರಳಿದ್ದನು. ಕಳೆದುಕೊಂಡದ್ದು ಕಾಲು ಹಾಗೂ ಪುರುಷತ್ವವನ್ನು. ಆದರೆ, ಆತನ ಜೀವನಪ್ರೀತಿ ಹಾಗೂ ಸ್ಥೈರ್ಯ ಮೆಚ್ಚುವಂತದ್ದು. ಆತ ತನ್ನ ಮನದ ಯೋಚನೆಯನ್ನು ಕಾರ್ಯರೂಪಕ್ಕೆ ತಂದು ಕಾಫಿ, ಕಾಳು ಮೆಣಸಿನ ತೋಟ ಮಾಡಿಕೊಂಡು ಪುಟ್ಟ ಬಂಗಲೆಯನ್ನು ಕಟ್ಟಿಸಿಕೊಂಡು ವೈನಾಡಿನಲ್ಲಿ ನೆಲೆಸಿದ. ನಾಲ್ಕು ವರ್ಷಗಳ ಅಗಲಿಕೆಯ ನಂತರ ಹೆಂಡತಿ ಮಾಧವಿಯನ್ನು ತನ್ನೊಡನೆ ಕರೆತಂದ. ಮಾಧವಿಗೆ ಇರುವ ವಿಚಾರ ಹೇಳಿ, ನೊಂದ ಮನಸ್ಸಿನಿಂದ ಡೈವೋರ್ಸ್ ತೆಗೆದುಕೊಂಡು ಬೇರೆ ಮದುವೆಯಾಗಿ ಬಾಳುವಂತೆ ಸಹಾ ಹೇಳಿದ್ದನು. ಆದರೆ, ಮಾಧವಿ ಅದಕ್ಕೊಪ್ಪದೆ ತಾನು ತ್ಯಾಗದ ದಿವ್ಯಪಥ ತುಳಿಯುವಂತೆ ಮನಸ್ಸು ಮಾಡಿದ್ದೇನೆಂದು ಪತಿಯ ಎದುರಲ್ಲಿ ದೊಡ್ಡ ದೊಡ್ಡ ಮಾತುಗಳನ್ನಾಡಿದ್ದಳು.
ಆದರೆ, ಸತ್ಯ ಬೇರೆಯೇ ಇದ್ದಿತು. ಬೆಡಗು, ವಿಲಾಸಗಳಿಗೆ ಮನಸೋತ ಮಾಧವಿ ಮೇನನ್ನನು ತೊರೆಯದೆ ಉಳಿದಳು. ಆಕೆ ಹೇಳಿದಂತೆ ಪತಿಯನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಲೂ ಇದ್ದಳು. ಎಲ್ಲವೂ ಸರಿಯಾಗಿಯೇ ಇತ್ತು ಎಂದೆನಿಸುವಾಗ ಅವರ ಬಾಳಲ್ಲಿ ನಂಜುಂಡನ ಪ್ರವೇಶವಾಯಿತು. ಒಮ್ಮೆ ಎಲ್ಲಿಗೋ ಹೋಗಿ ಬರುವಾಗ ಜೀಪು ಕೆಟ್ಟು ನಿಂತಾಗ ನಂಜುಂಡ ಸಿಕ್ಕಿ ಅವರ ಮನೆಗೆ ಹೋಗಿ ಪರಿಚಯ ಗಾಢವಾಗುತ್ತದೆ. ಮಾಧವಿಯ ಮನಸ್ಸು ನಂಜುಂಡನತ್ತ ಸೆಳೆಯುತ್ತದೆ. ಸಾಧಾರಣವೆಂಬಂತೆ ತನ್ನ ಪತಿಯನ್ನು, ನಂಜುಂಡನನ್ನು ತುಲನೆ ಮಾಡುವ ಮನಸ್ಸು ಆತನ ದೇಹಕ್ಕೆ ಮನಸೋಲುತ್ತದೆ. ಪರಿಚಯ ಗಾಢವಾಗುತ್ತಾ ಹೋದಂತೆ ಮೂವರೂ ಒಮ್ಮೆ ಎಡಕಲ್ಲು ಗುಡ್ಡಕ್ಕೆ ಹೋಗುವ ಪ್ಲಾನ್ ಮಾಡುತ್ತಾರೆ. ಆದರೆ, ಕಲ್ಲಿಕೋಟೆಗೆ ಹೋಗುವ ಸಂದರ್ಭ ಬಂದು ಮೇನನ್ ಹೊರಟಾಗ ಮುಂದಿನ ದಿನಗಳಲ್ಲಿ ಹೋಗೋಣ ಎಂದು ಹೇಳುತ್ತಾನೆ. ಆದರೆ, ನಂಜುಂಡ ಹಾಗೂ ಮಾಧವಿ ಇಬ್ಬರೇ ಎಡಕಲ್ಲು ಗುಡ್ಡಕ್ಕೆ ತೆರಳುತ್ತಾರೆ. ಅಲ್ಲಿ ಅವರಿಬ್ಬರ ಪ್ರಣಯ ಪ್ರಸಂಗ ಶುರುವಾಗುತ್ತದೆ.
ಮಾಧವಿಯ ತಂದೆ ಅಸುನೀಗಿದ್ದರಿಂದ, ಸಹೋದರ ಕಾಲೇಜು ವ್ಯಾಸಂಗ ಮುಗಿಸಿ ವಿಮಾನ ದಳದಲ್ಲಿ ಸೇವೆ ಸಲ್ಲಿಸಲು ಹೋದುದ್ದರಿಂದ ಮಾಧವಿಯ ತಂಗಿ ದೇವಕಿ ಒಂಟಿಯಾಗುತ್ತಾಳೆ. ಆಗಲೇ ಅವಳು ಅಕ್ಕ - ಭಾವನ ಆಶ್ರಯದಲ್ಲಿ ನಿಲ್ಲುವುದು.
ಒಂದೇ ತಾಯಿಯ ಮಕ್ಕಳೇ ಆದರೂ ಇಬ್ಬರಲ್ಲಿಯೂ ವಿಪರೀತ ವೈರುಧ್ಯಗಳು. ಸೌಂದರ್ಯವನ್ನು ಹೊರತುಪಡಿಸಿ ನಡೆಯಲ್ಲಿ ಮಾಧವಿಗೆ ವಿರುದ್ಧ ಎಂದೇ ಹೇಳಬಹುದು ದೇವಕಿಯನ್ನು. ಸರಳತೆ, ಮೃದು ಮಾತು, ಪರೋಪಕಾರಿ, ಕೊಂಚ ಸಂಕೋಚದ ಪ್ರವೃತ್ತಿಯ, ಸದಾ ಚಟುವಟಿಕೆಯ ದೇವಕಿ. ವಿಲಾಸಿ, ಶೃಂಗಾರಾಸಕ್ತೆ, ಹಗುರ ಸ್ವಭಾವದ, ಸೋಶಿಯಲ್ ಹೆಣ್ಣು ಮಾಧವಿ. ದಿನಕಳೆದಂತೆ ಸಹಜವೆಂಬಂತೆ ತರುಣಿ ದೇವಕಿಯತ್ತ ಮನಸ್ಸು ವಾಲುತ್ತಿತ್ತು. ಮಾಧವಿಗೆ ಅದು ಅರಿವಿಗೆ ಬಂದು ಅದನ್ನು ನಂಜುಂಡನ ಬಳಿ ಹೇಳಿ ವಿರೋಧಿಸುತ್ತಾಳೆ. ಜೊತೆಗೆ, ತಂಗಿಗೆ ಒಂದೆರಡು ಶಿಕ್ಷೆಯನ್ನೂ ನೀಡುತ್ತಾಳೆ. ಆದರೆ, ದೇವಕಿಗೆ ಅದು ಏಕೆ ಎಂಬುದರ ಅರಿವಿರುವುದಿಲ್ಲ.
ಪ್ರೇಮದಿಂದ ದೇವಕಿಯ ಬಳಿ ನಡೆದುಕೊಳ್ಳಲು ಹೋದ ನಂಜುಂಡನಿಗೆ ಅವಳಿಂದ ಸಿಕ್ಕಿದ್ದು ತಿರಸ್ಕಾರ. ಮಲ್ಲಿಗೆಯ ಹಾರ ಕಾಳಸರ್ಪವಾಗಬಲ್ಲದು ಎಂದು ಅರಿವಾದಂತೆ ಆಕೆ ಮಾಧವಿಯಂತಲ್ಲ ಎಂದು ತಿಳಿಯುತ್ತದೆ.
ದೇವಕಿ ನರ್ಸಿಂಗ್ ಕಲಿಯಲು ಹೋಗುತ್ತಿದ್ದಾಗ ಅಲ್ಲಿನ ಡಾಕ್ಟರ್ ವಾಸು ಮೇನನ್ನನ ಓದಿನ ಅಭಿರುಚಿ, ಆತನ ಕರ್ತವ್ಯ ನಿಷ್ಠೆ, ವಾತ್ಸಲ್ಯ ಇವೆಲ್ಲವೂ ಅವಳನ್ನು ಮನಸೆಳೆದಿದ್ದವು. ಆತನೇ ಆಕೆಯ ಆದರ್ಶಮೂರ್ತಿಯಾಗಿದ್ದ. ಆದರೆ, ಪ್ರಣಯಲಾಲಸೆಯನ್ನು ವ್ಯಕ್ತಪಡಿಸಿದ್ದರಿಂದ ಆತನ ಮೇಲಿನ ನಂಬಿಕೆಯೂ ಕುಸಿದು ಬಿದ್ದಿತ್ತು. ಆದರೆ, ಆ ಆದರ್ಶಗಳನ್ನು ಇನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಳು ದೇವಕಿ. ಅಂತಹಾ ಆದರ್ಶವುಳ್ಳ ಮತ್ತೋರ್ವ ವ್ಯಕ್ತಿಯ ಪರಿಚಯವಾಗಿತ್ತು ದೇವಕಿಗೆ. ಅವರೇ ಪಕ್ಕದ ತೋಟದ ಶ್ರೀಧರನ್ ನಾಯರ್. ಆತನ ವ್ಯಕ್ತಿತ್ವ ಧೀಮಂತವಾದದ್ದು. ಚರ್ಚೆ, ಸರಳತೆ, ಕಾಯಕದಲ್ಲಿ ಆತನನ್ನು ಸರಿಗಟ್ಟುವರಿಲ್ಲ. ರಾಜಕಾರಣಿಯಾಗಿ ಮೆರೆಯುವಂತಹಾ ಅವಕಾಶವಿದ್ದರೂ ಅದನ್ನು ತಿರಸ್ಕರಿಸಿ ರಾಜಕೀಯಕ್ಕಿಂತಲೂ ದೇಶವನ್ನು ಮರಳಿ ಕಟ್ಟುವ ಕೆಲಸವೇ ಮಿಗಿಲು ಎಂದು ನಂಬಿಕೊಂಡಿದ್ದವನು ಶ್ರೀಧರನ್ ನಾಯರ್. ದೇವಕಿಗೆ ಅವರ ಮನೆಯ ಪರಿಚಯ , ಒಡನಾಟ ಹಿಡಿಸಿದರೆ ಮಾಧವಿಗೆ ಉಸಿರು ಕಟ್ಟಿಸುತ್ತಿತ್ತು. ತನ್ನ ಶ್ರೀಮಂತಿಕೆಯನ್ನು ಬಿಡಲೊಲ್ಲಳು ಅವಳು.
ಈ ಮಧ್ಯೆ ನಂಜುಂಡ ಇದೆಲ್ಲದರಿಂದ ದೂರ ಉಳಿಯಬೇಕೆಂದು ಬಯಸಿದರೂ ಆತನಿಗೆ ಆದ ಹಠಾತ್ ಘಾತದಿಂದ ಅವನು ದೇವಕಿಯ ನರ್ಸಿಂಗ್ ಚಿಕಿತ್ಸೆಗೊಳಪಡಬೇಕಾಯಿತು. ಬೇಡವೆಂದರೂ ಮತ್ತೆ ಮತ್ತೆ ಅಲ್ಲಿಗೇ ಹೋಗಬೇಕಾಯಿತು. ಮಾಧವಿಯ ಹಿಡಿತ ದಿನೇ ದಿನೇ ಬಲವಾಗುತ್ತಿತ್ತು. ದೇವಕಿಗೂ ಈ ವಿಚಾರ ಗೊತ್ತಾಯಿತು. ಅಕ್ಕನ ನಡವಳಿಕೆಯ ಕಾರಣ ಸ್ಪಷ್ಟವಾಗಿತ್ತು. ಇಲ್ಲಿ ಗೊತ್ತಿಲ್ಲದೆ ಉಳಿದದ್ದು ಕುಮಾರ ಮೇನನ್ನರಿಗೆ ಮಾತ್ರ.
ಎಲ್ಲರೂ ಎಡಕಲ್ಲು ಗುಡ್ಡಕ್ಕೆ ಹೊರಡುತ್ತಾರೆ. ಆರಂಭ ಎಲ್ಲಿಂದ ಆಯಿತೋ ಅಂತ್ಯವೂ ಅಲ್ಲಿಂದಲೇ ಆಗಬೇಕೆನ್ನುವ ಅಭಿಲಾಷೆಯೇನೋ ವಿಧಿಯದ್ದು. ದೇವಕಿ, ನಂಜುಂಡ ಮುಂದೆ ಮುಂದೆ ಹೋದರೆ ತಾನು ಕಾಲಿಲ್ಲದ ಪತಿಗೆ ಆಸರೆಯಾಗಿ ಮನಸ್ಸಿಲ್ಲದ ಮನಸ್ಸಿನಲ್ಲಿ ಬರುತ್ತಿದ್ದ ಮಾಧವಿಯ ಮನದ ತುಂಬೆಲ್ಲಾ ಬೇಡದ ಆಲೋಚನೆಗಳೇ.. ಇತ್ತ ದೇವಕಿ ಹಾಗೂ ನಂಜುಂಡ ಹಿಂದಿನದ್ದನ್ನು ಬಿಟ್ಟು ಸ್ನೇಹದಿಂದ ಮಾತನಾಡುತ್ತಿರುವಾಗ ಮಾಧವಿಯ ಶಂಕೆ, ರೋಷ , ಕ್ರೋಧ ಎಲ್ಲವೂ ನಂಜುಂಡನೆಡೆಗೆ ತಿರುಗಿತ್ತು. ಪ್ರಮಾಧ ಜರುಗಿಯೇ ಬಿಟ್ಟಿತ್ತು. ಪ್ರಪಾತ ಅವರಿಬ್ಬರನ್ನೂ ನುಂಗಿತ್ತು.
ಇಲ್ಲಿನ ಅಂತ್ಯ ಬಹಳ ಮಾರ್ಮಿಕವಾಗಿ ಚಿತ್ರಿತವಾಗಿದೆ. ಮೇಕೆ ಹಾಗೂ ಚಿರತೆಯ ಪ್ರಸಂಗದ ಕುರಿತು ಹೇಳುತ್ತಾ ಮುಗ್ಧತೆ, ಕ್ರೂರತೆಯನ್ನು ವರ್ಣಿಸುತ್ತಾ.. ಇನ್ನೇನು ತಪ್ಪಿಸಿಕೊಂಡ ನಿರಾಳತೆಯಲ್ಲಿದ್ದ ಮೇಕೆ ಹಾಗೂ ಸಾವು ಮುಂದಿದೆ ಎಂದು ಗೊತ್ತೇ ಇರದೆ ಬೇಟೆಯನ್ನು ಬಲಿ ಪಡೆಯಲು ಹೊಂಚು ಹಾಕಿದ ಚಿರತೆ ಇವೆರಡರ ಅಂತ್ಯ.
ಮೇಕೆಯ ಕೊರಳನ್ನು ಹಿಡಿದ ಚಿರತೆ ಹಾಗೂ ನಂಜುಂಡನ ಮುಷ್ಟಿಯಲ್ಲಿನ ಮಾಧವಿಯ ಕೈ..
ಅದೆಷ್ಟು ಅರ್ಥಪೂರ್ಣವಾಗಿ, ಮಾರ್ಮಿಕವಾಗಿ ಮೂಡಿ ಬಂದಿದೆ ಎಂದರೆ ಮೊದಲಿನಿಂದಲೂ ಏನಾಗುತ್ತದೆ ಎಂಬ ಕುತೂಹಲದಲ್ಲೇ ಓದಿಸಿಕೊಂಡು ಬಂದ ಕಾದಂಬರಿ ನಮ್ಮಲ್ಲಿಯೂ ದೇವಕಿಯಲ್ಲಿ ಹುಟ್ಟಿಸಿದ ಮೌನ ಹಾಗೂ ದಿಗ್ಭ್ರಮೆಯನ್ನೇ ಹುಟ್ಟಿಸಿಬಿಡುತ್ತದೆ.
ಸಂಸಾರದಲ್ಲಿ ಪ್ರೇಮದ ಜೊತೆಗೆ ಕಾಮ ಕೂಡಾ ಬೆರೆಯುತ್ತದೆ. ಬೆರೆತಾಗಲಷ್ಟೇ ತನು - ಮನದ ಮಿಲನ ಸಾಧ್ಯ. ಮಾಧವಿ ಇದನ್ನು ಎಲ್ಲರಂತೆ ಅನುಭವಿಸಲಿಲ್ಲವಾದರೂ.. ಅವಳ ಸೌಂದರ್ಯ, ಯೌವ್ವನ ಕಾನನದಲ್ಲಿ ಸುರಿವ ಬೆಳದಿಂಗಳಂತೆ ಎಂದು ಅವಳಿಗೆ ಭಾಸವಾದರೂ.. ಯೋಧನ ಕೈ ಹಿಡಿಯುವ ಮುನ್ನ ಅವಳು ಇದನ್ನು ಆಲೋಚಿಸಬೇಕಿತ್ತು. ಯೋಧನ ಪತ್ನಿಯಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ಸಿದ್ದಳಿರಬೇಕಿತ್ತು. ಅಕಸ್ಮಾತ್ತಾಗಿ ಕುಮಾರ ಮೇನನ್ ಕಾಲಿನ ಬದಲಾಗಿ ಪ್ರಾಣವೇ ಹೋಗಿದ್ದರೆ ಆಕೆ ಅಂತಹಾ ಪರಿಸ್ಥಿತಿಗೂ ಸಿದ್ಧಳಾಗಿರಬೇಕಿತ್ತು. ಅಲ್ಲವೇ..?? ಅಥವಾ, ಕುಮಾರ ಮೇನನ್ ತನ್ನ ನಿಜ ಸಂಗತಿ ತಿಳಿಸದೆ ಮುಚ್ಚಿಟ್ಟಿದ್ದಿದ್ದರೆ..?? ಆತನ ಪ್ರಾಮಾಣಿಕತೆ, ಸತ್ಯವೇ, ಅತಿಯಾದ ನಂಬಿಕೆಯೇ ಆತನ ಸಂಸಾರವನ್ನು ಹೀಗೆ ಮಾಡಿತಾ ಎನ್ನಿಸುತ್ತದೆ.
ಇನ್ನು, ಮಾಧವಿಯ ಆಸೆಯೂ ತಪ್ಪಲ್ಲ ಎಂದೇ ಭಾವಿಸುವುದಾದರೆ ಆಕೆಗೆ ಬೇರೆ ಬದುಕಿನ ಆಯ್ಕೆಯಿತ್ತು. ಬಹುಶಃ, ವಿಚ್ಛೇದನ ಪಡೆದ ಮೇಲೆ ಆಕೆ ಶ್ರೀಮಂತಿಕೆಯಿಂದ ಬಾಳಲಾಗದಿರಬಹುದು ಎನ್ನುವುದು ಆಕೆಯ ಆಲೋಚನೆಗೆ ಬಂದಿದ್ದೇ ಆದರೆ ಕಾಮವನ್ನು ಸಂಪೂರ್ಣ ತ್ಯಜಿಸಬೇಕಿತ್ತು. ಆಕೆ ವಿಚ್ಛೇದನ ಪಡೆದಿದ್ದರೂ ಕುಮಾರ ಮೇನನ್ ಅಷ್ಟು ಧೃತಿಗೆಡುತ್ತಿರಲಿಲ್ಲವೇನೋ.. ಆತನ ಜೀವನಪ್ರೀತಿ ಕಂಡು ಆ ಭಾವನೆ ಬಂದಿತು.
ನಂಜುಂಡ ಮಾಧವಿಯ ಪಾಶಕ್ಕೆ ಸಿಕ್ಕಾಗ ಮೊದಮೊದಲು ತಾನು ಅಷ್ಟಪದಿಯ ಬಾಹುಗಳಿಗೆ ಸಿಕ್ಕಿದ್ದೇನೆ ಎಂಬ ಅರಿವಿರಲಿಲ್ಲ. ಅಷ್ಟಪದಿಯ ಬಾಹುಗಳು ಅಷ್ಟು ಬಲಶಾಲಿ. ಒಂದಲ್ಲಾ ಒಂದು ರೀತಿಯಲ್ಲಿ ಅವುಗಳು ಸುತ್ತುವರಿಯುತ್ತಲೇ ಇರುತ್ತವೆ. ಅದರ ಜೀವ ಹೋಗುವವರೆಗೂ ಅಥವಾ ಆ ಬಾಹುಗಳನ್ನು ಕತ್ತರಿಸಿ ಬೇರ್ಪಡಿಸುವವರೆಗೂ. ಅಷ್ಟು ಬಲವಾಗಿತ್ತು ಅವಳ ಹಿಡಿತ ಎಂದಮೇಲೂ ಅವನು ದೇವಕಿ ತನ್ನನ್ನು ಅವುಗಳಿಂದ ರಕ್ಷಿಸಬಲ್ಲಳು ಎಂದುಕೊಂಡಿದ್ದ. ಒಂದು ವೇಳೆ ಆಕೆ ಆತನನ್ನು ತನ್ನ ಅಕ್ಕನನ್ನು ಅವನನ್ನು ಬೇರ್ಪಡಿಸಿ ರಕ್ಷಿಸಿದ್ದರೂ ಮತ್ತೆ ಮತ್ತೆ ಎದುರಾಗುವ ಅವರ ಭೇಟಿ ಗತವನ್ನು ನೆನಪಿಸುತ್ತಿರಲಿಲ್ಲವೇ ಎನ್ನಿಸಿತು.
ನಂಜುಂಡ ತನಗೊಬ್ಬಳಿಗೆ ಮಾತ್ರ ಮೀಸಲು ಎನ್ನುವ ಮಾಧವಿಯ ದುರಾಸೆಯ ಸ್ವಾರ್ಥ ಅದೆಷ್ಟು ಕುರುಡಾಗಿತ್ತು ಎಂದರೆ ನಂಜುಂಡ ಯಾರನ್ನಾದರೂ ಮದುವೆಯಾಗಬೇಕು ಎಂಬುದನ್ನೇ ಮರೆಸುವಷ್ಟು. ಅಕಸ್ಮಾತ್, ನಂಜುಂಡ ಕೂಡಾ ಅವಳಂತೆಯೇ ನೀನು ನನಗೊಬ್ಬನಿಗೆ ಮಾತ್ರ ಎಂದಿದ್ದರೆ.. ಮೇನನ್ನನನ್ನು ಬಿಟ್ಟು ಬಿಡುತ್ತಿದ್ದಳೇ ಮಾಧವಿ..? ಅಕಸ್ಮಾತ್ ನಂಜುಂಡ ತನ್ನ ಹಾಗೂ ಮಾಧವಿಯ ವಿಚಾರವನ್ನು ಮೇನನ್ನರಿಗೆ ತಿಳಿಸಿದ್ದರೆ..?? ಅಕಸ್ಮಾತ್, ಮಾಧವಿ ವಿಚ್ಛೇದನ ಪಡೆದು ತನ್ನ ಬಳಿ ಬಂದಿದ್ದರೆ ಸ್ವೀಕರಿಸಲು ಸಿದ್ಧನಿದ್ದನೇ ನಂಜುಂಡ ?? ಇದು ಅವರಿಬ್ಬರಿಗೂ ಮರೆಯಲ್ಲಿ ಮಾತ್ರವೇ ಬೇಕಾಗಿತ್ತು ಅಷ್ಟೇ.. ಪ್ರೇಮಕ್ಕೂ , ಮೋಹಕ್ಕೂ ಇದ್ದ ವ್ಯತ್ಯಾಸವನ್ನು ಅರಿಯಲಿಲ್ಲ ಅಷ್ಟೇ.
ಮಾಧವಿ ತಾರುಣ್ಯದ ದಿನಗಳಲ್ಲಿ ಗಂಡನಿಂದ ದೂರವಿದ್ದರೂ ಬೇರಾರನ್ನೂ ಅರಸಿರಲಿಲ್ಲ. ಆದರೆ, ಅವಳಿಗೆ ಭ್ರಮ ನಿರಸನವಾದದ್ದೇ ರೋಷ ಹುಟ್ಟಿಸಿತ್ತು. ಅದೇ ಈ ಸಂಬಂಧದ ಕಾರಣವಾ..?? ಅಕಸ್ಮಾತ್ ಅದು ಹಾಗೇನಾದರೂ ಇದ್ದಿದ್ದರೆ ಗಂಡನ ಮೇಲಿನ ಸೇಡು ಎಂದುಕೊಳ್ಳಬಹುದಾದರೂ.. ನಂಜುಂಡ ತನ್ನವನಾಗಿ ಮಾತ್ರ ಉಳಿಯಬೇಕು ಎನ್ನುವ ಸ್ವಾರ್ಥವಿರುತ್ತಿರಲಿಲ್ಲವೇನೋ..
ಮಾಧವಿ ಲಜ್ಜೆಗೆಟ್ಟ ಹೆಣ್ಣಿನಂತೆ ಕಂಡರೂ ಮರುಕ ಹುಟ್ಟಿಸುವ ಪಾತ್ರದಂತೆಯೂ ಭಾಸವಾಯಿತು. ತಪ್ಪು ಮಾಡಿದವರಿಗೆ ತಿದ್ದಿ ಬಾಳುವ ಅವಕಾಶವಿತ್ತು. ಪಶ್ಚಾತ್ತಾಪದಲ್ಲಿದ ನಂಜುಂಡನಿಗೆ ಇನ್ನೊಂದು ಅವಕಾಶ ಸಿಕ್ಕಿದ್ದರೆ ಎನ್ನಿಸಿದರೂ.. ಮನುಷ್ಯರು ಮಾಡಿದ ತಪ್ಪಿಗೆ ಮನುಷ್ಯನಿಂದ ಶಿಕ್ಷೆಯಾಗದಾಗ ಪ್ರಕೃತಿಯೇ ಅದನ್ನು ನಿರ್ವಹಿಸುತ್ತದೇನೋ ಎಂದೂ ಅನ್ನಿಸಿತು.
ಇನ್ನು ದೇವಕಿ ಹಾಗೂ ಕುಮಾರ ಮೇನನ್ನರ ಮುಂದಿನ ಭವಿಷ್ಯ ಎಂಬ ಕುತೂಹಲ ಹಾಗೆಯೇ ಉಳಿಯಿತು. ಲೇಖಕರು ಮುನ್ನುಡಿಯಲ್ಲಿ ಇದಕ್ಕುತ್ತರ ಎಂಬಂತೆ ಆ ಪಾತ್ರಗಳನ್ನು ಮುಂದಿನ ಕಾದಂಬರಿಯಲ್ಲಿ ಅಳವಡಿಸುವ ಆಕಾಂಕ್ಷೆ ತೋರಿದ್ದಾರೆ. ಆ ರೀತಿಯ ಕಾದಂಬರಿ ಬಂದಿರಬಹುದಾ.. ನನಗೆ ತಿಳಿದಿಲ್ಲ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ