ಪುಸ್ತಕದ ಶೀರ್ಷಿಕೆ : ರಂಗಮ್ಮನ ವಠಾರ
ಲೇಖಕರು : ನಿರಂಜನ
ಪ್ರಕಾಶಕರು : ವಾಹಿನಿ ಪ್ರಕಾಶನ
ಮೊದಲನೇ ಮುದ್ರಣ : 1954
ಪುಟಗಳು : 208
ವಠಾರ ಹಾಗೂ ಚಾಳ್ ಗಳು ಹೆಚ್ಚು ಪ್ರಚಲಿತವಾಗಿದ್ದ ಕಾಲದಲ್ಲಿ ಬಡ, ಮಧ್ಯಮ ಕುಟುಂಬಗಳ ಜೀವನಗಾಥೆಯನ್ನು ಕಟ್ಟಿಕೊಟ್ಟ ನಿರಂಜನರವರ ಕಾದಂಬರಿ 'ರಂಗಮ್ಮನ ವಠಾರ'. ಕಾದಂಬರಿ ಎಂದರೆ ನಾಯಕ- ನಾಯಕಿ, ಪ್ರತಿ ನಾಯಕ, ಪ್ರತಿ ನಾಯಕಿಯರೆಂಬ ಚಿತ್ರಣ ಕಣ್ಮುಂದೆ ಬಂದರೂ ಅದೆಲ್ಲದರ ಚೌಕಟ್ಟನ್ನೂ ಮೀರಿ ಚಿತ್ರಿತವಾದ ಕಾದಂಬರಿ ಇದು. ಇಲ್ಲಿ ನಾಯಕ, ನಾಯಕಿ, ಪ್ರತಿ ನಾಯಕರಿಲ್ಲದಿದ್ದರೂ ಎಲ್ಲಾ ವಯಸ್ಸಿನವರ, ಭವಣೆಗಳ ಚಿತ್ರಣವಿದೆ. ಇಲ್ಲಿನ ವಠಾರದ ಸದಸ್ಯರ ಗುಣ ಒಳ್ಳೆಯದ್ದು, ಕೆಟ್ಟದ್ದು ಅಥವಾ ಪಾಸಿಟಿವ್, ನೆಗೆಟಿವ್ ಎಂಬುದರ ಚಿತ್ರಣಕ್ಕಿಂತಲೂ ಎರಡರ ಮಿಶ್ರಣ ಎಂದರೆ ಗ್ರೇ ಶೇಡ್ ಕಾಣಸಿಗುತ್ತದೆ. ಒಬ್ಬರಲ್ಲಿರುವ ಒಳ್ಳೆಯ ಗುಣ ಅಥವಾ ಕೆಟ್ಟ ಗುಣಗಳು ಸಮಯಕ್ಕೆ ತಕ್ಕ ಹಾಗೆ ಬದಲಾಗುವುದಕ್ಕಿಂತಲೂ.. ವಾಸ್ತವದ ನೆಲೆಗಟ್ಟಿನಲ್ಲಿ ಚಿತ್ರಿತವಾದಂತಿದೆ. ಈಗಿನ ಅಪಾರ್ಟ್ಮೆಂಟ್ ಚಿತ್ರಣಕ್ಕಿಂತ ವಿಭಿನ್ನವಾದ ಲೋಕವಿದು.
ರಂಗಮ್ಮನ ವಠಾರ ಹದಿನೈದು ಕುಟುಂಬ ಅಲ್ಲಲ್ಲ.. ರಂಗಮ್ಮನ ಪ್ರಕಾರ ಹದಿನಾಲ್ಕು ಕುಟುಂಬ ಇರುವ ವಠಾರ. ರಂಗಮ್ಮನ ಮನೆಯೂ ಸೇರಿದಂತೆ ಹದಿನೈದು ಮನೆಗಳಿದ್ದವು. ಆಕೆ ಸದ್ಯದ ಪರಿಸ್ಥಿತಿಯಲ್ಲಿ ಒಂಟಿ ಜೀವಿ. ಮೂರು ಮಕ್ಕಳಿದ್ದರೂ ಸದ್ಯಕ್ಕೆ ಅವರವರ ಕುಟುಂಬದಲ್ಲಿ ವ್ಯಸ್ತರು. ಹಾಗಾಗಿ ರಂಗಮ್ಮನ ಮನೆ ಇದ್ದರೂ ರಂಗಮ್ಮನ ಲೆಕ್ಕದಲ್ಲಿ ಅದು ಓನರ್ ಮನೆ ಆದ್ದರಿಂದ ಉಳಿದ 14 ಸಂಸಾರಗಳದ್ದೇ ಲೆಕ್ಕ. ಗಂಡ ಕೃಷ್ಣಯ್ಯ ತೀರಿ ಹೋದ ನಂತರ ಈಗ ಅದು ರಂಗಮ್ಮನದ್ದೇ ಸಾಮ್ರಾಜ್ಯ.
"ಬೇರು ಕಿತ್ತು ಬೇರೆ ಕಡೆ ಮಣ್ಣು ಪಾತ್ರೆಯಲ್ಲಿ ನೆಟ್ಟ ಗಿಡ ಎಷ್ಟೆಂದರೂ ಅಷ್ಟೇ.. ಸರಿಯಾದ ಆರೈಕೆ ಇಲ್ಲದ ಮೇಲಂತೂ ಅವರ ಅವಸ್ಥೆ ಹೇಳುವುದು ಬೇಡ" ಎನ್ನುವ ಮಾತೊಂದು ಈ ಕಾದಂಬರಿಯಲ್ಲಿದೆ. ಇಲ್ಲಿನ ಹೆಚ್ಚಿನ ಸಂಸಾರಗಳು ಇದೇ ತೆರನಾದವು. ಆ ವಠಾರದಲ್ಲಿ ಹೆಚ್ಚಿನವರಿಗೆ ಆಸ್ತಿಪಾಸ್ತಿ ಇರಲಿಲ್ಲ. ತಮ್ಮ ಹಿಂದಿನ ತಲೆಮಾರುಗಳು ಉಳಿಸಿದ್ದು ಅಥವಾ ಉಳಿಸಿಕೊಂಡು ಬಂದದ್ದು ಏನೂ ಇರಲಿಲ್ಲ. ಅಲ್ಲಿನ ವಠಾರದಲ್ಲಿ ಹೊಂದಿಕೊಂಡು ಬಾಳ್ವೆ ಮಾಡುವುದು ಮುಖ್ಯವಾಗಿದ್ದಷ್ಟೇ ಅನಿವಾರ್ಯ ಸಹಾ.
ಮೂರು ಕೊಡಕ್ಕಿಂತ ಹೆಚ್ಚಿಗೆ ನೀರು ಹಿಡಿದರೆ ಅದಕ್ಕೆ ಕೊಡಬೇಕಾದ ಹೆಚ್ಚಿನ ಹಣ, ವಠಾರದ ದೀಪದ ಸ್ವಿಚ್ಚು ಎರಡರ ಕಂಟ್ರೋಲು ಇದ್ದದ್ದು ರಂಗಮ್ಮನ ಬಳಿಯೇ.. ಈ ವಿಚಾರಗಳಲ್ಲಿ ಕಟ್ಟುನಿಟ್ಟು ಎಂದರೂ ಕೆಲವು ಸಂಧರ್ಭದಲ್ಲಿ ಈ ವಿಚಾರಗಳು ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತಿದ್ದವು. ಅಷ್ಟೇ ಅಲ್ಲ.. ಉಳಿದ ನಿಯಮಗಳು ಸಹಾ ಅನುಕೂಲಕ್ಕೆ ತಕ್ಕಂತೆಯೇ.. ತಮ್ಮ ಜಾತಿಯವರಿಗೆ ಮಾತ್ರ ಮನೆ ನೀಡುವುದು, ಮದುವೆಯಾಗಿದ್ದರೆ ಮಾತ್ರ ಮನೆ ಕೊಡುವುದು ಎನ್ನುವ ನಿಯಮಗಳೂ ಬದಲಾಗಿದ್ದವು. ಎಲ್ಲಕ್ಕೂ ಕಾರಣ ಹಣ ಜೊತೆಗೆ ಅನಿವಾರ್ಯತೆ.
ಏನೇ ಮೇಲ್ವಿಚಾರಣೆ ನಡೆಸಿದರೂ.. ಪರಿಸ್ಥಿತಿಗಳು ಕೆಲವೊಮ್ಮೆ ರಂಗಮ್ಮನ ಕೈ ಮೀರಿ ಹೋದದ್ದೂ ಉಂಟು. ನಾರಾಯಣಿಯ ಸಾವು ರಂಗಮ್ಮನ ಮಾನವೀಯತೆಯ, ಒಳ್ಳೆತನದ ಪರಿಚಯ ಮಾಡಿಸುತ್ತದೆ. ಜೊತೆಗೆ, ನೆರೆಹೊರೆಯವರದ್ದೂ.. ನಾರಾಯಣಿಯ ಗಂಡನ ಅಸಹಾಯಕತೆ, ಮಕ್ಕಳ ದೈನೇಸಿ ಸ್ಥಿತಿ ರಂಗಮ್ಮನವರನ್ನು ಕಲಕಿದರೂ ಒಬ್ಬ ಓನರ್ ಆಗಿ ಅವರು ತೆಗೆದುಕೊಂಡ ತೀರ್ಮಾನ ಸರಿಯಾಗಿಯೇ ಇತ್ತು ಎನ್ನಿಸುತ್ತದೆ.
ವಠಾರದ ಅಷ್ಟು ಸಂಸಾರಗಳು ಸಹಾ ವಿಭಿನ್ನವೇ.. ನಾರಾಯಣಿ ಸತ್ತ ಮನೆಗೆ ಬಾಡಿಗೆ ಬಂದ ಶಂಕರನಾರಾಯಣಯ್ಯ ಹಾಗೂ ಚಂಪಾವತಿಯ ಸಂಸಾರದ ಸರಸ, ಸಾಮರಸ್ಯ, ಎದೆಗಾರಿಕೆ, ಮಾತಿನ ಛಾತಿ ಇವುಗಳಿಂದ ಕೊಂಚ ಸ್ಟ್ರಾಂಗ್ ಎನ್ನಿಸಿದ್ದರೆ.. ಪೋಲೀಸ್ ತನ್ನ ಸಿಟ್ಟನ್ನು ತನ್ನ ಹೆಂಡತಿಯ ಮೇಲೆ ತೀರಿಸುವ ಗಂಡನಾಗಿ.. ಪೋಲೀಸರ ಬುದ್ಧಿಯಂತೆ ರಂಗಮ್ಮ ಕೂಡಾ ಆ ಜಗಳ ಮುಗಿಯುವ ಹಂತಕ್ಕೆ ಬರುವಂತದ್ದು.. ಉಪಾಧ್ಯಾಯ ಲಕ್ಷ್ಮೀನಾರಾಯಣ ಹಾಗೂ ಅಹಲ್ಯೆಯ ಸಂಸಾರದ ಅತಿ ಆಸಕ್ತಿ ಹಾಗೂ ನಿರಾಸಕ್ತಿ, ಆ ವಠಾರದ ಮೊದಲ ಬಾಡಿಗೆದಾರ ಸುಬ್ಬುಕೃಷ್ಣಯ್ಯನ ಮೇಲೆ ರಂಗಮ್ಮನವರ ನಂಬಿಕೆ , ವಯಸ್ಸಿನಲ್ಲಿ ಒಳ್ಳೆ ಕೆಲಸದಲ್ಲಿದ್ದರೂ ಒಂಟಿಯಾಗಿದ್ದ ಚಂದ್ರಶೇಖರಯ್ಯ, ರಾಜಮ್ಮನ ಮಗ ಗುಂಡಣ್ಣ, ಕತೆಗಾರ ಜಯರಾಮನ ವಿಭಿನ್ನ ಸ್ವಭಾವ.. ಅವನ ತಂಗಿ ರಾಧಾ. ಊರೂರು ಅಲೆಯುವ ಅವರ ತಂದೆ, ಪಾಮಿಸ್ಟ್ರಿ ಪ್ರೊಫೆಸರ್ ಪದ್ಮನಾಭಯ್ಯ, ಮೇಲಿನ ಕೋಣೆಯ ಓದುವ ಹುಡುಗರು ಹೀಗೆ ಎಲ್ಲರದ್ದೂ ಒಂದೊಂದು ವಿಭಿನ್ನ ಸ್ವಭಾವದ ವಿಭಿನ್ನ ಕಥೆಗಳು.
ಒಬ್ಬೊಬ್ಬರ ಮನೆಯ ಬಾಡಿಗೆಯೂ ಒಂದೊಂದು ರೀತಿ. ಮೊದಲಿನಿಂದ ಇದ್ದ ಮನೆಯ ಬಾಡಿಗೆ ಕೊಂಚ ಕೊಂಚವೇ ಏರಿಕೆಯಾದರೆ, ಹೊಸದಾಗಿ ಬಂದವರದ್ದು ಅದಕ್ಕಿಂತಲೂ ಹೆಚ್ಚು. ಬಾಡಿಗೆದಾರರ ಪರದಾಟ, ತೊಂದರೆಗಳು ಮಾತ್ರವಲ್ಲದೇ ಬಾಡಿಗೆ ಕೊಟ್ಟವರ ಪರದಾಟವೂ, ತೊಂದರೆಗಳೂ ಚಿತ್ರಿತವಾಗಿದೆ. ಮಳೆ ಬಂದಾಗ ಸೋರುವ ಮನೆ ಬಾಡಿಗೆದಾರರ ಕಷ್ಟವನ್ನು ತೋರಿಸಿದರೆ, ಮನೆಯ ಹೆಂಚಿನ ರಿಪೇರಿ ಕೆಲಸ, ಪಾಯಿಖಾನೆ , ಸುಣ್ಣ ಬಣ್ಣದ ಕೆಲಸಕ್ಕೆ ಸರಿಯಾದ ಆಳು ಸಿಗದಿರುವುದು ರಂಗಮ್ಮನ ಒದ್ದಾಟದ ಜೊತೆಗೆ ಕೈ ಹಿಡಿತವನ್ನೂ ತೋರಿಸಿದೆ.
ಗುಂಡಣ್ಣ , ಜಯರಾಮುವಿನ ಪರಿಸ್ಥಿಗಳು ನಿರುದ್ಯೋಗದ ಬವಣೆ, ಪರದಾಟಗಳನ್ನು ತೋರುತ್ತವೆ. ಇನ್ನು ಉದ್ಯೋಗಸ್ಥರದ್ದು ಬೇರೆಯದ್ದೇ ಪಾಡು. ಒಬ್ಬರಿಗೊಬ್ಬರು ಎಷ್ಟೇ ಕಚ್ಚಾಡಿದ್ದರೂ ಕಷ್ಟಕ್ಕೆ ಪರರಿಗಾಗಿ ಮರುಗುವ, ಸಹಾಯ ಮಾಡುವ ಒಳ್ಳೆಯತನವಿದೆ.
ಕಾದಂಬರಿಯ ಚಿತ್ರಣ ಎಷ್ಟು ನೈಜವಾಗಿ ಮೂಡಿದೆ ಎಂದರೆ ಯಾರಾದರೂ ಒಬ್ಬರ ಮನೆಗೆ ಕಾಲಿಟ್ಟಾಗ ಮೂಡುವ ಸಹಜವಾದ ಕುತೂಹಲ, ಅವರ ಕುರಿತು ಹೆಂಗಸರ ಗಾಸಿಪ್ ಗಳು, ಒಂದಕ್ಕೊಂದು ಬಣ್ಣ ಕಟ್ಟಿ ಮಾತನಾಡುವ ಬಗೆ, ಹೊಸಬರನ್ನು ನೋಡುವ ನೆಪದಲ್ಲಿ ಸುಳಿದಾಡುವುದು, ಒಬ್ಬರ ಸಂಸಾರದ ಕುರಿತ ಕುತೂಹಲ ಹೀಗೆ ಎಲ್ಲವೂ ವಠಾರದ ದೃಶ್ಯಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತವೆ.
ವೈರುಧ್ಯಗಳ ದೃಶ್ಯಾವಳಿಗಳು ಬದಲಾವಣೆಯನ್ನು ತೋರುವಂತಿವೆ. ನಾರಾಯಣಿ ಸತ್ತ ಮನೆಯಲ್ಲಿ ಚಂಪಾ ಮಗುವಿಗೆ ಜನ್ಮ ಕೊಡುವುದು.. ವಠಾರದಲ್ಲಿ ಹಿಂದೆ ಮದುವೆಯ ವಿಚಾರಕ್ಕಾಗಿ ನಡೆದ ಗಲಾಟೆ ಮತ್ತೊಂದರಲ್ಲಿ ನಡೆಯದೇ ಸುಖಾಂತ್ಯವಾಗುವುದು, ನಿರುದ್ಯೋಗಿಯ ಪರದಾಟಕ್ಕೆ ವಿರಾಮ ಸಿಗುವುದು, ದೇವಯ್ಯನ ಓದಿನ ಬದಲಾವಣೆ ಹೀಗೆ..
ಇಂದಿನ ದಿನಗಳಲ್ಲಿ ಅಕ್ಕ - ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂದೇ ತಿಳಿಯದೇ ಬದುಕುವಂತಹಾ ಪರಿಸ್ಥಿತಿಯಲ್ಲಿ ಇರುವಾಗಲೂ ಸುತ್ತ- ಮುತ್ತ ಕಾಣುವವರಲ್ಲಿ ರಂಗಮ್ಮನ ವಠಾರದ ಎಷ್ಟೋ ವ್ಯಕ್ತಿಗಳ ವ್ಯಕ್ತಿತ್ವದ ಛಾಯೆ ಕಂಡು ಬರುತ್ತದೆ. ರಂಗಮ್ಮನ ವಠಾರ ಆಕೆಯ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿದ್ದಷ್ಟು ಈಗಿನ ಪರಿಸ್ಥಿತಿಯಲ್ಲಿ ಕಷ್ಟ. ಪ್ರೈವೇಸಿಗೆ ಬೆಲೆ ಕೊಡುವ ಪೀಳಿಗೆ ಬಂದಿರುವಾಗ ಅಂತಹಾ ಒಗ್ಗಟ್ಟಿನ ನೆಲೆಗಟ್ಟುಗಳೂ ಕಷ್ಟವೇ. ಆಗಿನ ಕಾಲದ ರಂಗಮ್ಮನ ವಠಾರಕ್ಕೂ ಈಗಿನ ವಠಾರಗಳಿಗೂ ಕೆಲವು ಬದಲಾವಣೆಗಳಾಗಿವೆ. ಆದರೂ, ರಂಗಮ್ಮನ ವಠಾರವನ್ನು ಈಗಿನ ಕಾಲದಲ್ಲಿಯೂ ಕಣ್ಮುಂದೆ ತಂದುಕೊಳ್ಳುವುದು ಕಷ್ಟವೇನಿಲ್ಲ.. ವ್ಯಕ್ತಿತ್ವ ಹಾಗೂ ವಠಾರಗಳನ್ನು ಕೊಂಚ ಗುರುತಿಸುವಂತಹಾ ಬದಲಾವಣೆಗಳಾಗಿರಬಹುದು ಅಷ್ಟೇ..
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ