ಪುಸ್ತಕದ ಶೀರ್ಷಿಕೆ : ಸಮಸ್ಯೆಯ ಮಗು
ಲೇಖಕರು : ತ್ರಿವೇಣಿ
ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು
ಪರಿಷತ್ತಿನಿಂದ ಮೊದಲನೇ ಮುದ್ರಣ : 2015
ಪುಟಗಳು : 176
ಬೆಲೆ : 90 ರೂ.
ಮನೋವೈಜ್ಞಾನಿಕ ಕಥೆ ಎಂದು ಬಂದಾಗ ನಾನು ಕೇಳಿದ್ದು ತ್ರಿವೇಣಿಯವರ ಖ್ಯಾತ ಕಾದಂಬರಿ ಶರಪಂಜರ ಹಾಗೂ ಸಮಸ್ಯೆಯ ಮಗು ಎನ್ನುವ ಕಥೆಯ ಕುರಿತು. ಓದುವ ಮುನ್ನವೇ ನಿರೀಕ್ಷೆ ಮೂಡಿಸಿದ್ದ ಪುಸ್ತಕಗಳಿವು. "ಸಮಸ್ಯೆಯ ಮಗು" ಕಥಾ ಸಂಕಲನ 15 ಕಥೆಗಳ ಸಂಕಲನ.
ಸಂಕಲನದ ಮೊದಲ ಕಥೆಯೇ 'ಸಮಸ್ಯೆಯ ಮಗು'. ಮಕ್ಕಳು ತುಂಬಾ ಮುದ್ದಿನಿಂದ ಬೆಳೆದಾಗ ಅಥವಾ ಮನೆಗೆ ಮತ್ತೊಂದು ಮಗು ಬಂದಾಗ ಆ ಮಗುವಿನ ಮನಸ್ಸಲ್ಲಿ, ತನಗೆ ಯಾರೂ ಗಮನ ನೀಡುತ್ತಿಲ್ಲ ಎಂಬ ಭಾವನೆ ಸುಳಿಯಬಹುದು. ಅದಕ್ಕಾಗಿ ಮೊದಲಿನಂತೆ ತನ್ನ ಕಡೆಗೆ ಹಿರಿಯರ ಗಮನ ಸೆಳೆಯಲು ಏನೆಲ್ಲಾ ಪ್ರಯತ್ನಗಳನ್ನೂ ಮಾಡಬಹುದು. ಕೆಲವರು ಇದನ್ನು ಕಂಡು ಹಿಡಿಯಬಹುದು. ಇಲ್ಲವೇ ಕಡೆಗಣಿಸಿ ಹುಚ್ಚು ಎನ್ನಲೂಬಹುದು. ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದು. ದೊಡ್ಡವರಿಗೆ ಇದು ಸಮಸ್ಯೆಯೇ ಅಲ್ಲ ಎನ್ನಿಸವಹುದು ಅಥವಾ ನೋಡುವವರ ಕಣ್ಣಿಗೆ ಚಿಕ್ಕ ಸಮಸ್ಯೆಯಂತೆಯೋ ಅಥವಾ ಮಕ್ಕಳಾಟದಂತೆಯೋ ಕಾಣಬಹುದು. ಮಗುವಿನ ಮನಸ್ಸಿನ ಮೇಲೆ ಏನೆಲ್ಲಾ ಪರಿಣಾಮಗಳಾಗಬಹುದು ಇದರಿಂದ ಎಂಬುದನ್ನು ಹೇಳುವ ಕಥೆ "ಸಮಸ್ಯೆಯ ಮಗು". ಸಮಸ್ಯೆಯ ಮಗುವಾದ ನಾಗೇಂದ್ರ ಗುಣವಾದ ಕಥೆಯ ಜೊತೆಗೆ ಪೋಷಕರಿಗೂ ಎಚ್ಚರಿಕೆಯಂತೆ ಇದೆ ಈ ಕತೆ.
"ಕೆಸರಿನ ಕಮಲ"ದಂತಿರುವ ಎಷ್ಟೋ ಮಕ್ಕಳು ಕಾಣಸಿಗುತ್ತವೆ. ಹೆತ್ತು ಅನಾಥವಾಗಿ ಬಿಟ್ಟು ಹೋದ ಮಕ್ಕಳನ್ನು ಸಮಾಜ ಕಾಣುವುದೇ ಆಗಲ್ಲವಾ..?? ತಂದೆ - ತಾಯಿಯರ ತಪ್ಪಿಗೆ ಮಕ್ಕಳು ಬಲಿಯಾಗಬೇಕೇಕೆ..?? ಮಗು ಸತ್ತ ತಾಯಿ ಅಂತಹಾ ಮಗುವಿಗೆ ಎದೆಹಾಲು ನೀಡುತ್ತಾಳಾ..?? ಭವಿಷ್ಯದಲ್ಲ, ವಾಸ್ತವಕ್ಕೂ ಅಡಿಗಡಿಗೆ ಇಂತಹಾ ಸಂಕಷ್ಟ ಎದುರಿಸುವ ಮಗುವಿನ ಕತೆಯ ಆರಂಭದ ದಿನಗಳ ಚಿತ್ರಣದ ಜೊತೆಗೆ ತಾಯಿಯ ಮನದ ತುಮುಲ ಕೂಡಾ ಕಾಣುತ್ತದೆ.
"ಸೂಕ್ಷ್ಮ ಬುದ್ದಿ, ವಿದ್ಯೆ, ಜಾಣ್ಮೆ, ಹಣ , ನಾಗರೀಕತೆ, ಕಲ್ಪನಾಶಕ್ತಿ ಹೆಚ್ಚಿದಷ್ಟೂ ಮನುಷ್ಯನ ಟೀಕಾ ಬುದ್ದಿ, ದೂರಾಲೋಚನೆ ಹೆಚ್ಚು ಹರಿತವಾಗುತ್ತವೆ." ಎನ್ನುತ್ತಾರೆ ಲೇಖಕಿ 'ತುಂಬಿದ ಕೊಡ' ಕತೆಯಲ್ಲಿ. ಹಾಗೆ ಹೆಚ್ಚಿದ ಎಲ್ಲವೂ ಸಂತೋಷ, ನೆಮ್ಮದಿಯನ್ನೇ ಕಸಿದುಕೊಂಡುಬಿಡುತ್ತವಾ..?? ರಾಣಿ ತನಗೂ ಹಾಗೂ ನಂಜನ ಸಂಸಾರಕ್ಕೂ ಮಾಡಿಕೊಳ್ಳುವ ಹೋಲಿಕೆಯಲ್ಲಿ ಕಂಡದ್ದು ನಂಜನ ಮುಗ್ಧತೆ ಹಾಗೂ ರಾಣಿಯ ಮನದ ತೊಳಲಾಟ.
'ಮೂರು ಗಂಟೆಯೊಳಗೆ' ಏನೆಲ್ಲವೂ ಆಗಬಹುದಲ್ಲಾ.. ಗೋಪು, ಪಾಪು ಮದುವೆ ಮನೆಯಲ್ಲಿ ಕಂಡ ಹುಡುಗಿಯ ಬಗ್ಗೆ ಏನೆಲ್ಲವನ್ನು ಆಲೋಚಿಸುತ್ತಾರೆ. ಆದರೆ, ಆಕೆ ವಿಧವೆ ಎಂದು ಗೊತ್ತಾದ ನಂತರ ಅದೇ ಯೋಚನೆಗಳು ಉಳಿಯುತ್ತವೆಯಾ..?? ಓದಿ ನೋಡಿ.
ಮಗಳನ್ನು ನಿರ್ವಾಹವಿಲ್ಲದೆ ಮುದುಕನೊಬ್ಬನಿಗೆ ಮದುವೆ ಮಾಡಿಕೊಡುವ ಅರವತ್ತರ ತಂದೆಯ ಮನಸ್ಸು ಒಂದು ರೀತಿಯ ವೇದನೆಯಲ್ಲಿದ್ದರೆ 'ಮಗಳ ಮನಸ್ಸು' ಬೇರೊಂದು ರೀತಿಯ ವೇದನೆ ಅನುಭವಿಸುತ್ತಿರುತ್ತದೆ. ಮಗಳ ಮನಸ್ಸು ತಂದೆಗೆ ಅರ್ಥವಾದಂತೆ ತಂದೆಯ ಮನಸ್ಸು ಮಗಳಿಗೆ ಅರ್ಥವಾಯಿತೇ ? ಬದುಕು ಹಾಗೂ ಮನಸ್ಸುಗಳು ಮಿಳಿತಗೊಂಡ ಕತೆ.
'ಪ್ರೇಮದ ಬೆಳಕು' ಸೌಂದರ್ಯದ ಅಮಲಲ್ಲಿ ಕೆಲಕಾಲ ಮರೆಯಾದರೂ ಬದುಕಿಗೆ ಬೇಕಾದದ್ದು ಸೌಂದರ್ಯವಲ್ಲ.. ಪ್ರೇಮವೆಂದು ಅರಿವಾಗಿಸುವ ಕತೆ. ಸಂಜಯ ಎಂಬ ಚಿತ್ರಕಾರನ ಕಣ್ಣಿಗೆ ಮಾಯಾದೇವಿ ಎಂಬ ನೃತ್ಯಗಾರ್ತಿ ಕಂಡಳು. ಅವಳ ಸೌಂದರ್ಯ ಕಂಡಿತು. ಅದೆಲ್ಲದರ ಹಿಂದಿನ ಕೈ ಮಂಜುವಿನ ಕುರೂಪದಲ್ಲಿ ಮರೆಯಾಗಿತ್ತು. ನಂತರ ಮಂಜುವಿನಿಂದಲೇ ಪ್ರೇಮದ ಬೆಳಕು ಮೂಡಿತು.
ಕೆಲವೊಮ್ಮೆ ತಪ್ಪು ತಿಳುವಳಿಕೆಗಳಿಂದ ಮನುಷ್ಯರನ್ನು ತಪ್ಪಾಗಿ ಅರ್ಥೈಸಿಕೊಂಡು ಬಿಡುತ್ತೇವೆ. ಯಾರಾದರೂ ಹಿಂದೆ ಹಿಂದೆ ಬರುತ್ತಿದ್ದಾಗ ನಮ್ಮನ್ನೇ ಹಿಂಬಾಲಿಸಿ ಬರುತ್ತಿರುವರೇನೋ ಎಂದು ಭಾಸವಾಗುತ್ತದಲ್ಲಾ ಹಾಗೆ. ಆಕೆಗೆ 'ಆ ಸಂಜೆ' ನೀಡಿದ್ದ ಅನುಭವವೂ ಇಂತದ್ದೇ.. ಆಕೆ ಸೀರೆ ಕೊಳ್ಳಲು ಹೋದ ಅಂಗಡಿಗೆಲ್ಲಾ ಒಬ್ಬ ಆಗಂತುಕ ಬಂದು ಅವಳನ್ನೇ ಹಿಂಬಾಲಿಸುತ್ತಿದ್ದ. ಆತನಿಗೆ ಬೇರೆಯದ್ದೇ ಕಾರಣವಿತ್ತು. ಇಬ್ಬರೂ ಬಾಯಿ ಬಿಟ್ಟು ಮಾತನಾಡಲಿಲ್ಲ. ಆ ಸಂಜೆಯ ಮೌನ ಅಪಾರ್ಥದಲ್ಲಿ ಕಳೆದು ಹೋಯಿತು.
ಎಷ್ಟೋ ಹೆಣ್ಣು ಮಕ್ಕಳು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳದೇ.. ಆಡಲೂ ಆಗದೆ, ಅನುಭವಿಸಲೂ ಆಗದೇ ಸುಮ್ಮನೆ ಉಳಿದು ಹೋಗುತ್ತಾರೆ. ಹಾಗೆಯೇ ಬದುಕುತ್ತಿದ್ದವಳ ಬದುಕಲ್ಲಿ ಮತ್ತೊಮ್ಮೆ ಅವನು ಬಂದಿದ್ದ. ಸಂಸಾರದ ಸರಿಗಮ ಸರಿಪಡಿಸಿಕೊಳ್ಳುತ್ತಾಳಾ ಅಥವಾ ಹಾಗೆಯೇ ಉಳಿದು ಹೋಗುತ್ತಾಳಾ ಎನ್ನುವುದು ಅವಳ ಮೇಲೆಯೇ ಅವಲಂಬಿತ. ಅವಳ 'ಕೊನೆಯ ನಿರ್ಧಾರ' ಕೇವಲ ಅವಳ ಬದುಕಿನದ್ದು ಮಾತ್ರವಲ್ಲ.. ಅವನಿಗೂ..
ಒಂದು 'ಭಾವಚಿತ್ರ' ಮನಸ್ಸಿನಲ್ಲಿ ಏನೆಲ್ಲಾ ತರಂಗಗಳನ್ನು ಎವ್ವಿಸಬಲ್ಲದು. ಆ ಭಾವಚಿತ್ರ ಹುಡುಗಿಯದ್ದಲ್ಲ ಎಂದು ತಿಳಿದ ಮೇಲೆ ಅವರ ಬದುಕಿನ ಹಿನ್ನೆಲೆ ತಿಳಿದ ಮೇಲೆ ಹೆಣ್ಣಿನ ಬಗೆಗಿನ ಅಭಿಪ್ರಾಯ, ಮದುವೆಯ ಬಗೆಗಿನ ಅಭಿಪ್ರಾಯವೇ ಬದಲಾಯಿತಲ್ಲಾ.. ಒಬ್ಬರ ಮನಸ್ಸಿನಲ್ಲಿ ಸಿಹಿ ಆಕಾಂಕ್ಷೆಗಳಿದ್ದರೆ, ಮತ್ತೊಬ್ಬರಲ್ಲಿ ಕಹಿ.
'ಮಗುವಿನ ಕರೆ'ಗೆ ಓಗೊಡದ ತಾಯಿ ಇದ್ದಾಳಾ..?? ತಬ್ಬಲಿ ನಾಗಮ್ಮ ಮಗುವಿನ ಕರೆಗೆ ಓಗೊಡದೆ ಹೋಗಿದ್ದರೆ ಆ ಮಗು ಮತ್ತೊಂದು ಕೆಸರಿನ ಕಮಲವಾಗುತ್ತಿತ್ತೇನೋ.. ಒಂದು ಕನಸು ಸತ್ತರೂ ಇನ್ನೊಂದನ್ನು ಸಾಕಾರಗೊಳಿಸಿಕೊಳ್ಳುವ ಪಾಸಿಟಿವ್ ಅಂಶದ ಅಂತ್ಯ ಇಷ್ಟವಾಯಿತು.
ವಿಶ್ವನಾಥ ಹಾಗೂ ವಿಜಯರದ್ದು ಪ್ರೇಮ ವಿವಾಹವಲ್ಲದಿದ್ದರೂ 'ವಿಶ್ವ - ವಿಜಯ ' ಮನಸ್ಸಿನಿಂದ ಅರ್ಥೈಸಿಕೊಂಡು ಮನಸಾ ಒಂದಾದ ಪ್ರೇಮವಲ್ಲದ ಪ್ರೇಮದ ಕತೆ.
ಯಾವುದೋ ಒಂದು ನಡೆ ನಮಗೇ ಅರ್ಥವಾಗದಿದ್ದಾಗ ಮತ್ತೊಬ್ಬರಿಗೆ ಅರ್ಥ ಮಾಡಿಸುವುದಾದರೂ ಹೇಗೆ ? ದಾಂಪತ್ಯದಲ್ಲಿ ಇಂತಹಾ ಸಂದರ್ಭವೊಂದು ಎದುರಾದರೆ.. ಅದರಲ್ಲಿಯೂ ಹೆಣ್ಣಿನ ನಡೆ ಹಾಗನ್ನಿಸಿದಾಗ ಎಲ್ಲವನ್ನೂ ಮತ್ತೊಂದು ಆಯಾಮದಿಂದ ನೋಡಲು ಶುರು ಮಾಡಿ ಬಿಡುತ್ತಾರೆ. ಅಂತಹಾ 'ಮೂರನೆ ಕಣ್ಣು' ಸಂಸಾರದೊಳಗೆ ಇಣುಕಿದರೆ.. ಅಂಬುಜಾ ಹಾಗೂ ಅನಂತನ ಬದುಕಲ್ಲಿ ಇಂತಹದ್ದೇ ಸಂಧರ್ಭ ಎದುರಾಯಿತು. ಆದರೆ, ಆ ಪ್ರಶ್ನಾರ್ಥಕ ಭಾವಕ್ಕೆ ಉತ್ತರವೂ ದೊರೆಯಿತು. ಅಲ್ಲಿಯವರೆಗೆ ಆದ ಮನಸ್ಸಿನ ಹಿಂಸೆ ಹೇಳಲಾಗದ್ದು. ಅಲ್ಲವಾ..
ತಾಯ್ತನ ಎನ್ನುವುದು ಹೆಣ್ಣಿನ ಬದುಕಿನ ಮಹತ್ವದ ಘಟ್ಟ. ಅಂತಹಾ ಬದಲಾವಣೆಯಲ್ಲಿ ಅವಳ ದೇಹ ಮಾತ್ರವಲ್ಲ ಅವಳ ಮನಸ್ಸು ಕೂಡಾ ಸೂಕ್ಷ್ಮವೇ.. ಮತ್ತೊಂದು ಮನೋವೈಜ್ಞಾನಿಕ ಕಥೆ 'ನರಬಲಿ'.
'ಇಂದು - ನಾಳೆ' ಎನ್ನುವ ಬದುಕಿನ ದಿನಗಳಲ್ಲಿ ಅದೆಷ್ಟು ವ್ಯತ್ಯಾಸ. ಇಂದು ಏರಿದ ಉತ್ತುಂಗದ ಏಣಿಯನ್ನು ನಾಳೆ ಇಳಿಯಲೇ ಬೇಕು. ಲೀಲಾಕುಮಾರಿ ಎನ್ನುವ ನಾಯಕಿಯ ಏರಿಳಿತಗಳ ಕತೆ ಕೆಲವು ಸಿನಿಮಾ ನಟಿಯರ ನೆನಪು ಮಾಡಿತು.
'ನಾಯಿಬಾಲ' ಎನ್ನುವ ಕಥೆ ವಿಭಿನ್ನವಾಗಿದೆ. ಶಾಲಮ್ಮ ಹಾಗೂ ನರಸಮ್ಮನಿಗೆ ಅವರಿವರ ಬದುಕಿನ ಕುರಿತು ಅದೆಷ್ಟು ಆಸಕ್ತಿಯೋ.. ಆಸಕ್ತಿಯಾಗಿದ್ದರೆ ಮಾತ್ರ ಪರವಾಗಿಲ್ಲ.. ಯಾರು ಎಷ್ಟೇ ಬೈದರೂ, ಹೇಳಿದರೂ, ಗದರಿದರೂ ತಮ್ಮ ಬುದ್ಧಿಯನ್ನೇ ಬಿಡದಷ್ಟು ಡೊಂಕು ಬುದ್ಧಿಯವರು. ಅವರಿವರ ಮನೆಯ ಸುದ್ದಿಯನ್ನು ಒಂದಕ್ಕೆರಡು ಮಾಡಿ ಹರಡುವಲ್ಲಿಯೇ ಅವರ ಆಸಕ್ತಿ. ಅವರಿಬ್ಬರೂ ಪಾಠ ಕಲಿತರೇ ಅಥವಾ ಅದೇ ಚಾಳಿಯನ್ನು ಮುಂದುವರಿಸಿದರೇ ? ತಿಳಿಯಲು ಓದಿ ನೋಡಿ ಈ ಕತೆಯನ್ನು.
ಇವು ಕೇವಲ ಬದುಕಿನ ಕಥೆಯಲ್ಲ.. ಭಾವಗಳದ್ದು, ಮನಸ್ಸಿನದ್ದು, ಸಂಬಂಧಗಳದ್ದು, ಮಾನವೀಯತೆಯದ್ದು.. ಎಲ್ಲವನ್ನೂ ಒಳಗೊಂಡದ್ದು. ಮನೋವೈಜ್ಞಾನಿಕ ಕತೆಗಳ ಜೊತೆಗೆ ಸ್ತ್ರೀ ಕೇಂದ್ರಿತ ಹಾಗೂ ಕಾಳಜಿಯ ಕತೆಗಳಿವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ