ಮಂಗಳವಾರ, ಏಪ್ರಿಲ್ 7, 2026

ಶಿವರಾತ್ರಿ (ಪುಸ್ತಕ ಯಾನ - 50)

 

ಪುಸ್ತಕದ ಶೀರ್ಷಿಕೆ : ಶಿವರಾತ್ರಿ

ಲೇಖಕರು : ಗೊರೂರು ರಾಮಸ್ವಾಮಿ ಅಯ್ಯಂಗಾರ್

ಪ್ರಕಾಶಕರು : ಐ ಬಿ ಹೆಚ್ ಪ್ರಕಾಶನ

ಮೊದಲನೇ ಮುದ್ರಣ : 1947

ನಾಲ್ಕನೇ ಮರುಮುದ್ರಣ : 2022 (ನನ್ನ ಓದಿಗೆ ಸಿಕ್ಕಿದ್ದು )

ಪುಟಗಳು : 148

ಬೆಲೆ : 135


ಗೊರೂರು ರಾಮಸ್ವಾಮಿ ಅಯ್ಯಂಗಾರರ ಈ ಕಥಾ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ಸಾವಿರದ ಎರಡನೆಯ ರಾತ್ರಿ ಹಾಗೂ ಯಾಗಭಂಗ ಈ ಎರಡೂ ಕಥೆಗಳು ತಮಿಳಿನ ಆಧುನಿಕ ಸಾಹಿತ್ಯದಿಂದ ಆಯ್ದುಕೊಂಡು ಅನುವಾದಿತವಾದವು. ಗೊರೂರರ ಬರಹಗಳನ್ನು ಓದಿದ್ದವರಿಗೆ ಅವರ ಬರಹದ ಶೈಲಿಯಲ್ಲಿ ತೆಳು ಹಾಸ್ಯ ಲೇಪಿತವಾಗಿರುವುದು ಅರಿವಿರುತ್ತದೆ. ಅಂತಹಾ ಮುದ ನೀಡುವ ಹಾಸ್ಯ ಸಂಗತಿಗಳನ್ನು ಮತ್ತಷ್ಟು ಸ್ವಾರಸ್ಯಕರವಾಗಿಸಿ ಓದನ್ನು ಆಹ್ಲಾದಕರಗೊಳಿಸುತ್ತದೆ. ಆಧುನಿಕ ತಮಿಳು ಸಾಹಿತ್ಯದ ಹಾಸ್ಯವನ್ನೂ ಪರಿಚಯಿಸುವ ಸಲುವಾಗಿ ಆ ಕಥೆಗಳನ್ನು ಇಲ್ಲಿ ಸೇರಿಸಿದ್ದಾರೆ ಲೇಖಕರು.


ಭಾಗ್ಯಮ್ಮನನ್ನು ಮದುವೆಯಾಗಿ ಸುಖವಾಗಿದ್ದ ಪಿಲ್ಲಯ್ಯ ಕರ್ಮಯೋಗಿ ಸಹಾ. ಕೃಷಿ ಮಾಡುತ್ತಾ, ವೀಳೆಯದೆಲೆ ಬೆಳೆಯುತ್ತಾ ಆರಾಮಾಗಿದ್ದನು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಸುಖವಾಗಿದ್ದ ಪಿಲ್ಲಯ್ಯ ಸುಬ್ಬಿಯನ್ನು ಮದುವೆಯಾದ. ಅವನು ಮದುವೆಯಾಗಿದ್ದು ಏಕೆ ಹಾಗೂ ಮದುವೆಯ ನಂತರ ಹೇಗಾದ ಎಂಬುದನ್ನು ಹೇಳುವ ಕಥೆ 'ಇಬ್ಬರು ಹೆಂಡಿರು'. ಇಬ್ಬರನ್ನು ಮದುವೆಯಾಗುವ ಜನರಿಗೆ ಇದೊಂದು ನೀತಿ ಪಾಠದಂತಿದೆ.


"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ" ಎನ್ನುವ ನಮ್ಮ ದೇಶದಲ್ಲಿ ಹೆಂಡತಿಯ ಪರಿಕಲ್ಪನೆ ಅವರ ಮಾತುಗಳಲ್ಲಿ ಇರುವಂತೆಯೇ.. ನಡತೆಯಲ್ಲಿಯೂ ಇರುತ್ತದಾ.. 'ಸಹಧರ್ಮಿಣಿ' ಕಥೆ ಓದಿ ನೋಡಿ.


ಈಗ ವಿಮೆ ಮಾಡಿಸುವುದರ ಹಿಂದಿನ ಅರ್ಥ ಬದಲಾಗಿದೆ. ಹಿಂದೆಲ್ಲಾ ವಿಮೆ ಮಾಡಿಸಿದರೆ ಸಾವನ್ನೇ ಆಹ್ವಾನಿಸಿದಂತೆ ಎನ್ನುವಂತಿದ್ದ ಕಾಲ. ಅಂತಹಾ ಸಂಧರ್ಭದಲ್ಲಿ "ವಿಮೆ ಯಮನನ್ನೇ ಹೆಸರಿಸಿತು" ಎನ್ನುತ್ತಾರೆ ಲೇಖಕರು. ಪ್ಲೇಗ್ ಕಾಲದ ವಿಮೆಯ ಕಥೆ ಇದು.


ಶ್ರೀನಿವಾಸ ಮೈಸೂರಿನಲ್ಲಿ ಸರ್ಕಾರಿ ಉಪನ್ಯಾಸಕನಾಗಿದ್ದವನು. ಆತನಿಗೆ ಕವಿತೆ ಬರೆಯುವ ಹವ್ಯಾಸ. ಅದನ್ನು ಹೆಂಡತಿಗೆ ಹೇಳಿದಾಗ ಅವಳು ಅರ್ಥ ಮಾಡಿಕೊಳ್ಳಲೇ ಬೇಕೆಂಬ ಹುಚ್ಚು ಹಠ. ಅವಳೋ ಹಳ್ಳಿಯ ಹುಡುಗಿ. ಅವಳಿಗೆ ಕೆಲವು ಕವಿತೆಗಳು ಅರ್ಥವಾಗುತ್ತಿರಲಿಲ್ಲ ಹಾಗಾಗಿ ಅವಳಿಗೆ ಸಾಹಿತ್ಯದಲ್ಲಿ ಅಭಿರುಚಿ ಮೂಡಲಿ ಎನ್ನುವ ಕಾರಣಕ್ಕೆ ಅವಳನ್ನು ಬೆಂಗಳೂರಿಗೆ ವಸಂತ ಸಾಹಿತ್ಯ ಮಾಲೆ ಕಾರ್ಯಕ್ರಮಕ್ಕೆ ಕೆಲ ದಿನಗಳ ಮಟ್ಟಿಗೆ ಕಳುಹಿಸುತ್ತಾನೆ. ಅದೇ ಸಮಯದಲ್ಲಿ ಒಂದು ಕವಿಗೋಷ್ಠಿಗೆ ಶ್ರೀನಿವಾಸನಿಗೆ ಅವನ ಕವಿತೆ ಬೇಕಾಗಿರುತ್ತದೆ. ಆ ಕವಿತೆ ಪುಸ್ತಕ ಎಲ್ಲಿರುವುದೆಂದು ಕೇಳಿ ಪದ್ಮಾಳಿಗೆ ಕಾಗದ ಬರೆಯುತ್ತಾನೆ. ಅತ್ತಲಿಂದಲೂ ಕಾಗದ ಬರುತ್ತದೆ. ಈಗಿನ ವಾಟ್ಸಾಪ್ ಮೆಸೇಜ್ ಗಳ ಭರಾಟೆಯಲ್ಲಿ ಮರೆಯಾಗಿರುವ ಪತ್ರ ವ್ಯವಹಾರವನ್ನು ನೇಮಪಿಸುವುದಷ್ಟೇ ಅಲ್ಲ.. ಗಂಡ, ಹೆಂಡತಿಯ ನಡುವಿನ ಮಾತುಕತೆಯನ್ನು ಇದ್ದಂತೆ ಬಿಚ್ಚಿಡುತ್ತದೆ. ಶ್ರೀನಿವಾಸನ ಕವಿತೆಯ ಪುಸ್ತಕ ಸಿಕ್ಕಿತಾ..?? ಎಲ್ಲಿತ್ತು ?? ಯಾವಾಗ ?? ಪದ್ಮಾ ಸಾಹಿತ್ಯಾಸಕ್ತಳಾದಳಾ ಓದಿ ತಿಳಿಯಿರಿ. ಒಂದು ಮುದ ನೀಡುವ ಕಥೆ.


ಮತ್ತೊಂದು ಮುದ ನೀಡುವ ನವಿರಾದ ಹಾಸ್ಯದ ಕತೆ "ಹೆಂಡತಿ ಎಂಬುದನ್ನು ಮರೆತರೆ". ಬಹುಶಃ ಸಂಸಾರವಂದಿಗರು ಒಂದಲ್ಲಾ ಒಂದು ಬಾರಿ ಈ ರೀತಿಯ ಪ್ರಸಂಗಗಳನ್ನು ಎದುರಿಸಿರಬಹುದು. ಯಾರಾದರೂ ಸ್ನೇಹಿತರು ಮನೆಗೆ ಬಂದಾಗ ತಾವೇ ಮುಂದಾಗಿ ಬಂದವರನ್ನು ಉಪಚರಿಸಿದಾಗ.. ಹೆಂಡತಿಯನ್ನು ಬೇಕೆಂದೇ ಕಡೆಗಣಿಸದಿದ್ದರೂ.. ಅವಳಿಗೆ ಆ ರೀತಿ ಅನ್ನಿಸಿದರೆ ಹೇಗಿರುತ್ತದೆ ? ಕೊಂಚ ಮುನಿಸಿನಿಂದ ಪ್ರಾರಂಭವಾಗುವ ಕಲಹ, ವಿರಸ ಕೆಲವೊಮ್ಮೆ ವಿರಹಕ್ಕೂ ಎಡೆ ಮಾಡಿಕೊಡಬಹುದು. ಅಂತಹಾ ಪ್ರಸಂಗವೊಂದರ ಪ್ರಸ್ತುತಿ ಇಲ್ಲಿದೆ. ಈ ಕತೆಯ ಅಂತ್ಯ ಕೂಡಾ ಅಷ್ಟೇ ಸೊಗಸು. ನೀತಿ ಎಂದಲ್ಲದಿದ್ದರೂ ವಾಸ್ತವವನ್ನೇ ಕಟ್ಟಿಕೊಟ್ಟ ಹಾಗಿದೆ.


ವೈದಿಕರ ಊರಾದ ಮಲ್ಲಿಗೆಹಳ್ಳಿಯಲ್ಲಿ ಆಧುನಿಕ ಮನಸ್ಥಿತಿಯ ಶ್ರೀನಿವಾಸ ತನ್ನ ಮಗಳು ಕರುಣಾಳಿಗೆ ಬಾಲ್ಯ ವಿವಾಹ ಮಾಡೆನೆಂದು ಹೇಳುತ್ತಿದ್ದಾಗಲೇ ಅಮ್ಮನ ಅನಾರೋಗ್ಯ, ಒತ್ತಾಯ ಎಲ್ಲವೂ ಸೇರಿ ಮಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ವಿವಾಹ ಮಾಡುತ್ತಾನೆ. ಯಾವುದು ಆಗಬಾರದು ಎಂದುಕೊಂಡಿದ್ದನೋ ಅದೇ ಆಗುತ್ತದೆ. ಮಗಳು ಚಿಕ್ಕ ವಯಸ್ಸಿನಲ್ಲಿ ವಿಧವೆಯೂ ಆಗಿ ಬಿಡುತ್ತಾಳೆ. ಆದರೆ, ಆಕೆಯ ಓದು ಮುಂದುವರಿಸಲು ಮದ್ರಾಸಿಗೆ ಕಳುಹಿಸುತ್ತಾನೆ. 10 ವರ್ಷಕ್ಕೆ ಮಲ್ಲಿಗೆ ಹಳ್ಳಿ ಬಿಟ್ಟ ಕರುಣಾ 19 ನೇ ವಯಸ್ಸಿನಲ್ಲಿ ಮತ್ತೆ ಮಲ್ಲಿಗೆಪುರಕ್ಕೆ ಮರಳುತ್ತಾಳೆ. ಆಗ, ವಿಧವಾ ಮರುವಿವಾಹದ ಮಾತು ಬರುತ್ತದೆ. ಮಲ್ಲಿಗೆಹಳ್ಳಿಯ ವಾತಾವರಣ ಕೂಡಾ ಬದಲಾಗುತ್ತಿರುತ್ತದೆ. ಕರುಣಾ ಬಂದಾಗ ಊರಲ್ಲಿ ಕ್ರಾಂತಿ ನಡೆಯಿತೆಂದರೂ ತಪ್ಪಾಗಲಾರದು. ಗಾಂಧಿ ತತ್ವ, ಖಾದಿ, ಚರಕ, ಸ್ವಚ್ಛತೆ ಎಲ್ಲವೂ ಜೊತೆಯಾಗುತ್ತವೆ. ಆದರೂ, ಮಲ್ಲಿಗೆಪುರದ ಯುವಕರ ಪಾಲಿಗೆ ಕರುಣಾ "ಬಿಸಿಲು ಕುದುರೆ"ಯಾಗಿಯೇ ಉಳಿದುಬಿಡುತ್ತಾಳೆ. ಕರುಣಾ ಮರಳಿದ ನಂತರದ ಕತೆ ಓದಿ ನೋಡಿ.


"ರೋಡು ಇಂಜನ್" ನಲ್ಲಿ ಮನೆಯನ್ನೇ ನೆನಪಿಸುವ ವಾತಾವರಣವಿದ್ದರೂ ಅಲ್ಲಿನ ಬದುಕೇ ಬೇರೆ. ಕಂಡದ್ದು ಹಾಗೂ ಕಾಣುವುದರ ಹೊರತಾಗಿಯೂ ಸತ್ಯ ಬೇರೆಯೇ ಇರುತ್ತದೆ. ಅವಲಂಬನೆ, ಸಾಮರಸ್ಯ ಬದುಕನ್ನು ಬೇಸರಿಸದಂತೆ ಮುಂದೆ ಕೊಂಡೊಯ್ಯುವುದು ಸತ್ಯವೇ ಆಗಿದ್ದರೂ.. ಎಲ್ಲಿಯಾದರೂ ನಿಲ್ಲಲೇ ಬೇಕಲ್ಲವಾ.. ನೆಲೆ ಯಾವಾಗ ಎಂಬ ಆಲೋಚನೆ ಮೂಡಿಸಿತು.


ಪ್ರೀತಿಸಿದ ಹುಡುಗಿಯನ್ನು ಪಡೆಯಲು ಪೋಲೀಸ್ ಇನ್ಸ್ಪೆಕ್ಟರ್ ಆಗುವ ಕೃಷ್ಣರಾಯ ಒಂದು ಸಂಧರ್ಭದಲ್ಲಿ ಅವಳ ಎದುರಾಎದುರು ನಿಲ್ಲುವ ಸಂಧರ್ಭ. ತಪ್ಪು ಎಂದು ಅರಿವಾಗಿದ್ದು ಅವನ ಪ್ರೀತಿಯ ಕಾರಣಕ್ಕೋ ಅಥವಾ ಅವನ ಮನಸ್ಸಾಕ್ಷಿಯ ಕಾರಣಕ್ಕೋ ಎಂದು ಆಲೋಚಿಸುವಾಗಲೇ ಅವನ "ಪ್ರಾಯಶ್ಚಿತ್ತ" ಅವನ ಧೈರ್ಯ, ಸ್ಟೈರ್ಯವನ್ನು ಪ್ರದರ್ಶಿಸುತ್ತದೆ.


ದೇವರೇ ಇಲ್ಲದ ಗುಡಿಯಲ್ಲಿ ದೇವರೇ ಇದ್ದಿದ್ದರೆ ಎನ್ನುವ ಭಾವದಲ್ಲೇ ಗುಡಿ ಪಾಳು ಬಿದ್ದಿರುವ ಶಾಪಗ್ರಸ್ಥ ದೇಗುಲಕ್ಕೆ ಸನ್ಯಾಸಿಯೊಬ್ಬ ಬರುತ್ತಾನೆ. ಮಲ್ಲಿಗೆ ಹಳ್ಳಿಯ ಜನಕ್ಕೆಲ್ಲಾ ಸೋಜಿಗ. ಸನ್ಯಾಸಿ, ಆತನ ಶಿಷ್ಯನ ಜೊತೆಗೆ ಮಗು ಕೂಡಾ ಇರುವುದರಿಂದ ಸಂದೇಹವೂ ಸಹಾ.. ಗತವನ್ನು ಬಿಚ್ಚಿಡುತ್ತಾ ಪೌರಾಣಿಕ ಕ್ತೆ ಹಾಗೂ ಸ್ಥಳ ಪುರಾಣವನ್ನೂ ಒಂದರೊಳಗೊಂದು ಮೇಳೈಸಿರುವ ಕಥೆ "ಕನ್ಯಾಕುಮಾರಿ".


ಅರೇಬಿಯನ್ ನೈಟ್ಸ್ ಅಥವಾ ಯವನ - ಯಾಮಿನಿಯರ ಕಥೆ ಎಂದು ಪ್ರಸಿದ್ಧವಾಗಿರುವ ಕಥೆ ಸಾವಿರದ ಒಂದು ರಾತ್ರಿಯ ಕಥೆ. ಅಷ್ಟು ಕತೆಗಳನ್ನು ಕೇಳಿದ ನಂತರ ಕಥೆ ಮುಕ್ತಾಯವಾದರೂ ಅದರ ಮುಂದುವರಿದ ಭಾಗ ಎಂಬಂತೆ ಮೂಡಿ ಬಂದಿರುವ ಕಥೆಯೇ "ಸಾವಿರದ ಎರಡನೆಯ ಕತೆ".


ಅಗ್ನಿಗರ್ಭರು ಭರದ್ವಾಜ ಮುನಿಗಳೊಂದಿಗೆ ಒಂದು ಯಾಗದ ಕುರಿತು ಚರ್ಚಿಸಿ ಆ ಯಾಗ ಮಾಡಲು ನಿರ್ಧಾರಿಸುತ್ತಾರೆ. ಪತ್ನಿ ದಾಕ್ಷಾಯಿಣಿದೇವಿಗೆ ಅದು ಅಷ್ಟು ಸಂತಸದ ವಿಷಯವಲ್ಲದಿದ್ದರೂ ಗಂಡನ ಯಾಗಕ್ಕೆ ಬೇಕಾದ ತುಪ್ಪವನ್ನು ಸಂಗ್ರಹಿಸಬೇಕಾಗುತ್ತದೆ. ಅದಕ್ಕೆ ಒಪ್ಪಿ ಅವಳು ತುಪ್ಪವನ್ನು ಸಂಗ್ರಹಿಸಲು ಹೊರಟಾಗ ಅಲ್ಲಿನ ರಾಕ್ಷಸ ವಿರೂಪಾಕ್ಷನ ಮನೆಯಿಂದ ಅವನ ಪತ್ನಿ ಜಾಂಬಲ ಕೂಡಾ ತುಪ್ಪ ನೀಡುತ್ತಾಳೆ. ಆದರೆ, ರಾಕ್ಷಸ ವಿರೂಪಾಕ್ಷನಿಗೆ ವಿಚಾರ ತಿಳಿದು "ಯಾಗಭಂಗ" ಮಾಡಲು ಹೊರಡುತ್ತಾನೆ. ಆದರೆ, ಅವನು ಈ ಕೆಲಸದಲ್ಲಿ ವಿಫಲವಾಗುತ್ತಾನೆ. ಕಥೆಯ ಅಂತ್ಯ ಓದಿ ಹೀಗೂ ಆಗಬಹುದಾ ಎನ್ನಿಸಿತು.


"ಶಿವರಾತ್ರಿ" ಮೊದಲು ಕೊಪ್ರಿ- ಸಕ್ಕರೆಯ ಹಬ್ಬವಾಗಿ ಮಾತ್ರ ನೆನಪಿರುತ್ತಿದ್ದದ್ದು ನಂತರ ಒಂದು ಅಚಾನಕ್ ಬದಲಾವಣೆ ನಂತರ ಆ ರಾತ್ರಿ ಎಂದರೆ ಶಿವರಾತ್ರಿಯ ಜಾಗರಣೆಗೆ ಹಪಹಪಿಸುವಂತೆ ಮಾಡಿತು. ಆ ರಾತ್ರಿ ಹನುಮಂತ ದೇವಾಲಯದಲ್ಲಿ ಕುರೂಪಿ ಹೆಂಗಸೊಬ್ಬಳು ಹಾಡಿದ ಗಾನಸುಧೆಗೆ ಮರುಳಾದವರಿಗೆ ಆ ಹೆಂಗಸು ಮಲ್ಲಮ್ಮ ಶಿವ ಸಾನಿಧ್ಯವನ್ನು ತೋರುವವಳಂತೆ ಕಂಡಿದ್ದಳು. ಭಕ್ತಿಗೆ ಯಾವ ತಡೆ ? ಶಿವನ ಆಟ ಬಲ್ಲವರಾರು ? ಆ ಅದ್ಭುತ ಶಿವರಾತ್ರಿ ಮತ್ತೆಂದೂ ಜರುಗದೇ ಹೋದದ್ದು ವಿಪರ್ಯಾಸ. ಕನಸೋ.. ನನಸೋ ಎಂಬಂತೆ ಭಾಸವಾದರೂ ನೈಜ ಘಟನೆಯೆಂಬಂತೆ ಭಾಸವಾಯಿತು.


ಹಳ್ಳಿಗಾಡಿನ ಪರಿಸರದಲ್ಲಿ ಮಿಂದಂತೆ ಕಾಣುವ ಕತೆಗಳು, ನವಿರಾದ ಹಾಸ್ಯವನ್ನು ಹೊತ್ತುಕೊಂಡು ಅಂತರಂಗಕ್ಕಿಳಿಯುತ್ತವೆ. ಇವುಗಳು ಸೃಷ್ಟಿಸುವ ಮಾಯಾಲೋಕ ವರ್ಣನೆಗೆ ನಿಲುಕದ್ದು. ಕಥೆ, ಪರಿಸರ, ಪಾತ್ರ, ತಿಳಿ ಹಾಸ್ಯ ಎಲ್ಲವೂ ಮನಸೂರೆಗೊಳ್ಳುವುದರಲ್ಲಿ ಸಂಶಯವೇ ಇಲ್ಲ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ