ಪುಸ್ತಕದ ಶೀರ್ಷಿಕೆ : ಶ್ವೇತಮಹಲ್
ಲೇಖಕರು : ವೈ. ಕೆ. ಸಂಧ್ಯಾಶರ್ಮ
ಪ್ರಕಾಶಕರು : ವ್ಯಾಸ ಪಬ್ಲಿಕೇಶನ್ಸ್
ಮೊದಲನೇ ಮುದ್ರಣ : 2016
ಪುಟಗಳು : 232
ಬೆಲೆ : 163 ರೂ.
'ಶ್ಚೇತ ಮಹಲ್' ಎಂಬ ಮುಖಪುಟ ನೋಡಿದಾಗಲೇ ಈ ಪುಸ್ತಕದಲ್ಲಿ ಒಂದು ನಿಗೂಢತೆ ಅಡಗಿದೆ ಎನ್ನಿಸಿತ್ತು. ಓದುತ್ತಾ ಹೋದಂತೆ ನಿಗೂಢತೆ ತುಂಬಿದ ಪತ್ತೇದಾರಿ ಶೈಲಿಯ ಕತೆ ಸರಾಗವಾಗಿ ಓದಿಸಿಕೊಂಡು ಹೋಯಿತು. ಕಡೆಯವರೆಗೂ ಎಲ್ಲಿಯೂ ಗುಟ್ಟು ರಟ್ಟಾಗದಂತೆ ಕಥೆ ಬಿಚ್ಚಿಕೊಳ್ಳುತ್ತಾ ಹೋಯಿತು.
ಹೇಮಾ ಹಾಗೂ ಸುಗಂಧಿ ಅಕ್ಕ - ತಂಗಿಯರು. ಹೇಮಾ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ತಂದೆ - ತಾಯಿ ಕೂಡಾ ಅದೇ ಕ್ಷೇತ್ರದಲ್ಲಿ ಅಧ್ಯಯನ ಮಾಡಿದ್ದವರು. ಅದೇ ವೃತ್ತಿಯಲ್ಲಿದ್ದವರು. ಇದ್ದವರು ಎಂದರೆ ಆ ಕೆಲಸದಲ್ಲಿ ಮಾತ್ರವಲ್ಲ ಮಕ್ಕಳ ಬದುಕಲ್ಲಿಯೂ ಈಗ ಅವರಿಲ್ಲ. ಹೇಮಾ ಎಂ.ಎ ಗೆ ಸೇರಿದ ಹೊಸದರಲ್ಲಿ ಅವರು ಯಾವುದೋ ಎಕ್ಸ್ಕವೇಶನ್ ಕಾರ್ಯಕ್ಕೆಂದು ಹೋಗಿದ್ದಾಗ ಅಚಾನಕ್ಕಾಗಿ ಮೇಲಿನಿಂದ ಮಣ್ಣು ಕುಸಿದು ಇಬ್ಬರೂ ಭೂಸಮಾಧಿಯಾಗಿದ್ದರು.
ಮೊದಲಿನಿಂದಲೂ ತಂದೆ - ತಾಯಿಯರ ಕೆಲಸವನ್ನು ಕಣ್ಣಾರೆ ಕಾಣುತ್ತಿದ್ದರಿಂದ, ಅವರ ಚರ್ಚೆ, ಆಸಕ್ತಿ ಹಾಗೂ ಕಾರ್ಯಗಳನ್ನು ಹತ್ತಿರದಿಂದ ನೋಡಿದ್ದ ಹೇಮಾ ಕೂಡಾ ಅದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ಹೊಂದಿದ್ದಳು. ಆಕೆ ತನ್ನ ಎಂ.ಎ ಅಧ್ಯಯನವನ್ನು ಸಹಾ ಮುಗಿಸಿ ಡಾಕ್ಟರೇಟ್ ಪದವಿ ಮಾಡಲು ಡಾ.ರಾವ್ ರವರ ಮಾತುಗಳಿಂದ ಪ್ರೇರಿತಗೊಂಡು ಸಾಹಸವೊಂದಕ್ಕೆ ಕೈ ಹಾಕಿದ್ದಳು. ಅದಕ್ಕಾಗಿ ಆಕೆ ವರದಾಪುರಕ್ಕೆ ಹೊರಟಿದ್ದಳು.
ಹೇಮಾಳಂತಲ್ಲ ಸುಗಂಧಿ. ಇಬ್ಬರೂ ಒಂದೇ ತಾಯ್ತಂದೆಯ ಮಕ್ಕಳಾದರೂ ಸಂಪೂರ್ಣ ತದ್ವಿರುದ್ಧ. ಆಸಕ್ತಿಯ ಕ್ಷೇತ್ರಗಳು ಸಹಾ ಬೇರೆಯೇ.. ಸುಗಂಧಿಯ ಆಸಕ್ತಿ ಇದ್ದದ್ದು ಸಂಗೀತದಲ್ಲಿ. ಅದರಲ್ಲೂ ವಿಶೇಷವಾಗಿ ವೀಣಾ ವಾದನದಲ್ಲಿ. ಸುಗಂಧಿ ವೀಣಾವಾದನದಲ್ಲಿ ವಿದ್ವತ್ ಮುಗಿಸಿ ವಿದೂಷಿ ಎನಿಸಿಕೊಂಡಿದ್ದಳು.
ವರದಾಪುರದ ಕಾರ್ಯವೇನೂ ಅಷ್ಟು ಸುಲಭವಿರಲಿಲ್ಲ. ವರದಾಪುರ, ಸೋನಾಲಿ ನದಿ ತೀರದ ಕಾಡುಮಲೆದುರ್ಗದ ಆಸುಪಾಸಿನಲ್ಲಿ ಕುತೂಹಲದ ಸ್ಥಳಗಳು, ಪುರಾತನ ದೇವಾಲಯಗಳು ಇವೆಲ್ಲವೂ ಹೇಮಾಳ ಕಾರ್ಯಕ್ಕೆ ಹೇಳಿ ಮಾಡಿಸಿದಂತಿದ್ದರೂ ಈಗಿರುವ ವಾಡೆಯ ದೇಸಾಯಿಗಳು ತಮ್ಮ ಜಾಗದಲ್ಲಿ ಯಾರಿಗೂ ಕಾಲಿಡಲು ಸಹಾ ಬಿಡುತ್ತಿರಲಿಲ್ಲ. ಅಲ್ಲಿ ದೇಸಾಯಿ ಮನೆತನದ ಹಳೆಯ ಅವಶೇಷಗಳು ಇದ್ದವು. ಅಲ್ಲಿ ಅವರ ಅನುಮತಿ ತೆಗೆದುಕೊಂಡು ನಂತರ ತನ್ನ ಕಾರ್ಯವನ್ನು ಆರಂಭಿಸಬೇಕಿತ್ತು ಹೇಮಾ.
ಸುಗಂಧಿಗೆ ಬಂದ ಮೊದಲ ಪತ್ರ ಅವಳಿಗೆ ಹರುಷದ ಜೊತೆಗೆ ವರದಾಪುರದ ಸುದ್ಧಿಯನ್ನು ಸಹಾ ಹೊತ್ತು ತಂದಿತ್ತು. ಅರ್ಧ ಹಳ್ಳಿ, ಅರ್ಧ ನಗರದಂತೆ ಬೇಕಾದ ಸವಲತ್ತುಗಳನ್ನು ಹೊಂದಿದ್ದ ವರದಾಪುರದ ಸುತ್ತಾಟಕ್ಕೆ ಒಂದು ಗಂಟೆ ಸಾಕಾಗುತ್ತಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲಿ ಸೋನಾಲಿ ನದಿ ಪಕ್ಕದಲ್ಲಿ ಇದ್ದದ್ದೇ ಶ್ವೇತಮಹಲ್ .
ಶ್ವೇತಮಹಲ್ ಸುತ್ತಮುತ್ತಲಿನ ಜಾಗವೇ ಹೇಮಾಳ ಕಾರ್ಯಕ್ಷೇತ್ರ. ಹಿರಿಯರಿಂದ ಪಾರಂಪರಿಕವಾಗಿ ಬಂದ ಶ್ವೇತಮಹಲ್ ನಲ್ಲಿ ಈಗ ಅಲ್ಲಿನ ಹಿರಿಯ ದೇಸಾಯಿ ಅಹೋಬಲರಾವ್ ದೇಸಾಯಿಗಳು ಮತ್ತವರ ಕುಟುಂಬದವರು ವಾಸಿಸುತ್ತಿದ್ದರು. ಮೊದಲಿಗೆ ಬಡಪೆಟ್ಟಿಗೆ ಒಪ್ಪದ ದೇಸಾಯಿಯವರು ನಂತರ ಹೇಮಳಿಗೆ ಒಪ್ಪಿಗೆ ನೀಡಿದ್ದರು. ಜೊತೆಗೆ ಹೇಮಾ ಮತ್ತೊಂದು ಅಂಶವನ್ನೂ ಉಲ್ಲೇಖಿಸಿದ್ದಳು. ಶ್ವೇತಮಹಲ್ ನ ತುಂಬಾ ಗಿಜಿಗಿಜಿ ಜನ... ಹಿರಿ ದೇಸಾಯಿಯವರು, ಹುಡುಗಿಯರು, ಪರಿಚಾರಕರು, ಅಡಿಗೆಯವರು, ಮಾಲಿಗಳು ಹೀಗೆ.. ಅಂತೂ ಆ ಮನೆಯಲ್ಲಿರುವವರು ಯಾರೂ ಒಬ್ಬರಿಗೊಬ್ಬರು ಸಂಬಂಧಿಕರಲ್ಲ. ಈ ಅಂಶ ಯಾಕೋ ಬಹಳ ವಿಚಿತ್ರ ಅನ್ನಿಸತ್ತಲ್ವಾ.. ಎಂದು ಬರೆದಿದ್ದಳು.
ಅದಾದ ಮೇಲೆ ಒಂದೆರಡು ಪತ್ರ ಬಂದಾಗಲೂ ತನ್ನ ಸಂಶೋಧನೆ ಮುಗಿಸಿ ಆದಷ್ಟು ಬೇಗ ಬರುತ್ತೇನೆ ಎಂದು ಬರೆದ ನಂತರ ಹೇಮಾಳಿಂದ ಯಾವ ಪತ್ರವೂ ಬರಲಿಲ್ಲ. ಸುಗಂಧಿ ಬರೆದ ಪತ್ರಕ್ಕೆ ಪ್ರತ್ಯುತ್ತರವಿಲ್ಲ. ಕಳುಹಿಸಿದ ಟೆಲಿಗ್ರಾಂ ಕೂಡಾ ಏನೂ ಸುದ್ದಿ ಕೊಡದಾದಾಗ ಪೇಪರ್ ನಲ್ಲಿ ಬಂದ ಸುದ್ದಿ ಅವಳ ದೃತಿಗೆಡಿಸಿತು. ಸಂಶೋಧನೆ ಮಾಡುತ್ತಿದ್ದ ಯುವತಿ ನಾಪತ್ತೆಯಾಗಿದ್ದಳೆಂದು. ಆ ಯುವತಿಯೇ ಹೇಮಾ.
ತನ್ನ ಅಕ್ಕ ಸತ್ತಿದ್ದಾಳೋ, ಬದುಕಿದ್ದಾಳೋ ಎನ್ನುವ ಖಾತ್ರಿಯೂ ಸಿಗದೆ, ಏನಾದಳೋ ಎಂಬ ಚಿಂತೆಯಲ್ಲಿಯೇ ಕಾಲ ಕಳೆದವಳಿಗೆ ಕ್ರಮೇಣ ಅಳುವಿನ ಜಾಗದಲ್ಲಿ ಧೈರ್ಯ ಬಂದಿತ್ತು. ಅದೇ ಧೈರ್ಯದಿಂದ ವರದಾಪುರಕ್ಕೆ ಹೊರಟಳು. ನಂತರ ಅವಳ ಅದೃಷ್ಟವೋ ಎಂಬಂತೆ ಶ್ವೇತ ಮಹಲ್ ನಲ್ಲಿ ವೀಣೆ ಕಲಿಸುವ ಶಿಕ್ಷಕಿಯೂ ಆದಳು. ತನ್ನ ನಿಜ ಗುಟ್ಟು ಬಿಟ್ಟುಕೊಡದಂತೆ ಬದುಕುತ್ತಿದ್ದ ಸುಗಂಧಿಯ ಬದುಕಲ್ಲಿ ಮುಂದೇನಾಯಿತು ?
ಸುಗಂಧಿಯ ಅಕ್ಕ ಹೇಮಾ ಏನಾದಳು ? ಇಬ್ಬರ ಸಮಾಗಮವಾಯಿತೇ ? ಸುಗಂಧಿ ಶ್ವೇತಮಹಲ್ ಸೇರಿದ್ದು ಹೇಗೆ ? ಸುಗಂಧಿ ಹಾಗೂ ಹೇಮಾಳಲ್ಲಿ ಹೋಲಿಕೆ ಇದ್ದದ್ದು ಬೇರೆಯವರಿಗೆ ಅಷ್ಟು ಸ್ಪುಟವಾಗಿ ಗೋಚರಿಸುತ್ತಿದ್ದರೂ ಶ್ವೇತಮಹಲ್ ನವರು ಈ ಕುರಿತು ಚಕಾರವೆತ್ತದ್ದು ಏಕೆ ? ಸುಗಂಧಿಯ 3 ಶಿಷ್ಯೆಯಂದಿರು ಯಾರು ? ಹಿರಿ ದೇಸಾಯವರು ತಮ್ಮ ಎರಡನೇ ಮಗ ಪ್ರದೀಪನನ್ನು ದೂರವಿಟ್ಟದ್ದು ಏಕೆ ?
ಶ್ವೇತಮಹಲ್ ಕತೆ ಜನರ ಬಾಯಲ್ಲಿ ಬಣ್ಣ ತಳೆದಂತೆಯೇ ಇತ್ತೇ..?? ಅಥವಾ ಶ್ವೇತಮಹಲ್ ಗೆ ಬೇರೆಯದ್ದೇ ಬಣ್ಣವೇ ? ಶ್ವೇತಮಹಲ್ ಗೆ ಅಂಟಿದ್ದ ಕಳಂಕದ ಕೊಳೆ ತೊಳೆದು ಹೋಗುವುದೇ ?
ನಿಗೂಢ, ರೋಚಕತೆಯ ಜೊತೆಗೆ ಪರಿಸರ ಹಾಗೂ ಸಂಗೀತದ ದೃಶ್ಯಗಳು ಕಣ್ಣಿಗೆ ಕಟ್ಟಿದಂತೆ ಕಾಣುತ್ತವೆ. ನಮ್ಮ ಕುತೂಹಲ ಬೆಳೆಸುತ್ತಾ, ತಣಿಸುತ್ತಾ.. ಬುದ್ಧಿವಂತಿಕೆಗೂ ಸವಾಲು ಹಾಕುವಂತಹಾ ಕಾದಂಬರಿ. ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ