ಮಂಗಳವಾರ, ಏಪ್ರಿಲ್ 7, 2026

ಇಷ್ಟು ಕಾಲ ಒಟ್ಟಿಗಿದ್ದು... ( ಪುಸ್ತಕ ಯಾನ - 47)

ಪುಸ್ತಕದ ಶೀರ್ಷಿಕೆ : ಇಷ್ಟು ಕಾಲ ಒಟ್ಟಿಗಿದ್ದು...

ಲೇಖಕರು : ಎನ್. ಸಂಧ್ಯಾರಾಣಿ

ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್

ಮೊದಲನೇ ಮುದ್ರಣ : 2022

ಪುಟಗಳು : 212

ಬೆಲೆ : 250


ಇಷ್ಟವಾಗುವ ಹಲವು ಪುಸ್ತಕಗಳ ಓದು ಸರಾಗ.. ಆದರೆ, ಆಪ್ತವಾಗುವ ಪುಸ್ತಕಗಳ ಓದು ಅಲ್ಲಲ್ಲಿ ತಡೆ ಹಾಕಿ, ಭಾವಗಳನ್ನು ಬಡಿದೆಬ್ಬಿಸಿ, ಮತ್ತೇನನ್ನೋ ನೆನಪಿಸಿ, ಗೊತ್ತಿಲ್ಲದೇ ಆಳಕ್ಕಿಳಿಯುತ್ತದೆ. ಅದು ಆಪ್ತವೆನಿಸಿದ್ದು ಬದುಕಿಗೋ.. ಕಥೆಗೋ.. ಕಲ್ಪನೆಗೋ.. ಕನಸಿಗೋ.. ಎಲ್ಲದರ ಒಟ್ಟು ಮಿಳಿತಕ್ಕೊ.. ಗೊತ್ತಿಲ್ಲದ ತುಡಿತಕ್ಕೋ.. ಅವರವರ ಭಾವಕ್ಕೆ.. 2023 ರಲ್ಲಿ ಹಾಗೆ ಅತ್ಯಾಪ್ತವಾದದ್ದು 'ಎನ್. ಸಂಧ್ಯಾರಾಣಿ'ಯವರ 'ಇಷ್ಟುಕಾಲ ಒಟ್ಟಿಗಿದ್ದು..'


ಶೀರ್ಷಿಕೆ ಕಂಡಾಗ ಎಚ್.ಎಸ್. ವೆಂಕಟೇಶ ಮೂರ್ತಿಯವರ ನನ್ನಿಷ್ಟದ ಭಾವಗೀತೆಯ ಸಾಲು ಕಾಣಿಸಿತು. ಮುಖಪುಟವೂ ವಿಭಿನ್ನವಾಗಿಯೇ ಸೆಳೆಯಿತು. ಈ ಕಾದಂಬರಿಯಲ್ಲಿ ಇಷ್ಟವಾದ ಪಾತ್ರ ಇದೇ ಎಂದು ಹೇಳಲಾಗುತ್ತಿಲ್ಲ.. ಗೌರಿ, ಇನಾಯ, ರಾಮಚಂದ್ರ, ಅರುಂಧತಿ, ಮ್ಯಾಥ್ಯೂ ಎಲ್ಲರೂ ಇಷ್ಟವಾದರೂ.. ಸರೋಜಿನಿ ಅತ್ಯಾಪ್ತ ಪಾತ್ರವಾಗಿ ಕಾಡಿದ್ದಾಳೆ. ಬಹುಶಃ, ಭೂತ - ವರ್ತಮಾನ - ಭವಿಷ್ಯ ಎಲ್ಲದಕ್ಕೂ ಹೊಂದುವ, ಹೊಂದಿಕೊಳ್ಳುವ ಪಾತ್ರ ಅವಳು. ಅದಷ್ಟೆಯಾ..?? ಎಂದರೆ, ಇಲ್ಲ.. ಒಮ್ಮೆ ಅಕ್ಕರೆಯ ಅಮ್ಮನಂತೆ, ಅತ್ಯಾಪ್ತ ಗೆಳತಿಯಂತೆ, ಇನ್ನೊಮ್ಮೆ ಆಸರೆಗೆ ತಡಕಾಡುವವಳಂತೆ, ಮತ್ತೊಮ್ಮೆ ಹಿರಿ ಜೀವದಂತೆ ಭಾಸವಾಗುವ ಅವಳು ಆವರಿಸಿಕೊಂಡಳು. 


ಬದಲಾವಣೆಯನ್ನು ಒಗ್ಗಿಸಿಕೊಳ್ಳುವುದು ಹಾಗೂ ಬದಲಾವಣೆಗೆ ಒಗ್ಗಿಸಿಕೊಳ್ಳಲಾರದೆ ಒದ್ದಾಡುವುದು ಇವೆರಡೂ ಕೆಲಸಕ್ಕೆ ಎಂದಾದಾಗ ಸೈ. ಆದರೆ, ಬದುಕಲ್ಲಿ ನಾವು ನಂಬಿದವರು, ಜೀವಕ್ಕೆ ಜೀವ ಎಂದುಕೊಂಡವರು ಒಮ್ಮೆಲೆ ಬದುಕಿನಿಂದ ಹಿಂದೆ ಸರಿದು ಹೋದರೆ.. ದ್ವೇಷಿಸುತ್ತೇವಾ..? ಬಹುಶಃ, ದ್ವೇಷಿಸುವುದೂ ಕಷ್ಟವೇ. ದ್ವೇಷಿಸುವ ಹೃದಯದಲ್ಲಿ ಮುಂದೆಂದಾದರೂ ಪ್ರೀತಿ ಹುಟ್ಟಬಹುದು ಅಥವಾ ಅಡಗಿದ್ದ ಪ್ರೀತಿ ಹೊರ ಚಿಮ್ಮಬಹುದು. ಆರಿ ಹೋಗಿದ್ದ ಪ್ರೀತಿಯ ಪಸೆ ಸೆಲೆಯೊಡೆಯಬಹುದು. ಆದರೆ, ನಿರ್ಭಾವುಕತೆ ಮೂಡಿದರೆ..??

'ಇಷ್ಟು ದಿನ ಪ್ರೀತಿಯ ವಿರುದ್ಧ ಪದ ದ್ವೇಷ ಅಂದುಕೊಂಡಿದ್ದೆ. ಆದರೆ, ಅದು ದ್ವೇಷವಲ್ಲ ಸರೋಜಿನಿ, ನಿರ್ಭಾವುಕತೆ. ದ್ವೇಷಿಸಬೇಕಾದರೂ ಏನಾದರೂ ಸಂಬಂಧ ಇರಬೇಕು'

ಎನ್ನುವ ಮಾತುಗಳು ಅದೆಷ್ಟು ಸತ್ಯ ಅಲ್ಲವಾ ಎನ್ನಿಸಿತು. 


ಮದುವೆ ಎನ್ನುವ ಬಂಧ ಕೆಲವರಿಗೆ ನಂಬಿಕೆ, ಕೆಲವರಿಗೆ ಪ್ರೀತಿ, ಮತ್ತೆ ಕೆಲವರಿಗೆ ಬಂಧನ. ಅದ್ಯಾವ ಹೆಸರೂ ಇಲ್ಲದ ಬಂಧಗಳೂ ಹಲವಿವೆ. ನಿರಂಜನ ಹಾಗೂ ಸರೋಜಿನಿಯದ್ದು ಪ್ರೇಮ ವಿವಾಹ. ಪ್ರೇಮವೆಂಬ ಪುಳಕದಲ್ಲಿ ನಿರಂಜನ ಸರೋಜಿನಿಗೆ ನೀಡುತ್ತಿದ್ದ ಪತ್ರಗಳು.. ನೀಲಿ ಕಾಗದದ ಪಾತ್ರಗಳು ಎಷ್ಟು ಚೆಂದ. ಅಂತಹಾ ಪ್ರೇಮಕ್ಕೂ ಒಂದು ಅಂತಿಮ ದಿನ ಬಂದಿತ್ತೇ ? ಅವನೇನೋ ಸಂಬಂಧ ಬಿಟ್ಟು ನಡೆದ. ಅಷ್ಟು ಪ್ರೀತಿಸುವ ಮಗಳೆದುರು ಆತ ಕುಬ್ಜನಾಗಿ ಕಂಡನೋ ಅಥವಾ ಗೌರಿಯೇ ಅಷ್ಟೆತ್ತರಕ್ಕೆ ಬೆಳೆದು ಆವರಿಸಿಕೊಂಡಳೋ ತಿಳಿಯದು. ಒಮ್ಮೊಮ್ಮೆ ಗೌರಿಯ ನಿಲುವು ಸರಿ ಎನ್ನಿಸಿದರೆ ಮತ್ತೆ ಕೆಲವೊಮ್ಮೆ ಸರೋಜಿನಿಯ ನಿಲುವು ಸರಿ ಎನ್ನಿಸಿತು. 


'ನನ್ನ ಜೀವನದ ಅನುಭವ ಮಗಳ ಬದುಕಿನ ಪ್ರಶ್ನೆಗಳಿಗೆ ಉತ್ತರ ಕೊಡಬಹುದು ಅಂದುಕೊಳ್ಳುತ್ತಿದ್ದೇನೆ. ಆದರೆ ಪ್ರತಿಯೊಂದು ಜನಾಂಗದಲ್ಲೂ ಬದುಕಿನ ಪ್ರಶ್ನೆ ಪತ್ರಿಕೆಯೇ ಬದಲಾದರೆ ನಮ್ಮ ಹಳೆಯ ನೋಟ್ಸ್ ನಿಂದ ಅದನ್ನು ಉತ್ತರಿಸುತ್ತೇನೆ ಅಂದುಕೊಳ್ಳಲು ಸಾಧ್ಯವೇ ?' 

ನನ್ನ ಅನುಭವವೇ ಕಿರಿಯರ ಬದುಕಿನ ಎಲ್ಲದಕ್ಕೂ ಉತ್ತರಿಸಬಲ್ಲದು. ನಾನು ಹೇಳಿದ್ದೇ ಪಾಲಿಸಬೇಕು ಎನ್ನುವ ಹಿರಿಯರ ನಡುವೆ ಸರೋಜಿನಿ ವಿಶೇಷವಾಗಿ ಕಂಡದ್ದು ಇಂತಹಾ ಪ್ರಬುದ್ಧ ಆಲೋಚನೆಗೆ.


ಇಲ್ಲಿನ ಪ್ರತಿ ಹೆಣ್ಣೂ ವಿಭಿನ್ನ. ಪ್ರತಿ ತೀರ್ಮಾನದ ಹಿಂದಿನ ಭಾವವೂ ವಿಭಿನ್ನ. ಬೆಳೆದ ವಾತಾವರಣ, ಬೆಳೆಯುವಾಗ ಸಿಗುವ ಗೆಳೆತನ, ಸವಲತ್ತುಗಳು ಇವೆಲ್ಲವೂ ಪರಿಣಾಮ ಬೀರಿದರೂ ಒಬ್ಬರು ಇನ್ನೊಬ್ಬರಂತೆ ಆಗಲಾರರು. ಸ್ವಾಭಿಮಾನಿಯಾಗಿ, ಸಂಸಾರಕ್ಕೂ ಸಮಯ ನೀಡಿ, ತನ್ನನ್ನು ತಾನು ಪೋಷಿಸಿಕೊಳ್ಳುವ ಪರಿ ಇದೆಯಲ್ಲಾ ಅದೇನೂ ಸುಲಭದ ಕೆಲಸವಲ್ಲ.. ಈ ನಿಟ್ಟಿನಲ್ಲಿ ಸರೋಜಿನಿ, ಇನಾಯ ಇಷ್ಟವಾದರು. ಅದರಲ್ಲೂ ಇನಾಯಳಿಗೆ ಸಾಥ್ ನೀಡುವ ರಫಿ ಕೆಲವೊಮ್ಮೆ ಬೇರೆ ರೀತಿ ಕಂಡ. 


ಓಪನ್ ಮ್ಯಾರೇಜ್ ಎನ್ನುವ ಕಾನ್ಸೆಪ್ಟ್ ಹೊಸದಾಗಿ ಕಂಡರೂ.. ಒಗ್ಗಿಸಿಕೊಳ್ಳುವುದು ಕಷ್ಟವೇನೋ ಅನ್ನಿಸಿತು. 

'ಬಹುಶಃ ಎಲ್ಲಾ ಮದುವೆಗಳೂ ಒಂದು ರೀತಿಯಲ್ಲಿ ಅಘೋಷಿತ ಓಪನ್ ಮ್ಯಾರೇಜಸ್ ಗಳೇ..'

ಅರಗಿಸಿಕೊಳ್ಳಲು ಕೊಂಚ ಕಷ್ಟವೆನಿಸಿದರೂ ಸರಿಯೇ ಎನ್ನಿಸಿತು. 

ರಾಮಚಂದ್ರನ ಮಾತುಗಳು, ವಾದ ಸರಣಿ ಇಷ್ಟವಾಯಿತು. ಮೊದಮೊದಲು ಕಂಡ ರಾಮಚಂದ್ರನಿಗೂ ಬರುಬರುತ್ತಾ ಕಂಡ ರಾಮಚಂದ್ರನಿಗೂ ಅದೆಷ್ಟು ವ್ಯತ್ಯಾಸ. ಪ್ರಬುದ್ಧ ರಾಮ್ ಮತ್ತಷ್ಟು ಇಷ್ಟವಾಗುತ್ತಾ ಹೋದ.


ಅರುಂಧತಿ ಸೋಲುಂಡು ಬೆಳೆದರೂ ಗೆಲುವಿನ ಹಾದಿಗೆ ಹೆಜ್ಜೆ ಹಾಕಿದವಳು. ಬಹುಶಃ, ಅವಳ ಮನೆಯವರ ಕಣ್ಣಲ್ಲಿ ಅದು ಗೆಲುವಾಗಿರಲಾರದೇನೋ.. ಆದರೂ, ಅವಳ ಪಾಲಿಗೆ ಅವಳು ಹುಡುಕಿಕೊಂಡ ಸಂಬಂಧಗಳು ಅವಳ ಗೆಲುವು ಎನ್ನುವುದಕ್ಕಿಂತ.. ಮನೆಯವರನ್ನು ಸೋಲಿಸಿದೆ ಎನ್ನುವ ಭಾವವೇ ಹೆಚ್ಚಿರಬಹುದು. ಆದರೆ, ರಾಜ್ ದೀಪ್ ಬಂದ ನಂತರ ಅವಳ ಬದುಕು ಸಹಾ ಬದಲಾಯಿತು. 


ಸಾಂಗತ್ಯದ ನಿಜ ಗೆಲುವೆಂದರೆ ಯಾವುದು ? ಸರಿಯಾದ ಸಂಗಾತಿಯನ್ನು ಆಯ್ದುಕೊಳ್ಳುವುದಾ..?? ಸರಿಯಾಗದಿದ್ದರೆ ಬಿಟ್ಟು ನಡೆಯುವುದಾ..?? ಅಥವಾ, ಸಂಗಾತಿ ಬಿಟ್ಟು ಹೊರಟ ನಂತರವೂ ಅವರದ್ದೇ ಗುಂಗಲ್ಲಿ ಬದುಕುವುದಾ..?? ಅಂತಹವರನ್ನು ದ್ವೇಷಿಸಿ ಬದುಕುವುದಾ..?? ಅಥವಾ ನಿರ್ಲಕ್ಷಿಸಿ ಬದುಕುವುದಾ..?? ತಿರುಗಿ ಬರುತ್ತಾರೆಂದು ಕಾಯುವುದಾ..?? ಹಲವಾರು ಪ್ರಶ್ನೆಗಳಿದ್ದರೂ ಬದುಕಿನ ಉತ್ತರಗಳೇ ಬೇರೆ. ಅವರವರ ಪ್ರಶ್ನೆ ಪತ್ರಿಕೆ ವಿಭಿನ್ನವಾಗಿರುವಾಗ ಅವರವರ ಆಯ್ಕೆ ಹಾಗೂ ಮನಸ್ಥಿತಿ, ಪರಿಪಕ್ವತೆಯ ಮೇಲಲ್ಲವಾ ಇದರ ನಿರ್ಧಾರ. ಅರು, ಗೌರಿ, ಇನಾಯ, ರಾಮಚಂದ್ರ ಎಲ್ಲರ ನಿರ್ಧಾರವೂ ವಿಭಿನ್ನ. ಇವರೆಲ್ಲರೂ ನಮ್ಮನ್ನೇ ಪ್ರತಿನಿಧಿಸುತ್ತಿರಬಹುದೆನಿಸಿತು.


ಒಂದು ಶಾಪ ಅಷ್ಟು ಕಾಡುತ್ತದಾ..? ಅದಕ್ಕೆ ಮುಕ್ತಿಯೇ ಇಲ್ಲವಾ..? ಇಲ್ಲಿಯವರೆಗೂ ಆ ಮನೆತನದ ಹೆಣ್ಣು ಮಕ್ಕಳಿಗೆ ಈ ಶಾಪ.. ಎಲ್ಲಿಯವರೆಗೆ ಈ ಕೆಡುಕು.. ಎಂದು ಆಲೋಚಿಸುತ್ತಲೇ ಓದುತ್ತಿದ್ದೆ. 

"ನಿಜವಾದ ಕೆಡುಕು ಶಾಪ ಇರೋದಲ್ಲ ಮಗಳೆ, ಶಾಪ ಇದೆ ಎಂದು ಕೈ ಚೆಲ್ಲಿ ಕೂರುವುದು ಕೆಡುಕು" ಎಂದ ಸರೋಜಿನಿಯ ಮಾತಿಗೆ ಎಚ್ಚೆತ್ತೆ. 

ಅಂದ ಹಾಗೆ ಆ ಶಾಪ ಪರಿಹಾರವಾಯಿತಾ..?? ನೀವೇ ಓದಿ ನೋಡಿ.


ಮುಗಿಯಲೇ ಬೇಕು ಎನ್ನುವ ಹಪಾಹಪಿಯಿಲ್ಲದ ಕಥೆಯೇ ಮುಗಿಯಲಾರದ ಭಾವಗಳನ್ನು ತುಂಬಿ ಹೋಗುವುದು. ಇದೂ ಅಂತಯೇ.. ಪುಸ್ತಕದ ಕೊನೆ ತಲುಪಿದಾಗ ಮುಗಿದೇ ಹೋಯಿತಾ ಎಂದೆನಿಸಿದರೂ ಮುಗಿಯದ ತಾಕಲಾಟಗಳನ್ನು ಶುರು ಮಾಡಿದ್ದು. 

ಇಷ್ಟು ಕಾಲ ಒಟ್ಟಿಗಿದ್ದು... ಎಷ್ಟೇ ಬೆರೆತು ಹೋದರೂ ಮರು ಓದಿನಲ್ಲಿ ಬೇರೆಯದ್ದೇ ಭಾವಗಳನ್ನು ಅನಾವರಣ ಮಾಡುವ ಕಾದಂಬರಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ