ಪುಸ್ತಕದ ಶೀರ್ಷಿಕೆ : ಅಕ್ಕ
ಲೇಖಕರು : ಪಿ. ಲಂಕೇಶ್
ಪ್ರಕಾಶಕರು : ಲಂಕೇಶ್ ಪ್ರಕಾಶನ
ಮೊದಲನೇ ಮುದ್ರಣ : 1991
ಏಳನೇ ಮುದ್ರಣ : 2020 ( ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 111
ಬೆಲೆ : 110
ಅಕ್ಕ ಕಾದಂಬರಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ 'ದೇವೀರಿ' ಆಗಿ ಮೂಡಿಬಂದಿದೆ. ಈ ಕಾದಂಬರಿ ಕೈಗೆತ್ತಿಕೊಳ್ಳುವ ಮುನ್ನ ಇಲ್ಲಿ ಬಳಸಿರುವ ಭಾಷೆಯ ಕುರಿತು ತಿಳಿದಿತ್ತು. ಅಲ್ಲದೇ, ಲಂಕೇಶರ ಬಿಡಿ ಬರಹಗಳನ್ನು ಓದಿದ್ದರೂ.. ನಾನು ಓದುತ್ತಿರುವ ಲಂಕೇಶ್ ರವರ ಮೊದಲ ಕಾದಂಬರಿ ಇದು. ಕುತೂಹಲದ ಜೊತೆಗೆ ಪೂರ್ವಾಗ್ರಹಗಳೂ ಇದ್ದವು. ಆದರೆ, ಎಲ್ಲವನ್ನೂ ಮೀರಿ ಓದಿಸಿಕೊಂಡು ಹೋಗಿದ್ದು ನಿರೂಪಣಾ ಶೈಲಿ. ಕ್ಯಾತನ ಖ್ಯಾತ ಕಥೆಯೂ ಆಗಬಹುದಾದ ಪುಸ್ತಕ 'ಅಕ್ಕ' ಆಗಿದ್ದರಲ್ಲಿ ದೇವೀರಿಯ ಪಾಲು ಇದ್ದಷ್ಟೇ ಕ್ಯಾತನ ಪಾಲೂ ಇದೆ ಎಂಬುದು ನನ್ನ ಅನಿಸಿಕೆ.
ಪುಸ್ತಕ ಓದುವ ಮುನ್ನ ಒಂದು ಇಂಗ್ಲಿಷಿನ ಗಾದೆ ಕಾಣಿಸಿತು.
It is a poor kin that has neither whore not thief in it.
ಪುಸ್ತಕವನ್ನು ಓದಿದ ನಂತರ ಇದನ್ನು ಪರಾಮರ್ಶಿಸಿದಾಗ ಸೂಚ್ಯವಾಗಿ ಈ ಕತೆಯ ಎಳೆಯನ್ನು ಬಿಚ್ಚಿಟಿತು. ಇಲ್ಲಿನ ಸಂಬಂಧ ಬಡ ಸಂಬಂಧ ಹೌದಾದರೂ.. ಅಲ್ಲಿ ಕಳ್ಳನೋ ಅಲ್ಲವೋ ಎನ್ನುವ ಕ್ಯಾತ ಕಾಣುತ್ತಾನೆ.. ವೇಶ್ಯೆಯೋ ಅಲ್ಲವೋ ಎನ್ನುವ ದೇವೀರಿ ಕಾಣುತ್ತಾಳೆ.
ಲಂಕೇಶ್ ರವರು ಇದನ್ನು ರಾಜಕೀಯ ಕಾದಂಬರಿ ಎಂದಿದ್ದಾರೆ. ತೀರಾ ಈಗಿನಂತೆ ಕಾಣದ ರಾಜಕೀಯದ ಎಳೆಯಷ್ಟೇ ಕಂಡರೂ.. ರಾಜಕೀಯ ಸಂಪೂರ್ಣ ಆವರಿಸದಂತೆ ಕಂಡರೂ.. ಕೊನೆಯಲ್ಲಿನ ಒಂದು ಎಳೆ ಬದಲಾವಣೆಯನ್ನು ಕಾಣುವಂತೆ ಮಾಡುತ್ತದೆ. ಆ ಪಾಯಿಂಟ್ ನಲ್ಲಿ ನಿಂತು ಹಿಂದೊಮ್ಮೆ ತಿರುಗಿ ನೋಡಿದಾಗ ಎಲ್ಲವೂ ರಾಜಕೀಯದ ಭಾಗವೇ ಆಗಿದ್ದಂತೆ ಭಾಸವಾಗುತ್ತದೆ.
ದೇವೀರಿಯ ತಮ್ಮ ಕ್ಯಾತ. ಕ್ಯಾತನನ್ನು ಕೃಷ್ಣ ಎಂದು ಕರೆದಾಗ ಅವನಿಗೆ ಉಂಟಾಗುವ ಸಂತಸವನ್ನು ಕಂಡಾಗ ಅಲ್ಲಿ ಎಲ್ಲರನ್ನೂ ಕರೆಯುವ ರೀತಿಯ ಅರಿವಾಗುತ್ತದೆ. ಅಡ್ಡ ಹೆಸರುಗಳು ಅದರಲ್ಲೂ ಬೈಗುಳದ ರೀತಿ ತೋರುವ ಅಡ್ಡ ಹೆಸರುಗಳು, ಬೈಗುಳದಿಂದಲೇ ಕರೆಯುವ ರೀತಿ.. ಕ್ಯಾತ ಆ ಬೈಗುಳಗಳನ್ನೆಲ್ಲಾ ಮೈ ಗೂಡಿಸಿಕೊಂಡ ಹಾಗೂ ರೂಢಿಸಿಕೊಂಡ ಬಗೆ ಅಲ್ಲಿನವರ ಮಾತಿನಿಂದಲೇ ಎಂಬುದು ಗೊತ್ತಾಗುತ್ತದೆ. ಆತನಿಗೆ ಎಷ್ಟೋ ಬೈಗುಳಗಳ ಅರ್ಥವೇ ಗೊತ್ತಿರುವುದಿಲ್ಲ ಎನ್ನುವುದು ಒಮ್ಮೆ ಆತನ ಮುಗ್ಧತೆಯೇನೋ ಎಂಬಂತೆ ಕಾಣಸಿಕ್ಕರೆ, ಅಕ್ಕನ, ಪದ್ದಿಯ ಅಂಗಾಂಗಗಳ ವರ್ಣನೆ ಆತನಲ್ಲಿ ಕಾಣಸಿಗಬಹುದಾದ ಲಂಪಟತನವನ್ನು ತೋರುತ್ತದೆ.
ಆ ಹೊಲಗೇರಿಯ ಗುಡಿಸಲು ಅವರು ಮೊದಲಿನಿಂದಲೂ ವಾಸ ಇದ್ದುದಲ್ಲ.. ಅವರು ಅಲ್ಲಿಗೆ ಬಂದು ನೆಲೆಯೂರುವುದಕ್ಕೆ ಕಾರಣ ರಾಮಪ್ಪ. ದೇವೀರಿ, ಕ್ಯಾತನ ತಂದೆ ಅವನಿಗೆ ಎರಡು ವರ್ಷವಾಗಿದ್ದಾಗ ಸತ್ತು, ಅವನ ತಾಯಿ ಎಂಟೋ - ಹತ್ತೋ ವರ್ಷವಾಗಿದ್ದಾಗ ತೀರಿಕೊಂಡ ನಂತರ ಅವರಿಗೆ ಹೊಟ್ಟೆಪಾಡಿಗಾಗಿ ಆಸರೆಯಾಗಿದ್ದ ಹೂವಿನಂಗಡಿ, ಗುಡಿಸಲನ್ನು ಬಿಟ್ಟು ಓಡಿಸಿದಾಗ ರಾಮಪ್ಪನವರ ದಯೆಯಿಂದ ಈ ಹೊಲಗೇರಿಯ ಗುಡಿಸಲಿಗೆ ಬಂದಿದ್ದರು. ಮೊದಲು ಮುಗ್ಧೆಯಾಗಿದ್ದ ತನ್ನ ಅಕ್ಕ ನಂತರ ಬದಲಾದುದು ಕ್ಯಾತನಿಗೆ ಒಂದು ಸೋಗುಗವೇ.. ನರಸಿಂಹ ಮೇಸ್ತ್ರಿ ತಾನೇ ಅದಕ್ಕೆಲ್ಲಾ ತಾನೇ ಬಾಡಿಗೆ ವಸೂಲಿ ಮಾಡುವುದು ಮಾಡುತ್ತಿದ್ದ. ಅವನಿಗೆ ಬಂಟರಾಗಿದ್ದವರು ಖಡವಾ, ನಾಗ್ರ, ಹರಿ, ಆರಾಧ್ಯ, ಗಿರಿ ಮುಂತಾದವರು. ದೇವೀರಿಯ ಗುಡಿಸಲಿಗೆ ಎಡತಾಕುತ್ತಿದ್ದವರಲ್ಲಿ ಪ್ರಮುಖರು ಖಡವಾ ಹಾಗೂ ನಾಗ್ರ. ಅವರು ಬರುವಿಕೆ, ಇರುವಿಕೆ ಕ್ಯಾತನಿಗೆ ಹಿಡಿಸದಿದ್ದರೂ.. ಅದರ ಕುರಿತು ಮಾತನಾಡಲು, ಅವರನ್ನು ಓಡಿಸಲು ಆತ ಅಸಮರ್ಥ.
ಕ್ಯಾತನಿಗೆ ಓದಿನ ಕುರಿತು ಅಂತಹಾ ಆಸಕ್ತಿ ಇಲ್ಲದಿದ್ದರೂ.. ದೇವೀರಿಗೆ ಆತ ಓದಿ ಸಾಧಿಸಬೇಕೆಂಬ ಆಸೆ. ಅದಕ್ಕಾಗಿ ನಿಕೃಷ್ಟವಾಗಿ ಕಂಡ ಸತ್ಯನಾರಾಯಣನ ಸ್ಕೂಲಿಗೇ ಆತನ ಕಾಲು ಹಿಡಿದು, ಕಾಡಿ ಬೇಡಿ, ರಾಮಪ್ಪನ ವಶೀಲಿಯ ಜೊತೆಗೆ ತನ್ನ ಕಾಲ್ಗಡಗ ಹಾಗೂ ಕೆನ್ನೆ ಸರವನ್ನು ಅಡ ಇಟ್ಟು ಶಾಲೆಗೆ ಕಳುಹಿಸಿದಳು. ಆದರೆ, ಕ್ಯಾತನಿಗೆ ಶಾಲೆ ಎಂದರೆ , ಅದರಲ್ಲೂ ಸತ್ಯನಾರಾಯಣನನ್ನೂ ಸೇರಿಸಿ ಉಳಿದ ಶಿಕ್ಷಕರನ್ನು ಕಂಡರೆ ಆಗುತ್ತಿರಲಿಲ್ಲ. ಕ್ಯಾತನ ಕಾನ್ವೆಂಟ್ ಓದು ನಿಂತಲ್ಲೇ ಕುಂಟುತ್ತಿತ್ತು.
ಕ್ಯಾತ ದೇವೀರಿಯ ಕಣ್ಣು ತಪ್ಪಿಸಿ ಮಾಡುತ್ತಿದ್ದ ಕೆಲಸಗಳು ಕಡಿಮೆಯೇನಲ್ಲ. ಆಗ ಆತ ಪದ್ದಿಯ ಬಣ್ಣದ ಬದುಕನ್ನು ಹತ್ತಿರದಿಂದ ಕಂಡರೆ, ರಂಗಜೆಟ್ಟಿಯ ರೇಸ್ ಕುರಿತು ಹಾಗೂ ಆತನ ಕುರಿತು ಸಹಾ ತಿಳಿಯುತ್ತಾನೆ.
ಇನ್ನು ಆತ ಗೌರವದಿಂದ ಕಾಣುತ್ತಿದ್ದ ಮತ್ತೊಬ್ಬ ವ್ಯಕ್ತಿ ಸುಧೀರ. ಕ್ಯಾತನ ಓದು ನಿಂತಲ್ಲೇ ಕುಂಟುತ್ತಿದ್ದಾಗ ಅವನ ಜೊತೆ ಓದುತ್ತಿದ್ದವರು ಮುಂದೆ ಹೋಗಿ ಆತನ ತರಗತಿಗೆ ಬಂದವನು ಸುಧೀರ. ಉಳ್ಳವರ ಮನೆಯ ಹುಡುಗ. ಆದರೆ, ಆತನ ತಂದೆ ಲಂಚ ತೆಗೆದುಕೊಂಡು ಸಿಕ್ಕಿಹಾಕಿಕೊಂಡಾಗ ಆತನ ಪರಿಸ್ಥಿತಿಯನ್ನು ಸಹಾ ಹತ್ತಿರದಿಂದ ಕಾಣುತ್ತಾನೆ. ಲಂಚ ಎಂದರೆ ಏನೆಂದೇ ಗೊತ್ತಿಲ್ಲದ ವಯಸ್ಸು ಅದು.
ಇದೆಲ್ಲವನ್ನೂ ಮೀರಿ ಮುಂದೆ ಸಾಗಿದಾಗ ಬದಲಾದ ದೇವೀರಿಯ ಬದುಕು ಅವನ ಕಣ್ಣಿಗೆ ಕಾಣುತ್ತದೆ. ಹತ್ತಿರದಲ್ಲಿ ಇದ್ದರೂ ದೂರವೆನ್ನುವಂತೆ ಕಾಣುವ ಆಕೆಯ ಬದುಕನ್ನು ಪ್ರಶ್ನಿಸುವಷ್ಟು ದೊಡ್ಡವನಾದ ಖ್ಯಾತ ನಮಗೂ ಒಂದು ಪ್ರಶ್ನೆ ಎಸೆಯುತ್ತಾನೆ 'ನಂಗೆ ಇವರೆಲ್ಲಾ ಬ್ಯಾರೆ ತರ ಕಾಣ್ತಿದ್ದರಲ್ಲಾ. ಮುಂಚಿನಂಗಿಲ್ವಲ್ಲ' ಎನ್ನಿಸಿದೆಯಾ ಎಂದು . ಬೈಯ್ಯುತ್ತಿದ್ದವರು ಹಠಾತ್ ಪ್ರೀತಿಸಲು ಶುರು ಮಾಡಿದರೆ.. ಎಲ್ಲದರಲ್ಲೂ ಏನಾದರೊಂದು ತಪ್ಪು ಹುಡುಕುತ್ತಿದ್ದವರು ಹಠಾತ್ ಹೊಗಳಲು ಶುರು ಮಾಡಿದರೆ..?? ನಮಗೂ ಯಾರ ಬಗ್ಗೆಯಾದರೂ ಹೀಗೆ ಅನ್ನಿಸಿರುತ್ತದೆ.
ದೇವೀರಿ ಮಾಯವಾದರೂ ಕ್ಯಾತನಿಗೆ ಅವಳನ್ನು ಸಂಪೂರ್ಣವಾಗಿ ದ್ವೇಷಿಸಲು ಸಾಧ್ಯವಾಗುವುದೇ ಇಲ್ಲವಾದರೂ ಆಕೆಯ ಆ ಬದುಕಿನ ಕುರಿತು ಅವನಿಗೆ ಎಂದಿಗೂ ಒಂದು ಅಸಮಾಧಾನದ ಎಳೆ ಉಳಿದೇ ಇದೆ. ಎಷ್ಟೇ ಆದರೂ ರಕ್ತ ಸಂಬಂಧಗಳು ರಕ್ತ ಸಂಬಂಧಗಳೇ.. ಅವುಗಳ ಎಳೆ, ಬಾಂಧವ್ಯ ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ದೇವೀರಿ ಮನೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದು ರಾಮಪ್ಪನವರು. ರಾಮಪ್ಪ ಹೇಳಿದ್ದು ಸುಳ್ಳಾ ನಿಜವಾ ಇದರ ಕುರಿತು ನನಗೆ ಗೊಂದಲವಿದೆ. ಅವರ ಎದುರಾಳಿ ವಿಶ್ವನಾಥ ಗೆದ್ದು.. ಇವರ ಬಳಿ ಕೆಲಸ ಮಾಡುತ್ತಿದ್ದ ನರಸಿಂಹ ಮೇಸ್ತ್ರಿ, ಖಡವಾ, ನಾಗ್ರ ಯಾರೂ ಜೊತೆಗಿರದೆ ಒಂದಾನೊಂದು ಕಾಲದಲ್ಲಿ ರಕ್ತ ಬರುವಂತೆ ಒದೆ ತಿಂದಿದ್ದ ಸಿಲ್ವನೊಡನೆ ಬೆರೆತದ್ದು.. ಎಲ್ಲವನ್ನೂ ಕಂಡ ನಂತರವೂ ದೇವೀರಿ ಬದಲಾದದ್ದನ್ನು ಕಂಡು ಸಹಾ ಅವರು ಆತನಿಗೆ ನಿಜ ವಿಷಯ ಹೇಳಿರಬಹುದೇ ? ಎನ್ನುವ ಅನುಮಾನವಿದೆ.
ಕತೆಯ ಅಂತ್ಯ ಬೇರೆ ಸಾಧ್ಯತೆಯನ್ನೂ ತೆರೆದಿಡಬಹುದಾದರೂ ಅಷ್ಟು ಹೊತ್ತು ಕ್ಯಾತನಾಗಿ, ಕ್ಯಾತನ ಬಾಯಿಯಿಂದ ಕತೆ ಕೇಳಿ ದೇವೀರಿ ಎಲ್ಲಿಯೇ ಇದ್ದರೂ ಚೆನ್ನಾಗಿರಲಿ ಎಂದೇ ಬಯಸುತ್ತದೆ.
ದೇವೀರಿಯ ಚಲನ - ವಲನಗಳು ಅನುಮಾನ ಹುಟ್ಟಿಸಿದರೂ.. ಆಕೆ ಹೀಗೆಯೇ ಎಂದು ಹೇಳಲಾಗುವುದಿಲ್ಲ. ಆಕೆ ಮಾಯವಾದುದರ ಹಿಂದಿನ ಮನಸ್ಥಿತಿ ಏನಿರಬಹುದು ? ಮತ್ತೆ ತಮ್ಮನನ್ನು ನೈತಿಕವಾಗಿ ತನ್ನಿಂದ ಎದುರಿಸಲಾಗದು ಎಂದೇ ? ತಮ್ಮನಿಗೋಸ್ಕರ ತಾನು ಆ ಹಾದಿ ತುಳಿದದ್ದಾ ಅಥವಾ ಅವಳ ಸೌಕರ್ಯಕ್ಕಾ ಎಂಬ ಪ್ರಶ್ನೆ ಹುಟ್ಟಿದಾಗ ಬಡತನದ ಭಾಗವಾಗಿ, ರಾಜಕೀಯದ ದಾಳವಾದಳು ಎಂದಷ್ಟೇ ಹೇಳಬಹುದು. ಅಷ್ಟು ವರ್ಷ ಸಾಕಿ ಸಲಹಿದ ತಮ್ಮನನ್ನು ಕಾಣಲು ಬರದಿರುವಷ್ಟು ಆಕೆ ಕಲ್ಲು ಹೃದಯಿಯಾದಳೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಕೊನೆಯಲ್ಲಿ ಆಕೆಯ ಮನೆಗೆ ಯಾರೂ ಬರದಿರುವುದು, ಕೊನೆಯಲ್ಲಿ ಒಂದು ಈರುಳ್ಳಿ, ಮೆಣಸಿನಕಾಯಿಯ ಹೊರತಾಗಿ ಒಂದು ಕಾಳು ಅಕ್ಕಿಯೂ ಇಲ್ಲದಿರುವುದು ಆಕೆಯ ಬಡತನದ ಸ್ಥಿತಿಯನ್ನು ತೋರಿಸುತ್ತದೆ. ತಮ್ಮ ತನ್ನ ಆಸೆಯಂತೆ ಓದಲಾರ ಎಂಬ ನಿರಾಸೆ, ತಾನಿಲ್ಲದಿದ್ದರೆ ದುಡಿದು ತಿನ್ನುವ ಛಲ ಹುಟ್ಟಲಿ ಎನ್ನುವ ಆಕಾಂಕ್ಷೆ ಕೂಡಾ ಆ ನಿರ್ಧಾರ ಮಾಡುವಂತೆ ಮಾಡಿರಬಹುದು. ಆದರೆ, ತಮ್ಮನ ಮೇಲಿನ ಮಮತೆಯ ಸೆಳೆತ ಎಷ್ಟಿತ್ತು ಎಂಬುದನ್ನು ತೋರಲು ಆಕೆ ಆತನನ್ನು ಬಿಟ್ಟು ಆಟೋದಲ್ಲಿ ಹೋಗಿ ಹಿಂತಿರುಗಿ ಬಂದು ಆತನನ್ನು ಕರೆದೊಯ್ಯುವುದು.
ಪದ್ದಿಯ ಬಣ್ಣದ ಬದುಕು ಹೇವರಿಕೆ ಮೂಡಿಸುವ ಬದಲಾಗಿ ಅಸಹ್ಯ ಹುಟ್ಟಿಸಿದ್ದು ಆಕೆಯ ತಂದೆ ನಾಗರಾಜ ನಾಯ್ಡುವಿನ ನಡವಳಿಕೆ. ತನ್ನ ಮಗಳನ್ನು ತಾನೇ ಕುಮ್ಮಕ್ಕು ಕೊಟ್ಟು ಅಂತಹಾ ಅನಾಚಾರಕ್ಕೆ ಕಳುಹಿಸುವುದು. ಪದ್ದಿಯ ತಾಯಿ ಎಷ್ಟು ಅಮಾಯಕಿ ಎಂದರೆ ಮಗಳ ಭವಿಷ್ಯದ ಕುರಿತು ಹೀಗೆಲ್ಲಾ ನಡೆದಿರಬಹುದು ಎಂದು ಆಲೋಚಿಸದೆ.. ಹೀಗೆ ನಡೆದರೆ ಎಂಬ ಭಯದಲ್ಲಿರುವವಳು. ಪದ್ದಿಯ ಗಟ್ಟಿತನ ಇಷ್ಟವಾಯಿತು. ತನ್ನ ತಂಗಿ ಗಿರ್ಜಾಳ ಹೊಸಗೆ ಮಾಡುವ ಪರಿ, ಅದನ್ನು ನಿಭಾಯಿಸಿದ ರೀತಿ, ತನ್ನ ಪರಿಸ್ಥಿತಿಯನ್ನು ಒಪ್ಪಿಕೊಂಡು ಹೋದ ಪರಿ, ಕ್ಯಾತನನ್ನು ಒಂದು ಒಳ್ಳೆಯ ದಡ ಸೇರಿಸಲು ಅವಳು ರಾಮಪ್ಪನವರ ಮುಂದೆ ಆಡಿದ ಮಾತುಗಳು ಅವಳನ್ನು ನಟಿಯಾಚೆಯ ಗಟ್ಟಿ ವ್ಯಕ್ತಿತ್ವವನ್ನು ಎತ್ತಿ ತೋರಿಸಿದವು. ಅಲ್ಲಿಯವರೆಗೂ ಕ್ಯಾತನಿಗೆ ಆಕೆಗೆ ಒಲವಿನ ಬಂಧವಿರಬೇಕೆಂದು ಭಾವಿಸಿದರೂ ಆಕೆ ಆತನಿಗಿಂತ ಎರಡು ವರ್ಷ ದೊಡ್ಡವಳು ಎಂದಾಗ ದೇವೀರಿ ಅಕ್ಕನಾಗಿ ನಿಭಾಯಿಸಲು ವಿಫಲಳಾದ ದೊಡ್ಡ ಜವಾಬ್ದಾರಿಯನ್ನು ಕೈಗೆತ್ತಿಕೊಂಡು ಮತ್ತೊಬ್ಬ ಅಕ್ಕಳಾದಂತೆ ತೋರಿತು.
ಸಂಪೂರ್ಣಮ್ಮ ಅತ್ಯಂತ ಒಳ್ಳೆಯವಳಾದರೂ.. ಒಳ್ಳೆಯತನ ಕೂಡಾ ಉಸಿರುಗಟ್ಟಿಸಬಹುದು ಎಂಬ ಅಂಶವನ್ನು ಇಲ್ಲಿ ಗಮನಿಸಬೇಕು. ಆಕೆಯ ಪತಿ ರಂಗಜೆಟ್ಟಿಯ ವ್ಯಕ್ತಿತ್ವದಲ್ಲಿ ಒಂದು ರೀತಿಯ ದ್ವಂದ್ವ ಕಂಡಂತಾಯಿತು. ರೇಸು ಕೆಟ್ಟದ್ದು ಎಂದು ಅರಿವಿದ್ದರೂ ಮತ್ತೆ ಮತ್ತೆ ಅದಕ್ಕೇ ಜೋತು ಬೀಳುವುದು. ಸಂಪೂರ್ಣಮ್ಮ ಏನೇ ಒಳ್ಳೆಯವಳಾದರೂ ಗಂಡನ ಈ ಬುದ್ಧಿಗೆ ಆಕೆಯದ್ದು ವಿರೋಧವೇ..
ಕ್ಯಾತನಲ್ಲಿ ಕಂಡ ನೈತಿಕತೆಯೇ ಆತನ ಗಟ್ಟಿತನ. ಆತ ಹಸಿವಿನಿಂದ ಸಾಯುವಂತಾದರೂ ಆತ ಪದ್ದಿಯ ದೆಸೆಯಿಂದ ಶಂಕರನಾರಾಯಣ ಕೊಡಿಸಿದ್ದನ್ನು ನಿರಾಕರಿಸುವುದು.
ಹೊಲಗೇರಿಯ ವಾಸನೆಯನ್ನು ವಿವರಿಸುವ ಒಂದು ಅಧ್ಯಾಯವೇ ಇದೆ. ಅದು ಹೊಲಗೇರಿಯ ಚಿತ್ರಣವನ್ನು ಬಿಚ್ಚಿಡುವುದರ ಜೊತೆಗೆ , ಅವರಿಗಿಂತ ಕೊಂಚ ನೀಟಾಗಿರುವ ಕುಟುಂಬ ಅಲ್ಲಿಂದ ಬೇರೆಡೆಗೆ ಹೋಗಿ ಮನೆ ಮಾಡಿ ಆ ಹೊಲಗೇರಿಯ ವಾಸನೆಯನ್ನು ಮಿಸ್ ಮಾಡಿಕೊಂಡು ವಾಪಾಸ್ ಬರುವ ಕುರಿತು ಹೇಳುವಾಗ ಹೀಗೂ ಇರಬಹುದಾ ಎನ್ನಿಸಿತು.
ಅಲ್ಲಿನ ರಾಜಕೀಯದ ಚಿತ್ರಣವೂ ಕಣ್ಣಿಗೆ ಕಟ್ಟುವಂತಿದೆ. ರಾಜಕೀಯದ ವಿರೋಧ - ಪ್ರತಿರೋಧಗಳು, ರಾಮಪ್ಪನವರ ಆಶ್ವಾಸನೆ ಕೇವಲ ಆಶ್ವಾಸನೆಯಾಗದೆ ನೆರವೇರುವುದು, ಅಧಿಕಾರವಿದ್ದಾಗ ಆತನಿಗೆ ಕೊಡುವ ಮರ್ಯಾದೆ, ಆತನಿಗೆ ಅರಿವಿಲ್ಲದ ಅವನ ಕೈಕೆಳಗಿನವರ ಆಟ ಹೀಗೆ ಎಲ್ಲವೂ.. ಜೊತೆಗೆ, ಕನ್ನಡ ಸಂಘಟನೆಯ ಹೋರಾಟದಲ್ಲಿ ಕ್ಯಾತ ಖ್ಯಾತನಾಗುವ ಜೊತೆಗೆ, ಅಲ್ಲಿ ನಡೆಯುವ ದಂಧೆಯನ್ನೂ ಎತ್ತಿ ತೋರಿಸಿದಂತಿದೆ.
ಹೊಗಳುವಂತೆ ತೆಗಳುವ, ತೆಗಳುವ ಬೈಗುಳಗಳು ಹೊಗಳಿಕೆಯೇ ಆಗಿಬಿಡುವ ವೈರುಧ್ಯದಂತೆ ಕಾಣುತ್ತದೆ. ಒಮ್ಮೆ ಇದು ಕ್ಯಾತನ ಆತ್ಮಚರಿತ್ರೆಯಂತೆಯೂ ಕಂಡಿತು. ಕ್ಯಾತನ ಬೈಗುಳ, ದೂಷಣೆಗಳಿಂದ ಆತನೂ ಏನೂ ತಪ್ಪಿಸಿಕೊಂಡಿಲ್ಲ. ತಮ್ಮನ್ನು ತಾವು ದೂಷಿಸಿಕೊಂಡೇ ಕತೆ ಹೇಳುವ ಶೈಲಿ ವಿಭಿನ್ನ. ಅಲ್ಲದೇ ಇಲ್ಲಿ ಎಲ್ಲಿಯೂ ಆತನ ನಿಜವಾದ ವಯಸ್ಸು ತಿಳಿಯುವುದಿಲ್ಲ.
ಅಕಸ್ಮಾತ್, ಕ್ಯಾತ ಓದಿನಲ್ಲಿ ಮುಂದಿದ್ದು.. ಆತ ಓದಿನಲಿಯೇ ಮೇಲುಗೈ ಸಾಧಿಸಿದ್ದರೆ ಕತೆ ಅದು ಸಾಧನೆಯ ಕತೆಯಾಗುತ್ತಿತ್ತೇನೋ.. ಆದರೆ, ಅದರಂತಾಗದೆ.. ಇದು ವಿಫಲವಾಗಿಯೂ, ತಪ್ಪು ದಾರಿಗಿಳಿದರೂ.. ನೈತಿಕತೆಯ ಬಲದಿಂದ ಬದುಕಿಕೊಂಡ ಕತೆಯೆನಿಸಿತು.
ಕ್ಯಾತನಿಗೆ ಕಬ್ಬನ್ ಪಾರ್ಕ್ ತುದಿಯಲ್ಲಿ ಕಂಡ ಬಿಡಾರದಲ್ಲಿ ದೇವೀರಿ ಕಂಡಂತೆ.. ಲಂಕೇಶ್ ರವರು ಹೇಳುವಂತೆ ದಾರಿಯಲ್ಲಿ ಹೋಗುವಾಗ ಸೂಕ್ಷ್ಮವಾಗಿ ಗಮನಿಸಿದರೆ ನಮಗೂ ಕ್ಯಾತ, ದೇವೀರಿಯ ಹಟ್ಟಿ ಕಾಣಬಹುದೇನೋ.. ನರಸಿಂಹಯ್ಯ, ಉಷಾರಂತಲ್ಲ ಎಂದುಕೊಂಡೇ ಕತೆ ಹೇಳುವ ಕ್ಯಾತನಲ್ಲಿ ಕಂಡದ್ದು ಸಾಹಿತ್ಯಿಕ ಅಂಶಕ್ಕಿಂತ ಹೆಚ್ಚಾಗಿ ವಾಸ್ತವತೆಯ ಅಂಶ.
ಇಲ್ಲಿನ ಭಾಷೆ ಕಂಡಾಗ ನನಗನ್ನಿಸಿದ್ದು. ಹಳ್ಳಿಗಳಲ್ಲಿ ಈ ರೀತಿ ಹೊಲಗೇರಿಯಲ್ಲಿ ವಾಸಿಸುತ್ತಿರುವವರು ಕೆಲಸದ ಒಡೆತನದ ಮನೆಗಳಿಗೆ ಬಂದಾಗ ಅವರಿಗೆ ಒಪ್ಪಿಸುವಾಗ ಹಾಗೂ ಕುಡಿತ ಮತ್ತಲ್ಲಿ ತಮ್ಮ ತಮ್ಮ ಕತೆಗಳನ್ನು ಬಡಬಡಿಸುವಾಗ ಹೇಳುವ ಭಾಷೆಯಂತೆನ್ನಿಸಿತು. ಆಗ ಮಕ್ಕಳ ಕಿವಿಗೆ ಈ ಭಾಷೆ ಬೀಳಬಾರದೆಂದು ದೂರ ಇರಿಸುತ್ತಾರೆ. ಆದರೆ, ಪ್ರೌಢತೆಗೆ ಬಂದ ಮೇಲೆ ಇದನ್ನು ಕಲಿಯುವ ಆಸಕ್ತಿ ಇರುವುದಿಲ್ಲ ಅಥವಾ ಅರಗಿಸಿಕೊಳ್ಳಲು ಬೇಕಾದ ಪ್ರೌಡಿಮೆ ಬೆಳೆಯುತ್ತದೆ. ಓದಿನಲ್ಲಿಯೂ ಅಂತಹಾ ಘಟ್ಟ ಸಾಧಿಸಿದಾಗ ಈ ಪುಸ್ತಕ ಕೈಗೆತ್ತಿಕೊಂಡರೆ ಒಳ್ಳೆಯದೆಂಬುದು ನನ್ನ ಭಾವನೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ