ಪುಸ್ತಕದ ಶೀರ್ಷಿಕೆ : ಲಾಂದ್ರ
ಲೇಖಕರು : ಪಲ್ಲವಿ ಬೇಲೂರು
ಪ್ರಕಾಶಕರು : ಯದುನಂದನ ಪ್ರಕಾಶನ
ಮೊದಲನೇ ಮುದ್ರಣ : 2022
ಪುಟಗಳು : 236
ಬೆಲೆ : 250 ರೂ.
ಇದು ಪಲ್ಲವಿ ಬೇಲೂರು ಅವರ ಎರಡನೇ ಪುಸ್ತಕ ಹಾಗೂ ಚೊಚ್ಚಲ ಕಾದಂಬರಿ. ಆದರೆ, ಚೊಚ್ಚಲ ಕಾದಂಬರಿ ಎಂಬ ಮುಲಾಜನ್ನು ಹೊರಗಿಟ್ಟು ಓದಬಹುದಾದಂತಹಾ ಪ್ರಬುದ್ಧ, ಭಾವಪೂರ್ಣ ಬರಹ ಶೈಲಿ.
'ಲಾಂದ್ರ' ಎಂಬ ಶೀರ್ಷಿಕೆ ಹಾಗೂ ಕಥೆಯ ಒಟ್ಟಾರೆ ಪರಿಕಲ್ಪನೆಯನ್ನು ಹೇಳುವುದಾದರೆ ಇಲ್ಲಿನ ಬೆಳಕಲ್ಲಿ ನನಗೆ ಕಂಡದ್ದು ಮೃದು ಹಾಗೂ ಪರಿಪಕ್ವ ಮನಸ್ಸುಗಳು, ಒಲವಿನ ಮಿಡಿತಗಳಿಗೆ ಹಿರಿಯರ ಒಪ್ಪಿಗೆ ಪಡೆಯುವ ಯುವ ಮನಸ್ಸುಗಳು, ಮಕ್ಕಳ ಮೇಲೆ ತಮ್ಮ ಅಭಿಪ್ರಾಯ ಹೇರದೆ ಬೆಳಕು ಬೀರುವ ಪ್ರಬುದ್ಧ ಹಿರಿಯರು, ಪ್ರೀತಿ - ವಾತ್ಸಲ್ಯದ ಜೊತೆಗೆ ಒಗ್ಗಟ್ಟು, ಸ್ಥೈರ್ಯದ ಮಿಳಿತ, ಅಂತಸ್ತು ಹಾಗೂ ಜಾತಿಯನ್ನು ಮೀರಿ ಬೆಳೆದ ಸ್ನೇಹ, ರಕ್ತ ಸಂಬಂಧ ಹಾಗೂ ಅಲ್ಲದವರನ್ನು ಬೆಸೆದ ಕುಟುಂಬದ ಹಿಂದಿನ ಮನಮಿಡಿತ, ಒಂದು ಮಾದರಿ ಗ್ರಾಮ, ಗ್ರಾಮಾಭಿವೃದ್ಧಿ ಹಾಗೂ ಅದಕ್ಕಾಗಿ ಹಿರಿಯರ ಜೊತೆಗೆ ಯುವ ಮನಸ್ಸುಗಳ ಕೈ ಜೋಡಿಸುವಿಕೆ, ಸ್ವಾವಲಂಬನೆ, ಸಮಾಜಮುಖಿ ಕಾರ್ಯಗಳು, ಅಕ್ಷರದ ಮಹತ್ವ, ಪುಸ್ತಕ ದಾಸೋಹ, ಗ್ರಂಥಾಲಯ ಇಷ್ಟೇ ಅಲ್ಲ.. ಇಲ್ಲಿ ಕಷ್ಟ - ನೋವುಗಳನ್ನು ಮೆಟ್ಟಿ ನಿಂತ ಕಥೆಯಿದೆ. ಪ್ರೇಮದ ಸಾಫಲ್ಯದ ಹಿಂದೆ ನೋವು ಹಾಗೂ ದುಃಖವನ್ನು ಅನುಭವಿಸಿದ ಮನಮಿಡಿಯುವ ಕಥನವಿದೆ. ಸಮಾಜಕ್ಕಾಗಿ ಒಳಿತನ್ನು ಮಾಡುವಾಗ ಕೆಡಿಸಲು ಬರುವ ಪಾಶವೀ ಮನಸ್ಸುಗಳಿವೆ. ಹಂಗಿಸುವವರಿದ್ದಾರೆ.. ಅದೆಲ್ಲವನ್ನೂ ಮೀರಿ ಅಭಿವೃದ್ಧಿಗಾಗಿ ಶ್ರಮಿಸಿದವರಿದ್ದಾರೆ.
'ಲಾಂದ್ರ' ಕೇವಲ ಪ್ರೇಮ ಕಥೆಯಲ್ಲ.. ಕೇವಲ ಕೌಟುಂಬಿಕ ಕಥೆಯಲ್ಲ.. ಕೇವಲ ಪ್ರೇರಣಾತ್ಮಕ ಕಥೆಯಲ್ಲ.. ಕೇವಲ ಪತ್ತೇದಾರಿ ಕಥೆಯಲ್ಲ.. ಕೇವಲ ಸಾಮಾಜಿಕ ಕಳಕಳಿಯ ಕಥೆಯಲ್ಲ. ಇದು ಇದೆಲ್ಲವನ್ನೂ ಒಳಗೊಂಡಿರುವ ಪರಿಪೂರ್ಣ ಕಾದಂಬರಿ. ಎಲ್ಲವೂ ಹದವಾಗಿ ಮಿಳಿತವಾಗಿರುವ ಕಥೆ. ಭಾವನಾತ್ಮಕ, ಕಲಾತ್ಮಕ, ಮೌಲ್ಯ ವರ್ಧಿತ, ಆದರ್ಶದ ಮನಮೋಹಕ ಕಥೆ. ಓದಿ ಮುಗಿಸಿದಾಗ ನಾನೂ ಮಾದೂರಿನ ಒಳ ಹೊಕ್ಕಿ ಬಂದಿದ್ದೆ. ಮಾದೂರು ನನ್ನನ್ನು ಆವರಿಸಿದಂತಹಾ ಭಾವ. ಇಲ್ಲಿನ 'ಲಾಂದ್ರ'ದ ಬೆಳಕು ಪ್ರಖರತೆ ಹಾಗೂ ಮಂದ ಬೆಳಕಿನ ನಡುವಿನ ಹದವಾದ ಬೆಳಕು ಬೀರುವಂತಹದ್ದು. ಪ್ರೀತಿಯಿದ್ದರೂ ಅತಿಯಾದ ಶೃಂಗಾರವಿಲ್ಲ.. ಕೆಟ್ಟತನವಿದ್ದರೂ, ದ್ವೇಷವಿದ್ದರೂ ಕ್ರೌರ್ಯದ ಪರಮಾವಧಿ ಇಲ್ಲ.. ಮಗು ಮನಸ್ಸು, ಮುಗ್ಧತೆಯಿದ್ದರೂ ದಡ್ಡತನವಿಲ್ಲ ಹೀಗೆ ಹದವರಿತ ಭಾವಗಳ ಮೆರವಣಿಗೆ ಸಾಗುತ್ತದೆ.
ಶ್ರೀನಿವಾಸರಾಯರು ಹಾಗೂ ರತ್ನ ದಂಪತಿಗಳಿಗೆ ಇಬ್ಬರು ಮಕ್ಕಳು. ಮೊದಲನೆಯವಳು ಮಾನ್ವಿತಾ. ಶಾಂತ ಸ್ವಭಾವದ, ಹಿರಿಯರಿಗೆ ಗೌರವ ನೀಡುವ, ಅಂತಃಕರಣ ತುಂಬಿದ ಮನೆಮಗಳು. ಮಗಳೆಂದರೆ ಹೀಗಿರಬೇಕು ಎನ್ನುವ ಭಾವ ಹುಟ್ಟಿಸುವ ಹುಡುಗಿ. ಮಗ ಗೋಪಿ ಅಪ್ಪನ ಹಾದಿಯಲ್ಲಿಯೇ ನಡೆಯುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡ ಯುವಕ. ವಾತ್ಸಲ್ಯಕ್ಕೆ ಬೆಲೆ ಕೊಟ್ಟು, ಹೆಣ್ಮನದ ತುಡಿತಗಳನ್ನು ಅರ್ಥ ಮಾಡಿಕೊಳ್ಳುವ, ಅಂತರಂಗದ ಗೆಳೆಯನಂತಹಾ ಮನೆಮಗ.
ರಘುನಾಥ ಹಾಗೂ ಮಾಧವಿ ದಂಪತಿಗಳಿಗೂ ಇಬ್ಬರು ಮಕ್ಕಳು. ಧನುಷ್ ಹಾಗೂ ಧಾರಿಣಿ. ಮಾಧವಿ ಶ್ರೀನಿವಾಸರ ತಂಗಿ. ಹೆಂಡತಿಯ ಸಹೋದರನ ಸಹೃದಯತೆಗೆ ಮಾರು ಹೋಗಿ ಆತನನ್ನೇ ಭಾವನನ್ನಾಗಿ ಆರಿಸಿದ್ದರು ಶ್ರೀನಿವಾಸರು. ಧನುಷ್ ಈಗ ವಿದೇಶದಲ್ಲಿದ್ದ. ಧಾರಿಣಿ ಇನ್ನೂ ತುಂಟ ಬುದ್ಧಿಯ ಲವಲವಿಕೆಯ ಹುಡುಗಿ.
ಚಿಕ್ಕಂದಿನಲ್ಲಿ ಧನುಷ್, ಮಾನ್ವಿತಾ, ಗೋಪಿ, ಧಾರಿಣಿಯರ ಜೊತೆಯಾಗಿ ಬೆಳೆದ ಹುಡುಗಿ ರಾಧಾ. ಪಂಚ ಪಾಂಡವರೆಂದೇ ಗುರುತಾಗಿದ್ದ ಗುಂಪು ಇದು. ಸೋಮಣ್ಣ ಹಾಗೂ ಶೀಲಾ ದಂಪತಿಗಳ ಮಗಳು ರಾಧಾ. ಶ್ರೀನಿವಾಸರಾಯರ ತೋಟ ನೋಡಿಕೊಂಡು ನೆಲೆಸಿದ್ದ ಮಾದೂರಿನವನಲ್ಲದಿದ್ದರೂ ಮಾದೂರಿನವನಂತೆಯೇ ಆಗಿದ್ದ ಸಹೃದಯ ಕುಟುಂಬ.
ಕಥೆಯ ಮೊದಲು ತೆರೆದುಕೊಳ್ಳುವುದೇ ಜೀವಂತಿಕೆಯನ್ನು ಕಳೆದುಕೊಂಡ ಮನ್ವಿತಾಳ ನೋವಿನ ಅಧ್ಯಾಯದಿಂದ. ಜೀವಕಳೆಯನ್ನು ಕಳೆದುಕೊಂಡ ಬೋಳು ಮರ ಹಾಗೂ ಮನ್ವಿತಾಳ ಬಾಳಿಗೂ ಹೋಲಿಸುವಾಗ ಅವಳ ಬದುಕಲ್ಲಿ ಅಂತಹಾ ದುರಂತವೇನಾಗಿರಬಹುದು ಎನ್ನಿಸಿತು. ಅತ್ತೆ ಮಾಧವಿ ಹಾಗೂ ಮಾವ ರಘುನಾಥ್ ಜೊತೆಗೆ ಧಾರಿಣಿ ಮಾದೂರಿನ ಮನೆಗೆ ಬಂದಾಗಲೂ ಮನೆಯಲ್ಲಿ ಎಲ್ಲರ ಪರಿಸ್ಥಿತಿಯೂ ಹೆಚ್ಚು ಕಡಿಮೆ ಮನ್ವಿತಾಳ ಹಾಗೆಯೇ ಇದ್ದಿತು. ಧನುಷ್ ವಿದೇಶಕ್ಕೆ ಹೋದ ಕುರಿತು ಹೇಳುವಾಗ ಬಹುಶಃ ಅದಕ್ಕೇನಾದರೂ ಬೇಸರವಿರಬಹುದಾ.. ಅಥವಾ ಕಳೆದುಕೊಂಡ ಪ್ರೀತಿಯಾ ಅಥವಾ ಬೇರೇನಾದರೂ ಇರಬಹುದಾ ಎಂದುಕೊಳ್ಳುವಾಗಲೇ ಗತದ ನೆನಪುಗಳನ್ನು ಬಿಟ್ಟು ಮುಂದಕ್ಕೋಗುವ ಧೃಢತೆ ಸಾಧಿಸಲು ತೀರ್ಮಾನಿಸಿದ್ದಳು ಮನ್ವಿತಾ. ಅದಕ್ಕೆ ಜೊತೆಯಾಗುತ್ತಿದ್ದಳು ಧಾರಿಣಿ.
ಸೋಮಣ್ಣನದ್ದು ಮತ್ತೊಂದು ರೀತಿಯ ಬದುಕು. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಹೊರಟವನನ್ನು ವಿಧಿ ವಂಚಿಸಿ ಕಟ್ಟಿ ಹಾಕಿತು. ಕುರಿಗಳ ಜೊತೆಗೆ ಪ್ರೀತಿಯ ನಾಯಿಯೂ ಬಲಿಯಾಗಿತ್ತು. ನಂತರವೂ ವಿಧಿಗೆ ಅವನ ಸಂತಸದ ಬದುಕು ಸಹ್ಯವಾಗಲೇ ಇಲ್ಲವೇನೋ ಎಂಬಂತೆ ಮಗ ಸುಧನ್ವನನ್ನು ಸಹಾ ಕಳೆದುಕೊಳ್ಳಬೇಕಾದ ಪರಿಸ್ಥಿತಿ. ಮಗಳು ರಾಧಾ ಈಗ ಮೋಹನನ ಜೊತೆ ಮದುವೆಯಾಗಿ ನೆಮ್ಮದಿಯಾಗಿದ್ದಳು. ಹೊಸ ಜೀವವನ್ನು ಭೂಮಿಗೆ ತರುವ ಸಂಭ್ರಮ ಕೂಡಾ ಸೇರಿತ್ತು. ಗೋಪಿಯೇ ಸುಧನ್ವನ ಪ್ರತಿರೂಪವಾಗಿದ್ದನು ಆ ಮನೆಗೆ.
ಮನ್ವಿತಾ ಬದುಕಲ್ಲಿ ಚಿರಂತ್ ಬಂದಿದ್ದನು. ಆದರೆ, ಬಾಳು ಬೆಳಗುವ ಮುನ್ನವೇ ಗಾಳಿಯ ರಭಸಕ್ಕೆ ಸಿಕ್ಕ ತರಗೆಲೆಯಂತಾಗಿತ್ತು ಬದುಕು. ಮನೆಯಲ್ಲಿ ಒಪ್ಪಿಗೆಯ ಮುದ್ರೆ ಬಿದ್ದ ಪ್ರೀತಿ ವಿವಾಹದ ಹೊಸ್ತಿಲಲ್ಲಿ ಕಾಲಿಡುವ ಮುನ್ನವೇ ಕಮರಿ ಹೋಗಿತ್ತು.
ಕಾಲದ ಜೊತೆಗೆ ಮಾದೂರು ಕಾಲಕ್ಕೆ ತಕ್ಕ ಹಾಗೆ ಬದಲಾವಣೆ ಕಾಣುತ್ತಿತ್ತು. ವಿರುದ್ಧ ಪಥದಲ್ಲಿ ಅಲ್ಲ.. ಅಭಿವೃದ್ಧಿಯತ್ತ. ಮಾದೂರಿನ ಒಂದಾನೊಂದು ಕಾಲದ ಭಯದ ತಾಣವಾಗಿದ್ದ ಮುನಿಕಟ್ಟೆ ಈಗ ಪ್ರವಾಸಿ ತಾಣದಂತೆ ಬದಲಾಗಿತ್ತು. ಅಲ್ಲಿನ ಉದ್ಯಾನವನ, ಓದುವ ಜಾಗ, ಗ್ರಂಥಾಲಯ ಇವೆಲ್ಲವೂ ಊರಿನ ಜನರ ಸಹಕಾರದಿಂದಲೇ ರೂಪುಗೊಂಡತಹವು. ಯಾರಿಗೋ, ಯಾರ ಮರ್ಜಿಗೋ, ಯಾರ ಧನ ಸಹಾಯಕ್ಕೋ ಕಾಯಲಿಲ್ಲ. ಅದಕ್ಕೆ ಹಿರಿಯರ ಪಾತ್ರದಷ್ಟೇ ಕಿರಿಯರ ಪಾತ್ರವೂ ಇತ್ತು. ಅದಕ್ಕೆ ಅಡ್ಡಿ ಆತಂಕಗಳು ಸಹಾ ಇಲ್ಲದಿರಲಿಲ್ಲ. ಆ ಎಲ್ಲಾ ಅಡ್ಡಿ - ಆತಂಕಗಳನ್ನು ಮೀರಿ ಮಾದೂರು ಅಷ್ಟು ಚೆಂದವಾಗಿ ರೂಪುಗೊಂಡ ಬಗೆ ಹೇಗೆ ? ಇನ್ನೂ ಏನೆಲ್ಲಾ ಇತ್ತು ಮಾದೂರಿನಲ್ಲಿ..?? ಅಲ್ಲಿನ ಅಭಿವೃದ್ಧಿ ಕಾರ್ಯದಲ್ಲಿ ಯಾರು ಯಾರ ಸಿಂಹಪಾಲಿತ್ತು ? ಶ್ರೀನಿವಾಸರು ಹಾಗೂ ಮಾದೂರಿನ ನಂಟು..
ಮನ್ವಿತಾ ಹಾಗೂ ಚಿರಂತ್ ಬದುಕಿನ ಪ್ರೀತಿ ಹಾಗೂ ದುರಂತ, ವಿಧಿ ಮತ್ತೊಮ್ಮೆ ಸೋಮಣ್ಣನಿಗೆ ನೋವು ನೀಡಲು ಹೊರಟಾಗ ರಾಧಾ ಬದುಕು ಮುಂದೇನಾಯಿತು.. ಗೋಪಿ, ಧನುಷ್, ಧಾರಿಣಿ, ಸಾಗ್ರೆ ಕುಟುಂಬ, ಡಾ. ಅರುಣ್ ಬಳುವಳ್ಳಿ, ಮುಕ್ತಾ, ಅನಾಥಾಲಯ ಇವರೆಲ್ಲರ ನಂಟು ಇದೆಲ್ಲದರ ಕುರಿತು ತಿಳಿಯಲು 'ಲಾಂದ್ರ' ಓದಿ.
ಬನ್ಸಿ ಎಂಬ ನಾಯಿಯ ಪಾತ್ರವೂ ಕಾಡುವಂತದ್ದು. ಸಣ್ಣ - ಪುಟ್ಟ ಪಾತ್ರಗಳು ಸಹಾ ಮನಸ್ಸಿನಿಂದ ಮರೆಯಾಗದೆ ಉಳಿಯುತ್ತವೆ. ಅಷ್ಟು ಒಳ್ಳೆಯವರು ಒಂದೇ ಕಡೆ ಸಿಗಬಹುದಾ ಎಂದುಕೊಂಡರೂ.. ಸಿಗಲಿ ಎಂದೇ ಆಶಿಸುವೆ. ಪಾಸಿಟಿವಿಟಿ ತುಂಬುವ ಸಾತ್ವಿಕ ಪಾತ್ರಗಳ ಗಟ್ಟಿತನ ಬಹಳ ಇಷ್ಟವಾಯಿತು. 'ಲಾಂದ್ರ'ದ ಬೆಳಕು ಎಂದಿಗೂ ದಾರಿದೀಪವಾಗುವಂತಹದ್ದು. ಎಲ್ಲರಿಗೂ ದಾರಿದೀಪವಾಗುವಂತಹಾ ಪ್ರಭೆ ಇದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ