ಮಂಗಳವಾರ, ಏಪ್ರಿಲ್ 7, 2026

ನೀನೇಕೆ ನನ್ನ ಮರೆತೆ ( ಪುಸ್ತಕ ಯಾನ - 49)


ಪುಸ್ತಕದ ಶೀರ್ಷಿಕೆ : ನೀನೇಕೆ ನನ್ನ ಮರೆತೆ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್

ಮೊದಲನೇ ಮುದ್ರಣ : 1999

ಪುಟಗಳು : 166

ಬೆಲೆ : 60 ರೂ. 


ಈ ಪುಸ್ತಕದಲ್ಲಿ 'ನೀನೇಕೆ ನನ್ನ ಮರೆತೆ' ಹಾಗೂ 'ಹುಣ್ಣಿಮೆಯ ಬೆಳಕಿನಲ್ಲಿ' ಎನ್ನುವ ಎರಡು ಸಾಮಾಜಿಕ ಕಾದಂಬರಿಗಳಿವೆ. ಸ್ತ್ರೀ ಶೋಷಣೆಯನ್ನು ಮೆಟ್ಟಿ ನಿಲ್ಲುವ ಹೆಣ್ಣುಗಳ ಕಥಾನಕವೇ ಆದರೂ ಶೋಷಣೆ ಮಾಡುವವರು ಸಹಾ ಸ್ತ್ರೀಯರೇ ಆಗಿದ್ದಾರೆ. ಅದೆಲ್ಲವನ್ನೂ ಮೀರಿ ನಿಲ್ಲುವರೇ ಎನ್ನುವ ಕುತೂಹಲ ಮೂಡಿಸುತ್ತಲೇ ಶೋಷಣೆಯನ್ನು ಮೆಟ್ಟಿ ನಿಂತು ಅವರ ಬದುಕು ಬಂಗಾರವಾಗಲಿ ಎನ್ನುವ ಹಾರೈಕೆಯೂ ಕಾದಂಬರಿಯನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.


ನೀನೇಕೆ ನನ್ನ ಮರೆತೆ


ಕಾದಂಬರಿಯ ನಾಯಕಿಯ ಹೆಸರು ಪದ್ಮಾಸಿನಿ ಎಂಬುದು ವಿಭಿನ್ನವಾಗಿ ಮನಸೆಳೆದ ಹೆಸರು. ಆಕೆಯ ಗೆಳೆತಿ ಮೋಹನಾಂಗಿ. ಇಬ್ಬರ ಗೆಳೆತನ ಒಮ್ಮೊಮ್ಮೆ ಅಕ್ಕ - ತಂಗಿಯಂತಿದ್ದರೆ, ಇನ್ನು ಕೆಲವೊಮ್ಮೆ ಹಾವು - ಮುಂಗುಸಿಯಂತೆ. 'ನೀನೇಕೆ ನನ್ನ ಮರೆತೆ' ಎಂಬ ಕವಿತೆ ಪದ್ಮಾಸಿನಿ ಶಕುಂತಲೆ ಹಾಗೂ ದುಷ್ಯಂತನ ಪ್ರೇಮ ಹಾಗೂ ವಿರಹದ ದಿನಗಳನ್ನು ನೆನೆದು ಹಂಬಲಿಸುವ ಕವಿತೆ. ಜಿಲ್ಲಾ  ಸಾಹಿತ್ಯ ಸಮ್ಮೇಳನದಲ್ಲಿ ಆಕೆ ವಾಚಿಸಿದ ಕವಿತೆ. ಆದರೆ, ಅಧ್ಯಕ್ಷರ ಮನಸೆಳೆದದ್ದು ಮೋಹನಾಂಗಿಯ ಕವಿತೆ. ಇವಳ ಕವಿತೆಯನ್ನು ಬಾಲಿಶ, ಅಪಕ್ವವೆಂದು ಟೀಕಿಸಿದಾಗ ಮುಖ ಬಾಡಿತ್ತು. ಆದರೆ, ಅಂತಹಾ ಕವಿತೆಗಳೇ ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುವುದು. ಇಲ್ಲಿಯೂ ಆದದ್ದು ಹಾಗೆಯೇ.. ಈ ಕವಿತೆ ಸ್ವತಃ ಕವಿ, ಕಾವ್ಯಾಸಕ್ತನೂ ಆಗಿದ್ದ ಶ್ರೀಧರ್ ದೇಶಪಾಂಡೆಯನ್ನು ಸೆಳೆಯಿತು. ಕವಿತೆಯ ಜೊತೆಗೆ ಪದ್ಮಾಸಿನಿ ಅವನ ಮನಸ್ಸನ್ನೂ ಗೆದ್ದಿದ್ದಳು.


ಮೋಹನಾಂಗಿ ಬೇಕೆಂದೇ ಅವಳನ್ನು ಒಂಟಿ ಮಾಡಿದಾಗ ಜೊತೆಯಾದದ್ದು ಶ್ರೀಧರ ಹಾಗೂ ಅವನ ಅತ್ತಿಗೆ. ಈ ಪ್ರಕರಣದ ನಂತರ ಕವಿಗೋಷ್ಠಿ ನೆಪದಲ್ಲಿ ಪದ್ಮಾನಿಸಿಯನ್ನು ಹಾಗೂ ಅವಳ ತಾಯಿಯನ್ನು ಮನೆಗೆ ಕರೆಸಿ ಮದುವೆಯ ನಿಶ್ಚಯವನ್ನೂ ಮಾಡಿ ಆಗಿತ್ತು.


ಈ ವಿಷಯ ಮೋಹನಾಂಗಿಗೆ ತಿಳಿದಾಗ ಮತ್ಸರ ಹೆಡೆಯಾಡಿತ್ತು. ಕಾರಣವೆಂದರೆ, ಪದ್ಮಾಸಿನಿಯನ್ನು ಜೊತೆ ಮಾಡಿಕೊಂಡದ್ದು ಅವಳನ್ನು ಕಾಡಲಿಕ್ಕೇ ಹಾಗೂ ಅವಳಿಗಿಂತ ತಾನು ಮೇಲಿರಲು. ಇಬ್ಬರ ತಂದೆಯರೂ ಒಟ್ಟಿಗೆ ಕೆಲಸ ಮಾಡುತ್ತಿದ್ದರೂ ಮೋಹನಾಂಗಿಯ ಮನೆಯವರು ಸ್ಥಿತಿವಂತರು. ಅವಳು ಶಿಕ್ಷಕಿ ಹುದ್ದೆಗೆ ಸೇರಿದ್ದೂ ಕಾಲಹರಣಕ್ಕೇ ಹೊರತು ಸಂಬಳಕ್ಕಲ್ಲ. ಪದ್ಮಾಸಿನಿಯೂ ಈ ಹುದ್ದೆಗೆ ಪ್ರಯತ್ನಿಸಿದರೂ ಮೋಹನಾಂಗಿಯಂತೆ ಹಣ ಕೊಡಲು ಆಗಲಿಲ್ಲ ಜೊತೆಗೆ ಅಧ್ಯಕ್ಷರ ವಶೀಲಿಗೆ ಪ್ರಯತ್ನಿಸಿದಾಗ ಆತನ ಅನುಚಿತ ವರ್ತನೆ ಹೇಸಿಗೆ ತರಿಸಿತ್ತು. ಆತನೇ ಕವಿಗೋಷ್ಠಿಯ ಅಧ್ಯಕ್ಷ ಸಹಾ. ಈಗ ಮೋಹನಾಂಗಿಯ ಓಡಾಟ ಅದೇ ಶಾಲೆಯ ಉಪಾಧ್ಯಾಯ ಗೋಪಿನಾಥನ ಜೊತೆಗೆ. ಆತ ಮೋಹನಾಂಗಿಯನ್ನು ಇಷ್ಟ ಪಡುತ್ತಿದ್ದ ಮದುವೆಯಾಗಲು ಸಿದ್ಧನಿದ್ದ. ಆದರೆ, ಮೋಹನಾಂಗಿ ಅವನ ಜೊತೆ ಸಲುಗೆಯಿಂದ ವರ್ತಿಸಿದರೂ ವಿವಾಹಕ್ಕೆ ಸಿದ್ದವಿರಲಿಲ್ಲ. ಡಾಕ್ಟರ್ ಜೊತೆಗೆ ವಿವಾಹ ನಿಶ್ಚಯವಾಗಿ ತಪ್ಪಿ ಹೋಯಿತು. ಅದನ್ನು ತಪ್ಪಿಸಿದ್ದು ಗೋಪಿ.


ಗೋಪಿ ಮತ್ತ್ಯಾರೂ ಅಲ್ಲ.. ಗಿರಿಧರನ ಮನೆಯಲ್ಲಿ ಆತನ ಅಣ್ಣ ಕೆಲಸ ಮಾಡುತ್ತಿದ್ದನು. ಗೋಪಿಯನ್ನು ವಿವಾಹವಾದರೆ ತಾನು ಪದ್ಮಾಸಿನಿಯ ಮನೆಯ ಊಳಿಗದವಳಂತೆ ಆಗುತ್ತೇನೆ ಎಂಬ ಕಾರಣ ನೀಡಿ ಗೋಪಿಗೆ ಒಂದು ಸವಾಲು ಹಾಕುತ್ತಾಳೆ. ಪದ್ಮಾಸಿನಿ ಹಾಗೂ ಗಿರಿಧರನ ಮದುವೆ ತಪ್ಪಿಸಿದರೆ ತಾನು ಗೋಪಿಯನ್ನು ವಿವಾಹವಾಗುತ್ತೇನೆ ಎನ್ನುತ್ತಾಳೆ.


ಗೋಪಿ ವಿವಾಹ ತಪ್ಪಿಸಿದನೇ..?? ಗೋಪಿ ಒಳ್ಳೆಯವನಾ ಅಥವಾ ಕೆಟ್ಟವನಾ..?? ಮೋಹನಾಂಗಿಯ ಬದುಕು ಏನಾಯಿತು ? ಶಕುಂತಲೆ ಹಾಗೂ ದುಷ್ಯಂತನ ಬದುಕಿನಂತೆಯೇ ಆಗಿ ಹೋಯಿತೇ ಗಿರಿಧರ ಹಾಗೂ ಪದ್ಮಾಸಿನಿಯ ಬದುಕು ? ಅಥವಾ ಗೋಪಿಗೆ ಪ್ರೇಮ ವೈಫಲ್ಯವಾಯಿತೇ ? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಈ ಕಾದಂಬರಿಯಲ್ಲಿದೆ.


ಹುಣ್ಣಿಮೆಯ ಬೆಳಕಿನಲ್ಲಿ


ಕೆಲವರ ಬದುಕಲ್ಲಿ ಹುಣ್ಣಿಮೆಯ ಬೆಳಕಿದ್ದರೂ ಅದನ್ನು ನಿರ್ಲಕ್ಷಿಸಿ ಅಮಾವಾಸ್ಯೆಯ ಕತ್ತಲಿನೆಡೆಗೆ ಜಾರುತ್ತಾರೆ. ಅದನ್ನು ಉಪಯೋಗಿಸಿಕೊಳ್ಳಲು ಬರುವುದಿಲ್ಲವೋ ಅಥವಾ ಉಪಯೋಗ ಮಾಡಿಕೊಳ್ಳಲಾರದಷ್ಟು ನಿರ್ಲಕ್ಷ್ಯವೋ ಗೊತ್ತಿಲ್ಲ. ಕೆಲವರ ಉದ್ಧಟತನ, ಅಹಂಕಾರ ,ಮತ್ತೊಬ್ಬರನ್ನು ಹಾಳು ಮಾಡುವ ಮನಸ್ಸು ಹೊಂದಿದ್ದಾಗ ಪರರಿಗಿಂತ ಇವರೇ ಹಾಳಾಗುವುದು ಹೆಚ್ಚು. ಕೆಲವರ ಬದುಕು ಹುಣ್ಣಿಮೆ ಬೆಳಕಿಗಾಗಿ ಹಾತೊರೆಯುತ್ತಿದ್ದರೂ ಎಲ್ಲದಕ್ಕೂ ಸಮಯ ಕೂಡಾ ಕೂಡಿ ಬರಬೇಕು. ಅಂತಹದ್ದೇ ಕಥೆ ಹುಣ್ಣಿಮೆಯ ಬೆಳಕಲ್ಲಿ.. 


ಭುವನಳದ್ದು ಆರು ಜನರ ಸಂಸಾರವಿರುವ ಬಡ ಕುಟುಂಬ. ತಂದೆ- ತಾಯಿಯರ ಜೊತೆಗೆ ಬೆನ್ನಲ್ಲಿ ಮೂರು ಹೆಣ್ಣು ಮಕ್ಕಳು. ಭುವನ, ಪರಮೇಶ್ವರಿ (ಪಮ್ಮಿ) , ರಾಜೇಶ್ವರಿ ಹಾಗೂ ಅಮರೇಶ್ವರಿ. ರಾಜೇಶ್ವರಿ ನರ್ಸರಿ ಶಾಲೆಯ ಶಿಕ್ಷಕಿ, ಅಮರೇಶ್ವರಿ ಅದೇ ಶಾಲೆಯಲ್ಲಿ ಆಯಾ. ಭುವನ ಟೈಪ್ ರೈಟಿಂಗ್ ಕಲಿತು ಟ್ಯೂಷನ್ ಮಾಡುತ್ತಾ, ರತ್ನಮಾಲಾ ಮನೆಯಲ್ಲಿ ಸಹಾಯಕಿಯಾಗಿದ್ದಳು. ರತ್ನಮಾಲಾ ಮನೆಯ ಸಮಾರಂಭದಲ್ಲಿ ಮನೆಯವರಂತೆ ಓಡಾಡುತ್ತಿದ್ದ ಭುವನಳನ್ನು ನೋಡಿದ ರತ್ನಮಾಲಾ ತಂಗಿ ಜಯಮಾಲಾಳ ಗಂಡ ಶ್ರೀಧರ ಆಕೆಯ ಕುರಿತು ವಿಚಾರಿಸಲು ಹೇಳಿದ್ದ.


ಹಾಗೆ ಕೇಳಿದ್ದು ತನ್ನ ಆತ್ಮೀಯ ಸ್ನೇಹಿತ, ಮನೆಯ ಪಕ್ಕದಲ್ಲಿಯೇ ಇರುವ ಅನಂತನಿಗೆ. ಅನಂತನ ಹೆಂಡತಿ ಸರೋಜಳನ್ನೇ ಹೋಲುತ್ತಿದ್ದಳು ಅವಳು. ಅನಂತನ ಹೆಂಡತಿ ಎರಡನೆಯ ಬಾಣಂತನದಲ್ಲಿ ತೀರಿ ಹೋಗಿದ್ದಳು. ಒಳ್ಳೆಯ ಸ್ಥಿತಿವಂತ ಕುಟುಂಬಕ್ಕೆ ಭುವನ ಮದುವೆಯಾದರೆ ಎನ್ನುವ ಆಸೆಯೂ ರತ್ನಮಾಲಾ ಹಾಗೂ ಜಯಮಾಲಾರಿಗಿತ್ತು.


ಆದರೆ, ಕುತಂತ್ರದಿಂದ ಅದು ಸಾಧ್ಯವಾಗಲಿಲ್ಲ. ಹಾಗೆ ಕುತಂತ್ರ ಮಾಡಿದ್ದು ಭುವನಳ ತಂಗಿ ಪಮ್ಮಿ ಹಾಗೂ ಎದುರು ಮನೆಯ ರಂಗಮ್ಮ. ರಂಗಮ್ಮ ಹಾಗೂ ಪಮ್ಮಿಗೆ ಭುವನಳನ್ನು ಕಂಡರೆ ದ್ವೇಷ. ಕಾರಣ ಅವಳ ರೂಪು. ಪಮ್ಮಿಯಂತೂ ರೂಪ ಹಾಗೂ ಗುಣದಲ್ಲಿ ಆಕೆಯ ತದ್ವಿರುದ್ಧ. ಅಡಿಗಡಿಗೆ ಅವಳನ್ನು ಜರಿಯುತ್ತಾ, ತಾನೂ ಏನೇನೂ ಕೆಲಸ ಮಾಡದೆ.. ಮನೆಯವರಿಗೆ ತಲೆ ನೋವಾಗಿದ್ದಳು. ಆದರೆ, ನಾಟಕ ಹಾಗೂ ಕುತಂತ್ರದಿಂದ ಅನಂತನ ಕೈ ಹಿಡಿದಳು. ಆದರೆ, ನಂತರದ ಬದುಕು..


ಅನಂತನ ಕೈ ಹಿಡಿದ ಪಮ್ಮಿ ಬದಲಾದಳೇ..?? ಭುವನ ಬದುಕು ಮುಂದೇನಾಯಿತು ?? ರಂಗಮ್ಮ ಹಾಗೂ ಪಮ್ಮಿಯ ಕುತಂತ್ರ ಅಲ್ಲಿಗೇ ನಿಂತಿತೇ ??


ಶೋಷಣೆ ಕೇವಲ ಮನೆಯ ಹೊರಗಿನಿಂದಲ್ಲ.. ಮನೆಯ ಒಳಗಿನಿಂದಲೂ ಆಗಬಹುದು ಎಂಬುದಕ್ಕೆ ಸಾಕ್ಷಿಯಾದಂತಿದೆ ಪಮ್ಮಿಯ ನಡವಳಿಕೆ. ಅದು ಬದಲಾಗುವ ದಿನ ಬಂದಿತೇ..?? ಒಂದು ಕುತೂಹಲಕರ ಕಾದಂಬರಿಯನ್ನು ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ