ಮಂಗಳವಾರ, ಏಪ್ರಿಲ್ 7, 2026

ಕಾಡು ( ಪುಸ್ತಕ ಯಾನ - 62)


ಪುಸ್ತಕದ ಶೀರ್ಷಿಕೆ : ಕಾಡು

ಲೇಖಕರು : ಶ್ರೀ ಕೃಷ್ಣ ಆಲನಹಳ್ಳಿ

ಪ್ರಕಾಶಕರು : ಐ.ಬಿ.ಹೆಚ್ ಪ್ರಕಾಶನ

ಮೊದಲನೇ ಮುದ್ರಣ : 1971

ಮೂರನೇ ಮುದ್ರಣ : 2020 ( ನನ್ನ ಓದಿಗೆ ಸಿಕ್ಕಿದ್ದು )

ಪುಟಗಳು : 106

ಬೆಲೆ : 100 ರೂ.


ಹೌದು, ಇದು ಚಲನಚಿತ್ರವಾಗಿರುವ ಕತೆಯೇ.. ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿರುವ ಚಲನಚಿತ್ರ ಹಾಗೂ ಅಮರೀಶ್ ಪುರಿ ನಟಿಸಿರುವಂತಹಾ ಚಲನಚಿತ್ರ 'ಕಾಡು' . ಇಷ್ಟೇ ಅಲ್ಲ, ಈ ಲೇಖಕರ ವಿವಿಧ ಕೃತಿಗಳಾದ 'ಪರಸಂಗದ ಗೆಂಡೆತಿಮ್ಮ', 'ಗೀಜಗನ ಗೂಡು', 'ಫಿನಿಕ್ಸ್', 'ಭುಜಂಗಯ್ಯನ ದಶಾವತಾರಗಳು' ಕೂಡಾ ಚಲನಚಿತ್ರವಾಗಿವೆ. 


ಇಂದು ನಾನು ಪರಿಚಯಿಸಲು ಹೊರಟಿರುವುದು 'ಶ್ರೀ ಕೃಷ್ಣ ಆಲನಹಳ್ಳಿ' ಇವರ 'ಕಾಡು' ಕಾದಂಬರಿಯನ್ನು. ಈ ಕಾದಂಬರಿಯ ಗುಂಗಿನಿಂದ ಹೊರ ಬರಲು ಸಮಯ ಬೇಕು.. ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಿತವಾಗಿರುವ ಈ ಕತೆ, ಈ ಇಡೀ ಕಾದಂಬರಿ ಕಿಟ್ಟಿಯ ಕಣ್ಣಲ್ಲಿ ಕಂಡ ಹಾಗೆ ಚಿತ್ರಿತವಾಗಿದೆ. ಆ ಬಾಲ್ಯದ ಮುಗ್ಧತೆಯ ರೂಪದಿಂದ ಅನಾವರಣವಾಗಿರುವ ಈ ಕತೆ ದೊಡ್ಡವರಿಗೆ ಅರ್ಥವಾದರೂ ಹೇಳಲಾಗದ್ದು. ಮುಗ್ಧ ಹೃದಯದಿಂದ ಕಾಣುವ ಪರಿಯೇ ಈ ಇಡೀ ಪುಸ್ತಕದ ಪ್ಲಸ್ ಪಾಯಿಂಟ್ ಎಂದರೂ ತಪ್ಪಾಗಲಾರದು. ಅಂದ ಮಾತ್ರಕ್ಕೆ, ಇದು ಚಿಕ್ಕ ಮಕ್ಕಳ ಕತೆಯಂತೂ ಖಂಡಿತಾ ಅಲ್ಲವೇ ಅಲ್ಲ. 


ಕಿಟ್ಟಿ ಚಂದ್ರೇಗೌಡರ ಅಕ್ಕನ ಮಗ. ತಮಗೆ ಮಕ್ಕಳಿಲ್ಲದ್ದು ಕೊರತೆಯೇ ಅಲ್ಲವೆಂದು ಭಾವಿಸಿ ತಮ್ಮ ಅಕ್ಕನ ಮಗನನ್ನೇ ಸಾಕಿಕೊಳ್ಳೋಣ ಎಂಬ ಚಂದ್ರೇಗೌಡರ ಮಾತಿಗೆ ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿಗೆ ನೀಡಿದ್ದ ಧರ್ಮಪತ್ನಿ ಕಮಲಮ್ಮ ತುಂಬು ಮನಸ್ಸಿನಿಂದ ಕಿಟ್ಟಿಯನ್ನು ಮಗನಂತೆ ಜೋಪಾನ ಮಾಡುತ್ತಾರೆ. ಆ ಮನೆಗೆ ಕಾಲಿಟ್ಟಾಗ ಕಿಟ್ಟಿಗೆ ಇನ್ನೂ ಐದು ವರ್ಷವಷ್ಟೇ.. ಯಾಕೋ, ಕಿಟ್ಟಿಯಷ್ಟೇ ಆಪ್ತವೆನಿಸಿದ ಪಾತ್ರ ಕಮಲಮ್ಮನವರದ್ದು ಸಹಾ. ಕಿಟ್ಟಿಗೆ ಅತ್ತೆಯ ಮಮತೆ ಎಷ್ಟು ಸಿಕ್ಕಿತ್ತು ಎಂದರೆ ಸ್ವಂತ ಅಮ್ಮನ ಮಡಿಲು ನೆನಪಾಗದಷ್ಟು.. ಆ ಊರಿಗೆ ಹೋದರೆ ಮತ್ತೆ ಯಾವಾಗ ಅತ್ತೆಯ ಬಳಿ ಬರುತ್ತೇನೋ ಎನ್ನುವಷ್ಟು. ಮಾವನೆಂದರೆ ಭಯಮಿಶ್ರಿತ ಪ್ರೀತಿ.


ದೊಡ್ಡ ಗೌಡರು ಹಾಗೂ ಅವರ ಧರ್ಮಪತ್ನಿ ಗೌರಕ್ಕ ಕೂಡಾ ಅಷ್ಟೇ ಗೌರವಯುತ ಮನುಷ್ಯರು. ಅತ್ತೆಯಂತೆಯೇ ಆತ್ಮೀಯತೆ ತೋರಿ ಒಳ್ಳೊಳ್ಳೆಯ ಊಟ ತಿಂಡಿ ತಿನ್ನಲು ಕೊಡುವ ಗೌರಕ್ಕ, ಅತ್ತೆಗೆ ಸಹಾಯ ಮಾಡುವ, ಆಪ್ತತೆ ತುಂಬುವ ಗೌರಕ್ಕನೆಂದರೆ ಕಿಟ್ಟಿಗೆ ಅಚ್ಚುಮೆಚ್ಚು.


ರಾತ್ರಿಗೆ ಜಿರಕೆ ಜೋಡು ಮೆಟ್ಟಿ ಹೊರಡುವ ಮಾವ, ಅಳುವ ಅತ್ತೆ ಇಬ್ಬರದ್ದೂ ನಿಗೂಢ ವರ್ತನೆ ಎನ್ನಿಸುವಾಗ ಅತ್ತೆಗೆ ತನ್ನಿಂದಾದ ಸಮಾಧಾನ ಹೇಳುವವನು ಇದೇ ಕಿಟ್ಟಿ.


ಕಿಟ್ಟಿಗೆ ಶಾಲೆ ಎಂದರೆ ಅಲರ್ಜಿ. ಮನಸ್ಸಿಲ್ಲದ ಮನಸಲ್ಲಿಯೇ ಶಾಲೆಗೆ ಹೊರಡುವವನ ಜೊತೆಗಾತಿ ನಾಗಿ. ಮನೆಯಲ್ಲಿ ಕೆಲಸದ ಸಿಳ್ಳ, ಲೋಮ್ಪಿ ಕೂಡಾ ಕಿಟ್ಟಿಯ ಜೊತೆಗಾರರೇ.. ಗೌರಿಮಣಕ ಹಾಗೂ ಮೊಣ್ಣ ಎಂಬ ನಾಯಿ ಕೂಡಾ ಅಷ್ಟೇ ಇಷ್ಟ.


ಊರಿನಲ್ಲಿ ನಡೆಯುತ್ತಿರುವ ಅನೈತಿಕ ಸಂಬಂಧಗಳ ಕುರಿತು ತಿಳಿದರೂ ಇವನಿಗೆ ಅದೇನು, ಅದ್ಯಾಕೆ ಹಾಗೆ ಎಂದು ಅರ್ಥವಾಗದ ವಯಸ್ಸು.. ಯಾರನ್ನಾದರೂ ಕೇಳಿದರೆ " ನಿಮಗೆ ದೊಡ್ಡವರಾದ ಮೇಲೆ ಇದು ಅರ್ಥವಾಗುತ್ತದೆ ಬುಡಿ" ಎಂಬ ಉತ್ತರ ಸಿಕ್ಕರೂ ಕಿಟ್ಟಿಯ ಮಾತಿನ ಶೈಲಿಯೂ ಬುದ್ಧಿವಂತಿಕೆಯದ್ದೇ.. ಆ ಬುದ್ಧಿವಂತಿಕೆ ಹೆಚ್ಚಿನ ಬಾರಿ ನಾಗಿಯ ಬಳಿಯೇ.. ಏನಾದರೂ ಕಿಟ್ಟಿಗೆ ಗೊತ್ತಿಲ್ಲದ್ದನ್ನು ಕೇಳಿದರೆ " ಆಮ್ಯಾಲೆ ಹೇಳುತ್ತೇನೆ" ಎಂಬ ಉತ್ತರವಂತೂ ಸಿದ್ದವೇ..


ಬಸಕ್ಕನ ಬದುಕು ಚಂದ್ರೇಗೌಡರ ಜೊತೆಗೆ ಇದ್ದೂ ಇರದಂತಹದ್ದು, ಕಮಲಮ್ಮನಿಗೆ ಗೊತ್ತಿದ್ದೂ ಗೊತ್ತಿಲ್ಲದೆ ಇದ್ದಂತಹದ್ದು.


ಒಂದು ಅನೈತಿಕ ಸಂಬಂಧದ ವಿಚಾರವಾಗಿ ಶುರುವಾದ ಚಾವಡಿ ನ್ಯಾಯ ಎಲ್ಲರ ಬದುಕನ್ನೂ ಎಷ್ಟು ಬದಲಿಸಿಬಿಟ್ಟಿತ್ತು. ಅವತ್ತು ಚಂದ್ರೇಗೌಡರ ಆ ರೌದ್ರರೂಪವೇ ಅದಕ್ಕೆ ಕಾರಣವಾಗಿದ್ದಿತಾ..?? ಅದೂ ಊರುಗಳ ನಡುವೆ ದ್ವೇಷ ಬೆಳೆಸುವಷ್ಟು..


ದೀಪಾವಳಿಯಿಂದ ಶುರುವಾಗುವ ಕತೆ ಮುಕ್ತಾಯವಾಗುವುದು ಸಂಕ್ರಾಂತಿ ಹಬ್ಬದಲ್ಲಿ. ಆ ಹಬ್ಬದಷ್ಟು ಈ ಹಬ್ಬ ಚೆನ್ನಾಗಿ ಆಚರಣೆಯಾಗಲಿಲ್ಲ ಎಂಬ ಕಿಟ್ಟಿಯ ಅಳಲು ಬದಲಾದ ಸಂದರ್ಭ ಹಾಗೂ ಬದುಕಿನ ಸ್ಥಿತಿಯನ್ನು ತಿಳಿಸುತ್ತದೆ. 


ಗೌರಿಕಡಸು ಸತ್ತ ರೀತಿ ನೋಡಿದರೆ ಕರುಳು ಕಿವುಚುವಂತಹಾ ಪರಿಸ್ಥಿತಿ. ಮೊಣ್ಣ ಸತ್ತದ್ದು ಕಿರುಬನ ದಾಳಿಗೆ ಸಿಲುಕಿ ಸತ್ತದ್ದು, ಆಯ್ನೋರ ಮನೆಯ ಸಾವಿತ್ರಮ್ಮ ನೇಣು ಹಾಕಿಕೊಂಡದ್ದು, ಬಾವು ಕೀವಾಗಿ ಸತ್ತ ನಾಗಿಯ ಅಜ್ಜಿ, ಭಗಭಗನೆ ಉರಿದ ಮೆದೆಗಳು, ಹೊಸೂರಿನಲ್ಲಿ ನಡೆದ ರಕ್ತದೋಕುಳಿ ಇವೆಲ್ಲದರ ಕೌರ್ಯವನ್ನೂ ಹಾಗೂ ಕಡೆಯ ಅಧ್ಯಾಯದಲ್ಲಿ ನಡೆಯುವ ಒಂದೇ ಕ್ರೌರ್ಯದ ಕಾಡಿನೊಳಗಿಂದ ನುಗ್ಗಿ ಬಂದ ರಾಕ್ಷಸರು ಮಾಡಿದ ಮೃಗೀಯ ಕ್ರೌರ್ಯವನ್ನೂ ತಕ್ಕಡಿಯಲ್ಲಿಟ್ಟು ತೂಗಿದರೆ ಕಡೆಯ ಕ್ರೌರ್ಯದ್ದೇ ಒಂದು ಕೈ ಹೆಚ್ಚು. ಕಾಡಿನಲ್ಲಿ ಮೃಗಗಳಾದರೋ ಹಸಿವಿನಿಂದ ಮತ್ತೊಂದು ಪ್ರಾಣಿಯನ್ನು ಹಿಂಸಿಸಿ ಕೊಂದರೆ, ಇಲ್ಲಿನ ಮನುಷ್ಯರು.. ಅಬ್ಬಬ್ಬಾ..


ಪ್ರತಿ ಬಾರಿ ಕಾಡಿನ ವರ್ಣನೆ ಬರುವಾಗಲೂ ಕಿಟ್ಟಿಗೆ ಭಯ, ನಿಗೂಢ, ಬೋಳು ನೋಟ, ಆಳುಹಕ್ಕಿಯ ನೆನಪು. 

ಪ್ರತಿಯೊಂದು ಚರ್ಯೆಗೂ ಕಿಟ್ಟಿಗೆ ಬೇಸರ ಆದರೆ ಕಡೆಗಂತೂ ಕಿಟ್ಟಿಯ ಕಣ್ಣಿನಿಂದ ಇಳಿದಿದ್ದ ರಾಕ್ಷಸ ಲೋಕ ಕರಗಿರಲಿಲ್ಲ. ಇನ್ನೂ ನಡುಗುತ್ತಲೇ ಇದ್ದ. 


ಆ ರಾಕ್ಷಸಲೋಕ ಹೇಗಿತ್ತು..?? ಆ ದ್ವೇಷಕ್ಕೆ ಕಾರಣವೇನು..?? ಬಲಿಯಾದದ್ದು ಯಾರು..?? ಆ ಅಮಾಯಕ ಜೀವಗಳ ತಲ್ಲಣ, ನೋವು ಅರಿಯಲು ನೀವು ಈ ಕಾದಂಬರಿಯನ್ನೊಮ್ಮೆ ಓದಿ ನೋಡಿ. 1971 ರಲ್ಲಿ ಮೊದಲ ಮುದ್ರಣ ಕಂಡಿರುವ ಕೃತಿ ಈಗಲೂ ವಾಸ್ತವದ ಕೈಗನ್ನಡಿಯಾಗಿಯೇ ತೋರುತ್ತದೆ. ಗ್ರಾಮೀಣ ಸೊಗಡಿನ ಮಾತುಕತೆಗಳನ್ನು ಹೊಂದಿರುವ ಈ ಕಾದಂಬರಿಯ ಮಾತುಗಳು ದಿನನಿತ್ಯದ ಆಡುಭಾಷೆಯಲ್ಲಿರುವುದರಿಂದ ಓದುವಾಗ ಕೊಂಚ ಹೆಚ್ಚಿನ ಸಮಯ ಬೇಕಾಗುತ್ತದೆ. ಕೆಲ ಮಾತುಗಳು ವಿಭಿನ್ನ ಎನ್ನಿಸುತ್ತವೆ. ಮರೆಯಾಗುತ್ತಲಿರುವ ಎಷ್ಟೋ ಹೊಸ ವಿಚಾರಗಳನ್ನು ತಿಳಿಯಲು ಉಪಕಾರಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ