ಮಂಗಳವಾರ, ಏಪ್ರಿಲ್ 7, 2026

ಶ್ರೀ ವಿಷ್ಣು ಕಾಂತೆ ಶಾಂತಲಾ (ಪುಸ್ತಕ ಯಾನ - 56)


ಪುಸ್ತಕದ ಶೀರ್ಷಿಕೆ : ಶ್ರೀ ವಿಷ್ಣು ಕಾಂತೆ ಶಾಂತಲಾ

ಲೇಖಕರು : ಕೆ. ವಿ. ಅಯ್ಯರ್

ಪ್ರಕಾಶಕರು : ವ್ಯಾಯಾಮಶಾಲಾ

ಪ್ರಥಮ ಮುದ್ರಣ : 1954

ಎರಡನೇ ಮುದ್ರಣ : 1955 (ನನ್ನ ಓದಿಗೆ ದೊರೆತಿದ್ದು )

ಪುಟಗಳು : 392


ಹೊಯ್ಸಳ ರಾಜ ಎರೆಯಂಗರು ಹಾಗೂ ಚೋಳ ರಾಜರ ಮಗಳಾದ ಮಹಾರಾಣಿ ಮಹಾದೇವಿಗೆ ಮೂರು ಗಂಡು ಮಕ್ಕಳು.  ಬಲ್ಲಾಳ, ಬಿಟ್ಟಿದೇವ ಹಾಗೂ ಉದಯಾದಿತ್ಯರು. ಎರೆಯಂಗರು ಕಾಲವಾಗಿ, ಬಲ್ಲಾಳ ಹಾಗೂ ಉದಯಾದಿತ್ಯರೂ ಕಾಲವಾದಾಗ ಉಳಿದ ಮಗುವೇ ಬಿಟ್ಟಿದೇವ. ಆತನೇ ವಿಷ್ಣುವರ್ಧನ ಎಂಬ ಹೆಸರಿನಿಂದ ಪ್ರಖ್ಯಾತರಾದ ಮಹಾರಾಜ. ಮೊದಲಿಗೆ ವಿವಾಹದಲ್ಲಿ ಆಸಕ್ತಿ ಇಲ್ಲದಿದ್ದರೂ ಅಮ್ಮನ ಪ್ರೀತಿಯ ಒತ್ತಾಯಕ್ಕೆ ಮಣಿದು ಜೊತೆಗೆ ರಾಜ್ಯದ ಹಿತದೃಷ್ಟಿಯಿಂದ, ಸಂತಾನಾಭಿವೃದ್ಧಿಯ ಕಾರಣವೂ ಸೇರಿ ವಿವಾಹಕ್ಕೆ ಒಪ್ಪಿಗೆ ನೀಡಿದರು. ಹಾಗೆ ಒಪ್ಪಿಗೆ ಪಡೆಯುವ ಮುನ್ನ ಮಹಾರಾಣಿ ಮಹಾದೇವಿಗೆ ಕಣ್ಣಿಗೆ ಬಿದ್ದಿದ್ದ ಹೆಣ್ಣು ಶಾಂತಲೆ. 


ಈಕೆಯನ್ನು ವಿಷ್ಣುವರ್ಧನನ ಕಣ್ಣಿಗೆ ಬೀಳುವಂತೆ ಮಾಡಲು ನೆಪವಾಗಿದ್ದು ಕುವರ ವಿಷ್ಣುವಿನ ಬ್ರಹ್ಮೋಪದೇಶ. ಕುವರ ವಿಷ್ಣು ಎರೆಯಂಗರ ಕಾಲದ ಚೆನ್ನಮ ದಂಡಾಧೀಶ ಹಾಗೂ ಮಹಾಸತಿ ಚಂದಲೆ. ಅವರಿಬ್ಬರ ಮೃತ್ಯುವಿನ ನಂತರ ಕುವರ ವಿಷ್ಣುವನ್ನು ಮಹಾರಾಣಿ ಮಹಾದೇವಿಯವರೇ ಸಾಕುಮಗ ಎಂಬಂತೆ ಸಾಕಿದ್ದರು. ಆ ಸಂಧರ್ಭದಲ್ಲಿ ವಿಷ್ಣುವರ್ಧನನಿಗೆ ಶಾಂತಲೆಯ ದರ್ಶನವಾಯಿತು. 


ಧರ್ಮೇಶ್ವರನ ವರಪ್ರಸಾದದಿಂದ ಡಣಾಯಕ ಮಾರಸಿಂಗಮಯ್ಯ ಹಾಗೂ ಮಾಚಿಕಬ್ಬೆಗೆ ಜನಿಸಿದ ಮಗುವೇ ಶಾಂತಲೆ. ಈಕೆಯ ವೀಣಾ ವಾದನದ ಕಾರಣವೊಡ್ಡಿ ಮಹಾರಾಜರ ಮನಸ್ಸಿಗೆ ಆಕೆಯನ್ನು ಹತ್ತಿರವಾಗಿಸಲು ಮಹಾರಾಣಿಯವರು ಪ್ರಯತ್ನಿಸಿದರು. ಆ ಸಮಯದಲ್ಲಿ ವಿಷ್ಣುವರ್ಧನರು ಮನಸೋತದ್ದು ಶಾಂತಲೆಯೆಂದು ತಿಳಿದುಕೊಂಡು ಶಾಂತಲೆಯ ಪಕ್ಕದಲ್ಲಿದ್ದ ಲಕ್ಷ್ಮಿಗೆ. 


ಎರೆಯಂಗರ ಕಾಲದಲ್ಲಿ ಕಂಚಿಯಿಂದ ಕರೆತಂದಿದ್ದ ಪಂಡಿತರಾದ ಪೆರುಮಲೆಯವರ ಮಗಳೇ ಲಕ್ಷ್ಮಿ. ಆಕೆ ಶಾಂತಲೆಗಿಂತ ವಯಸ್ಸಿನಲ್ಲಿ ಚಿಕ್ಕವಳು. ಅಮ್ಮನಿಲ್ಲದ ಮಗುವಿಗೆ ಅಮ್ಮನಾಗಿ ಸಾಕಿ ಸಲಹಿದವರು ಶಾಂತಲೆಯ ತಾಯಿ ಮಾಚಿಕಬ್ಬೆಯವರು. ಇಬ್ಬರೂ ಒಂದೇ ತಾಯ್ತಂದೆಯರ ಮಕ್ಕಳಲ್ಲದಿದ್ದರೂ ಅಕ್ಕ - ತಂಗಿಯರ ನಡುವಲ್ಲೂ ಇರದಷ್ಟು ಬಾಂಧವ್ಯ ಅವರಲ್ಲಿತ್ತು. ಅವರಿಬ್ಬರ ಆಸೆ ಹಾಗೂ ಪ್ರಮಾಣಕ್ಕೆ ದೈವವೇ ಜೊತೆ ನೀಡಿತೇನೋ ಎಂಬಂತೆ ವಿಷ್ಣುವರ್ಧನರೂ ಇವರಿಬ್ಬರ ಬಾಂಧವ್ಯ ಕಂಡು ಇಬ್ಬರನ್ನೂ ಜೊತೆಯಾಗಿ ಮದುವೆ ಮಾಡಿಕೊಳ್ಳಲು ಅಪೇಕ್ಷಿಸಿದರು. ವೈಷ್ಣವರಾದ ಪಂಡಿತ ಪೆರುಮಲೆಯವರು ಇದಕ್ಕೆ ಸಂತಸದಿಂದಲೇ ಸಮ್ಮತಿಸಿದರು.


ಶುಭ ಮುಹೂರ್ತದಲ್ಲಿ ಶಾಂತಲೆ ಹಾಗೂ ಲಕ್ಷ್ಮಿಯರ ಜೊತೆಗೆ ರಾಜ್ಯಗಳ ನಡುವಿನ ಸ್ನೇಹ, ಸೌಹಾರ್ದವನ್ನು ವೃದ್ಧಿಸಲು ಇತರ ಐದು ಕನ್ಯೆಯರನ್ನೂ ವಿವಾಹವಾದರು. ಅವರೇ.. ಬಮ್ಮಲೆ, ರಾಜಲೆ, ಬಿಜ್ಜಲೆ, ಚವ್ವಲೆ ಹಾಗೂ ದೇವಕಿ. ಇದರಲ್ಲಿ ಪಟ್ಟಕ್ಕೇರಿ ವಿಷ್ಣುವರ್ಧನನ ಪಟ್ಟದ ರಾಣಿಯಾಗಿದ್ದು ಶಾಂತಲೆ. ದೇವಕಿ ಮುಳ್ಳೂರನ್ನು ಆಳುತ್ತಿದ್ದಳು. ಕುದುರೆಗಳನ್ನು ಪಳಗಿಸಿ, ಅವುಗಳಿಗೆ ತರಬೇತಿ ನೀಡುವ ವಿದ್ಯೆ ಅಶ್ವಹೃದಯ ಬಮ್ಮಲೆಗೆ ತಿಳಿದಿತ್ತು. ಅಣ್ಣ - ತಮ್ಮಂದಿರಿಲ್ಲದ ಶಾಂತಲೆ ಹಾಗೂ ಲಕ್ಷ್ಮಿಗೆ ತಮ್ಮನಾಗಿದ್ದು ಕುವರವಿಷ್ಣು. ಕೇವಲ ಶಾಸ್ತ್ರಕ್ಕಲ್ಲ.. ಬದುಕಿನ ಪ್ರತಿ ಕ್ಷಣದಲ್ಲೂ ಅವರೆಲ್ಲರ ಸೋದರ - ಸೋದರಿ ಪ್ರೇಮ ಆದರಣೀಯ. 


ವಿವಾಹದ ನಂತರ ವಿಷ್ಣುವರ್ಧನರ ಹೃದಯ ಸಾಮ್ರಾಜ್ಞಿಯೇ ಆಗಿ ಹೋದಳು ಶಾಂತಲೆ. ಮಹಾರಾಣಿ ಮಹಾದೇವಿಯವರು ರಾಜ್ಯದ ಆಗುಹೋಗುಗಳನ್ನು ಮಗ ತಮ್ಮೊಡನೆ ಮಾತ್ರ ಚರ್ಚಿಸುತ್ತಿದ್ದಾಗ ಶಾಂತಲೆ ಹಾಗೂ ಲಕ್ಷ್ಮಿಯರನ್ನೂ ಕರೆಸಿದಾಗ ವಿಷ್ಣುವರ್ಧನರು ಕೇಳುತ್ತಾರೆ ಇದು ಅವಶ್ಯಕವೇ...? ಎಂದು. ಆಗ ಮಹಾದೇವಿಯವರ ದೂರದೃಷ್ಟಿ ಗೋಚರವಾಗುತ್ತದೆ. ಕೇವಲ ಅಂತಃಪುರಕ್ಕೆ ಮಾತ್ರ ರಾಣಿ ಸೀಮಿತವಲ್ಲವೆಂಬುದು ಅವರ ಅಭಿಪ್ರಾಯ. ಅದರಿಂದಾಗಿಯೇ ರಾಣಿಯರು ರಾಜ್ಯದ ಆಗುಹೋಗುಗಳನ್ನೂ ತಿಳಿಯುತ್ತಾ ತಮ್ಮ ಅಭಿಪ್ರಾಯಗಳನ್ನೂ ನೀಡುವುದು ಮುಖ್ಯವೆಂದು ಭಾವಿಸುತ್ತಾರೆ. ಮಹಾರಾಜರ ಅನುಪಸ್ಥಿತಿಯಲ್ಲಿ ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುವ ಶಕ್ತಿ ಅವರಿಗೆ ಇರಲೆಂಬ ಆಶಯವೂ ಸೇರಿರುತ್ತದೆ. ಇದಕ್ಕೆ ಪುಷ್ಟಿ ನೀಡುವಂತೆ ಮುಂಬರುವ ದಿನಗಳಲ್ಲಿ ಶಾಂತಲೆ ನಡೆದುಕೊಳ್ಳುವುದೂ ಇದೆ.


ಶಾಂತಲೆಯದ್ದು ಬಹುಮುಖ ಪ್ರತಿಭೆ. ವೀಣೆಯನ್ನು ಹಿಡಿಯುವ ಕೈ ಸುಟ್ಟುಗ (ಸೌಟು)ವನ್ನು ಹಿಡಿಯಲು ಸಾಧ್ಯವೇ ಎಂಬ ಮಹಾರಾಜರ ಮಾತನ್ನು ಸುಳ್ಳಾಗುವಂತೆ ಮಾಡಿದ ಸಂಧರ್ಭವೂ ಇದೆ. ಲಕ್ಷ್ಮಿ ಕೂಡಾ ಈ ವಿಚಾರಗಳಲ್ಲಿ ಅಕ್ಕನ ನೆರಳು. ವೇಲಾಪುರಿ ಎಂದರೆ ಈಗಿನ ಬೇಲೂರಿನ ದೇವಾಲಯದ ಸಮಾರಂಭದಲ್ಲಿ ಲಕ್ಷ್ಮಿಯ ವೀಣೆ ಹಾಗೂ ಶಾಂತಲೆಯ ನೃತ್ಯ ಎಲ್ಲರನ್ನೂ ಮೋಡಿಗೊಳಪಡಿಸಿತು. ಚಿಕ್ಕಂದಿನಲ್ಲಿ ಕಲಿತಿದ್ದ ಶಾಸ್ತ್ರ, ಅಧ್ಯಯನಗಳಿಂದ ಆಕೆ ತೀರ್ಪು ಕೊಡುವ ಸಂಧರ್ಭದಲ್ಲಿ ಸಹಾ ತಪ್ಪುತ್ತಿರಲಿಲ್ಲ. 


ಒಮ್ಮೆ ಮಹಾರಾಜರು ದಂಡಯಾತ್ರೆಗೆ ಹೋಗಿದ್ದಾಗ ಬರುವ ಒಂದು ಸಂಕಷ್ಟದ ಸಂದರ್ಭದಲ್ಲಿ ಗಂಗರಾಜರ ಮಗ ಬೊಪ್ಪಣ ಹಾಗೂ ಕುವರವಿಷ್ಣು ಮಾತ್ರ ರಾಜ್ಯದ ರಕ್ಷಣೆಗೆ ಇರುತ್ತಾರೆ. ಆ ಸಂಧರ್ಭದಲ್ಲಿ ಕುವರವಿಷ್ಣು ತೋರುವ ಧೈರ್ಯ, ಸಮಯಪ್ರಜ್ಞೆ ಹಾಗೂ ಬುದ್ಧಿವಂತಿಕೆಯಿಂದ ರಾಜ್ಯದ ರಕ್ಷಣೆ ಮಾಡುತ್ತಾನೆ ಕುವರವಿಷ್ಣು. ಆದರೆ , ಆತ ಇನ್ನೂ ಹುಡುಗ ಎನ್ನುವ ಆತಂಕ ಎಲ್ಲರಲ್ಲೂ.. ಮಹಾರಾಜರು ಮತ್ತೆ ರಾಜಧಾನಿಗೆ ಹಿಂದಿರುಗಿ ಬರುವವರೆಗೂ.. ಪ್ರಬಲ ಶತ್ರುವಿನ ಮುಂದೆ ಇವನು ಜೀವದಿಂದ ಉಳಿದರೆ ಸಾಕು ಎಂಬ ಅಭಿಪ್ರಾಯ ಎಲ್ಲರಲ್ಲೂ.. ಆದರೆ, ಸಂದೇಶವಾಹಕ ತರುವ ಒಂದು ತಪ್ಪು ತಿಳುವಳಿಕೆಯ ಸಂದೇಶದಿಂದ ಸಾಕುಮಗನನ್ನು ಮಗನೆಂದೇ ತಿಳಿದು ಅವನಲ್ಲೇ ಜೀವವಿಟ್ಟಿದ್ದ ತಾಯಿ ಮಹಾರಾಣಿ ಅಸುನೀಗುತ್ತಾರೆ. ಆಗ, ಒಂದು ಮಾತು ಬರುತ್ತದೆ. "ಅಮೃತದಲ್ಲಿ ಒಂದು ಹನಿ ವಿಷವಿರಬಹುದು. ಆದರೆ, ವಿಷದಲ್ಲಿ ಅಮೃತವಿರುವುದಿಲ್ಲ" ಎಂಬುದು. ಈ ಮಾತು ಅದೆಷ್ಟು ನಿಜವಲ್ಲವಾ.. ಒಳ್ಳೆಯ ವಿಚಾರ ಅಥವಾ ಅತಿ ಸಂತೋಷದ ವಿಚಾರಗಳು ಕೆಲವೊಮ್ಮೆ ತಿಳಿಯದೇ ದುಃಖ ಅಥವಾ ಸಂಕಟದ ವಿಚಾರಗಳನ್ನು ಹೊತ್ತು ತಂದಿರುತ್ತವೆ. ಆದರೆ, ಸಂಕಟ ಅಥವಾ ಅಪ್ರಿಯ ವಿಚಾರಗಳಲ್ಲಿ ಜೀವದ್ರವ್ಯವಿರಲಾರದೇನೋ.. 


ಇದರ ನಂತರ ಬಹಳಷ್ಟು ಬದಲಾವಣೆಗಳಾಗುತ್ತವೆ. ಕುವರ ವಿಷ್ಣುವಿಗೆ ಹೊಯ್ಸಳರ ಅಮಾತ್ಯ ವೀರದೇವರ ಮಗಳಾದ ಸೋವಲೆಯೊಂದಿಗೆ ಶಾಂತಲೆ ಹಾಗೂ ಲಕ್ಷ್ಮಿಯರ ಆಯ್ಕೆಯಂತೆ, ಕುವರ ವಿಷ್ಣುವಿನ ಒಪ್ಪಿಗೆಯೊಂದಿಗೆ ವಿವಾಹವಾಗುತ್ತದೆ. 


ಶಾಂತಲೆ, ಲಕ್ಷ್ಮಿಯರ ವಿವಾಹದ ನಂತರ ಬರಿದಾದ ಮಾಚಿಕಬ್ಬೆಯವರ ಮಗಳ ಸ್ಥಾನವನ್ನು ತುಂಬಿದ್ದು, ಶಾಂತಲೆಯಂತೆಯೇ ಕಾಣುತ್ತಿದ್ದ ಚಂದಲೆ. ಆಕೆ, ಮಾರಸಿಂಗಮಯ್ಯನವರ ಸೋದರಳಿಯ ಕೇತಮಲ್ಲ ಹಾಗೂ ಜಕ್ಕಿಯಬ್ಬೆಯವರ ಮಗಳು. ತಲವನಪುರದ ರಾಜನಿಂದ ಸಾಕಷ್ಟು ಕಿರುಕುಳ ಅನುಭವಿಸಿ ರಾಜ ವಿಷ್ಣುವರ್ಧನನ ಆಶ್ರಯಕ್ಕೆ ಬಂದು ನೆಲೆಸಿ ಅವರ ಮೇಲಿನ ಗೌರವಕ್ಕೆ ತನ್ನ ಪ್ರೀತಿಪೂರ್ವಕ ಉಡುಗೊರೆ ನೀಡಿದ್ದು ಹಳೇಬೀಡಿನ ದೇವಾಲಯಗಳನ್ನು. ಅವೇ ಹೊಯ್ಸಳೇಶ್ವರ ಹಾಗೂ ಶಾಂತಲೇಶ್ವರ ದೇವಾಲಯಗಳು.


ಈ ದೇವಾಲಯಗಳ ಉದ್ಘಾಟನಾ ಕಾರ್ಯಕ್ರಮದ ಕುರಿತು ಕುವರವಿಷ್ಣು ಅದೆಷ್ಟು ಸೊಗಸಾದ ಕನಸು ಕಂಡಿದ್ದ. ಅಕ್ಕ ಶಾಂತಲೆಯ ಮೇಲಿನ ಅಪರಿಮಿತ ಪ್ರೀತಿ ಅಸಾಧ್ಯದ ಕಾರ್ಯವನ್ನೂ ಸಾಧ್ಯವಾಗಿಸಿತ್ತು. ಕುವರವಿಷ್ಣುವಿನ ಮೇಲೆ ಶಾಂತಲೆ, ವಿಷ್ಣುವರ್ಧನರ ಪ್ರೇಮವೆಷ್ಟಿತ್ತು, ನಂಬಿಕೆ ಎಷ್ಟಿತ್ತು ಎಂದರೆ ತಮಗೆ ಮಕ್ಕಳಾಗದಾಗ ಆತನೇ ಮುಂದಿನ ಸಾಮ್ರಾಜ್ಯದ ಅಧಿಪತಿ ಎಂದೂ ತೀರ್ಮಾನಿಸಿರುತ್ತಾರೆ. ಅದಕ್ಕೆ ಇನ್ನೇನು ಸಿದ್ಧತೆಗಳಾಗಬೇಕು ಎನ್ನುವಷ್ಟರಲ್ಲಿ ಕುವರವಿಷ್ಣುವಿನ ತೀರ್ಮಾನ ತಿಳಿಯುತ್ತದೆ. ಎಲ್ಲರ ಬದುಕಿಗೆ ಬೇರೆಯದ್ದೇ ತಿರುವು ನೀಡುತ್ತದೆ.


ಶಾಂತಲೆಯ ಆತ್ಮಾರ್ಪಣೆ ದುಡುಕು ಎಂದು ಮೊದಲಿಗೆ ಅನ್ನಿಸಿದರೂ ಮಮತಾಮಯಿಯಾದ ಅವಳ ಜಾಗದಲ್ಲಿ , ಮಹಾರಾಣಿಯಾದ ಅವಳ ಸ್ಥಾನದಲ್ಲಿ ನಿಂತು ಆಲೋಚಿಸಿದರೆ ಅವಳಿಗೆ ಬೇರೆ ಆಯ್ಕೆಯಾದರೂ ಏನಿತ್ತು ಎಂದೂ ಅನ್ನಿಸದೇ ಇರಲಾರದು. ಆತ್ಮಹತ್ಯೆ ಮಾಡಿಕೊಳ್ಳುವ ನಿಮಿಷದ ಮುನ್ನವೂ ಕೆಲವರು ಗುಟ್ಟು ಬಿಟ್ಟುಕೊಡದೆ ಇರುತ್ತಾರೆ. ತಮ್ಮ ಜೀವದ ಇನ್ನೊಂದು ಭಾಗವೇ ಅವಳು ಎನ್ನುವಂತಿದ್ದ ಲಕ್ಷ್ಮಿ ಹಾಗೂ ವಿಷ್ಣುವರ್ಧನನಿಗೂ ಸುಳಿವು ನೀಡದೆ ಹೊರಡುವ ಅವಳ ಮನಸ್ಸಿನ ದುಃಖ, ಘಾಸಿಯಾದದ್ದು ಹಾಗೂ ದೃಢತೆ ಸಾಮಾನ್ಯರ ಅಳತೆಗೋಲಿಗೆ ಸಿಗುವಂತದ್ದಲ್ಲ. 


ಅಕ್ಕನಿಲ್ಲದ ದಿನಗಳನ್ನು ಲಕ್ಷ್ಮಿ ನಿಭಾಯಿಸುತ್ತಾಳಾ..? ಎನ್ನುವ ಸಂದೇಹ ಎಲ್ಲರಲ್ಲೂ ಇದ್ದರೂ.. ಅವಳ ನಿಭಾಯಿಸುವಿಕೆಯ ಪರಿ ಕಥೆಯಲ್ಲಿ ಜೀವಂತಿಕೆ ತಂದದ್ದು ಸುಳ್ಳಲ್ಲ. 


ಐತಿಹಾಸಿಕ ಕಾದಂಬರಿ ಇತಿಹಾಸದ ಸ್ಥಳ, ರಾಜ ಮನೆತನಗಳ ಓದನ್ನು ನೆನಪಿಸುತ್ತಾ ಇತಿಹಾಸದಂತೆ ಓದಿ ತಿಳಿದಿದ್ದ ಚುಕ್ಕಿಗಳನ್ನು ವಾಸ್ತವದ ಸ್ಥಳಗಳ ಜೊತೆಗೆ ಕೂಡಿಸುತ್ತಾ.. ಭಾವುಕತೆಯ ನೇಯ್ಗೆಯಲ್ಲಿ ಬೇರೆಯದ್ದೇ ಲೋಕ ಸೃಷ್ಟಿಸುವಂತೆ ಮಾಡಿತು.


ಇಲ್ಲಿನ ಸಾವುಗಳಲ್ಲಿ ಅದೆಷ್ಟು ಬಗೆಗಳು ಆತ್ಮಾರ್ಪಣೆ, ಜೈನ ಧರ್ಮದ ರೀತಿಯಲ್ಲಿ ಮಾಚಿಕಬ್ಬೆ ಅಪ್ಪುವ ಸಲ್ಲೇಖನ, ರಾಜನಿಗಾಗಿಯೇ ಬದುಕುವ ಗರುಡ, ಗಂಡನ ವೀರ ಮರಣದಿಂದ ತಾನೂ ಅವರೊಡನೆಯೇ ಪ್ರಾಣಾರ್ಪಣೆ ಮಾಡುವ ಮಹಾಸತಿ ಇವುಗಳ ಜೊತೆಗೆ ವಿಷ್ಣುವರ್ಧನ, ಶಾಂತಲೆಯ ಕಾಲದ ಆಡಳಿತದಲ್ಲಿ ಜನರ ರಾಜ ಹಾಗೂ ರಾಜ್ಯಪ್ರೇಮ ಎಷ್ಟಿತ್ತೆಂದರೆ ತಮ್ಮಿಂದ ಆದ ದುರಂತವೆಂದು ತಮ್ಮನ್ನೇ ಕೊಂದುಕೊಳ್ಳುವ ಸಂದೇಶವಾಹಕರು, ಸೈನಿಕರು, ಆತ್ಮೀಯರು. ಅದಕ್ಕಾಗಿ ಅವರ ಕುಟುಂಬದವರಿಗೆ ಜೀವನೋಪಾಯಕ್ಕೆ ಬೇಕಾದದ್ದು ಹಾಗೂ ಗೌರವಗಳು ಸಹಾ ಅರ್ಪಣೆಯಾಗುತ್ತಿದ್ದವು. ವೀರಗಲ್ಲು, ಮಾಸ್ತಿಗಲ್ಲುಗಳು ಸಹಾ ಇವುಗಳ ಉದಾಹರಣೆ. ಇಲ್ಲಿನ ಸಾವುಗಳು ಕೂಡಾ ಅದೆಷ್ಟು ಗೌರವಯುತ.


ವಿಜಯಕ್ಕೆ, ವೀರತೆಗೆ ಕಟ್ಟಿಸುವ ದೇವಾಲಯಗಳು.. ಅವುಗಳ ನೆನಪಿನ ಜೊತೆಗೆ ರಾಜರ ದೈವಭಕ್ತಿಯನ್ನು ಸೂಚಿಸುವ ಜೊತೆಗೆ ಪ್ರಜೆಗಳಲ್ಲಿಯೂ ದೈವ ಭಕ್ತಿಯನ್ನು ತುಂಬುತ್ತಿತ್ತು. ಅಷ್ಟೇ ಅಲ್ಲದೇ, ಜನತೆಗೆ ಅದು ಸ್ಫೂರ್ತಿ ಕೂಡ. ಕೇತಮಲ್ಲ ನಿರ್ಮಿಸಿದ ದೇಗುಲಗಳೇ ಅದರ ಸಾಕ್ಷಿ. ಅಲ್ಲದೇ, ಸರ್ವಧರ್ಮ ಸಮನ್ವಯದ ಚಿತ್ರಣವೂ ಕಂಡುಬಂದಿತು. ಶೈವ, ವೈಷ್ಣವ, ಜೈನ ಎಲ್ಲದರ ದೇಗುಲಗಳ ಚಿತ್ರಣವೂ ಕಂಡುಬಂದಿದೆ.


ಶಾಂತಲೆಯ ಸವತಿಯರ ಕಾಟದ ಚಿತ್ರಣ ಇಲ್ಲಿ ಸೂಕ್ಷ್ಮವಾಗಿ ಉಲ್ಲೇಖವಾಗಿದೆ ಅಷ್ಟೇ.. ಕೆಟ್ಟದರ ಚಿತ್ರಣ ಬೇಡವೆಂಬ ಲೇಖಕರ ಆಶಯವೂ ಇರಬಹುದು. ಶಾಂತಲೆಗೆ ಇರುವ ಬಿರುದು 'ಸವತಿ ಗಂಧವಾರಣೆ'ಯನ್ನೂ ಹೇಗೆ ಬಂದಿತೆಂಬ ರೀತಿಯಲ್ಲಿ ಹೇಳಿದ್ದಾರೆ.  


ಇನ್ನು ಯುದ್ಧತಂತ್ರಗಳಂತೂ ಕಣ್ಣಿಗೆ ಕಟ್ಟಿದಂತಿವೆ. ಶತ್ರುಗಳನ್ನು ಭುಜಬಲಕ್ಕಿಂತಲೂ ಬುದ್ಧಿಬಲದಿಂದ ಸದೆಬಡಿದ ರೀತಿ ಇಲ್ಲಿ ಮಹತ್ವದ್ದು. ಊರಿನ ಕೆರೆಗಳ ನೀರು ಖಾಲಿ ಮಾಡಿ, ಹಳ್ಳಿಗಳನ್ನು ಖಾಲಿ ಮಾಡಿಸಿ ಶತ್ರುಪಾಳಯಕ್ಕೆ ಅನ್ನ - ನೀರು ಸಿಗದಂತೆ ಮಾಡಿದ್ದು, ಶತ್ರು ಪಾಳಯದ ವೀರನನ್ನು ಗೌರವಿಸುವುದು, ಆ ಪಾಳಯದ ರಾಜನ ವೇಷ ಧರಿಸಿದ ಆತ್ಮಾರ್ಪಣೆಯ ತನ್ನ ಪಾಳಯದ ವೀರನನ್ನು ಹೊಡೆದುರುಳಿಸಿ ಶತ್ರು ಪಾಳಯದ ಧೈರ್ಯ ಕುಗ್ಗಿಸುವುದು, ಮುರಿಯಲಾಗದ ಹೆಬ್ಬಾಗಿಲನ್ನು ಬುಡದಿಂದ ನಾಶಗೊಳಿಸುವುದು. ಜೊತೆಗೆ ತನ್ನ ಪಾಲಯದ ಸೈನಿಕರ ಆರೋಗ್ಯ ಹಾಗೂ ಸುರಕ್ಷತೆಯ ಗಮನ ಕೂಡಾ ಪ್ರಶಂಸನೀಯ.


ಶಾಂತಲೆ ದೈವಾಂಶಳೇನೋ ಎಂಬ ಆರಂಭದ ಅನುಮಾನಕ್ಕೆ ಪರಿಹಾರ ಇನ್ನುಳಿದ ಕಥೆಯಲ್ಲಿ ಸಿಕ್ಕಿ ಬಿಡುತ್ತದೆ. ಲಕ್ಷ್ಮಿಗೆ ಸಂತಾನವಾಗುವ ಕನಸು ಕೂಡಾ ಇದರ ಸಣ್ಣ ಉದಾಹರಣೆ ಅಷ್ಟೇ.


ಶಾಂತಲೆ, ಲಕ್ಷ್ಮಿ, ವಿಷ್ಣುವರ್ಧನ ಇವರ ದೇಹಗಳು ಬೇರೆಯಾದರೂ ಆತ್ಮಗಳು ಒಂದೇ.. ಶಾಂತಲೆ ಮರೆಯಾದರೂ ಉಳಿಯುತ್ತಾಳೆ. ಚಂದಲೆಯ ರೂಪದಲ್ಲಿ.. ಅವಳ ಮಗಳು 'ಚಿಕ್ಕ ಶಾಂತಲೆ'ಯಾಗಿ, ಪ್ರತಿಯೊಬ್ಬರ ಅಂತಃಕರಣ, ಆತ್ಮ, ನೆನಪಿನಲ್ಲಿ. ಶಾಂತಲೆ ಆವರಿಸುತ್ತಾಳೆ. ದುಃಖದ ಮಡುವೇ ಇದ್ದರೂ.. ಸುಖಾಂತ್ಯದ ಕಥೆಯೆಂದೇ ಎನ್ನಿಸಿದರೂ ಶಾಂತಲೆಯ ಗುಂಗು ಕಾಡುತ್ತಲೇ ಇರುತ್ತದೆ. 


ಮರು ಓದಿನಲ್ಲಿ ದಕ್ಕಿಸಿಕೊಂಡ ಭಾವ ನಿಜಕ್ಕೂ ಅನೂಹ್ಯ. ಲೆಕ್ಕವಿಲ್ಲದಷ್ಟು ಬಾರಿ ಬೇಲೂರು, ಹಳೇಬೀಡಿಗೆ ಭೇಟಿ ನೀಡಿದ್ದರೂ ಮತ್ತೊಮ್ಮೆ ಈ ಗುಂಗಿನಲ್ಲಿಯೇ ಹೋಗಬೇಕೆನಿಸುತ್ತಿದೆ. ಈಗ ಆ ಕಾಲದ ವೈಭವದಂತೆ ಉಳಿದಿಲ್ಲದಿದ್ದರೂ.. ಇದರ ಕಲ್ಪನೆಯಲ್ಲಿ ಆ ದಿನಗಳು ಮರುಸೃಷ್ಟಿಯಾಗಬಹುದೋ ಏನೋ..


ಹೇಳಬೇಕಿರುವುದು ಬಹಳಷ್ಟಿದ್ದರೂ.. ಸದ್ಯಕ್ಕೆ, ಹೇಳಲಿಕ್ಕಾಗುತ್ತಿರುವುದು ಇಷ್ಟೇ.. ಶಾಂತಲೆ ಆವರಿಸಿಕೊಂಡಿದ್ದಾಳೆ ಅಷ್ಟೇ..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ