ಸೋಮವಾರ, ಏಪ್ರಿಲ್ 13, 2026

ಒಲಿದು ಬಂದ ಸಿರಿ (ಪುಸ್ತಕ ಯಾನ - 151)


ಪುಸ್ತಕದ ಶೀರ್ಷಿಕೆ : ಒಲಿದು ಬಂದ ಸಿರಿ 

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1999

ಎರಡನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)


ರಾಮಾಚಾರ್ಯರ ತಂದೆ-ತಾತನ ಕಾಲದಿಂದಲೂ ದೇವಸ್ಥಾನದ ಅರ್ಚಕ ವೃತ್ತಿ ಹಾಗೂ ಪೌರೋಹಿತ್ಯ ಮಾಡುತ್ತಿದ್ದರು. ಅವರ ಪತ್ನಿ ಸಾವಿತ್ರಮ್ಮ. ಮಗ ಶ್ರೀಧರ. ಬಿ.ಎ, ಬಿ.ಎಡ್ ಮಾಡಿದ್ದರೂ ಉದ್ಯೋಗ ಸಿಕ್ಕಿರಲಿಲ್ಲ. ಆದರೆ, ಉದ್ಯೋಗ ಸಿಗದಿದ್ದು ಆತನಿಗೆ ಕೊರತೆಯೂ ಆಗಿರಲಿಲ್ಲ. ದೇವಸ್ಥಾನದ ಪೂಜೆಯಲ್ಲಿ ಬಹಳ ಆಸಕ್ತಿ ಇದ್ದು ತನ್ನ ತಂದೆಗೆ ಬಲಗೈಯಂತೆ ಕೆಲಸ ಮಾಡುತ್ತಿದ್ದ. ಆತನಿಗೆ ತೋಟಗಾರಿಕೆಯಲ್ಲಿಯೂ ಆಸಕ್ತಿ ಹೆಚ್ಚು. ಹುರುಳಿಕಾಯಿ, ಬದನೆಕಾಯಿ, ಸೌತೆಕಾಯಿ, ಹೀರೆಕಾಯಿ, ಬೆಂಡೆಕಾಯಿ, ದಂಟಿನ ಸೊಪ್ಪು ಎಲ್ಲವನ್ನು ತಾನೇ ಬೆಳೆಯುತ್ತಿದ್ದ. ಅಷ್ಟೇ ಅಲ್ಲದೆ ಅಡುಗೆ ವಿಷಯದಲ್ಲಿಯೂ ತಾಯಿಗೆ ಬಲಗೈಯಾಗಿ ನಿಂತು ಸಹಾಯ ಮಾಡುತ್ತಿದ್ದ. 


ಸಾವಿತ್ರಮ್ಮ ಭಕ್ತರು ದೇವರಿಗೆ ನೈವೇದ್ಯ ಮಾಡಿಸಿದಾಗ ಹೋಳಿಗೆ ಪಾಯಸದಡಿಗೆ ಮಾಡುತ್ತಿದ್ದರು. ಶ್ರೀಧರನೂ ಸಹಾಯ ಮಾಡುತ್ತಿದ್ದ. ಸಾವಿತ್ರಮ್ಮ ಹಾಗೂ ಆಚಾರ್ಯರಿಗೆ ಆತ ಒಬ್ಬನೇ ಮಗ. ಮದುವೆಯಾಗಿ ಆರು ವರ್ಷದ ನಂತರ ಹುಟ್ಟಿದವನು. ಆತ ಶಾಲೆಯ ಪಾಠಗಳಲ್ಲಿಯೂ ಹಿಂದೆ ಬೀಳದೆ ಬುದ್ಧಿವಂತನಾಗಿದ್ದ. ದೇವರ ಅಭಿಷೇಕ ಸಮಯದಲ್ಲಿಯೂ ಶ್ರೀ ಸೂಕ್ತ, ಶ್ರೀ ಪುರುಷ ಸೂಕ್ತ, ಶ್ರೀ ನಾರಾಯಣ ಸೂಕ್ತ, ಶ್ರೀ ಭೂಸೂಕ್ತ, ಶ್ರೀ ನೀಲಾಸೂಕ್ತ, ಮಂತ್ರ ಪುಷ್ಪ ಶ್ರೀ ಮನುಳಾಸೂಕ್ತ ಎಲ್ಲವನ್ನು ಘಂಟಾಘೋಷವಾಗಿ ಹೇಳುತ್ತಿದ್ದ. ದೇವರಿಗೆ ತುಳಸಿ ಅರ್ಚನೆ, ಕುಂಕುಮಾರ್ಚನೆ, ಪುಷ್ಪಾರ್ಚನೆ ಮಾಡುತ್ತಾ ಸಹಸ್ರನಾಮ ಹೇಳಿ ಸಾಂಗವಾಗಿ ಪೂಜೆ ನಡೆಸಿಕೊಡುತ್ತಿದ್ದ.


ಸಾವಿತ್ರಮ್ಮನಿಗೆ ಮಗನಿಗೆ ಮದುವೆ ಮಾಡುವ ಮನಸ್ಸಿತ್ತು. ಹಾಗಾಗಿ ಒಬ್ಬನೇ ಮಗನನ್ನು ವಿವಾಹವಾಗುವ ಹುಡುಗಿಗೆ ಎಂದು ರೇಷ್ಮೆ ಸೀರೆ ಹಾಗೂ ಚಿನ್ನವನ್ನು ತೆಗೆದಿಟ್ಟಿದ್ದರು. ಆದರೆ, ಶ್ರೀಧರ ಉದ್ಯೋಗದಲ್ಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಬರುತ್ತಿದ್ದ ಸಾಧಾರಣ ಹೆಣ್ಣುಗಳನ್ನು ಅವರು ಒಪ್ಪಿರಲಿಲ್ಲ. ಮನ್ಮಥನ ಹಾಗಿರುವ ಮಗನಿಗೆ ಇಂತಹಾ ಹುಡುಗಿಯೇ ಎಂಬ ಚಿಂತೆ ಅವರ ಮನಸ್ಸಿನ ಕೊರೆಯುತ್ತಿತ್ತು. ಅದೇ ಸಂದರ್ಭದಲ್ಲಿ ಒಂದು ಖಾಸಗಿ ಗ್ರಂಥಾಲಯದಿಂದ ಆಗಾಗ ಕಾದಂಬರಿ ತಂದು ಓದುವ ಪರಿಪಾಠವಿಟ್ಟುಕೊಂಡಿದ್ದ ಶ್ರೀಧರನಿಗೆ ಅಲ್ಲಿ ಲೈಬ್ರರಿಯನ್ ಆಗಿದ್ದ ಪದ್ಮಿನಿಯ ಮೇಲೆ ಪ್ರೀತಿಯಾಗಿತ್ತು.


ಪದ್ಮಿನಿ ತನ್ನ ಅಕ್ಕ ವರಲಕ್ಷ್ಮಿಯ ಮನೆಯಲ್ಲಿದ್ದಳು. ಅಕ್ಕನದ್ದು ಸಾಧಾರಣ ದರ್ಜೆಯ ಸಂಸಾರ. ಗಂಡ-ಹೆಂಡತಿ, ಮೂರು ಮಕ್ಕಳು. ಪದ್ಮಿನಿಗೆ ಒಬ್ಬ ಅಣ್ಣ ಹಾಗೂ ಒಬ್ಬರು ಅಕ್ಕ. ಈ ಇಬ್ಬರಿಗೂ ಮದುವೆಯಾಗಿತ್ತು. ಅವಳ ಅಣ್ಣ ಗೋವಿಂದನಿಗೆ 25ನೇ ವಯಸ್ಸಿರುವಾಗಲೇ ತಂದೆ ತೀರಿಕೊಂಡಿದ್ದರು. ಆತನಿಗಿಂತಲೂ 10 ವರ್ಷ ಚಿಕ್ಕವಳು ಪದ್ಮಿನಿ. ಅತ್ತೆ-ಸೊಸೆ, ಅತ್ತಿಗೆ-ನಾದಿನಿಯರ ಘರ್ಷಣೆಯ ನಡುವೆ ಪದ್ಮಿನಿಗೆ ಅಲ್ಲಿನ ಜೀವನ ದುಸ್ತರವಾಗಿತ್ತು. ಕೆಲಸ ಸಿಕ್ಕರೆ ಹೇಗಾದರೂ ಬದುಕಬಹುದೆಂಬ ಆಸೆಯಿಂದ ಅಕ್ಕ ಒಪ್ಪುತಾಳೆ ಎಂಬ ಭರವಸೆಯೂ ಇಲ್ಲದೆ ಒಂದು ಕಾಗದ ಬರೆದಿದ್ದಳು. ಆದರೆ, ವರಲಕ್ಷ್ಮಿ ಆಕೆಯನ್ನು ಕರೆಸಿಕೊಂಡು ಬಂದು ತನ್ನ ಮನೆಯಲ್ಲಿ ಆಶ್ರಯ ಕೊಟ್ಟಳು. ಅಷ್ಟೇ ಅಲ್ಲದೆ.. ಬಾವ ಕೊಡಿಸಿದ ಉದ್ಯೋಗದಿಂದ ಮಹಿಳಾ ಸಮಾಜದ ನರ್ಸರಿ ಶಾಲೆಯ ಅಧ್ಯಾಪಕಿಯೂ ಆಗಿದ್ದಳು. ತನ್ನ ಸ್ವಂತ ಖರ್ಚಿಗೆ ಕೊಂಚ ಹಣ ಇಟ್ಟುಕೊಂಡು ವಿವಾಹ, ಮನೆ ನಡೆಸಲು ಎಂದು ಅಕ್ಕನಿಗೆ ಉಳಿದ ಹಣವನ್ನೆಲ್ಲಾ ಕೊಟ್ಟುಬಿಡುತ್ತಿದ್ದಳು. ತೀರಾ ಬಡತನದ ಕುಟುಂಬವಲ್ಲವಾದರೂ.. ಅತ್ತಿಗೆಯ ಕೈಹಿಡಿತ, ಜಗಳಗಳ ರಗಳೆಗಳಿರಲಿಲ್ಲ. 


ಅದೇ ಬೀದಿಯಲ್ಲಿದ್ದ ರಾಜಮ್ಮನ ಮಗನಿಗೆ ಆಕೆಯನ್ನು ವಿವಾಹ ಮಾಡಿಕೊಡಬೇಕೆಂದು ಅಂದುಕೊಂಡಿದ್ದಳು ವರಲಕ್ಷ್ಮಿ. ರಾಜಮ್ಮನ ಪತಿ ಬ್ಯಾಂಕ್ ಮ್ಯಾನೇಜರ್ ಆಗಿ ರಿಟೈರ್ಡ್ ಆಗಿದ್ದವರು. ಯಾವುದೇ ವಿವಾಹದ ಖರ್ಚಿಲ್ಲದೆ ತಂಗಿಯನ್ನು ಸಾಗ ಹಾಕಬೇಕೆಂದುಕೊಂಡಿದ್ದಳು. ಆದರೆ, ಅದು ಸಾಧ್ಯವಾಗಲಿಲ್ಲ. ಆ ವಿಚಾರವನ್ನು ತಂಗಿಗೆ ತಿಳಿಸದೆ ಆಕೆಯ ಮನಸ್ಸಿನಲ್ಲಿ ಆಸೆ ಹುಟ್ಟಿಸಿ ಹಾಗೆ ಇನ್ನಷ್ಟು ದಿನ ದೂಡಬೇಕೆಂದುಕೊಂಡಿದ್ದಾಗ.. ಪದ್ಮಿನಿಗೆ ಶ್ರೀಧರನ ಕಡೆಯಿಂದ ವಿವಾಹದ ಕೋರಿಕೆಯಿಟ್ಟ ಪ್ರೀತಿಯ ಪತ್ರ ಬಂದಿತ್ತು. ಅಕ್ಕನಿಗೆ ಈ ಕುರಿತು ಹೇಳಿದಾಗ ಆಕೆ ಒಂದು ರೀತಿಯ ನಿರ್ಲಕ್ಷದಿಂದಲೇ ನಿರಾಕರಿಸಿದ್ದಳು. 


ಅಕ್ಕ ಬಾವ ಮಾತನಾಡುತ್ತಿದ್ದ ವಿಚಾರವೊಂದು ಪದ್ಮಿನಿಯ ಕಿವಿ ಸೇರಿತ್ತು. ಪದ್ಮಿನಿಯ ತಾಯಿ ಗಿರಿಜಮ್ಮನ ಚಿಕ್ಕಮ್ಮನ ಮಗಳು ಅಂದರೆ ತಂಗಿಯಾದ ಲಲಿತಮ್ಮ ಆಕೆಯ ಮನೆಗೆ ಬಂದು ಪದ್ಮಿನಿಯ ಮದುವೆಯ ಕುರಿತಾಗಿ ವಿಚಾರಿಸಿದ್ದು ತಿಳಿದುಕೊಂಡ ಪದ್ಮಿನಿಗೆ ಅಕ್ಕನ ದುರಾಲೋಚನೆಯ ಕುರಿತೂ ತಿಳಿಯಿತು. ಲಲಿತಮ್ಮನನ್ನು ಹುಡುಕಿಕೊಂಡು ಹೋಗಿ ಸಂಪರ್ಕಿಸಿ, ಶ್ರೀಧರನ ಕುರಿತು ಹೇಳಿದಾಗ ಅವರೇ ಮುಂದಾಗಿ ಹೋಗಿ ಆ ವಿವಾಹದ ಕುರಿತು ಮಾತನಾಡಿದ್ದರು. ಒಂದು ತಿಂಗಳೊಳಗಾಗಿ ಲಲಿತಮ್ಮನ ಮುಂದಾಳತ್ವದಲ್ಲಿ ವರಲಕ್ಷ್ಮಿಯ ನಿರ್ಲಕ್ಷದಲ್ಲಿ ಪದ್ಮಿನಿಯ ವಿವಾಹ ಶ್ರೀಧರನೊಂದಿಗೆ ನಡೆದೇ ಹೋಗಿತ್ತು. 


ಲಲಿತಮ್ಮನ ಇಬ್ಬರು ಹೆಣ್ಣುಮಕ್ಕಳು ವಿವಾಹವಾಗಿ ಪಟ್ಟಣ ಸೇರಿದ್ದರು. ಆ ಇಬ್ಬರದು ಪ್ರೇಮ ವಿವಾಹವೇ. ಮಗ ಗುಂಡಣ್ಣನಿಗೆ ಅಷ್ಟು ತಿಳುವಳಿಕೆ ಇರಲಿಲ್ಲ. ಪದ್ಮಿನಿಯ ವಿವಾಹದ ನಂತರ ಸಾವಿತ್ರಮ್ಮನ ಅಡುಗೆ ಕೆಲಸಕ್ಕೆ ಲಲಿತಮ್ಮ ಸಹಾಯ ಮಾಡುತ್ತಿದ್ದರು. ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಲಲಿತಮ್ಮನದ್ದು ನಿಸ್ವಾರ್ಥವಾದ ಸ್ವಭಾವವೇನೂ ಆಗಿರಲಿಲ್ಲ. ಬದಲಾಗಿ ಅತಿಯಾಸೆ. ಸಹಾಯ ಮಾಡಿದಷ್ಟೇ ಕಟ್ಟಿಕೊಂಡು ಹೋಗುತ್ತಿದ್ದರು. ಇದು ಸಾವಿತ್ರಮ್ಮ ಹಾಗೂ ಪದ್ಮಿನಿಗೆ ತಿಳಿಯದ ವಿಚಾರವಲ್ಲ. ಪದ್ಮಿನಿ ಸಾವಿತ್ರಮ್ಮನವರಿಗೆ ಈ ಕುರಿತು ಹೇಳಿದಾಗ ಅವರು ಇದನ್ನು ಒಂದು ಕೊರತೆ ಎಂದೇ ಭಾವಿಸಿರಲಿಲ್ಲ. ಸೊಸೆಯನ್ನೂ ಮಗಳಂತೆ ಎಲ್ಲ ರೀತಿಯಲ್ಲೂ ಆದರಿಸುತ್ತಿದ್ದರು. 


ಪದ್ಮಿನಿ ಗರ್ಭಿಣಿಯಾಗಿ ಮುದ್ದಾದ ಮಗನಿಗೆ ಜನ್ಮ ಕೊಟ್ಟಳು. ಮಗು ಕೊಂಚ ದೊಡ್ಡದಾದ ನಂತರ ಸಾವಿತ್ರಮ್ಮನವರು, ತಾವು ಮಗುವನ್ನು ನೋಡಿಕೊಳ್ಳುವುದಾಗಿಯೂ.. ಅವರಿಗೆ ಆಯಾಸವಾಗುತ್ತಿರುವುದರಿಂದ ಅಡುಗೆ ಕೆಲಸವನ್ನು ಆಕೆ ನಿರ್ವಹಿಸುವಂತೆ ಕೇಳಿಕೊಂಡರು. ಆಕೆ ಹಾಗೆ ಮಾಡುತ್ತಿದ್ದಳು ಸಹಾ. 


ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಷ್ಟರಲ್ಲಿಯೇ ಲಲಿತಮ್ಮನ ದುರ್ಬೋಧನೆಯಿಂದ ಪದ್ಮಿನಿ ಪಟ್ಟಣ ಸೇರಲು ಆಸೆಪಟ್ಟಳು. ಅಡುಗೆ ಕೆಲಸವನ್ನು ತನಗಂಟಿಸಿದ ಅತ್ತೆಯ ಮೇಲೆಯೂ ಕೋಪ ಬಂದಿತ್ತು. ತಾನು ಮೊದಲಿದ್ದ ಪರಿಸ್ಥಿತಿಯನ್ನು ಮರೆತೇ ಬಿಟ್ಟಿದ್ದ ಪದ್ಮಿನಿಗೆ ಈಗ ಲಲಿತಮ್ಮನವರ ಹೆಣ್ಣು ಮಕ್ಕಳಂತೆ ಪಟ್ಟಣ ಸೇರುವ ಆಸೆ ಬಂದಿತ್ತು. ಲಲಿತಮ್ಮನವರ ಮಕ್ಕಳ ಐಷಾರಾಮ ಹಾಗೂ ಶ್ರೀಮಂತಿಕೆಯ ಜೀವನಕ್ಕೆ ಮರುಳಾದ ಅವಳು ಲಲಿತಮ್ಮನವರ ಅಳಿಯನ ತಂದೆಯ ಶಾಲೆಯಲ್ಲಿಯೇ ಕೆಲಸಕ್ಕೆ ಸೇರಿದಳು. ವಶೀಲಿ ಹಾಗೂ ಗಂಡನಿಗೆ ಗೊತ್ತಾಗದಂತೆ ಪದ್ಮಿನಿ ಕೊಟ್ಟ ಹಣದಿಂದ ಅಲ್ಲಿ ಕೆಲಸವೂ ಸಿಕ್ಕಿತ್ತು. ಶ್ರೀಧರ ಹಾಗೂ ಪದ್ಮಿನಿ ಪಟ್ಟಣ ಸೇರಿದ್ದರು. ಲಲಿತಮ್ಮನವರು ಎರಡೂ ಕಡೆಯಲ್ಲಿಯೂ ಅವರಿಗೆ ಬೇಕಾದಂತೆ ಮಾತನಾಡುತ್ತಾ ಇತ್ತ ಪದ್ಮಿನಿಗೂ.. ಆತ ಸಾವಿತ್ರಮ್ಮನವರಿಗೂ ಒಳ್ಳೆಯವರಂತೆ ಕಾಣುತ್ತಿದ್ದರು.


ಆದರೆ ಪಟ್ಟಣದ ಜೀವನ ಅಂದುಕೊಂಡಂತೆ ಇರಲಿಲ್ಲ. ಪದ್ಮನಿಗೆ ದಿನೇದಿನೇ ಅದರ ಅರಿವು ಮೂಡುತ್ತಾ ಹೋಗುತ್ತಿತ್ತು. ಶ್ರೀಧರನಿಗೂ ಇತ್ತ ಪತ್ನಿಯನ್ನು ಬಿಡಲಾಗದೆ, ಅತ್ತ ತಂದೆ-ತಾಯಿಗೂ ಇಳಿವಯಸ್ಸಿನಲ್ಲಿ ಕಷ್ಟ ಕೊಟ್ಟ ಇಕ್ಕಟ್ಟಿನ ಭಾವದಲ್ಲಿ ಸಿಲುಕಿ ಒದ್ದಾಡುತ್ತಿದ್ದ. ಪದ್ಮಿನಿ ಇದರಿಂದ ಬುದ್ಧಿ ಕಲಿತಳೇ..?? ಶ್ರೀಧರ ಪದ್ಮಿನಿಯ ಬದುಕಿನಲ್ಲಿ ಬದಲಾವಣೆ ಉಂಟಾಯಿತು..??


'ಒಲಿದು ಬಂದ ಸಿರಿ ತೊರೆಯ ಹೋಗಬಾರದು. ಕಂಡ ವಸ್ತುವನುಳಿದು ಕಾಣದ ಬಯಸುವರೇ, ಕೆಂಡವನು ಕರ್ಪೂರ ಬಯಸುವಂತೇ' ಎಂಬ ಕವಿವಾಣಿಯ ಉಲ್ಲೇಖವಿರುವ ಈ ಕಾದಂಬರಿಯನ್ನು ಓದಿ ಸವಿಯಬೇಕು.


ಶ್ರೀಧರ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುವ ಮಗನಾಗಿ, ಇಂದಿನ ಯುವ ಪೀಳಿಗೆಯನ್ನು ಸಮರ್ಥವಾಗಿ ಪ್ರತಿನಿಧಿಸಿದರೆ.. ಪದ್ಮಿನಿ ಮಗಳಂತೆ ಮಮತೆಯಿಂದ ಕಾಣುವ ಅತ್ತೆಯನ್ನು ದೂರಸರಿಸಿ ಹಣ, ತನ್ನ ಗಂಡ-ಮಗು ಎಂಬ ಸ್ವಾರ್ಥಕ್ಕೆ ಬಲಿಯಾಗಿ ಲಲಿತಮ್ಮನಂತಹವರ ಕುತಂತ್ರದಿಂದ ಅತಂತ್ರತೆಗೆ ಸಿಗುವ ಹೆಣ್ಣುಮಗಳಾಗಿ ಕಾಡುತ್ತಾಳೆ. 


ವಿವಾಹಿತ ಉದ್ಯೋಗಸ್ಥ ತರುಣಿಯರು, ನಗರ ಜೀವನದ ಜಂಜಾಟ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದುಕೊಂಡು ನಂಬಿ ಹೋಗುವವರು ಕಲಿಯಬೇಕಾದ ಪಾಠ ಈ ಕಾದಂಬರಿಯಲ್ಲಿದೆ. ಚಿಕ್ಕ ಚೊಕ್ಕ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ