ಅವಳ ನಂಬಿಕೆ ಶುರುವಾಗಿದ್ದು
ಅಪ್ಪನ ಬೆರಳ ಹಿಡಿತದಿಂದ
ಆ ಬೆರಳು ಹಿಡಿದೇ ಜಗತ್ತಿಗೆ
ಮೊದಲ ಬಾರಿ ಪಾದ ಊರಿದ್ದು..
ಅವನ ಹೆಗಲು ಮೇಲೆ ಹತ್ತಿಯೇ
ಜಗತ್ತನ್ನು ಬೆರಗಿನಿಂದ ನೋಡಿದ್ದು..
ಅವನ ನಂಬಿಕೆಯೇ ಅವಳನ್ನು
ಇಲ್ಲಿಯವರೆಗೂ ಕರೆತಂದದ್ದು..
ಅವಳಿಗೆ ಅರಿವೇ ಆಗಿರಲಿಲ್ಲ
ಅಪ್ಪ ಯಾವ ಮಾಯದಲ್ಲಿಯೋ
ತನ್ನ ಬೆರಳು ಬಿಟ್ಟದ್ದು
ಪಾಣಿಗ್ರಹಣ ಮಾಡಿಸಿದ್ದು..
ಈಗ ಅಪ್ಪನ ಹೆಗಲ ಬದಲಿಗೆ
ತನ್ನ ಕಾಲ ಮೇಲೆಯೇ ನಿಂತದ್ದು
ಯಾವುದೋ ತಿರುವಿನಲ್ಲಿ
ಇಬ್ಬರ ದಾರಿ ಬೇರೆಯಾಗಿದ್ದು..
ಆದರೂ ನಂಬಿಕೆ ಕಡಿಮೆಯಾಗಿಲ್ಲ
ಅಪ್ಪ ಅಲ್ಲೆಲ್ಲೋ ನೋಡುತ್ತಿರಬಹುದು
ಬಿದ್ದರೆ ಸಂತೈಸಬಹುದು
ಕಷ್ಟದಲ್ಲಿ ಕೈ ಹಿಡಿಯಬಹುದು
ಅದೇ ನಂಬಿಕೆಯಲ್ಲಿಯೇ ನಡೆಯುತ್ತಿದ್ದಾಳೆ
ಮತ್ತೆ ದಾರಿಯೆಲ್ಲೋ ಒಂದಾಗಬಹುದು
ಅರೆ..! ಅವಳ ನಂಬಿಕೆ ಹುಸಿಯಾಗಿಲ್ಲ
ಮುಂದೆ ಅಪ್ಪ ಅವಳಿಗಾಗಿಯೇ ಕಾಯುತ್ತಿದ್ದಾರೆ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ