ಪುಸ್ತಕದ ಶೀರ್ಷಿಕೆ : ಒಂದು ಮಗುವಿನ ಪ್ರಕರಣ
ಲೇಖಕರು : ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ
ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್
ಪ್ರಥಮ ಮುದ್ರಣ : 2007
ಪುಟಗಳು : 90
ಬೆಲೆ : 40 ರೂ.
ಕಾದಂಬರಿಗಾರ್ತಿ ಹಾಗೂ ಪತ್ರಕರ್ತೆ ಭಾಗ್ಯ ಕೃಷ್ಣಮೂರ್ತಿ ಅವರು 1964 ಮೇ 20 ಮೈಸೂರಿನಲ್ಲಿ ಜನಿಸಿದರು. ನಿರ್ಮಾಲ್ಯ, ಗ್ರೀಷ್ಠರಾಗ, ಶಿಶಿರದ ಹೂವು, ಕಡಲು, ದಹನ, ಮಾಂಡವಿ, ಅಭಿನೇತ್ರಿಯ ಅಂತರಂಗ, ಇರುವುದೆಲ್ಲವ ಬಿಟ್ಟು, ಮನಸುಗಳ ಮೃದಂಗ, ಒಂದು ಮಗುವಿನ ಪ್ರಕರಣ, ಶಾನುಭೋಗರ ಮಗಳು ಇತ್ಯಾದಿ 23 ಕಾದಂಬರಿಗಳನ್ನು ರಚಿಸಿದ್ದಾರೆ. ’ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ’ಗಳು ಲಭಿಸಿವೆ.
ಇದು ನಾನು ಓದಿದ ಭಾಗ್ಯ ಕೃಷ್ಣಮೂರ್ತಿಯವರ ರಚನೆಯ ಮೊದಲ ಪುಸ್ತಕ. ಈ ಕಿರು ಕಾದಂಬರಿ 1989ರಲ್ಲಿ ವಾರಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದಾಗಲೇ ಚಲನಚಿತ್ರವಾಗಿತ್ತು. ಲೇಖಕಿ ಈ ಘಟನೆಯ ಕುರಿತು ಹೇಳುವಾಗ ಹೇಳುತ್ತಾರೆ. ಈ ಕಾದಂಬರಿಯನ್ನು ಚಲನಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಒಂದು ಮಾತೂ ಹೇಳದೇ 'ಅನಂತನ ಪ್ರೇಮ' ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿಸಿದ್ದರು.
ಓದುಗರು ಹೇಳಿಯೇ ಈ ಕುರಿತು ತಿಳಿಯಿತು ಎನ್ನುತ್ತಾರೆ ಲೇಖಕಿ. ಅದಕ್ಕೆ ಕೊಂಚ ಮುನ್ನ ತರಂಗದಲ್ಲಿ ಪ್ರಕಟವಾಗಿದ್ದ 'ಮಾಂಡವಿ' ಕೂಡಾ 'ಕೌಂತೇಯ' ಎಂದು ಹೆಸರು ಬದಲಾಯಿಸಿಕೊಂಡು ಕಿರುತೆರೆಗೆ ಬಂದಿತ್ತು. ನಟ ಅಶೋಕ್ ಲೇಖಕಿಗೆ ಅನ್ಯಾಯವಾಗಲು ಬಿಡದೆ ಕ್ಷಮೆ ಯಾಚಿಸಿ ಹೆಚ್ಚು ಎನ್ನಿಸಬಹುದಾದ ಹಣ ನೀಡಿದ್ದರು ಎನ್ನುತ್ತಾರೆ. ಅದರ ನಂತರ 'ಒಂದು ಮಗುವಿನ ಪ್ರಕರಣ' ಕೂಡಾ ಸಾಕಷ್ಟು ಗಲಾಟೆ ಎಬ್ಬಿಸಿತು. ಕರ್ನಾಟಕ ಫಿಲಂ ಛೇಂಬರ್ ನಲ್ಲಿ ಆಗ ಅಧಿಕಾರಿಯಾಗಿದ್ದ 'ಕರೀಂಖಾನ್' ಸಾಹೇಬರು ಈ ಚಿತ್ರದ ಸಬ್ಸಿಡಿಯನ್ನೇ ತಡೆದು "ಮೊದಲು ಲೇಖಕಿಗೆ ಹಣ ಸಂದಾಯ ಮಾಡಿ ಕ್ಷಮೆ ಕೇಳಿ" ಎಂದು ದೂರು ದಾಖಲಿಸಿದಾಗ ನಿರ್ದೇಶಕ ಹುಡುಕಿಬಂದು ಒಂದಕ್ಕೆ ಎರಡರಷ್ಟು ಹಣ ನೀಡಿ ಕ್ಷಮೆ ಕೇಳುತ್ತಾರೆ. ಈ ಅವಾಂತರಗಳ ನಂತರ ಧಾರಾವಾಹಿಯನ್ನು ಪುಸ್ತಕ ರೂಪಕ್ಕೆ ತರುವ ಆಸಕ್ತಿ ಇಲ್ಲದಿದ್ದಾಗ ಪ್ರೊ. ಚಂಪಾರವರ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಈ ಕಾದಂಬರಿ ಪ್ರಕಟಣೆಯಾಯಿತೆಂದು ಲೇಖಕಿ ನೆನಪಿಸಿಕೊಳ್ಳುತ್ತಾರೆ.
ಈ ಕಿರು ಕಾದಂಬರಿ ಓದಲು ಶುರು ಮಾಡುವ ಮುನ್ನ ಚಲನಚಿತ್ರವಾದ ಈ ಕಿರು ಕಾದಂಬರಿಯ ಕತೆಯ ಹಾಗೂ ಕತೆಯ ಹರವಿನ ಕುರಿತು ಒಂದು ವಿಧವಾದ ಕುತೂಹಲವಿತ್ತು. ಈ ಕಿರು ಕಾದಂಬರಿಯನ್ನು ಓದಿ ಮುಗಿಸಿದ ನಂತರ ಅನ್ನಿಸಿದ್ದು.. ನಿಜಕ್ಕೂ ಈ ಕತಾ ಹಂದರ ಪ್ರತಿ ಹಂತದಲ್ಲಿಯೂ ಕುತೂಹಲ ಮೂಡಿಸುತ್ತಾ.. ಬಿಗಿ ನಿರೂಪಣೆಯಿಂದ ಕೊನೆಯ ಕ್ಷಣದವರೆಗೂ ಮುಂದೇನಾಗಬಹುದು ಎಂದು ಕುತೂಹಲವನ್ನು ಉಳಿಸಿಕೊಂಡೇ ಹೋಗುತ್ತದೆ. ಸಿನಿಮಾಗೆ ಎಂದು ಬರೆದಿರದ ಕತೆಯಾದರೂ ಸಿನಿಮಾಗೆ ಹೊಂದಿಕೆಯಾಗುವ ಹಲವು ಅಂಶಗಳಿವೆ.
ರಾಯರು ತಮ್ಮ ಮಗಳು ಪುಷ್ಪ ಸುದ್ದಿಯೇ ಬರಲಿಲ್ಲವೆಂದು ಆತಂಕದಲ್ಲಿದ್ದಾಗಲೇ ಮದುವೆಯಾಗಿ ಐದಾರು ವರ್ಷದ ನಂತರ ಗಂಡು ಮಗುವಾದ ಸುದ್ದಿ ಅಂಚೆ ಮೂಲಕ ತಲುಪಿತು. ತಮ್ಮ ಹೆಂಡತಿ ಇದ್ದಿದ್ದರೆ ಮಗಳ ಚೊಚ್ಚಲ ಹೆರಿಗೆಗೆ ಇಲ್ಲೇ ವ್ಯವಸ್ಥೆ ಮಾಡಬಹುದಾಗಿತ್ತು ಎಂಬ ಅರ್ಧ ಕೊರಗು, ಅರ್ಧ ಸಂಭ್ರಮದಲ್ಲಿ ಮಗಳ ಮನೆಗೆ ಹೊರಟು ನಿಂತರು.
ಬೀಗರಾದ ಶ್ರೀಕಂಠಯ್ಯ ಹಾಗೂ ಲಲಿತಮ್ಮನವರು ರಾಯರನ್ನು ಸಂಭ್ರಮದಿಂದಲೇ ಸ್ವಾಗತಿಸಿದರು. ಮೊಮ್ಮಗುವನ್ನು ನೋಡಿಕೊಂಡು ಹೊರಟ ನಂತರ ಶಾಸ್ತ್ರಿಗಳು ಬಂದಾಗ ಶ್ರೀಕಂಠಯ್ಯ ಹಾಗೂ ಮನೆಯವರಿಗೆ ಒಂದು ಆಘಾತ ಕಾದಿತ್ತು. ಅದೇನೆಂದರೆ, ಮಗು ಮೂಲಾ ನಕ್ಷತ್ರದಲ್ಲಿ ಜನಿಸಿತ್ತು. ಶಾಸ್ತ್ರಿಗಳು ಅದಕ್ಕೆ ಶಾಂತಿ ಮಾಡಿದರೆ ಸಾಕು ಎಂದಿದ್ದರೂ ರಂಗಮ್ಮನ ತಲೆಗೆ ಕೆಟ್ಟ ಯೋಚನೆಗಳ ಭೂತ ಹೊಕ್ಕಿತ್ತು. ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದ ಮಗುವಿನ ತಂದೆಯ ಪ್ರಾಣಕ್ಕೆ ಸಂಚಕಾರ ಎಂಬ ನಂಬಿಕೆಯಿತ್ತು.
ರಂಗಮ್ಮ ಪ್ರೇಮ್ ನನ್ನು ಚಿಕ್ಕಂದಿನಿಂದ ತನ್ನ ಸ್ವಂತ ಮಗನಂತೆಯೇ ಸಾಕಿದ್ದಳು. ಶ್ರೀಕಂಠಯ್ಯ ಹಾಗೂ ಲಲಿತಮ್ಮ ಕೂಡಾ ಇದಕ್ಕೆ ಎಂದಿಗೂ ಅಡ್ಡಿ ಮಾಡಿದ್ದವರಲ್ಲ. ಪ್ರೇಮ್ ಕೂಡಾ ಅಷ್ಟೇ ಪ್ರೀತಿ ತೋರುತ್ತಿದ್ದನು. ಅವನನ್ನು ಮದುವೆಯಾಗಿ ಬಂದ ಪುಷ್ಪ ಕೂಡಾ ಅದೇ ಭಾವನೆಯಲ್ಲಿಯೇ ಪ್ರೇಮ್ ನನ್ನು ನೋಡುತ್ತಿದ್ದಳು. ಅಷ್ಟು ಪ್ರೀತಿಸುತ್ತಿದ್ದ ಪ್ರೇಮ್ ಗೆ ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗುವಿನಿಂದ ತೊಂದರೆಯಾಗಬಹುದೆಂಬ ದೂರಾಲೋಚನೆ ಆಕೆಯನ್ನು ಮಗುವನ್ನು ಆ ಮನೆಯಿಂದ ದೂರ ಮಾಡುವ ಕಾರ್ಯವನ್ನು ಕೈಗೊಳ್ಳುವಂತೆ ಮಾಡಿತ್ತು.
ಮನೆಯವರೆಲ್ಲರೂ ಮಲಗಿದ್ದಾಗ ಯಾರಿಗೂ ತಿಳಿಯದಂತೆ ಮಗುವನ್ನು ಒಂದು ಬಸ್ಸಿನಲ್ಲಿ ಬಿಟ್ಟು ಬಂದಳು. ಅದೇ ಬಸ್ಸಿಗೆ ಹತ್ತಿದ ತರುಣಿ ಸ್ವಪ್ನಾ ಆ ಮಗುವನ್ನು ಪ್ರೀತಿಯಿಂದ ಆಡಿಸಲು ಯತ್ನಿಸಿದಳು. ಆಕೆ ಕೆಲಸದ ಇಂಟರ್ ವ್ಯೂಗೆ ಹೊರಟಿದ್ದವಳು. ಎಲ್ಲರೂ ಹದಿಹರೆಯದ ಆಕೆಯನ್ನೇ ಮಗುವಿನ ತಾಯಿ ಎಂದುಕೊಂಡಿದ್ದರು. ಆಕೆ ಮಗುವನ್ನು ಬಿಟ್ಟು ಇಳಿದು ಹೋಗುವಾಗ ಜೋರು ಮಾಡಿ, ಪೋಲೀಸರಿಗೆ ತಿಳಿಸುತ್ತೇವೆಂದು ಮಗುವನ್ನು ಅವಳ ಜೊತೆಗೆ ಕಳುಹಿಸಿದರು.
ಒಂದು ತಿಂಗಳ ಮಗುವನ್ನು ಸಂಭಾಳಿಸಿಕೊಂಡೇ ಸಂದರ್ಶನ ನಡೆಯುವ ಜಾಗಕ್ಕೆ ಹೋದಳು. ಅಲ್ಲಿಯೂ ತಪ್ಪಾಗಿ ತಿಳಿದು.. ಈಕೆ ಇಷ್ಟು ಪುಟ್ಟ ಮಗುವನ್ನೆತ್ತಿಕೊಂಡು ಸಂದರ್ಶನಕ್ಕೆ ಬಂದಿರುವುದರಿಂದ ಈಕೆಗೆ ಈ ಕೆಲಸ ಅತ್ಯಾವಶ್ಯಕ ಎನ್ನುತ್ತಾ ಕೆಲಸ ನೀಡಿದರು.
ಆಕೆ ಸಂದರ್ಶನ ಎದುರಿಸಬೇಕಾದ ಸಂದರ್ಭದಲ್ಲಿ ಅಲ್ಲೇ ಕೆಲಸ ಮಾಡುತ್ತಿದ್ದ ಮೋಹನ್ ತಾನು ಆ ಮಗುವನ್ನು ಕೊಂಚ ಹೊತ್ತು ಸಂಭಾಳಿಸಲು ಒಪ್ಪಿಕೊಳ್ಳುತ್ತಾನೆ. ಆದರೆ, ಅದೇ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ಕೊಟ್ಟ ಆತನ ಪ್ರೇಯಸಿ ಶೋಭಾ ತಪ್ಪಾಗಿ ತಿಳಿದುಕೊಂಡು ಆತನಿಂದ ದೂರವಾಗುತ್ತಾಳೆ.
ಮುಂದೆ, ಸ್ವಪ್ನಾ ಕೂಡಾ ಮಗುವಿನ ವಿಚಾರದಿಂದ ತಾನು ಪ್ರೀತಿಸಿದ್ದ ವಿಶ್ವನಿಂದ ದೂರಾಗಬೇಕಾಗಿ ಬರುತ್ತದೆ.
ಏನೂ ಅರಿಯದ ಮಗುವೊಂದರ ಜನ್ಮನಕ್ಷತ್ರದಿಂದ ತಂದೆ-ತಾಯಿಯಿಂದ ದೂರಾಗಿರುತ್ತದೆ. ಅಪರೂಪಕ್ಕೆ ಹುಟ್ಟಿದ ಮಗುವನ್ನು ಕಳೆದುಕೊಂಡ ತಂದೆ-ತಾಯಿಯರ ಪರಿಸ್ಥಿತಿ ಹೇಗಿತ್ತು..?? ಸ್ವಪ್ನಾ - ಮೋಹನ್ ರ ಮುಂದಿನ ನಡೆ ಏನಿತ್ತು..?? ಸ್ವಪ್ನಾ ಪರಿಸ್ಥಿತಿಯ ಕೈಗೊಂಬೆಯಾಗಿದ್ದೇಗೆ..?? ರಂಗಮ್ಮ ಮಾಡಿದ್ದು ಸರಿಯೇ..?? ಮಗುವಿನ ಭವಿಷ್ಯದ ಗತಿಯೇನು..??
ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಭಾಗ್ಯ ಕೃಷ್ಣಮೂರ್ತಿಯವರ ಕಿರು ಕಾದಂಬರಿ "ಒಂದು ಮಗುವಿನ ಪ್ರಕರಣ".
ತೀರಾ ವಾಸ್ತವಕ್ಕೆ ಈ ಘಟನೆಯನ್ನು ಸಂಪೂರ್ಣವಾಗಿ ಹೋಲಿಸಲು ಸಾಧ್ಯವಿಲ್ಲ. ಸಿನಿಮೀಯ ಅಂಶಗಳಿಂದ ಹಾಗೂ ಮನೋರಂಜನಾತ್ಮಕ ದೃಷ್ಟಿಯಿಂದ ನೋಡಿದಾಗ ಕತೆ ಗೆಲ್ಲುತ್ತದೆ ಎನ್ನಿಸಿತು. ನಾನು ಸಿನಿಮಾ ನೋಡಿಲ್ಲ. ಈ ಅಭಿಪ್ರಾಯ ಕೇವಲ ಈ ಕಾದಂಬರಿ ಕುರಿತಾದದ್ದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ