ಪುಸ್ತಕದ ಶೀರ್ಷಿಕೆ : ನಾಲ್ಕು ಸಣ್ಣ ಕಥೆಗಳು
ಲೇಖಕರು : ಶ್ರೀನಿವಾಸ (ಮಾಸ್ತಿ ವೆಂಕಟೇಶ ಅಯ್ಯಂಗಾರ್ )
ಪ್ರಕಾಶಕರು : ಜೀವನ ಕಾರ್ಯಾಲಯ
ಮೊದಲನೇ ಮುದ್ರಣ : 1930
ನಾಲ್ಕನೇ ಮುದ್ರಣ : 1954
ಪುಟಗಳು : 69
ಮಾಸ್ತಿ ಅವರ ಸಣ್ಣ ಕಥೆಗಳೆಂದರೆ ಬಹಳ ಪ್ರಸಿದ್ಧಿ ಪಡೆದಂತಹವು. ಈ ಪುಸ್ತಕದಲ್ಲಿ ಪ್ರಕಟವಾಗಿರುವ ನಾಲ್ಕು ಸಣ್ಣ ಕಥೆಗಳು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯಲ್ಲಿ ಬರೆಯಲ್ಪಟ್ಟವು. ಇದು ನೈಜ ಘಟನೆ ಆಧಾರಿತವೋ ಅಥವಾ ಕಾಲ್ಪನಿಕವೋ ಎಂಬುದರ ಕುರಿತಾಗಿ ಯಾವುದೇ ಮಾಹಿತಿ ಇಲ್ಲ.
ಈ ನಾಲ್ಕು ಸಣ್ಣ ಕಥೆಗಳಲ್ಲಿ ಮೊದಲ ಎರಡು ಕಥೆಗಳು ಪ್ರಬುದ್ಧ ಕರ್ಣಾಟಕದಲ್ಲಿ, ಮೂರನೆಯ ಕಥೆ ಕರ್ಣಾಟಕ ಕೇಸರಿಯಲ್ಲಿ ಹಾಗೂ ನಾಲ್ಕನೆ ಕಥೆ ಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದಂತಹವು.
ಕಾಮನ ಹಬ್ಬದ ಒಂದು ಕಥೆ
ಕಾಮನ ಹಬ್ಬವೆಂದರೆ ಪ್ರತಿ ಊರಲ್ಲಿಯೂ ವಿಶೇಷ ಸಡಗರ ಇರುತ್ತದೆ. ಹಾಗೆಯೇ.. ಈ ಊರಿನಲ್ಲಿಯೂ ಅಂತಹದ್ದೇ ಸಡಗರ. ಪ್ರತಿ ಮನೆಗೂ ಹೋಗಿ ಕಟ್ಟಿಗೆ,ಪೊರಕೆ ,ಚಾಪೆ, ಮಕ್ಕರಿ ಹೀಗೆ ಹಳೆಯ ವಸ್ತುಗಳನ್ನು ತಂದು ಒಂದು ಬಯಲಿನಲ್ಲಿ ರಾಶಿ ಹಾಕುತ್ತಿದ್ದರು. ಮನೆಯಲ್ಲಿರುವ ಕೊಳೆ ಹೊರ ಹೋದಂತೆ.. ಮನಸ್ಸಿನ ಕೊಳೆಯೂ ಹೊರಹೋಗಲಿ ಎನ್ನುವ ಅರ್ಥದಲ್ಲಿ ಬೆಂಕಿ ಹಚ್ಚುತ್ತಿದ್ದರು. ಆದರೆ, ಅದರ ನಂತರದ ದಿನದ ಒಂದು ವ್ರತ ಸುತ್ತಮುತ್ತಲು ಯಾರು ಮಾಡದ್ದರಿಂದ ಬಹಳ ಪ್ರಸಿದ್ಧಿಯಾಗಿತ್ತು. ಈ ವ್ರತ ಮಾಡುತ್ತಿದ್ದವರು ಸಾವಿತ್ರಮ್ಮನವರು ಮಾತ್ರ. ವಿಧವೆಯರು ಯಾರು ಬೇಕಾದರೂ ಈ ವ್ರತ ಮಾಡಬಹುದಾಗಿದ್ದರೂ ಯಾರೂ ಈ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ, ಸಾವಿತ್ರಮ್ಮನವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. ಅಪ್ಪ-ಅಮ್ಮನನ್ನು ಕಳೆದುಕೊಂಡು ಬೇಗನೆ ಗಂಡನ ಮನೆ ಸೇರಿದರು. ಗಂಡನೂ ಸಾಧುಗಳ ಜೊತೆಯಲ್ಲಿ ದೇಶಾಂತರ ಹೋದಾಗ ಬರುತ್ತಾನೆ ಎನ್ನುವ ಭರವಸೆಯಲ್ಲಿದ್ದರು. ಗಂಡ ಕಲ್ಕತ್ತಾದಲ್ಲಿ ತೀರಿಕೊಂಡನೆಂಬ ಸುದ್ದಿ ಬಂದು, ಮನೆ ಭಾಗವಾದ ನಂತರ ಅತ್ತೆ ಜೊತೆಯಲ್ಲಿ ತನ್ನ ತವರು ಮನೆ ಸೇರಿದರು. ಈ ವ್ರತದ ನಿಯಮವೇನೆಂದರೆ ಆ ಒಟ್ಟು ಮಾಡಿದ ಕಾಮನ ಬೂದಿ ಬಾಚುವ ದಿನ ವಿಧವೆಯರು ಬಂದು ಆ ಬೂದಿಯನ್ನು ತಮ್ಮ ತಲೆಯ ಮೇಲೆ ಹಾಕಿಸಿಕೊಂಡು ಕುಳಿತುಕೊಳ್ಳಬೇಕಿತ್ತು. ಅದರ ಸುತ್ತ ಬೂದಿ ಹಾಕಿದ ಹುಡುಗರು ಬಾಯಿ ಬಡಿದುಕೊಳ್ಳಬೇಕಿತ್ತು. ವಿಚಿತ್ರವಾದರೂ ಈ ಆಚರಣೆಗೆ ಯಾರೂ ಒಪ್ಪಿರಲಿಲ್ಲ. ಸಾವಿತ್ರಮ್ಮನವರ ಅತ್ತೆ ಕೂಡ ಒಪ್ಪಿರಲಿಲ್ಲ. ಆದರೆ, ಮುಂದಿನ ಜನ್ಮದಲ್ಲಿ ಈ ಜನ್ಮದಲ್ಲಿ ಪತಿಯಾಗಿದ್ದ ಶ್ರೀನಿವಾಸನೇ ತನ್ನ ಪತಿಯಾಗಲಿ ಎಂದು ಬಯಸಿದ ಸಾವಿತ್ರಮ್ಮ ವ್ರತ ಮಾಡುತ್ತಿದ್ದರು. ಅಷ್ಟು ಭಕ್ತಿಯಿಂದ ವ್ರತ ಮಾಡುತ್ತಿದ್ದವರು 10 ವರ್ಷದ ನಂತರ ಆ ವ್ರತ ಮಾಡಲಿಲ್ಲ. ಅದಕ್ಕೆ ಕಾರಣವೇನು ತಿಳಿಯಲು ಈ ಕಥೆ ಓದಿ.
ಇನ್ನೊಂದು ಹಳೆಯ ಕಥೆ
ಪರಾಶರಭಟ್ಟರ ತಂದೆಯವರು ಕಾಂಚೀಪುರದಿಂದ ಬಂದು ಶ್ರೀರಂಗದಲ್ಲಿ ನೆಲೆ ನಿಂತ ಮೇಲೆ.. ಅವರು ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿ ನೆಲೆ ನಿಂತರು. ಅಲ್ಲದೆ, ತಾಯಿಯ ಸುಸಂಸ್ಕೃತ ನಡವಳಿಕೆಯಿಂದ ಹೇಳದೆಯೂ.. ಎಷ್ಟೋ ವಿಷಯಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಡೆಯುತ್ತಿದ್ದರು.ಕೆಲವೊಮ್ಮೆ ಪೂಜೆಯ ವಿಚಾರದಲ್ಲಿ ಪರಾಶರ ಭಟ್ಟರಿಗೂ ಹಾಗೂ ಮತ್ತೋರ್ವ ಪರಿಚಾರಕರಿಗೂ ಆದ ತಪ್ಪು ಕಲ್ಪನೆಯನ್ನು ಆ ತಾಯಿ ಹೇಗೆ ಹೋಗಲಾಡಿಸಿದರು..??
ತಾಯಿಯ ಕಾಳಜಿಯಷ್ಟೇ ಅಲ್ಲದೆ ದೂರಾಲೋಚನೆ ಹಾಗೂ ದೂರದರ್ಶಿತ್ವ, ಸೂಕ್ಷ್ಮ ಗಮನಿಸುವಿಕೆಯನ್ನು ಹೇಳುತ್ತದೆ ಈ ಕಥೆ.
ನಿಜಗಲ್ಲಿನ ರಾಣಿ
ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವ ಹಾದಿಯಲ್ಲಿ ಸಿಗುತ್ತದೆ ನಿಜಗಲ್ಲು. ಆಗ ಮೈಸೂರು ಅರಸರ ಸಾಮಂತರಾಗಿದ್ದರು ನಿಜಗಲ್ಲಿನವರು. ಆ ಕೋಟೆ ಅಭೇದ್ಯವಾಗಿತ್ತು. ಆಗಾಗ ಮರಾಠಿಯವರಿಂದ ನಿಜಗಲ್ಲಿನವರ ಮೇಲೆ ಆಕ್ರಮಣ, ಒತ್ತಡಗಳು ಬರುತ್ತಿದ್ದದ್ದು ಹೌದಾದರೂ.. ಯಾವುದಕ್ಕೂ ಜಗ್ಗಿರಲಿಲ್ಲ. ಮೂರು-ನಾಲ್ಕು ಬಾರಿ ತಪ್ಪಿಸಿಕೊಂಡ ನಂತರ, ನಿಜದಲ್ಲಿನ ಮೇಲೆ ಆಕ್ರಮಣವಾಯಿತು. ಅದಕ್ಕೆ ಕಾರಣವಾಗಿದ್ದು ಒಳಗಿನವರೇ..
ರಾಮರಸರಾಯರು ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರಿಗೆ ಮಕ್ಕಳಾಗದ ಕಾರಣ ಹಿರಿಯ ರಾಣಿ ಲಕುಮವ್ವನೇ ನೋಡಿದ ಹುಡುಗಿ ಗಿರಿಜವ್ವೆಯನ್ನು ಮದುವೆಯಾಗಿದ್ದರು. ಎರಡು ವರ್ಷಗಳ ನಂತರ ಒಂದು ಮಗುವಾಗಿತ್ತು. ಸವತಿಯರ ನಡುವೆ ಯಾವುದೇ ಮನಸ್ತಾಪಗಳಿರಲಿಲ್ಲ. ಅಕ್ಕ-ತಂಗಿಯಂತೆ ಹೊಂದಿ ಬಾಳುತ್ತಿದ್ದರು. ಆದರೆ, ನಿಜಗಲ್ಲಿಗೆ ನಿಜವಾಗಿಯೂ ರಾಣಿಯಾದವರು ಯಾರು ? ಆ ಒಳಗಿನ ಆಕ್ರಮಣವಾಗಿದ್ದು ಯಾರಿಂದ ? ನಿಜಗಲ್ಲನ್ನು ಕಾಪಾಡಿದವರು ಯಾರು ? ಎಂಬುದರ ಕಥೆ ಇದು.
ಸಾರಿಪುತ್ರನ ಕಡೆಯ ದಿನಗಳು
ಬುದ್ಧನಿಂದ ಪ್ರೇರಿತನಾಗಿ ಅವನಂತೆಯೇ.. ತನ್ನ ಹೆಂಡತಿ ವೇದವತಿ ಹಾಗೂ ಎರಡು ವರ್ಷದ ಹೆಣ್ಣು ಮಗು ಕುಮುದಿನಿಯನ್ನು ಬಿಟ್ಟು ಬುದ್ಧನಡೆಗೆ ನಡೆದ ನರಸಿಂಹಶರ್ಮ. ನಂತರ ಸಾರಿಪುತ್ರನಾಗಿದ್ದ. ಆತ ಎಲ್ಲವನ್ನೂ ಬಿಟ್ಟು ಬರುವ ವೇಳೆಗೆ ತಂದೆಗೆ ಅದಾಗಲೇ ವಯಸ್ಸಾಗಿತ್ತು. ಈಗ ಸುಮಾರು 40 ವರ್ಷಗಳ ನಂತರ, ಬುದ್ದನ ಪರಿನಿರ್ವಾಣದ ನಂತರ ನರಸಿಂಹಶರ್ಮ ಮತ್ತೆ ತನ್ನೂರಿಗೆ ಬೌದ್ಧ ಬಿಕ್ಷು ಸಾರಿಪುತ್ರನಾಗಿ ಹೋಗುತ್ತಿದ್ದಾನೆಎಂ ಸಾರಿಪುತ್ರನ ಕಡೆಯ ದಿನಗಳು ಹೇಗಿದ್ದವು ಎಂಬುದನ್ನು ತಿಳಿಸುತ್ತದೆ ಈ ಕಥೆ.
ಮಾಸ್ತಿಯವರ ಸರಳವಾದ ಭಾಷೆಯಿಂದ ಐತಿಹಾಸಿಕ ವಿಚಾರಗಳನ್ನು ತೊಡಕಿಲ್ಲದೇ ಗ್ರಹಿಸುವಂತಾಯಿತು. ನೇರವಾದ ನಿರೂಪಣೆ.. ಓದುವಿಕೆಯನ್ನು ಬಹಳ ಸರಾಗವೆನಿಸುವಂತೆ ಮಾಡುವುದಷ್ಟೇ ಅಲ್ಲದೆ ಸಣ್ಣ ಕಥೆಗಳ ಕುರಿತಾದ ಆಸಕ್ತಿಯನ್ನು ಹೆಚ್ಚಿಸುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ