ಮಂಗಳವಾರ, ಏಪ್ರಿಲ್ 7, 2026

ವಧು ಬೇಕಾಗಿದೆ ! ( ಪುಸ್ತಕ ಯಾನ - 98)


ಪುಸ್ತಕದ ಶೀರ್ಷಿಕೆ : ವಧು ಬೇಕಾಗಿದೆ !

ಲೇಖಕರು : ಉಷಾ ನವರತ್ನರಾಮ್

ಪ್ರಕಾಶಕರು : ಹಂಸಧ್ವನಿ ಪ್ರಕಾಶನ

ಪುಟಗಳು : 215


ಶಾರದಮ್ಮನವರಿಗೆ ಇಬ್ಬರು ಹೆಣ್ಣು ಮಕ್ಕಳು. ಮೊದಲನೆಯವಳು ಶ್ಯಾಮಲಾ ಹಾಗೂ ಎರಡನೆಯವಳು ಶಚಿ ದೇವಿ. ಶಾರದಮ್ಮನವರ ಪತಿ ನೀಲಕಂಠಯ್ಯನವರಿಗೆ ಲಕ್ವಾ ಹೊಡೆದು, ಅವರ ಕೆಲಸಕ್ಕೆ ತೊಂದರೆಯಾಗಿ.. ನಂತರ ಬಂದ ಹಣದಿಂದ ಒಂದು ಸ್ವಂತ ಮನೆ ಮಾಡಿಕೊಂಡಿದ್ದರು. ಸ್ವಂತ ಮನೆಗೆ ಬಂದ ಎರಡು ತಿಂಗಳ ನಂತರ ಕಣ್ಣು ಮುಚ್ಚಿದ್ದರು. ಶ್ಯಾಮಲಾಳಿಗೆ ಓದಿ ಕೆಲಸಕ್ಕೆ ಹೋಗುವುದರಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಆದರೆ, ಶಚಿ ಮಾತ್ರ ತಾನು ಕೆಲಸಕ್ಕೆ ಹೋಗಲೇಬೇಕೆಂದು ಪಟ್ಟು ಹಿಡಿದು ಓದಿ ಈಗ ಕೆಲಸದ ಹುಡುಕಾಟದಲ್ಲಿದ್ದಳು. ಅದಕ್ಕಾಗಿ ಸಂದರ್ಶನಕ್ಕೆ ಕೂಡಾ ಹೋಗಿ ಬಂದಿದ್ದಳು. 


ಮನೆಯ ಖರ್ಚು ನಿಭಾಯಿಸಲು ಹೆಣಗಾಡುತ್ತಿದ್ದ ಶಾರದಮ್ಮನವರಿಗೆ ಒಂದು ಉಪಾಯ ಹೊಳೆದಿತ್ತು. ತಮ್ಮ ಮನೆಯ ಮುಂದಿನ ಒಂದು ಕೋಣೆಯನ್ನು ಬಾಡಿಗೆಗೆಂದು ನೀಡಿದ್ದರು. ಮನೆಯಲ್ಲಿ ಒಂದು ಗಂಡು ದಿಕ್ಕಿದ್ದರೆ ತಮಗೂ ಸಹಾಯವಾಗುತ್ತದೆ ಎನ್ನುವ ದೂರಲೋಚನೆಯೂ ಇತ್ತು. ಮುಂದಿನ ಮನೆ ವೇದಮ್ಮನವರ ತಮ್ಮ ಶ್ರೀರಾಮ್ ಎಂ.ಬಿ.ಬಿ.ಎಸ್ ಓದುತ್ತಿದ್ದಾಗ ಅಲ್ಲಿಯೇ ಎಲ್ಲಾದರೂ ಉಳಿದುಕೊಳ್ಳಲು ಜಾಗ ಹುಡುಕುತ್ತಿದ್ದಾಗ ಅದನ್ನೇ ಕೊಟ್ಟಿದ್ದರು. ಇನ್ನೇನು ಆತ ಎಂ.ಬಿ.ಬಿ.ಎಸ್ ಮುಗಿಸಿ ಡಾಕ್ಟರ್ ಆಗುವನಿದ್ದ. ಆತನಿಗೆ ಶಚಿಯನ್ನು ಕಂಡರೆ ಇಷ್ಟ. ಅವಳನ್ನು ಕಾಳಜಿ ಮಾಡುತ್ತಿದ್ದ. ಶಚಿಗೆ ಅವನ ಮೇಲೆ ಅಂತಹಾ ಭಾವನೆಗಳೇನೂ ಇರಲಿಲ್ಲ. ಇಬ್ಬರ ನಡುವೆಯೂ ಕೋಳಿ ಜಗಳ, ಹುಸಿಮುನಿಸುಗಳು ಇದ್ದೇ ಇದ್ದವು.


ಶಚಿ ಸಂದರ್ಶನಕ್ಕೆಂದು ಹೋಗಿದ್ದ ಕೆ.ಸಿ.ಡಬ್ಲ್ಯೂ ಕಂಪನಿಯಲ್ಲಿ ಪಿ.ಎ ಗಾಗಿ ಸಂದರ್ಶನ ನಡೆದಿತ್ತು. ಶ್ರೀರಾಮನಿಗೆ ಆತನ ಗೆಳೆಯರೊಬ್ಬರ ಮೂಲಕ ಶಚಿ ಸಂದರ್ಶನಕ್ಕೆ ಹೋದದ್ದು ಗೊತ್ತಾಗಿತ್ತು. ಆತನಿಗೇಕೋ ಆತಂಕ. ಆ ಕಂಪನಿಯಲ್ಲಿ ಹೊಸ ಎಂ.ಡಿ ಆಗಿದ್ದ ಪುರುಷೋತ್ತಮನ ಕುರಿತಾಗಿ ಒಡಕು ಮಾತುಗಳನ್ನು ಕೇಳಿದ್ದ. ಆಕೆ ಅಲ್ಲಿ ಕೆಲಸ ಮಾಡುವುದು ಅಷ್ಟು ಸಮಂಜಸವಲ್ಲ ಎಂದು ಶಚಿಯ ಬಳಿ ಹೇಳಿದಾಗ ಆಕೆ ಜಗಳಕ್ಕಿಳಿದಿದ್ದಳು.ಅದಾದ ನಂತರ ಶಾರದಮ್ಮನವರ ಕಿವಿ ಮೇಲೆಯೂ ಈ ವಿಚಾರವನ್ನು ಹಾಕಿದ್ದ.


ಶಚಿಯ ಗೆಳತಿ ಗಾಯತ್ರಿ ಹಾಗೂ ಶಚಿ ಇಬ್ಬರೂ ಸಂದರ್ಶನಕ್ಕೆ ಹೋಗಿದ್ದರೂ ಶಚಿ ಮಾತ್ರ ಆಯ್ಕೆಯಾಗಿದ್ದಳು. ಶ್ರೀರಾಮನ ಮಾತುಗಳನ್ನು ತಳ್ಳಿ ಹಾಕಿ ಅವಳು ಕೆಲಸಕ್ಕೆ ಸೇರಿದಳು. ಇದಕ್ಕೆ ಮತ್ತೊಂದು ಕಾರಣವೂ ಇದ್ದಿತು. ಅದೆಂದರೆ, ಶ್ಯಾಮಲಾಳ ಮದುವೆ. ಶಚಿಯ ತಂದೆಯ ಸ್ನೇಹಿತರಾಗಿದ್ದ ಶಿವಪ್ರಕಾಶ್ ಅವರು ಶ್ಯಾಮಲಳಿಗೆ ಈಗಾಗಲೇ ಒಂದು ಹುಡುಗನನ್ನು ಗೊತ್ತು ಮಾಡಿದ್ದರು. ಸರಳವಾಗಿಯೇ ವಿವಾಹವಾಗಲು ಸಿದ್ಧವಿದ್ದರೂ ಮದುವೆಯ ಖರ್ಚು ಇದ್ದೇ ಇರುತ್ತಿತ್ತು. ಅಷ್ಟೇ ಅಲ್ಲದೆ, ಈಗ ಬೈಕಿಗೆಂದು ನಯವಾಗಿ ಅವರ ಕಡೆಯಿಂದ ಬೇಡಿಕೆ ಬಂದಿತ್ತು. 


ಶಿವಪ್ರಕಾಶ್ ರವರಿಗೆ ಶಚಿಗೆ ಕೆಲಸ ಸಿಕ್ಕ ವಿಚಾರ ತಿಳಿದಾಗ.. ಆಕೆಯ ತಾಯಿಯ ಅಸಮಾಧಾನವನ್ನು ಅರಿತರು. ನಂತರ, ಆ ಕಂಪನಿಯ ಕುರಿತಾಗಿ ಅವರ ಅಭಿಪ್ರಾಯವನ್ನು ಸಹಾ ಬದಲಾಯಿಸಿದರು. ಅದೇನೆಂದರೆ.. ಆ ಕಂಪನಿಯ ಒಡೆಯರಾಗಿದ್ದ ವೆಂಕಟೇಶನ್ ಅವರು ಬಹಳ ಒಳ್ಳೆಯ ಮನುಷ್ಯ. ಅಲ್ಲದೇ, ಅವರ ಪತ್ನಿ ಗೋದಮ್ಮ ಚಿನ್ನದಂತಹ ಹೆಂಗಸು. ಅವರಿಗೆ ಮೂರು ಜನ ಮಕ್ಕಳು. ಪುರುಷೋತ್ತಮ್, ನರೋತ್ತಮ್ ಹಾಗೂ ಸರ್ವೋತ್ತಮ್. ಈಗ ಮಕ್ಕಳ ಕೈಗೆ ಅವರಿಗೆ ಅನುಭವ ಸಿಗಲಿ ಎಂಬ ಕಾರಣದಿಂದ ಕಂಪನಿಯ ಜವಾಬ್ದಾರಿಗಳನ್ನು ವಹಿಸಿದ್ದರು. 


ಪುರುಷೋತ್ತಮ್ ಈಗ ಕಂಪನಿಯ ಹೊಸ ಎಂ.ಡಿ ಆಗಿದ್ದಕ್ಕೆ ಅವರ ತಂದೆಯ ಸ್ವಾರ್ಥವೂ ಇದ್ದಿತು. ಅದೇನೆಂದರೆ, ಪುರುಷೋತ್ತಮ್ ತಾನು ಅಮೆರಿಕಕ್ಕೆ ಓದಲು ಹೋಗಿದ್ದಾಗ.. ಅಲ್ಲಿ ಬೆತ್ ಳನ್ನು ಇಷ್ಟಪಟ್ಟಿದ್ದ. ಅಲ್ಲದೆ, ಅವಳನ್ನು ತಾನು ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದ. ಮಗನ ಪ್ರೇಮದ ವಿಚಾರ ತಿಳಿದ ವೆಂಕಟೇಶನ್ ಅವರು ಉಪಾಯವಾಗಿ ಅವನನ್ನು ಕರೆಸಿ, ಮತ್ತೆ ಅಲ್ಲಿಗೆ ಹೋಗದಂತೆ ತಡೆಯೊಡ್ಡಲು ಎಂ.ಡಿ ಆ ಪಟ್ಟ ಕಟ್ಟಿದರು. ಇದರ ಅರಿವಿಲ್ಲದ್ದೇನೂ ಇರಲಿಲ್ಲ ಪುರುಷೋತ್ತಮ್. ಆದರೆ, ಮತ್ತೆ ಅಮೆರಿಕಾಗೆ ಹಾರಲು ಹಾಗೂ ಬೆತ್ ಜೊತೆಗೆ ಮದುವೆಯಾಗಲು ಸಮಯಕ್ಕಾಗಿ ಕಾಯುತ್ತಿದ್ದ.


ಮಗ ಅವಳಿಂದ ದೂರವಿದ್ದರೆ ತಾನಾಗಿಯೇ ತಾವು ತೋರಿಸಿದ ಹುಡುಗಿಯನ್ನು ಮದುವೆಯಾಗುತ್ತಾನೆ ಎಂಬ ಕಾರಣದಿಂದ ತಾವು ಹಳ್ಳಿಗೆ ಹೋಗಿ ಮೂರು ತಿಂಗಳು ಕಾಲ ಫಾರ್ಮ್ ನೋಡಿಕೊಂಡು ಬರುತ್ತೇವೆ ಎನ್ನುವ ನೆಪವೊಡ್ಡಿ ಅವರು ಹಳ್ಳಿಗೆ ಹೊರಟಿದ್ದರು.


ನರೋತ್ತಮ್ ಈಗಾಗಲೇ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದ. ಅವಳೇ ರಿಮ್ ಜಿಮ್. ಮನೆಯಲ್ಲಿ ಕೂಡ ಒಪ್ಪಿದ್ದರು. ಆದರೆ, ಪುರುಷೋತ್ತಮನ ಮದುವೆಯ ನಂತರ ನರೋತ್ತಮ್ ಮದುವೆ ಎಂದು ತೀರ್ಮಾನವಾಗಿತ್ತು. ಸರ್ವೋತ್ತಮ್ ಅದೇ ಕಂಪನಿಯಲ್ಲಿ ಪಬ್ಲಿಕ್ ರಿಲೇಶನ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರೆ, ನರೋತ್ತಮ್ ಹಾಗೂ ರಿಮ್ ಜಿಮ್ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. 


ರಿಮ್ ಜಿಮ್ ಹಾಗೂ ಶಚಿ ಇಬ್ಬರನ್ನೂ ಹೊಸದಾಗಿ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಈ ಮೊದಲು ತಂದೆಯ ಪಿ.ಎ ಆಗಿದ್ದ ಸುಬ್ಬರಾಮಯ್ಯನವರನ್ನು ಬೇರೆಯ ಪೋಸ್ಟ್ ನೀಡಿ ಗೌರವಯುತ ಸ್ಥಾನ ಕೊಟ್ಟು ನಿಕಟವರ್ತಿಯಾಗುವುದನ್ನು ತಪ್ಪಿಸಿದ್ದ ಪುರುಷೋತ್ತಮ್. ಆದರೆ, ಅವರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. 


ಪುರುಷೋತ್ತಮ್ ಬೆತ್ ಳನ್ನು ವಿವಾಹವಾಗಲು ಬಹಳಷ್ಟು ಉಪಾಯ ಮಾಡಿ ಅದಕ್ಕೆ ಶಚಿಯ ಸಹಾಯ ಪಡೆಯಲು ನಿರ್ಧರಿಸಿದ್ದ. ಇದು ಮೂವರು ಸಹೋದರರು ಸೇರಿ ಮಾಡಿದ ಉಪಾಯವಾಗಿತ್ತು. ಅದೆಂದರೆ, ಶಚಿಯನ್ನು ತಾನು ಪ್ರೀತಿಸುತ್ತಿದ್ದೇನೆ ಎಂದು ಪರಿಚಯಿಸಿದರೆ.. ಅವರ ತಂದೆ ತಾಯಿ ನಂಬುತ್ತಾರೆ. ಅಲ್ಲದೆ, ಬೆತ್ ಳನ್ನು ಮರೆತಿದ್ದೇನೆ ಎಂದು ತಿಳಿದುಕೊಂಡು ಸುಮ್ಮನಾದಾಗ ತಾನು ಹೋಗಿ ಅವಳನ್ನು ವಿವಾಹವಾಗಿ ಕರೆತರುವುದು ಎಂಬುದಾಗಿ.. 


ಆದರೆ, ಪ್ರೀತಿ ಅಥವಾ ಮದುವೆ ಎಂಬ ಬಂಧಗಳು ಇರುವಂತೆಯೇ ಸಾಗುವುದಿಲ್ಲ. ಅಂದುಕೊಂಡಂತೆ ಇರುವುದಿಲ್ಲ. ದಿನಗಳು ಕಳೆದಂತೆ ಪುರುಷೋತ್ತಮನ ಮನಸ್ಸಿನಲ್ಲಿ ಶಚಿಯ ಕುರಿತಾಗಿ ಯಾವ ಭಾವನೆ ಬೆಳೆಯಿತು..?? ಆತ ವಿದೇಶಕ್ಕೆ ಹಾರಿದನೇ..?? ಬೆತ್ ಭಾರತಕ್ಕೆ ಬಂದಳೇ..?? ಶಚಿ ಪುರುಷೋತ್ತಮಮ ಪ್ರೇಯಸಿಯಾಗಿ ನಾಟಕವಾಡಲು ಒಪ್ಪಿದ್ದೇಕೆ..?? ಈ ವಿಚಾರ ಅವರ ತಾಯಿ ಹಾಗೂ ಮನೆಯಲ್ಲಿ ತಿಳಿದಾಗ ಅವರ ಪ್ರತಿಕ್ರಿಯೆಗಳೇನು..?? ಶ್ಯಾಮಲಾಳ ಮದುವೆ ಅಂದುಕೊಂಡಂತೆ ಆಯಿತೇ..?? ಶ್ರೀರಾಮ ತನ್ನ ಪ್ರೀತಿಯ ಕುರಿತಾಗಿ ಶಚಿಯ ಬಳಿ ಪ್ರಸ್ತಾಪಿಸಿದನೇ..?? ಗೋದಮ್ಮನವರು ಹಾಗೂ ವೆಂಕಟೇಶ್ ಅವರಿಗೆ ಶಚಿ ಹಾಗೂ ಮಗನ ವಿಚಾರ ತಿಳಿದಾಗ ಅವರಿಂದ ಬಂದ ಪ್ರತಿಕ್ರಿಯೆ ಏನು? ಶಶಿಯನ್ನು ಅವರು ಒಪ್ಪಿದರೇ..?? ಯಾರಿಗೆ ವಧು ಬೇಕಾದದ್ದು..?? ಇದೆಲ್ಲವನ್ನು ತಿಳಿಯಲು ಓದಿ ಈ ಕಾದಂಬರಿಯನ್ನು. 


ಇಂದಿನ ದಿನಗಳಲ್ಲಿ ಅಗ್ರಿಮೆಂಟ್ ಮದುವೆಗಳು ಅಥವಾ ಅಗ್ರಿಮೆಂಟ್ ಸಂಬಂಧಗಳಂತೆ ಈ ಒಪ್ಪಂದದ ಕಥೆ ಇದೆ. ಆದರೆ, ಸಂಬಂಧಗಳು ಒಪ್ಪಂದಗಳ ಮೇಲೆ ನಿಲ್ಲುವುದಿಲ್ಲ ಅಥವಾ ಆ ಒಪ್ಪಂದಗಳು ಯಾವಾಗ ಬೇಕಾದರೂ ಮುರಿಯಬಹುದು ಅಥವಾ ಆ ಒಪ್ಪಂದಗಳು ಬದಲಾಗಿ ಸಂಬಂಧದ ಸ್ವರೂಪಗಳೇ ಬದಲಾಗಬಹುದು. ಹರೆಯದ ಕನಸುಗಳು, ಆಸೆಗಳು, ಉಪಾಯಗಳು ಇವೆಲ್ಲದರ ಮುಂದೆ ಹಿರಿಯರ ಅನುಭವ, ಅವರ ಚಾಣಾಕ್ಷತನ ಕೆಲಸ ಮಾಡುತ್ತದೆಯೇ..?? ಕಾಲ ಬದಲಾದಂತೆ ಬುದ್ಧಿವಂತಿಕೆ ಬದಲಾಗಬಹುದು. ಆದರೆ, ಸಂಬಂಧಗಳಿಗೆ ಮಾತ್ರ ಅದೇ ಹೆಸರುಗಳು. ಅಲ್ಲವೇ..? ಒಪ್ಪಂದದ ಸಂಬಂಧ, ಪ್ರೀತಿ, ಮದುವೆ ಇದೆಲ್ಲದರ ಸುತ್ತ ಸುತ್ತುವ ಈ ಕಾದಂಬರಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ