ಅವಳಿಗೀಗ ಸಮಯವಿಲ್ಲ
ಯಾರೋ ಏನೋ ಅಂದದ್ದಕ್ಕೆ ಅಳುತ್ತಾ ಕೂರಲು
ಅಂದದ್ದಕ್ಕೆ ಪ್ರತಿ ನುಡಿ ಜೋಡಿಸಿಕೊಳ್ಳುತ್ತಿದ್ದಾಳೆ
ಅವಳಿಗೀಗ ಸಮಯವಿಲ್ಲ
ಯಾರೋ ನೋವು ನೀಡಿದ್ದಕ್ಕೆ ಮುಲಾಮು ಹಚ್ಚಲು
ನೋವುಗಳನ್ನೇ ಪದಗಳಲ್ಲಿ ಪೋಣಿಸುತ್ತಿದ್ದಾಳೆ
ಅವಳಿಗೀಗ ಸಮಯವಿಲ್ಲ
ಯಾರದ್ದೋ ದೂರಿಗೆ ತಲೆ ತಲೆಕೆಡಿಸಿಕೊಳ್ಳಲು
ಅವರ ತಲೆ ಕೆಡಿಸಲು ತನ್ನ ಸಾಧನೆಯ ಸಿದ್ಧತೆ ತೊಡಗಿದ್ದಾಳೆ
ಅವಳಿಗೀಗ ಸಮಯವಿಲ್ಲ
ಅವರ ಮೊಸಳೆ ಕಣ್ಣೀರನ್ನು ಒರೆಸುತ್ತಾ ಕೂರಲು
ಮೊಸಳೆ ಕಣ್ಣೀರಿನ ಕಾರಣವನ್ನು ತಿಳಿಯಲು ವ್ಯಯಿಸಿದ್ದಾಳೆ
ಅವಳಿಗೀಗ ಸಮಯವಿಲ್ಲ
ಬಣ್ಣದ ಮಾತುಗಳಿಗೆಲ್ಲಾ ಮರುಳಾಗಿಬಿಡಲು
ನಿಮ್ಮಷ್ಟೇ ಬಣ್ಣಬಣ್ಣವಾಗಿ ಮಾತನಾಡಲು ಕಲಿಯುತ್ತಿದ್ದಾಳೆ
ಅವಳಿಗೀಗ ಸಮಯವಿಲ್ಲ
ಯಾವುದೇ ವಿಚಾರಕ್ಕೆ ರಾಜಿಯಾಗಿಬಿಡಲು
ರಾಜಿಯಾಗುವ ಬದಲು ನಿಷ್ಠುರವಾಗಿ ಕಲ್ಲಾಗುತ್ತಿದ್ದಾಳೆ
ಅವಳಿಗೀಗ ಸಮಯವಿಲ್ಲ
ದೇವರ ಮುಖವಾಡದ ದೆವ್ವವನ್ನು ಪೂಜಿಸಲು
ದೆವ್ವ ಬಿಡಿಸುವ ಸಿದ್ಧತೆ ಮಾಡಿಕೊಂಡಿದ್ದಾಳೆ
ಅವಳಿಗೀಗ ಸಮಯವಿಲ್ಲ
ಬದುಕಿನ ಕೆಟ್ಟ ಹುಳುಗಳನ್ನು ಆಗಾಗ ನೆನಪಿಸಿಕೊಳ್ಳಲು
ಒಳ್ಳೆಯತನದ ಜಾಲರಿಯಲ್ಲಿ ಸೋಸುತ್ತಿದ್ದಾಳೆ
ಅವಳಿಗೀಗ ಸಮಯವಿಲ್ಲ
ಸೋತು ಪುನಃ ಪ್ರಯತ್ನ ಮಾಡುತ್ತಲೇ ಗೆಲ್ಲಲು
ಜಿದ್ದಾಜಿದ್ದಿಯಲ್ಲಿ ಅವಳದ್ದು ಬದುಕು ಇಲ್ಲವೇ ಸಾವು
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ