ಪುಸ್ತಕದ ಶೀರ್ಷಿಕೆ : ಚಿತ್ತರಂಗ
ಲೇಖಕರು : ಆಶಾ ರಘು
ಪ್ರಕಾಶಕರು : ಸಾಹಿತ್ಯ ಲೋಕ ಪಬ್ಲಿಕೇಷನ್ಸ್
ಮೊದಲನೇ ಮುದ್ರಣ : 2023
ಪುಟಗಳು : 308
ಬೆಲೆ : 370 ರೂ.
ತೆರೆಯ ಮುಂದೆ ಕಾಣುವ ನಟ ಅಥವಾ ನಟಿಯರು ಮಾತ್ರ ನಮಗೆ ಪರಿಚಯ. ಅದೂ ಅವರು ನಿರ್ವಹಿಸುವ ಪಾತ್ರಗಳ ಮೂಲ. ಸಾತ್ವಿಕ ಪಾತ್ರಗಳನ್ನು ಮಾಡುವವರಾದರೆ ಅವರ ಕುರಿತಾಗಿ ಒಂದು ರೀತಿಯ ಗೌರವ ಭಾವವೂ ಹಾಗೂ ಅವರು ನಿಜ ಜೀವನದಲ್ಲಿಯೂ ಹೀಗೆಯೇ ಇರುತ್ತಾರೆ ಎಂಬ ಭಾವವು ಬೆಳೆದುಬಿಟ್ಟಿರುತ್ತದೆ. ಖಳನಟರ ಪಾತ್ರದಲ್ಲಿ ನಟಿಸುವವರನ್ನು ಕಂಡಾಗ ಅವರ ಕುರಿತಾಗಿ ಒಂದು ರೀತಿಯ ಕೋಪ ಅಥವಾ ರೋಷದ ಭಾವನೆ ಇರುತ್ತದೆ. ಅವರ ನಟನೆ ಅಷ್ಟು ಮನಸ್ಸಿಗೆ ಮುಟ್ಟಿರುತ್ತದೆ.
ಯಾವುದಾದರೂ ಒಂದು ಚಲನಚಿತ್ರ ಗೆದ್ದಾಗ ನಾವು ಅಭಿನಂದಿಸುವುದು ಅಥವಾ ಚಿತ್ರದ ಗೆಲುವು ಇವರಿಂದಲೇ ಅಂಫ್ಯೂಕೊಳ್ಳುವುದು ಅಥವಾ ನಮ್ಮ ರೋಲ್ ಮಾಡೆಲ್ ನ್ನಾಗಿಸಿಕೊಳ್ಳುವುದು ನಟ ಅಥವಾ ನಟಿಯರನ್ನು. ಆದರೆ, ಒಂದು ಚಿತ್ರ ಗೆಲ್ಲುವುದಕ್ಕೆ ನಿರ್ದೇಶಕರ ಪಾತ್ರ ಅದೆಷ್ಟಿರುತ್ತದೆ.. ಅಲ್ಲವಾ..?? ಅಂತಹಾ ನಿರ್ದೇಶಕರ ಕುರಿತು ನಮಗೆಷ್ಟು ಗೊತ್ತು..?? ಸಿನಿಮಾ ಗೆದ್ದಾಗ ಅಥವಾ ಸೋತಾಗ.. ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಭಾವವನ್ನು ಹೊರ ಹಾಕುವುದು ಸುಲಭ. ಅದೇ ನಟ-ನಟಿಯರ ಜೀವನದ ನೋವುಗಳು, ನಿರ್ದೇಶಕರ ಕಷ್ಟ-ನಷ್ಟಗಳು.. ಅಷ್ಟೇ ಅಲ್ಲದೆ ಅವರ ವೈಯಕ್ತಿಕ ಜೀವನದ ಚಿತ್ರಣಗಳಾವುವೂ ನಮ್ಮ ಮುಂದೆ ತೆರೆದುಕೊಳ್ಳುವುದೇ ಇಲ್ಲ. ಈ ರೀತಿ ಚಿತ್ರರಂಗದವರ ತೆರೆಮರೆಯ ಅಂತರಂಗವನ್ನು ತೆರೆದಿಟ್ಟಿರುವ ಕಾದಂಬರಿ ಚಿತ್ತರಂಗ.
ಈ ಕಾದಂಬರಿಯನ್ನು ಓದುತ್ತಾ.. ಓದುತ್ತಾ.. ಇಲ್ಲಿಯ ಪಾತ್ರಗಳನ್ನು ನಿಜ ಜೀವನದ ಪಾತ್ರಗಳಲ್ಲಿಯೂ ಕಂಡುಕೊಳ್ಳಬಹುದು. ಆದರೆ, ಇದು ಅವರದ್ದೇ ಕಥೆಯಾ..?? ಎಂದರೆ.. ಅವರ ಜೀವನ ಚಿತ್ರಣದ ಜೊತೆಗೆ ಹಲವಾರು ಬೇರೆ-ಬೇರೆ ಕೋನಗಳೂ ಸೇರಿಕೊಂಡು, ಬೇರೆ-ಬೇರೆ ಘಟನೆಗಳು ಸೇರಿಕೊಂಡಿರುವುದರಿಂದ ಇದನ್ನು ಕಾದಂಬರಿಯಾಗಿಯೇ ನೋಡುವುದು ಒಳ್ಳೆಯದು. ಇಲ್ಲಿನ ಪಾತ್ರಗಳ ಹೆಸರುಗಳು ಬದಲಾಗಿವೆಯಾದರೂ.. ಓದುತ್ತಿರುವಾಗ ಇವರು ಇಂತಹವರೇ ಇರಬಹುದು ಎಂದು ಕೆಲವು ಊಹೆಗಳಿಗೆ ಪುರಾವೆಗಳು ದೊರಕುತ್ತವೆ. ಅದೆಲ್ಲವನ್ನೂ ಬದಿಗಿಟ್ಟು, ಇದನ್ನು ಕೇವಲ ಕಾದಂಬರಿಯನ್ನಾಗಿ ಮಾತ್ರ ನೋಡೋಣ.
ಸಿನಿಮಾ ರಂಗದಲ್ಲಿದ್ದಾಗ ಎಷ್ಟೋ ಜನರು ಕೀರ್ತಿಯ ಅಥವಾ ಹಣದ ಬೆನ್ನು ಹತ್ತಿ ಹೋಗುತ್ತಾರೆ. ಅಂತಹವರ ಬದುಕಿನ ವೈಯಕ್ತಿಕ ಚಿತ್ರಣ ಸಂದರ್ಶನದ ಮೂಲಕ ಸಿಗುತ್ತದೆ. ಆದರೆ, ಆ ಸಂದರ್ಶನಗಳಲ್ಲಿ ಎಷ್ಟನ್ನು ತೆರೆದಿಡಬೇಕು ಹಾಗೂ ಯಾವುದನ್ನು ತೆರೆದಿಡಬಾರದು ಎಂಬುದು ಅವರಿಗೆ ಅರಿವಿರುತ್ತದೆ.
ಚಿತ್ತರಂಗ ಮೊದಲಿಗೆ ಶುರುವಾಗುವುದು ಸುಬ್ಬಣ್ಣ ಹಾಗೂ ಅಹಲ್ಯೆಯರ ಬದುಕಿನಿಂದ. ಸುಬ್ಬಣ್ಣನನ್ನು ಸಂದರ್ಶನ ಮಾಡಲು ರಂಗನಾಥ್ ಎನ್ನುವ ಪತ್ರಕರ್ತರೊಬ್ಬರು ಬಂದಾಗ.. ಅವರು ಕೇಳಿದ ಪ್ರಶ್ನೆಗಳಿಗೆ ಸುಬ್ಬಣ್ಣ ಉತ್ತರಿಸುವಂತೆ ಅವರ ಬದುಕಿನ ಚಿತ್ರಣಗಳನ್ನು ಚಿತ್ರಿಸಲಾಗಿದೆ. ಅಲ್ಲದೆ, ಯಾವುದನ್ನು ಹೇಳಬೇಕು ಹಾಗೂ ಯಾವುದನ್ನು ಹೇಳಬಾರದು ಎಂಬುದರ ಅರಿವಿರುವ ಸುಬ್ಬಣ್ಣ ಅವರ ಮುಚ್ಚಿಟ್ಟ ಬದುಕಿನ ಕೆಲವು ಪುಟಗಳನ್ನು ತಮ್ಮ ಮನಸ್ಸಿನಲ್ಲಿಯೇ ಮನನ ಮಾಡಿಕೊಳ್ಳುತ್ತಿರುವಂತೆ ಹೇಳಿರುವ ಪರಿ ಚೆನ್ನಾಗಿದೆ.
ಕಗ್ಲಿಪುರದ ಸುಬ್ಬಣ್ಣ ಈಗ ಹೆಸರಾಂತ ನಿರ್ದೇಶಕರಾಗಿರುವವರು. ಅವರಿಗೆ ರಾಜೇಶ್ವರಿ ಎನ್ನುವವರ ಜೊತೆ ಮದುವೆಯಾಗಿದ್ದು, ನಾಲ್ಕು ಮಕ್ಕಳ ತುಂಬಿದ ಸಂಸಾರವಿತ್ತು. ಆದರೆ, ಅವರ ಬದುಕಿನಲ್ಲಿ ಬರುವ ಮತ್ತೆರಡು ಹೆಣ್ಣುಗಳು ಅವರ ಜೀವನದ ದಿಕ್ಕನ್ನು ಬೇರೆಯದ್ದೇ ರೀತಿಯಲ್ಲಿ ಕೊಂಡೊಯ್ಯುತ್ತಾರೆ. ಅವರೇ ಕಸ್ತೂರಿ ಹಾಗೂ ಅಹಲ್ಯ. ಇಲ್ಲಿ ಕಥೆಯನ್ನು ಕೇವಲ ಸುಬ್ಬಣ್ಣನವರ ದೃಷ್ಟಿಯಿಂದ ಮಾತ್ರವಲ್ಲ.. ಅಹಲ್ಯ, ಕಸ್ತೂರಿ ಹಾಗೂ ರಾಜೇಶ್ವರಿಯವರ ದೃಷ್ಟಿಯಿಂದಲೂ ಚಿತ್ರಿಸಲಾಗಿದೆ.
ಸುಬ್ಬಣ್ಣ ಈಗ ನಿರ್ದೇಶನದ ರಂಗದಲ್ಲಿದ್ದರೂ.. ಆತ ಪಟ್ಟ ಕಷ್ಟಗಳು ಒಂದೆರಡೇನಲ್ಲ. ಆತ ಬಾಲ್ಯದಲ್ಲಿ ಪಟ್ಟ ಕಷ್ಟಗಳು, ಕುಟುಂಬದ ಆರ್ಥಿಕ ಸಂಕಷ್ಟ ಹಾಗೂ ಓದುವ ಸಮಯದಲ್ಲಿ ಕರೆದ ನಾಟಕ ರಂಗ ಹಾಗೂ ಅಲ್ಲಿನ ಒಡನಾಟ ,ಅಲ್ಲಿನ ಕಷ್ಟಗಳು, ಅವಮಾನಗಳು ಇವೆಲ್ಲವನ್ನು ದಾಟಿ ಹಂತ-ಹಂತವಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಾರೆ. ಸುಬ್ಬಣ್ಣನವರ ಬದುಕೇನೂ ಹೂವಿನ ಹಾಸಿಗೆಯಲ್ಲ. ಮೊದಲಿಗೆ ಹೆಸರಾಂತ ನಿರ್ದೇಶಕರೊಬ್ಬರ ಕಾರ್ ಡ್ರೈವರ್ ಆಗಿ, ನಂತರ ಸಹಾಯಕ ನಿರ್ದೇಶಕನಾಗಿ, ಆನಂತರ ಸ್ವತಂತ್ರ ನಿರ್ದೇಶನದಲ್ಲಿ ನೆಲೆ ಕಾಣುತ್ತಾರೆ.
ಹೀಗೆ, ಗಣಪತಿಯವರ ಬಳಿ ಅವರು ಸಹಾಯಕ ನಿರ್ದೇಶಕರಾಗಿದ್ದ ಸಮಯದಲ್ಲಿ ಅವರಿಗೆ ರಾಜೇಶ್ವರಿ ಅವರೊಂದಿಗೆ ವಿವಾಹವಾಗುತ್ತದೆ. ಅದೇ ಸಮಯದಲ್ಲಿ ಚಿತ್ರರಂಗಕ್ಕೆ ಬಣ್ಣದ ಕನಸುಗಳನ್ನು ಹೊತ್ತು ಬಂದ ಕಸ್ತೂರಿಯ ಪರಿಚಯವೂ ಆಗುತ್ತದೆ.
ಕಸ್ತೂರಿಯೂ ಕಷ್ಟದ ಹಾದಿಯಿಂದಲೇ ಸಿನಿಮಾರಂಗದಲ್ಲಿ ತಾರೆಯಾಗಲು ಬಂದವಳು. ಅಪ್ಪನಿಗೆ ಸಿನಿಮಾ ನೃತ್ಯ, ನಾಟಕವೆಂದರೆ ಎಲ್ಲಿಲ್ಲದ ಕೋಪ. ಆಕೆಯ ತಾಯಿ ನೃತ್ಯಗಾರ್ತಿಯಾಗಿದ್ದರೂ ಮದುವೆಯಾದ ನಂತರ ಅದನ್ನು ಬಿಟ್ಟಿದ್ದರು. ಅದಕ್ಕೆ ಕಾರಣ ಕಸ್ತೂರಿಯ ತಂದೆ. ಕಸ್ತೂರಿಯ ಮೊದಲ ಹೆಸರು ಶಶಿಕಲಾ. ಇವರ ಜೊತೆಗೆ ಅವಿವಾಹಿತ ಚಿಕ್ಕಮ್ಮನೂ, ತಮ್ಮನೂ ಇದ್ದರು. ಕಸ್ತೂರಿ ಬಹಳ ಕಷ್ಟಪಟ್ಟು ಈ ಸಿನಿಮಾರಂಗದಲ್ಲಿ ಬೆಳಕು ಕಂಡವಳು. ಸುಬ್ಬಣ್ಣನ ನಿರ್ದೇಶನದಲ್ಲಿ ಮಿಂಚಿದ ಪ್ರತಿಭೆ ಕಸ್ತೂರಿ. ಇಬ್ಬರಿಗೂ ಆ ಹಂತದಲ್ಲಿ ಸಿನಿಮಾರಂಗದಲ್ಲಿ ಆದ ನೋವುಗಳು ಸಮಾನ ಮನಸ್ಕರಂತೆನ್ನಿಸಿ ಪರಸ್ಪರರನ್ನು ಬೆಸೆಯುತ್ತವೆ. ಇವರ ಸಂಬಂಧ ಮುಂದುವರಿದರೂ.. ಕಸ್ತೂರಿಯ ಅಭಿನಯ ಒಂದು ಮಟ್ಟಿಗೆ ಬಂದು, ಆಕೆ ಚಿತ್ರರಂಗದಲ್ಲಿ ನೆಲೆ ನಿಂತಾಗ ಆಕೆಯ ನಡವಳಿಕೆಗಳು ಚಿತ್ರರಂಗವನ್ನೂ, ಸುಬ್ಬಣ್ಣನನ್ನೂ ದೂರ ಮಾಡಿಕೊಳ್ಳುವಂತೆ ಮಾಡುತ್ತವೆ. ಅಷ್ಟೇ ಅಲ್ಲದೆ, ಆಕೆ ಚಿತ್ರರಂಗದಿಂದ ಅವಕಾಶ ವಂಚಿತಳಾಗಿದ್ದಾಗ ಕೈಗಾರಿಕೋದ್ಯಮಿಯೊಬ್ಬರ ಪತ್ನಿಯಾಗಿ, ನಂತರ ಅಲ್ಲಿಯೂ ಸಂಬಂಧ ಮುರಿದುಕೊಂಡು, ನಾಟಕ ಕಂಪನಿಯ ಮಾಲೀಕರಾದ ನರಸುವಿನ ಜೊತೆ ಮುಂದುವರಿಯುತ್ತದೆ. ಅಷ್ಟಕ್ಕೂ.. ಆಕೆ ಚಿತ್ರರಂಗದಿಂದ ದೂರಾಗಿ ನಾಟಕಕ್ಕೆ ಹೋದದ್ದೇಕೆ..? ಯಾರಿಗಾಗಿ..?? ಆಕೆ ಚಿತ್ರರಂಗದಲ್ಲಿ ಮಾಡಿಕೊಂಡ ಎಡವಟ್ಟುಗಳೇನು..? ಆಕೆ ಬದುಕಿನಲ್ಲಿ ಅಷ್ಟು ನೊಂದು ಆತ್ಮಹತ್ಯೆ ಮಾಡಿಕೊಂಡದ್ದೇಕೆ..?? ಇವೆಲ್ಲವನ್ನೂ ಕಸ್ತೂರಿಯ ಮಾತುಗಳಲ್ಲಿ ಹಾಗೂ ಸಮಾಜದ ನೋಟ ಎರಡರ ದೃಷ್ಟಿಯಲ್ಲಿಯೂ ಕಾಣಬಹುದು.
ಕಸ್ತೂರಿ ಇನ್ನೂ ತನ್ನ ಚಿತ್ರಗಳಲ್ಲಿ ನಟಿಸುತ್ತಿದ್ದಾಗಲೇ.. ತಮ್ಮ ಸಂಬಂಧ ಹಳಸುತ್ತಿದೆ ಎಂಬ ಸುಳಿವು ಸಿಕ್ಕಾಗ ಸುಬ್ಬಣ್ಣನವರು ಮುನ್ನೆಲೆಗೆ ತಂದ ಕಲಾವಿದೆ ಅಹಲ್ಯ. ತನ್ನ ಸಂಬಂಧಿಕರ ಮನೆಯ ಹತ್ತಿರದಲ್ಲಿ ಇದ್ದ ಅಹಲ್ಯಳ ಅಕ್ಕನಿಗೆ ಸಿನಿಮಾರಂಗಕ್ಕೆ ಕಾಲಿಡುವ ಕನಸಿತ್ತು. ಓದಿನಲ್ಲಿ ಬುದ್ಧಿವಂತೆಯಾದರೂ.. ಹಣದ ಸಮಸ್ಯೆಯ ಕಾರಣದಿಂದ ಆಕೆಯ ಅಪ್ಪ ಅವಳನ್ನು ಡಾಕ್ಟರ್ ಆಗುವುದು ಬೇಡವೆಂದಾಗ.. ವಿಧಿಯ ಲೀಲೆ ಎಂಬಂತೆ ಸಿನಿಮಾರಂಗ ಕೈಬೀಸಿ ಕರೆಯುತ್ತದೆ. ಅಹಲ್ಯ ತಾನು ಚಿತ್ರರಂಗದಲ್ಲಿ ನೆಲೆ ನಿಲ್ಲಬೇಕು ಎನ್ನುವ ಕಾರಣಕ್ಕೆ ಸುಬ್ಬಣ್ಣನವರ ಜೊತೆ ಗುರು-ಶಿಷ್ಯೆಯ ಸಂಬಂಧ ಹೊಂದುವಾಗಲೇ, ಅದು ಮತ್ತಷ್ಟು ಮುಂದುವರಿದು ಅವರಿಬ್ಬರ ವಿವಾಹವೂ ಆಗಿ ಅವರಿಗೊಬ್ಬಳು ಮಗಳು ಹುಟ್ಟುತ್ತಾಳೆ. ಅವಳೇ ಹರ್ಷಿತ. ಆದರೆ, ಸುಬ್ಬಣ್ಣನಿಗೆ ಈ ಸಂಬಂಧ ಕೂಡ ದೀರ್ಘಕಾಲ ಉಳಿಯುವುದಿಲ್ಲ. ಈ ಸಂಬಂಧ ಮುರಿದು ಬಿದ್ದದ್ದಕ್ಕೆ ಕಾರಣವೇನು..?? ಇಲ್ಲಿ ತಪ್ಪು ಯಾರದ್ದು..?? ಅಹಲ್ಯಾಳ ಸಿನಿಮಾರಂಗದ ಬದುಕು ಮುಂದೇನಾಯಿತು..? ಓದಿ ನೋಡಿ.
ಇಲ್ಲಿ ರಾಜೇಶ್ವರಿ ಅವರ ದೃಷ್ಟಿಯಿಂದ ನೋಡಿದಾಗ ಸುಬ್ಬಣ್ಣನವರು ಕಾಣುವುದೇ ಬೇರೆ. ಅವರ ಸುಬ್ಬರಾಜನ ಕುರಿತ ಮಾತುಗಳು, ಅವರು ಪಟ್ಟ ಭವಣೆಗಳು, ಕಷ್ಟಗಳು, ಅವೆಲ್ಲವನ್ನೂ ಸರಿದೂಗಿಸಿಕೊಂಡು ಸಂಸಾರವನ್ನು ಸಲಹಿದ ಪರಿ..
ಯಾವ ಹೆಂಡತಿಯಾದರೂ ಗಂಡ ಮತ್ತೊಬ್ಬಳೊಡನೆ ಸಂಬಂಧವಿರಿಸಿಕೊಂಡಿದ್ದಾನೆ ಎಂದಾಗ ಆಗುವ ತಲ್ಲಣಗಳು ಹಾಗೂ ಮಾಡಿಕೊಳ್ಳಬೇಕಾಗಿ ಬರುವ ರಾಜಿ ಅದರ ಹಿಂದಿನ ನೋವು ಎಲ್ಲವನನ್ನೂ ರಾಜೇಶ್ವರಿ ಅವರ ಮನಸ್ಸಿನ ಮಾತುಗಳ ಮೂಲಕ ಮೂಡಿಸಿದ್ದಾರೆ ಲೇಖಕಿ.
ಕಸ್ತೂರಿಯ ಆತ್ಮಹತ್ಯೆ ಹಾಗೂ ಅಹಲ್ಯ ದೂರವಾದ ನಂತರ ಸುಬ್ಬಣ್ಣನ ಬದುಕು ಏನಾಯಿತು..? ಅಷ್ಟು ದಿನಗಳ ಕಾಲ ಕಡೆಗಣಿಸಿದ್ದ ರಾಜೇಶ್ವರಿಯವರು ಸುಬ್ಬಣ್ಣನೊಡನೆ ಹೇಗೆ ನಡೆದುಕೊಂಡರು..? ಸುಬ್ಬಣ್ಣನವರ ಮಕ್ಕಳಾದ ಭರತ್, ಮಧು, ಕೀರ್ತನ ಹಾಗೂ ಶಾಂತಿಯರು ತಂದೆಯನ್ನು ಹೇಗೆ ಕಂಡರು..? ಸುಬ್ಬಣ್ಣನವರ ಮುಂದಿನ ಸಿನಿ ಬದುಕು ಏನಾಯಿತು..? ಎಲ್ಲವನ್ನು ವಿವರವಾಗಿ ತಿಳಿಯಲು ಓದಿ ಚಿತ್ತರಂಗ.
ಒಬ್ಬ ನಿರ್ದೇಶಕನಾಗಿ ತನ್ನ ಹಾಗೂ ಅಹಲ್ಯ ಬದುಕಿನ ಸಾಮ್ಯತೆ ಇರುವಂತಹಾ ಚಿತ್ರವನ್ನು ನಿರ್ಮಿಸುವಾಗ ಆತನ ಮನಸ್ಸಿನಲ್ಲಿದ್ದ ಉದ್ವೇಗ, ಪಾತ್ರ ಪೋಷಣೆ, ಭಾವನಾಜೀವಿಯಾಗಿದ್ದ ಸುಬ್ಬಣ್ಣನ ಪರಿ, ನೊಂದ ಜೀವವಾಗಿ ರಾಜೇಶ್ವರಿ, ಅಭಿನಯಕ್ಕಾಗಿ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಅಹಲ್ಯ ಹಾಗೂ ಕಸ್ತೂರಿ ಮಾಡಿಕೊಂಡ ತಯಾರಿಗಳು ಹಾಗೂ ಅವರ ಮಾನಸಿಕ ಸಿದ್ಧತೆಗಳು ಹೀಗೆ ಎಲ್ಲವೂ ಪರಿಪರಿಯಾಗಿ ತೆರೆದಿಟ್ಟುಕೊಂಡಿವೆ.
ಅವರ ಅಂತರಂಗವನ್ನು ತೆರೆಮರೆಯಿಂದ ಹೊರಕ್ಕೆ ಕಾಣಿಸಿದ ಪರಿ ಇಷ್ಟವಾಯಿತು. ಈ ಕಾದಂಬರಿಯಲ್ಲಿ ಬರುವ ನಿರ್ದೇಶಕರು ಹಾಗೂ ನಾಯಕಿಯರ ಕುರಿತು ಇಂತಹವರೇ ಎಂದು ಗೊತ್ತಿದ್ದರೂ.. ಅವರ ಜೀವನದ ಕಥೆ ಗೊತ್ತಿದ್ದರೂ.. ಮತ್ತೆ ಹೊಸ ಹೊಸ ಆಯಾಮಗಳಿಂದ ಕಥೆಯನ್ನು ಕಟ್ಟಿಕೊಟ್ಟಿರುವ ಕಾದಂಬರಿ ಕುತೂಹಲಕರವಾಗಿ, ಪುಸ್ತಕವನ್ನು ಕೆಳಗಿಡದಂತೆ ಓದಿಸಿಕೊಂಡು ಹೋಗುವಂತಿದೆ. ಮುಖಪುಟವೂ ಆಕರ್ಷಕವಾಗಿ, ಅರ್ಥಪೂರ್ಣವಾಗಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ