ಶುಕ್ರವಾರ, ಏಪ್ರಿಲ್ 10, 2026

ಅವಳ ನೋವಿಗೂ ಧ್ವನಿಯಿಲ್ಲ (ಅವಳ ಕವಿತೆಗಳು - 17)


 ಎಲ್ಲವನ್ನೂ ಶಕ್ತವಾಗಿ ಮಂಡಿಸುವ ಅವಳು

ನೋವನ್ನು ಮುಂದಿಡುವಾಗ ಸೋಲುತ್ತಾಳೆ

ಅವಳ ನೋವಿಗೆ ಆಳವಿದೆ, ಇತಿಹಾಸವಿದೆ

ಆದರೆ, ನೋವಿಗೊಂದು ಗಟ್ಟಿ ಧ್ವನಿಯಿಲ್ಲ


ನೋವು ಕೊಡುವ ರೀತಿಗಳು ಬದಲಾಗಿವೆ ಅಷ್ಟೇ

ತಲತಲಾಂತರದಿಂದಲೂ ನೋವಿನ ಸ್ವರೂಪ ಒಂದೇ

ಮೂಡಿಸಿದ ಘಾಸಿಯೂ ಅದೇ

ಹಿಂದಿನವರಂತೆಯೇ ಅವಳ ನೋವಿಗೂ ಧ್ವನಿಯಿಲ್ಲ


ಅವಳ ಅಮ್ಮಂದಿರ ನೋವು ಅವಳದ್ದೂ..

ಅವರಂತೆ ನಾನಾಗಲಾರೆ ಎಂದೇ ಹೇಳಿಕೊಂಡರೂ

ಅವರು ಮಾಡಿದ್ದನ್ನೇ ಅವಳೂ ಮಾಡುತ್ತಿದ್ದಾಳೆ

ಅವರಂತೆಯೇ ಸಹಿಸಿಕೊಂಡು ಸಾಗುತ್ತಿದ್ದಾಳೆ


ಉಗುರಿನಿಂದ ಉಂಟಾದ ನೋವಿಗೂ

ಕೊಡಲಿಯಿಂದ ಉಂಟಾದ ನೋವಿಗೂ

ನೋಟದಲ್ಲಷ್ಟೇ ಬದಲಾವಣೆ ತೀವ್ರತೆಯಲ್ಲಲ್ಲ

ಗಾಯ ಮಾಗಿದರೂ ಅವಳ ನೋವು ಅಳಿಯುವುದಿಲ್ಲ


ಎಲ್ಲೆಡೆಯೂ ದಾಖಲಾಗಿರುವುದು ಗಾಯಗಳಷ್ಟೇ

ನೋವು ಎಂದೂ ಎಲ್ಲಿಯೂ ದಾಖಲಾಗಿಯೇ ಇಲ್ಲ

ಹಾಗಾಗಿ ಅವಳು ನೋವನ್ನು ಕಂಡಿರಲಿಲ್ಲ

ಈಗ ಅವಳ ನೋವೂ ದಾಖಲಾಗುವುದಿಲ್ಲ


ಗಾಳಿಯಲ್ಲಿ ಅವಳ ನೋವುಗಳು ತೇಲಿ ಹೋಗುತ್ತವೆ

ಮಾತುಗಳಲ್ಲಿ ಅವಳ ನೋವುಗಳು ಕರಗಿ ಹೋಗುತ್ತವೆ

ವಂಶಪಾರಂಪರ್ಯವಾಗಿ ದಾಟಿಯೂ ಸಾಗುತ್ತವೆ

ಆದರೆ, ನೋವು ಧ್ವನಿಯಿಲ್ಲದೇ ಉಳಿದು ಹೋಗುತ್ತದೆ


ಅವಳ ನೋವು ಅವಳದ್ದು ಮಾತ್ರವಲ್ಲ

ಹಿಂದೆ ಆಗದ್ದು, ಮುಂದೆ ಆಗದಿರುವುದೂ ಅಲ್ಲ

ಆದರೂ, ಅವಳ ನೋವುಗಳ ಆಳ ಅವಳಿಗಷ್ಟೇ ಗೊತ್ತು

ಮತ್ತೆ ಎಂದಿನಂತೆ ಅವಳ ನೋವಿಗೂ ಧ್ವನಿಯಿಲ್ಲ


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ