ಸೋಮವಾರ, ಏಪ್ರಿಲ್ 13, 2026

ಕನಸಿನ ಮಧುಚಂದ್ರ (ಪುಸ್ತಕ ಯಾನ - 148)


ಪುಸ್ತಕದ ಶೀರ್ಷಿಕೆ : ಕನಸಿನ ಮಧುಚಂದ್ರ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ದ್ವಿತೀಯ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)


ಪದ್ದಮ್ಮ ಹಾಗೂ ರಾಜಾರಾಮ್ ಅವರ ಏಕೈಕ ಮುದ್ದಿನ ಪುತ್ರಿ ಸಂಗೀತ. ಆಕೆಯನ್ನು ಅವರು ರಾಜಕುಮಾರಿ ಎಂದೇ ತಿಳಿದಿದ್ದರು. ರಾಜಾರಾಮ್ ಅವರು ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೈತುಂಬ ಸಂಪಾದಿಸುತ್ತಿದ್ದರು. ಆರ್ಥಿಕವಾಗಿ ಅವರು ಶ್ರೀಮಂತರೇ. 


ಪದ್ದಮ್ಮನ ಅಣ್ಣ ಕಾಲೇಜ್ ಪ್ರಿನ್ಸಿಪಲ್ ಆಗಿ ರಿಟೈರ್ಡ್ ಆಗಿದ್ದ ಶ್ರೀನಿವಾಸ್ ಅವರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗ. ಕಾಲೇಜ್ ಲೆಕ್ಚರರ್ ಆಗಿದ್ದಾಗ ಅವರ ಪತ್ನಿ ಲಲಿತಮ್ಮನವರು ಅವರೊಂದಿಗೆ ಊರೂರು ಅಲೆಯಲು ಬರದೇ ಮಗನನ್ನು ಓದಿಸುವ ನೆಪ ಮಾಡಿಕೊಂಡು ಬೆಂಗಳೂರಿನಲ್ಲಿಯೇ ಇರುತ್ತಿದ್ದರು. ಆ ಸಂದರ್ಭದಲ್ಲಿ ಅವರಿಗೆ ನೆರವಾಗಿದ್ದದ್ದು ಅವರ ತಂಗಿ, ಪದ್ದಮ್ಮನ ಅಕ್ಕ ರಾಜಮ್ಮ. ಹೀಗಾಗಿ ರಾಜಮ್ಮನೆಂದರೆ ಶ್ರೀನಿವಾಸರಿಗೆ ಸ್ವಲ್ಪ ಹೆಚ್ಚು ಮಮತೆ.


ರಾಜಮ್ಮನ ಗಂಡ ಸರ್ಕಾರಿ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದ ಕೇಶವರಾವ್. ಇವರಿಗೆ ಸರಸ್ವತಿ ಹಾಗೂ ಪಾರ್ವತಿ ಹಾಗೂ ಜಯಲಕ್ಷ್ಮಿ ಎಂಬ ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳು. ಆರ್ಥಿಕವಾಗಿ ಶ್ರೀಮಂತರಲ್ಲದ ಕುಟುಂಬ. ಅದಾಗಲೇ ಸರಸ್ವತಿ ಹಾಗೂ ಪಾರ್ವತಿಯ ವಿವಾಹವಾಗಿ ಜಯಲಕ್ಷ್ಮಿಯ ವಿವಾಹ ಮಾತ್ರ ಬಾಕಿ ಇತ್ತು. ಅವಳು ಸಂಗೀತಳ ಒರಿಗೆಯವಳೇ..


ಶ್ರೀನಿವಾಸ ಹಾಗೂ ಲಲಿತಮ್ಮನವರ ಏಕಮಾತ್ರ ಪುತ್ರ ಹರೀಶ್ ಕಂಪ್ಯೂಟರ್ ಇಂಜಿನಿಯರ್ ಆಗಿ ವಿದೇಶಕ್ಕೆ ಹೋಗಿ ಎಂ.ಎಸ್ ಮುಗಿಸಿ ಬಂದು ತನ್ನ ಸೋದರಮಾವ ರಾಜಾರಾಮ್ ಅವರ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಒಳ್ಳೆಯ ಸಂಬಳ ತೆಗೆಯುತ್ತಿದ್ದ. ಶ್ರೀನಿವಾಸರಿಗೆ ತನ್ನ ತಂಗಿ ರಾಜಮ್ಮನ ಮಗಳಾದ ಲಕ್ಷ್ಮಿಯನ್ನು ಹರೀಶನಿಗೆ ತಂದುಕೊಳ್ಳಬೇಕು ಎಂಬ ಮನಸ್ಸಿದ್ದರೂ.. ಲಲಿತಮ್ಮ, ಪದ್ದಮ್ಮ ಹಾಗೂ ರಾಜರಾವ್ ಅವರ ಮನಸ್ಸಿನಲ್ಲಿ ಸಂಗೀತಾಳನ್ನು ಹರೀಶನಿಗೆ ಕೊಡಬೇಕು ಎಂಬ ವಿಚಾರವಿತ್ತು. ಆದರೆ, ನಿಜವಾದ ನಿರ್ಧಾರ ತೆಗೆದುಕೊಳ್ಳಬೇಕಾದದ್ದು ಹರೀಶ ತಾನೇ..?? ಈ ಕಾದಂಬರಿಯನ್ನು ಓದುವಾಗ ಹರೀಶನಿಗೆ ನಿಜವಾಗಿಯೂ ಯಾರ ಮೇಲೆ ಮನಸ್ಸಿತ್ತು ಎಂಬುದನ್ನು ನಿರ್ಧರಿಸಲು ಓದುಗರಿಗೆ ಸುಲಭವಾಗಿ ಊಹಿಸಲಾಗದಂತೆ ಕಟ್ಟಿ ಕೊಟ್ಟಿದ್ದಾರೆ. 


ಸಂಗೀತ ಹಾಗೂ ಲಕ್ಷ್ಮಿ ಇವರಿಬ್ಬರ ಶೀತಲಸಮರ ನಡೆಯುತ್ತಲೇ ಇತ್ತು

 ಮೇಲ್ನೋಟಕ್ಕೆ ಇಬ್ಬರೂ ಹೊಂದಿಕೊಂಡಂತೆ ಕಾಣುತ್ತಿದ್ದರೂ.. ಒಬ್ಬರಿಗೊಬ್ಬರು ಕಾಲೆಳೆಯುವುದಂತೂ ಇದ್ದೇ ಇತ್ತು. ಇನ್ನು ಹರೀಶನೂ ಇಬ್ಬರನ್ನೂ ಹುಡುಗಾಟಿಕೆ ಮಾಡುತ್ತಾ.. ಯಾರ ಮೇಲೆ ಮನಸ್ಸಿದೆ ಎಂಬುದನ್ನು ಬಿಟ್ಟುಕೊಡದಿದ್ದರೂ.. ತಾಯಿಯಂತೆಯೇ ಶ್ರೀಮಂತಿಕೆಯ ಆಸೆಗೆ ಸಂಗೀತಳ ಕಡೆಗೆ ಹೆಚ್ಚು ವಾಲುತಿದ್ದ.


ಹರೀಶನ ಸ್ವಾರ್ಥಕ್ಕೆ ಬಲಿ ಬೀಳದ ಲಕ್ಷ್ಮಿ.. ಬಹಳ ಉಪಾಯ ಮಾಡಿ ಅವರ ಮನೆಯ ಕೆಲಸದಿಂದ ತಪ್ಪಿಸಿಕೊಳ್ಳುತ್ತಿದ್ದಳು. ಆದರೆ, ಪಾಪದ ಸರಸ್ವತಿ ಆಕೆಯ ಗಂಡನ ಮನೆಯ ಬಡತನದಿಂದಾಗಿ ಎಷ್ಟೋ ಬಾರಿ ಅಲ್ಲಿಗೆ ಹೋಗಿ ದುಡಿಯಬೇಕಾಗಿ ಬರುತ್ತಿತ್ತು. ಆದರೆ, ಸರಸ್ವತಿಯಂತಲ್ಲದ.. ಬುದ್ಧಿವಂತೆ ಹಾಗೂ ಸಂಗೀತಳಿಗಿಂತ ರೂಪವತಿಯಾದ ಲಕ್ಷ್ಮಿ ಆಕೆಯನ್ನು ಹಂಗಿಸುತ್ತಲೇ ತನಗೆ ಒಲ್ಲದ ಕಾರ್ಯವನ್ನು ಎಂದಿಗೂ ಮಾಡುತ್ತಿರಲಿಲ್ಲ. 


ಇತ್ತ ಹಣದ ಆಸೆಗಾಗಿ ಸಂಗೀತಳ ಜೊತೆಗೆ ವಿವಾಹ ನಿಶ್ಚಯವಾಗಿದ್ದ ಹರೀಶ ಇಬ್ಬರೂ ಅದನ್ನು ಗುಟ್ಟಾಗಿಟ್ಟಿದ್ದರು. ಅಲ್ಲದೇ.. ಲಕ್ಷ್ಮಿಯೊಡನೆಯೂ ತಾನು ಸರಸದ ಮಾತುಗಳನ್ನಾಡುತ್ತಾ.. ಅವಳ ಮನಸ್ಸಿನಲ್ಲಿ ಇಲ್ಲದ ಆಸೆಯನ್ನು ಹುಟ್ಟಿಸುತ್ತಾ.. ಮದುವೆಯ ಕುರಿತು ಅದೆಷ್ಟೋ ಕನಸುಗಳನ್ನು ಹುಟ್ಟಿಸುತ್ತಲೇ ಹೋಗಿದ್ದ. ಮಾತಿನಲ್ಲಿ ಮನೆ ಕಟ್ಟುತ್ತಾ.. ಕನಸಿನ ಮಧುಚಂದ್ರದ ದರ್ಶನವನ್ನು ಮಾಡಿಸುತ್ತಿದ್ದ. ಇದೆಲ್ಲವೂ ಸಂಗೀತಾಳ ಕುಮ್ಮಕ್ಕಾಗಿತ್ತು. ತಾನು ವಿವಾಹವಾಗುವವರೆಗೂ ಲಕ್ಷ್ಮಿಗೆ ಈ ರೀತಿಯ ಆಸೆ ಹುಟ್ಟಿಸಿ ಧಿಡೀರ್ ಎಂದು ವಿವಾಹವಾಗಿ, ಆಕೆಗೆ ಮಾನಸಿಕ ತೊಂದರೆ ನೀಡಬೇಕೆಂದು ದುರ್ಬುದ್ಧಿಯ ಉಪಾಯ ಮಾಡಿದ್ದಳು ಅವಳು. 


ಜಯಲಕ್ಷ್ಮಿ ಯಾರಿಗೂ ಹೇಳದೆ ಗಾಂಧಿನಗರದಲ್ಲಿದ್ದ ಶ್ರೀ ವೆಂಕಟೇಶ್ವರ ಆಡಿಟರ್ ಸಂಸ್ಥೆಗೆ ಹೋಗಿ ಅಲ್ಲಿನ ಸಂದರ್ಶನ ಎದುರಿಸಿ, ಅಚಾನಕ್ಕಾಗಿ ಅವಳು ಮಾಡಿದ ಅದೃಷ್ಟಪರೀಕ್ಷೆಗೆ ತಕ್ಕ ಫಲ ದೊರೆತು ಕೆಲಸವೂ ಸಿಕ್ಕಿತ್ತು. ಅವರ ಮನೆಯ ಹತ್ತಿರದಲ್ಲಿ ಇದ್ದ ಗೀತಾಳ ಜೊತೆಯಾಗಿ, ದಿನನಿತ್ಯ ಬಂದು ಹೋಗಲು ಅನುಕೂಲವಾಗಿತ್ತು. ಆದರೆ, ಅಂದು ಕೆಲಸ ನೀಡಿದ ವೆಂಕಟೇಶ್ ಅವರ ಮನಸ್ಸಿನಲ್ಲಿ ಲಕ್ಷ್ಮಿಯನ್ನು ಕುರಿತು ಒಂದು ಸಣ್ಣ ಆಸೆಯೂ ಹುಟ್ಟಿತು. ಮುಂದೆ ಅವರು ಅವರಿಗೆ ವಿವಾಹದ ಕುರಿತಾಗಿ ಕೇಳಿದಾಗ ಹರೀಶನನ್ನು ಮನಸ್ಸಿನಲ್ಲಿಟ್ಟುಕೊಂಡು ಅವರನ್ನು ನಿರಾಕರಿಸಿದಳು.


ತಾನೊಂದು ಬಗೆದರೆ, ದೈವವೊಂದು ಬಗೆಯುತ್ತದೆ ಎಂಬಂತೆ.. ಗೀತಾಳ ಮನೆಗೆ ಹೋದಾಗ.. ಅಲ್ಲಿಯೇ ದುಃಖದ ಒಂದೇ ಗೋಡೆಯ ಅಂತರದಲ್ಲಿದ್ದ ಗೆಳತಿಯ ಮನೆಗೆ ಬಂದಿದ್ದ ಸಂಗೀತ ಆಡುತ್ತಿದ್ದ ಮಾತುಗಳು ಅಚಾನಕ್ಕಾಗಿ ಕೇಳಿಸಿ, ಅವಳು ಹಾಗೂ ಹರೀಶ ಸೇರಿ ನಡೆಸಿದ ದುರ್ಬುದ್ಧಿಯ ಉಪಾಯವು ಗೊತ್ತಾಗಿ, ಲಕ್ಷ್ಮಿಯ ಭ್ರಮೆ ಕಳಚಿತ್ತು. ಅಷ್ಟರಲ್ಲಾಗಲ್ಲೇ ವೆಂಕಟೇಶ ತಮ್ಮ ಸೋದರಮಾವನ ಮಗಳ ಜೊತೆಯಲ್ಲಿ ತಮ್ಮ ವಿವಾಹವನ್ನು ನಿಷ್ಕರ್ಷೆ ಮಾಡಿಕೊಂಡಾಗಿತ್ತು. ಜಯಲಕ್ಷ್ಮಿಗೆ ಎರಡೂ ಕಡೆ ವಿವಾಹ ತಪ್ಪಿ ಹೋಗಿತ್ತು. 


ಲಕ್ಷ್ಮಿ ಯಾವುದರಿಂದಲೂ ಕುಗ್ಗಲಿಲ್ಲ. ಬದಲಾಗಿ ಆಕೆ ನೇರಾನೇರವಾಗಿ ಹರೀಶನಿಗೆ ಹಾಗೂ ಸಂಗೀತಳಿಗೆ ಪಾಠ ಕಲಿಸಿದಳು. ಈ ಪ್ರಕರಣದ ನಂತರ ಸಂಗೀತಳ ಮನಸ್ಸಿಗೆ ಹರೀಶನನ್ನು ದುಡ್ಡಿಗಾಗಿಯೇ ವಿವಾಹವಾಗುತ್ತಿದ್ದಾನೆ ಎಂಬುದು ಖಚಿತವಾಗಿತ್ತು. ಅದೇ ಸಮಯಕ್ಕೆ ಅಚಾನಕ್ಕಾಗಿ ಬಂದ ತುಮಕೂರಿನ ಡಾಕ್ಟರ್ ವರವೊಂದನ್ನು ಹರೀಶನಿಗೆ ಗೊತ್ತಾಗದಂತೆ ನೋಡಲು ಹೋಗಿದ್ದರು. ಆದರೆ, ಆ ಸಂಬಂಧವೂ ಕೂಡಿ ಬರದೆ.. ಇದೆಲ್ಲಾ ಚಿತಾವಣೆಯೂ ಹರೀಶನಿಗೆ ಗೊತ್ತಾಗಿ, ಆ ಮನೆಯ ಸಂಬಂಧವು ತಪ್ಪಿತು.


ಆದರೆ, ಒಳ್ಳೆಯ ಮನಸ್ಸಿನವರಿಗೆ ಎಂದಿಗೂ ಮೋಸವಾಗುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಜಯಲಕ್ಷ್ಮಿಗೆ ಮತ್ತೊಬ್ಬರ ಪಾಲಿನ ಭಾಗ್ಯಲಕ್ಷ್ಮಿಯಾಗುವ ಅವಕಾಶ ಕೂಡಿ ಬಂದಿತ್ತು. ರಾಜೇಶನ ಮನದನ್ನೆಯಾಗುತ್ತಿದ್ದ ಲಕ್ಷ್ಮಿ ಯನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತಿದ್ದ ಪದ್ದಮ್ಮ ಹಾಗೂ ಲಲಿತಮ್ಮ ಅಷ್ಟಕ್ಕೂ ಅಲ್ಲಿಗೆ ಬಂದದ್ದು ತಮ್ಮ ತಂಗಿಯ ಅಥವಾ ನಾದಿನಿಯ ಮಗಳ ನಿಶ್ಚಿತಾರ್ಥವೆಂದಲ್ಲ. ಬದಲಾಗಿ, ಹರೀಶನಿಗೆ ಗೊತ್ತಾಗಿದ್ದ ಹುಡುಗಿ ಪದ್ಮಳ ನಿಶ್ಚಿತಾರ್ಥಕ್ಕಾಗಿ.  


ಆದರೆ, ಹರೀಶ ಹಾಗೂ ಪದ್ಮರ ನಿಶ್ಚಿತಾರ್ಥ ನಿಶ್ಚಯವಾದದ್ದು ಹೇಗೆ..?? ವೆಂಕಟೇಶ್ ಅವರು ವರ್ಷ ಮೂವತ್ತಾದರೂ.. ವಿವಾಹವಾಗದೇ ಕಾಯುತ್ತಿದ್ದವರು ಲಕ್ಷ್ಮಿಯ ನಿರಾಕರಣೆಯ ಬೆನ್ನಲ್ಲೇ ಚಂದ್ರಿಕಾಳನ್ನೇ ವಿವಾಹವಾಗಲು ಒಪ್ಪಿದ್ದು ಹೇಗೆ..?? ಪರರಿಗೆ ಕೇಡನ್ನು ಬಯಸುತ್ತಿದ್ದ ಸಂಗೀತಳಿಗೆ ಸರಿಯಾದ ಶಾಸ್ತಿಯಾಯಿತೇ..?? ಸಂಗೀತಳ ಬದುಕು ಏನಾಯಿತು..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್. ಜಿ. ರಾಧಾದೇವಿಯವರ 'ಕನಸಿನ ಮಧುಚಂದ್ರ' ಕಾದಂಬರಿಯನ್ನು.  


'ಕನಸಿನ ಮಧುಚಂದ್ರ' ಈ ಹೆಸರೇ ಸವಿಯಾಗಿದೆ. ಅಲ್ಲದೇ ಸವಿಯಾದ ಕನಸುಗಳನ್ನು ಹೊತ್ತು ತಮ್ಮ ದಾಂಪತ್ಯ ಜೀವನದ ಕುರಿತು ಹಲವಾರು ಕನಸುಗಳನ್ನು ಕಟ್ಟಿಕೊಂಡವರ ಸಿಹಿ-ಸವಿ ಕಥೆಯಾಗಬೇಕಾಗಿದ್ದ ಇದು ಮತ್ತೊಬ್ಬರಿಗೆ ಕೇಡನ್ನು ಬಯಸಿದರೆ ತಮಗೆ ಕೇಡಾಗುವುದು ಎಂಬ ಸಂದೇಶವನ್ನು ಹೇಳುತ್ತಲೇ.. ಕನಸು ಕಾಣದವರೊಂದಿಗೆ ದಾಂಪತ್ಯದ ನಂಟು ಹೀಗೂ ಕೂಡಿ ಬರಬಹುದು ಇನ್ನುವ ವಿಧಿಲೀಲೆಯಿದೆ. 


ಇಲ್ಲಿನ ನಾಯಕಿ ಮೃದು ಸ್ವಭಾವದವಳಲ್ಲ. ಬದಲಾಗಿ ನೇರವಂತಿಕೆ ಉಳ್ಳವಳು. ಅಲ್ಲದೆ, ಬಡತನದಿಂದ ದೈನ್ಯದ ಸ್ಥಿತಿಗೆ ಇಳಿದವಳಲ್ಲ. ಬದಲಾಗಿ, ದಿಟ್ಟತನದಿಂದ ಬದುಕನ್ನು ನೇರಗೊಳಿಸಿಕೊಳ್ಳಲು ಹೊರಟವಳು. ಕಾದಂಬರಿಯಲ್ಲಿ ನನಗೆ ನಾಯಕಿಯ ಪಾತ್ರ ಇಷ್ಟವಾಯಿತು. ಅಷ್ಟೇ ಅಲ್ಲದೆ, ನಾಯಕಿಯ ತಂದೆಯೂ ಯಾವುದೇ ಶ್ರೀಮಂತಿಕೆಯ ಆಸೆಗೆ ಬಲಿ ಬೀಳದೆ ಅಥವಾ ಸಂಬಂಧವೆಂಬ ಹೆಸರಿನಲ್ಲಿ.. ಹಸುವಿನ ವೇಷದ ಹುಲಿಗಳನ್ನು ಸರಿಯಾಗಿ ಗುರುತು ಹಿಡಿದು.. ಅವರಿಗೆ ತಕ್ಕ ಪಾಠ ಕಲಿಸುವ ರೀತಿಯಲ್ಲಿ ಸೂಕ್ಷ್ಮತೆಯನ್ನು ತೋರುತ್ತಾರಲ್ಲದೆ.. ಬಡತನಕ್ಕೂ ಅಂಜುವರಲ್ಲ ಎನ್ನುವುದರ ಮೂಲಕ ಬಡತನವೆಂಬುದು ತಮ್ಮ ಪಾಲಿನ ದುರ್ಬಲ ಸಂಗತಿಯಲ್ಲ ಎನ್ನುವುದನ್ನು ಸ್ಪಷ್ಟಗೊಳಿಸಿದ್ದಾರೆ. 


 ಸಂಗೀತ, ಹರೀಶನಿಗೆ ಜಯಲಕ್ಷ್ಮಿಯನ್ನು ಪ್ರೀತಿಸುವ ನಾಟಕವನ್ನು ಆಡುವಾಗ ಕಾದಂಬರಿಯಲ್ಲಿ ಯಯಾತಿ, ಶರ್ಮಿಷ್ಠೆ ಹಾಗೂ ದೇವಯಾನಿಯವರ ದೃಷ್ಟಾಂತವನ್ನು ನೀಡುವ ಸಂದರ್ಭ ಬಹಳ ಇಷ್ಟವಾಯಿತು. 

ಒಂದು ಚಂದದ ಕಾದಂಬರಿಯ ಓದನ್ನು ನಿಮ್ಮದಾಗಿಸಿಕೊಳ್ಳಲು ಓದಿ ಕನಸಿನ ಮಧುಚಂದ್ರ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ