ಸೋಮವಾರ, ಏಪ್ರಿಲ್ 13, 2026

ಪಸಾ (ಪುಸ್ತಕ ಯಾನ - 153)


ಪುಸ್ತಕದ ಶೀರ್ಷಿಕೆ : ಪಸಾ

ಲೇಖಕರು : ರಂಜನೀ ಕೀರ್ತಿ

ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್

ಪ್ರಥಮ ಮುದ್ರಣ : 2023

ಪುಟಗಳು : 136

ಬೆಲೆ : 150 ರೂ.


ಪಸಾ ರಂಜನೀ ಕೀರ್ತಿಯವರ ಚೊಚ್ಚಲ ಕಾದಂಬರಿ. ಮ್ಯೂಸಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಎಂಬ ಅಂಶ ಹಾಗೂ ಮುಖಪುಟ ಬೇಗ ಆಕರ್ಷಿಸಿತು. ಈ ಕಾದಂಬರಿಯನ್ನು ಓದುವಾಗ ಸಂಗೀತದ ಜ್ಞಾನ ಕೊಂಚವಾದರೂ ಇದ್ದರೆ ಅದು ಓದುಗರಿಗೆ ಪ್ಲಸ್ ಪಾಯಿಂಟ್ ಎನಿಸುತ್ತದೆ. ಈ ಕಾದಂಬರಿಯನ್ನು ಓದುತ್ತಿರುವಾಗ ಅಲ್ಲಲ್ಲಿ ಕೊಡುವ ಸುಳಿವುಗಳು ಸಂಗೀತದ ಆಧಾರಿತವಾಗಿವೆ. ಹಾಗೆಂದು ಸಂಗೀತದ ಜ್ಞಾನ ಇಲ್ಲದವರಿಗೆ ಕಷ್ಟವಾಗುತ್ತದೆಯಾ.. ಎಂದರೆ ಖಂಡಿತವಾಗಿಯೂ ಇಲ್ಲ. ಸಂಗೀತದ ಕುರಿತು, ರಾಗ, ತಾಳಗಳ ಬೇಸಿಕ್ ಜ್ಞಾನವನ್ನು ಅಲ್ಲಲ್ಲಿ ಕೊಟ್ಟಿದ್ದಾರೆ ಲೇಖಕಿ. 


ವಿದುಷಿ ರಂಜನೀ ಕೀರ್ತಿ ಓದಿದ್ದು ಇಂಜಿನಿಯರಿಂಗ್. ವೃತ್ತಿಪರ ಗಾಯಕಿ ಮತ್ತು ಧ್ವನಿ ಕಲಾವಿದೆ. ಇವರ ತಂತ್ರಜ್ಞಾನದ ಜ್ಞಾನ ಹಾಗೂ ಸಂಗೀತದ ಆಧಾರಿತವಾದ ಜ್ಞಾನ ಎರಡು ಮೇಳೈಸಿ ಈ ಕಾದಂಬರಿ ರೋಚಕವಾಗಿ ಸಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳ ಟೆಕ್ಸ್ಟ್ ಟು ಸ್ಪೀಚ್ ಪ್ರಾಜೆಕ್ಟ್ ಗಳಿಗೆ ಕನ್ನಡದ ಧ್ವನಿಯಾಗಿರುವ ಇವರು ವಾಯ್ಸ್ ಸಿಂಥೆಸಿಸ್ ಕುರಿತಂತೆ.. ಆಧುನಿಕ ತಂತ್ರಜ್ಞಾನದ ವಿಚಾರದಿಂದ ತಂತ್ರಜ್ಞಾನದ ಅರಿವನ್ನು ಮೂಡಿಸುತ್ತಾ ಅಪ್ಡೇಟ್ ಆಗಿರುವ ಈ ಕಾಲದ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆ.


ಪಸಾ ಎಂಬ ಕಾದಂಬರಿಯ ಶೀರ್ಷಿಕೆ ವಿಭಿನ್ನವಾಗಿದೆ. ಲೇಖಕಿಯೇ ಹೇಳುವಂತೆ ಈ ಶೀರ್ಷಿಕೆಗೆ ಕಾರಣವಿದು.

"ಕಳೆದುಕೊಂಡದ್ದು ಎಲ್ಲೋ.. ಹುಡುಕಾಟ ಶುರುವಾಗುವುದು ಇನ್ನೆಲ್ಲೋ.. ಆದ್ದರಿಂದಲೇ ಇದು ಷಡ್ಜದಿಂದ ಮೊದಲುಗೊಳ್ಳದೇ, ಪಂಚಮದಲ್ಲಿ ಪ್ರಾರಂಭವಾಗಿ ತಾರಾ ಷಡ್ಜವನ್ನು ತಲುಪುವ ಪ್ರಕ್ರಿಯೆಯಾಯಿತ. ಪಸಾ ಆಯಿತು."


2020 ರ ನವೆಂಬರ್ 16 ರಂದು ಪ್ರಮುಖ ಸುದ್ದಿ ಬಿತ್ತರವಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವಾಂಸರಾದ ಪದ್ಮಭೂಷಣ ಪುರಸ್ಕೃತ ವಿದ್ವಾನ್ ಸಾರಂಗಪಾಣಿಯವರು ಹಿಂದಿನ ದಿನ ಸಂಜೆಯಿಂದ ಕಾಣೆಯಾಗಿದ್ದರು. ಕೊಲ್ಲಾಪುರದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿ ಹೊರಟಿದ್ದ ಶಾಸ್ತ್ರಿಗಳು ಬೆಂಗಳೂರನ್ನು ಮರಳಿ ತಲುಪಿರಲಿಲ್ಲ. ಆರಂಭಿಕ ಹಂತದ ತನಿಖೆಯಿಂದ ಶಾಸ್ತ್ರಿಗಳು ಅಪಹರಣವಾಗಿರುವ ಶಂಕೆ ವ್ಯಕ್ತವಾಗಿತ್ತು. 


ಇದೆಲ್ಲಾ ಕಳೆದು ಮೂರು ವರ್ಷಗಳಾದರೂ ಶಾಸ್ತ್ರಿಗಳ ಪತ್ತೆಯಾಗಿರಲಿಲ್ಲ. ಶಾಸ್ತ್ರಿಗಳಿಗಾಗಿ ಅವರ ಶಿಷ್ಯಂದಿರು ಅಲ್ಲಲ್ಲಿ ಹುಡುಕಾಟ ನಡೆಸುತ್ತಿದ್ದರು. 2023ರ ನವೆಂಬರ್ ನಲ್ಲಿ ದಂಡಿಕಟ್ಟೆಯಲ್ಲಿ ಈ ಹುಡುಕಾಟದ ಪ್ರಕ್ರಿಯೆಗೆ ಬಿರುಸು ಸಿಕ್ಕಿತ್ತು. ಇದು ಶುರುವಾದದ್ದು ಸಂಗೀತಾ ಹಾಗೂ ರತ್ನಾಕರರಿಂದ.


ಶೃಂಗೇರಿ ಸಮೀಪದ ದಂಡಿಕಟ್ಟೆಯಲ್ಲಿ ನಡೆಯುತ್ತಿದ್ದ ಸಂಗೀತ ಸಮ್ಮೇಳನಕ್ಕೆ ಬಂದಿದ್ದವರು ಚಿಕ್ಕಪ್ಪನ ಮನೆಯಲ್ಲಿ ಉಳಿದಿದ್ದರು. ರತ್ನಾಕರ ಹಾಗೂ ಸಂಗೀತಾ ಇಬ್ಬರೂ ಅಣ್ಣ-ತಂಗಿಯರು. ಸಂಗೀತಾಳಿಗೆ 7 ವರ್ಷ ಹಾಗೂ ರತ್ನಾಕರನಿಗೆ 12 ವರ್ಷವಿದ್ದಾಗ ಅವರ ತಂದೆ-ತಾಯಿ ಅಪಘಾತದಲ್ಲಿ ತೀರಿಹೋಗಿದ್ದರು. ಶೃಂಗೇರಿಯ ನವರಾತ್ರಿ ಉತ್ಸವದಲ್ಲಿ ಚಿಣ್ಣರ ಕಾರ್ಯಕ್ರಮದಲ್ಲಿ ಹಾಡಿದ ಈ ಮಕ್ಕಳ ಪ್ರತಿಭೆಯನ್ನು ಗುರುತಿಸಿ ತಾವೇ ಕರೆದು ಆಶೀರ್ವದಿಸಿ, ಪಾಠ ಹೇಳಿಕೊಡಲು ಒಪ್ಪಿಕೊಂಡು, ದಂಡಿಕಟ್ಟೆಯಿಂದ ಬೆಂಗಳೂರಿಗೆ ಪ್ರತಿವಾರ ಪಾಠಕ್ಕೆ ಬರುವುದು ಕಷ್ಟವಾಗುತ್ತದೆ ಎಂದು ಮಕ್ಕಳ ಕಲಿಕೆ ನಿಲ್ಲಬಾರದೆಂದು ಅವರ ಮನೆಯಲ್ಲಿಯೇ ಇವರಿಬ್ಬರೂ ಇರಲು ಅವಕಾಶ ಮಾಡಿಕೊಟ್ಟು ಮಕ್ಕಳ ತಂದೆ-ತಾಯಿಯಂತೆಯೇ ಸಲಹಿದ್ದರು ಸಾರಂಗಪಾಣಿ ಶಾಸ್ತ್ರಿಗಳು ಹಾಗೂ ಅವರ ಪತ್ನಿ ಲಲಿತಮ್ಮನವರು. ತಂದೆಯ ಹಾಗಿದ್ದ ಶಾಸ್ತ್ರಿಗಳು ಅಚಾನಕ್ಕಾಗಿ ಕಾಣೆಯಾದದ್ದು ಇಬ್ಬರಿಗೂ ಘಾಸಿಯುಂಟು ಮಾಡಿತ್ತು.


ಇಬ್ಬರೂ ಚಿಕ್ಕಪ್ಪನಲ್ಲಿದ್ದ ಸಂದರ್ಭದಲ್ಲಿ.. ಸಂಗೀತಾ ವಾಕಿಂಗ್ ಗೆ ಎಂದು ಹೋಗಿದ್ದಾಗ ಒಂದು ಸುಳಿವು ಸಿಕ್ಕಿತ್ತು. ಅವಳು ಕೇಳಿದ್ದು ವಾಗಧೀಶ್ವರಿ ರಾಗದ 'ವಂದೇ ವಾಣಿ ವಾರುಣಿ' ರಚನೆಯನ್ನು. ಅದನ್ನು ರಚಿಸಿದ್ದವರು ಸ್ವತಃ ಶಾಸ್ತ್ರಿಗಳೇ. ಮೇಷ್ಟ್ರು ಕಾಣೆಯಾದ ಹಿಂದಿನ ದಿನವಷ್ಟೇ ಕೊಲ್ಲಾಪುರಕ್ಕೆ ಹೊರಡುವ ಮೊದಲು.. ಬೆಳಿಗ್ಗೆ ಇಬ್ಬರಿಗೂ ಪಾಠ ಹೇಳಿಕೊಡುವಾಗ ಆಗಷ್ಟೇ ರಚಿಸಿದ್ದ ಕೃತಿಯನ್ನು ಹೇಳಿಕೊಟ್ಟಿದ್ದರು. ಅದಾದ ನಂತರ ಕೊಲ್ಲಾಪುರದ ದೈವತ್ ನಗರದಲ್ಲಿ ಹಾಡಿದ ಪ್ರಾತ್ಯಕ್ಷಿಕೆಯಲ್ಲಿಯೂ ಅದನ್ನು ಅವರು ಹಾಡಿರಲಿಲ್ಲ. ಹಾಗಾಗಿ ಮೇಷ್ಟ್ರು ಇಲ್ಲೇ ಎಲ್ಲೋ ಇರಬಹುದೆಂಬ ಬಲವಾದ ಅನಿಸಿಕೆ ಹಾಗೂ ನಂಬಿಕೆಯಿಂದ ಸಂಗೀತಾ ರತ್ನಾಕರನನ್ನು ಕರೆಸಿಕೊಂಡಳು.


 ಇಬ್ಬರೂ ಆ ಹಾಡಿನ ಮೂಲವನ್ನು ಹುಡುಕಿಕೊಂಡು ಹೊರಟಾಗ ಸಿಕ್ಕಿದ್ದು ಮಾರ. ಆತ ಆ ಹಾಡನ್ನು ಕೇಳಿದ್ದು.. ಹಿಂದಿನ ತಿಂಗಳು ಊರದೇವರ ಜಾತ್ರೆಯನ್ನು ಮುಗಿಸಿಕೊಂಡು ತಡರಾತ್ರಿಯಲ್ಲಿ ಬರುವಾಗ. ಯಾರೋ ದೂರದಲ್ಲಿ ಏನೋ ಪೂಜೆ ಮಾಡುತ್ತಾ ಹಾಡುತ್ತಿದ್ದರು. ಮಾರ ವಿದ್ಯೆ ಕಲಿತಿರದಿದ್ದರೂ.. ಆತನ ಶಾರೀರ ಹಾಗೂ ನೆನಪಿನ ಶಕ್ತಿ ಎರಡೂ ಚೆನ್ನಾಗಿದ್ದುದರಿಂದ ಅದು ಆತನ ಮನಃಪಟಲದಲ್ಲಿ ಅಚ್ಚಳಿಯದಂತೆ ಉಳಿದು, ಆತ ಅದನ್ನೇ ಹಾಡಿದ್ದ. ಆದರೆ, ದುರಾದೃಷ್ಟಕ್ಕೆ ಮಾರ ಹಾಡಿದವರ ಮುಖವನ್ನು ನೋಡಿರಲಿಲ್ಲ. ಆ ಕಾಡಿನಿಂದ ಹುಡುಕಾಟ ಶುರು ಮಾಡುವ ಸಂದರ್ಭದಲ್ಲಿ ಅಲ್ಲಿ ಮತ್ತೊಂದು ಸುಳಿವು ಸಿಕ್ಕಿತ್ತು. 1011 ಎಂಬ ಸಂಖ್ಯೆಗಳೇ ಅವರ ಮುಂದಿನ ದಾರಿ ತೋರಿದವು.


ಮನೆಯವರೆಲ್ಲರಿಗೂ ತಿಳಿಸಿ ಇಲ್ಲಿಂದ ಹುಡುಕಾಟ ಶುರು ಮಾಡಿದರೆ ಶಾಸ್ತ್ರಿಗಳು ಸಿಕ್ಕೇ ಸಿಗುತ್ತಾರೆ ಎಂಬ ಭರವಸೆಯಲ್ಲಿ ಮಾರನನ್ನು ಜೊತೆ ಮಾಡಿಕೊಂಡು ನೆಟ್ವರ್ಕ್ ಸಿಗದ ಕಾಡಿನೊಳಗೆ ಕಾಲಿಟ್ಟಿದ್ದರು ಸಂಗೀತಾ ಹಾಗೂ ರತ್ನಾಕರ. 


ಕೆಲವು ಪವಾಡಗಳು ಒಂದೇ ದಿನ ಆಗುತ್ತವೆ ಎನ್ನುವಂತೆ ಇವರು ಇತ್ತ ಹುಡುಕಾಟಕ್ಕೆ ಹೊರಟ ತಕ್ಷಣ ರತ್ನಾಕರನ ಗೆಳೆಯ ಸುಮಂತ ಸಂಗೀತಾ ಹಾಗೂ ರತ್ನಾಕರನಿಗೆ ಕರೆ ಮಾಡಿ ಸೋತು, ರತ್ನಾಕರನ ಚಿಕ್ಕಪ್ಪನ ಮೊಬೈಲಿಗೆ ಕರೆ ಮಾಡಿದ್ದ.  ಸುಮಂತ್ ನಿಗೆ ಮೇಷ್ಟ್ರು ಅಮೆರಿಕಾದ ಪಿಟ್ಸ್ ಬರ್ಗ್ ನಲ್ಲಿದ್ದಾರೆ ಎನ್ನಿಸುತ್ತಿತ್ತು. ಅದಕ್ಕಾಗಿ ಆತನ ಮತ್ತೊಬ್ಬ ಗೆಳೆಯ ಹಾಗೂ ಶಾಸ್ತ್ರಿಗಳ ಶಿಷ್ಯನಾಗಿದ್ದ ವಿವೇಕ್ ಸಹಾಯವನ್ನು ಕೇಳಿದ್ದ.


ಸುಮಂತನಿಗೆ ಸುಳಿವು ಸಿಗಲು ಕಾರಣ ಕಳೆದ ವಾರ ನ್ಯೂಜೆರ್ಸಿಯಲ್ಲಿ ನಡೆದಿದ್ದ ಟೆಕ್ ಸಮ್ಮಿಟ್ ನ ಕೆಲವು ಕ್ಲಿಪಿಂಗ್. ಲಾವೋಜ್ ಕಂಪನಿಯ ಒಂದು ಪ್ರಾತ್ಯಕ್ಷಿಕೆ. ವಾಯ್ಸ್ ಸಿಂಥೆಸಿಸ್ ನ ಒಂದು ಪ್ರಾತ್ಯಕ್ಷಿಕೆ ಅದು.


ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂದರೆ ಕೃತಕ ಬುದ್ಧಿಮತ್ತೆಯಿಂದ ಈಗ ರೋಬೋಟ್ ಗಳು ಮನುಷ್ಯರಂತೆಯೇ ವರ್ತಿಸಲು ಶುರು ಮಾಡಿವೇ5. ತನ್ನಿಂದ ತಾನೇ ಮನುಷ್ಯರ ಆಲೋಚನಾಶಕ್ತಿ, ಮಾತು ಇವೆಲ್ಲವನ್ನೂ ರೂಡಿಸಿಕೊಳ್ಳುತ್ತಲಿವೆ. ಮೊದಮೊದಲು ರೋಬೋಟ್ ಮಾತನಾಡಿದರೆ ಯಾಂತ್ರಿಕವಾಗಿರುತ್ತಿತ್ತು. ಆದರೆ, ಸ್ಪೀಚ್ ಸಿಂಥೆಸಿಸ್ ನಿಂದ ಮನುಷ್ಯರು ಆಡುವ ಮಾತಿನಂತೆಯೇ.. ಅವುಗಳ ಮಾತು ಟ್ರೈನ್ ಆಗಿದೆ. ಅದರ ಮುಂದುವರಿದ ಭಾಗವಾಗಿ ವಾಯ್ಸ್ ಸಿಂಥೆಸಿಸ್ ಅಂದರೆ ಅವುಗಳ ಸ್ವರ ಕೂಡ ಸ್ವಾಭಾವಿಕವಾಗಿ ಮನುಷ್ಯರಂತೆಯೇ ಕೇಳುತ್ತಿದೆ. ಮನುಷ್ಯರ ಸ್ವರವನ್ನು ಅವುಗಳಿಗೆ ಟ್ರೈನ್ ಮಾಡಲಾಗುತ್ತದೆ.


ಲಾವೋಝ ಕಂಪನಿ ಹೀಗೆ ವಾಯ್ಸ್ ಸಿಂಥೆಸಿಸ್ ಟೆಕ್ನಾಲಜಿಯನ್ನು ಬಳಸಿಕೊಂಡು ರೋಬೋಟ್ ಗಳಿಂದ ಭಾರತದಲ್ಲಿ 2024ರಲ್ಲಿ ರೋಬೋಟ್ ಗಳ ಎರಡು ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ಆಯೋಜಿಸುವ ಪ್ಲಾನ್ ಇತ್ತು. ಅದರ ಚಿಕ್ಕ ಪ್ರಾತ್ಯಕ್ಷಿಕೆ ಅಂದು ನಡೆದಿತ್ತು.


ಅದರಲ್ಲಿ ಕೇಳಿ ಬಂದದ್ದು ಸಾರಂಗಪಾಣಿ ಶಾಸ್ತ್ರಿಗಳ ವರಾಳಿ ರಾಗದ ರಚನೆ. ಹೀಗೆ ಸಿಂಗಿಂಗ್ ವಾಯ್ಸ್ ಸಿಂಥೆಸೈಜರ್ ಗೆ ಬೇಕಾಗಿರುವುದು ಹಾಡುವ ಧ್ವನಿ ಅಥವಾ ಹಾಡಿನ ತುಣುಕುಗಳ ಉದಾಹರಣೆಗಳು. ಆ ಹಾಡುವ ವ್ಯಕ್ತಿಯೇ ಎದುರಿಗಿರಬೇಕಾಗಿಲ್ಲ ಎಂಬುದು ಒಂದು ಗಮನಿಸುವ ವಿಚಾರವಾದರೂ.. ಶಾಸ್ತ್ರಿಗಳು ವರಾಳಿ ರಾಗವನ್ನು ಕೊನೆಯದಾಗಿ ಹಾಡಿದ್ದು ಅವರ 16ನೇ ವಯಸ್ಸಿನಲ್ಲಿ. ಅದಕ್ಕೊಂದು ಭಾವನಾತ್ಮಕ ಕಾರಣವಿದೆ. 


ಈಗ ಕೇಳಿದ್ದು ಶಾಸ್ತ್ರಿಗಳ ಧ್ವನಿಯಾದರೂ.. ಅವರ 16ನೇ ವಯಸ್ಸಿನ ಧ್ವನಿಯಂತೂ ಹಾಗಿರಲಿಲ್ಲ. ಹಾಗಾದರೆ ಲಾವೋಜ್ ಕಂಪನಿಯೇ ಶಾಸ್ತ್ರಿಗಳನ್ನು ಅಪಹರಿಸಿರಬಹುದಾ..?? ಈ ತರ್ಕವನ್ನು ಮುಂದಿಟ್ಟುಕೊಂಡು ಸುಮಂತ್ ವಿವೇಕ್ ನನ್ನು ಸಂಪರ್ಕಿಸಿ ಶಾಸ್ತ್ರಿಗಳನ್ನು ಹುಡುಕಲು ಮುಂದಾಗಿದ್ದ.


ಏಕಕಾಲದಲ್ಲಿಯೇ ಒಬ್ಬ ವ್ಯಕ್ತಿ ಎರಡು ಕಡೆ ತನ್ನ ಗುರುತುಗಳನ್ನು ಬಿಟ್ಟಿದ್ದರು. ಹಾಗಾದರೆ, ಶಾಸ್ತ್ರಿಗಳು ಕಾಣೆಯಾಗಿದ್ದದ್ದು ಅವರ ಸ್ವಂತ ನಿರ್ಧಾರದ ಮೇಲೆಯೇ..?? ಅಥವಾ ಬೇರೆ ಯಾವುದಾದರೂ ಗುರಿ ಸಾಧನೆಗಾ..?? ಅಥವಾ ಬೇರೆ ಯಾರಾದರೂ ಅವರನ್ನು ಅಪಹರಿಸಿದ್ದರಾ..?? ರೋಚಕವಾಗಿ ಸಾಗುವ ಈ ಕಾದಂಬರಿ ಪ್ರತಿಕ್ಷಣಕ್ಕೂ ಕುತೂಹಲವನ್ನು ಮೂಡಿಸುತ್ತಾ ಸಾಗುತ್ತದೆ.


"ಸಪ್ತಸ್ವರಗಳು ಹುಟ್ಟಿರುವುದು ಪ್ರಕೃತಿಯಿಂದ. ನವಿಲಿನಿಂದ ಷಡ್ಚ, ಚಾತಕ ಪಕ್ಷಿಯಿಂದ ವೃಷಭ, ಆಡಿನಿಂದ ಗಾಂಧಾರ, ಕ್ರೌಂಚ ಪಕ್ಷಿಯಿಂದ ಮಧ್ಯಮ, ಕೋಗಿಲೆಯಿಂದ ಪಂಚಮ, ಕಪ್ಪೆಯಿಂದ ದೈವತ ಮತ್ತು ಆನೆಯಿಂದ ನಿಷಾದ ಬಂದಿದೆ ಎಂಬ ಒಂದು ನಂಬಿಕೆ."

"ಸಂಗೀತ ಹುಟ್ಟಿರುವುದು ಸಾಮವೇದದಿಂದ ಎಂದು ಕೂಡ ಹೇಳುತ್ತಾರೆ." ಹೀಗೆ ಪ್ರಕೃತಿಯ ಮಡಿಲಲ್ಲಿ ಹುಟ್ಟಿದ ಸಂಗೀತಕ್ಕೆ ಭಾಷೆಗಳ ಹಂಗಿಲ್ಲ. ಅತ್ತ ಕಾಡಿನಲ್ಲಿ ಸುಳಿವುಗಳು ದೊರಕುತ್ತಾ.. ಮಾರನ ಮುಗ್ಧತೆ, ಆತನ ಬುದ್ಧಿವಂತಿಕೆಯು ಕೆಲವೊಮ್ಮೆ ಸಂಗೀತಾ, ರತ್ನಾಕರರಿಗೆ ಅಪ್ಯಾಯಮಾನವಾದರೆ, ಕೆಲವೊಮ್ಮೆ ಗೊಂದಲ ಸೃಷ್ಟಿಸುತ್ತಾ ಸಾಗುತ್ತದೆ. ಅವರು ಹೋಗಿ ನಿಂತದ್ದು ಎಲ್ಲಿಗೆ ??


ಸುಮಂತ್ ವಿವೇಕನ ಜೊತೆಗೂಡಿ ಹುಡುಕಲು ಬಂದರೂ ನಡೆದ ಕೆಲವು ಘಟನೆಗಳು ಆತನಿಗೆ ಸತ್ಯದರ್ಶನ ಮಾಡಿಸುತ್ತವೆ. ಆ ಸತ್ಯ ಆಘಾತಕಾರಿಯೂ ಆಗಿರುತ್ತದೆ. ಆತ ಕಂಡುಕೊಂಡ ಸತ್ಯವೇನು ??


ಸಾರಂಗಪಾಣಿ ಶಾಸ್ತ್ರಿಗಳ ಹೆಂಡತಿ ಎಲ್ಲಿದ್ದರು ?? ಅಕಸ್ಮಾತ್ ಕಾಡಿಗೆ ಹೊರಡುವ ಮುನ್ನವೇ ಸುಮಂತನ ಕರೆ ರತ್ನಾಕರ ಹಾಗೂ ಸಂಗೀತಾರನ್ನು ತಲುಪಿದ್ದಿದ್ದರೆ, ಈ ಇಡೀ ಘಟನೆ ಬೇರೆಯದ್ದೇ ರೂಪ ಪಡೆಯುತ್ತಿತ್ತು. ಶಾಸ್ತ್ರಿಗಳ ಪತ್ತೆಯಾಯಿತೇ..?? ಸಂಗೀತಕ್ಕೂ.. ತಂತ್ರಜ್ಞಾನಕ್ಕೂ ಇರುವ ಸಂಬಂಧ ಶಿಷ್ಯರ ಮೇಲೆ ಬಿರಿದ ಪ್ರಭಾವಗಳೇನು..?? ಅನುಕೂಲವೇ ಅಥವಾ ಅನಾನುಕೂಲವೇ..??

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಓದಿ ಈ ರೋಚಕ ಕಾದಂಬರಿಯನ್ನು.


ಈ ಕಾದಂಬರಿ ನಿಗೂಢವಾಗಿ ರೋಚಕವಾಗಿ ಕ್ಷಣಕ್ಷಣಕ್ಕೂ ಉತ್ತರ ತಿಳಿಯುವ ಆಸೆಯನ್ನು ಹೆಚ್ಚಿಸುತ್ತಾ.. ಅಮೇರಿಕಾದಲ್ಲಿಯೂ ಹಾಗೂ ಕಾಡಿನಲ್ಲಿಯೂ ಸಾಗುತ್ತಿದ್ದರೂ.. ಕಾದಂಬರಿಯ ಅಂತ್ಯ ಊಹೆಗೆ ನಿಲುಕದ್ದು. ಲೇಖಕಿ ಕಾದಂಬರಿಯ ಕೊನೆಯನ್ನು ಓದುಗರ ಊಹೆಗೆ ಮೀರಿ ರಚಿಸಿದ್ದಾರಾದರೂ.. ಕಾದಂಬರಿಯ ಕೊನೆ ಬೇರೆ ರೀತಿಯಲ್ಲಿ ಇದ್ದಿದ್ದರೆ ಇನ್ನಷ್ಟು ಪರಿಣಾಮಕರವಾಗಿರುತ್ತೇನೋ ಎಂದೆನಿಸಿತು.


ಕಾದಂಬರಿಯ ಸಂಭಾಷಣೆಗಳು ಪರಿಣಾಮಕಾರಿಯಾಗಿ ಮೂಡಿ ಬಂದಿವೆ. ನೀಡುವ ಸುಳಿವುಗಳು ನಮ್ಮ ಆಲೋಚನಾಶಕ್ತಿಗೆ ಸವಾಲೆಸೆಯುತ್ತವೆ. ಸಂಗೀತದ ಕುರಿತ ವಿಚಾರಗಳು ಚರ್ಚೆಯಲ್ಲಿ ಬಂದರೂ ಎಲ್ಲಿಯೂ ಶುಷ್ಕವೆನಿಸುವುದಿಲ್ಲ. ಬದಲಾಗಿ ಬೆರಗು ಮೂಡಿಸುವ ಶೈಲಿಯಲ್ಲಿ ಸಾಗುತ್ತಾ ಹೋಗುತ್ತವೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ