ಪುಸ್ತಕದ ಶೀರ್ಷಿಕೆ : ಆ ವಿಜಯನಗರ
ಲೇಖಕರು : ಕೌಂಡಿನ್ಯ
ಪ್ರಕಾಶಕರು : ವಂಶಿ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2022
ಪುಟಗಳು : 192
ಬೆಲೆ : 200 ರೂ.
ವಿಜಯನಗರ ಎಂದರೆ ಮೊದಲಿಗೆ ನೆನಪಾಗುವ ಹೆಸರು ಶ್ರೀ ಕೃಷ್ಣದೇವರಾಯ. ಅಲ್ಲದೆ, "ವಿಜಯನಗರದ ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳನ್ನು ಬಳ್ಳಗಳಲ್ಲಿ ಅಳೆಯುತ್ತಿದ್ದರು" ಎನ್ನುವ ಜನಜನಿತವಾದ ಮಾತು ವಿಜಯನಗರದ ಇತಿಹಾಸದ ಕುರಿತು ತಿಳಿದುಕೊಳ್ಳುವ ಕುತೂಹಲ ಹುಟ್ಟುವಂತೆ ಮಾಡುತ್ತದೆ. ವಿಜಯನಗರ ಸಾಮ್ರಾಜ್ಯ ಕೊನೆಯದದ್ದು ಅಳಿಯ ರಾಮರಾಯನ ಆಳ್ವಿಕೆಯ ಕಾಲದಲ್ಲಿ ಎನ್ನುವ ವಿಚಾರವನ್ನು ನಾವು ಪಠ್ಯಗಳಲ್ಲಿ ಓದಿರುತ್ತೇವೆ. ಆದರೆ, ಇಲ್ಲಿನ ವಿಜಯನಗರದ ಸಾಮ್ರಾಜ್ಯದ ಇತಿಹಾಸವನ್ನು ನೋಡುವಾಗ ರಾಮರಾಯನ ನಂತರದ ರಾಜರುಗಳ ಪರಿಚಯ ಕೂಡ ಆಗುತ್ತದೆ.
ಸಿಂಹಾಸನ, ರಾಜ್ಯಾಧಿಕಾರ ಎಂಬುದು ಯಾರನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ. ಯಾರ ನಿಷ್ಠೆ ಬೇಕಾದರೂ ಬದಲಾಗುತ್ತದೆ. ಸಿಂಹಾಸನವೆಂಬುದು ಕೇವಲ ಸಂಬಂಧಿಗಳಿಗೆ ಮಾತ್ರವಲ್ಲ.. ಸುತ್ತಮುತ್ತಲಿನವರಿಗೂ ಕಣ್ಣುರಿ ತರಿಸುತ್ತದೆ. ಈ ಕುರಿತ ಎಲ್ಲಾ ಒಳಸಂಚುಗಳು ಹಾಗೂ ಜಗಳಗಳನ್ನು ಓದುಗರ ಮುಂದೆ ತೆರೆದಿಡುತ್ತಾ.. ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾ.. ಒಬ್ಬ ರಾಜಭಕ್ತ ನ ಕಥೆಯನ್ನು ಕೂಡಾ ಇಲ್ಲಿ ಹೇಳುತ್ತಾರೆ. ಆ ರಾಜ ಭಕ್ತನೇ ಎಚ್ಚಮ ನಾಯಕ. ಎಚ್ಚಮನಾಯಕನ ರಾಜನಿಷ್ಠೆ, ದೇಶಭಕ್ತಿ, ಸಾಹಸ, ಶೂರತ್ವ ಇವೆಲ್ಲವನ್ನು ಹೇಳುವಾಗ.. ಆತನ ಭಾವನೆಗಳು ನಮ್ಮನ್ನು ಸಹಾ ಕಾಡುವಂತೆ ಮಾಡುತ್ತವೆ. ಎಚ್ಚಮನಾಯಕನ ಕುರಿತಾದ ಭಾಗವನ್ನು ಸಂಭಾಷಣೆಯ ಮೂಲಕ ನಾಟಕದ ಶೈಲಿಯಲ್ಲಿ ಬರೆದಿದ್ದಾರೆ.
ಕ್ರಿಸ್ತಶಕ 1565ರ ರಕ್ಕಸತಂಗಡಿ ಅಥವಾ ತಾಳಿಕೋಟೆ ಯುದ್ಧದ ನಂತರವೇ ಶುರುವಾದದ್ದು ವಿಜಯನಗರ ಸಾಮ್ರಾಜ್ಯದ ಪತನ. ವೈಭವದಿಂದ ರಾರಾಜಿಸುತ್ತಿದ್ದ ಈ ಸಾಮ್ರಾಜ್ಯ ಪಾತಾಳಕ್ಕೆ ಕುಸಿದ ಬಗೆ ಇದೆ ಇಲ್ಲಿ. ವಿದ್ಯಾರಣ್ಯರ ಕೃಪಾಶೀರ್ವಾದದಿಂದ ಸಂಗಮ ವಂಶದ ಹಕ್ಕ ಮತ್ತು ಬುಕ್ಕರಾಯನಿಂದ ಪ್ರತಿಷ್ಠಾಪಿಸಲ್ಪಟ್ಟು ಹಂಪಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಈ ಸಾಮ್ರಾಜ್ಯವನ್ನು ಸಂಗಮ, ಸಾಳ್ವ, ತುಳುವ, ಅರವೀಡು ಎನ್ನುವ ವಂಶಗಳು ಆಳ್ವಿಕೆ ನಡೆಸುತ್ತವೆ.
ಸಂಗಮನ ಮಕ್ಕಳಾದ ಹಕ್ಕ-ಬುಕ್ಕರಿಂದ ಶುರುವಾದ ಈ ರಾಜ್ಯಕ್ಕೆ ಮೊದಲ ಹೆಸರು ವಿದ್ಯಾನಗರ ಎಂದಾಗಿದ್ದು.. ಅದರ ತದನಂತರ 'ವಿಜಯನಗರ'ವಾಯಿತು.
ಸಂಗಮ ವಂಶ ಕೊನೆಯಾಗಿ ಸಾಳ್ವ ವಂಶ ಅಧಿಕಾರಕ್ಕೆ ಬಂದ ಬಗೆ, ಅದು ಅವಸಾನಗೊಂಡು ತುಳುವ ವಂಶ ಬಂದ ಬಗೆ ಇವೆರಡಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ರಾಜ್ಯಕ್ಕಾಗಿ ಹೇಗೆ ಬೇಕಾದರೂ ನಡೆದುಕೊಳ್ಳಬಲ್ಲರು ಎನ್ನುವ ಸತ್ಯದ ಅರಿವಾಗುತ್ತದೆ ಆ ಪತನಗಳನ್ನು ನೋಡುವಾಗ.
ಇತಿಹಾಸ ಪ್ರಸಿದ್ಧನಾದ ಶ್ರೀ ಕೃಷ್ಣದೇವರಾಯ ತುಳುವ ವಂಶದ ನರಸನಾಯಕನ ಎರಡನೇ ಹೆಂಡತಿ ನಾಗಲಾಂಬಿಕೆಯ ಪುತ್ರ. ಶ್ರೀ ಕೃಷ್ಣದೇವರಾಯ ಸಿಂಹಾಸನವನ್ನು ಏರಿದ ಬಗೆಗೂ ಒಂದು ಕಥೆಯಿದೆ. ಇದಕ್ಕೆ ಪ್ರಮುಖರಾಗಿ ಕಾರಣವಾದದ್ದು 'ಅಪ್ಪಾಜಿ' ಎಂದೇ ಖ್ಯಾತರಾಗಿದ್ದ ಮಂತ್ರಿಯಾಗಿದ್ದ ತಿಮ್ಮರಸುವಿನ ಬುದ್ಧಿವಂತಿಕೆ ಹಾಗೂ ಮುಂದಾಲೋಚನೆ. ಆದರೆ, ತಿಮ್ಮರಸರ ಕಡೆಯ ದಿನಗಳನ್ನು ನೆನೆಸಿಕೊಂಡಾಗ ಪ್ರಾಮಾಣಿಕತೆಗೆ ಕಾಲವೆಲ್ಲಿದೆ ಎಂಬುದು ಪ್ರಶ್ನೆಯಾಗಿ ಕಾಡುತ್ತದೆ.
ಶ್ರೀ ಕೃಷ್ಣದೇವರಾಯನ ಮಗಳು ತಿರುಮಲಾಂಬಳನ್ನು ಮದುವೆಯಾದ ರಾಮರಾಯ.. "ಅಳಿಯ ರಾಮರಾಯ" ಎಂದೇ ಖ್ಯಾತನಾದ. ಈತನಿಂದ ಕೊನೆಯಾಯಿತು ಎನ್ನುವ ಸಾಮ್ರಾಜ್ಯದ ಯುದ್ಧ ನಡೆದಾಗ ಅಳಿಯ ರಾಮರಾಯರಿಗೆ 80 ವರ್ಷ. ಆ ವಯಸ್ಸಿನಲ್ಲಿಯೂ ರಣಭೂಮಿಯಲ್ಲಿ ಯುದ್ಧ ಮಾಡಿದ್ದ ರಾಮರಾಯ.. ಅನುಭವಿ ಸೇನಾಧಿಕಾರಿಗಳು, ಸಮರ್ಥ ಸೈನಿಕರು, ಆಧುನಿಕ ಯುದ್ಧೋಪಕರಣಗಳು, ಅಗತ್ಯ ಸಲಕರಣೆಗಳು ಎಲ್ಲವೂ ಇದ್ದರೂ ಸಹಾ ಯುದ್ಧದಲ್ಲಿ ವಿಜಯನಗರ ಪರಾಭವಗೊಂಡಿದ್ದು ಏಕೆ..?? ಸುಲ್ತಾನರ ಸಮೂಹದ ಸೈನ್ಯವನ್ನು ಎದುರಿಸುವಲ್ಲಿ ಎಡವಿದ್ದೆಲ್ಲಿ..?? ಮೊದಮೊದಲು.. ಇನ್ನೇನು ಶತ್ರು ಸೈನ್ಯವನ್ನು ಗೆದ್ದೇ ಬಿಡುತ್ತೇವೆ ಎಂದು ಆತ್ಮವಿಶ್ವಾಸದಿಂದ ನಡೆದಿದ್ದ ಸೈನ್ಯ ಧೂಳಿಪಟವಾದದ್ದೇಕೆ..? ಸುಲ್ತಾನರು ಅನುಸರಿಸಿದ ರಣತಂತ್ರ ಯಾವುದು..? ಯುದ್ಧದ ರೀತಿ ಬದಲಾದದ್ದು ಏಕೆ..?? ಅಷ್ಟಕ್ಕೂ.. ಈ ಯುದ್ಧ ನಡೆಯಲು, ರಾಮರಾಯನೇ ಒಂದು ರೀತಿಯಲ್ಲಿ ಕಾರಣವೆಂದರು ತಪ್ಪಾಗಲಾರದು. ಇದೆಲ್ಲವನ್ನು ವಿಷದವಾಗಿ ತಿಳಿಯಲು ಈ ಪುಸ್ತಕ ಓದಿ ನೋಡಿ.
ನಿಜವಾಗಿಯೂ ರಾಮರಾಯನ ಬದಲಾಗಿ ಆಡಳಿತ ನಡೆಸಬೇಕಾದದ್ದು ಸದಾಶಿವರಾಯ. ಹೆಸರಿಗಷ್ಟೇ ರಾಜನಾಗಿದ್ದ ಅವನು ನಂತರ ಆಡಳಿತದ ಮೇಲೆ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದನು.
ರಾಮರಾಯ ತಂತ್ರಗಾರಿಕೆ, ರಾಜನೀತಿಯಲ್ಲಿ ಬುದ್ಧಿವಂತನಾಗಿದ್ದರೂ ಸಹಾ ಅವನ ಕೆಲವು ತಪ್ಪುಗಳಿಂದ ಯದ್ದದಲ್ಲಿ ವಿಜಯನಗರ ಸೋತು ಹೋಯಿತು. ರಾಮರಾಯನ ಅಂತ್ಯವು ಸಹಾ ಭೀಕರವಾಗಿತ್ತು. ತಾಳಿಕೋಟೆಯ ಯುದ್ಧದ ನಂತರ ರಾಜಧಾನಿಯ ಕೇಂದ್ರವನ್ನು "ಪೆನುಗೊಂಡ"ಕ್ಕೆ ಬದಲಾಯಿಸಲಾಯಿತು.
ರಾಮರಾಯರ ಕುಟುಂಬದಲ್ಲಿ ಮೊದಲನೆಯ ಮಗ ಶ್ರೀರಂಗ. ಎರಡನೆಯವರು ರಾಮರಾಯ. ಮೂರನೆಯವರು ವೆಂಕಟಪತಿ. ವೆಂಕಟಪತಿ ಅಣ್ಣ ಶ್ರೀರಂಗರಾಯನ ನಂತರ ಆತನ ಮಗ ಇನ್ನೂ ಚಿಕ್ಕವನು ಎಂಬ ಕಾರಣಕ್ಕೆ ಆಡಳಿತ ಚುಕ್ಕಾಣಿ ಹಿಡಿದನು. ವೆಂಕಟಪತಿಗೆ 6 ಮಂದಿ ಪತ್ನಿಯರು. ಅದರಲ್ಲಿ ಮೊದಲನೆಯವಳೇ ಬಾಯಮ್ಮ. ಆಕೆಯ ಅಣ್ಣನೇ ಜಗ್ಗರಾಯ. ವೆಂಕಟಪತಿಯ ಆರು ಜನ ಹೆಂಡತಿಯರಿಗೂ ಮಕ್ಕಳಿಲ್ಲದಿದ್ದ ಸಂದರ್ಭದಲ್ಲಿ ಬಾಯಮ್ಮ ಉಪಾಯದಿಂದ ರಾಜಮಾತೆಯಾಗುವಂತಹ ಉಪಾಯವನ್ನು ಹೇಳುತ್ತಾನೆ ಜಗ್ಗರಾಯ. ಬಾಯಮ್ಮ ಕೂಡ ಹಾಗೆಯೇ ಮಾಡುತ್ತಾಳೆ. ಆಗ ಅವಳಿಂದ ಉತ್ತರಾಧಿಕಾರಿಯ ಸ್ಥಾನದಲ್ಲಿ ನಿಲ್ಲುವವನೇ ಚಿಕ್ಕರಾಯ. ವೆಂಕಟಪತಿಯ ಅಣ್ಣನ ಮಗನ ಹೆಸರು ಕೂಡ ಚಿಕ್ಕರಾಯ. ವೆಂಕಟಪತಿಗೆ ತನ್ನ ಮಗನ ಹುಟ್ಟಿನ ಕುರಿತು ಸಂಶಯವಿದ್ದರೂ.. ಅದನ್ನು ಯಾರಿಗೂ ಬಾಯಿ ಬಿಟ್ಟು ಹೇಳಿರುವುದಿಲ್ಲ. ಆದರೆ, ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡುವಾಗ ತನ್ನ ಅಣ್ಣನ ಮಗನನ್ನೇ ಆಯ್ಕೆ ಮಾಡಿ ಮರಣ ಹೊಂದುತ್ತಾನೆ. ತದನಂತರ ಜಗ್ಗರಾಯ ಉಪಾಯದಿಂದ ಆತನನ್ನು ಹಾಗೂ ಆತನ ಕುಟುಂಬವನ್ನು ಸೆರೆಯಲ್ಲಿಡಿಸಿ.. ತನ್ನ ಮಗಳನ್ನು ತಂಗಿಯ ಮಗನಾದ ಚಿಕ್ಕರಾಯನಿಗೆ ವಿವಾಹ ಮಾಡಿಸುತ್ತಾನೆ. ನಂತರ, ಉಪಾಯವಾಗಿ ಆತನನ್ನು ಹೆಸರಿಗಷ್ಟೇ ರಾಜನನ್ನಾಗಿಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾನೆ.
ಎಚ್ಚಮ ನಾಯಕನ ತಂದೆ ಕಸ್ತೂರಿ ರಂಗನಾಯಕ. ಆತನು ಕೂಡಾ ರಾಜಭಕ್ತ. ಎಚ್ಚಮನಾಯಕನಿಗೆ ರಾಜ್ಯದ ಕಥೆಯೆಲ್ಲವನ್ನೂ ಹೇಳಿದ್ದು ಕನಕ ದೇವಮ್ಮ. ವೇಲುಗೋಟಿ ಪ್ರಾಂತ್ಯದ ಅರಮನೆಯಲ್ಲಿ ದಾಸಿಯಾಗಿದ್ದ ಅವಳು ಈಗ ಎಲ್ಲರಿಗೂ ಪ್ರೀತಿಯ ಕನಕಜ್ಜಿ. ಎಚ್ಚಮ ನಾಯಕನಿಗೆ ರಾಜಭಕ್ತಿಯನ್ನು ತುಂಬುವುದರಲ್ಲಿ ಹಾಗೂ ವಿಜಯನಗರ ಸಾಮ್ರಾಜ್ಯದ ಕುರಿತು ಹೇಳಿದವರಲ್ಲಿ ಕನಕಜ್ಜಿ ಮಹತ್ವದ ಪಾತ್ರ ವಹಿಸುತ್ತಾಳೆ. ಎಚ್ಚಮ ನಾಯಕ ಬರುವುದು ಈ ವೆಂಕಟಪತಿಯ ಕಾಲಘಟ್ಟದಲ್ಲಿ. ಆತನಿಗೆ ಬಾಯಮ್ಮ ಹಾಗೂ ಜಗ್ಗರಾಯನ ಸಂಚಿನ ವಿಚಾರ ಗೊತ್ತಿರುತ್ತವೆ. ಆದರೆ, ಸತ್ಯವನ್ನು ಎಲ್ಲಿಯೂ ಹೊರಗೆಡವದೆ, ರಾಜನಿಷ್ಟನಾಗಿ ಸಿಂಹಾಸನಕ್ಕೆ ಸರಿಯಾದ ಅಧಿಪತಿಯನ್ನೇ ಅಲ್ಲಿಗೆ ಕೂರಿಸುವ ಪ್ರತಿಜ್ಞೆ ಮಾಡುವ ಅವನು ಜಗ್ಗರಾಯನನ್ನು ಎದುರು ಹಾಕಿಕೊಳ್ಳುವ ಸಂದರ್ಭವೂ ಬರುತ್ತದೆ. ಚಿಕ್ಕರಾಯನ ಜನ್ಮ ರಹಸ್ಯವೇನು..?? ಜಗ್ಗರಾಯ ಹಾಗೂ ಎಚ್ಚಮನ ತಂತ್ರ-ಪ್ರತಿ ತಂತ್ರಗಳು ಏನಾಗಿದ್ದವು..? ಜಗ್ಗರಾಯನ ಕೊನೆ ಹೇಗಾಗುತ್ತದೆ..? ಸಿಂಹಾಸನದ ಅಧಿಪತ್ಯವನ್ನು ವಹಿಸಿಕೊಳ್ಳುವವರು ಯಾರು..?? ಎಚ್ಚಮ ನಾಯಕನ ಕೊನೆಯ ದಿನಗಳು ಹೇಗಿದ್ದವು..?? ಎಲ್ಲವನ್ನೂ ತಿಳಿಯಲು ಓದಿ ನೋಡಿ ಈ ಐತಿಹಾಸಿಕ ಕಾದಂಬರಿಯನ್ನು.
ಕೃಷ್ಣದೇವರಾಯ ಹಾಗೂ ತಿಮ್ಮರಸುವಿನ ಕಾಲಘಟ್ಟದಲ್ಲಿ ತಿಮ್ಮರಸು ಕಡೆಯ ದಿನಗಳನ್ನು ಕಳೆದಂತೆಯೇ ಆಗಿ ಹೋಯಿತಾ ಎಚ್ಚಮನ ಪರಿಸ್ಥಿತಿಯೂ.. ಎಂದು ಒಂದೆಡೆ ಅನ್ನಿಸಿದರೂ.. ಪರಿಸ್ಥಿತಿಗಳು ಬೇರೆಯೇ ಇರುತ್ತವೆ. ಬಹುಶಃ, ಅದು ಸಿಂಹಾಸನದ ಮೇಲೆ ಕುಳಿತವರ ಆಡಳಿತದ ಜೊತೆಗೆ ಕುರುಡು ನಂಬಿಕೆಯ ಫಲವೂ ಆಗಿರಬಹುದು. ಬಾಯಮ್ಮ ಹಾಗೂ ಜಗ್ಗರಾಯನನ್ನು ಕಂಡಾಗ.. ಜಗ್ಗರಾಯ ತನ್ನ ತಂಗಿಯೊಡನೆ ನಡೆದುಕೊಳ್ಳುವ ರೀತಿ ಗಮನಿಸಿದರೆ ಶಕುನಿಯ ನೆನಪಾದಂತಾಗುತ್ತದೆ.
ಈ ಐತಿಹಾಸಿಕ ಕಾದಂಬರಿಯಲ್ಲಿ ಎಚ್ಚಮನನ್ನೇ ಕೇಂದ್ರವನ್ನಾಗಿಟ್ಟುಕೊಂಡು ಕನಕಜ್ಜಿ ಹಾಗೂ ಆತನ ಸಹಚರ ತಿರುವೆಂಕಟನ ಜೊತೆ ನಡೆಯುವ ಸಂಭಾಷಣೆಗಳೊಂದಿಗೆ ಹೆಚ್ಚಿನ ಕಥೆಯನ್ನು ಏಕಾಂಕದ ರೂಪದಲ್ಲಿ ಕೊಡಲಾಗಿದೆ. ಪುಸ್ತಕದ ಮೊದಲ 60 ಪುಟಗಳು ವಿಜಯನಗರ ಹಾಗೂ ಸಾಮ್ರಾಜ್ಯದ ಕುರಿತ ಮಾಹಿತಿ ಗಳಿಂದಲೇ ತುಂಬಿಹೋಗಿದೆ. ಈ ಮಾಹಿತಿಗಳು ತದನಂತರದ ಕಥೆಯಲ್ಲಿ ಬರುವುದರಿಂದ ಹೆಚ್ಚಿನ ವಿಚಾರಗಳನ್ನು ಎರಡೆರಡು ಬಾರಿ, ಕೆಲವೊಂದು ವಿಚಾರವನ್ನು ಮೂರು ಬಾರಿಯೂ ಓದಿದಂತಾಗುತ್ತದೆ. ಐತಿಹಾಸಿಕ ಕಾದಂಬರಿಯಾದರೂ ಸಹಾ ಕಾದಂಬರಿಯ ರೂಪಕ್ಕಿಂತ ನಾಟಕದ ರೂಪಕ್ಕೆ ಹೆಚ್ಚು ಸೂಕ್ತವೆನಿಸಿತು ಇದು. ವಿಜಯನಗರದ ಸಂಪೂರ್ಣ ಚಿತ್ರಣ ಇಲ್ಲಿ ಸಿಗದಿದ್ದರೂ.. ಹೆಚ್ಚಿನ ಅಂಶದ ಮಾಹಿತಿ ಕಾಣುತ್ತದೆ. ಅಲ್ಲದೆ, ಇಲ್ಲಿ ಆಕರಗಳು ಹಾಗೂ ಮಾಹಿತಿಗಳನ್ನು ಪಡೆದ ಆಧಾರಗಳನ್ನು ಸಹ ಉಲ್ಲೇಖಿಸಲಾಗಿದೆ. ಇದನ್ನು ಓದಿ ಪ್ರಾಥಮಿಕ ಮಾಹಿತಿಯನ್ನು ಪಡೆದ ನಂತರ ವಿಜಯನಗರ ಇತಿಹಾಸದ ಉಳಿದ ಪುಸ್ತಕಗಳನ್ನು ಓದಿದರೆ ಸೂಕ್ತವಾಗಬಹುದು ಎಂಬುದು ನನ್ನ ಅನಿಸಿಕೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ