ಕತೆಯಲ್ಲಿನ ರಾಕ್ಷಸರನ್ನು ಮಾತ್ರ ಕಂಡಿದ್ದಳು
ನಿಜ ಜೀವನದ ರಾಕ್ಷಸರು ಇನ್ನೂ ಭಯಂಕರ
ಸಿಕ್ಕಿಕೊಂಡರೆ ಜೀವನವಿಡೀ ಬಂಧಿಯೇ
ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!
ಸತ್ತಾಗ ಕುಕ್ಕಿ ಹರಿದು ತಿನ್ನುವ ರಣಹದ್ದುಗಳಿಂತ
ಬದುಕಿದ್ದಾಗಲೇ ಸುಲಿದು ತಿನ್ನುವ ಮನುಷ್ಯರು
ಇದ್ದ ಸುಳಿವನ್ನೇ ಬಿಡದಂತೆ ಮುಗಿಸಬಲ್ಲರು
ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!
ರಕ್ತ ಹೀರುವ ತಿಗಣೆಗಳನ್ನು ನಿವಾರಿಸಿದಂತಲ್ಲ
ಹಣಕ್ಕಾಗಿ ರಕ್ತ ಹೀರುವ ನಮ್ಮವರೆನಿಸಿಕೊಂಡವರನ್ನು
ಹೊಸಕಿ ಮುಗಿಸಿ ಮರೆತು ಬಿಡುವುದು
ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!
ತನ್ನ ಮರಿಯನ್ನೇ ಕಬಳಿಸುವ ಪ್ರಾಣಿಗಳಿವೆಯಂತೆ
ತನ್ನ ಮಗುವನ್ನೇ ಕಬಳಿಸುವ ಮನುಷ್ಯರಿರುತ್ತಾರಾ
ಸ್ವಾರ್ಥಕ್ಕಾಗಿ ಏನೆಲ್ಲವನ್ನೂ ಮಾಡುವವರಿರುತ್ತಾರೆ
ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!
ಚಿಕ್ಕಂದಿನಲ್ಲಿ ಕಂಡಂತೆ ಒಳ್ಳೆಯತನ ಮಾತ್ರವಿರುವುದಿಲ್ಲ
ಬೆಳೆದಂತೆ ಇದ್ದ ಸಕಾರಾತ್ಮಕತೆ ಮಾತ್ರ ಇರುವುದಿಲ್ಲ
ಗೋಮುಖ ವ್ಯಾಘ್ರರು ಹೊಂಚು ಹಾಕುತ್ತಿರುತ್ತಾರೆ
ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!
ಮುಗ್ಧತೆಯನ್ನೇ ಪೆದ್ದುತನವೆಂದುಕೊಳ್ಳುವವರು
ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವವರು
ಹಾಗೆ, ಹೀಗೆ, ಹೇಗೂ ಇರುತ್ತಾರೆ ಮನುಷ್ಯರು
ಅವಳಿಗದು ಗೊತ್ತಿರಲಿಲ್ಲ.. ಗೊತ್ತಾಗುತ್ತಿದೆ..!
ಅಪ್ಪ-ಅಮ್ಮ ತೋರಿದ ಒಳ್ಳೆಯ ಜಗತ್ತಿನಲ್ಲಿ
ಒಳ್ಳೆಯವರಿಗೆ ಒಳ್ಳೆಯವರೇ ಸಿಗುತ್ತರಾ
ಹೀಗೆಯೇ ಇರಬೇಕೆಂಬ ನಿಯಮವೆಲ್ಲಿದೆ
ಅವಳಿಗದು ಗೊತ್ತಿರಲಿಲ್ಲ ಗೊತ್ತಾಗುತ್ತಿದೆ
ಅವಳಿಗದು ಗೊತ್ತಿರಲಿಲ್ಲ ಎಂದ ಮಾತ್ರಕ್ಕೆ
ಇಂತಹವು ಹಿಂದೆ ಇರಲೇ ಇಲ್ಲವೆಂದಲ್ಲ
ಇಲ್ಲವೇ, ಈಗೀಗ ಸೃಷ್ಟಿಯಾದದ್ದೂ ಅಲ್ಲ
ಆದರೆ, ಅವಳಿಗದು ಗೊತ್ತಿರಲಿಲ್ಲ ಅಷ್ಟೇ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ