ಪುಸ್ತಕದ ಶೀರ್ಷಿಕೆ : ಚಿನ್ನದ ಹುಡುಗಿ ಚಿನ್ನಮ್ಮ
ಲೇಖಕರು : ಆರ್.ವಿ. ಭಂಡಾರಿ
ಪ್ರಕಾಶಕರು : ಬಂಡಾಯ ಪ್ರಕಾಶನ
ಪ್ರಥಮ ಮುದ್ರಣ : 2007
ದ್ವಿತೀಯ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 68
ಬೆಲೆ : 40 ರೂ.
ಲೇಖಕರಾದ ರೋಹಿದಾಸ ವಿಠ್ಠಲ ಭಂಡಾರಿಯವರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ 1936 ಮೇ 5ರಂದು ಜನಿಸಿದರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಶಿಶು ಸಾಹಿತ್ಯಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳು: ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಚಿನ್ನದ ಹುಡುಗಿ ಚಿನ್ನಮ್ಮ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ಭೋಸ್, ಇಟ್ಟ ಹೆಜ್ಜೆ ಮುಂದಕೆ, ಆಡು ಬಾ ಹಾಡು ಬಾ, ಋತುಗೀತಗಳು, ಮಕ್ಕಳು ಮತ್ತು ಜಗತ್ತು, ಕನ್ನಡದಲ್ಲಿ ಇಂಗ್ಲೀಷ್ ವ್ಯಾಕರಣ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
'ಚಿನ್ನದ ಹುಡುಗಿ ಚಿನ್ನಮ್ಮ' ಇದು ಮಕ್ಕಳಿಗಾಗಿ ಬರೆದ ನೀಳ್ಗತೆ. ಶೀರ್ಷಿಕೆಯಲ್ಲಿ ಚಿನ್ನದ ಹುಡುಗಿ ಎಂದು ಕಂಡಾಗ ಮೊದಲಿಗೆ ತಲೆಗೆ ಬಂದದ್ದು 'ಚಿನ್ನದ ಹುಡುಗಿ' ಎಂದೇ ಖ್ಯಾತಿಯಾಗಿರುವ ಪಿ.ಟಿ ಉಷಾ. ಈ ಕಥೆ ಮಕ್ಕಳಿಗೆ ಕ್ರೀಡಾಸ್ಫೂರ್ತಿ ನೀಡುವ ಹುಡುಗಿಯದ್ದಿರಬಹುದಾ.. ಎಂದು. ಒಂದರ್ಥದಲ್ಲಿ ಇದು ಹೌದಾದರೂ.. ಇನ್ನೂ ಹೆಚ್ಚಿನ ಸ್ಫೂರ್ತಿಯನ್ನೂ ನೀಡುತ್ತದೆ.
ಚಿನ್ನಮ್ಮ 6-7 ವರ್ಷದ ಹುಡುಗಿಯಾಗಿದ್ದಾಗಲೇ ತನ್ನ ತಾಯಿಯಿಂದ ದೂರ ಇರಬೇಕಾದ ಪ್ರಸಂಗ ಬರುತ್ತದೆ. ಅದಕ್ಕೆ ಕಾರಣವೆಂದರೆ ಬಡತನ. ಕನ್ನೆ ಮುಕ್ರಿಯೂ ವಿಧಿ ಇಲ್ಲದೇ ಮಗಳನ್ನು ಗಾಯತ್ರಮ್ಮನ ಜೊತೆಗೆ ಅವರ ಮನೆಕೆಲಸಕ್ಕೆಂದು ಕಳುಹಿಸಿಕೊಡುತ್ತಾಳೆ. ಹೊನ್ನಾವರವನ್ನೂ ನೋಡಿರದ ಹಳ್ಳಿ ಹುಡುಗಿ ಚಿನ್ನಮ್ಮ ಹುಬ್ಬಳ್ಳಿಯ ಗಾಯತ್ರಿಯ ಮನೆ ಸೇರಿ ಅವರ ಮನೆಯಲ್ಲಿದ್ದ ಗಾಯತ್ರಮ್ಮನ ಮಗ ರಾಜೀವನಿಗೂ.. ಗಂಡ ಶೇಷಪ್ಪನಿಗೂ ಅಚ್ಚುಮೆಚ್ಚಾಗುತ್ತಾಳೆ.
ತನ್ನ ಪುಟ್ಟ ಮಗುವನ್ನು ನೋಡಿಕೊಳ್ಳಲು ಕರೆದುಕೊಂಡ ಚಿನ್ನಮ್ಮ ನಿಧಾನವಾಗಿ ಆ ಮನೆಯ ಎಲ್ಲಾ ಕೆಲಸಗಳನ್ನೂ ಆವರಿಸಿಕೊಂಡಳು. ಗಾಯತ್ರಿ ಎಲ್ಲವನ್ನೂ ಆಕೆಯ ಮೇಲೆ ಹೊರಿಸಿದಳು ಎಂದರೂ ತಪ್ಪಾಗಲಾರದು. ರಾಜೀವನಿಗಿಂತ ಒಂದೆರಡು ವರ್ಷ ದೊಡ್ಡವಳಾಗಿದ್ದು.. ರಾಜೀವನಿಗೆ ಎಲ್ಲಾ ಪಾಠಗಳನ್ನು ಕಲಿಸುತ್ತಾ.. ಹಿರಿಯಕ್ಕನಂತೆ ಕಾದವಳು.
ಮಗು ಕೈಗೂಸಾಗಿದ್ದಾಗ ಬಂದ ಚಿನ್ನಮ್ಮ ಮತ್ತೆ ವಾಪಾಸ್ಸು ಹೊರಟದ್ದು ಆರೇಳು ವರ್ಷಗಳ ನಂತರ. ಓದನ್ನು ಬಿಟ್ಟಿರದ ಚಿನ್ನಮ್ಮ ಮರಳಿ ಶಾಲೆಗೆ ಹೋದಳು. ಚಿನ್ನಮ್ಮನ ಓದಿಗೆ ಪ್ರೋತ್ಸಾಹ ನೀಡುತ್ತಿದ್ದದ್ದು ಯಾರು..?? ಈ ನಡುವೆ ಆಕೆ ಕಲಿತ ವಿದ್ಯೆಗಳೇನು..?? ಆಕೆ ರಾಜೀವನಿಗೆ ಪ್ರೋತ್ಸಾಹಿಸಿ ಬದಲಾಯಿಸಿದ ವಿಚಾರಗಳು ಯಾವುವು..?? ಅವಳ ಓದು ತಡೆ ಇಲ್ಲದೇ ಸಾಗಿತೇ..?? ಕ್ರೀಡೆಯಲ್ಲಿ ಆಕೆ ಆಯ್ದುಕೊಂಡು ಸಾಧಿಸಿದ ಕ್ರೀಡೆ ಯಾವುದು..?? ಎಲ್ಲಾ ಕುತೂಹಲಗಳಿಗೂ ಉತ್ತರ ತಿಳಿಯಲು ಓದಿ 'ಚಿನ್ನದ ಹುಡುಗಿ ಚಿನ್ನಮ್ಮ'.
ಇಲ್ಲಿ ಬಾಲಕಾರ್ಮಿಕ ಪದ್ದತಿಯ ಕುರಿತು ಸಮಜಾಯಿಷಿ ನೀಡಿದ್ದರೂ.. ಅನಿವಾರ್ಯತೆಗೆ ಸಿಲುಕಿ ಅಂತಹಾ ಬದುಕು ದೊರೆತರೂ ಮೇಲೆರಬಹುದಾದ ಪರಿ ಕಾಣುತ್ತದೆ. ಎಷ್ಟೇ ಬೆಂಕಿಯಲ್ಲಿ ಬಿದ್ದರೂ ಹೊಳೆವ ಚಿನ್ನದಂತೆ ಇರುವ ಚಿನ್ನಮ್ಮನ ವ್ಯಕ್ತಿತ್ವವನ್ನು ರೂಪಿಸಿದ್ದಾರೆ.
ಮಕ್ಕಳಿಗೆ ಬೇಕಾದ ಜೀವನ ಮೌಲ್ಯ, ಪಾಠಗಳನ್ನು ಇಲ್ಲಿ ಚಿನ್ನಮ್ಮನ ಮೂಲಕ ಹೇಳುತ್ತಾ.. ಕೆಳವರ್ಗದ ಹಳ್ಳಿ ಹುಡುಗಿಯೊಬ್ಬಳು ಅಷ್ಟು ಸಾಧನೆ ಮಾಡಲು ಸಾಧ್ಯವಾದ ಕೆಚ್ಚಿನ ಕತೆಯೊಂದನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದ್ದಾರೆ ಲೇಖಕರು. 4- 5 ನೇ ತರಗತಿ ಮೇಲ್ಪಟ್ಟ ಮಕ್ಕಳು ಓದಬಹುದಾದ ಸ್ಫೂರ್ತಿದಾಯಕ ಪುಸ್ತಕ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ