ಪುಸ್ತಕದ ಶೀರ್ಷಿಕೆ : ಮನಸುಗಳ ಮಿಲನ
ಲೇಖಕರು : ಸುಮಾ ಉಮೇಶಗೌಡ
ಪ್ರಥಮ ಮುದ್ರಣ : 2023
ಪುಟಗಳು : 92
ಈ ಕಾದಂಬರಿಯ ಮುಖಪುಟ ಹಾಗೂ ಶೀರ್ಷಿಕೆಯನ್ನು ಗಮನಿಸಿದಾಗ ಮೊದಲ ಬಾರಿಗೆ ಇದು ಪ್ರೇಮ ಕಥೆ ಅಥವಾ ಕೌಟುಂಬಿಕ ಕಥೆ ಎನಿಸುವುದು ಹೌದು. ಹಾಗೆಂದು, ಕೇವಲ ಪ್ರೇಮ ಕಥೆಯ ಚೌಕಟ್ಟಿನಲ್ಲಿ ಮಾತ್ರ ನಿಲ್ಲುವುದಿಲ್ಲ ಈ ಕಾದಂಬರಿ. ಬದಲಾಗಿ, ಹೆಣ್ಣು ಮಕ್ಕಳು ವಿದ್ಯೆ ಕೊಂಚ ಕಡಿಮೆಯಿದ್ದರೂ.. ಸ್ವಾವಲಂಬನೆಯಿಂದ ತನ್ನ ಬದುಕನ್ನು ರೂಪಿಸಿಕೊಳ್ಳುವ ಬಗ್ಗೆ ಹಾಗೂ ವಿದ್ಯೆಯನ್ನು ಮೀರಿದ ಕಲಿಕೆಯ ಮಹತ್ವವನ್ನು ತೆರೆದಿಡುತ್ತದೆ. ಸುಮಾ ಉಮೇಶ್ ಗೌಡ ಅವರ ಚೊಚ್ಚಲ ಕಾದಂಬರಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕ ಕಾದಂಬರಿ.
ಉಷಾಳ ಕನಸಿನ ರಾಜಕುಮಾರನ ಬಯಕೆಯಂತೆಯೇ ಆಕೆಗೆ ಆತ ಜೊತೆಯಾಗಿದ್ದ. ಆತನೇ ಕಿರಣ್. ಅದು ಉಷಾ ಪಾಲಿಗೆ ಒಂದು ರೀತಿಯ ಪ್ರೇಮ ವಿವಾಹವಾದರೂ.. ಕಿರಣ್ ಆಕೆಯನ್ನು ಪ್ರೇಮಿಸುತ್ತಿರಲಿಲ್ಲ. ಹಾಗೆಂದು ಪ್ರೇಮವಿರಲಿಲ್ಲ ಎಂದರ್ಥವಲ್ಲ. ಆತನಿಗೆ ಆಕೆಯ ಬಗ್ಗೆ ಎಲ್ಲವೂ ಗೊತ್ತಿರದಿದ್ದರೂ.. ಆಕೆಯ ಪರಿಚಯವಂತೂ ಇದ್ದಿತು.
ಕಿರಣ್ ತನ್ನ ತಾಯಿ ಸುನಂದ ಹಾಗೂ ತಂದೆ ಜಗನ್ನಾಥ್ ಅವರ ಮಾತಿಗೆ ಬೆಲೆ ಕೊಟ್ಟು ಆಕೆಯನ್ನು ವಿವಾಹವಾಗಿದ್ದ. ಮೊದಲ ರಾತ್ರಿಯಂದು ಎಲ್ಲವೂ ಸರಿಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಆತನ ತಂದೆ-ತಾಯಿಗೆ ಎಲ್ಲವೂ ಸರಿ ಇಲ್ಲ, ಸರಿಯಾಗಲಿಲ್ಲ ಎನ್ನುವುದು ಅರ್ಥವಾಗಿತ್ತು. ಆತ ಹಾಗೆಂದು ಬೇರೆ ಹುಡುಗಿಯನ್ನು ಆಸೆ ಪಟ್ಟಿರಲಿಲ್ಲವಾದರೂ.. ತನಗೆ ಹೆಂಡತಿಯಾಗುವವಳ ಕುರಿತು ಒಂದೇ ಒಂದು ನಿರೀಕ್ಷೆ ಇತ್ತು. ಅದೇನೆಂದರೆ, ಆತ ಮದುವೆಯಾಗುವ ಹುಡುಗಿಗೆ ಕನಿಷ್ಠ ಡಿಗ್ರಿಯಾದರು ಇರಬೇಕಿತ್ತು. ಉಷಾಳ ಓದು ಪಿ.ಯು.ಸಿಗೆ ಮುಗಿದಿತ್ತು. ಮನೆ ಬಿಟ್ಟು ಹೊರಟವನನ್ನು ತಡೆದಿದ್ದ ಉಷಾ ತಾನೇ ಮನೆ ಬಿಟ್ಟು ಹೊರಟಿದ್ದಳು.
ಹಾಗೆಂದು, ಉಷಾಳ ಬದುಕು ಹೂವಿನ ಹಾಸಿಗೆಯಾಗಿರಲಿಲ್ಲ. ಉಷಾಳ ತಾಯಿ ಶೈಲಜಾ ಈಗ ಬದುಕಿರಲಿಲ್ಲ.
ಸುನಂದ ಹಾಗೂ ಶೈಲಜಾ ಬಾಲ್ಯದ ಗೆಳತಿಯರು. ಶೈಲಜಾ ಊರ ಗೌಡನ ಮಗಳಾದರೆ ಸುನಂದ ಆ ಮನೆಯ ಕೂಲಿಕಾರನ ಮಗಳು. ಸಿರಿವಂತಿಕೆಯ ಪರಿವೇ ಇಲ್ಲದ ಮಕ್ಕಳಿಬ್ಬರ ಸ್ನೇಹ ಗೌಡನ ಕಣ್ಣು ಕುಕ್ಕಿತ್ತು. ಆಗಲೇ ಆಕೆಯ ತಂದೆಯನ್ನು ಕರೆದು ಅವಳು ಓದಿದ್ದು ಸಾಕು ಎನ್ನುತ್ತಾ ಆತನ ಮೇಲೆ ದಬ್ಬಾಳಿಕೆ ನಡೆಸಿದ್ದ. ಗೌಡರ ಹೆಂಡತಿ ಇದಕ್ಕೆ ಮರುಗಿದ್ದರಾದರೂ.. ಅವರ ಕೈಲಿ ಹೆಚ್ಚೇನೂ ಮಾಡುವಂತಿರಲಿಲ್ಲ. ಆದರೆ ಶೈಲಜಾಳ ದೆಸೆಯಿಂದ ಸುನಂದ ಆದಾಗಲೇ ಹೈಸ್ಕೂಲು ಮುಗಿಸಿದಳು. ಆದರೆ, ಅವಳ ಪುಣ್ಯವೇನೋ ಎಂಬಂತೆ ತಾಯಿಯ ರೂಪದಲ್ಲಿ ಸಿಕ್ಕ ಅತ್ತೆ ಹಾಗೂ ಲಾಯರ್ ಆಗಿದ್ದ ಗಂಡ ದೊರೆತು ಎಸ್.ಎಸ್.ಎಲ್.ಸಿ ಮುಗಿಸಿ ಅನಿವಾರ್ಯವಾಗಿ ಸಂಸಾರದಲ್ಲಿ ತೊಡಗಿದಳು.
ಕಾಲ ಹಾಗೆಯೇ ಇರುವುದಿಲ್ಲ. ಶೈಲಜಾಳ ತಾಯಿ ತೀರಿಕೊಂಡ ನಂತರ ಶೈಲಜಾಳ ಬದುಕು ಅತ್ತಿಗೆಯರ ದೆಸೆಯಿಂದ ನರಕವಾಗಿತ್ತು. ಆ ಮನೆಯಲ್ಲಿ ಗೌಡರಿಗೆ ಬೆಲೆ ಇಲ್ಲದಂತಾಗಿತ್ತು. ಹೇಗೋ ಅವಳಿಗೆ ಮದುವೆಯಾದರೆ ಸಾಕು ಎಂದಿದ್ದರು ಗೌಡರು. ಕಾಟಾಚಾರಕ್ಕೆ ಜನರ ಬಾಯಿಗೆ ಹೆದರಿ ಅಣ್ಣಂದಿರು ತಂಗಿಯ ಮದುವೆ ಮಾಡಿದರು. ಅದು ಶೈಲಜಾಳಿಗೆ ಎರಡನೇ ಸಂಬಂಧ. ಹೇಮಯ್ಯನಿಗೆ ಆದಾಗಲೇ ಮದುವೆಯಾಗಿ ಇಬ್ಬರು ಹೆಣ್ಣುಮಕ್ಕಳಿದ್ದರೂ ಗಂಡು ಮಕ್ಕಳ ಆಸೆಗೆ ಶೈಲಜಾಳನ್ನು ಮದುವೆಯಾಗಿದ್ದ. ಸವತಿಯ ಕಿರುಕುಳದಲ್ಲಿ ನಲುಗಿದ್ದ ಆಕೆ ಉಷಾಳನ್ನು ಹೆತ್ತು ತೀರಿಕೊಂಡಿದ್ದಳು. ಶೈಲಜಾಳ ಅತ್ತೆ ಹೇಗೋ ಉಷಾಳನ್ನು ಬೆಳೆಸಿ ದೊಡ್ಡವಳನ್ನಾಗಿಸಿದ್ದಳು.
ಗೆಳತಿಯ ಸಾವು ಸುನಂದಾಳನ್ನು ಸಂಪೂರ್ಣವಾಗಿ ಕುಗ್ಗಿಸಿತ್ತು. ಆಗ ಆಕೆಯೇ ಜಾತಿ,ಅಂತಸ್ತು ಎಲ್ಲವನ್ನು ಬದಿಗೊತ್ತಿ ನಮ್ಮ ಮಗ ಕಿರಣ್ ಗೆ ಶೈಲಜಾಳ ಮಗಳು ಉಷಾಳನ್ನು ತಂದುಕೊಂಡು ಗೆಳೆತನವನ್ನು ಮುಂದುವರಿಸುವ ಆಲೋಚನೆ ಮಾಡಿದ್ದಳು. ಆ ಮಗುವಿನ ಬಾಳು ಕೂಡಾ ತನ್ನ ತಾಯಿಯಂತಾಗಬಾರದು ಎಂಬ ದೂರಲೋಚನೆಯಿಂದ ಚಿಕ್ಕ ಮಕ್ಕಳಲ್ಲಿಯೇ ಕನಸು ಕಂಡಿದ್ದಳು ಸುನಂದಾ. ತಮ್ಮ ಮಕ್ಕಲ ಜೊತೆಯಲ್ಲೇ ಒಡನಾಟವಿಟ್ಟುಕೊಂಡಿದ್ದ ಉಷಾ ಹಾಗೂ ಕಿರಣ್, ಪಲ್ಲವಿ ಬೆಳೆಯುತ್ತಿರುವವರಷ್ಟರಲ್ಲಿಯೇ ಉಷಾ ತಂದೆ ಮೈಸೂರಿಗೆ ಸ್ಥಳ ಬದಲಾಯಿಸಿದ್ದರು.
ಉಷಾಳ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಕಿರಣ್ ಮೂಡಿದ್ದನು. ಆದರೆ, ಕಿರಣ್ ತನ್ನ ಓದಿನ ಕಡೆ ಹೆಚ್ಚಿನ ಗಮನಹರಿಸಿದ್ದನಾದ್ದರಿಂದ ಆತನಿಗೆ ಉಷಾಳ ನೆನಪು ಅಷ್ಟಾಗಿರಲಿಲ್ಲ. ಹಾಗೂ-ಹೀಗೂ ಹೋಗಿ ಬಂದು ಮಾಡುತ್ತಿದ್ದ ಸುನಂದ ತನ್ನ ಭಾವಿ ಸೊಸೆಯನ್ನು ಮುಚ್ಚಟ್ಟೆ ಮಾಡುತ್ತಿದ್ದರು.
ಉಷಾಳ ಮಲತಾಯಿ ಜಯಂತಿ ಸುನಂದಾಳನ್ನು ಹೋದಾಗಲೆಲ್ಲ ಉಪಚರಿಸುತ್ತಿದ್ದದರ ಹಿಂದೆ ಒಂದು ಕೆಟ್ಟ ಉದ್ದೇಶವಿತ್ತು. ಉಷಾಳ ಬದಲಾಗಿ ಅವಳಿಗಿಂತ ಎರಡು ವರ್ಷ ದೊಡ್ಡವಳಾಗಿದ್ದ ತನ್ನ ಮಗಳು ಸೌಂದರ್ಯಳನ್ನು ಕಿರಣ್ ಗೆ ಕೊಡಲು ಉಪಾಯ ಮಾಡಿದಳು. ಆದರೆ, ಸುನಂದಾಳ ಬುದ್ಧಿವಂತಿಕೆಯ ಎದುರು ಜಯಂತಿಯ ಆಸೆ ನಡೆಯುವಂತಿರಲಿಲ್ಲ.
ಕಿರಣ್ ನ ಆಸೆ ಜಯಂತಿಗೆ ಅರಿವಿತ್ತು. ಹಾಗಾಗಿ ಬಹಳ ಬುದ್ಧಿವಂತಳಾಗಿದ್ದ ಉಷಾಳ ಓದನ್ನು ಮೊಟಕುಗೊಳಿಸಿದ್ದಳು. ಜಯಂತಿಯ ಮಕ್ಕಳು ಸಹಾ ಕುಕೃತ್ಯಯಲ್ಲಿ ಅವಳಿಗಿಂತ ಕಡಿಮೆಯೇನಿರಲಿಲ್ಲ. ಹೇಮಯ್ಯನೂ ತಾಯಿ ಇಲ್ಲದ ಮಗಳೆಂದು ಪ್ರೀತಿಸುತ್ತಿರಲಿಲ್ಲ. ಅಜ್ಜಿಯೂ ಬದುಕಿರಲಿಲ್ಲ. ಆದರೆ, ಸುನಂದ ಹಾಗೂ ಜಗನ್ನಾಥರ ಮನಸ್ಸು ಅದಾಗಲೇ ಉಷಾಳನ್ನು ತಮ್ಮ ಸೊಸೆಯೆಂದು ಸ್ವೀಕರಿಸಿಯಾಗಿತ್ತು.
ಆದರೆ, ಉಷಾಳನ್ನು ಕಿರಣ್ ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲಿಯೂ ಅವರು ಹೂಡಿದ್ದ ದೊಡ್ಡ ನಾಟಕದಿಂದ ಪಾರದಳು ಉಷಾ. ಕಿರಣ್ ತನ್ನ ತಾಯಿಯ ಮಾತಿಗೆ ಬೆಲೆ ಕೊಟ್ಟು ತರಾತುರಿಯಲ್ಲಿ ಉಷಾಳನ್ನು ವಿವಾಹವಾಗಬೇಕಾಗಿ ಬಂದಿತ್ತು. ಆತ ಉಷಾ ಡಿಗ್ರಿ ಓದುತ್ತಿರುವವಳೆಂದೇ ತಿಳಿದಿದ್ದನು. ಆಕೆಯ ಓದು ನಿಂತಿದ್ದ ವಿಚಾರವೂ ತಿಳಿದಿರಲಿಲ್ಲ. ವಿವಾಹದ ನಂತರ ಅದೆಲ್ಲವೂ ತಿಳಿದಾಗ ಆತ ಸಿಡಿದೆದ್ದನು.
ದಾಂಪತ್ಯದಲ್ಲಿ ಇಬ್ಬರ ಮನಸ್ಸುಗಳೂ ಮಿಲನವಾಗದಿದ್ದರೆ.. ಆ ಏಳು ಹೆಜ್ಜೆಗೆ, ಮೂರು ಗಂಟಿಗೆ ಅರ್ಥವೇ ಇರುವುದಿಲ್ಲ. ಸುನಂದ, ಜಗನ್ನಾಥ್ ಹಾಗೂ ಪಲ್ಲವಿ ಯಾರ ಮಾತಿಗೂ ಬೆಲೆ ಕೊಡದೆ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದ. ಕಿರಣ್ ಮನೆಯಿಂದ ಹೊರಟ ಉಷಾ ಸುಮ್ಮನೆಯಂತೂ ಕೂರಲಿಲ್ಲ. ಇತ್ತ ಕಿರಣ್ ಆಕೆ ಮನೆ ಬಿಟ್ಟು ಹೋದ ನಂತರ ಆಕೆಯ ಅನುಪಸ್ಥಿತಿಯನ್ನು ಅನುಭವಿಸುತ್ತಿದ್ದ. ಆದರೂ, ಬಹಿರಂಗವಾಗಿ ಉಷಾಳನ್ನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ.
ವಿವಾಹ ಆದೆಷ್ಟು ವೇಗವಾಗಿ ನಡೆಯಿತೋ.. ವಿಚ್ಛೇದನದ ಪರಿಸ್ಥಿತಿಗೂ ಅಷ್ಟೇ ವೇಗವಾಗಿ ತಲುಪಿತ್ತು. ಇತ್ತ ಜಯಂತಿಗೆ ಸೌಂದರ್ಯಳನ್ನು ಮತ್ತೆ ಆತನಿಗೆ ವಿವಾಹ ಮಾಡುವ ಮನಸ್ಸಿತ್ತು. ಪರಿಸ್ಥಿತಿಯ ಲಾಭ ಪಡೆಯುವವರು ಬಹಳಷ್ಟು ಜನರಿದ್ದರು. ಆದರೆ, ಮನಸ್ಸುಗಳ ಮಿಲನವಾಗುವುದು ಅಷ್ಟು ಸುಲಭವಲ್ಲ. ಆದರೆ, ಮನಸ್ಸುಗಳ ಮಿಲನವಾದಂತಹಾ ವಿವಾಹಗಳನ್ನು ಮುರಿಯುವುದು ಅಷ್ಟು ಸುಲಭವೂ ಅಲ್ಲ.
ಎಲ್ಲಾ ಅಡೆತಡೆಗಳನ್ನು ಮೀರಿ ಉಷಾ ಹಾಗೂ ಕಿರಣ್ ಒಂದಾದರೇ..?? ಬುದ್ಧಿವಂತೆ ಹಾಗೂ ಪ್ರತಿಭಾವಂತೆಯಾಗಿದ್ದ ಉಷಾ ವಿದ್ಯಾವಂತೆಯಾಗಲು ಪಟ್ಟ ಪರಿಪಾಡುಗಳೇನು..?? ಉಷಾಳ ಪ್ರತಿಭೆಯಿಂದ ಆಕೆ ಬೆಳಗಿದ್ದು ಹೇಗೆ..?? ಕಿರಣ್ ತನ್ನ ಮನಸ್ಸನ್ನು ಬದಲಾಯಿಸುವುದಕ್ಕೆ ಕಾರಣವಾದ ವಿಚಾರವೇನು..?? ಜಗನ್ನಾಥ್ ಸುನಂದ ಹಾಗೂ ಪಲ್ಲವಿಯರ ಪಾತ್ರಗಳು ಇದರಲ್ಲಿ ಎಷ್ಟಿತ್ತು..?? ಎಲ್ಲವನ್ನೂ ತಿಳಿಯಲು ಓದಿ ಮನಸುಗಳ ಮಿಲನ.
ಬದುಕಿನಲ್ಲಿ ವಿದ್ಯೆಯೊಂದೇ ಮುಖ್ಯವಲ್ಲವೆನ್ನುತ್ತಾ ಪ್ರತಿಭೆ ಹಾಗೂ ಬುದ್ಧಿವಂತಿಕೆಯಿಂದಲೂ ಮನಸ್ಸನ್ನು ಒಂದಾಗಿಸಿರುವ ಲೇಖಕಿಯ ಆಶಯ ಇಷ್ಟವಾಯಿತು. ಉಷಾಳ ಸಹನೆ ಹಾಗೂ ಮುಂದಾಲೋಚನೆ, ಏನೇ ಬಂದರೂ ಅದನ್ನು ಎದುರಿಸುವ ಗಟ್ಟಿ ನಿರ್ಧಾರ, ಛಲ, ತಮ್ಮನ್ನು ಯಾವುದೇ ಸಮಸ್ಯೆಯಿಂದಲೂ ಪಾರು ಮಾಡಬಲ್ಲದು ಎನ್ನುವ ಉಷಾಳ ನಿರ್ಧಾರ, ಸುನಂದ ತೋರುವ ತಾಯಿಯ ಮಮತೆ, ಜಗನ್ನಾಥ್ ರವರು ಹೆಂಡತಿಗೆ ನೀಡುವ ಬೆಂಬಲ ಎಲ್ಲವೂ ಇಷ್ಟವಾದವು. ಲೇಖಕಿಯ ಮುಂದಿನ ಸಾಹಿತ್ಯ ಕೃಷಿಗೆ ಒಳಿತಾಗಲಿ ಎನ್ನುವ ಹೃತ್ಪೂರ್ವಕ ಹಾರೈಕೆಗಳು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ