ಪುಸ್ತಕದ ಶೀರ್ಷಿಕೆ : ಮತ್ತೆ ಮಡಿಲಿಗೆ
ಲೇಖಕರು : ಉಷಾನವರತ್ನರಾಮ್
ಪ್ರಕಾಶಕರು :ಇಂದಿರ ಪ್ರಕಾಶನ
ಮೊದಲನೇ ಮುದ್ರಣ : 1989
ಮೂರನೇ ಮುದ್ರಣ : 2018 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 144
ಬೆಲೆ : 70 ರೂ.
ಮತ್ತೆ ಮಡಿಲಿಗೆ ಎಂಬ ಪುಸ್ತಕದಲ್ಲಿ 'ಮತ್ತೆ ಮಡಿಲಿಗೆ' ಮತ್ತು 'ಪ್ರಾಯಶ್ಚಿತ್ತ' ಎಂಬ ಎರಡು ಕಿರು ಕಾದಂಬರಿಗಳಿವೆ.
ಮತ್ತೆ ಮಡಿಲಿಗೆ :
ಮತ್ತೆ ಮಡಿಲಿಗೆ ಕಿರು ಕಾದಂಬರಿಯ ನಾಯಕಿ ರುಕ್ಕಿ. ರಾಜಪ್ಪನಿಗೆ ಮೂವರು ಮಕ್ಕಳು. ಅವರೇ ಕಪ್ಪಣ್ಣ, ಚೆಲುವೆ ಹಾಗೂ ರುಕ್ಕಿ. ರಾಜಣ್ಣನ ಮೊದಲ ಹೆಂಡತಿ ಸತ್ತು ,ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದಿದ್ದಾಗ ಆತ ಎರಡನೇ ವಿವಾಹವಾಗಲು ನಿಶ್ಚಯಿಸಿದ. ಹಾಗೆ, ಎರಡನೇ ಹೆಂಡತಿಯಾಗಿ ಬಂದವಳೇ ಮುತ್ತಮ್ಮ. ಆಕೆಗೆ ಎಲ್ಲಿಯೂ ಗಂಡು ಸಿಗದೆ, ಕೊನೆಗೆ ಅವಳಿಗಿಂತ ಎರಡು ಪಟ್ಟು ವಯಸ್ಸಾಗಿದ್ದ ರಾಜಪ್ಪನನ್ನು ಮದುವೆಯಾಗಿದ್ದಳು. ಕಪ್ಪಣ್ಣ ಹಾಗೂ ಚೆಲುವೆ ಹಾಗೂ-ಹೀಗೂ ಮಲತಾಯಿಯ ಕಪಿಮುಷ್ಠಿಯಿಂದ ತಪ್ಪಿಸಿಕೊಂಡರೂ.. ಅದಕ್ಕೆಲ್ಲಾ ಬಲಿಯಾಗುತ್ತಿದ್ದವಳು ಚಿಕ್ಕವಳಾಗಿದ್ದ ರುಕ್ಕಿ. ತಾಯಿ ಇಲ್ಲದ ರುಕ್ಕಿಯನ್ನು ಕಂಡರೆ ಊರವರಿಗೆಲ್ಲಾ ಮಮತೆ. ಅಲ್ಲದೆ, ಮಾಸ್ತರರ ಮಗನಾಗಿದ್ದ ಜಯರಾಮ ಅವಳ ಆತ್ಮೀಯ ಸ್ನೇಹಿತ. ಅವನಿಗೆ ಅವಳ ಕುರಿತಾಗಿ ಕರುಣೆ, ಪ್ರೀತಿಯೂ ಇದ್ದಿತು.
ರಾಜಪ್ಪ ಕಾಯಿಲೆ ಬಿದ್ದ ನಂತರ ಮುತ್ತಮ್ಮನದ್ದೇ ಸಾಮ್ರಾಜ್ಯವಾಯಿತು. ಈ ಎಲ್ಲಾ ಆಸ್ತಿಯೂ ತನಗೆ, ತನ್ನವರಿಗೆ ಉಳಿಯಬೇಕು ಎಂಬ ದುರಾಸೆಯಿಂದ ಕಪ್ಪಣ್ಣನಿಗೆ ತನ್ನ ಅಕ್ಕನ ಮಗಳು ಲಕ್ಷ್ಮಿಯನ್ನು ಹಾಗೂ ಚೆಲುವೆಯನ್ನು ತನ್ನ ತಮ್ಮ ಮುದ್ದಣ್ಣನಿಗೆ ಕೊಟ್ಟು ವಿವಾಹ ಮಾಡಿದ್ದಳು. ಇನ್ನು ಉಳಿದವಳು ರುಕ್ಕಿ. ಅದು ಬಿಟ್ಟರೆ ಮುತ್ತಮ್ಮನ ಮಗ. ಅವನಿನ್ನೂ ಚಿಕ್ಕವನು.
ರುಕ್ಕಿಯ ಅಕ್ಕ ಚೆಲುವೆ ಬಾಣಂತನಕ್ಕಾಗಿ ತವರಿಗೆ ಬಂದಾಗ ಮುದ್ದಣ್ಣನ ಕಣ್ಣು ರುಕ್ಕಿಯ ಮೇಲೆ ಬಿದ್ದಿತ್ತು. ಮೊದಲು ಹೇಗೇಗೋ ಇದ್ದರೂ.. ಈಗ ಬೆಳೆದು ಕಣ್ಣು ಕುಕ್ಕುವ ಸುಂದರಿಯಾಗಿದ್ದಳು. ಅವಳ ಮೇಲೆ ಕಣ್ಣು ಹಾಕಿ ಅವಳನ್ನು ತನ್ನವಳನ್ನಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಸಿಕ್ಕಿ ಬಿದ್ದ ಅವನು.. ತನ್ನ ಹೆಂಡತಿಗೆ ಪರಿಸ್ಥಿತಿಯನ್ನು ತಿರುಗಿಸಿ ಮುರುಗಿಸಿ ಹೇಳಿ ರುಕ್ಕಿಯನ್ನೇ ತಪ್ಪಿತಸ್ಥಳನ್ನಾಗಿ ಮಾಡಿದ್ದ. ಅದಕ್ಕೆ ಆತನ ಅಕ್ಕ ಮುತ್ತಮ್ಮನ ಕುಮ್ಮಕ್ಕೂ ಇತ್ತು.
ಅವಳು ಮನೆಯಿಂದ ಎಲ್ಲೂ ಹೊರ ಹೋಗದಂತೆ ಕಾವಲು ಕಾಯ್ದರೂ ಆಕೆ ಅವರೆಲ್ಲರ ಕಣ್ಣು ತಪ್ಪಿಸಿ ಮಾಸ್ತರರ ಮನೆಗೆ ಹೋಗಿ ಪರಿಸ್ಥಿತಿಯನ್ನು ಹೇಳಿದಳು. ಮಾಸ್ತರರು ತಾವಾಗಿಯೇ ಅವರ ಮನೆಗೆ ಬಂದು ಅವಳನ್ನು ತನ್ನ ಸೊಸೆಯನ್ನಾಗಿಸಿಕೊಳ್ಳುವ ಮಾತು ಕೊಟ್ಟರು. ಅವಳು ಮನೆಗೆ ಬಂದಾಗ ಅವಳಿಗೆ ಬೇರೆಯದ್ದೇ ಭವಿಷ್ಯ ಕಾದಿತ್ತು. ಅವಳನ್ನು ಹೊಡೆದು ರೂಮಿನಲ್ಲಿ ಕೂಡಿ ಹಾಕಿದ್ದ ಮುದ್ದಣ್ಣ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಆದರ, ಈ ವಿಚಾರ ಎಲ್ಲಿಯೂ ಹೊರ ಹೋಗದಂತೆ ಮುದ್ದಣ್ಣ ಹಾಗೂ ಮುತ್ತಮ್ಮ ಇಬ್ಬರೂ ನಿಶ್ಚಯಿಸಿ ರುಕ್ಕಿಯನ್ನು ಅದೇ ಊರಿನಲ್ಲಿದ್ದ, ತಮ್ಮ ಊರಿನವನೇ ಆಗಿದ್ದ ಮರುಗಪ್ಪನಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಿದರು
ಅವಳಿಗಿಂತ ಎರಡು ಪಟ್ಟು ವಯಸ್ಸಾಗಿದ್ದ ಮರುಗಪ್ಪನನ್ನು ವಿವಾಹವಾಗಲು ಅವಳಿಗೆ ಮನಸಿರಲಿಲ್ಲ. ಮಾಸ್ತರರೂ ಬಾರದಿದ್ದಾಗ.. ಅವಳಿಗೆ ಬೇರೆ ಆಯ್ಕೆ ಇರಲಿಲ್ಲ. ಮಾಸ್ತರರ ಮನೆಯಲ್ಲಿಯೂ ಏನೋ ಹೇಳಿ ಅವರ ಮನಸ್ಸನ್ನು ಕೆಡಿಸಿದ್ದಳು ಮುತ್ತಮ್ಮ.
ಮರುಗಪ್ಪನ ಮದುವೆ ಎಂದಾಗ ಅವನ ಮದುವೆಯ ವಿಚಾರಕ್ಕೆ ಒಳಗೊಳಗೆ ಕರುಬಿದ್ದು ಸಿಂಗಾರಪ್ಪ. ಆದರೆ, ಅದನ್ನು ತೋರಿಸಿಕೊಳ್ಳದೆ.. ಅವನನ್ನು ತನ್ನ ಮನೆಗೆ ಕರೆದೊಯ್ದು.. ನಿನ್ನ ಮನೆಗೆ ಸುಣ್ಣ-ಬಣ್ಣವಾಗಲಿ. ಅಲ್ಲಿಯವರೆಗೂ ಎಲ್ಲ ಕಾರ್ಯವು ನಮ್ಮ ಮನೆಯಲ್ಲಿಯೇ ಆಗಲಿ ಎನ್ನುವ ಆಸೆಯೊಡ್ಡಿದ್ದ. ಮದುವೆಯೂ ಆಯಿತು. ಸಿಂಗಾರಪ್ಪನ ಉಪಾಯವೇ ಬೇರೆ ಇದ್ದಿತು. ಅದಾವುದೂ ಫಲಿಸದೆ, ಮರುಗಪ್ಪ ಹಾಗೂ ಸಿಂಗಾರಪ್ಪನ ಹೆಣ ಬಿದ್ದಿತ್ತು. ಈ ಜೋಡಿ ಕೊಲೆಗೆ ಕಾರಣವೆಂದು ರುಕ್ಕಿಯನ್ನು ಜೈಲಿಗೆ ಹಾಕಲಾಗಿತ್ತು.
ಈಗ ಕಥೆ ಶುರುವಾಗಿದ್ದು ಜೈಲಿನಿಂದ. ಜೈಲಿನಲ್ಲಿ ಉತ್ತಮ ನಡತೆಯುಳ್ಳ ಕೈದಿಯೊಬ್ಬರನ್ನು ಕರೆತಂದು.. ಅವರಿಗೆ ಹೊಸ ಬಾಳು ನೀಡುವ ಸದಾಶಯದೊಂದಿಗೆ ಬಂದಿದ್ದರು ವಾಸುದೇವ ಹಾಗೂ ಅವರ ತಂಗಿ ವತ್ಸಲ. ಇದಕ್ಕಾಗಿ ಈ ಬಾರಿ ಆಯ್ಕೆಯಾದದ್ದು ರುಕ್ಕಿ.. ಮೊದಲಿಗೆ ಸಂದೇಹದಿಂದಲೇ ಅವರ ಜೊತೆ ಹೋದವಳಿಗೆ ಅವರು ನಡೆಸುತ್ತಿದ್ದ ವೃದ್ಧಾಶ್ರಮದಲ್ಲಿ ನೆಲೆ ಸಿಕ್ಕು, ಸೇವೆ ಮಾಡುವ ಅವಕಾಶ ಸಿಕ್ಕಿ ಹೊಸ ಬಾಳು ರೂಪಿಸಿಕೊಳ್ಳಲು ಸಾಧ್ಯವಾಗಿತ್ತು.
ವತ್ಸಲಳಿಗೆ ಲಾಯರ್ ಆಗಿದ್ದ ವರ್ಮರೊಂದಿಗೆ ಪ್ರೇಮವಿತ್ತು. ಅಲ್ಲದೆ, ಇನ್ನೇನು ವಿವಾಹವೂ ನಡೆಯಲಿತ್ತು. ರುಕ್ಕಿಯ ಕಥೆ ಕೇಳಿದ ವತ್ಸಲ ಹಾಗೂ ವಾಸುದೇವರಿಗೆ ರುಕ್ಕಿ ತಪ್ಪು ಮಾಡಿಲ್ಲ ಎನ್ನಿಸಿ ಆ ಕೇಸ್ ಅನ್ನು ಮತ್ತೆ ಪುನಃ ಪರಿಶೀಲನೆಗೊಳಪಡಿಸಿ, ತೀರ್ಪು ಬರುವವರೆಗೂ ಕಾದರು. ಇದಕ್ಕೆಲ್ಲಾ ಮುಖ್ಯವಾಗಿ ಜೊತೆಯಾದವರು ವರ್ಮ.
ಸಿಂಗಾರಪ್ಪ ಹಾಗೂ ಮರುಗಪ್ಪನನ್ನು ಕೊಲೆ ಮಾಡುವಷ್ಟು ದ್ವೇಷವಿತ್ತೇ ರುಕ್ಕಿಗೆ..?? ಅತ್ಯಾಚಾರ ಮಾಡಿದ ಮುದ್ದಣ್ಣನ ನಿಜ ವಿಚಾರ ಆಕೆಯ ಅಕ್ಕ ಚೆಲುವಿಗೆ ತಿಳಿಯಿತೇ..?? ಎಲ್ಲ ಗೊತ್ತಿದ್ದೂ.. ಅಸಹಾಯಕನಾಗಿದ್ದ ರಾಜಪ್ಪ ಏನು ಮಾಡಿದ..?? ಜೈಲಿಗೆ ಹಾಕಿದ ಅವಳನ್ನು ಅವರ ಮನೆಯವರು ಕಾಪಾಡಿಕೊಂಡರೆ ಅಥವಾ ಕಾಪಾಡಿಕೊಳ್ಳಲಿಲ್ಲವೇ..?? ರುಕ್ಕಿ ಜೈಲಿನಲ್ಲಿದ್ದ ವಿಚಾರ ತಿಳಿದು ವೃದ್ಧಾಶ್ರಮದವರೆಲ್ಲರೂ ಆಕೆಯನ್ನು ಬೇರೆಯದ್ದೇ ರೀತಿ ನೋಡಿ ತಾವು ವೃದ್ಧಾಶ್ರಮದಿಂದ ಹೊರಗೆ ಹೋಗಲು ನಿಶ್ಚಯಿಸಿದಾಗ ಏನಾಯಿತು..?? ರುಕ್ಕಿಗೆ ಮತ್ತೆ ಮಡಿಲು ಸಿಕ್ಕಿತೇ.?? ಅಥವಾ ಸಿಕ್ಕ ಮಡಿಲಿನಿಂದ ಮತ್ತೆ ಹೊರ ಬಿದ್ದಳೇ..?? ವರ್ಮ ಕೇಸನ್ನು ಪರಿಶೀಲಿಸಿದಾಗ ಕಂಡುಬಂದ ಸತ್ಯಗಳೇನು..?? ಇದೆಲ್ಲವನ್ನು ತಿಳಿಯಲು ಓದಿ ಮತ್ತೆ ಮಡಿಲಿಗೆ ಕಾದಂಬರಿಯನ್ನು.
ಈ ಕಾದಂಬರಿ ಓದಿದ ನಂತರ ಇದು ಬೆಳ್ಳಿತೆರೆಯ ಮೇಲೆ ಮೂಡಿ ಬಂದರೆ ಚೆನ್ನಾಗಿರುತ್ತದೆ ಎನಿಸಿತು. ಸಿನಿಮಾಗೆ ಸೂಕ್ತ ಕಥೆಯೊಂದಿಗೆ ನಿಗೂಢತೆಯನ್ನು ಉಳಿಸಿಕೊಂಡು ಸಾಮಾಜಿಕ ಸಂದೇಶವನ್ನು ಸಾರುವ ಕಥೆಯಂತೆನಿಸಿತು.
ಪ್ರಾಯಶ್ಚಿತ್ತ :
ಹರೆಯದಲ್ಲಿದ್ದಾಗ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಕೆಲಸ ಸಿಕ್ಕು ಅಲ್ಲಿಗೆ ಕೆಲಸದ ನಿಮಿತ್ತ ಹೊರಟ ಗುರುದತ್ ಮತ್ತೆ ಈಗ ತನ್ನೂರಿಗೆ ಬರುತ್ತಿದ್ದ. ಆತ ಊರಿಗೆ ಬರುತ್ತಿದ್ದುದರ ಹಿಂದಿನ ಉದ್ದೇಶ ತನ್ನ ಆಸ್ತಿಯನೆಲ್ಲಾ ವಿಲೇವಾರಿ ಮಾಡಿ ಹೋಗಲು. ಈಗ ವೈಶಾಲಿಯನ್ನು ಮದುವೆಯಾಗಿ ಪೋರ್ಟ್ ಬ್ಲೇರ್ ನಲ್ಲಿ ನೆಲೆಸಿದ್ದ. ಗುರುದತ್ ಮತ್ತು ವೈಶಾಲಿ ಮದುವೆಯಾಗಿ 18 ವರ್ಷವಾದರೂ ಅವರಿಗೆ ಮಕ್ಕಳಿರಲಿಲ್ಲ.
ಊರಿಗೆ ಬರುವಾಗ ಪದೇ ಪದೇ ಕಾಡುತ್ತಿದ್ದದ್ದು ಜಮುನಾಳ ನೆನಪು. ಜಮುನಾಳ ತಂದೆ ಒಳ್ಳೆಯ ಪಂಡಿತರಾಗಿದ್ದು ಮಕ್ಕಳಿಗೆ ಸಂಸ್ಕೃತ ಪಾಠ ಹೇಳಿಕೊಡುತ್ತಿದ್ದರು. ಆಯುರ್ವೇದ ಚಿಕಿತ್ಸೆಯನ್ನೂ ನೀಡುತ್ತಿದ್ದರು. ಎಲ್ಲವೂ ಸರಿಯಾಗಿದ್ದಿದ್ದರೆ ಗುರುದತ್ ಜಮುನಾಳನ್ನೇ ಮದುವೆಯಾಗಬೇಕಿತ್ತು.
ಗುರುದತ್ ರೈಲಿನಿಂದ ಇಳಿದಾಗ ಬಂದದ್ದು ರಂಗಪ್ಪ. ಈಗ ಗುರುದತ್ ಕುಟುಂಬವಿದ್ದ ಮನೆಯ ಒಂದು ಭಾಗದಲ್ಲಿ ಇದ್ದು, ಹೊಲ-ತೋಟಗಳನ್ನೆಲ್ಲಾ ನೋಡಿಕೊಳ್ಳುತ್ತಿದ್ದದ್ದು ರಂಗಪ್ಪ ಹಾಗೂ ಸುಂದರಮ್ಮ.
ಊರಿಗೆ ಬಂದಾಗ ಕಂಡ ಹುಡುಗಿ ಅವನಿಗೆ ಜಮುನಾಳ ನೆನಪು ತಂದಳು. ಆಕೆ ನೋಡಲು ಥೇಟ್ ಜಮುನಾಳಂತೆಯೇ ಕಂಡಳು. ಆಕೆಯ ಕುರಿತು ವಿಚಾರಿಸಿದಾಗ ತಿಳಿದದ್ದು ಅವಳು ಭರಣಿ. ಜಮುನಾಳ ಮಗಳು. ಊರಿನಲ್ಲಿ ಮತ್ತೊಂದು ಆತ್ಮೀಯ ಪರಿಚಯವೂ ಆಗಿತ್ತು. ಅವನೇ ಶೇಖರ್. ಆ ಊರಿನ ಕಾಲೇಜಿನ ಪ್ರಿನ್ಸಿಪಲ್.
ಭರಣಿಗೆ ಮದುವೆಯಾಗಿತ್ತು. ಆದರೆ, ಆಕೆಯ ಗಂಡ ಆಕೆಯ ಜೊತೆಗಿರಲಿಲ್ಲ. ಆಕೆ ತನ್ನ ಕೊನೆಯ ಕಾಲದಲ್ಲಿ ಊರಿಗೆ ಬಂದು ಮರಿಗೌಡರು ಹಾಗೂ ಪುಟ್ನಂಜಮ್ಮನವರ ಸಹಾಯ ಪಡೆದು ಅಲ್ಲಿಯೇ ತೋಟದಮನೆಯಲ್ಲಿ ನೆಲೆಸಿದ್ದರು. ಜಮುನಾ ಸತ್ತ ನಂತರ ಭರಣಿಯನ್ನು ಅವರೇ ಪೋಷಿಸುತ್ತಾ ಮಗಳಂತೆ ನೋಡಿಕೊಳ್ಳುತ್ತಿದ್ದರು. ಅಲ್ಲದೇ ಅದೇ ಊರಿನ ಶಾಲೆಯಲ್ಲಿ ಶಿಕ್ಷಕಿಯ ಕೆಲಸವನ್ನೂ ಕೊಡಿಸಿದ್ದರು. ಇನ್ನು ಶೇಖರ್ ಹಾಗೂ ಭರಣಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರಿಂದ ಅವರಿಬ್ಬರ ಮದುವೆಯೂ ಆಗುವುದಿತ್ತು.
ಗುರುದತ್ ಬಂದದ್ದು ಆಸ್ತಿ ವಿಲೇವಾರಿ ಮಾಡಲಾದರೂ.. ಆತನಿಗೆ ತಿಳಿದ ಸತ್ಯ ಬೇರೆಯದ್ದೇ ಬದುಕಿನ ಪರಿಚಯ ಮಾಡಿಸಿತ್ತು. ಆತ ಜಮುನಾಳನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಅಂಡಮಾನ್ ನಿಕೋಬಾರ್ ನಲ್ಲಿ ಕೆಲಸಕ್ಕೆ ಹೋಗುವ ಮುನ್ನ ಆಕೆಯನ್ನು ಏಕಾಂತದಲ್ಲಿ ಭೇಟಿಯಾಗಿದ್ದ .ಅದಕ್ಕೆ, ಅವರ ಅವಳ ತಾಯಿಯೂ ಅಡ್ಡಿಪಡಿಸಿರಲಿಲ್ಲ .ಇಬ್ಬರ ಮನೆಯಲ್ಲಿಯೂ ಮದುವೆಯ ಮಾತುಕತೆ ನಡೆದಾಗಿತ್ತು. ಅಲ್ಲಿ ಹೋಗಿ, ಮನೆ ಮಾಡಿ ಅವಳನ್ನು ಮದುವೆ ಮಾಡಿಕೊಂಡು ಕರೆದುಕೊಂಡು ಹೋಗುವುದಷ್ಟೇ ಬಾಕಿ ಇತ್ತು. ಆದರೆ, ಏಕಾಂತದಲ್ಲೊಂದು ತಪ್ಪು ಘಟಿಸಿತ್ತು. ಅದರ ಫಲವೇ ಭರಣಿ. ಆದರೆ, ಗುರುದತ್ ಅಲ್ಲಿನ ಬರೆದ ಯಾವ ಕಾಗದಗಳಿಗೂ ಜಮುನಾಳಿಂದ ಉತ್ತರ ಬರಲಿಲ್ಲ. ನಂತರ, ತನ್ನ ತಾಯಿಯಿಂದ ಆತನಿಗೆ ತಿಳಿದದ್ದೆಂದರೆ.. ಜಮುನಾ ತನ್ನ ತಾಯಿಯ ಜೊತೆ ಊರು ಬಿಟ್ಟು ಹೋಗಿದ್ದಾಳೆ ಎಂಬುದು.
ಭರಣಿ ತನ್ನ ಮಗಳೇ ಎಂದು ತಿಳಿದ ನಂತರ ಗುರುದತ್ ಬದುಕಿನಲ್ಲಿ ಆದ ಬದಲಾವಣೆಗಳೇನು..?? ಗುರುದತ್ ಆಕೆಯನ್ನು ತನ್ನ ಮಗಳೆಂದು ಮನಃಪೂರ್ವಕವಾಗಿ ಒಪ್ಪಿಕೊಂಡನೇ..₹₹ ಇದಕ್ಕೆ ಆತನ ಹೆಂಡತಿ ವೈಶಾಲಿಯ ಪ್ರತಿಕ್ರಿಯೆ ಏನು..?? ಜಮುನಾ ಹಾಗೆ ಹಠಾತ್ತಾಗಿ ಕಣ್ಮರೆಯಾಗಿ, ಮತ್ತೊಂದು ಮದುವೆಯಾದುದಕ್ಕೆ ಕಾರಣವೇನು..?? ಭರಣಿಗೆ ಸತ್ಯ ತಿಳಿದದ್ದು ಹೇಗೆ? ಅದರ ನಂತರ ಅವಳ ಪ್ರತಿಕ್ರಿಯೆ ಏನು..?? ಇದೆಲ್ಲವೂ ತಿಳಿದ ನಂತರ ಶೇಖರ್ ಭರಣಿಯನ್ನು ಮದುವೆಯಾದರೇ..??
ಪ್ರತಿ ತಪ್ಪಿಗೂ ಪ್ರಾಯಶ್ಚಿತವೆಂಬುದು ಇದ್ದೇ ಇರುತ್ತದೆ. ಆದರೆ, ಪಶ್ಚಾತ್ತಾಪವೇ ಪ್ರಾಯಶ್ಚಿತವಾದರೂ.. ಮತ್ತೊಬ್ಬರ ಬದುಕನ್ನು ಸರಿಪಡಿಸುವ ಕೆಲಸವನ್ನು ಆಗಲೇಬೇಕು. ಅದು ತಪ್ಪು ಮಾಡಿದವರ ಕರ್ತವ್ಯವೂ ಹೌದು. ಸಂಬಂಧಗಳ ಸೂಕ್ಷ್ಮ ಎಳೆಗಳನ್ನು ಚಿತ್ರಿಸಿರುವ ಕಿರು ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ