ಭಾನುವಾರ, ಏಪ್ರಿಲ್ 12, 2026

ಸ್ವಪ್ನ ಸಂದೇಶ (ಪುಸ್ತಕ ಯಾನ - 130)


ಪುಸ್ತಕದ ಶೀರ್ಷಿಕೆ : ಸ್ವಪ್ನ ಸಂದೇಶ

ಲೇಖಕರು : ಹೆಚ್.ಜಿ ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)


ಈ ಕಾದಂಬರಿಯ ಸಂಯುಕ್ತ ಸಂಪುಟವನ್ನು ಕಂಡ ತಕ್ಷಣ ಶೀರ್ಷಿಕೆಯಿಂದಲೇ ಸೆಳೆದು ಮೊದಲು ಓದುವಂತೆ ಮಾಡಿದ ಶೀರ್ಷಿಕೆ 'ಸ್ವಪ್ನ ಸಂದೇಶ'. ಸಾಮಾಜಿಕ ಕಾದಂಬರಿ ಎಂಬ ಅಡಿಬರಹವೂ ಇದ್ದುದರಿಂದ ಕನಸಿನ ಕೋಡೆಡ್ ರೂಪದ ಕಥೆ ಇರಬಹುದಾ ಎಂದು ಯೋಚಿಸಿ ಓದಲು ಶುರುವಿಟ್ಟೆ. ಆದರೆ, ಇದರಲ್ಲಿ ಭಕ್ತಿರಸ ಪ್ರಧಾನವಾಗಿದ್ದಿತು. ಪೌರಾಣಿಕ ಹಾಗೂ ಲೌಕಿಕ ಜೀವನದ ನಂಬಿಕೆಗಳ ದರ್ಶನವಾದ ವಿಭಿನ್ನ ಕಥಾ ಹಂದರ ಇಲ್ಲಿದೆ. 


ರಾಮಾಚಾರ್ಯರು ಹಾಗೂ ಕಮಲಮ್ಮ ದಂಪತಿಗಳಿಗೆ ನಾಲ್ಕು ಹೆಣ್ಣುಮಕ್ಕಳ ನಂತರ ಒಬ್ಬ ಮಗ. ಹೈಸ್ಕೂಲು ಮಾಸ್ತರರಾಗಿದ್ದವರು ತಮ್ಮ 55 ನೇ ವರ್ಷದಲ್ಲಿ ಕೆಲಸದಿಂದ ನಿವೃತ್ತಿ ಹೊಂದಿದ್ದವರು. ಬಂದ ಹಣದಲ್ಲಿ ನಾಲ್ಕು ಹೆಣ್ಣುಮಕ್ಕಳ ಹೆರಿಗೆ, ಬಾಣಂತನ ಮಾಡುವುದರೊಳಗೆ ಹೈರಾಣಾಗಿದ್ದವರು. ಮಗ ಓದಿ, ಕೆಲಸಕ್ಕೆ ಸೇರಿ ತಮ್ಮನ್ನು ಕಡೆಗಾಲದಲ್ಲಿ ನೋಡುತ್ತಾನೆನ್ನುವ ಆಸೆ ಅವರ ಪಾಲಿಗೆ ನಿರಾಸೆಯಾಗಿತ್ತು. ಮಗ ನಾಲ್ಕಾರು ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಅಂತೂ ಇಂತೂ ಪಾಸಾದನಾದರೂ ಪಿ.ಯು.ಸಿ ಯಲ್ಲಿ ಡುಮುಕಿ ಹೊಡೆದ. ಆದರೆ, ಜೀವನೋಪಾಯಕ್ಕೆ ಟೈಪಿಂಗ್ ಕಲಿತು ಕಂಪ್ಯೂಟರ್ ಟ್ರೈನಿಂಗ್ ಮಾಡಿಕೊಂಡು ಐನೂರು ರೂಪಾಯಿ ಸಂಪಾದಿಸುತ್ತಿದ್ದ. 


ಆದರೆ, ರಾಮಾಚಾರ್ಯ ದಂಪತಿಗಳಿಗೆ ಈಗ ಸಂಕಷ್ಟದ ಸಮಯ. ಸುಮಾರು ವರ್ಷಗಳಿಂದ ಇದ್ದ ಮನೆಯನ್ನು ಬದಲಿಸಿ ಬೇರೆ ಮನೆ ಹಿಡಿದಿದ್ದರು. ಮನೆಯ ಬಾಡಿಗೆ ಕೂಡಾ ದುಬಾರಿ. ಮೊದಲಿದ್ದ ಮನೆಯಷ್ಟು ಸೌಲಭ್ಯವಿಲ್ಲದ, ಪುಟ್ಟ ಮನೆ, ನೀರಿನ ತೊಂದರೆ. ಹಳೆಯ ಮನೆಯ ಮಾಲೀಕ ದಂಪತಿಗಳಾದ ಸೀತಮ್ಮ ಹಾಗೂ ವಾಸುದೇವರಾಯರ ಸ್ನೇಹಪರತೆ ಇಲ್ಲಿಲ್ಲ. ಪೂಜೆಗೂ ಕಷ್ಟ. ಜೊತೆಗೆ ಮಗನಿಗೆ ಅಲ್ಪಸ್ವಲ್ಪ ಆದಾಯ ತಂದುಕೊಡುತ್ತಿದ್ದ ಟೇಪ್ ರೆಕಾರ್ಡರ್ ಅಂಗಡಿಯ ಕೆಲಸವೂ ಹೋಗಿತ್ತು. ಮಗನಿಗೆ ಸರಿಯಾದ ಉದ್ಯೋಗವಿಲ್ಲದೆ, ಬೆಲೆ ಏರಿಕೆಯ ಸಮಯದಲ್ಲಿ ಬದುಕು ದುಸ್ತರವಾಗಿ.. ಆತನಿಗೆ ಕನ್ಯೆ ದೊರೆಯುವುದೂ ಕಷ್ಟವಿತ್ತು.


ಇಷ್ಟೆಲ್ಲಾ ಸಂಕಷ್ಟದ ನಡುವೆಯೂ ರಾಮಾಚಾರ್ಯರು ವೆಂಕಟೇಶ್ವರ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸುವುದನ್ನಂತೂ ಬಿಟ್ಟಿರಲಿಲ್ಲ. ನೆಮ್ಮದಿಯಿಲ್ಲವೆಂದು.. ತಾವು ಮೂವತ್ತೈದು ವರ್ಷ ತಿರುಪತಿಗೆ ಬಂದದ್ದನ್ನು ನೆನಪಿಸಿಕೊಂಡು.. ಭಕ್ತಿಯಿಂದ ಪೂಜಿಸಿ ಬೇಡಿಕೊಳ್ಳುತ್ತಿದ್ದ ರಾತ್ರಿ ಅವರಿಗೊಂದು ಕನಸು ಬಿದ್ದಿತ್ತು.


ಕನಸಿನಲ್ಲಿ ಕಂಡದ್ದು.. ತಿರುಪತಿಗೆ ಅಷ್ಟು ವರ್ಷ ಹೋಗಿದ್ದರ ಫಲ ಮುಂದಿನ ಜನ್ಮದಲ್ಲಿ ಸಿಕ್ಕೇ ಸಿಗುತ್ತದೆ. ಆದರೆ, ಹೆಂಡತಿ ಕಮಲಾ ಹೇಳಿದರೂ ಕೇಳದೆ ಹತ್ತಿರದಲ್ಲಿದ್ದ ನನ್ನನ್ನು ಕಾಣದೆ ಉದಾಸೀನ ಮಾಡಿದೆ. ಎಲ್ಲಿಯೂ ನನ್ನನ್ನು ಉದಾಸೀನ ಮಾಡದಿರು ಎಂಬ ಸಂದೇಶ. 


ಕನಸಿನ ಸಂದೇಶ ಮನಸ್ಸಿನ ಭಾವನೆಗಳೇ ಹೌದಾದರೂ.. ಇಲ್ಲಿನ್ನೂ ಹೆಚ್ಚಿನ ಸಂದೇಶ ಸಿಕ್ಕಿತ್ತು. ಆ ಸಂದೇಶದಂತೆ ಆ ಊರಿಗೆ  ಮೂರು ಕಿಲೋಮೀಟರ್ ಹತ್ತಿರವಿದ್ದ ಚಿಕ್ಕ ತಿಮ್ಮಪ್ಪನ ಬೆಟ್ಟಕ್ಕೆ ಬಂದರು. ರಿಟೈರಾಗಿ ಹತ್ತು ವರ್ಷದ ನಂತರ ಅಲ್ಲಿಗೆ ಬಂದವರಿಗೆ.. ತಾವು ಇದನ್ನು ಇಷ್ಟು ವರ್ಷ ನೋಡಲಿಲ್ಲವೇಕೆ ಎಂಬ ಆಲೋಚನೆಯಲ್ಲಿಯೇ ಆತ್ಮವಿಮರ್ಶೆ ಮಾಡಿಕೊಂಡರು.


ಹೆಂಡತಿ ಕಮಲಮ್ಮ ಅಲ್ಲಿಗೆ ಬಂದಾಗಿನ ಆನಂದಾನುಭೂತಿ, ದಿವ್ಯ ಸಾನಿಧ್ಯವನ್ನು ಅನುಭವಿಸುತ್ತಿದ್ದಾಗಿನ ಮಾತುಗಳನ್ನು ಮೆಲುಕು ಹಾಕಿದರು. ಆಚಾರ್ಯರು ಉದಾಸೀನ ಮಾಡಿದ್ದಕ್ಕೊಂದು ಕಾರಣವೂ ಇದ್ದಿತು. ಅದನ್ನು ಶ್ರೇಷ್ಠತೆಯ ವ್ಯಸನವೆಂದರೂ ತಪ್ಪಾಗಲಾರದು. ಅಂತಹಾ ಅವರ ತಪ್ಪು ಕಲ್ಪನೆ ಕಳಚಿಬಿದ್ದಿತ್ತು.


ತಿರುಪತಿಯ ಸರತಿ ಸಾಲಿನ, ಜನಸಂದಣಿಯ ದರ್ಶನಕ್ಕೂ.. ಇಲ್ಲಿನ ನೆಮ್ಮದಿಯ ದರ್ಶನಕ್ಕೂ ಬಹಳ ವ್ಯತ್ಯಾಸವಿತ್ತು. ಇಲ್ಲಿನ ನೆಮ್ಮದಿಯ ಏಕಾಂತದ ದರ್ಶನದ ತುಲನೆ ಮಾಡುತ್ತಿದ್ದ ಅವರ ಮನಸ್ಸಿನಲ್ಲಿ 'ಇಲ್ಲಿರುವವನೂ ನೀನೇ.. ಅಲ್ಲಿರುವವನೂ ನೀನೇ..' ಎನ್ನುವ ಸತ್ಯ ದರ್ಶನವಾಗಿತ್ತು.


ಅಲ್ಲಿನ ವಾತಾವರಣದಿಂದ ಸ್ಫೂರ್ತಿಗೊಂಡ ಅವರು ಋಗ್ವೇದದ ಶ್ಲೋಕವೊಂದನ್ನು ಭಕ್ತಿಪೂರ್ವಕವಾಗಿ ಪಠಿಸಿದರು. ಅಲ್ಲಿನ ಭಕ್ತನೊಬ್ಬನ ಆಗ್ರಹದ ಮೇರೆಗೆ ಶ್ಲೋಕದ ಅರ್ಥವನ್ನೂ ಹೇಳಿದರು. ಅಲ್ಲಿ ಜಾತಿಯ ಮೇಲು-ಕೀಳಿನ ಭಾವನೆ ತೊರೆದು ಮತ್ತಷ್ಟು ಪರಿಶುದ್ಧರಾದರು.


ಆ ಶ್ಲೋಕದ ಅರ್ಥ ಕೇಳಿದ ಭಕ್ತನೇ ರಂಗಪ್ಪ. ಪೂಜೆಯ ನಂತರ ಆತ ರಾಮಾಚಾರ್ಯರನ್ನು ತನ್ನ ಮನೆಗೆ ಕರೆದೊಯ್ದು ಆತಿಥ್ಯ ಮಾಡಿದಾಗ ತಿಳಿದದ್ದು ಆತ ಸಾಮಾನ್ಯನಲ್ಲ. ಪಟ್ಟಣದಲ್ಲಿ ಸಾಹುಕಾರ್ ರಂಗಪ್ಪನಾಗಿದ್ದ ಭಾರೀ ಕುಳವೆಂದು.


ರಂಗಪ್ಪ ಎಲ್ಲವನ್ನೂ ತೊರೆದು ಆ ಹಳ್ಳಿಗೆ ಬರಲು ಕಾರಣವೇನು..?? ಅಲ್ಲಿಯೂ ಒಂದು ಸ್ವಪ್ನದ ಸಂದೇಶವಿದೆ.


ಪ್ರತಿ ಮನುಷ್ಯನ ಪ್ರತಿ ನಡೆಯೂ ದೈವ ನಿಮಿತ್ತ. ರಂಗಪ್ಪ ಹಾಗೂ ರಾಮಾಚಾರ್ಯರ ಭೇಟಿಯೂ ದೈವೇಚ್ಛೆಯೇ..?? ಇಬ್ಬರ ಭೇಟಿ ಯಾರ ಯಾರ ಬದುಕಿನಲ್ಲಿ ಎಂತಹಾ ಬದಲಾವಣೆಗೆ ಕಾರಣವಾಯಿತು..??


ಇಷ್ಟು ಘಟನೆಗಳು ನಡೆದ ಸ್ಥಳ ಚಿಕ್ಕ ತಿಮ್ಮಪ್ಪನ ಬೆಟ್ಟದ ಸ್ಥಳ ಪುರಾಣ ನಂಬಿಕೆ, ದೈವ ಲೀಲೆಯ ಸ್ಥಳವಾಗಿದೆ. ಜೊತೆಗೆ ಇಲ್ಲಿಯೂ ಒಂದು ಸ್ವಪ್ನ ಸಂದೇಶವಿದೆ. ಈ ಎಲ್ಲಾ ಪ್ರಶ್ನೆಗಳ ಉತ್ತರ ತಿಳಿಯಲು ಓದಿ ಹೆಚ್.ಜಿ ರಾಧಾದೇವಿಯವರ 'ಸ್ವಪ್ನ ಸಂದೇಶ'.


ಮನುಷ್ಯನ ಜೀವನದ ಮಹತ್ತರ ಬದಲಾವಣೆಗಳು ಕೇವಲ ಮಾನವ ನಿಮಿತ್ತವಲ್ಲ. ವೈದ್ಯಕೀಯಕ್ಕೂ ಸವಾಲಾಗಿ ನಿಂತಿದ್ದ ಸಮಸ್ಯೆ ಬಗೆಹರಿದ ಘಟನೆಯೊಂದು ಉಲ್ಲೇಖವಾಗಿದೆ. 'ನಂಬಿದರೆ ದೇವರು.. ಇಲ್ಲವಾದರೆ ಕಲ್ಲು' ಎನ್ನುವ ಆಡುನುಡಿಯಂತೆ ಭಕ್ತಿ, ನಂಬಿಕೆ ಇಲ್ಲಿನ ಮೂಲದ್ರವ್ಯ. ಮನುಷ್ಯನ ಕೈ ಮೀರಿದ ಸಂಗತಿಗಳ ನೋಟ ಕಾಣುತ್ತದೆ. ಕನಸನ್ನು ತೀರಾ ಒಗಟಿನಂತಿಡದೆ.. ನೇರವಾಗಿಯೇ ನೀಡಿದ ಸಂದೇಶಗಳಿದ್ದರೂ.. ಅಲ್ಲಿಯೂ ಕೋಡೆಡ್ ಸಂದೇಶದಂತಹಾ ಅಂಶವಿದೆ. ಸಂಪೂರ್ಣ ಪೌರಾಣಿಕ ಕಾದಂಬರಿ ಓದಿದ್ದೆನಾದರೂ.. ಈ ರೀತಿಯ ಭಕ್ತಿ ಪ್ರಧಾನ ಕತೆಯ ಕಾದಂಬರಿ ಓದಿದ್ದು ವಿರಳ. ಈ ಚಿಕ್ಕ ಚೊಕ್ಕ ಕಾದಂಬರಿ ನಂಬಿಕೆಯ ಬೇರಿಗೆ ನೀರೆರೆಯುತ್ತಾ ನಮ್ಮಲ್ಲಿಯೂ ಭಕ್ತಿಯನ್ನು ಉದ್ದೀಪಿಸುವುದೂ ಹೌದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ