ಸೋಮವಾರ, ಏಪ್ರಿಲ್ 13, 2026

ಹೊಸ ಕಥೆಗಳು (ಪುಸ್ತಕ ಯಾನ - 155)


ಪುಸ್ತಕದ ಶೀರ್ಷಿಕೆ : ಹೊಸ ಕಥೆಗಳು

ಲೇಖಕರು : ಗಾಯತ್ರಿ ರಾಜ್ 

ಪ್ರಕಾಶಕರು : ರಾಜ್ ಪಬ್ಲಿಕೇಷನ್ಸ್

ಪ್ರಥಮ ಮುದ್ರಣ : 2021

ಪುಟಗಳು : 104

ಬೆಲೆ : 50 ರೂ.


ಗಾಯತ್ರಿ ರಾಜ್ ಅವರ ಆಮ್ರಪಾಲಿ ಕಾದಂಬರಿ ಓದಿದ ನಂತರ ಅವರ ಸಣ್ಣ ಕಥೆಗಳ ಪುಸ್ತಕ ಓದಿದ್ದು. ಇದರಲ್ಲಿ ಆಯ್ದ 9 ಹೊಸ ಕಥೆಗಳಿವೆ. 


ಫ್ಲರ್ಟ್ : ರಾಜ್ ಹೆಣ್ಣುಗಳ ವಿಷಯದಲ್ಲಿ ಇದ್ದದ್ದೇ ಹಾಗೆ..! ಅವನು ಹೆಣ್ಣುಗಳ ವಿಷಯದಲ್ಲಿ ಸೋಲುವುದಂತೂ ಸಾಧ್ಯವೇ ಇರಲಿಲ್ಲ. ಬೆಟ್ ಕಟ್ಟಿದ ತಿಂಗಳೊಳಗೆ ಅವರನ್ನು ಒಲಿಸಿಕೊಳ್ಳುವುದರಲ್ಲಿ ತಪ್ಪುತ್ತಿರಲಿಲ್ಲ. ಆದರೆ, ಎಲ್ಲವೂ ಮುಗಿದು ಆಕೆ ಹಳಬಳು ಎನ್ನಿಸಿದ ತಕ್ಷಣ ಆಕೆಯ ನಂಬರನ್ನು ಬ್ಲಾಕ್ ಮಾಡಿ ಹೊರಬರುತ್ತಿದ್ದ. ಅಲ್ಲಿಗೆ ಅವಳ ಕಥೆ ಆತನ ಬದುಕಿನಲ್ಲಿ ಮುಕ್ತಾಯವಾಗುತ್ತಿತ್ತು. ಇದು ಪ್ರೀತಿ-ಪ್ರೇಮವೆಂಬ ಬೆಚ್ಚನೆಯ ಭಾವವಾಗಿರಲಿಲ್ಲ. ಅಂತಹವನ ಬದುಕಲ್ಲಿ ಒಬ್ಬಳು ಹೊಸ ಅಭಿಮಾನಿ ಸಿಕ್ಕಿದಳು. ಅವಳೇ ಪ್ರಿಯಾ. ಆತನ ಎಲ್ಲಾ ಕಥೆಗಳನ್ನು ಓದಿದ್ದೇನೆ ಎನ್ನುತ್ತಾ ಆತನಿಗೆ ಆಕೆಯೇ ಪರಿಚಯ ಮಾಡಿಕೊಂಡವಳು. ಇಬ್ಬರ ಸ್ನೇಹವೂ ಮುಂದುವರೆಯುತ್ತಿತ್ತು. ಬೇರೆ ಹೆಣ್ಣುಗಳಂತೆ ಇವಳನ್ನು ಶ್ರೀಮಂತಿಕೆಯ ಆಸೆ ತೋರಿ ಒಲಿಸಿಕೊಳ್ಳಲು ಸಾಧ್ಯವಿರಲಿಲ್ಲ. ಅವಳನ್ನು ಓಲೈಸುವ ಏಕೈಕ ದಾರಿ ಸಾಹಿತ್ಯವಾಗಿತ್ತು. ಆಕೆಯ ಶ್ರೀಮಂತಿಕೆ ಎದುರು ಈತನ ಸಾಹಿತ್ಯವನ್ನು ಮುಂದಿಟ್ಟಿದ್ದ. ಆದರೆ, ಆತನ ಫ್ಲರ್ಟ್ ಮನೋಭಾವ ಗೆದ್ದಿತೇ..?? ಅಥವಾ ಆತನ ಬದುಕಿನಲ್ಲಿ ಹೊಸ ಆಯಾಮ ಸಿಕ್ಕಿತೇ..??


ಮಂಗಳಂ ಕುರು : ಸುಧಾಕರ ಹಾಗೂ ಆಶಾ ಇಬ್ಬರೂ ಎರಡೂ ಮನೆಯ ಕಡೆಯವರನ್ನು ಎದುರು ಹಾಕಿಕೊಂಡು ಪ್ರೇಮ ವಿವಾಹವಾಗಿದ್ದರು. ಆದರೆ, ಮೊದಲ ವಿವಾಹ ವಾರ್ಷಿಕೋತ್ಸವದಂದೇ ಬೈಕ್ ರೈಡ್ ಹೊರಟಿದ್ದಾಗ ಬ್ಯಾಲೆನ್ಸ್ ತಪ್ಪಿ ಸುಧಾಕರನಿಗೆ ಅಪಘಾತವಾಗಿತ್ತು. ಆತನ ಸೊಂಟದ ಕೆಳಭಾಗ ಪೂರ್ತಿ ಸ್ವಾಧೀನ ತಪ್ಪಿತ್ತು. ಆತನನ್ನೇ ಮಗುವೆಂದುಕೊಂಡು ಬದುಕಿದ್ದ ಅವಳಿಗೆ ಈಗ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ. ಕೆಲಸದ ಕಡೆಗಳಲ್ಲಿ ಇವಳ ಪರಿಸ್ಥಿತಿಯನ್ನು ಅನುಕೂಲ ಮಾಡಿಕೊಳ್ಳಲು ನೋಡುತ್ತಿದ್ದವರೇ ಹೆಚ್ಚು. ಅಂತಹವರಲ್ಲಿ ಅವಳ ಬದುಕಿನಲ್ಲಿ ಹೊಸ ಆಶಾಕಿರಣ ಸಿಕ್ಕಿತ್ತು. ಆ ಆಶಾಕಿರಣಕ್ಕೂ ಕಥೆಯ ಶೀರ್ಷಿಕೆಗೂ ಚೆಂದದ ಬಂಧವಿದೆ.


ಅಪರಾಧಿ : ವೈಭವಿಯ ಡೆತ್ ನೋಟ್ ನೋಡಿದಾಗ ಪತ್ರದಲ್ಲಿ ಆತ್ಮಹತ್ಯೆ ಎಂದು ಬರೆದಿದ್ದರೂ.. ಅದು ಆತ್ಮಹತ್ಯೆಯವೆಂಬ ಶಂಕೆ ಮೂಡಿ ಪ್ರಕರಣದ ಬೆನ್ನತ್ತುವ ಪೋಲೀಸರಿಗೆ ಆಕೆಯ ಗಂಡನೇ ಆಕೆಯ ಕೊಲೆಗಾರನಾಗಿರಬಹುದು ಎಂದೆನಿಸಿದರೂ.. ಪ್ರಕರಣ ಬೇರೆಯದ್ದೇ ಜಾಡು ಹಿಡಿಯುತ್ತದೆ. ಅಪರಾಧಿ ಸಿಕ್ಕಿದನೇ..?? ಕುತೂಹಲದಿಂದ ಓದಿಸಿಕೊಂಡು ಹೋಗುವ ಪತ್ತೇದಾರಿ ಕತೆ ಇಲ್ಲಿದೆ. 


ಗಂಡು : "ಬದುಕಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವಷ್ಟರಲ್ಲಿ, ಆ ದೇವರು ಪ್ರಶ್ನೆ ಪತ್ರಿಕೆಯನ್ನೇ ಬದಲಾಯಿಸಿ ಬಿಟ್ಟಿರುತ್ತಾನಂತೆ" 

ಮಾಧವನ ಬದುಕಲ್ಲಿಯೂ ಹೀಗೆಯೇ ಆಗಿತ್ತು. ಮಾಧವ ತಾನು ಎಲ್ಲಾ ಗಂಡುಮಕ್ಕಳ ಹಾಗಿಲ್ಲ. ಗೇ ಎಂದು ಅರ್ಥವಾಗುವಷ್ಟರಲ್ಲಿ ಆಫೀಸಿನಲ್ಲಿ ಆತನಿಗಾದ ಅವಮಾನ ಆತನನ್ನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುವವರೆಗ ನೋಯಿಸಿತ್ತು. ಆದರೆ, ಅಲ್ಲಿನ ಘಟನೆ ಆತನ ಬದುಕನ್ನೇ ಬದಲಾಯಿಸಿತು. ಮದುವೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದ ತನ್ನ ತಾಯಿಗೂ ತನ್ನ ನಿರ್ಧಾರದ ಮೂಲಕ ಸಂತಸವನ್ನೇ ತಂದಿದ್ದ. ಆತನ ಬದುಕು ಸುಂದರವಾದದ್ದು ಹೇಗೆ..??


ನಾಗರಬೆತ್ತದ ಮಾಮ : ಬಾಲ್ಯದ ದಿನಗಳನ್ನು ನೆನಪಿಸುವ ನೆನಪಾಗಿದ್ದು ನಾಗರಬೆತ್ತದ ಮಾಮ ಹೋಗಿ ಬಿಟ್ಟರಂತೆ ಎಂಬ ಸಮಾಚಾರ ಸಿಕ್ಕಿದಾಗ. ಆರು ಜನ ಅಕ್ಕ-ತಂಗಿಯರಿದ್ದ ಆ ಕುಟುಂಬದಲ್ಲಿ ಆ ಮಾಮ ಮೂರನೇ ಅಣ್ಣ. ಅವರ ಕೈಯಲ್ಲಿ ಯಾವಾಗಲೂ ಇರುತ್ತಿದ್ದ ನಾಗರಬೆತ್ತ ಹಾಗೂ ಆತ ಮನೆಯನ್ನು ಕಾಯುತ್ತಿದ್ದ ಪರಿ, ಆತನ ಕಣ್ತಪ್ಪಿಸಿ ಆ ಮನೆಯನ್ನು ಹೊಕ್ಕಲೇಬೇಕೆಂಬ ಆಸೆಯನ್ನು ಮಕ್ಕಳಲ್ಲಿ ಮೂಡಿಸುತ್ತಿದ್ದಂತೂ ಸುಳ್ಳಲ್ಲ. ಆದರೆ, ಆತ ಹಾಗೆ ಮಾಡುವುದರ ಹಿಂದಿದ್ದ ರಹಸ್ಯ ತಿಳಿದಾಗ ಮನಸ್ಸು ಆರ್ದ್ರವಾಗುತ್ತದೆ. ನೋಡುವುದಕ್ಕೆ ಅಷ್ಟು ಬಲಶಾಲಿಯಂತಿದ್ದ ಗಂಡೊಬ್ಬನ ನಿಸ್ಸಹಾಯಕತೆಯ ರೂಪ ಕಣ್ಮುಂದೆ ಬರುತ್ತದೆ. 


ಹಂಗಿನರಮನೆ : ಕೊರೊನಾ ದಿನಗಳಲ್ಲಿ ಮಧ್ಯಮ ವರ್ಗದವರ ಬಾಳು ಅಸಹಾಯಕತೆಯತ್ತ ತಳ್ಳಲ್ಪಟ್ಟಿತ್ತು. ಕೊರೊನಾ ಬಂದು ಒಂದು ತಿಂಗಳು ಕಾಲ ಫ್ಯಾಕ್ಟರಿ ಮುಚ್ಚಿದ್ದೇ ತಡ ರಾಜ್ ನ ಕೆಲಸ ಹೋಗಿ ತಿಂಗಳಿಗೆ ಲಕ್ಷ ಎಣಿಸುತ್ತಿದ್ದ ಕೈ ಬರಿದಾಗಿತ್ತು. ಅದಾದ ನಂತರ ಆರು ತಿಂಗಳು ಕೆಲಸವೇ ಇರಲಿಲ್ಲ. ಪ್ರಿಯಾ ರಾಜ್ ನನ್ನು ಇಷ್ಟಪಟ್ಟು ಮದುವೆಯಾಗಿದ್ದವಳು. ಪುಟ್ಟುವಿನ ಶಾಲೆಯ ಹಣಕ್ಕೂ ಕಷ್ಟವಿತ್ತು. ಆ ಸಂದರ್ಭದಲ್ಲಿ ತನ್ನ ಗೆಳತಿಯ ಗಂಡ ಕಿಶೋರನ ಆಮಿಷದಂತೆ ಆಕೆ ನಡೆದಿದ್ದರೆ ಆಕೆ ಜೀವನದಲ್ಲಿ ಬಹಳ ಸುಖವಾಗಿರಬಹುದಿತ್ತು. ಆಕೆ ಹಂಗಿನರಮನೆಗೆ ನಡೆದಳೇ..?? ಅಥವಾ ಬೇರೆ ನಿರ್ಧಾರ ತೆಗೆದುಕೊಂಡಳೇ..?? 

ಬದುಕು ಕಟ್ಟಿಕೊಳ್ಳುವ ಭರದಲ್ಲಿ ಕೆಲವೊಮ್ಮೆ ಸ್ವಾಭಿಮಾನವನ್ನು ಬಲಿ ಕೊಡಬೇಕಾಗುತ್ತದೆ. ಹಾಗೆ ಸ್ವಾಭಿಮಾನವನ್ನು ಬಲಿಕೊಟ್ಟದ್ದು ಯಾರ ಎದುರಿಗೆ..?? 


ಹೆಸರಿಲ್ಲದವರು... : ದೇಹಗಳನ್ನು ಮಾರಿಕೊಳ್ಳುವವರಿಗೂ ಮನಸಿರುತ್ತದೆ. ಹಾಗೆ ಮನಸ್ಸು-ಮನಸ್ಸುಗಳ ಕೊಡು-ಕೊಳ್ಳುವಿಕೆ ನಡೆದಿತ್ತು ಇಲ್ಲಿ. ಹೆಸರಿಲ್ಲದವರು ತಮ್ಮ ಹೆಸರನ್ನು ಜೊತೆಯಾಗಿ ಬರೆಯಲು ಹೊರಟ ಕತೆ ಇಲ್ಲಿದೆ.


ಸೆವೆನ್ ಇಯರ್ ಇಚ್ : ಅವರು ಮದುವೆಯಾಗಿ ಏಳು ವರ್ಷ ಕಳೆದು 8ನೇ ವರ್ಷಕ್ಕೆ ಕಾಲಿಟ್ಟಿದ್ದರು. ಆ ವಾರ್ಷಿಕೋತ್ಸವಕ್ಕೂ ಕೊಂಚ ಮುನ್ನ ಆತ ತೆಗೆದುಕೊಂಡ ನಿರ್ಧಾರದಂತೆ ನಡೆದಿದ್ದರೆ ಅವರ ದಾಂಪತ್ಯ ಅಲ್ಲಿಗೇ ನಿಲ್ಲುತ್ತಿತ್ತು. ಅಂತೂ ಸೆವೆನ್ ಇಯರ್ ಈಚ್ ಕಳೆದ ಬಗೆ ಹೇಗೆ ..??


ಶಿಕ್ಷೆ : ಅಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬರುತ್ತಿದ್ದ ಮೊಮ್ಮಗ ಸುಧೀಗೆ ಎಂದು ವೆಂಕಮ್ಮ ಸೊಪ್ಪು ಕೊಯ್ದುಕೊಳ್ಳುತ್ತಿದ್ದಳು. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದವನು, ತಂದೆಯ ಸಕಲ ದುರ್ಗುಣಗಳನ್ನು ತನ್ನದಾಗಿಸಿಕೊಳ್ಳುತ್ತಾ.. ಬೆಳೆಯುತ್ತಿದ್ದ. ಹಾಗೆ ಬೆಳೆಯುತ್ತಿದ್ದವನು ತಪ್ಪು ಮಾಡಿ ಜೈಲಿಗೆ ಹೋಗಿ ಬಂದಿದ್ದ. ಅದಕ್ಕಾಗಿ ಇದ್ದ ಸಿರಿವಂತಿಕೆಯೂ ಕರಗಿತ್ತು. ಶಿಕ್ಷೆ ಮುಗಿಸಿ ಬಂದವನಿಗೆ ಬೇರೆಯದ್ದೇ ಶಿಕ್ಷೆ ಕಾದಿತ್ತು. ಆ ಶಿಕ್ಷೆ ಯಾವುದು..?? ಯಾಕಾಗಿ..??


ಇಲ್ಲಿನ ಕಥೆಗಳ ನಿರೂಪಣೆಯಲ್ಲಿ ಹೊಸತನ ಕಂಡುಬರುತ್ತದೆ. ಕೆಲವು ಕಥೆಗಳನ್ನು ಓದುತ್ತಾ ಕಥೆಯನ್ನು ಕಟ್ಟಿಕೊಟ್ಟ ಬಗೆಯನ್ನು ಗಮನಿಸಿದಾಗ.. ಅವರು ಇನ್ನೇನು ನೈತಿಕ ಮಾರ್ಗವನ್ನು ತೊರೆದು ತಪ್ಪು ಹಾದಿ ಹಿಡಿದುಬಿಡುತ್ತಾರಾ..! ಇನ್ನೇನು ತಪ್ಪಾಗಿಯೇ ಬಿಡುತ್ತದಾ..! ಎಂದು ಆಲೋಚಿಸುವಷ್ಟರಲ್ಲಿಯೇ ಲೇಖಕಿ ಅವರನ್ನು ಸರಿಯಾದ ಹಾದಿಯಲ್ಲಿ ನಡೆಸುತ್ತಾ.. ಇನ್ನೊಬ್ಬರಿಗೆ ಮಾದರಿಯಾಗುವ ನಡೆಗಳನ್ನು ಕಟ್ಟಿಕೊಟ್ಟಿದ್ದಾರೆ. ಹೀಗೆ ಕಥೆಗಳಲ್ಲಿ ಅವರುಗಳು ತೆಗೆದುಕೊಂಡ ನಿರ್ಧಾರಗಳು ಪ್ರೇರೇಪಿಸುವ ಬಗೆ ಇಷ್ಟವಾಯಿತು. ಇಲ್ಲಿನ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಹೇಗಿರುತ್ತದೆಂದರೆ ಇಲ್ಲೊಂದು ಸಸ್ಪೆನ್ಸ್ ಕಾಯ್ದುಕೊಂಡಿರುತ್ತದೆ. ಹೊಸ ಕಥೆಗಳು ಎಂಬ ಈ ಆಯ್ದ 9 ಹೊಸ ಕಥೆಗಳ ಪುಸ್ತಕಕ್ಕೆ ಯಾವುದಾದರೂ ಬೇರೆ ಚಂದದ ಶೀರ್ಷಿಕೆಯನ್ನು ಇಟ್ಟಿದ್ದರೆ ಇನ್ನೂ ಹೆಚ್ಚಿನ ಓದುಗರನ್ನು ಸೆಳೆಯುತ್ತಿತ್ತೇನೋ ಎಂಬುದು ನನ್ನ ಅಭಿಪ್ರಾಯ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ