ಅವಳು ಅವಳಾಗುತ್ತಿದ್ದಾಳೆ
ಮತ್ತೊಬ್ಬರಂತೆ ಬದುಕಲಾಗದ ಅನಿವಾರ್ಯಕ್ಕಲ್ಲ
ಅವಳು ಅವಳಂತೆಯೇ ಇರಬೇಕೆನ್ನುವ ಹಠಕ್ಕೆ
ಅವಳು ಅವಳಾಗುತ್ತಿದ್ದಾಳೆ
ಮತ್ತೊಬ್ಬರ ಮಾತನ್ನು ಪಾಲಿಸಲಾಗದ್ದಕ್ಕಲ್ಲ
ಅವಳ ಮನದ ಮಾತನ್ನು ಕೇಳುವ ನಿರ್ಧಾರಕ್ಕೆ
ಅವಳು ಅವಳಾಗುತ್ತಿದ್ದಾಳೆ
ಅವರಿವರ ಆಸೆಯ ಬಲಿಪಶುವಾಗಲು ಬಯಸದ್ದಕ್ಕಲ್ಲ
ಅವಳ ಪುಟ್ಟ ಪುಟ್ಟ ಆಸೆಗಳನ್ನು ನೆರವೇರಿಸಿಕೊಳ್ಳಲು
ಅವಳು ಅವಳಾಗುತ್ತಿದ್ದಾಳೆ
ಅವಳ ಅಹಂಕಾರವನ್ನು ಪೋಷಿಸಿಕೊಳ್ಳುವುದಕ್ಕಲ್ಲ
ಬದಲಿಗೆ ಸ್ವಾಭಿಮಾನದ ಹೆಜ್ಜೆ ಹಾಕಲು
ಅವಳು ಅವಳಾಗುತ್ತಿದ್ದಾಳೆ
ತನ್ನ ಮಾತೇ ನಡೆಯಬೇಕೆನ್ನುವ ದುರಾಭಿಮಾನಕ್ಕಲ್ಲ
ಬದಲಿಗೆ ತನ್ನ ಮಾತನ್ನು ತಾನೂ ಕೇಳಬೇಕೆನಿಸಿದ್ದಕ್ಕೆ
ಅವಳು ಅವಳಾಗುತ್ತಿದ್ದಾಳೆ
ಮತ್ತೊಬ್ಬರ ಭಿಕ್ಷೆಗೆ ಕೈ ಒಡ್ಡಲಾಗದ ಅನಿವಾರ್ಯಕ್ಕಲ್ಲ
ತನ್ನ ಅನ್ನವನ್ನು ತಾನೇ ದುಡಿದುಕೊಳ್ಳುವ ಚೈತನ್ಯದಿಂದ
ಅವಳು ಅವಳಾಗುತ್ತಿದ್ದಾಳೆ
ಅವರಿವರ ಅಡಿಯಾಳಾಗುತ್ತೇನೆಂಬ ಭಯಕ್ಕಲ್ಲ
ತನಗೆ ಬಲಿಷ್ಠ ಅಡಿಪಾಯವಿರುವುದಕ್ಕೆ
ಅವಳು ಅವಳಾಗುತ್ತಿದ್ದಾಳೆ
ಯಾವ್ಯಾವುದೋ ಅಸ್ಪಷ್ಟ ಕಾರಣಗಳಿಗಲ್ಲ
ತನ್ನ ಸ್ಪಷ್ಟ ನಿಲುವನ್ನು ನಿರೂಪಿಸುವುದಕ್ಕೆ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ