ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ಅವಳಿಗೆ ಮಾತನಾಡಲು ಬರುವುದಿಲ್ಲವೆಂದಲ್ಲ
ಮಾತನಾಡಿದರೆ ಸಿಡಿ ಗುಂಡುಗಳೇ ತಾಕುತ್ತವೆ
ಮಾತನಾಡುವಷ್ಟು ಅರ್ಹತೆ ಅವರು ಉಳಿಸಿಕೊಂಡಿಲ್ಲ
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ಅವಳು ಏನನ್ನೂ ನೋಡುವುದಿಲ್ಲವೆಂದಲ್ಲ
ಎಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಾಳೆ
ಆದರೆ ಹೇಳಿದರೆ ಅವಳ ಬಾಯಿ ಹೊಲಸು ಅಷ್ಟೇ
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ಅವಳ ಕಿವಿಗೆ ಏನೂ ಕೇಳುವುದಿಲ್ಲವೆಂದಲ್ಲ
ಅವಳು ಅತಿ ಸೂಕ್ಷ್ಮಗ್ರಾಹಿಯಾಗಿದ್ದಾಳೆ
ಕೇಳಿಸಿದ್ದೆಲ್ಲವೂ ಅವರ ಕೀಳು ಆಲೋಚನೆಗಳೇ
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ಅವಳು ಎಲ್ಲವನ್ನೂ ಸಹಿಸುತ್ತಾಳೆ ಎಂದಲ್ಲ
ಮೌನವೂ ತಾಳ್ಮೆಯೇ ಆಗಬೇಕೇಕೆ..?
ಮೌನವು ಅಸಹನೆಯ ಮತ್ತೊಂದು ರೂಪ ಕೂಡ
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ಅವಳು ದಡ್ಡಿ ಎಂದು ತಿಳಿಯಬೇಡಿ
ಎಲ್ಲವನ್ನೂ ಅರ್ಥೈಸಿಕೊಳ್ಳುವ ಬುದ್ಧಿವಂತೆಗೆ
ಎಲ್ಲಿ ಮಾತನಾಡಬೇಕೆಂಬುದು ಗೊತ್ತಿರುತ್ತದೆ ಅಲ್ಲವೇ
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ಅವಳ ಎಲ್ಲ ನಿರ್ಧಾರಕ್ಕೂ ತಲೆಬಾಗಿದ್ದಾಳೆ ಎಂದಲ್ಲ
ಎಲ್ಲದಕ್ಕೂ ಅಸಮ್ಮತಿ ಸೂಚಿಸುವ ಮುನ್ಸೂಚನೆಯಾಗಿ
ಒಂದು ಹೆಜ್ಜೆ ಹಿಂದೆಯೇ ಸರಿದಿದ್ದಾಳೆ ಅಷ್ಟೇ..
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ಅವಳು ಗೋಣಾಡಿಸಿ ಬಾಗುತ್ತಾಳೆ ಎಂದರ್ಥವಲ್ಲ
ಬಾಗುವವಳಿಗೆ ಬೀಗುವುದೂ ಗೊತ್ತು
ಬಗ್ಗಿಸಿವುದು ಇನ್ನೂ ಚೆನ್ನಾಗಿಯೇ ಗೊತ್ತು
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ಸರಿ - ತಪ್ಪುಗಳ ಅರಿವಿಲ್ಲವೆಂದಲ್ಲ
ಅವಳು ಸರಿ - ತಪ್ಪುಗಳ ವಿಮರ್ಶೆಗೆ ನಿಂತು
ಮತ್ತೊಬ್ಬರ ಮರ್ಯಾದೆ ಕಳೆಯಲು ಇಚ್ಛಿಸಿಲ್ಲ
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ನಿರ್ಲಕ್ಷ್ಯ, ಅಹಂ ಮತ್ತೊಂದು ಮಗದೊಂದು
ಏನನ್ನು ಬೇಕಾದರೂ ಅಂದುಕೊಳ್ಳಿ
ಆದರೆ, ಕೊನೆಗೆ ಅವಳು ಮೌನಿ ಎಂದಷ್ಟೇ ತಿಳಿಯಿರಿ
ಅವಳು ಮೌನವಾಗಿದ್ದಾಳೆ ಎಂದ ಮಾತ್ರಕ್ಕೆ
ನೂರು ಅರ್ಥಗಳನ್ನು ಕಲ್ಪಿಸಿಕೊಳ್ಳಬಹುದು
ಸಾವಿರಾರು ಪ್ರಶ್ನಾರ್ಥಕ ರೂಪ ಕೊಡಬಹುದು
ಆದರೆ, ಅವೆಲ್ಲದಕ್ಕೂ ಅವಳ ಮೌನವಷ್ಟೇ ಉತ್ತರ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ