ಮಂಗಳವಾರ, ಏಪ್ರಿಲ್ 7, 2026

ಆಡಿಸಿದಳೇಶೋಧೆ (ಪುಸ್ತಕ ಯಾನ - 99)


ಪುಸ್ತಕದ ಶೀರ್ಷಿಕೆ : ಆಡಿಸಿದಳೇಶೋಧೆ

ಲೇಖಕರು : ರೇಖಾ ಕಾಖಂಡಕಿ

ಪ್ರಕಾಶಕರು :ಶ್ರೀ ಸೌಮ್ಯ ಪ್ರಕಾಶನ

ಪುಟಗಳು : 165


ಭಾನು ತಾನು ಆಸ್ಪತ್ರೆಗೆ ಸೇರಿ ನಾಲ್ಕು ದಿನಗಳಾದರೂ ಹೆರಿಗೆಯಾಗದೆ, ಹೆರಿಗೆಯ ನೋವು ಬಿಟ್ಟು-ಬಿಟ್ಟು ಬರುತ್ತಿದ್ದಾಗ, ಆಸ್ಪತ್ರೆಯಲ್ಲಿ ಬೇರೆಯವರನ್ನು ನೋಡಿದಾಗ, ಅವಳಿಗೆ ಹಿಂದಿನದ್ದೆಲ್ಲಾ ನೆನಪಾಗಿತ್ತು. ಹತ್ತು ವರ್ಷದ ನಂತರ ತಾನು ಮಗುವಿಗೆ ಜನ್ಮ ನೀಡುತ್ತಿರುವ ಸಂತಸ ಒಂದೆಡೆಯಾದರೆ, ಮತ್ತೊಂದೆಡೆ ಆತಂಕ. ಅಲ್ಲದೇ, ಕುಟುಂಬದವರು ತನ್ನೊಡನೆ ಇಲ್ಲದ ನೋವೂ ಮನಸ್ಸಿನ ಮೂಲೆಯಲ್ಲಿ ಕಾಡುತ್ತಿತ್ತು. ಆದರೆ, ಆದಾವುದೂ ಅವಳನ್ನು ಬಾಧಿಸದಂತೆ, ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದವನು ಗಂಡ ಹೇಮಂತ. ಜೊತೆಗೆ, ಒಡಹುಟ್ಟಿದವಳಂತೆ ಆರೈಕೆ ಮಾಡುತ್ತಿದ್ದದ್ದು ಭಾನುವಿನ ಆತ್ಮೀಯ ಗೆಳತಿ ವಂದನ. 


ಭಾನು ಹಾಗೂ ಹೇಮಂತ ಇಬ್ಬರದ್ದೂ ಪ್ರೇಮ ವಿವಾಹ. ಅಲ್ಲದೇ, ಅಂತರ್ಜಾತಿಯ ವಿವಾಹ. ಆದುದರಿಂದ ಭಾನುವಿನ ಮನೆಯಲ್ಲಿ ಇದಕ್ಕೆ ಸುತಾರಾಂ ಒಪ್ಪಿಗೆ ಇರಲಿಲ್ಲ. ತಂದೆ ಇಲ್ಲದ ಅವಳಿಗೆ ಇದ್ದದ್ದು ತಾಯಿ, ಅಕ್ಕ ,ಅಣ್ಣ, ತಂಗಿ. ಅಕ್ಕ, ಅಣ್ಣ ಹಾಗೂ ಅಮ್ಮನ ವಿರೋಧದ ನಡುವೆಯೂ ಆಕೆ ಹೇಮಂತನನ್ನು ಮೆಚ್ಚಿ ಮನೆ ಬಿಟ್ಟು ಬಂದಿದ್ದಳು. ಇತ್ತ ಹೇಮಂತನ ತಂದೆ ಮದುವೆಗೆ ಒಪ್ಪಿದ್ದರು. ಆತನಿಗೆ ತಾಯಿ ಇರಲಿಲ್ಲ. ಆತನ ತಂದೆ ತೀರಿಕೊಂಡ ನಂತರ ಕಂಪನಿಯ ಜವಾಬ್ದಾರಿಗಳೆಲ್ಲವೂ ಹೇಮಂತನ ಹೆಗಲೇರಿದ್ದವು. ಅಲ್ಲದೇ, ಆಗರ್ಭ ಶ್ರೀಮಂತನಾದ ಹೇಮಂತ ಭಾನುವನ್ನು ಒಪ್ಪಿಯಾಗಿತ್ತು. ಇಬ್ಬರದ್ದೂ ಬಾಲಿಶವಾದ ಆಯ್ಕೆಯಲ್ಲ. ಹುಡುಗುತನದ ಪ್ರೇಮವಲ್ಲ.  ಭಾನುವಿಗಿಂತ ಹೇಮಂತ ಕೆಳಜಾತಿ. ಆದರೆ, ಪ್ರೀತಿಗೆ ಜಾತಿ ಅಡ್ಡಿಯಾಗಿರಲಿಲ್ಲ. ಭಾನುವಿನ ಮನೆಯಲ್ಲಿ ಯಾರೂ ಒಪ್ಪಿರಲಿಲ್ಲ. ಅಷ್ಟೇ ಅಲ್ಲದೆ ಚುಚ್ಚು ಮಾತುಗಳಿಂದ ನೋಯಿಸಿ ಕಳುಹಿಸಿದ್ದರು.


ಅವಳನ್ನು ಅಷ್ಟು ವರ್ಷ ಯಾವುದೂ ಬಾಧಿಸಿರಲಿಲ್ಲ .ಹೇಮಂತನ ಪ್ರೀತಿ, ಕಾಳಜಿಯಲ್ಲಿ 10 ವರ್ಷಗಳು ಸೆಕೆಂಡಿನ ಮುಳ್ಳುಗಳಂತೆ ಕಳೆದಿದ್ದವು. ಒಂದೆರಡು ತಿಂಗಳ ಹಿಂದೆ ತನ್ನ ತಾಯಿಯನ್ನು, ತಂಗಿಯ ಜೊತೆ ನೋಡಿದಾಗ.. ತಂಗಿ ಶಾಲಿನಿಯನ್ನು ಮಾತಾಡಿಸಿದಾಗ ತಾಯಿಯ ಅಸಡ್ಡೆಯ ಹಾಗೂ ಚುಚ್ಚು ಮಾತುಗಳು ಅವಳನ್ನು ಘಾಸಿಗೊಳಿಸಿದವು .ಅವಳ ತಂಗಿ ಶಾಲಿನಿಗೆ ಈಗಾಗಲೇ ಮದುವೆಯಾಗಿದ್ದು ,ಅದೇ ಪಟ್ಟಣದಲ್ಲಿದ್ದಳು. ಅವಳೂ ಆಗ ಗರ್ಭಿಣಿಯೇ.. ಅವಳಿಗೆ ಭಾನುವಿನ ಮೇಲೆ ಯಾವ ಕೋಪ-ತಾಪ, ಆಸಡ್ಡೆಗಳೂ ಇರಲಿಲ್ಲ.


ಮದುವೆಯಾಗಿ ಅಷ್ಟು ವರ್ಷ ಮಕ್ಕಲಿಲ್ಲದಕ್ಕೆ ತವರಿನವರು ನಾನಾ ರೀತಿಯಲ್ಲಿ ಚುಚ್ಚು ಮಾತನಾಡಿ ಹಿಂಸಿಸಿದ್ದರು. ಆಡಿಕೊಳ್ಳುವವರ ಬಾಯಿ ಮುಚ್ಚಿಸುವಂತೆ ಶಾಲಿನಿ ಹಾಗೂ ಹೇಮಂತರಿಗೆ ಗಂಡು ಮಗುವಾಗಿತ್ತು. ವಂದನಾಳೆ ಆರೈಕೆ ಮಾಡಿ ಜೋಪಾನ ಮಾಡಿದ್ದಳು. ನಂತರ, ಎಲ್ಲವೂ ಸರಿಯಿತ್ತು. ಆದರೆ, ಭಾನು ತನ್ನ ತಂಗಿ ಶಾಲಿನಿಯ ಮನೆಗೆ ಹೋದಾಗ ಅಲ್ಲಿ ಮೂರು ತಿಂಗಳ ಪುಟ್ಟ ಕಂದಮ್ಮನನ್ನು ನೋಡಿ ತನ್ನ ಮಗುವಿನ ಕುರಿತು ಏನೋ ಸಂದೇಹ ಬಂದಿತು. ಅದನ್ನು ಹೇಮಂತನ ಜೊತೆಗೂ ಚರ್ಚಿಸಿದ್ದಳು. ನಂತರ ವೈದ್ಯರಿಗೂ ತೋರಿಸಿದಾಗ ಗೊತ್ತಾಗಿದ್ದು ಅವರ ಮಗು ಬುದ್ಧಿಮಾಂದ್ಯವಾಗಿದ್ದು ಬೆಳವಣಿಗೆ ಕುಂಠಿತವಾಗಿತ್ತೆಂದು.


ಆದರೆ, ಇಬ್ಬರೂ ಅದಕ್ಕೆ ಜಗ್ಗದೆ, ಆರೈಕೆ ಮಾಡಿ ಮಗುವನ್ನು ಸ್ವತಂತ್ರವಾಗಿ ಬೆಳೆಸುವ ಗಟ್ಟಿ ನಿರ್ಧಾರ ಮಾಡಿದ್ದರು. ಹೇಮಂತನದ್ದು ಬಹಳ ಧೀಮಂತ ವ್ಯಕ್ತಿತ್ವ. ಭಾನು ಕುಗ್ಗಿದಾಗ ಅವಳಿಗೂ ಧೈರ್ಯ ತುಂಬುತ್ತಿದ್ದ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತುಂಗಕ್ಕ ಕೂಡ ಇದೆಲ್ಲದಕ್ಕೂ ನೆರವಾಗಿ ನಿಂತಿದ್ದರು. ಆ ಸಂದರ್ಭದಲ್ಲಿ ದೂರ ಉಳಿದವಳೆಂದರೆ ವಂದನ. 


ವಂದನಳಿಗೆ ಮದುವೆಯಾಗಿದ್ದು ಭಾನುವಿನ ಮದುವೆಯಾಗಿ ನಾಲ್ಕು ವರ್ಷದ ನಂತರ. ಮೊದಲಿಗೆ ಎಲ್ಲವೂ ಸರಿ ಇತ್ತು. ಆದರೆ, ಅವಳ ಗಂಡ ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಅದನ್ನು ಭಾನು ಗಮನಿಸಿದಳು ಸಹ. ಆದರೆ, ಅದು ಸಮಸ್ಯೆಯೂ ಆಗಿರಲಿಲ್ಲ. ಆದರೆ, ಎರಡು ಬಾರಿಯೂ ಹುಟ್ಟಿದ ಮಕ್ಕಳು ಅವಳ ಪಾಲಿಗೆ ಉಳಿಯದಿದ್ದಾಗ ಗಂಡ ಹಾಗೂ ಅತ್ತೆ ಅಸಡ್ಡೆ ಮಾಡಲು ಶುರು ಮಾಡಿದರು. ಪರೋಕ್ಷವಾದ ಅವರ ಒತ್ತಾಯದ ನಂತರ ಅವಳದ್ದೇ ನಿರ್ಧಾರದಂತೆ ಅವಳ ಗಂಡ ಮತ್ತೊಂದು ಮದುವೆಯಾಗಿದ್ದ. ಈಕೆ ಕೆಲಸಕ್ಕೆ ಸೇರಿ ವರ್ಗಾವಣೆ ತೆಗೆದುಕೊಂಡು ದೂರಕ್ಕೆ ಹೊರಟಳು. 


ಭಾನು ಹಾಗೂ ಹೇಮಂತ ಮಗುವನ್ನು ನೋಡಿಕೊಳ್ಳುತ್ತಿದ್ದ ಪರಿಯಿಂದ ಮಗು ಚೇತರಿಸಿಕೊಂಡಿತ್ತು. ಆದರೆ, ಆರು ವರ್ಷದ ನಂತರ ವಿಷಮ ಶೀತ ಜ್ವರದಿಂದ ಮಗು ತೀರಿಕೊಂಡಿತು. ಇದಾದ ನಂತರ ಭಾನು ಮಾನಸಿಕವಾಗಿ ಕುಗ್ಗಿ ಹೋದಳು. ಆದರೆ, ಹೇಮಂತ ಇದೆಲ್ಲದನ್ನೂ ಸಮಚಿತ್ತವಾಗಿ ತೆಗೆದುಕೊಂಡು, ತಾವು ಯಾವುದಾದರೂ ಅನಾಥ, ಅಂಗವಿಕಲ ಮಗುವನ್ನು ಸಾಕಿ ಅದರ ಬಾಳಿಗೆ ಬೆಳಕಾಗೋಣ. ಎನ್ನುವ ಸಲಹೆ ನೀಡುತ್ತಾನೆ. ಭಾನುವಿಗೂ ಈ ಸಲಹೆ ಒಪ್ಪಿಗೆಯಾಗುತ್ತದೆ. ನಂತರ, ಇದು ಇನ್ನೇನು ಕಾರ್ಯರೂಪಕ್ಕೆ ಬರಬೇಕು ಎನ್ನುವ ಮುಂಚೆ ಯಾವುದೋ ಕಾರ್ಯನಿಮಿತ್ತ ಹೋಗಿದ್ದ ಹೇಮಂತ ವಿಮಾನ ಅಪಘಾತದಲ್ಲಿ ತೀರಿಕೊಳ್ಳುತ್ತಾನೆ. 


ಮಗು ಸತ್ತಾಗ, ಗಂಡ ಸತ್ತಾಗ ಯಾವ ಸಂದರ್ಭದಲ್ಲಿಯೂ ಬರದ ಭಾನುವಿನ ಅಮ್ಮ, ಅಕ್ಕ ,ಅಣ್ಣ ಎಲ್ಲರೂ ಬಂದು ಅವಳ ಮನೆಯಲ್ಲಿ ನೆಲೆ ನಿಲ್ಲುತ್ತಾರೆ. ಇದೇ ಸಂದರ್ಭದಲ್ಲಿ ವಂದನ ಕೂಡ ಮತ್ತೆ ಇಲ್ಲಿಗೆ ವರ್ಗಾವಣೆ ತೆಗೆದುಕೊಳ್ಳುವಂತಾಗುತ್ತದೆ. ಅದಕ್ಕೆ ಕಾರಣವೇನು..?? ಭಾನು ಹೇಮಂತನ ಆಸೆಯಂತೆ ನಡೆದುಕೊಂಡಳಾ..?? ಅಥವಾ ಅವಳ ಆ ಕನಸು ಅಲ್ಲಿಗೆ ಮುರುಟಿ ಹೋಯಿತಾ..?? ಭಾನುವಿನ ಅಕ್ಕ ,ಅಣ್ಣ, ಅಮ್ಮ ಎಲ್ಲರೂ ಅಲ್ಲಿ ಬಂದು ನೆಲೆಯೂರಿದ್ದರ ಹಿನ್ನೆಲೆ ಏನು..?? ಇವರಿಂದ ಭಾನುವಿನ ನಿರ್ಧಾರದ ಮೇಲೆ ಆದ ಪರಿಣಾಮವೇನು..?? ಈ ಎಲ್ಲದಕ್ಕೂ ಉತ್ತರವಾಗಿ ಓದಿ ಆಡಿಸಿದಳೇಶೋದೆ ಕಾದಂಬರಿಯನ್ನು.


ಯಾವ ಕಷ್ಟ ಬಂದರೂ ಕುಗ್ಗದೆ, ಮುನ್ನುಗ್ಗಿ ನಡೆಯುವ ಛಾತಿಯ ವಂದನ, ಭಾನು ಹಾಗೂ ಹೇಮಂತರು ಸ್ಫೂರ್ತಿಯಂತೆ ಕಾಣುತ್ತಾರೆ. ಇಲ್ಲಿ ಮಕ್ಕಳ ಆರೋಗ್ಯ ಸಮಸ್ಯೆಯ ಕಾರಣ, ಅದರಿಂದ ಹೊರ ಬರಲು ಪರಿಹಾರದ ಮೇಲೆಯೂ ಬೆಳಕು ಚೆಲ್ಲಿದೆ. ಅಂಗವಿಕಲರು, ಅನಾಥರು ಹಾಗೂ ಬುದ್ಧಿಮಾಂದ್ಯ ಮಕ್ಕಳ ಚಿತ್ರಣವಿದೆ. 


ಬದುಕಿನಲ್ಲಿ ಬಂದ ಸಮಸ್ಯೆಗಳಿಗೆಲ್ಲಾ ಕೇವಲ ಆತ್ಮಹತ್ಯೆ ಪರಿಹಾರ ಎನ್ನುವವರಿಗಂತೂ.. ಈ ಸಮಸ್ಯೆಗಳಿಗೆಲ್ಲಾ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು..?? ಎನ್ನುವ ಮಾರ್ಗದರ್ಶಿಯಂತಿದೆ.   ಕೌಟುಂಬಿಕ ಹಾಗೂ ಸ್ಪೂರ್ತಿದಾಯಕ ಕಥನದ ಜೊತೆಗೆ ಸಾಮಾಜಿಕ ಕಳಕಳಿಯೂ ಸೇರಿ ಕಾದಂಬರಿ ಇಷ್ಟವಾಯಿತು. ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ