ಮಂಗಳವಾರ, ಏಪ್ರಿಲ್ 7, 2026

ಅಮ್ಮ ಕೊಟ್ಟ ಜಾಜಿ ದಂಡೆ (ಪುಸ್ತಕ ಯಾನ - 100)


 ಪುಸ್ತಕದ ಶೀರ್ಷಿಕೆ : ಅಮ್ಮ ಕೊಟ್ಟ ಜಾಜಿ ದಂಡೆ

ಲೇಖಕರು : ಮಂಜುನಾಥ ಚಾಂದ್

ಪ್ರಕಾಶಕರು : ಅಕ್ಷರ ಮಂಡಲ ಪ್ರಕಾಶನ

ಮೊದಲನೇ ಮುದ್ರಣ : 2018

ಪುಟಗಳು : 104

ಬೆಲೆ : 100 ರೂ. 


ಅಮ್ಮನೆಂದರೆ ಪ್ರತಿ ಮಕ್ಕಳ ಕಣ್ಣಲ್ಲಿಯೂ ಆಕೆ ಅಚ್ಚರಿಯ ಜೀವ.. ತಮ್ಮ ಸ್ಫೂರ್ತಿ. ಅವಳು ಮಾಡುವ ಕೆಲಸದ ಮೂಲಕವೇ ತಮ್ಮೆಲ್ಲ ಜೀವನ ಪಾಠಗಳನ್ನು ಮಕ್ಕಳಿಗೆ ತೋರುವ ಅಮ್ಮನ ಕುರಿತು ಎಷ್ಟು ಹೇಳಿದರೂ ಕಡಿಮೆಯೇ.. ಆದರೆ, ಅಮ್ಮನ ದೈನಂದಿನ ಕಾಯಕ, ಬೆಳೆದ/ಬೆಳೆಸಿದ ಪರಿಸರ, ಬದುಕಿದ ರೀತಿ ಹೀಗೆ ಅಮ್ಮ ದಕ್ಕಿದಷ್ಟನ್ನು ಸುಂದರವಾಗಿ ಜಾಜಿ ದಂಡೆಯಂತೆಯೇ ಪೋಣಿಸಿ ಕೊಟ್ಟಿದ್ದಾರೆ ಲೇಖಕರಾದ ಮಂಜುನಾಥ ಚಾಂದ್. ಇದು ನಾನು ಓದಿದ ಈ ಲೇಖಕರ ಮೊದಲ ಪುಸ್ತಕ.


ಮಂಜುನಾಥ್ ಚಾಂದ್ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತ್ರಾಸಿಯವರು. ಸ್ನಾತಕೋತ್ತರ ಪದವಿ ಪಡೆದು ಪತ್ರಿಕೋದ್ಯಮದಲ್ಲಿ ಕೆಲಸ ಆರಂಭಿಸಿದವರು. 'ಕದ ತೆರೆದ ಆಕಾಶ' ಇವರ ಮೊದಲ ಕಥಾ ಸಂಕಲನ.


ಅಮ್ಮ ಹೆಣೆದ ಜಾಜಿ ಮಾಲೆ : ಆಕೆ ಹೂ ಕಟ್ಟುವ ರೀತಿಯನ್ನು ಮಾತ್ರವಲ್ಲಮ್. ಆಕೆಯ ಧ್ಯಾನಸ್ಥ ಸ್ಥಿತಿಯನ್ನು ದಾಖಲಿಸುತ್ತಾ ಅಮ್ಮನ ಹಸನ್ಮುಖಿತನ ಹಾಗೂ ಆಕೆ ಜೀವನದ ದಾರದಲ್ಲಿ ಬದುಕನ್ನು ಹೂವಿನಂತೆ ನಾಜೂಕಾಗಿ ಕಟ್ಟುವ ಪರಿಯನ್ನು ಹೇಳುತ್ತಲೇ.. ಆಕೆಯ ಮುಪ್ಪಿನಲ್ಲಿ ಕೈ ಸುಕ್ಕುಗಳು ಬಂದಾಗಿನ ಅಮ್ಮನನ್ನೂ ಪರಿಚಯಿಸುತ್ತಾರೆ.


ಅಮ್ಮನೊಂದಿಗೆ ಕಾಡ ಹಾದಿಯ ಹೆಜ್ಜೆ : ಅಮ್ಮ ಕಾಡಿನಲ್ಲಿ ಕಳೆದುಹೋಗದಂತೆ, ಅಲ್ಲಿನ ಸರ್ಪಗಳಿಗೆ ಬೆದರದಂತೆ, ಕವಲುದಾರಿಗಳನ್ನು ಪರಿಚಯ ಮಾಡಿ ಕೊಟ್ಟಿರುವ ಬಗೆ. ಜೊತೆಗೆ, ಪರಿಸರವನ್ನು ಮಕ್ಕಳಿಗೆ ಸೂಕ್ಷ್ಮವಾಗಿ ಅರ್ಥ ಮಾಡಿಸಿರುವ ಪರಿ ಇಷ್ಟವಾಯಿತು.


ಒಂದೇ ಲಾಟೀನಿನ ಕೆಳಗೆ :ಸಂಜೆಯಾದರೆ ಲಾಟೀನಿನ ಕೆಳಗೆ ದಿನಗಳನ್ನು ಕಳೆಯುವ ಪರಿ ಅಂದಿನ ಸಂಸಾರಗಳಲ್ಲಿತ್ತು. ಲಾಟೀನು ಹಚ್ಚಲು ಅದನ್ನು ಸ್ವಚ್ಛಗೊಳಿಸಬೇಕಿತ್ತು. ಆ ಕೆಲಸವನ್ನು ನಾಜೂಕಾಗಿಯೇ ಮಾಡಬೇಕಿತ್ತು. ಅದರ ಕುರಿತು ಎಚ್ಚರಿಕೆಯನ್ನು ನೀಡುತ್ತಲೇ ಅಮ್ಮ ಬದುಕನ್ನು ಜತನ ಮಾಡುತ್ತಿದ್ದ ಬಗಗೆ ಇಲ್ಲಿದೆ.


ಹರಾಮಿ ಕಾಯ್ಲಾ ದನದ ಬಾಣಂತನ : ಕಾಯ್ಲಾ ಎನ್ನುವ ದನ ಹರಾಮಿಯೆಂದೇ ಕುಖ್ಯಾತಿ ಪಡೆದಿತ್ತು. ಮನೆಯ ಮಗಳಂತೆ ಇದ್ದ ದನದ ಬಾಣಂತನ ಮಾಡುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಅಮ್ಮ ಅದರ ಜೊತೆಗೆ ತಿಣುಕಾಡುತ್ತಾ, ಮನೆಯ ಉಳಿದ ಎಲ್ಲಾ ಕೆಲಸಗಳನ್ನು ಮಾಡುತ್ತಾ ಜೀವನ್ಮುಖಿಯಂತಿದ್ದ ಘಟನೆಯ ಜೊತೆಗೆ, ಅಷ್ಟು ಹರಾಮಿಯಾಗಿದ್ದ ದನವನ್ನು ಮೂಗುದಾರ ಹಾಕುತ್ತಿದ್ದ ಪರಿಯೂ ಇಲ್ಲಿದೆ.


ದೂರ ಕುಳಿತು ಬಿಡುವ ಅಮ್ಮನ ಆ ದಿನಗಳು : ಚಿಕ್ಕಂದಿನಲ್ಲಿ ಹಳ್ಳಿಗಳಲ್ಲಿ ಮುಟ್ಟಿನ ಆ ದಿನಗಳಲ್ಲಿ ಬೇರೆ ಇರುವ ಪದ್ಧತಿಯಿತ್ತು. ವೈಜ್ಞಾನಿಕವಾಗಿ ಹೆಣ್ಣು ಮಕ್ಕಳಿಗೆ ವಿಶ್ರಾಂತಿ ಕೊಡುವ ದಿನಗಳು ಅವು. ಆದರೆ, ಹೆಣ್ಣು ಮಕ್ಕಳಿಗೆ ಕೆಲಸ ತಪ್ಪುತಿರಲಿಲ್ಲ. ಇಲ್ಲಿ ಅಮ್ಮ ಆ ದಿನಗಳಲ್ಲಿ ಮನೆಯೊಳಗೆ ಬರದಿದ್ದರೂ.. ಆ ದೂರವಿರುವ ದಿನ ಅಂಗಳದ ಕೆಲಸಕ್ಕೋ ತೋಟದ ಕೆಲಸಕ್ಕೋ ಹೋಗುವ ಪರಿಪಾಠವಿಟ್ಟುಕೊಂಡಿದ್ದರು. ಹಾಗೆಂದು, ಆಕೆಗೆ ಯಾರೂ ಕೆಲಸ ಮಾಡು ಎನ್ನುವ ಒತ್ತಡ ಹೇರುತ್ತಿರಲಿಲ್ಲ. ಆದರೆ, ಸುಮ್ಮನೆ ಕುಳಿತು ಬಿಡಬಾರದು ಎಂಬ ಜಿದ್ದಿನಿಂದ ಹಠಕ್ಕೆ ಬಿದ್ದಂತೆ ಕೆಲಸ ಮಾಡುವ ಅವಳ ಕೆಲಸದ ದೈತ್ಯತೆಯನ್ನು ಇಲ್ಲಿದೆ.


ಹೊಸ ಸೀರೆಯ ದಾರವನ್ನು ಎಳೆದು : ಹೊಸ ಬಟ್ಟೆಯನ್ನು ತಂದಾಗಲೆಲ್ಲಾ ಅದರಲ್ಲೂ ಹೊಸ ಸೀರೆಯನ್ನು ಆಕೆ ಪೂಜಿಸಿ, ಅದನ್ನು ಉಡುತ್ತಿದ್ದ ರೀತಿ ,ಜತನ ಮಾಡುತ್ತಿದ್ದ ಪರಿ ಹಾಗೂ ಆಕೆಗೆ ಸೀರೆಯ.. ಅದರಲ್ಲೂ ಗಿಣಿ ಹಸಿರು ಸೀರೆಯ ಮೇಲಿದ್ದ ಆಸೆ ಇನ್ನು ಹಸುರಾಗಿ ಕಾಣುವಂತಿದೆ.


ಅಮ್ಮ ಕೊಟ್ಟ ಡೆಪಾಸಿಟ್ಟು : ಆಕೆ ಕಟ್ಟುತ್ತಿದ್ದ ಹೂ ಹಿಡಿದು, ಹಾಲು ಮಾರಿ ಕಾಲೇಜಿಗೆ ಹೋಗುತ್ತಿದ್ದ ಲೇಖಕರ ದಿನಗಳು ಇಲ್ಲಿ ತೆರೆದುಕೊಂಡಿವೆ. ಅಷ್ಟೇ ಅಲ್ಲದೆ ಚಿಕ್ಕಂದಿನಿಂದ ಅಮ್ಮನ ಬ್ಯಾಂಕ್ ಎಂದೇ ಖ್ಯಾತವಾಗಿದ್ದ ಕೇಲ್ ಮಡಿಕೆಯ ಒಳಗಿನ ರಹಸ್ಯಗಳೂ  ಬಯಲಾಗಿವೆ.


ಪ್ರತಿ ಶನಿವಾರದ ನೋವಿನ ರಾತ್ರಿ :ಅಮ್ಮ ಲವಲವಿಕೆಯಿಂದ ಇರುತ್ತಿದ್ದುದಷ್ಟನ್ನೇ ಹೇಳಿದ್ದ ಲೇಖಕರು ಅವರ ನೋವಿನ ಬಗ್ಗೆ ತಿಳಿಸುವಾಗ ಮನಸ್ಸು ಅರ್ದ್ರವಾಗುತ್ತದೆ. ಶನಿವಾರವೇ ಏಕೆ ನೋವಿನ ರಾತ್ರಿ ಎಂಬುದನ್ನು ತಿಳಿಯಲು ಓದಿನೋಡಿ. 


ಹಿಂಡಿ ಹಿಪ್ಪೆ ಮಾಡಿದ್ದ ಹೃದಯದ ಕಾಯಿಲೆ : ಅಮ್ಮನಿಗೆ ಐವತ್ತರ ಆಸುಪಾಸಿನಲ್ಲಿ ಕಾಣಿಸಿಕೊಂಡ ಹೃದಯದ ಕಾಯಿಲೆ ಆಕೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದು, ಅಮ್ಮನನ್ನು ನೋಡಿಕೊಳ್ಳುತ್ತಿದ್ದ ರೀತಿ ಹಾಗೂ ಅಮ್ಮ ಮಾಡುತ್ತಿದ್ದ ಕೆಲಸಗಳೆಲ್ಲವನ್ನೂ ಕಲಿತುಕೊಂಡ ದಿನಗಳು ಇಲ್ಲಿವೆ. 


ಸಾವನ್ನು ಗೆದ್ದು ಬಂದ ಪರಿ : ಅಮ್ಮ ಎಂದಾದರೂ ಅಷ್ಟು ಬೇಗ ಮಕ್ಕಳಿಂದ ದೂರ ಹೋದಾಳಾ..?? ಡಾಕ್ಟರ್ ಒಬ್ಬರು ದೇವರ ರೂಪದಲ್ಲಿ ಬಂದು ಅಮ್ಮನನ್ನು ಬದುಕಿಸಿದ ಪರಿ ಇಲ್ಲಿದೆ. ಅಲ್ಲದೇ,  ಅಮ್ಮ ನಂಬಿಕೆಯಿಂದ ಸಣ್ಣಗೆ ಹೇಳುತ್ತಿದ್ದ ಮೃತ್ಯುಂಜಯ ಮಂತ್ರದ ಕುರಿತು ಕೇಳಿದಾಗ ರೋಮಾಂಚನವಾಗುತ್ತದೆ. 


ಕೇವಲ ಅಮ್ಮನ ಬಗ್ಗೆ ಹೇಳಿದರೆ ಮಾತ್ರ ಅಮ್ಮನ ಬದುಕು ಅಪೂರ್ಣವೆಂದೆನಿಸಬಹುದು. ಹಾಗಾಗಿ ಅಮ್ಮನ ಅರ್ಧಾಂಗಿಯ ಕುರಿತ ಪ್ರಸ್ತಾಪವೂ ಇಲ್ಲಿದೆ. 


ಯಾವ ಜನ್ಮದ ಗೆಳೆಯನೋ : ಅಪ್ಪ ಮಕ್ಕಳ ಸ್ನೇಹದ ಪುಟ ತೆರೆದುಕೊಂಡಿದೆ.


ಸಂತನಂತಹ ಅಪ್ಪನ ಜೊತೆ ಹಾಕಿದ ಹೆಜ್ಜೆಗಳು : ಅಪ್ಪನ ಕೆಲಸ, ಜೀವನ ಇವೆಲ್ಲದರ ಕುರಿತು ನೆನೆಯುತ್ತಾ.. ಕತ್ತಲ ಹಾದಿಯಲ್ಲಿ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. 


'ಮತ್ತೆ ಮಗುವಾಗಬೇಕು' ಎಂಬ ಆಸೆಯನ್ನು ಕವನದ ರೂಪದಲ್ಲಿ ಹೇಳುತ್ತಾ.. 'ನಕ್ಷತ್ರಗಳನ್ನು ಹಾಸಿದವಳು' ಎನ್ನುತ್ತಾ ಅಮ್ಮನನ್ನು ಕವಿತೆಯಾಗಿಯೂ ನೆನೆಯುತ್ತಾರೆ. 


ಅಮ್ಮನನ್ನು ಕಟ್ಟಿಕೊಡುವ ಪರಿ ಸುಲಭವಲ್ಲ. ಆದರೆ, ಆಯ್ದ ಕೆಲವು ಘಟನೆಗಳಿಂದಲೇ ಅಮ್ಮನ ವ್ಯಕ್ತಿತ್ವವನ್ನು ಜಾಜಿ ದಂಡೆಯಷ್ಟೇ ಸುಂದರವಾಗಿ ಪೋಣಿಸಿ, ಆಕೆ ಮಕ್ಕಳಿಗೂ ಅಂಟಿಸಿ ಹೋಗಿರುವ ಆಕೆಯ ಅಭ್ಯಾಸದ ಘಮಲನ್ನು ತೋರಿಸುತ್ತಿದ್ದಾರೆ ಲೇಖಕರು. ಅಲ್ಲಲ್ಲಿ ಬಾಲ್ಯ, ಹರೆಯ, ಜೀವನ ಪಾಠ ಎಲ್ಲವನ್ನೂ ಹದವಾಗಿ ನಿರೂಪಿಸುತ್ತಾ ತಾದ್ಯಾತ್ಮ್ಯದಿಂದ ಓದುವಂತೆ ಮಾಡುತ್ತಾರೆ.


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ