ಪುಸ್ತಕದ ಶೀರ್ಷಿಕೆ : ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು
ಲೇಖಕರು : ಶಾಂತಿ ಕೆ. ಅಪ್ಪಣ್ಣ
ಪ್ರಕಾಶಕರು : ಸಂಗಾತ ಪುಸ್ತಕ
ಪ್ರಥಮ ಮುದ್ರಣ : 2020
ಪುಟಗಳು : 178
ಬೆಲೆ : 170 ರೂ.
ಕಥೆಗಾರ್ತಿ ಶಾಂತಿ ಕೆ ಅಪ್ಪಣ್ಣ ಅವರು ಮೂಲತಃ ಕೊಡಗಿನವರು. ವೃತ್ತಿ ನಿಮಿತ್ತ ಈಗ ಚೆನ್ನೈನಲ್ಲಿ ವಾಸ. 'ಮನಸು ಅಭಿಸಾರಿಕೆ' ಹಾಗೂ 'ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು' ಇವರ ಪ್ರಕಟಿತ ಕಥಾಸಂಕಲನಗಳು. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಯುವ ಪುರಸ್ಕಾರವನ್ನು ಪಡೆದಿದ್ದಾರೆ.
ಈ ಕಥಾ ಸಂಕಲನದಲ್ಲಿ ಒಟ್ಟು 13 ಕಥೆಗಳಿವೆ.
ಈ ಕಥೆಗೆ ಹೆಸರಿಲ್ಲ :
"ಹೆಣ್ಣಿನ ತೀವ್ರತೆಯೇ ಅವಳ ಬಿಡುಗಡೆಯ ದಾರಿ. ಗಂಡಿನ ಅಸಡ್ಡಾಳತೆಯೇ ಅವನ ದುರಂತ" ಎನ್ನುತ್ತಾ ಸರಾಗವಾಗಿ ಕಥೆ ಹೇಳಿದವನು ನಿಗೂಢವಾಗಿ ನಕ್ಕು ಕಥೆಗಾರನ ಬಳಿ ಈ ಕಥೆಯಲ್ಲಿ ತನ್ನ ಪಾತ್ರವನ್ನು ತಿಳಿಯುವುದರಿಂದ ಕಥೆಯ ಆಯಾಮವೇನು? ಬದಲಾಗುವುದಿಲ್ಲವೆಂದು ಹೇಳುತ್ತಾನೆ. ತನ್ನ ಹಾಗೂ ನೀಲಿಮಾ ನಡುವೆ ನಡೆದ ಸಂವಾದದಲ್ಲಿ ಬಂದ ಈಶಾನ್ಯೆ ಈಗ ಸಮಸ್ಯೆಯೇ ಅಲ್ಲ ಎನ್ನುವಷ್ಟು ಸರಳವಾಗಿ ಸರಿದು ಹೋಗಿ ಬಿಡುವಂತನಿಸುತ್ತಾದರೂ.. ಆತ ಹಾಗೆ ಮಾಡುವುದಿಲ್ಲ. ಇಲ್ಲಿ ಕತೆಗಾರನಿಗೊಂದು ಕಥೆ ಸಿಕ್ಕಿತು. ಆದರೆ, ಆತನ ಕಥೆಗೆ ಹೆಸರಿಲ್ಲ. ಓಪನ್ ಎಂಡೆಡ್ ಕಥೆಯಂತೆನಿಸಿದರೂ ಕಥೆಯ ಅಂತ್ಯ ಎಲ್ಲವನ್ನೂ ಹೇಳದೆಯೂ ಹೇಳಿತು.
ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು :
ಅಭಿರಾಮಿಗೆ ಜೀವನದಲ್ಲಿ ಬಹಳ ಆಸೆಗಳಿರಲಿಲ್ಲ. ಇದ್ದದ್ದು ಸಣ್ಣಪುಟ್ಟ ಆಸೆಗಳಷ್ಟೇ.. ಆದರೆ, ಆ ಸಣ್ಣಪುಟ್ಟ ಆಸೆಗಳು ಸುಲಭವಾಗಿ ಈಡೇರುವಂತಿರಲಿಲ್ಲ. ಅವಳು ಎಲ್ಲರಂತಲ್ಲ. ರಾಸ.. ರಾಸಾತಿ ಎಂದು ಕರೆದುಕೊಳ್ಳುತ್ತಿದ್ದ ಅಷ್ಟು ಚೆಂದದ ಸಂಬಂಧವೊಂದು ಮುನ್ಸೂಚನೆಯೂ ಕೊಡದೆ ಮುಗಿದೇ ಹೋಗಿತ್ತು. ಆದರೆ, ಪ್ರತಿ ವರ್ಷದಂತೆ ಆ ವರ್ಷವೂ ಕೂವಗಂ ಉತ್ಸವಕ್ಕೆ ಹೋಗಿದ್ದಾಗ ಅಲ್ಲಿ ನೀಲಿಮಾಳಿಂದ ಅಭಿರಾಮಿ ಇರುವೆಡೆಗೆ ಮತ್ತೆ ತಲುಪಿದ್ದ. ಅವರಿಬ್ಬರ ನಡುವೆ ಇದ್ದದ್ದು ಒಂದು ಬಾಗಿಲು ಮಾತ್ರವೇ..?? ಸರಿದು ಹೋದ ಮೂರುವರೆ ವರ್ಷಗಳ ಲೆಕ್ಕವೇನು..?? ಈ ಕಥಾ ಸಂಕಲನದಲ್ಲಿ ಬಹಳ ಕಾಡಿದ ಹಾಗೂ ಇಷ್ಟವಾದ ಕಥೆ ಇದು. ಅಭಿರಾಮಿಯಂತಹಾ ಎಷ್ಟೋ ಜನ ಇಂದಿಗೂ ತಮ್ಮ ಸಣ್ಣಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲು ತೊಳಲಾಡುತ್ತಿರಬಹುದು. ಅಭಿರಾಮಿ ನಿಜಕ್ಕೂ ಒಂದು ವಿಶೇಷ ವ್ಯಕ್ತಿಯೇ.. ಓದಿ ನೋಡಿ ನಿಮಗೂ ಸಿಗಬಹುದು.
ನಮ್ಮವರು :
ಸಫಾಯ್ ವಾಲಾ ಆಗಿ ಕೆಲಸಕ್ಕೆ ಸೇರಿದ ಬ್ರಜೇಶ್ ಪಾಠಕ್ ಚಿಕ್ಕಂದಿನ ತಮ್ಮ ಮನೆಯನ್ನು ಸ್ವಚ್ಛಗೊಳಿಸಲು ಬರುತ್ತಿದ್ದ ಪಾರೋ ಹಾಗೂ ಮೋಚಿ ಮತ್ತವರ ಮಕ್ಕಳನ್ನು ನೆನಪಿಸಿಕೊಂಡ. ಬ್ರಜೇಶ್ ನಿಗೆ ನಿಜಕ್ಕೂ ಕೋಪವಿದ್ದದ್ದು ಯಾರ ಮೇಲೆ..?? ಆತನಿಗೆ ಎಂ.ಡಿ ನಮ್ಮವರೇ ಇರಬೇಕೆಂದು ಎನಿಸಿದ್ದಾದರೂ ಏಕೆ..??
ಹೀಗೆ ಜೊತೆ ಜೊತೆಯಲಿ : "ಹೆಣ್ಣು ಸಬಲೆ! ಹೆಣ್ಣಿಗೆ ಬಿದ್ದಲ್ಲಿಂದ ಏಳಲು ಗೊತ್ತು. ಅವಳು ಅಲ್ಲಿಯೇ ಕುಡಿಯೊಡೆದು ಹೊಸ ಬದುಕನ್ನು ಕಟ್ಟಿಕೊಳ್ಳುವಷ್ಟು ಶಕ್ತೆ. ಹೆಣ್ಣಿನೊಳಗೆ ಮಾತ್ರವೇ ಆ ಚೈತನ್ಯ ಇರುವುದು. ನಿಜದಲ್ಲಿ ಅವಳಿಗೆ ಆಸರೆ ಕೊಡುವಷ್ಟು ಸಬಲನಲ್ಲ ಗಂಡಸು."
ಹೀಗೆ ಆಸರೆ ಕೊಡಬೇಕಾಗಿದ್ದ ಅವನು ರಾಜಿಯ ಪತ್ರವನ್ನು ನೋಡುತ್ತಿದ್ದ. ಆದರೆ, ಆತನಿಗೆ ಮಗ ಸಮೀರನ ನರಳಿಕೆಗೊಂದು ಮುಕ್ತಾಯವೂ ಬೇಕಿತ್ತು. ಸಾಮಾನ್ಯ ಮನುಷ್ಯನಾಗಿ ಬದುಕುತ್ತಿದ್ದ ಒಬ್ಬ ಬರಹಗಾರನಿಗೆ ಬಹು ಮಹತ್ವಾಕಾಂಕ್ಷಿಯಾದ ವಿನಿ ಜೊತೆಯಾಗಿದ್ದಳು. ಮದುವೆಯಾದ ಮೇಲೆ ಒಬ್ಬರಿಗೊಬ್ಬರು ಅರ್ಥವಾಗಿದ್ದರೆಂದುಕೊಂಡರೂ.. ಆ ಅರ್ಥಕ್ಕೆ ಇಲ್ಲಿ ಬೇರೆಯದ್ದೇ ದೃಷ್ಟಿಕೋನವಿದೆ.
ನಿರೀಕ್ಷೆ :
ತನ್ನ ಸಂಸಾರವನ್ನು ಕಟ್ಟಿಕೊಳ್ಳದೇ.. ಸಮಾಜದ ಉದ್ಧಾರ ಮಾಡುತ್ತೇನೆಂದು ಹೊರಗೆ ಹೊರಟವನು ಅವನು. ಪುಟ್ಟಿಯ ಅಮ್ಮನ ಬದುಕು ದುಸ್ತರವಾಗಿತ್ತು. ಪುಟ್ಟಿಯ ನಿರೀಕ್ಷೆ ಫಲಿಸಿತೇ..?? ಪುಟ್ಟಿಯ ದೃಷ್ಟಿಕೋನದಲ್ಲಿ ಹೆಣೆಯಲಾಗಿರುವ ಕತೆ ಇದು.
ಹೃದಯವೆಂಬ ಮಧುಪಾತ್ರೆ :
"ಪ್ರೇಮವೆಂಬುದು ಯಾವಾಗ ಯಾರ ಮೇಲೆ ಹುಟ್ಟುತ್ತದೆ, ಎಲ್ಲಿ ನೆಲೆಯಾಗುತ್ತದೆ ಎಂಬುದನ್ನು ಯಾರಿಂದಲೂ ನಿಖರವಾಗಿ ಹೇಳೋದಕ್ಕಾಗಲ್ಲ"
ಸಾಹಿಲ್ ಸುರಯ್ಯಾಳನ್ನು ಬೇಡ ಎಂದು ಗಂಡನಿಲ್ಲದ ಚಿನ್ನಿಮಾಳನ್ನು ಇಷ್ಟಪಟ್ಟಿದ್ದ. ಮನೆಗಳು ದೂರವಿದ್ದರೂ ಮನಸ್ಸುಗಳೆಂಬ ಮಧು ಪಾತ್ರೆಗಳ ನಿಸ್ವಾರ್ಥ ಪ್ರೇಮದ ಕಥೆ ಇಲ್ಲಿದೆ.
ಜಯರಾಮ ಹುಚ್ಚನಾದ ಕಥೆ :
ಜಯರಾಮನ ಕೋಪಕ್ಕೆ ರೇಣು ಮನೆ ಬಿಟ್ಟು ಹೊರಟಿದ್ದಳು. ಆದರೆ, ಆಕೆ ಹೊರಟಿದ್ದು ಆತನ ಕೋಪದ ಮಾತುಗಳಿಗಲ್ಲ. ಬದಲಾಗಿ ಆತ ತೆರೆದಿಟ್ಟ ಬಿಡಿಬೀಸಾದ ಸತ್ಯಕ್ಕೆ. ಜಯರಾಮ ಆಮೇಲಿಂದ ಯಾರ ಅಂಕೆಗೂ ಸಿಗದೇ.. ಯಾರೊಂದಿಗೂ ಮಾತಿಗೆ ನಿಲ್ಲದೆ, ಆಗಾಗ ಬೀದಿಯಲ್ಲಿ ಮಾತನಾಡುತ್ತಾ ಕಾಗೆಗಳಿಗೆ ಕಲ್ಲು ಹೊಡೆಯುತ್ತಾ ಇದ್ದದ್ದನ್ನು ಜನ ಕಂಡರು. ಜಯರಾಮ ಹುಚ್ಚನಾದದ್ದರ ಸಂಪೂರ್ಣ ಚಿತ್ರಣ ತಿಳಿಯಲು ಕತೆ ಓದಿ.
ಹಸಿವು :
"ಬಾಯಿ ಸುಟ್ಟುಕೊಂಡ ದಿಕ್ಕಿಗೆ ಮತ್ತೆ ಹಾಲಿಗೆ ಬಾಯಿ ಹಾಕುವಾಗಲೆಲ್ಲ ಆ ನೋವು ನೆನಪಾಗಬಹುದು. ಆದರೆ, ಹಸಿವೆಂಬುದು ನೋವಿಗಿಂತಲೂ ದೊಡ್ಡದು."
ಭರತನ ನೋವಿಗೆ ಸಿಗುತ್ತಿದ್ದ ಸಾಂತ್ವನ ಆತನ ನೋವನ್ನು ಮೀರಿ ಹಸಿವನ್ನು ಗೆಲ್ಲುತ್ತಿತ್ತಾ..??
ನಿರಾಕರಣೆ :
ಮುಕುಂದನಿಗೆ 'ಒಕ್ಕು' ಎಂಬ ಅನ್ವರ್ಥನಾಮ ಬರುವುದರ ಜೊತೆಗೆ ಆತ ಒಬ್ಬಂಟಿಯಾದ. ಕಾಷ್ಠಮೌನಿಯಾದ ಹಾಗೂ ಅತಿ ಕಾಳಜಿಯಿಂದ ಬೆಳೆದದ್ದು ಕಾಣುತ್ತಾ ಹೋದಂತೆ.. ಆತನಿಗೊಂದು ಜೋಡಿ ಸಿಗಬಾರದಾ ಎಂದು ಹಾರೈಸುವಷ್ಟರಲ್ಲಿ ಕುಬೇರಣ್ಣ ತೋರಿದ ಹುಡುಗಿಯನ್ನು ಆತನೇ ನಿರಾಕರಿಸಿ ಬರುತ್ತಾನೆ. ಆ ನಿರಾಕರಣೆ ಬಿಡುಗಡೆಯ ಮೂಲವಾ.. ಅಷ್ಟಕ್ಕೂ ಆತ ನಿರಾಕರಿಸಿದ್ದು ಯಾರನ್ನು..? ಬದುಕನ್ನೇ..?? ಊರನ್ನೇ..?? ಅಮ್ಮಣ್ಣಿಯನ್ನೇ ಅಥವಾ ಸೊಬಗಿನ ಹುಡುಗಿಯನ್ನೇ ಅಥವಾ ಆತನನ್ನೇ..??
ಮುಟ್ಟುವಷ್ಟು ಹತ್ತಿರ ಮುಟ್ಟಲಾರದಷ್ಟು ದೂರ:
ಆತ ಪ್ರತಿನಿತ್ಯ ಕನಸಿದ್ದ, ಬಯಸಿದ್ದ, ಪ್ರೇಮಿಸಿದ ಹುಡುಗಿ ಹಸೆಮಣೆ ಏರುವ ಹಿಂದಿನ ದಿನ ಕಾಣೆಯಾಗಿದ್ದಳು. ಈಗ ಅವಳು ಮುಟ್ಟುವಷ್ಟು ಹತ್ತಿರವಿದ್ದು, ಮುಟ್ಟಲಾರದಷ್ಟು ದೂರವಿದ್ದಾಳೆ. ಹಾಗಾಗಿದ್ದರ ಹಿನ್ನೆಲೆ ಹಾಗೂ ವಾಸ್ತವದ ಕಥೆ ಇಲ್ಲಿದೆ.
"ಬದುಕೆಂದರೆ ಇದೇ ಇರಬೇಕು.. ಮುಟ್ಟುವಷ್ಟು ಹತ್ತಿರ, ಮುಟ್ಟಲಾರದಷ್ಟು ದೂರ !"
ಕರೆ:
ಒಂದು ಕಾಲದಲ್ಲಿ ಮನುಷ್ಯನಿಗೆ ಭವಿಷ್ಯದ ಅರಿವು, ಸಾವಿನ ಬರವು ಎಲ್ಲವೂ ಖಚಿತವಾಗಿ ತಿಳಿದಿರ್ತಾ ಇತ್ತು.ಆದರೆ, ಈಗ ಮನುಷ್ಯ ತನ್ನ ಒಳಗಣ್ಣನ್ನು ಮುಚ್ಚಿಕೊಂಡಿದ್ದಾನೆ ಮತ್ತದು ಕುರುಡಾಗಿದೆಯೆಂದು ನಂಬಿಕೊಂಡಿದ್ದಾನೆ."
ಈಗ ಕಾಲನ ಕರೆ ಕೇಳುವುದು.. ಅವರ ಕರೆ ಬಂದವರಿಗೆ ಮಾತ್ರವೇ.. ಅಸಹಾಯಕರು, ರೋಗಿಗಳು, ಕೈಲಾಗದವರು, ಸಾವು ಬಯಸುತ್ತಿರುವವರನ್ನು ಬಿಟ್ಟು ಬಯಸದವರಿಗೆ ಅನಿರೀಕ್ಷಿತವಾಗಿ ಸಾವು ಬರಬಹುದು. ಮತ್ತವರಿಗೆ ಕಾಲನ ಕರೆ ಕೇಳುತ್ತದಾ..??
ಕಾರಣ:
ಗೆಳತಿಯಾಗಿ ಬೇಕಾದವಳನ್ನು, ಜೊತೆಗಾತಿಯಾಗಿ ಆಯ್ದುಕೊಳ್ಳಲು ಆತನಿಗೆ ಮನಸ್ಸಿರಲಿಲ್ಲ. ಅದಕ್ಕೆ ಆತನದ್ದೇ ಆದ ಕಾರಣವಿತ್ತು. "ವಜ್ರದ ಮುಂದೆ ಒಂದು ಸಾಧಾರಣ ಹರಳು ಹೇಗೆ ಬೆಳಗಬೇಕು" ಎಂದು ಕೇಳಿದ್ದವನ ಪ್ರಶ್ನೆ ಹಾಗೂ ನೀಡಿದ್ದ ಕಾರಣ ಸೀತತ್ತೆಯ ಬದುಕನ್ನು ಮನಸ್ವಿನಿ ಬೇರೆಯದ್ದೇ ಆಯಾಮದಲ್ಲಿ ಕಾಣುವಂತೆ ಮಾಡಿದ್ದ.
ಇದು ನನ್ನ ಕಥೆ ಅಥವಾ.. :
ಇದು ಯಾರ ಕಥೆ.. ಇದು ಆತನ ಕತೆಯಾ.. ಮಹ್ಮದ್ ಕುಟ್ಟಿ ಅಲಿಯಾಸ್ ಪ್ರೀತಿಯ ಗೆಳೆಯ ಬಾಪುಟ್ಟಿಯ ಕತೆಯಾ.. ಉಣ್ಣಿಯ ಕತೆಯಾ.. ಆ ಊರಿನ ಒಂದು ಕಾಲದ ಚೆಲುವೆ ಪ್ರಭಾಳ ಕತೆಯಾ.. ಅಥವಾ ಅವಳ ಅಪ್ಪ ಮಾಧವ ನಾಯರ್ ನ ಕತೆಯಾ.. ಊರಿನ ನಡುವಿನ ಮಾನವೀಯ ಸಂಬಂಧದ ಕತೆಯಾ.. ಅವ್ಯಕ್ತ ಪ್ರೀತಿಯ ಕತೆಯಾ.. ಎಲ್ಲದರ ಮಿಳಿತವಾಗಿರುವ ಕಥೆಯೊಂದು ಕಾಣುತ್ತದೆ.
ಈ ಲೇಖಕಿಯ ಒಂದೆರಡು ಬಿಡಿ ಕಥೆಗಳನ್ನು ಓದಿದ್ದೆನಾದರೂ.. ಕಥಾಸಂಕಲನವನ್ನು ಹಿಡಿದ ನಂತರ ಬೆರೆಯದ್ದೇ ಲೋಕಕ್ಕೆ ಹೋದಂತಾಯಿತು. ಇಲ್ಲಿನ ಕಥೆಗಳು ಅದೆಷ್ಟು ಆಪ್ತವಾಗಿ ಆವರಿಸಿಕೊಂಡವು.. ಇಲ್ಲಿ ಕೇವಲ ಕಥಾಹಂದರವಿಲ್ಲ ಅಥವಾ ತೀವ್ರವಾದ ಭಾವಗಳಿಲ್ಲ. ಬದಲಾಗಿ ಮಂದಗಾಮಿಯಂತೆ ಆವರಿಸಿಕೊಳ್ಳುವ ಕಾವ್ಯಾತ್ಮಕವಾಗಿಯೇ ಕಥೆಯೊಳಗೆ ನಮ್ಮನ್ನು ನಾವು ತನ್ಮಯತೆಯಿಂದ ಮುಳುಗಿಸಿಕೊಳ್ಳುವ ಗುಣ ಹೊಂದಿರುವ ಕಥೆಗಳಿವೆ. ಕಥೆಗಳು ನಮ್ಮನ್ನು ಆವರಿಸಿಕೊಳ್ಳಲು ಅವು ನಮ್ಮ ನೆಲದ ಕಥೆಗಳೇ ಆಗಿರಬೇಕಿಲ್ಲ ಅಥವಾ ನಮ್ಮ ಭಾವಗಳು ಕಥೆಯಲ್ಲಿ ಕಂಡರೆ ಮಾತ್ರವೇ ಆವರಿಸಿಕೊಳ್ಳುತ್ತವೆ ಎನ್ನುವಂತಿಲ್ಲ.ಪ್ರತೀ ಕತೆಯಲ್ಲಿನ ಪ್ರತೀ ಭಾವಗಳೂ ಅದೆಷ್ಟು ಆಪ್ತವಾಗಿ ಆವರಿಸಿಕೊಳ್ಳುತ್ತವೆಂದರೆ.. ಮತ್ತೆಮತ್ತೆ ಓದಬಹುದಾದ ಕಥಾ ಸಂಕಲನವೆಂದರೂ ತಪ್ಪಾಗಲಾರದು. ಕಥೆಗಳ ಅಂತ್ಯ ಕಾಡುವ ಅಂತ್ಯವಾಗಿ.. ಕಥೆಯನ್ನು ಮನಸ್ಸಿನಲ್ಲಿಯಲು ಮತ್ತಷ್ಟು ಸಹಾಯ ಮಾಡುತ್ತದೆ. ಪ್ರತಿಮೆಯಂತಹಾ ಉಲ್ಲೇಖಗಳು ಕೊಡುವ ಹೊಳವುಗಳೇ ಚೆಂದ. ಇಂತಹಾ ಬಹಳಷ್ಟು ಉಲ್ಲೇಖಗಳು ಸಿಗುತ್ತವೆ. ಇವರ ಮತ್ತೊಂದು ಕಥಾಸಂಕಲನವನ್ನೂ ಓದಬೇಕು. ವಿಭಿನ್ನ ರೀತಿಯಲ್ಲಿ ಬಹಳ ಆಪ್ತವಾದ ಸೊಗಸಾದ ಕಥಾಸಂಕಲನ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ