ಪುಸ್ತಕದ ಶೀರ್ಷಿಕೆ : ಅನಾಥ ಹಕ್ಕಿಯ ಕೂಗು
ಲೇಖಕರು : ಗಿರಿಮನೆ ಶ್ಯಾಮರಾವ್
ಪ್ರಕಾಶಕರು : ಗಿರಿಮನೆ ಪ್ರಕಾಶನ
ಪ್ರಥಮ ಮುದ್ರಣ : 2017
ಪುಟಗಳು : 152
ಬೆಲೆ : 130 ರೂ.
ಗಿರಿಮನೆ ಶ್ಯಾಮರಾವ್ ಅವರ 'ಅನಾಥ ಹಕ್ಕಿಯ ಕೂಗು' ಮಂಗಳವಾರ ಪತ್ರಿಕೆಯಲ್ಲಿ ಜನಪ್ರಿಯ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು.
ಮನೋವೈಜ್ಞಾನಿಕ ಕಾದಂಬರಿ ಎಂದಾಕ್ಷಣ ಹೆಣ್ಣುಮಕ್ಕಳ ಕುರಿತಾದ ಕಾದಂಬರಿಗಳನ್ನು ಓದಿದ್ದೇ ಹೆಚ್ಚು. ಬಹುಶಃ, ಹೆಣ್ಣುಮಕ್ಕಳ ಮನಸ್ಸಿನಾಳ ತಿಳಿದವರಿಲ್ಲ ಎಂಬ ಕಾರಣಕ್ಕೂ ಇರಬಹುದು. ಆದರೆ, ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು.. ಮಕ್ಕಳ ದೃಷ್ಟಿಕೋನದಲ್ಲಿ ರಚಿತವಾದ ಮನೋವೈಜ್ಞಾನಿಕ ಕಾದಂಬರಿಯನ್ನು ನಾನು ಓದಿದ್ದು ಇದೇ ಮೊದಲು.
ಮಕ್ಕಳು ತುಂಬಾ ಚಿಕ್ಕವರಾಗಿರುವಾಗ ಅವರಿಗೆ ಮಾತನಾಡಲು ಬರುವುದಿಲ್ಲ. ಹಾಗಾಗಿ, ಅವರ ಸಮಸ್ಯೆಗಳು ನಮಗೆ ಅರ್ಥವಾಗುವುದಿಲ್ಲ. ಆದರೆ, ದೊಡ್ಡವರಾಗುತ್ತಾ ಹೋದಂತೆ ಅವರಿಗೆ ಮಾತನಾಡಲು ಅವಕಾಶ ದೊರೆಯದಾದಾಗ ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗುವ ಮಕ್ಕಳು ಸಮಸ್ಯೆಗಳನ್ನು ಅನುಭವಿಸಿ ಅಂತರ್ಮುಖಿಗಳಾಗಬಹುದು. ಅದಕ್ಕೆ ಕಾರಣಗಳು ಹಲವಾರಿರಬಹುದು. ಪೋಷಕರು ಮಕ್ಕಳಿಗೆ ಕೊಡಬೇಕಾದ ಸ್ವಾತಂತ್ರ್ಯವನ್ನು ಕೊಟ್ಟರೂ.. ಮನೆಯಲ್ಲಿನ ಗಂಭೀರ ವಾತಾವರಣದಿಂದಾಗಿ ಮಕ್ಕಳು ತಮ್ಮ ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗದಂತಾಗಬಹುದು.
ಇಲ್ಲಿ ಮಗುವಿನ ಮನೋವಿಶ್ಲೇಷಣೆಯ ಜೊತೆಗೆ ಪೋಷಕರ ಸಮಸ್ಯೆಗೂ.. ಅವರು ತೆಗೆದುಕೊಳ್ಳಬೇಕಾದ ತೀರ್ಮಾನ ಹಾಗೂ ನಡೆಗೂ ಇರಬೇಕಾದ ಪ್ರಬುದ್ಧತೆ ಹಾಗೂ ಮುಂದಾಲೋಚನೆಯ ಎಚ್ಚರಿಕೆಯ ಕರೆಗಂಟೆಯಿದೆ.
ಇಂದಿನ ಕುಟುಂಬಗಳು ಮೊದಲಿನಂತೆ ಕೂಡು ಕುಟುಂಬಗಳಾಗಿಲ್ಲ. ಗಂಡ-ಹೆಂಡತಿ, ಮಗು/ಮಕ್ಕಳು ಇಷ್ಟೇ ಅವರ ಸಂಸಾರ ಎಂದುಕೊಂಡಿರುವವರು ಹಲವರು. ಆದರೆ, ಪೋಷಕರಿಬ್ಬರೂ ಉದ್ಯೋಗದಲ್ಲಿದ್ದರೆ ಮಕ್ಕಳು ಒಂಟಿಯಾಗಿ ಬಿಡುತ್ತಾರೆ. ಇದು ಇಲ್ಲಿ ಆರಂಭದಲ್ಲಿ ಕಂಡರೂ.. ಅದಕ್ಕಿಂತ ಹೆಚ್ಚಿನ ಸಮಸ್ಯೆ ಎದುರಾಗುತ್ತದೆ. ಮಕ್ಕಳ ಬಾಲ್ಯದ ಕೆಲವು ವರ್ಷಗಳಲ್ಲಿ ಬಹಳ ಮುದ್ದು ಮಾಡಿ ಅನ್ಯೋನ್ಯತೆಯಿಂದ ಇದ್ದ ಸಂಸಾರ ಹಂತಹಂತವಾಗಿ ಒಡೆಯುತ್ತಾ ಹೋದರೆ.. ಮಕ್ಕಳು ಮನಸ್ಸು ಸಹಾ ಹಾಗೆಯೇ ಹಂತಹಂತವಾಗಿ ಒಡೆದು ಹೋಗಬಹುದು. ಅದು ಮುಂದೆ ಗಂಭೀರ ಸಮಸ್ಯೆಯೊಂದರ ಮೂಲವೂ ಆಗಬಹುದು.
ಆಕಾಶ್ ತನ್ನ ಬಾಲ್ಯದ ಚಿತ್ರಣವನ್ನು ತನ್ನ ಮುಗ್ಧತೆಯಿಂದಲೇ ತೆರೆದಿಡುತ್ತಾನೆ. ಅಪ್ಪ-ಅಮ್ಮ ಜೊತೆ ಒಬ್ಬನೇ ಮುದ್ದಿನ ಮಗನಾಗಿ.. ಇಬ್ಬರ ಮುದ್ದಿನ ಮಗುವೂ ಆಗಿ ಆಕಾಶ್ ಬೆಳೆಯುತ್ತಿದ್ದಂತೆ.. ಇಬ್ಬರೂ ಉದ್ಯೋಗಸ್ಥ ಪೋಷಕರಾಗಿದ್ದರಿಂದ ತನ್ನ ಮನಸ್ಸಿನ ಮಾತುಗಳನ್ನು ಬೇಕೆಂದಾಗ ಅವರೊಡನೆ ಮುಕ್ತವಾಗಿ ಹಂಚಿಕೊಳ್ಳಲಾಗುತ್ತಿರಲಿಲ್ಲ. ಅದಕ್ಕಾಗಿ ಆತನಿಗೆ ತಂದೆಯ ತಂದೆ ಬಂದಾಗಲೆಲ್ಲ ಸಂಭ್ರಮ. ಆದರೆ, ಅಜ್ಜ ಊರಿನಲ್ಲಿದ್ದುದರಿಂದ ಅವರು ಹೆಚ್ಚು ದಿನ ಇಲ್ಲಿಯೇ ಉಳಿಯುತ್ತಿರಲಿಲ್ಲ. ಆಕಾಶನ ತಾಯಿ ಸುಚಲಾಳನ್ನು ಆಕೆಯ ಗಂಡ ಕೆಲಸ ಬಿಡುವಂತೆ ಒತ್ತಾಯಿಸಿದರೂ.. ಮಗನಿಗಾಗಿ ಆಕೆ ಅದೊಂದು ತ್ಯಾಗ ಮಾಡಬಹುದಾಗಿದ್ದರೂ.. ಆಕೆಗೆ ಅವಳದ್ದೇ ದೃಷ್ಟಿಕೋನವಿತ್ತು. ಆರ್ಥಿಕ ಸ್ವಾತಂತ್ರ್ಯ ಬೇಕಿತ್ತು. ಗಂಡನಿಗೆ ಮತ್ತೊಂದು ಸಂಬಂಧವಿದೆಯೆಂಬ ಅನುಮಾನವೂ ಇತ್ತು. ಅದಕ್ಕಾಗಿ ಆಕೆ ಕೆಲಸ ತೊರೆಯಲಿಲ್ಲ.
ಯಾರೆಷ್ಟೇ ಹೇಳಿದರೂ ಹಿರಿಯರ ಬುದ್ಧಿಮಾತಿಗೂ ಒಪ್ಪದೇ ಆಕಾಶ್ ತಂದೆ-ತಾಯಿ ಇಬ್ಬರೂ ವಿಚ್ಛೇದನ ಪಡೆಯುತ್ತಾರೆ. ಸುಚಲಾ ಬೇರೆ ಮನೆ ಮಾಡಿ ಮಗನನ್ನು ಕರೆತಂದಾಗ ಕೆಲವು ದಿನ ಆಕೆಯ ತಾಯಿ ಬಂದು ಜೊತೆಗಿದ್ದರೂ.. ನಂತರ ಅವರಿಗೂ ಇರಲಾಗುವುದಿಲ್ಲ. ಆಕಾಶ್ ನ ತಂದೆ-ತಾಯಿ ಇಬ್ಬರಿಗೂ ಹಣ ಬೇಕಾದಷ್ಟಿದ್ದರೂ.. ಮಗನ ಒಂಟಿತನಕ್ಕೆ ಮದ್ದಾಗಲು ಸಾಧ್ಯವಾಗಲಿಲ್ಲ. ಬುದ್ಧಿವಂತ ಆಕಾಶ್ ಶಾಲೆಯಲ್ಲಿಯೂ ಹಿಂದುಳಿಯುತ್ತಾ ಹೋಗುತ್ತಾನೆ.
ಮೊದಮೊದಲಿಗೆ ಆಗಾಗ ಬಂದು ಮಗನನ್ನು ಭೇಟಿಯಾಗುತ್ತಿದ್ದ ತಂದೆ ಮತ್ತೊಂದು ವಿವಾಹವಾದ ನಂತರ ಭೇಟಿ ಅಪರೂಪವಾಗುತ್ತದೆ. ಇತ್ತ ಆಕಾಶನ ತಾಯಿಯೂ ಮತ್ತೊಂದು ಮದುವೆಯಾಗುತ್ತಾರೆ. ಅಪ್ಪನ ಕಡೆಯ ಆಂಟಿ ಹಾಗೂ ಅಮ್ಮನ ಕಡೆಯ ಅಂಕಲ್ ಇಬ್ಬರು ಆತನನ್ನು ಮಗನೆಂದು ಮುಕ್ತಮನಸ್ಸಿನಿಂದ ಸ್ವೀಕರಿಸಲು ಸಿದ್ಧವಿರಲಿಲ್ಲ .ಆಕಾಶನ ತಾಯಿಯನ್ನು ಮದುವೆಯಾಗುವ ಮುನ್ನ ಆತ ಮಗನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತೇನೆಂದರೂ ಹಾಗಾಗಲಿಲ್ಲ. ಆಕಾಶನ ತಾಯಿಯ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗುತ್ತದೆ. ತಂದೆಯಷ್ಟು ಸುಲಭವಾಗಿ ತಾಯಿ ಮಗುವನ್ನು ತೊರೆಯಲಾಗದಲ್ಲಾ..
ಆಕಾಶನ ತಂದೆ ಆತನ ಕಣ್ಣಿನಿಂದ ಮರೆಯಾಗಿದ್ದವರು. ಆದರೆ, ತಾಯಿ ಕಣ್ಮುಂದೆ ಅಂಕಲ್ ಜೊತೆಗಿರುವಾಗಲೆಲ್ಲಾ ಆಕಾಶನಿಗೆ ಬಂದ ಕೋಪ, ಪ್ರತಿಕ್ರಿಯೆ, ವರ್ತನೆಯಿಂದಾಗಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿತ್ತು.
ಮನೆ ಹತ್ತಿರದಲ್ಲಿದ್ದರೂ.. ಆತ ಹಾಸ್ಟೆಲ್ ಸೇರಬೇಕಾಗುತ್ತದೆ. ಮುಗ್ಧ ಮಗುವಿಗೆ ಚಾಕಲೇಟ್, ಮಾತ್ರೆ ಎಂಬ ಹೆಸರಿನಲ್ಲಿ ಡ್ರಗ್ಸ್ ನೀಡುತ್ತಾ ಆತನ ಭವಿಷ್ಯವನ್ನೇ ಮಂಕಾಗಿಸುತ್ತಾನೆ ಪಕ್ಕದ ಗೂಡಂಗಡಿಯ ಅಂಕಲ್. ತನಗೆ ಅರಿವಿಲ್ಲದೆಯೇ ಡ್ರಗ್ಸ್ ಚಟವೂ ಆಗುತ್ತದೆ.
ಆಕಾಶ್ ಒಮ್ಮೆ ಕೆಟ್ಟ ಹೆಸರು ತೆಗೆದುಕೊಳ್ಳುತ್ತಿದ್ದಂತೆಯೇ ನೋಡುವವರ ದೃಷ್ಟಿ ಆತನನ್ನು ಮತ್ತಷ್ಟು ಕೆಟ್ಟವನನ್ನಾಗಿಸುತ್ತಾ ಹೋಗುತ್ತದೆ. ತನ್ನ ಅಪ್ಪ ಹಾಗೂ ಆಂಟಿಯ ಮಗಳು ಶೀತಲ್, ಅಮ್ಮ ಮತ್ತು ಅಂಕಲ್ ಮಗ ನಿತೀಶ್ ಇಬ್ಬರೂ ತನ್ನ ಮುಂದೆಯೇ ಅಪ್ಪ-ಅಮ್ಮನ ಪ್ರೀತಿ ಪಡೆಯುತ್ತಿದ್ದಾಗ ಕಸಿವಿಸಿಯಾಗುತ್ತದೆ. ತನ್ನಿಂದ ಅವರನ್ನು ಕಿತ್ತುಕೊಂಡವರೆಂಬ ಭಾವ ಮೊಳೆತು ಮನಸ್ಸಿನಲ್ಲಿಯೇ ಗೊತ್ತಿಲ್ಲದ ದ್ವೇಷ ಶೀತಲ್ ಮೇಲೆ ಮೊಳಕೆಯೊಡೆಯುತ್ತದೆ. ಪರಿಣಾಮ ಮತ್ತಷ್ಟು ಘೋರವಾಗುತ್ತದೆ.
ಶಾಲೆಯಲ್ಲಿ ಹಿಂದುಳಿಯುತ್ತಾ ಇದ್ದವನಿಗೆ ತನ್ನಂತೆ ಇದ್ದ ಗೆಳತಿಯೊಬ್ಬಳು ಸಿಗುತ್ತಾಳೆ. ತನುಶ್ರೀ ಆಕೆಯು ಮಲತಾಯಿಯ ಕಾಟದಿಂದ ಬೇಸತ್ತವಳು. ಒಬ್ಬರಿಗೊಬ್ಬರು ಸಾಂತ್ವನ ನೀಡುತ್ತಾ ಗೆಳೆತನ ಮುಂದುವರಿಯುತ್ತಿದ್ದಾಗಲೇ.. ಸ್ನೇಹದಿಂದ ದೂರಾಗುವ ಪರಿಸ್ಥಿತಿ ಬರುತ್ತದೆ.
ಶಾಲೆಯಲ್ಲಿ ದಡ್ಡನೆಂಬ ಪಟ್ಟ ಹೊತ್ತು.. ಅಪ್ಪನ ಕಡೆಯ ಆಂಟಿಯಿಂದ ದ್ವೇಷಿಸಲ್ಪಡುತ್ತಾ.. ಅಮ್ಮನ ಕಡೆಯ ಅಂಕಲ್ ನಿಂದ ಹೊಡೆಸಿಕೊಂಡು ಮತ್ತಷ್ಟು ದ್ವೇಷಕ್ಕೊಳಗಾಗುತ್ತಾ ಹಣ, ಒಡವೆ ಕದಿಯುವ ಸಂಧಿಗ್ಧಕ್ಕೆ ಸಿಲುಕಿ.. ಡ್ರಗ್ಸ್ ನ ಚಟಕ್ಕೆ ಬೀಳುವ ಆಕಾಶ್ ಬದುಕಲ್ಲಿ ಆಶಾಕಿರಣದಂತೆ ಬರುವ ವ್ಯಕ್ತಿಗಳು ತುಂಬಾ ಕಾಲ ಉಳಿಯುವುದಿಲ್ಲ.
ತಂದೆ-ತಾಯಿ ಇಬ್ಬರೂ ಇದ್ದು ಅನಾಥ ಭಾವ ಅನುಭವಿಸುವ ಮಗುವಿನ ಪರಿಸ್ಥಿತಿ ಕಳವಳ ಹುಟ್ಟಿಸುತ್ತದೆ. ಆತನಿಗೆ ಒಳ್ಳೆಯ ಭವಿಷ್ಯ ಸಿಗಲಿ. ಯಾರಾದರೂ ಅವನನ್ನು ಪರಿವರ್ತನೆಯ ಹಾದಿಯತ್ತ ಕರೆದೊಯ್ಯಲಿ ಎಂದುಕೊಳ್ಳುತ್ತಿರುವಾಗಲೇ ಆತನ ಅಂಕಲ್ ರಿಮ್ಯಾನ್ಡ್ ಹೋಮ್ ಗೆ ಸೇರಿಸಲು ತೀರ್ಮಾನಿಸುತ್ತಾರೆ. ಮಾನಸಿಕತಜ್ಞ ಡಾಕ್ಟರ್ ವೇದವ್ಯಾಸ್ ಮಧ್ಯಸ್ಥಿಕೆಯಿಂದ ಆಕಾಶ್ ಬದುಕೇ ಬದಲಾಗುತ್ತದೆ.
ಆಕಾಶ್ ಬದುಕು ಬದಲಾದದ್ದು ಹೇಗೆ..?? ಆಕಾಶ್ ತಾಯಿಯ ಪರಿಸ್ಥಿತಿ ಹಾಗೂ ತಂದೆಯ ಪರಿಸ್ಥಿತಿ ಹೇಗಿತ್ತು..??
ವಿಚ್ಛೇದನವಾದ ನಂತರ ಮೊದಲ ಕುಟುಂಬದ ನೆರಳು ತಮ್ಮ ಸಂಸಾರದ ಮೇಲೆ ಬೀಳದಿರಲಿ ಎಂದೇ ಹೆಚ್ಚಿನವರು ಬಯಸುತ್ತಾರೆ. ಆಕಾಶ್ ಅಪ್ಪ-ಅಮ್ಮನ ಸಂಗಾತಿಗಳ ವರ್ತನೆ ತೀರಾ ವ್ಯತಿರಿಕ್ತವಾದದ್ದೇನಲ್ಲ. ಆದರೆ, ಎಲ್ಲವೂ ಹಳಿ ತಪ್ಪಿದ್ದೆಲ್ಲಿ..?? ಆಕಾಶ್ ನ ಡ್ರಗ್ಸ್ ಚಟ ತಪ್ಪಿದ್ದು ಹೇಗೆ..??
"ದಾಂಪತ್ಯ ಎಂದರೆ ಎರಡು ನದಿಗಳು ಒಂದಾಗಿ ಹರಿದಂತೆ. ಮತ್ತೆ ಅದನ್ನು ಬೇರ್ಪಡಿಸಲಾಗುವುದಿಲ್ಲ. ಬೇರ್ಪಡಿಸಿದರೂ ಒಂದಿಷ್ಟು ನೀರು ಮಿಶ್ರವಾಗಿಯೇ ಇರುತ್ತೆ ತಾನೇ?" ಎನ್ನುವುದನ್ನು ಓದಿದಾಗ ದಾಂಪತ್ಯ ವಿಚ್ಛೇದನದ ಮೂಲಕ ಕೊನೆಯಾಗುವುದನ್ನು ನೋಡಿದಾಗ ಸಂಬಂಧಗಳನ್ನು ಕಳೆದುಕೊಳ್ಳಲು ಇರುವ ಆತುರದಲ್ಲಿ ಹತ್ತಾಂಶ ತಾಳ್ಮೆ ಸಂಬಂಧವನ್ನು ಉಳಿಸಿಕೊಳ್ಳಲು ಇದ್ದಿದ್ದರೆ ಎಂದೂ ಎನ್ನಿಸುತ್ತದೆ. ಕಾದಂಬರಿಯ ಅಂತ್ಯ ನೆಮ್ಮದಿ ತಂದುಕೊಟ್ಟರೂ.. ಬಹಳಷ್ಟು ಪ್ರಶ್ನೆಗಳನ್ನು ಹುಟ್ಟಿಸಿದಂತೂ ಹೌದು.
ದಾರಿ ತಪ್ಪಿರುವ ಯುವ ಜನಾಂಗವನ್ನು ನೋಡಿದಾಗ ಅವರ ಬಾಲ್ಯದ ಪರಿಸ್ಥಿತಿ ಹೇಗಿರಬಹುದು ಎಂದು ಪರಾಮರ್ಶಿಸುವಂತಾಯಿತು. ಆದರೆ, ಎಷ್ಟು ಜನಕ್ಕೆ ಆಕಾಶ್ ನಂತಹಾ ಭವಿಷ್ಯ ಸಿಗಬಹುದು..?? ಪ್ರತಿಯೊಬ್ಬರ ಮನಸ್ಸು ಹತೋಟಿಯಲ್ಲಿದ್ದರೆ ಇಂತಹ ಸಮಸ್ಯೆ ಉದ್ಭವಿಸುತ್ತಿತ್ತಾ..??? ಆಧುನಿಕ ಬದುಕು ಹಾಗೂ ದಾಂಪತ್ಯದ ನಡುವಿನ ಹೊಂದಾಣಿಕೆ ಹೇಗಿರಬೇಕು..?? ಇಂತಹಾ ಎಷ್ಟೋ ಪ್ರಶ್ನೆಗಳಿಗೆ ಇಲ್ಲಿ ಉತ್ತರ ದೊರೆಯುತ್ತಾ ಹೋಗುತ್ತದೆ.
ಮನೋವೈಜ್ಞಾನಿಕ ಕಾದಂಬರಿಯ ಈ ತರಹದ ನಿರೂಪಣಾ ಶೈಲಿ ಮನಸ್ಸಿನಲ್ಲಿ ಗಾಢವಾಗಿ ಪರಿಣಾಮ ಬೀರುತ್ತದೆ. ಒಂದು ಮಗುವಿನ ಸಮಸ್ಯೆಯನ್ನು ಆಲಿಸುವ ತಾಳ್ಮೆಯಿರುವ ದೊಡ್ಡವರ ಜಾಗದಲ್ಲಿದ್ದು ಓದುವಾಗ ತಳಮಳದ ತರಂಗವಂತೂ ಎದ್ದಿತು.
ವಿಚ್ಛೇದಿತರ ಮಕ್ಕಳೆಲ್ಲರ ಕಥೆಯೂ ಹೀಗಿಯೇ ಇರಲಾಗದು. ಆದರೆ, ಈ ರೀತಿಯ ಎಷ್ಟೋ 'ಅನಾಥ ಹಕ್ಕಿಗಳ ಕೂಗು' ಇದ್ದೇ ಇದೆ. ಆ ಕೂಗನ್ನು ಸಮಾಧಾನದಿಂದ ಶಮನಗೊಳಿಸಬಹುದಾದ ಒಂದು ದಾರಿಯೂ ಇಲ್ಲಿ ನಿಚ್ಚಳವಾಗಿ ತೆರೆದುಕೊಳ್ಳುತ್ತಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ