ಸೋಮವಾರ, ಏಪ್ರಿಲ್ 13, 2026

ಬಾನು ಬೆಳಗಿತು (ಪುಸ್ತಕ ಯಾನ - 145)


ಪುಸ್ತಕದ ಶೀರ್ಷಿಕೆ : ಬಾನು ಬೆಳಗಿತು

ಲೇಖಕರು : ತ್ರಿವೇಣಿ

ಪ್ರಥಮ ಮುದ್ರಣ : 1958

ಪುಟಗಳು : 173


ಮನೆಯ ಮುದ್ದಿನ ಮಗಳು ಕಲ್ಯಾಣಿ ಆಕೆಯ ಅತ್ತಿಗೆ ವತ್ಸಲಾಳ ಅಣ್ಣನ ಮದುವೆಯ ಸಂಧರ್ಭದಲ್ಲಿ ಪರಿಚಯವಾದ ರಾಮನಾಥನ ಜೊತೆ ಸ್ನೇಹ ಬೆಳೆಯಿತು. ಮನೆಯರಿಗೆ.. ಅದರಲ್ಲೂ ಆಕೆಯ ಅಣ್ಣ ಅನಂತನಿಗೆ ರಾಮನಾಥನ ಮೇಲೆ ಭರವಸೆ ಮೂಡಿ ಆಕೆಯದ್ದೂ.. ರಾಮನಾಥನದ್ದೂ.. ವಿವಾಹವಾಯಿತು. ಒಂದರ್ಥದಲ್ಲಿ ಮೆಚ್ಚಿ, ಹಿರಿಯರ ಆಶೀರ್ವಾದದೊಂದಿಗೆ ಆದ ವಿವಾಹವೆಂದರೂ ತಪ್ಪಾಗಲಾರದು.


ಮೂರು ಮಕ್ಕಳಲ್ಲಿ ಚಿಕ್ಕವಳಾದ.. ಮುದ್ದಿನ ಮಗಳಾದ.. ಕಲ್ಯಾಣಿಗೆ ಸಂಸಾರದ ಜಂಜಾಟದ ಪರಿವೆಯಿರಲಿಲ್ಲ. ಅಲ್ಲದೇ.. ಜವಾಬ್ದಾರಿಗಳ ಹೊರೆಯೂ ಇರಲಿಲ್ಲ. ಅತ್ತೆ ಸಾತಮ್ಮನವರದ್ದು ತಾಳ್ಮೆಯ ಸ್ವಭಾವವಾದುದರಿಂದ.. ಆಕೆ ಮಗ-ಸೊಸೆಯರ ಜೊತೆ ಹೊಂದಿಕೊಳ್ಳುತ್ತಾ.. ಸೊಸೆಯನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಾ.. ಆಕೆಗೆ ಚಿಕ್ಕ-ಪುಟ್ಟದನ್ನೂ ಕಲಿಸುತ್ತಾ.. ತಿದ್ದುತ್ತಾ ಕೊಂಕು ತೆಗೆಯದಂತೆ, ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳುತ್ತಿರುತ್ತಾರೆ. ಆದರೆ, ಕಲ್ಯಾಣಿ ಮನೆಯಲ್ಲಿನ ಜವಾಬ್ದಾರಿ ತೆಗೆದುಕೊಳ್ಳುವ ಗೋಜಿಗೆ ಹೋಗದೆ.. ಅತ್ತೆಯೇ ಹೆಚ್ಚಿನ ಕೆಲಸವೆಲ್ಲವನ್ನು ನೋಡಿಕೊಳ್ಳುತ್ತಿದ್ದರಿಂದ.. ತನಗೆ ಹೆಚ್ಚು ಸಮಯವಿದೆ. ಅದನ್ನು ಹೇಗೆ ಕಳೆಯುವುದು..? ಎಂಬ ಚಿಂತೆಯಲ್ಲಿದ್ದಾಗ ಬಿ.ಎಸ್.ಸಿ ಓದಿದವಳಾದುದರಿಂದ.. ಆಕೆ ತನಗೆ ಸರಿಹೊಂದುವಂತಹ ಉದ್ಯೋಗ ಸಿಕ್ಕರೆ ಎಂಬ ಆಸೆಯಿಂದ ಸುಮ್ಮನೆ ಪೇಪರ್ ನಲ್ಲಿ ಬಂದ ಜಾಹೀರಾತಿಗೆ ಅರ್ಜಿ ಸಲ್ಲಿಸುತ್ತಾಳೆ. ಮುಂದೆ ಆಯ್ಕೆಯೂ ಆಗುತ್ತಾಳೆ.


ಕಲ್ಯಾಣಿಗೆ ಅಷ್ಟು ಸಮಯ ಹೇಗೆ ಸಿಕ್ಕುತ್ತಿತ್ತು..?? ಎಂಬುದನ್ನು ನೋಡಹೊರಟರೆ ಅಲ್ಲಿದ್ದದ್ದು ಅತಿಯಾದ ಹೊಂದಿಕೆ ಹಾಗೂ ಪತಿಯ ಒಡನಾಟ. ಯಾವಾಗಲೂ ಜೊತೆಯಾಗಿಯೇ ಇರುತ್ತಿದ್ದುದರಿಂದ ದಾಂಪತ್ಯ ಜೀವನದಲ್ಲಿ ಉಂಟಾಗಿದ್ದ ನಿರಾಸಕ್ತಿ. ಅಷ್ಟಕ್ಕೂ ನಿರಾಸಕ್ತಿ ಏಕೆ ಉಂಟಾಯಿತು ಎಂಬುದನ್ನು ಪರಾಮರ್ಶಿಸುವ ಮೊದಲು.. ವಿವಾಹಕ್ಕೂ ಮುನ್ನ ರಾಮನಾಥನಿಗೆ ತಮ್ಮ ದಾಂಪತ್ಯದ ಕುರಿತ ಕನಸುಗಳನ್ನು ಕಂಡುಬರೋಣ. 


"ತಾನು ಹಾಗೂ ಕಲ್ಯಾಣಿ ಇತರ ದಂಪತಿಗಳಿಗೆ ಆದರ್ಶವಾಗಿ ವಿಭಿನ್ನವಾದ ಜೋಡಿ ಎಂದೆನಿಸಬೇಕು ಎಂದೆಲ್ಲಾ ಕನಸು ಕಟ್ಟಿಕೊಂಡು, ಒಂದು ದಿನವೂ ಜಗಳವಾಡದೆ.. ಒಂದು ದಿನವೂ ಚರ್ಚೆ ಮಾಡದೆ, ಪರಸ್ಪರರನ್ನು ಅರ್ಥೈಸಿಕೊಂಡು ಬಾಳಬೇಕು."


"ದಾಂಪತ್ಯ ಜೀವನವೆಂದರೆ ಅಮೃತಶಿಲೆಯ ಮಹಲು. ಅಲ್ಲಿ ತಾನು ರಾಜ ಹಾಗೂ ಕಲ್ಯಾಣಿ ರಾಣಿ. ಅಲ್ಲಿ ವಿಹರಿಸುತ್ತಾ ಯಾವಾಗಲೂ ಪ್ರಣೆಯ ಗೀತೆಗಳನ್ನು ಹಾಡುತ್ತಾ.. ಪ್ರೇಮ ಸರೋವರದಲ್ಲಿ ಮೀಯುತ್ತಾ ನವ ಜೋಡಿಗಳಂತೆ ನಾವಿರಬೇಕು. ಅಲ್ಲದೇ.. ಇದು ಸಮಾನತೆಯ ಯುಗ. ಹಾಗಾಗಿ, ಅವಳಿಗೆ ಅವಳ ಸಂಪೂರ್ಣ ಸ್ವಾತಂತ್ರವನ್ನು ಕೊಡಬೇಕು. ಇಬ್ಬರೂ ಒಬ್ಬರಲ್ಲಿ ಒಬ್ಬರು ಐಕ್ಯವಾಗಬೇಕು." ಹೀಗೆ ಹಲವಾರು ಆಸೆ ಕನಸುಗಳೆಲ್ಲವೂ ಇದ್ದವು. ಆದರೆ, ಕಲ್ಯಾಣಿಯಿಂದ ಇದಾವುದು ಭಗ್ನವಾಗಿರಲಿಲ್ಲ. ಬದಲಾಗಿ ಇಬ್ಬರಿಗೂ ಹೆಚ್ಚಿನ ಸಮಯ ದೊರೆತು.. ಪರಸ್ಪರೊಡನೆ ಹೆಚ್ಚು ಸಮಯ ಕಳೆಯುತ್ತಿದ್ದುದರಿಂದ..ಅಲ್ಲಿ ಆಕರ್ಷಣೆಯ ಕೊರತೆಯಿಂದ ನಿರಾಸಕ್ತಿ ಉಂಟಾಗಿತ್ತು. 


ಜೀವನದ ಕುರಿತು ಇಬ್ಬರಿಗೂ ಇದ್ದ ನಿರಾಸಕ್ತಿಯನ್ನು ಕಲ್ಯಾಣಿ ತನ್ನ ಅತ್ತೆ ಸಾತಮ್ಮ ಹಾಗೂ ಮಾವ ಶೇಷಯ್ಯನವರ ದಾಂಪತ್ಯಕ್ಕೂ.. ತಮ್ಮ ದಾಂಪತ್ಯಕ್ಕೂ ಹೋಲಿಕೆ ಮಾಡಿಕೊಳ್ಳುತ್ತಾಳೆ.


ಜಿಪುಣಾಗ್ರೇಸರನಾಗಿದ್ದ ಶೇಷಯ್ಯನವರಿಗೂ ಸಾತಮ್ಮನವರಿಗೂ ಜೀವನ ಸುಖಮಯವಾಗಿತ್ತೆಂದರೆ ಅಲ್ಲಿ ಸಾಮರಸ್ಯವಿತ್ತು. ಅವರಲ್ಲಿನ್ನೂ ಪರಸ್ಪರ ಆಕರ್ಷಣೆಯಿತ್ತು. ಹಿರಿಯರು ನೋಡಿ ಮಾಡಿದ ವಿವಾಹವಾದರೂ.. ಹಿರಿಯರ ಕಣ್ಗಾವಲಿನಲ್ಲಿ ಅಂಕೆ ಮೀರಿ ಆಡದಂತಿದ್ದ ಇಬ್ಬರ ದಾಂಪತ್ಯ ಜೀವನ ಹಣದ ವಿಚಾರವೊಂದನ್ನು ಹೊರತುಪಡಿಸಿ ಉಳಿದ ಸಣ್ಣ-ಪುಟ್ಟ ವಿಚಾರಗಳಲ್ಲಿಯೂ.. ಇಬ್ಬರೂ ಹೊಂದಿಕೊಂಡು ಬದುಕುತ್ತಿದ್ದ ರೀತಿ ನಿಜಕ್ಕೂ ಆದರ್ಶವೇ ಸರಿ. 


ತುಂಬಾ ಮುದ್ದಿನಿಂದ, ನಾಜೂಕಿನಿಂದ ಬೆಳೆದಿದ್ದ ಕಲ್ಯಾಣಿ, ಉದ್ಯೋಗಕ್ಕೆ ಸೇರಿ ಉದ್ಯೋಗಸ್ಥೆಯಾಗುತ್ತಾಳೆ. ರಾಮನಾಥ ಹಾಗೂ ಕಲ್ಯಾಣಿ ಅವರ ನಡುವೆ ಇದ್ದ ಹೊಂದಾಣಿಕೆ, ಆಕೆ ಕೆಲಸಕ್ಕೆ ಹೋಗುತ್ತಾ ಇದ್ದಂತೆ.. ದಿನ ಕಳೆದಂತೆ ಕ್ಷೀಣಿಸುತ್ತಾ ಹೋಗುತ್ತದೆ. ಮನೆಯಲ್ಲಿ ಆಕೆ ಉದ್ಯೋಗಕ್ಕೆ ಹೋಗಬೇಕೆಂಬ ಒತ್ತಾಯವೇನೂ ಇರಲಿಲ್ಲ. ರಾಮನಾಥನ ದೃಷ್ಟಿಯಲ್ಲಿ ಅದು ಬೇಕಾಗಿಯೂ ಇರಲಿಲ್ಲ. ಆದರೂ, ಕಲ್ಯಾಣಿ ಕೆಲಸವನ್ನು ಬಿಡಲಿಲ್ಲ. ನವದಂಪತಿಗಳಲ್ಲಿ ಉದ್ಯೋಗಸ್ಥ ದಂಪತಿಗಳ ನಡುವಿನ ಹೊಂದಾಣಿಕೆಯಲ್ಲಿ.. ಕಲ್ಯಾಣಿ ಹಾಗೂ ರಾಮನಾಥರನ್ನು ಕಾಣಬಹುದಾಗಿದೆ. 


ಕಲ್ಯಾಣಿ ದಿನ ಕಳೆದಂತೆ ಆತನನ್ನು ಬಾಗಿಲಿನಲ್ಲಿಯೇ ಎದುರುಗೊಂಡು ಸ್ವಾಗತಿಸದಿದ್ದರೂ.. ಮನೆಯಲ್ಲಿ ತನಗಾಗಿಯೇ ತನ್ನದೆನ್ನುವ ಜೀವವೊಂದು ಕಾಯುತ್ತಿದೆ ಎನ್ನುವ ಆಲೋಚನೆಯೇ ಆತನನ್ನು ಪುಳಕಿತಗೊಳಿಸುತ್ತಿತ್ತು. ಆದರೆ, ಕಾಲಕ್ರಮೇಣ ಕೆಲಸದ ಒದ್ದಾಟದ ಕಾರಣದಿಂದ ಉಂಟಾದ ದೂರವನ್ನು.. ಕಲ್ಯಾಣಿಯ ಹದಗೆಡುತ್ತಿರುವ ಆರೋಗ್ಯವನ್ನು ಮೊದಲಿಗೆ ಅರ್ಥೈಸಿಕೊಂಡ ರಾಮನಾಥ ಆಕೆಯನ್ನು ಕೆಲಸದಿಂದ ದೂರ ಇರುವಂತೆ ಮಾಡುವಲ್ಲಿ ಯಶಸ್ವಿಯೂ ಆದ. ಆಗ ರಾಮನಾಥನ ಕುರಿತು ಉಂಟಾದ ಕೋಪದಿಂದ ತವರಿಗೆ ತೆರಳಿದಳು ಕಲ್ಯಾಣಿ. 


ತವರಿನಲ್ಲಿ ಮತ್ತೆರಡು ಹೊಂದಾಣಿಕೆಯ ದಾಂಪತ್ಯ ಹಾಗೂ ಸಾಮರಸ್ಯದ ಜೋಡಿ ಜೀವಗಳನ್ನು ಕಾಣಬಹುದು. ಅತ್ತೆಯಂತೆ ಮೆದುವಲ್ಲದ ತಾಯಿ ವಿಜಯಮ್ಮ ಹಾಗೂ ಆಕೆಯನ್ನು ತನ್ನ ಪ್ರತಿ ನಿರ್ಧಾರದಲ್ಲಿಯೂ ಕೇಳಿ ಮುಂದುವರೆಯುವ ವೆಂಕಟಾಚಲಯ್ಯ ಇಬ್ಬರದ್ದೂ ಹೊಂದಾಣಿಕೆಯ ಸೂತ್ರ. ಅಲ್ಲದೇ.. ಅಣ್ಣ ಅನಂತ ಹಾಗೂ ಅತ್ತಿಗೆ ವತ್ಸಲಾಳದ್ದು ಲವಲವಿಕೆಯ, ಜೀವಂತಿಕೆಯ ಹೊಂದಾಣಿಕೆಯ ದಾಂಪತ್ಯ.  


ಕೆಲವು ದಿನಗಳ ಅಂತರ ಇಬ್ಬರನ್ನೂ ಬೇರೆ ಮಾಡಿತು ಎಂದರೆ ಇಲ್ಲಿ ನಮ್ಮ ಊಹೆ ತಪ್ಪಾಗುತ್ತದೆ. ಕೆಲವೊಮ್ಮೆ ದೂರವಿದ್ದರೂ ಸಹಾ ಸನಿಹಕ್ಕೆ ಮನಸ್ಸುಗಳು ಕಾತರಿಸುತ್ತವೆ. ಅಂತಹಾ ಕಾತರಿಸುವಿಕೆ ಇರುವುದು ಕೇವಲ ಹೊಂದಾಣಿಕೆ ಮಾಡಿಕೊಳ್ಳುವ, ಮನಸ್ಸಿನಲ್ಲಿರುವ ಪ್ರೀತಿ, ಪ್ರೇಮಭರಿತ ದಾಂಪತ್ಯದಲ್ಲಿ. ಅನಂತ ಹಾಗೂ ಕಲ್ಯಾಣಿ ಇಬ್ಬರ ಮಿಡಿತಗಳು, ಪರಸ್ಪರರ ಕುರಿತು ಚಿಂತಿಸುವುದು.. ಪರಸ್ಪರರ ಯೋಗಕ್ಷೇಮಗಳನ್ನು ವಿಚಾರಿಸಿ ಕಾಳಜಿ ಮಾಡುವುದು.. ಇವೆಲ್ಲವೂ ಮತ್ತೆ ಅವರನ್ನು ತಮ್ಮ ಭವಿಷ್ಯದ ಗುರಿಯೊಂದಿಗೆ ಒಂದು ಮಾಡಿತು.


ಇಲ್ಲಿನ ದಾಂಪತ್ಯದಲ್ಲಿ ಕೇವಲ ಗಂಡ ಹೆಂಡತಿಯರ ಸಾಮರಸ್ಯ ಮಾತ್ರವಲ್ಲದೆ, ಕುಟುಂಬದ ಅನೇಕ ಜೀವಗಳ ಸಾಮರಸ್ಯವೂ ಅವರನ್ನು ಮತ್ತೆ ಒಂದುಗೂಡಿಸಿತು ಎಂದರೆ ಅದು ಅತಿಶಯೋಕ್ತಿಯಾಗಲಾರದು. 

~ವಿಭಾ ವಿಶ್ವನಾಥ್


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ