ಪುಸ್ತಕದ ಶೀರ್ಷಿಕೆ : ಛಿದ್ರ
ಲೇಖಕರು : ನಾಗತಿಹಳ್ಳಿ ಚಂದ್ರಶೇಖರ
ಪ್ರಕಾಶಕರು : ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ
ಪ್ರಥಮ ಮುದ್ರಣ : 2003
ನಾಲ್ಕನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 80
ಬೆಲೆ : 100 ರೂ.
ಛಿದ್ರ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥಾ ಸಂಕಲನ. ಇದರಲ್ಲಿ ಏಳು ಕಥೆಗಳಿದ್ದು.. 'ಯಾತ್ರೆ', 'ಸನ್ಯಾಸ', 'ನಾಯಿಪಾಡು' ಎಂಬ ಕಥೆಗಳು ಲಂಕೇಶ್ ಪತ್ರಿಕೆಯಲ್ಲೂ.. 'ಛಿದ್ರ', 'ಪೂರ್ವಿ' ಪ್ರಜಾವಾಣಿಯಲ್ಲೂ.. 'ನಾಟ್ಯರಾಣಿ ಶಾಂತಲೆ' ತುಷಾರದಲ್ಲೂ ಹಾಗೂ 'ಗಾಯ' ಕರ್ಮವೀರದಲ್ಲೂ ಪ್ರಕಟವಾಗಿದ್ದ ಕಥೆಗಳು. ಈ ಕಥೆಗಳ ಕುರಿತು ಬರೆಯುವಾಗ.. ಲೇಖಕರು "ಇವು ಬರೆದ ಕಥೆಗಳಲ್ಲ ಅವೇ ಬರೆಸಿಕೊಂಡದ್ದು" ಎಂಬ ಮಾತನ್ನು ಹೇಳುತ್ತಾರೆ.
ಇಲ್ಲಿ ಹಳ್ಳಿಯ ಕಥಾನಕಗಳು ಸಿಕ್ಕುವಂತೆ, ಪಶ್ಚಿಮ ದೇಶಗಳ ಕಥೆಗಳೂ ದೊರೆಯುತ್ತವೆ. ಹಾಗೆ ದೊರೆಯುವ ಕಥಾನಕಗಳಲ್ಲಿ ಅಲ್ಲಿಯ ಪರಿಸರದ ಹಾಗೂ ಜೀವನದ ಪರಿಚಯ ಮಾಡಿಸುತ್ತಾ.. ಅಲ್ಲಿಗೇ ಪ್ರವಾಸ ಹೋದ ಅನುಭವದಂತಾಗುತ್ತದೆ. ಸಿನಿಮಾಗಳಲ್ಲಿ ಕಾಣುವ ದೃಶ್ಯಕಾವ್ಯಗಳಂತೆ ಇಲ್ಲಿಯ ಕಥೆಗಳನ್ನು ಕಾಣಬಹುದು. ಇಲ್ಲಿನ ಕಥೆಗಳಲ್ಲಿ ಅಷ್ಟರಮಟ್ಟಿನ ಡೀಟೈಲಿಂಗ್ ಸಿಗುತ್ತದೆ.
ಯಾತ್ರೆ :
'ಡೆಲ್ಟಾ ವಿಮಾನ ಪ್ರವೇಶಿಸಿದರೆ, ಬಾಗಿಲಲ್ಲಿ ನಿಂತ ಮೇಕಪ್ ಮಾಡಿಕೊಂಡ ಮುಗುಳ್ನಗೆಯ ಗಗನಸಖಿಯರು !'
ಇದು ಕಥೆಯ ಕೊನೆಯ ಸಾಲು. ಈ ಸಾಲಿನ ಅರ್ಥ ಕತೆಯನ್ನು ಓದಿದವರಿಗೆ ಒಂದು ರೀತಿ ಅರ್ಥವಾಗುತ್ತದೆ. ಕತೆಯನ್ನು ಓದದೇ ಈ ಸಾಲುಗಳನ್ನು ಓದಿದರೆ ಬೇರೆಯ ಅರ್ಥ ನೀಡುತ್ತದೆ.
ವಿಭಿನ್ನ ಅರ್ಥ ನೀಡುವ ಸಾಲುಗಳೇ ನಾಗತಿಹಳ್ಳಿಯವರ ಕಥೆಗಳ ಸಿಗ್ನೇಚರ್ ಶೈಲಿ ಎಂದರೂ ತಪ್ಪಾಗಲಾರದೇನೋ..
ಗೆಳತಿ ಮೃದುಲಾಳನ್ನು ಭೇಟಿಯಾಗಲು ಹೊರಟು, ಅಲ್ಲಿನ ಜರ್ಮನಿಯ ದಿನಗಳನ್ನು ಕಳೆದು ಬಂದವನಿಗೆ ಆಕೆಯ ಒಂಟಿತನ ಅರ್ಥವಾದರೂ.. ಅವರು ಆಕೆಗೆ ಕೊಡುವ ಸಲಹೆ ಯಾಕೋ 'ಅಮೆರಿಕಾ ಅಮೆರಿಕಾ' ಚಿತ್ರದ ಅಂತ್ಯವನ್ನು ನೆನಪಿಸಿತು. ಅಷ್ಟಕ್ಕೂ ಮೃದುಲ ಜರ್ಮನಿಯಲ್ಲಿ ಹೇಗಿದ್ದಳು..? ಆಕೆ ಇಲ್ಲಿದ್ದಾಗಲೇ ವಿಭಿನ್ನವಾಗಿ ವಿವಾಹವಾಗಿ ಹೋಗಿದ್ದ ಪೀಟರ್ ಕೋಲ್ಮನ್ ನ ಜೊತೆ ತಪ್ಪಿ ಹೋಗಿದ್ದೇಕೆ..?? ಮಗಳು ವಿಂಧ್ಯಾ ಹೇಗಿದ್ದಳು..?? ಹೆಣ್ಮನದ ಭಾವನೆಗಳೇ ವಿಭಿನ್ನ. ಹೆಣ್ಣಿನ ಮನಸ್ಸನ್ನು ಅರಿಯಲು ಅಸಾಧ್ಯವೆನ್ನುವ ಮಾತು ಆಕೆಯ ಬದಲಾದ ಆಲೋಚನಾ ಲಹರಿಯಿಂದಾಗಿ ನೆನಪಾಯಿತು.
ಇಂತಹ ಮತ್ತೋರ್ವ ಹೆಣ್ಣೊಬ್ಬಳ ಪಾತ್ರ ಕಂಡದ್ದು 'ಪೂರ್ವಿ' ಕತೆಯಲ್ಲಿ.
ಪೂರ್ವಿ :
ಅಪ್ಪನ ನಿಧಾನಗತಿಯನ್ನು, ಅವರು ಮೆಚ್ಚುವ ಹಿಂದೂಸ್ಥಾನಿ ಸಂಗೀತವನ್ನೂ.. ಪ್ರತಿಯೊಂದರಲ್ಲೂ ಅಪ್ಪನ ಆಲೋಚನಾ ಲಹರಿಯನ್ನು ವಿರೋಧಿಸುತ್ತಾ ನಡೆಯುತ್ತಿದ್ದ ಆಕೆಗೆ ಅವರನ್ನು ಸಂಪೂರ್ಣವಾಗಿ ಸೋಲಿಸುವ ಅವಕಾಶವೊಂದು ಸಿಕ್ಕಿತು. ಅಪ್ಪನೇ ಆರಿಸಿದ್ದ ಮಾಧವನನ್ನು ಮದುವೆಯಾಗುವ ಸಂದರ್ಭವನ್ನು ತೊರೆದು ಡೆನ್ಮಾರ್ಕಿನ ರೋರ್ ವಿಗ್ ನ ಎನ್ಸ್ ಕೆಲ್ಲರ್ ಜೊತೆಗೆ ಜೊತೆಯಾಗಲು ಹೊರಟಳು. ಆದರೆ, ಅವಳ ಬದುಕಿನಲ್ಲಿ ಬಂದ ಸಂದರ್ಭವೊಂದು ಮತ್ತೆ ತನ್ನ ಬೇರನ್ನು ಅರಸಿ ಬರುವಂತೆ ಮಾಡಿತು. ಆಕೆ ಅಲ್ಲಿಗೆ ಬಂದಾಗ ಕಂಡ ಚಿತ್ರಣಗಳೇನು..?? ಅಷ್ಟಕ್ಕೂ ಆಕೆ ಅಲ್ಲಿಂದ ವಾಪಸ್ ಆದದ್ದೇಕೆ..??
ಹೆಣ್ಣುಗಳ ವಯಸ್ಸು ಹಾಗೂ ಮನಸ್ಸಿನ ಜೊತೆಗೆ ಭಾವನೆಗಳು ಕೂಡಾ ಬದಲಾಗುತ್ತವೆ. ಅಷ್ಟೇ ಅಲ್ಲದೆ.. ಇಲ್ಲಿ ಧಿಕ್ಕರಿಸಿ ನಡೆದ ಹೆಣ್ಣುಗಳು ಸೋತುಬಿಟ್ಟರಾ...? ಎಂಬ ಭಾವವೂ ಕಾಡಿತು. ಎಲ್ಲರನ್ನೂ ಎದುರು ಹಾಕಿಕೊಂಡರೂ ಪರವಾಗಿಲ್ಲ ಎನ್ನುವವರು ಮತ್ತೆ ತಾವು ಧಿಕ್ಕರಿಸಿದಲ್ಲಿಗೇ ಮರಳಿ ಬಂದದ್ದು, ಮರಳಿ ಬರುವ ಆಸೆ ತೋರಿದ್ದು ಅವರ ಅಂತರಂಗಗಳ ಹೆಣ್ತನದ ಮಿಡಿತವಾ..?? ಹಾಗೆ ಸೋತರೂ ಗೆದ್ದರು ಎಂದು ತೋರಿಸಿಕೊಳ್ಳುವ ಹೆಣ್ಣು ಪಾತ್ರಗಳೊಳಗಿನ ಅಂತರಂಗದ ಮಿಡಿತವಾ..?? ಈ ಪಾತ್ರಗಳು ವಿಭಿನ್ನವಾಗಿ ಇದ್ದಿದ್ದರೆ ಬಂಡಾಯವೆದ್ದು ಗೆಲ್ಲುವ ಹೆಣ್ಣುಮಕ್ಕಳಿಗೆ ಇವರು ಉದಾಹರಣೆಯಾಗಿ ನಿಲ್ಲುತ್ತಿದ್ದರೇನೋ ಎಂಬ ಎರಡು ಭಾವಗಳನ್ನು ಹುಟ್ಟಿಸಿದ ಕಥಾಪಾತ್ರಗಳಿವು.
ಸನ್ಯಾಸ :
ಎಲ್ಲವೂ ದಂಡಿಯಾಗಿದ್ದ ಸಿರಿವಂತನಾಗಿದ್ದವನೊಬ್ಬ ಸನ್ಯಾಸತ್ವಕ್ಕಾಗಿ ಮಿಡಿಯುತ್ತಿದ್ದದ್ದು, ಸನ್ಯಾಸಿ ಆಗಲು ಹೊರಟ ಆತ ಏನೇನು ಮಾಡಿದ..?? ಆತನ ಕುಟುಂಬ ಸುತ್ತಲಿನವರು ಆತನ ನಿರ್ಧಾರಗಳನ್ನು ಹಾಗೂ ಆತನ ನಡೆಗಳನ್ನು ಕಂಡು ಪ್ರತಿಕ್ರಿಸಿದ ಬಗೆ ಹೇಗೆ..? ಎಂಬ ಒಂದು ವಿಡಂಬನಾತ್ಮಕ ಕಥೆ ಇದು.
ಯು.ಆರ್ ಅನಂತಮೂರ್ತಿಯವರು ಈ ಕಥಾಸಂಕಲನಕ್ಕೆ ಮುನ್ನುಡಿ ಬರೆಯುವಾಗ ಒಂದು ಮಾತನ್ನು ಉಲ್ಲೇಖಿಸುತ್ತಾರೆ. 'ನಾಗತಿಹಳ್ಳಿ ನನ್ನ ಸಮಕಾಲೀನರಿಂದ ಕಲಿತವರಾಗಿದ್ದೂ ನವ್ಯವನ್ನು ದಾಟಿದವರು; ಬಂಡಾಯ ಚಳುವಳಿಯಿಂದ ಪ್ರಭಾವಿತರಾಗಿದ್ದೂ ಅದನ್ನು ಮೀರಿದವರು' ಎಂದು.
ಈ ಸಾಲು ನನಗೆ ಉತ್ಕಟವಾಗಿ ಕಂಡದ್ದು 'ಗಾಯ' ಕತೆಯಲ್ಲಿ.
ಗಾಯ :
ಒಂದು ಊರಿನ ಒಳ ರಾಜಕೀಯ, ಜಾತಿ ರಾಜಕೀಯಗಳಿಂದ ಆ ಹಳ್ಳಿ ನರಳುವ ಬಗೆಯನ್ನು.. ಅದನ್ನು ತಡೆಯಲು ಉಳಿದವರು ಪಡುವ ಪಾಡನ್ನು ಹಾಗೂ ಅವರ ಪ್ರಯತ್ನಕ್ಕೆ ಸಿಗುವ ಪ್ರತಿಕ್ರಿಯೆಯನ್ನು ತಣ್ಣಗೆ ಹೇಳುತ್ತಲೇ.. ತಲೆಮಾರುಗಳ ನಡುವಿನ ಯೋಚನೆಗಳ ಅಂತರವನ್ನೂ ತಿಳಿಸುತ್ತಾರೆ. ರಾಜಕೀಯ, ಜಾತಿ ವೈಷಮ್ಯದಿಂದ ಉಂಟಾಗುವ ಗಾಯವನ್ನು ಮಾಯಿಸುವುದು ಅಷ್ಟು ಸುಲಭವೇ..?? ಹಾಗೆ ಗಾಯ ಮಾಯ್ದರೂ ಉಳಿದ ಕಲೆಯ ಪರಿಣಾಮವೇನು..?? ಇಂದಿಗೂ ಹೆಚ್ಛೆಚ್ಚು ಪ್ರಸ್ತುತವೆನಿಸುವ ಹಳ್ಳಿಗಳ ಕಥೆ ಇದು.
ಛಿದ್ರ :
ಪುಸ್ತಕದ ಶೀರ್ಷಿಕೆಯೂ ಆಗಿರುವ ಕಥೆ 'ಛಿದ್ರ'. ಕುಳ್ಳುಬಟ್ಟರು ಒಂದು ಸೈಟು ತೆಗೆದುಕೊಂಡಾಗಿನಿಂದ ತಮ್ಮ ಕಷ್ಟಾಜಿತವನ್ನು ಅಲ್ಲಿ ಸುರಿದು ಮನೆ ಕಟ್ಟಿ, ತಮ್ಮ ದೊಡ್ಡ ಕುಟುಂಬವನ್ನು ಅಲ್ಲಿಗೆ ಸ್ಥಳಾಂತರಗೊಳಿಸಿ, ಇನ್ನೇನು ನೆಮ್ಮದಿಯ ಜೀವನ ನಡೆಸಬೇಕು ಎನ್ನುವಷ್ಟರಲ್ಲಿ ಶುರುವಾಗುವ ತಲ್ಲಣಗಳ ಕಥೆ. ಇದರ ಜೊತೆಗೆ ನಾಯಿಯ ನಿಯತ್ತು ಹಾಗೂ ಮನುಷ್ಯರ ಬದಲಾಗುವ ವರ್ತನೆಗಳ ಚಿತ್ರಣವೂ ಇದೆ.
'ನಿತ್ಯವೂ ಸೂರ್ಯನು ಹುಟ್ಟುವನು ; ಕುಳ್ಳುಬಟ್ಟರಿಗೆ ಸಮಾಧಾನ ತರುವನು. ನಿತ್ಯವೂ ಸೂರ್ಯನು ಮುಳುಗುವನು; ಕುಳ್ಳುಬಟ್ಟರಿಗೆ ಚಿಂತೆಗಳನ್ನು ತರುವನು.' ಎನ್ನುವ ಸರಳ ವಾಕ್ಯಗಳಲ್ಲಿ ಇಡೀ ಕಥೆಯ ಅಂತರ್ಯವೇ ಅಡಗಿದೆಯೇನೋ ಎನ್ನಿಸುವಂತಿದೆ.
ನಾಯಿಪಾಡು :
ಮನುಷ್ಯನು ಅಲ್ಲಿ-ಇಲ್ಲಿ ಅಲೆಯುವಾಗ, ಆತನದನ್ನೇ ನಾಯಿಪಾಡು ಎಂದು ಕರೆಯುವ ನಾವು.. ನಾಯಿಯ ಜೀವನದ ಘಟ್ಟಗಳಲ್ಲಿ ಅದು ಅಲೆದಾಡುವ, ಪ್ರತಿಕ್ರಿಯೆ ನೀಡುವ ಬಗೆಯನ್ನು ಕಂಡಾಗ ಏನೆನ್ನಬಹುದು..?? ಅದರಲ್ಲೂ.. ಹೆಣ್ಣುನಾಯಿಯೊಂದರ ಕೆಲದಿನಗಳ ವರ್ತನೆ ಹಾಗೂ ಅದರ ಹೋರಾಟವನ್ನು ಗಮನಿಸಿ ಬರೆದಿರುವ ಕಥೆಯನ್ನು ಆಗಾಗ ತಮ್ಮ ಸಹೋದ್ಯೋಗಿಗಳಿಗೂ ಹೋಲಿಸುವಾಗ ನಾಯಿಪಾಡಿನ ಸ್ಥಿತಿ ಹೆಚ್ಚು ಅರ್ಥವಾಗುತ್ತದೆ.
ನಾಟ್ಯರಾಣಿ ಶಾಂತಲೆ :
ಮುಂಜಾನೆ ಹಳ್ಳಿ ಹಾಗೂ ಅಸ್ತಮಾನಪುರವೆಂಬ ಊರುಗಳ ನಡುವಿನ ಪ್ರಯಾಣದ ಕಥೆಯಲ್ಲಿ ಬರುತ್ತಾಳೆ ನಮ್ಮ ಕಥಾ ನಾಯಕಿ ಶಾಂತಲೆ. ಈ ಕಥೆಯಲ್ಲಿ ಹೆಚ್ಚಿನ ರೂಪಕಗಳಿದ್ದು ಕಥೆ ಕಟ್ಟುವಿಕೆಯ ಶೈಲಿ ಕಾವ್ಯಾತ್ಮಕವಾಗಿಯೂ ಕೂಡಿದೆ. ಇದು ನಿಜವಾಗಿಯೂ ನಾಟ್ಯರಾಣಿಯೇ ಶಾಂತಲೆಯ ಕಥೆಯಾ..?? ನಿಗೂಢವಾಗಿರುವ ಈ ಕಥೆಯ ಕುರಿತು ಹೆಚ್ಚು ಬಿಚ್ಚಿಡಲಾರೆ. ಆದರೆ ಈ ವಿಭಿನ್ನ ಕಥೆಯ ಅಂತ್ಯ ಬಹಳ ಕಾಡುವ ಅಂತ್ಯ.
ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ರೆಕ್ಕೆ-ಬೇರು ಅಂಕಣಗಳನ್ನು ಓದಿದ್ದೆ ಹಾಗೂ ಸಿನಿಮಾಗಳನ್ನು ನೋಡಿದ್ದನಾದರೂ.. ನಾನು ಓದಿದ ಮೊದಲ ಪುಸ್ತಕ, ಈ ಕಥಾಸಂಕಲನ 'ಛಿದ್ರ'. ಕಥೆ ಕಟ್ಟಿರುವ ಶೈಲಿ, ಕಟ್ಟಿಕೊಡುವ ರೂಪಕಗಳು, ಕಾವ್ಯಾತ್ಮಕತೆ, ಪಶ್ಚಿಮ ದೇಶಗಳ ಸಂದರ್ಭಗಳು, ಸರಳ ವಾಕ್ಯಗಳಲ್ಲಿ ನಿಗೂಢವಾಗಿ ಇಡೀ ಕಥೆಯ ಆಂತರ್ಯವನ್ನು ಬಚ್ಚಿಟ್ಟು ಅದರಲ್ಲಿ ಎರಡು ಅರ್ಥವನ್ನು ಹೊಳೆಸಿ.. ಸಾಮಾನ್ಯಕ್ಕೆ ಅರ್ಥವಾಗುವ ಕಥೆಗೂ.. ಕಥೆಯಲ್ಲಿರುವ ವಾಕ್ಯಗಳ ಜೊತೆಗೂ ಇರುವ ಸಂಬಂಧವನ್ನೂ, ಸಂಬಂಧವನ್ನು ಬಚ್ಚಿಟ್ಟ/ಬಿಚ್ಚಿಟ್ಟ ರೀತಿ ಇಷ್ಟವಾಯಿತು. ಕತೆಯ ಶೀರ್ಷಿಕೆಗಳೂ ಅರ್ಥಪೂರ್ಣವಾಗಿ, ಚಿಕ್ಕದಾಗಿ, ಚೊಕ್ಕವಾಗಿ ಕಥೆಯ ಗುಟ್ಟನ್ನು ಬಿಟ್ಟು ಕೊಡದೆ ಸೆಳೆಯುತ್ತವೆ. ಒಂದು ಚಂದದ ಕಥಾಸಂಕಲನದ ಓದು ತನ್ನ ಕಥೆಗಳೊಳಗಿನ ತಲ್ಲಣಗಳಿಂದ ಕಾಡುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ