ಪುಸ್ತಕದ ಶೀರ್ಷಿಕೆ : ಅಮ್ಮಾ..... ಅಪ್ಪನಿಗೇನಾದ್ರೂ ಗೊತ್ತಾದರೆ !?
ಲೇಖಕರು : ಶೃತಿ ಗದ್ದೆಗಲ್
ಪ್ರಕಾಶಕರು : ಸೊಡರು ಪ್ರಕಾಶನ
ಪ್ರಥಮ ಮುದ್ರಣ : 2022
ಪುಟಗಳು : 184
ಬೆಲೆ : 210 ರೂ.
ಈ ಕಥಾಸಂಕಲನ ಶೃತಿ ಗದ್ದೆಗಲ್ ರವರ ಪ್ರಥಮ ಕಥಾಸಂಕಲನವಾದರೂ.. ಇದು ಅವರ ಎರಡನೇ ಪುಸ್ತಕ. ಇವರ ಕಥಾಶೈಲಿ ಹಾಗೂ ಕಥಾವಸ್ತುವಿನ ಆಯ್ಕೆ ನನಗೆ ಯಾವಾಗಲು ಬಹಳ ಅಚ್ಚುಮೆಚ್ಚು. ಮಾಮ್ಸ್ಪ್ರೆಸ್ಸೊ ವೇದಿಕೆಯಿಂದ ಪರಿಚಿತವಾಗಿದ್ದ ಈ ಲೇಖಕಿಯ ಬರಹಗಳನ್ನು ಓದಲು ಕಾಯುತ್ತಿದ್ದ ನನಗೆ ಪ್ಯಾಕೇಜ್ ನಂತೆ ಕೈಗೆ ಸಿಕ್ಕದ್ದು ಇವರ ಈ ಕಥಾಸಂಕಲನ. ಇದರ ಮತ್ತೊಂದು ವಿಶೇಷತೆ ಎಂದರೆ ನಮ್ಮ ಪುಸ್ತಕ ಅವಲೋಕನ ಬಳಗದ ಹಿರಿಯರೂ, ಅಡ್ಮಿನ್ ಆದ ವೀಣಾ ನಾಯಕ್ ಮೇಡಂ ಅವರ ಬೆನ್ನುಡಿಯೂ ಇದೆ. ಈ ಕಥಾ ಸಂಕಲನದಲ್ಲಿ ಒಟ್ಟು 31 ಕತೆಗಳಿವೆ.
ಬೆಂಬಲ : ದತ್ತು ಮಗುವೊಂದು ತನ್ನ ತಾಯಿಯನ್ನು ಅವಲಂಬಿಸಲು, ಆಕೆಯನ್ನು ಒಪ್ಪಿಕೊಳ್ಳಲು ಅತ್ತೆ-ಮಾವನಾಗಿ ಅವರು ತೆಗೆದುಕೊಳ್ಳುವ ನಿರ್ಧಾರ ಮೊದಮೊದಲಿಗೆ ಒಪ್ಪಲಾಗದಿದ್ದರೂ.. ಕಟುವಾದ ನಿರ್ಧಾರ ಎಂದೆನಿಸಿದರೂ ಅದರ ಸಾರ್ಥಕ ಫಲಿತಾಂಶ ನೆಮ್ಮದಿ ತಂದಿತು.
"ಜೊತೆಜೊತೆಯಲಿ" : ಶರೀರದ ಊನವೊಂದನ್ನು ಲೆಕ್ಕಿಸದೆ, ಆಕೆಯನ್ನು ಮನಸ್ಸಿನಿಂದ ಪ್ರೇಮಿಸಿ ಒಪ್ಪಿ ಮದುವೆಯಾಗಲು ಹೊರಟಾಗ ಆಕೆ ಮೊದಲಿಗೆ ನಿರಾಕರಿಸಿದಳು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಅವಳ ಹೆಜ್ಜೆಯನ್ನು ಕುಂಟದಂತೆ ನಡೆಯಲು ಜೊತೆಯಾದವರು ಯಾರು..??
ಹೀಗಾದ್ರೆ ಹೇಗೆ!? : ಗಂಭೀರವಾದ ಸಮಸ್ಯೆ ಏನೋ ಎಂದು ಓದುತ್ತಿರುವಂತೆ ಇಳಿ ಹಾಸ್ಯದ ಶೈಲಿಯಿಂದ ಮನಸ್ಸನ್ನು ಹಗುರಗೊಳಿಸಿದ ಕಥೆ ಇದು.
ತವರಿನ ಉಡುಗೊರೆ... : ತಾನು ಪ್ರೇಮವಿವಾಹವಾದದಕ್ಕಾಗಿ ತವರಿನಿಂದ ದೂರವಿರಬೇಕಾಗಿ ಬಂದ ಸಂದರ್ಭದಲ್ಲಿ.. ಮತ್ತೆ ತವರ ಜೊತೆ ಕೊಂಡಿ ಬೆಸೆಯಲು ಹೋದರೂ ಅದಷ್ಟು ಸುಲಭವಿರಲಿಲ್ಲ. ಆದರೆ, ಮಗಳಿಗೆ ತವರ ಉಡುಗೊರೆ ಸಿಕ್ಕಿದ್ದು ಹೇಗೆ..??
ಅಪಾರ್ಥ : ಪ್ರತಿ ಮನುಷ್ಯನ ನಡೆಯ ಹಿಂದೆಯೂ ನಮಗೆ ಅವರ ಕುರಿತು ತಿಳಿಯದಿದ್ದಾಗ ಅಪಾರ್ಥ ಮಾಡಿಕೊಳ್ಳುವ ಸಂದರ್ಭವಿರುತ್ತದೆ. ಆದರೆ, ಅಂತಹಾ ಅಪಾರ್ಥವೊಂದು ತಿಳಿಯಾಗಿ ಅವರ ಕುರಿತು ಒಳ್ಳೆಯ ಭಾವ ಮೂಡಿದ ಕಥೆ ಇದು.
"ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು.." ಎಂಬ ಹಾಡು ಹಿನ್ನೆಲೆಯಲ್ಲಿ ಕೇಳುತ್ತಿತ್ತು
ಆತ್ಮಹತ್ಯೆ!!!? : ಆತ್ಮಹತ್ಯೆ ಮಾಡಿಕೊಳ್ಳಲು ಹೊರಟವರನ್ನು ಉಳಿಸುತ್ತೇವೆಂದು ಹೊರಟವರಿಗೆ ಅಲ್ಲಿನ ನಿಜ ಪರಿಸ್ಥಿತಿ ಕಂಡಾಗ ಅನಿಸಿದ್ದೇನು..??
ಆನಂದಜ್ಯೋತಿ : ಹೆಣ್ಣಿನ ತಿಂಗಳ ಸಮಸ್ಯೆ ಒಂದು ಸಮಸ್ಯೆಯೇ ಅಲ್ಲ ಎನ್ನುವಂತೆ ನಡೆದುಕೊಂಡ ಅತ್ತೆ, ಆಧುನಿಕ ಶೈಲಿಯಲ್ಲಿ ಯೋಚಿಸಿದರು ಎನ್ನುವುದಕ್ಕಿಂತ ಆಧುನಿಕ ಅಮ್ಮನಾದರು ಎಂದರೆ ತಪ್ಪಾಗಲಾರದು.
ಎಂದು ಆದೇವೊ ನಾವು ಮುಕ್ತ ಮುಕ್ತ ಮುಕ್ತಾ... : ತನ್ನ ಅಭಿರುಚಿಗೆ ತಕ್ಕನಾಗಿ ಜೀವಿಸುವ ಸ್ವಚ್ಛಂದತೆ ಸಿಗುವ ಹೆಣ್ಣಿನ ನಿರಾಳತೆಯ ಭಾವ ತಟ್ಟಿದ ಕಥೆ ಇದು.
ಯಕ್ಷಗಾನ : ಯಕ್ಷಗಾನಕ್ಕೆ ಹೋಗಲೆಂದು ಪ್ರತಿಬಾರಿಯೂ ಪ್ರಮುಖವಾಗಿ ಟೊಂಕ ಕಟ್ಟಿ ನಿಲ್ಲುತ್ತಿದ್ದ ಹೆಂಡತಿ.. ಈಗ ಗಂಡನೇ ಯಕ್ಷಗಾನಕ್ಕೆ ಆಸಕ್ತಿಯಿಂದ ಕರೆದರೂ ಹೋಗಲಾರದ ಸಂದರ್ಭದ ಹಿಂದಿನ ಪ್ರಮೇಯವಾದರೂ ಏನಿದೆ..??
ತಾಯಿಗಾಗಿ ತಾಯಿಯಾದವಳು : ತಾಯಿಯಂತಹಾ ಅಕ್ಕನಿಗಾಗಿ ಮಾಡಿದ ತಂಗಿಯ ತ್ಯಾಗ ಹಾಗೂ ನಿಸ್ವಾರ್ಥ ಮನೋಭಾವದ ಕಥೆ ಇಲ್ಲಿದೆ.
ಬದಲಾದ ನಾನು...!! : ಪ್ರತಿಯೊಬ್ಬರೂ ಬದಲಾಗುವುದಕ್ಕೂ ಒಂದು ಕಾರಣವಿರುತ್ತದೆ. ಇಲ್ಲಿ ಆಕೆ ಬದಲಾಗಲೇಬೇಕಿತ್ತು ಎಂಬ ಅನಿವಾರ್ಯತೆಯಿತ್ತು. ಆದರೆ, ಆಕೆ ಬದಲಾಗುತ್ತಿದ್ದದ್ದು ಅನಿವಾರ್ಯತೆಯಿಂದಂತೂ ಅಲ್ಲ. ಮತ್ತೆ ಹೇಗೆ..? ಓದಿ ನೋಡಿ.
ಹರಕೆ : ಅಲ್ಲಲ್ಲಿ ಜಗಳ ನೋಡಿ ಗಂಡುಮಕ್ಕಳೇ ಬೇಡವೆಂದುಕೊಂಡಿದ್ದ ತಾಯಿಗೆ ಇಬ್ಬರು ಗಂಡುಮಕ್ಕಳು. ಆದರೆ, ಅವರ ಸಾಮರಸ್ಯವನ್ನು ಕಂಡ ತಾಯಿಯ ಮನಸ್ಸು ಹೆಣ್ಣು ಮಕ್ಕಳಿದ್ದರೂ ಇಷ್ಟು ಚಂದ ನೋಡಿಕೊಳ್ಳುತ್ತಿದ್ದರು ಎಂಬ ಭಾವ ಮೂಡಿಸಿದಂತೂ ಸುಳ್ಳಲ್ಲ. ಆಪ್ತ ಭಾವ ಮೂಡಿಸಿದ ಕಥೆ ಇದು.
ಅವಾಂತರ : ತಿಳಿಹಾಸ್ಯದ ಶೈಲಿಯಲ್ಲಿ ರೂಪಿತವಾದರೂ.. ಮೊದಲಿಗೆ ಇದು ಗಂಭೀರ ಸಮಸ್ಯೆ ಎನ್ನಿಸುವ ಭಾವ ಹುಟ್ಟಿಸಿತು. ಆದರೆ, ಈಗಿನ ಜನರೇಶನ್ ನ ಜೀವನಶೈಲಿಯನ್ನು ಬಿಂಬಿಸುವ ಕತೆ.
ಅಭಿನೇತ್ರಿ : ಅಭಿನಯಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವುದರ ಜೊತೆಗೆ ಮನಸ್ಸಿದ್ದರೆ ಮಾರ್ಗ ಎಂದು ತೋರಿಸುವ ಸ್ಪೂರ್ತಿದಾಯಕ ಕಥೆ.
ಕನ್ಯಾದಾನ : ಕನ್ಯಾದಾನಕ್ಕೂ ಮುಂಚೆ ಕಂಡ ಕನಸೊಂದು ಅಮ್ಮನ ಮೂಲಕ ನನಸಾಗಲಿದೆ ಎಂದುಕೊಂಡಿದ್ದಾಗ ಆಕೆಯ ಹುಡುಗನೇ ಆಕೆಯನ್ನು ಅರ್ಥ ಮಾಡಿಕೊಂಡು ಆಕೆಯ ಕನಸನ್ನು ನನಸು ಮಾಡಿಸಿದ ಕಥೆ ಇಲ್ಲಿದೆ.
ಚೆಲುವೆ(ಎ)ಯನ್ನರಸಿ : ವಧುಪರೀಕ್ಷೆಗೆ ಹೋದಾಗ ಒಬ್ಬರ ಬದಲಿಗೆ ಮತ್ತೊಬ್ಬರು ಇಷ್ಟವಾದರೆ..?? ಇಲ್ಲಿ ಆತನಿಗೆ ಬಯಸಿದ ಚೆಲುವೆ ಸಿಕ್ಕರು. ಅದರ ಜೊತೆಗೆ ಆಪ್ತಗೆಳತಿಯರ ನಿಸ್ವಾರ್ಥ ಸ್ನೇಹವೂ ಇಷ್ಟವಾಯಿತು.
ಹೆಂಡತಿಯಾಗಲಾರೆ : ತಾಯಿಯ ಸ್ಥಾನ ತುಂಬಿದ್ದವರನ್ನು ತಂದೆ ಹಿಂದೆ ಪ್ರೀತಿಸುತ್ತಿದ್ದರು ಎಂದು ತಿಳಿದು ಮಕ್ಕಳು ವಿವಾಹ ಮಾಡಿಸಲು ಸಿದ್ಧವಾದರೂ.. ಆಕೆ ಅದಕ್ಕೆ ಸಿದ್ಧವಿರಲಿಲ್ಲ. ಹೆಂಡತಿಯಾಗಲಾರೆ ಎಂದದ್ದು ಏಕೆ..??
ತೊಟ್ಟಿಲು : ಅವರಿಗೆ ಮಕ್ಕಳಿರಲಿಲ್ಲ. ಆದರೆ, 40ವರ್ಷದ ಹಿಂದೆ ತಂದ ತೊಟ್ಟಿಲು ಯಾವತ್ತೂ ಬರೆದಾಗದ ಕಥೆ ಇಲ್ಲಿದೆ.
ಕಾಣೆಯಾಗಿದ್ದಾಳೆ!!? : ಮದುವೆಯ ದಿನ ವಧು ಕಾಣೆಯಾಗಿದ್ದಾಳೆ ಎನ್ನುವ ಗುಲ್ಲೆದ್ದ ಮದುವೆ ಮಂಟಪದಲ್ಲಿ ಆಕೆ ಮತ್ತೆ ಪ್ರತ್ಯಕ್ಷವಾದ ರೀತಿ ಹಾಗೂ ಪರಿ ಬಹಳ ಇಷ್ಟವಾಯಿತು.
ಬಳೆ ಹುಡುಗ : ಬಳೆ ಹುಡುಗನಿಗೊಂದು ಪ್ರೀತಿ ಹುಟ್ಟಿತು. ಆದರೆ, ಆತ ಆ ಪ್ರೀತಿಯನ್ನು ಪಡೆದುಕೊಂಡನೇ..??
ಮುಖಪುಟ ಪ್ರೀತಿ : ಮುಖವೇ ನೋಡದೆ ಕೇವಲ ಮುಖಪುಟದಲ್ಲಿ ಹುಟ್ಟಿದ ಪ್ರೀತಿಯ ಹಿಂದೆ ಅದೆಷ್ಟೋ ಮೋಸಗಳಿರಬಹುದು. ಆದರೆ, ಇಲ್ಲಿ ಒಂದು ಅಪರೂಪದ ಮುಖಪುಟ ಪ್ರೀತಿಯ ಕಥೆ ಕಾಣುತ್ತದೆ. ಅಷ್ಟೇ ಅಲ್ಲದೆ ಮಗಳು ತನ್ನ ತಂದೆ-ತಾಯಿಯರ ಬಗೆಗಿನ ಗೌರವವೂ ಕಾಣುವುದು ವಿಶೇಷ.
ನವ ವಸಂತ : ಮಗಳ ಪ್ರೀತಿಯನ್ನು ತಿರಸ್ಕರಿಸಲು ಅವರಿಗೆ ಕಾರಣವಿತ್ತು. ಏಕೆಂದರೆ, ಆತನಿಗದು ಎರಡನೇ ವಿವಾಹ. ಹಠಮಾರಿಯಾಗಿದ್ದ ಆಕೆಯ ಬಾಳಲ್ಲಿ ಬೇರೆ ಹುಡುಗನ ಪ್ರವೇಶವಾಗಿ ನವ ವಸಂತ ಕಾಲಿಟ್ಟದ್ದು ಹೇಗೆ..??
ಅರ್ಹತೆ : ಸಾಕಿದವರ ಮನೆಯ ಮಗ ಆಕೆಯನ್ನು ಇಷ್ಟಪಟ್ಟಿದ್ದನು. ಆದರೆ, ಆಕೆಗೆ ಮನಸ್ಸಿನಲ್ಲಿದ್ದ ಗೊಂದಲವೆಂದರೆ ಅವನ ಪ್ರೀತಿಗೆ ತಾನು ಅರ್ಹಳೇ..?? ಎಂಬುದು. ಅವಳಿಗಿಂತ ಪ್ರೌಢವಾಗಿ ಆಲೋಚಿಸಿದ ಹುಡುಗಿಯ ಮನಸ್ಸು, ಸಾಕಿದವರ ಕುರಿತು ಇರುವ ಗೌರವ ಭಾವ ಇಷ್ಟವಾಯಿತು.
ಅರಿವು : ಮಗಳ ಒರಟುತನ, ಅಹಂಕಾರವನ್ನು ಅವಳಿಗೆ ಅರಿವಾಗುವಂತೆ ತಿದ್ದಿ ತೀಡಿದ.. ಮಕ್ಕಳನ್ನು ತಿದ್ದಬೇಕಾದ ಬಗೆಯನ್ನು ತೋರಿದ ಕತೆ.
ಸ್ವಾರ್ಥಿಗಳು : "ಎಲ್ಲರೂ ಸ್ವಾರ್ಥಿಗಳು ಎಲ್ಲಾ ಧನಪಿಶಾಚಿಗಳು" ಎಂದು ಹೇಳಿದವಳು ಒಳ್ಳೆಯವಳಾ..?? ಮಗ ಕೈ ಬಿಟ್ಟ ತಾಯಿಯನ್ನು ಕರೆತಂದವಳ ಮನಸ್ಸಲ್ಲಿ ಇದ್ದ ಭಾವನೆಗಳೇನು..??
"ಅಮ್ಮಾ... ಅಪ್ಪನಿಗೇನಾದ್ರೂ ಗೊತ್ತಾದರೆ!?" : ಪುಸ್ತಕದ ಶೀರ್ಷಿಕೆಯಿಂದಲೇ ಸೆಳೆದ ಕತೆ. ಅಪ್ಪನಿಗೆ ಹೇಳದೆ ಅಮ್ಮ-ಮಗಳು ಸೇರಿ ಮಾಡಿದ ಕೆಲಸವೊಂದಿತ್ತು. ಅಪ್ಪನಿಗೆ ಗೊತ್ತಾದ್ರೆ ಎನ್ನುವ ಭಯದಲ್ಲಿದ್ದಾಗಲೇ ಆತನಿಗೆ ವಿಷಯ ತಿಳಿದಿತ್ತು. ಮುಂದೇನಾಯಿತು..?? ಕುತೂಹಲದಿಂದ ಓದಿಸಿಕೊಂಡು ಹೋಗುವ ಕತೆ.
ಒಂಟಿ ಜೀವನ : ಇಳಿ ವಯಸ್ಸಿನಲ್ಲಿ ಒಂಟಿ ಜೀವನ ನಡೆಸುವ ಪರಿಸ್ಥಿತಿ ಬಂದ ಮಹಿಳೆಯರ ಮನದಂಗಳದಂತೆ, ಅವರ ಪರಿಸ್ಥಿತಿಗೆ ಹಿಡಿದ ಕನ್ನಡಿ ಈ ಕತೆ.
ಬಂಜೆಯಾಗಿಸು ತಂದೆ : ಮುಂದಿನ ಜನ್ಮದಲ್ಲಿ ನನ್ನನ್ನೇ ಬಂಜೆಯಾಗಿಸು ಎಂದು ಬೇಡಿಕೊಂಡವಳ ಮನಸ್ಸಿನಲ್ಲಿ ಏನಿತ್ತು..?? ಅವಳ ಆ ಪ್ರಾರ್ಥನೆಯ ಹಿಂದಿನ ನೋವೇನು..?? ಕರುಣಾಜನಕ ಕತೆ.
ನಾವೂ ಒಳ್ಳೆಯವರೆ : ದಂದೆ ಬಿಟ್ಟು, ಗತದ ಕುರುಹಿಲ್ಲದಂತೆ ಬದುಕುತ್ತಿದ್ದ ಹೆಣ್ಣಿನ ಮಗಳ ಮದುವೆಗೆ ಅಡ್ಡಿಯೊಂದು ಎದುರಾಗಿತ್ತು. ಆಕೆ ಇನ್ನೇನು ಮದುವೆ ನಿಲ್ಲುವುದೆಂದು ಹೆದರಿದ್ದಾಗ ನಾವೂ ಒಳ್ಳೆಯವರೇ ಎಂದು ಮದುವೆಗೆ ಸಹಕಾರ ನೀಡಿದ್ದರು. ಯಾರವರು..?? ಅದಕ್ಕೆ ಕಾರಣವೇನು..??
ಅಪಾರ್ಥ : ಬೇರೆಯವರ ಮನೆಯಲ್ಲಿನ ಅತ್ತೆ-ಸೊಸೆಯರ ಪ್ರಸಂಗಗಳನ್ನು ಕೇಳಿ ತನ್ನ ಸೊಸೆಯ ನಡವಳಿಕೆಯನ್ನು ಅಪಾರ್ಥ ಮಾಡಿಕೊಂಡ ಅತ್ತೆಯ ಮನಸ್ಸು ತಿಳಿಯಾಯಿತೇ..?? ಅಥವಾ ಅಪಾರ್ಥದಿಂದ ಅನರ್ಥವಾಯಿತೇ..??
ನಾನು ನನ್ನವಳು (ಸ್ವಗತ) : ನಾನು ನನ್ನವಳು ಎಂದು ಸ್ವಗತದಿಂದ ತನ್ನ ಹೆಮ್ಮೆಯ ಕತೆ ಹೇಳುತ್ತಿರುವವರು ಯಾರು..??
ಇಲ್ಲಿನ ಎಲ್ಲಾ ಕತೆಗಳೂ ವಿಭಿನ್ನ. ಒಂದೆರಡು ಕತೆ ಹೆಣೆದಿರುವ ಶೈಲಿ ಒಂದೇ ರೀತಿಯದ್ದು ಎನ್ನಿಸಿದರೂ.. ಕಥಾವಸ್ತು ವಿಭಿನ್ನ. ಇಲ್ಲಿನ ಕತೆಗಳು ವಾಸ್ತವದ ಘಟನೆಗಳ ಆಯ್ದ ತುಣುಕನ್ನು ನಮ್ಮ ಕಣ್ಮುಂದೆ ತಂದಿಟ್ಟಂತಿವೆ. ಸಾಮಾಜಿಕ ಕತೆಗಳನ್ನು ನಿಗೂಢತೆ ಹಾಗೂ ಹಾಸ್ಯ ಶೈಲಿಯಿಂದ ಕಟ್ಟಿಕೊಡುವುದು ಸುಲಭವಲ್ಲ. ಅಂತಹಾ ಅಪರೂಪದ ಶೈಲಿ ಇಲ್ಲಿ ಕಂಡುಬರುತ್ತದೆ. ಕತೆಗಳನ್ನು ಓದುತ್ತಾ ಹೋಗುತ್ತಿದ್ದಂತೆ.. ಕತೆಗಳು ಇಷ್ಟು ಬೇಗ ಮುಗಿದವಾ..! ಎಂಬ ಅಚ್ಚರಿ ಮೂಡಿದ್ದು ಸುಳ್ಳಲ್ಲ. ವಿಭಿನ್ನ ಕಥಾವಸ್ತುಗಳ ಇನ್ನಷ್ಟು ವಿಶೇಷ ಕತೆಗಳು ಮೂಡಿ ಬರಲಿ ಹಾಗೂ ವಿಭಿನ್ನ ಸಾಹಿತ್ಯ ಪ್ರಕಾರದಲ್ಲಿಯೂ ನಿಮ್ಮ ಸಾಹಿತ್ಯ ಕೃಷಿ ಹುಲುಸಾಗಿ ಸಾಗಲಿ ಎಂಬ ಶುಭ ಹಾರೈಕೆ ನನ್ನದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ