ಭಾನುವಾರ, ಏಪ್ರಿಲ್ 12, 2026

ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ (ಪುಸ್ತಕ ಯಾನ - 132)


ಪುಸ್ತಕದ ಶೀರ್ಷಿಕೆ : ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ

ಲೇಖಕರು : ಡಾ || ವಿಜಯ ಸುಬ್ಬರಾಜ್

ಪ್ರಕಾಶಕರು : ಅಭಿಲಾಷ್ ಮುಂಡಾಲ ಪ್ರಕಾಶನ

ಪ್ರಥಮ ಮುದ್ರಣ : 2000

ದ್ವಿತೀಯ ಪರಿಷ್ಕೃತ ಮುದ್ರಣ : 2010

ಪುಟಗಳು : 72

ಬೆಲೆ : 60 ರೂ.


ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ ಎಂಬ ಶೀರ್ಷಿಕೆ ಕಂಡವಳಿಗೆ ಪುಸ್ತಕದ ಒಳಗೆ ಸಿಕ್ಕ ವಿಷಯಗಳು ಮತ್ತಷ್ಟು ಸೆಳೆದಿತ್ತು. ಹೌದು..! ಇದು ಅಂಡಮಾನ್ ಪ್ರವಾಸದ ಕುರಿತ ಪ್ರವಾಸ ಕಥನವೇ.. ಈ ಹಿಂದೆ ನಾನು ಡಾ|| ರಹಮತ್ ತರೀಕೆರೆಯವರ 'ಅಂಡಮಾನ್ ಕನಸು' ಎನ್ನುವ ಪ್ರವಾಸ ಕಥನವನ್ನು ಓದಿ ಪರಿಚಯಿಸಿದ್ದೆ. ಒಂದೇ ಸ್ಥಳದ ಕುರಿತ ಪ್ರವಾಸ ಕಥನಗಳನ್ನು ಓದುವಾಗ ವಿಭಿನ್ನವಾಗಿ ಆ ಸ್ಥಳದ ನೋಟ ದಕ್ಕುತ್ತದೆ. ಈ ಪ್ರವಾಸ ಕಥನ ಇನ್ನೂ ಹೆಚ್ಚಿನ ವಿಭಿನ್ನತೆಯನ್ನು ತೋರಿಸಿಕೊಟ್ಟಿತು.


ಲೇಖಕಿಯಾದ ಡಾ|| ವಿಜಯಾ ಸುಬ್ಬರಾಜ್ ಅವರು ಕಾಲೇಜಿನ ಕನ್ನಡ ಅಧ್ಯಾಪಕಿಯಾಗಿದ್ದಾಗ.. ಅದೇ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜೀವಶಾಸ್ತ್ರದ ಉಪನ್ಯಾಸಕರಾಗಿದ್ದ ಡಾ|| ಪುರುಷೋತ್ತಮ್ ಹಾಗೂ ಡಾ||ಲೀಲಾ ಅವರ ಜೊತೆಗೆ ಶೈಕ್ಷಣಿಕ ಪ್ರವಾಸಕ್ಕೆಂದು ಹೋಗಿದ್ದವರು. ಜೀವಶಾಸ್ತ್ರದಲ್ಲಿ ಲೇಖಕಿಗಿದ್ದ ಆಸಕ್ತಿ ಅವರನ್ನು ಅವರೆಲ್ಲರ ಜೊತೆಗೆ ಹೋಗುವಂತೆ ಮಾಡಿತ್ತು. ಕನ್ನಡ ವಿಷಯದ ಜೊತೆಗೆ ಸಾಹಿತ್ಯದಲ್ಲಿ ಇವರಿಗಿದ್ದ ಆಸಕ್ತಿ ಅಲ್ಲಿನ ನೋಟವನ್ನು ವಿಭಿನ್ನವಾಗಿ ದಕ್ಕಿಸಿಕೊಟ್ಟಿತು. ಇಲ್ಲಿನ ಪ್ರವಾಸ ಕಥನದಲ್ಲಿ ಸಂಗ್ರಹಿಸಿದ ಮಾಹಿತಿಯಿಂದ ಭೌಗೋಳಿಕ ಅಂಶವನ್ನು ಹಾಗೂ ಅವರ ಚೆಂದದ ವಿಶ್ಲೇಷಣೆಯಿಂದ ಅವರಿಗೆ ಸಿಕ್ಕ ಅನುಭವವನ್ನು ಒಟ್ಟೊಟ್ಟಾಗಿ ಸವಿಯಬಹುದು. 1989 ರಲ್ಲಿ ಅವರು ಅಂಡಮಾನ್ ಪ್ರವಾಸಕ್ಕೆ ಹೋಗಿ ಬಂದ ನಂತರ ಅದರ ಕುರಿತಾಗಿ ಒಂದೆರಡು ಬಿಡಿ ಲೇಖನಗಳನ್ನು ಬರೆದಿದ್ದರು. ಅದಕ್ಕೆ ಬಹುಮಾನ ಬಂದಾಗ ವೈಯಕ್ತಿಕ ಅನುಭೂತಿಯನ್ನು ಸೇರಿಸಿ ಪುಸ್ತಕವಾಗಿ ಪ್ರಕಟಿಸಿದ್ದಾರೆ.


ಭೂಮಿಯ ಮೇಲಿನ ಸ್ವರ್ಗದ್ವೀಪ ಎನ್ನಿಸಿಕೊಂಡಿರುವ ಅಂಡಮಾನ್ ತನ್ನಲ್ಲಿ ಪ್ರಕೃತಿಯ ಹಲವಾರು ವೈವಿಧ್ಯಮಯ ಚೆಲುವನ್ನು ಅಡಗಿಸಿಕೊಂಡಿದೆ. ಅಲ್ಲಿನ ವೈವಿಧ್ಯಮಯ ಜೀವರಾಶಿಗಳನ್ನು ಸಂಗ್ರಹಿಸಲು ಹೊರಡಲು ಪ್ರಾಂಶುಪಾಲರಿಂದ ಅನುಮತಿ ಸಿಕ್ಕಾಗಿತ್ತು. ಪ್ರಯಾಣದ ಸಿದ್ಧತೆಗಳೂ ನಡೆದಿದ್ದವು. ಅದಕ್ಕೂ ಮುನ್ನ ಅವರು ಕನಸಿನಲ್ಲಿಯೂ ಅಂಡಮಾನ್ ದ್ವೀಪವನ್ನೇ ಕಂಡದ್ದು ಅವರ ಕಾತುರತೆ ಹಾಗೂ ಆಸಕ್ತಿಯನ್ನು ತೋರಿಸಿತು. ಅದನ್ನು ಕಡಲ ಸುಂದರಿ ಅವರನ್ನು ಸ್ವಾಗತಿಸಲು ಬಂದ ರೀತಿಯಲ್ಲಿ, ಕಡಲಲೆಗಳ ನರ್ತನ, ತಿಮಿಂಗಿಲ, ನಕ್ಷತ್ರಮೀನು ಹಾಗೂ ಜಲಚರಗಳು, ಪಚ್ಚೆಯ ಕುರಿತು ಸಹಾ ಹೇಳುವ ಪರಿ ಇಷ್ಟವಾಯಿತು.


ಅದರ ಜೊತೆಗೆ ಅವರು ಅದಕ್ಕೂ ಮುಂಚೆ ಹಡಗು ಅಥವಾ ವಿಮಾನ ಪ್ರಯಾಣ ಮಾಡಿರಲಿಲ್ಲವಾದ್ದರಿಂದ ಆ ಕುರಿತು ಇದ್ದ ಭೀತಿಗಳು ಸಹಾ ವ್ಯಕ್ತವಾಗಿವೆ. 


ಕಾಲೇಜಿನಿಂದ ವಿದ್ಯಾರ್ಥಿಗಳನ್ನು ಅಲ್ಲಿಗೆ ಕರೆದೊಯ್ಯಲು ಮೊದಲು ಚೆನ್ನೈಗೆ ರೈಲಿನ ಪ್ರಯಾಣ ಮಾಡಬೇಕಿತ್ತು. ಅಲ್ಲಿಂದ ಹಡಗಿನಲ್ಲಿ ಅಂಡಮಾನ್ ಕಡೆಗಿನ ಪಯಣ. ಅದಕ್ಕಾಗಿ 'ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ' ಜೊತೆಗೆ ಎರಡು-ಮೂರು ತಿಂಗಳಿನಿಂದಲೂ ಪತ್ರ ವ್ಯವಹಾರ ನಡೆದಿತ್ತು. ವಿಜಯಾ ಮೇಡಂಗಿದ್ದಂತೆ ಪ್ರಾಂಶುಪಾಲರಿಗೂ ಈ ಪ್ರಯಾಣದ ಕುರಿತ ಆತಂಕಗಳಿದ್ದವು. ಹಡಗಿನ ಪ್ರಯಾಣ, ಸಮುದ್ರ, ಬಿರುಗಾಳಿ, ಚಂಡಮಾರುತ, ಬಿರುಗಾಳಿಯ ಭೀತಿ ಇವೆಲ್ಲದರ ಕುರಿತು ಅವರಿಗಿದ್ದ ಭಯವನ್ನು ಹೋಗಲಾಡಿಸಿ ವಿಭಿನ್ನ ಅಧಿಕಾರ, ವಿಶೇಷ ಪ್ರೀತಿಯ ಜೊತೆಗೆ ಪ್ರಯಾಣ ಶುರುವಾಗಿತ್ತು. ರೈಲಿನಲ್ಲಿ ಪ್ರಯಾಣಿಸುವ ಮುಂಚೆ ವಿದ್ಯಾರ್ಥಿಗಳ ತಂದೆ-ತಾಯಿಯರ ಆತಂಕ, ಇವರ ಬಳಿ ವಿದ್ಯಾರ್ಥಿಗಳ ಕ್ಷೇಮಕ್ಕಾಗಿ ವಿಶೇಷವಾಗಿ ಕಾಳಜಿ ತೆಗೆದುಕೊಳ್ಳುವಂತೆಯೂ ಕೋರುತ್ತಿದ್ದರು.


ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಹಾಯಕರ ಜೊತೆಗೆ 'ಸ್ಪೆಸಿಮನ್' ಸಂಗ್ರಹಕ್ಕಾಗಿ ಡಿಸೆಕ್ಷನ್ ಬಾಕ್ಸ್, ಪ್ಲಾಸ್ಟಿಕ್ ಕವರ್ಸ್, ದಾರದ ಉಂಡೆಗಳು, ಪ್ಲಾಸ್ಟಿಕ್ ಮಗ್ ಗಳು, ಫಾರ್ಮಲೀನ್ ದ್ರಾವಕ ಕೂಡಾ ಸೇರಿದ್ದವು. ಸ್ಥಳ ಕಾಯ್ದಿರಿಸಿದ್ದರೂ ಒಂದು ದಿನ ಮುಂಚಿತವಾಗಿ ಹಡಗಿನ ಟಿಕೇಟುಗಳನ್ನು ಅಲ್ಲಿಂದ ಸಂಗ್ರಹಿಸಿಕೊಳ್ಳಬೇಕಿತ್ತು. ನವೆಂಬರ್ 10ಕ್ಕೆ ಬೆಂಗಳೂರಿನಿಂದ ಮದ್ರಾಸಿಗೆ ಹೊರಟು.. ಮರುದಿನ ಬೆಳಿಗ್ಗೆ ಅಲ್ಲಿನ ವೈ.ಎಂ.ಸಿ.ಎ ಹಾಸ್ಟೆಲ್ ನಲ್ಲಿ ಉಳಿದುಕೊಂಡು.. ಅದೇ ದಿನ ಹಡಗಿನ ಟಿಕೇಟುಗಳನ್ನು ಸಂಗ್ರಹಿಸಿಕೊಂಡು.. ಅಲ್ಲಿಂದ ನವೆಂಬರ್ 12ಕ್ಕೆ ಹಡಗಿಗೆ ಹತ್ತಿದ್ದರು.


ಹಡಗು ಹತ್ತುವ ಮುನ್ನ ಹಾಸ್ಟೆಲ್ ನಲ್ಲಿನ ಪೇಚಾಟದ ಪ್ರಸಂಗಗಳು, ಅಲ್ಲಿನ ಊಟ, ಅಲ್ಲಿ ಹಡಗು ಹತ್ತಲು ಅವರಿಗೆ ದೊರೆತ ಸಹಾಯ ಎಲ್ಲದರ ಕುರಿತು ಹೇಳುತ್ತಾ ಹೋಗುವಾಗ ನಾವು ಅವರ ಜೊತೆಗೇ ಪ್ರವಾಸ ಹೊರಟಂತೆ ಭಾಸವಾಯಿತು.


ಅವರು ಪ್ರಯಾಣ ಮಾಡುತ್ತಿದ್ದ ಹಡಗಿನ ಹೆಸರು ನಾಜ್ 2. ಒಂದು ಕಾಲಕ್ಕೆ ಸೊಗಸಾದ ಹಾಗೂ ಆಧುನೀಕರಣಗೊಂಡ ಹಡಗಾಗಿತ್ತು ಅದು. ತೇಲುವ ಹಡಗಿನ ಪುಟ್ಟ ಜಗತ್ತು ಹೇಗಿತ್ತು.. ಹೇಗಿರುತ್ತದೆ ಎನ್ನುವುದನ್ನು ಓದುವಾಗ ಮೊದಲ ಬಾರಿಗೆ ಹಡಗಿನಲ್ಲಿ ಪ್ರಯಾಣ ಮಾಡಿದಂತೆನಿಸಿತು. ವಿದ್ಯಾರ್ಥಿಗಳಿಗೆ ಹಣದ ಹೊರೆಯಾಗದಿರಲೆಂದು ಬಂಕ್ ಸೀಟ್ ಗಳನ್ನೇ ಬುಕ್ ಮಾಡಲಾಗಿದ್ದರೂ.. ಹಡಗಿನ ಎಲ್ಲೆಡೆ ವಿದ್ಯಾರ್ಥಿಗಳು ಹಾಗೂ ಅವರು ಓಡಾಟ ನಡೆಸಿದ್ದು.. ಮೀಸಲಾಗಿದ್ದ ಊಟ, ತಿಂಡಿಗಿಂತ ವಿಭಿನ್ನವಾಗಿ ಪಡೆದ ಊಟ, ತಿಂಡಿ ಇದೆಲ್ಲದರ ಕುರಿತೂ ಹೇಳುತ್ತಾ.. ವಿದ್ಯಾರ್ಥಿಗಳು ಅನುಭವಿಸಿದ ಸೀ ಸಿಕ್ನೆಸ್ ಅನ್ನೂ ಹೇಳುತ್ತಾರೆ.


ಅದಾದ ನಂತರ ಅಬೆರ್ ಡೀನ್ ಬಜಾರ್ ನ ಹತ್ತಿರದಲ್ಲಿದ್ದ ವೈ.ಎಂ.ಸಿ.ಎ ಹಾಸ್ಟೆಲ್ ಅನ್ನು ತಲುಪುತ್ತಾರೆ. ಹಡಗಿನ ಪ್ರಯಾಣದ ನಂತರದ ಅನುಭವವನ್ನು ಹೇಳುತ್ತಲೇ.. ಅಧ್ಯಯನ ಪ್ರವಾಸಕ್ಕಾಗಿ ಬಂದಾಗಿನ ಕರ್ತವ್ಯವನ್ನು ನೆನಪಿಸುತ್ತಾ.. ಕಾಲೇಜಿನ ಪ್ರಯೋಗಾಲಯಕ್ಕೆ ಬೇಕಾದ ಹವಳದ ಬಳ್ಳಿ ವಿಶಿಷ್ಟ ಜಲಚರಗಳನ್ನು ಸಂಗ್ರಹಿಸುವ ಜಾಗದ ಆಯ್ಕೆಯೂ ಆಗುತ್ತದೆ. 


ಉಬ್ಬರವಿಲ್ಲದ ಸಮಯವನ್ನು ನೋಡಿಕೊಂಡು ಸಮುದ್ರತೀರಕ್ಕೆ ಭೇಟಿ ನೀಡಬೇಕಾಗಿತ್ತು. ಮೊದಲು ಹೋದ ಜಾಗ ದಕ್ಷಿಣ ಅಂಡಮಾನ್ ನಿಂದ 30 ಕಿಲೋಮೀಟರ್ ಪಶ್ಚಿಮಕ್ಕಿರುವ ವಂದೂರು ಬೀಚ್. ಆದರೆ, ವಿಘ್ನವಾಗಿ ಕಾಡಿದ್ದು ಮಳೆ. ಆದರೆ, ಉತ್ಸಾಹ ಕುಂದಿಸಿಕೊಳ್ಳದೇ ಮಳೆಯಲ್ಲಿಯೇ ಅಲ್ಲೆಲ್ಲಾ ತಿರುಗಾಡಿ ಬೀಚ್ ನಲ್ಲಿ ಅಂಡಲೆದ ಬಗೆಯನ್ನೂ ವಿವರಿಸುತ್ತಾರೆ.


ಅಂಡಮಾನಿನ ಒಳಗಿರುವ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಒಂದು ದಿನ ಸಾಕಾದರೆ.. ಅದರ ಅಲೌಕಿಕ ಸೌಂದರ್ಯ ಸವಿಯಲು ಅಲ್ಲಿನ ಬೀಚುಗಳನ್ನು ನೋಡಬೇಕು. ಹಾಗೆ ನೋಡಲು ಶುರುವಿಟ್ಟರೆ ಒಂದೊಂದು ಬೀಚ್ ನೋಡಲೇ ಒಂದೊಂದು ದಿನ ಬೇಕಾಗಬಹುದೆನ್ನುತ್ತಾ ಲ್ಯಾನ್ಡ್ ಆಫ್ ಬೀಚ್ ಎಂದೇ ಖ್ಯಾತವಾಗಿರುವ ಅಂಡಮಾನ್ ನ ಹೆಗ್ಗಳಿಕೆಯನ್ನು ಹೇಳುತ್ತಾರೆ.


ಹಾಗೆ ಮರುದಿನ ಆಯ್ಕೆ ಮಾಡಿಕೊಂಡದ್ದು 'ಚಿಡಿಯಾ ಟಾಪು' ಬೀಚ್ ಅನ್ನು. ಇದು ಮರಳಿನ ಬೀಚ್ ಅಲ್ಲ. ಕಲ್ಲಿನ ಬೀಚ್ ಎನ್ನುತ್ತಾ ಅಲ್ಲಿನ ವಿಶೇಷತೆಯನ್ನೂ ಹೇಳುತ್ತಾರೆ. ಇದು ಇಲ್ಲಿನ ಸುಂದರ ಬೀಚ್ ಗಳಲ್ಲಿ ಒಂದು. ಮತ್ತೊಂದು 'ಕಾರ್ಬಿನ್ಸ್ ಕೋವ್ಸ್'. 


ಬೀಚ್ ಗಳ ಸುತ್ತಾಟದ ಜೊತೆಗೆ ಇಲ್ಲಿನ ಮಳೆಯ ಹವಾಮಾನ, ಇಲ್ಲಿನ ವ್ಯಾನಿನ ಪ್ರಯಾಣ, ಭಯ ಹುಟ್ಟಿಸುವ ರಸ್ತೆ, ಹವಾಮಾನ, ಆರ್ಥಿಕ ಪರಿಸ್ಥಿತಿ, ಅಲ್ಲಿನ ಊಟೋಪಚಾರ, ಅಲ್ಲಿನ ಕಾಲೇಜು, ಅಲ್ಲಿನ ಜನರ ಸಾಂಸ್ಕೃತಿಕ ವಾತಾವರಣ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.


ಅಲ್ಲಿನ ಬುಡಕಟ್ಟು ಜನಾಂಗಗಳಾದ ಜಾರವಾ, ಓಂಗೆ, ಸೆಂಟಿನಲಿ, ನಿಕೋಬಾರಿಗಳನ್ನು ಭೇಟಿ ಮಾಡಲು ಅನುಮತಿ ತೆಗೆದುಕೊಳ್ಳಲು ಹೋದದ್ದು, ಅನುಮತಿ ಸಿಗದೇ ಹೋದದ್ದು.. ಆದರೆ, ಅವರ ಸಾಂಸ್ಕೃತಿಕ ಜೀವನವನ್ನು ಅರಿತದ್ದನ್ನು ವಿವರಿಸುತ್ತಾರೆ. 


ಜೊತೆಗೆ, ಮರೈನ್ ಮ್ಯೂಸಿಯಂ, ಕಾಲಾಪಾನಿ/ಕರಿನೀರಿನ ಶಿಕ್ಷೆ ವಿಧಿಸುವ ಜೈಲಿನ ಒಳಚಿತ್ರಣ, ಮನಸ್ಸು ವಿಚಲಿತವಾದ ಸಂಧರ್ಭವನ್ನು ಹೇಳುವಾಗ ಓದುವ ನಮಗೂ ಒಂದುಕ್ಷಣ ಅಂದಿನ ಕಠಿಣ ಪರಿಸ್ಥಿತಿ, ಜೈಲಿನಲ್ಲಿ ಶಿಕ್ಷೆ ಪಡೆದವರ ಕುರಿತು ನೆನಪಿಸಿಕೊಳ್ಳುವಾಗ ಮನಸ್ಸು ವಿಚಲಿತವಾಗುತ್ತದೆ. 


ಅಂಡಮಾನ್ ನಲ್ಲಿ ಇರುವ ದ್ವೀಪಮಾಲೆಗಳಲ್ಲಿ ಕೆಲವು ದ್ವೀಪಗಳಲ್ಲಿ ಮಾತ್ರ ಜನವಸತಿ ಇರುತ್ತದೆ. 'ವೈಪರ್' ದ್ವೀಪಕ್ಕೆ ಹೋಗಿ ಬಂದ ಬಗೆಯನ್ನು ಹೇಳುತ್ತಾರೆ. ಇದು ಪ್ರವಾಸಿಗರನ್ನು ಅಪಾರವಾಗಿ ಸೆಳೆದರೂ.. ಇಲ್ಲಿ ಜನವಸತಿಯಿಲ್ಲ.


ಇದಿಷ್ಟೂ ಒಂದು ಅನುಭವದ ತೂಕವಾದರೆ.. ಅವರು ಅಲ್ಲಿಂದ ಹೊರಟ ಅನುಭವ ಬೇರೆಯೇ ತೆರನಾದದ್ದು. ಭಯಂಕರ ಮಳೆಯ ಪರಿಣಾಮ ಹಡಗು ಹೊರಡುವುದು ದಿನಗಟ್ಟಲೇ ವಿಳಂಬವಾದದ್ದು.. ಕೈಯ್ಯಲ್ಲಿನ ಹಣವೂ ಖರ್ಚಾಗಲು ಬಂದಾಗಿನ ಪರಿಸ್ಥಿತಿ, ಸಂಪರ್ಕ ಸಾಧ್ಯವಾಗದೇ ತೊಳಲಾಡಿದ್ದು... ಹಡಗು ಹೊರಡುವ ಸಂಧರ್ಭದಲ್ಲಿ ಬರುವಾಗಿನಷ್ಟು ಸಿಗದ ಆದ್ಯತೆ ಎಲ್ಲವನ್ನೂ ಕಟ್ಟಿಕೊಟ್ಟಿದ್ದಾರೆ. ಈ ಕುರಿತು ಓದಿಯೇ ತಿಳಿಯಬೇಕು.


ಈ ಕೊನೆಯ ಅನುಭವವನ್ನು 3-4 ವರ್ಷದ ಹಿಂದೆ ಅಲ್ಲಿಗೆ ಪ್ರವಾಸ ಮಾಡಿದ್ದ ನನ್ನ ಅಕ್ಕನ ಬಾಯಿಯಿಂದಲೂ ಕೇಳಿದ್ದೆ. ಅದರ ಸುಸ್ಪಷ್ಟ ಚಿತ್ರಣ ಸಿಕ್ಕಂತಾಗಿತ್ತು.ಇಂದು ನಾವು ಅಂದಿಗಿಂತ ಹೆಚ್ಚಿನ ಟೆಕ್ನಾಲಜಿ ಬಳಸುತ್ತೇವೆ. ಇಂತಹಾ ಸಂಧರ್ಭ ಬರಲಾರದು ಎಂದೂ ಯೋಚಿಸಲಾಗದು. ಮನುಷ್ಯ ಎಷ್ಟೇ ಮುಂದುವರಿದರೂ ಪ್ರಕೃತಿಯ ಮುಂದೆ ತಲೆಬಾಗಬೇಕಾಗಿ ಬರುವುದು ಅನಿವಾರ್ಯವೂ ಹೌದು. 


ಪ್ರಕೃತಿಯ ರಮಣೀಯ ಸೌಂದರ್ಯ ಹಾಗೂ ರೌದ್ರತೆ ಎರಡನ್ನೂ ಬಿಡಿಸಿಟ್ಟ ಪ್ರವಾಸಕಥನ ಇದು. ಹಾಗೆಂದು, ಎಲ್ಲಿಯೂ ನಕಾರಾತ್ಮಕ ಆಲೋಚನೆಗಳು ಕಾಣಲಿಲ್ಲ. ಇಂತಹಾ ಅನುಭವಗಳು ಎಲ್ಲರಿಗೂ ದಕ್ಕಲಾರವು. ಹಾಗೆ, ದಕ್ಕಿಸಿಕೊಂಡದ್ದನ್ನು ಹೇಳಿಕೊಳ್ಳುವವರೂ ಕಡಿಮೆ. ಅಂತಹಾ ವಿಶಿಷ್ಟ ಪ್ರವಾಸಕಥನವೊಂದು ಎಲ್ಲಿಯೂ ಬೋರು ಹೊಡೆಸದಂತೆ.. ಮುಂದೇನಾಯಿತು ಎಂಬ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತಲೇ.. ಕಾವ್ಯಾತ್ಮಕವಾಗಿಯೂ... ಮಾಹಿತಿಪೂರ್ವಕವಾಗಿಯೂ ಕೂಡಿದೆ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ