ಶುಕ್ರವಾರ, ಏಪ್ರಿಲ್ 10, 2026

ಪ್ರಿಯ ಸಖೀ (ಪುಸ್ತಕ ಯಾನ - 108)


ಪುಸ್ತಕದ ಶೀರ್ಷಿಕೆ : ಪ್ರಿಯ ಸಖೀ

ಲೇಖಕರು : ಡಾ. ಸಾಯಿಸುತೆ

ಪ್ರಕಾಶಕರು : ಗಾಯತ್ರಿ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 1996

ಪುಟಗಳು : 192


ಸಾಯಿಸುತೆಯವರ 'ಪ್ರಿಯ ಸಖೀ' ಎಂಬ ಕಾದಂಬರಿಯ ಶೀರ್ಷಿಕೆಯನ್ನು ಮೊದಲು ಕಂಡಾಗ ನನ್ನ ಮನಸ್ಸಿನಲ್ಲಿ ಇದು ಪ್ರೇಮ ಕಥೆಯಿರಬಹುದು ಅಥವಾ ಕೌಟುಂಬಿಕ ಕಥೆಯಲ್ಲಿನ ಪ್ರೇಮದ ಆವರಣವಿರಬಹುದಾ ಎಂಬ ಕುತೂಹಲವಿತ್ತು. ಆದರೆ, ಈ ಕಾದಂಬರಿಯನ್ನು ಓದಿ ಮುಗಿಸುವಷ್ಟರ ಹೊತ್ತಿಗೆ ಈ ಕಾದಂಬರಿ ಎಷ್ಟು ವಿಭಿನ್ನವಾಗಿದೆ ಎಂದು ಅರಿವಾಯಿತು. ಏಕೆಂದರೆ ಇಲ್ಲಿ ಕೇವಲ ಕೌಟುಂಬಿಕ ಕಥನ, ಸಂಬಂಧಗಳ ಕೊಂಡಿಗಳು, ಸರಪಳಿಗಳು ಹಾಗೂ ನಡುವಿನ ಪ್ರೀತಿ -ಬಾಂಧವ್ಯ ಮಾತ್ರವಲ್ಲದೆ ಒಂದು ನಿಗೂಢತೆಯ ಎಳೆಯನ್ನು ಸಹಾ ಈ ಕಾದಂಬರಿ ಹೊಂದಿದೆ. 


ಸಾಮಾನ್ಯವಾಗಿ ನಾವು ದೇವರನ್ನು ನಂಬುತ್ತೇವಾ ಅಥವಾ ದೆವ್ವವನ್ನು ನಂಬುತ್ತೇವಾ..?? ಎಂದರೆ ಕೆಲವರು ಎರಡನ್ನೂ ನಂಬಬಹುದು ಅಥವಾ ಎರಡನ್ನೂ ನಂಬದಿರಬಹುದು. ಇನ್ನೂ ಕೆಲವರು ದೇವರನ್ನು ಹೆಚ್ಚು ನಂಬಿ ದೆವ್ವವನ್ನು ನಿರ್ಲಕ್ಷಿಸಬಹುದು. ಮತ್ತೆ ಕೆಲವರು ದೆವ್ವವನ್ನೇ ಹೆಚ್ಚು ನಂಬಿ ಭೀತಿಯಿಂದ ನರಳಲೂಬಹುದು. ಹಾಗೆಂದು ದೆವ್ವ, ದೇವರದ್ದು ಎಂಬುದು ಮೂಢನಂಬಿಕೆ ಎಂದು ನಾನಂತೂ ಅಂದುಕೊಳ್ಳುವುದಿಲ್ಲ. ಕಾರಣವಿಷ್ಟೇ.. ಅವು ನಮ್ಮ ನಮ್ಮ ಮನಸ್ಸಿನ ನಂಬಿಕೆಗಳು. ಕೆಲವೊಮ್ಮೆ ಅವುಗಳ ಶಕ್ತಿಯ ಅರಿವಾದವರೂ ಇದ್ದಾರೆ. ಈ ನಂಬಿಕೆಗಳ ನಡುವೆ ನಲುಗುತ್ತಿದ್ದ ಒಂದು ರಾಜ ಮನೆತನದ ಕಥೆಯ ವ್ಯಥೆಯೂ ಅಡಗಿದೆ.


ದೇವದಾಸ್ ಚಕ್ರವರ್ತಿ ಕೆಲವು ವರ್ಷಗಳ ನಂತರ ತನ್ನ ಕಂಪನಿ "ಶ್ರೀರಾಮ್ ಗ್ರೂಪ್ ಆಫ್ ಕಂಪೆನಿಸ್'ನ ಕಾರ್ಯನಿಮಿತ್ತ ಶ್ರೀಕೊಪ್ಪಕ್ಕೆ ಹೋಗಿದ್ದಾಗ ಅಲ್ಲಿನ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಳ್ಳಬೇಕಾದ ಸಂದರ್ಭ ಬರುತ್ತದೆ. ಆ ದಿನವೇ ಊರಿನ ಜಾತ್ರೆ. ಇಷ್ಟಪಟ್ಟು ಅದರಲ್ಲಿ ಪಾಲ್ಗೊಂಡ ನಂತರ ಊರಿನ ಹಿರಿಯ ಮುಖಂಡರಾದ ಹಿರಿಯಣ್ಣಯ್ಯನವರ ಮನೆಯಲ್ಲಿ ಊಟ ಮಾಡುವ ಸಂದರ್ಭ ಬರುತ್ತದೆ. ಆಗ ಆತನ ಮನಸ್ಸನ್ನು ಸೆರೆ ಹಿಡಿದ ನಗುಮೊಗದ ಚೆಲುವೆ ಪಾರ್ವತಿಯನ್ನು ಮಾರನೇ ದಿನವೂ ಅಚಾನಕ್ಕಾಗಿ ಕಾಣುತ್ತಾನೆ. 'ಲವ್ ಅಟ್ ಫಸ್ಟ್ ಸೈಟ್' ಎಂಬಂತಹ ಪ್ರೇಮವಾ ಎಂದುಕೊಳ್ಳುವಷ್ಟರಲ್ಲಿಯೇ.. ಇದು ಮೊದಲ ಬಾರಿಗೆ ಆಕರ್ಷಣೆಯಿಂದ ಉಂಟಾದ ಪ್ರೇಮವಲ್ಲ.. ಬದಲಾಗಿ ಜನ್ಮಾಂತರದ ಪ್ರೇಮವೇ ಇದ್ದಿರಬಹುದು ಎಂಬ ಭಾವನೆ ಮೂಡುತ್ತದೆ. ಹಾಗೆ ಉಂಟಾದ ಪ್ರೇಮ ಆತನ ತಂದೆಗೆ ಗೊತ್ತಾದ ತಕ್ಷಣವೇ ಅವರು ಸಂಭ್ರಮದಿಂದ ಅಲ್ಲಿಗೆ ಬಂದು, ತನ್ನ ಆಪ್ತಗೆಳೆಯನಾದ ರಾಗಮೌಳಿಯ ಮಧ್ಯಸ್ಥಿಕೆಯಿಂದ ನಿಶ್ಚಿತಾರ್ಥ ಮುಗಿಸಿಕೊಂಡೇ ಹೊರಡುತ್ತಾರೆ. 


ಹಿರಿಯ್ಯಣ್ಣಯ್ಯನವರದ್ದು ನಾಲ್ಕು ಗಂಡು, ಎರಡು ಹೆಣ್ಣುಮಕ್ಕಳ ಕೂಡು ಕುಟುಂಬ. ಸಂಸ್ಕಾರವಂತ ಕುಟುಂಬದಲ್ಲಿ ಬೆಳೆದ ಪಾರ್ವತಿ ಮನೆಯ ಮೊಮ್ಮಗಳು. ತಾಯಿ ಇಲ್ಲದೇ ಬೆಳೆದಿದ್ದ ಅವಳನ್ನು ಮನೆಯ ಚಿಕ್ಕಮ್ಮಂದಿರು ಹಾಗೂ ಅತ್ತೆಯರೆಲ್ಲರೂ ತಮ್ಮ ಮಗಳೇ ಎಂಬಷ್ಟು ಪ್ರೀತಿ, ಅಕ್ಕರೆಯಿಂದ ಬೆಳೆಸಿರುತ್ತಾರೆ. ಎಲ್ಲರಿಗೂ ದೇವದಾಸ್ ಸಂಬಂಧ ಒಪ್ಪಿಗೆಯಾಗುತ್ತದೆ. ಕಾರಣ.. ಆತನ ರೂಪ, ಶ್ರೀಮಂತಿಕೆ ಎಂದರೆ ತಪ್ಪಾಗುತ್ತದೆ. ಆತನ ಗಂಭೀರ ನಿಲುವು, ಸೌಜನ್ಯಯುತ ಹಾಗೂ ಮೇರೆ ಮೀರದ ನಡವಳಿಕೆ ಎಲ್ಲರಿಗೂ ಇಷ್ಟವಾಗುತ್ತದೆ. 


ದೇವದಾಸನನ್ನು ಮದುವೆಯಾಗಿ ಅರಮನೆಗೆ ಕಾಲಿಟ್ಟ ಪಾರ್ವತಿಗೆ ತನ್ನ ಮನೆಯಲಿದ್ದದ್ದಕ್ಕಿಂತ ಹೆಚ್ಚಿನ ಸಂಪತ್ತಿದ್ದರೂ.. ಅದು ಅಹಂಕಾರವನ್ನು ಮೂಡಿಸದೇ, ಕೀಳಿರಿಮೆಯನ್ನೂ ಮೂಡಿಸುವುದಿಲ್ಲ. ದೇವದಾಸನ ತಂದೆ ಪ್ರತಾಪ್ ದಾಸ್ ಚಕ್ರವರ್ತಿ ಅವರಿಗೆ ಈಗಾಗಲೇ ಎರಡು ಬಾರಿ ಹೃದಯಾಘಾತವಾಗಿದ್ದು, ಅವರನ್ನು ಹುಷಾರಾಗಿ ನೋಡಿಕೊಳ್ಳಬೇಕಾಗಿರುತ್ತದೆ. ಆ ಕೆಲಸವನ್ನು ಮಕ್ಕಳಂತೆ ನಿರ್ವಹಿಸುತ್ತಾಳೆ ಪಾರ್ವತಿ. ಅವರ ಪತ್ನಿ ಸುಲೋಚನಾ ಈಗಾಗಲೇ ನಿಧನರಾಗಿದ್ದು.. ದೇವದಾಸ್ ನಂತರದ ವಿನ್ನಿ ಅಂದರೆ ವಿನುತಾಳನ್ನು ಹಾಗೂ ಪ್ರಶಾಂತನನ್ನು ತಾಯಿಯ ಸ್ಥಾನದಲ್ಲಿ  ನಿಂತು ಪೋಷಿಸುತ್ತಾ ಧೈರ್ಯ ತುಂಬುತ್ತಾ.. ಆತ್ಮವಿಶ್ವಾಸ ಮೂಡಿಸುತ್ತಾಳೆ.


ಪ್ರತಾಪರ ಆತ್ಮೀಯ ಗೆಳೆಯರಾದ, ವಕೀಲರೂ ಆಗಿದ್ದ ರಾಗಮೌಳಿ ಹಾಗೂ ಅವರ ಪತ್ನಿ ವೈದೇಹಿಯವರೂ ಈಕೆಯನ್ನು ತುಂಬು ಮನಸ್ಸಿನಿಂದಲೇ ಮಗಳಂತೆ ಕಾಣುತ್ತಾರೆ. ಮಕ್ಕಳಿಲ್ಲದ ಅವರಿಗೆ ಪ್ರತಾಪರ ಮಕ್ಕಳನ್ನೇ ತಮ್ಮ ಮಕ್ಕಳು ಎಂದುಕೊಳ್ಳುತ್ತಿರುತ್ತಾರೆ. ಆದರೆ, ಪಾರ್ವತಿ ಮಕ್ಕಳಿಲ್ಲದ ಕೊರತೆಯನ್ನು ನೀಗಿಸುತ್ತಾಳೆ.


ಎಲ್ಲರೂ ಮೆಚ್ಚಿದ ಮನೆ-ಮನಗಳ ಒಡತಿಯಾಗಿದ್ದ ಪಾರ್ವತಿ ಗರ್ಭಿಣಿಯೂ ಆಗುತ್ತಾಳೆ. ಆದರೆ, ಎಲ್ಲರಲ್ಲಿಯೂ ಒಂದು ಆತಂಕ. ಮನೆಯಲ್ಲಿ ಏನೋ ನಿಗೂಢತೆ ಇದೆ ಎಂಬ ಸಂದೇಹ ಅವಳಿಗೆ ಬಂದರೂ.. ತಲೆ ಕೆಡಿಸಿಕೊಳ್ಳದೆ ತನ್ನಷ್ಟಕ್ಕೆ ತಾನಿರುತ್ತಾಳೆ. ಆದರೆ, ಆಕೆ ಗರ್ಭಿಣಿಯಾದ ಸಂದರ್ಭದಲ್ಲಿಯೇ ಆಕೆಗೊಂದು ಸತ್ಯ ಸಂಗತಿ ತಿಳಿಯುತ್ತದೆ. ಅದೆಂದರೆ, ತಾನು ದೇವದಾಸನಿಗೆ ಎರಡನೆಯ ಪತ್ನಿ ಎಂಬುದು. ಆಕೆಯ ದೇಹಸ್ಥಿತಿ ಹಾಗೂ ಸೂಕ್ಷ್ಮ ಮನಸ್ಥಿತಿಯಲ್ಲಿದ್ದಾಗ

ಅದೇ ಅರಮನೆಯ ಆವರಣದಲ್ಲಿ ಇದ್ದ ಮತ್ತೊಂದು ಐಶಾರಾಮಿ ಕಟ್ಟಡದ ಕುರಿತಾದ ಭಯದ ವಿಚಾರವೂ ತಿಳಿಯುತ್ತದೆ. ಎಲ್ಲವನ್ನೂ.. ಎಲ್ಲರನ್ನೂ ಬಿಟ್ಟು ಶ್ರೀಕೊಪ್ಪಕ್ಕೆ ಹೊರಡುವ ನಿರ್ಧಾರವನ್ನೂ ಮಾಡುತ್ತಾಳೆ. 


ಆಕೆ, ಶ್ರೀಕೊಪ್ಪಕ್ಕೆ ಹೋದಳೇ..?? ಅಥವಾ ಅಲ್ಲಿಗೆ ಉಳಿದು ತನ್ನ ಸಂದೇಹಕ್ಕೆಲ್ಲಾ ಉತ್ತರ ಹುಡುಕಿಕೊಂಡಳೇ..? ದೇವದಾಸನದ್ದು ನಿಜವಾದ ಪ್ರೀತಿಯೇ..?? ಅಥವಾ ಕೇವಲ ಆಕರ್ಷಣೆ, ಮೋಹವೇ..?? ಅಥವಾ ಅನುಕೂಲಕ್ಕೆ ಮಾಡಿಕೊಂಡ ವಿವಾಹವೇ..?? ದೇವದಾಸ್ ಮೊದಲ ಮದುವೆ ಆಗಿದ್ದ ರಾಖಿ ಯಾರು ಹಾಗೂ ಆ ವಿವಾಹದ ನಂತರ ಏನಾಯಿತು.?? ವಿನ್ನಿ ಹಾಗೂ ಪ್ರಶಾಂತರ ಭಯಕ್ಕೆ ಹಾಗೂ ಪ್ರತಾಪರ ಅನಾರೋಗ್ಯಕ್ಕೆ ಕಾರಣರಾರು..? ಗರ್ಭಿಣಿಯಾಗಿದ್ದ ಆಕೆಯ ಭವಿಷ್ಯವೇನಾಯಿತು..? ಆ ಅರಮನೆಗೆ ವಾರಸುದಾರರು ಸಿಕ್ಕರೇ..? ಪ್ರಿಯ ಸಖಿಯಾಗಿದ್ದ ಅವಳು ಪ್ರಿಯ ಸಖಿಯೇ ಆಗಿ ಉಳಿಯುತ್ತಾಳಾ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಸಾಯಿಸುತೆಯವರ 'ಪ್ರಿಯ ಸಖೀ' ಕಾದಂಬರಿಯನ್ನು. 


ಈ ಕಾದಂಬರಿಯಲ್ಲಿ ನನಗೆ ರಾಖಿ ಪಾತ್ರವನ್ನು ಹೊರತುಪಡಿಸಿ ಉಳಿದೆಲ್ಲರ ಪಾತ್ರಗಳು ಒಂದಲ್ಲಾ ಒಂದು ರೀತಿಯಲ್ಲಿ ಇಷ್ಟವಾದವು. ಅದರಲ್ಲೂ ಪಾರ್ವತಿ ಮತ್ತು ವೈದೇಹಿಯರ ಪಾತ್ರಗಳಂತೂ ಮನಮುಟ್ಟುವಂತಿವೆ.


ಪ್ರತಾಪರು ತಾವು ತೋರುವ ಮಮತೆ, ಅಕ್ಕರೆ, ಕಾಳಜಿಗಳಿಂದ ಇಷ್ಟವಾದರೆ.. ವಿನ್ನಿ ಹಾಗೂ ಪ್ರಶಾಂತರು ತಮ್ಮ ನಿರ್ಮಲವಾದ ಪ್ರೇಮ ಹಾಗೂ ಬಾಂಧವ್ಯಗಳಿಂದ, ಸರಳತೆ, ಸ್ನೇಹಪರತೆಯಿಂದ ಅತ್ತಿಗೆಯನ್ನು ಒಲಿಸಿಕೊಳ್ಳುವ ಮುದ್ದಿನ ನಾದಿನಿ ಹಾಗೂ ಮೈದುನರಾಗಿ ಇಷ್ಟವಾಗುತ್ತಾರೆ. ಮನೆಗೆ ಹೊಸದಾಗಿ ಬಂದ ಹೆಣ್ಣುಮಕ್ಕಳಿಗೆ ಕೊಡುವಂತಹ ಕಂಫರ್ಟ್ ದೊರಕುವುದು ಇಂತಹಾ ಕುಟುಂಬದಲ್ಲಿ ಮಾತ್ರ ಸಾಧ್ಯವೇನೋ.. 


ಜಾನ್, ರಾಣಿ ಹಾಗೂ ಪಾಕ ಎನ್ನುವ ಪುಟ್ಟ ಪಾತ್ರಗಳು ಮನೆಯ ಕೆಲಸಗಾರರು. ಆದರೆ, ಎಂದಿಗೂ ಇವರನ್ನು ಕೆಲಸಗಾರರಂತೆ ನಡೆಸಿಕೊಂಡಿಲ್ಲ. ಅವರೂ ಸಹಾ ಅದು ತಮ್ಮ ಮನೆಗೆ ಏನು ಎಂಬಷ್ಟರ ಮಟ್ಟಿಗೆ ಒಲವು ತೋರುತ್ತಾರೆ.ಜಾನ್ ತಾನು ಕ್ರಿಶ್ಚಿಯನ್ ಆಗಿದ್ದರೂ.. ದೆವ್ವವಿದೆ ಎಂದು ಭಯಪಟ್ಟಾಗ ಪಾರ್ವತಿಯ ಕೈಯಲ್ಲಿ ತನ್ನ 'ಕ್ರಾಸ್' ಇಡುವ ಪ್ರಸಂಗವಂತೂ ಆಕೆಯನ್ನು ಕಾಪಾಡುವ ಅಣ್ಣನಂತೆ ಭಾಸವಾಯಿತು. ಆತ ಕೇವಲ ದೇವದಾಸನಿಗೆ ಮಾತ್ರವಲ್ಲ.. ಇಡೀ ಮನೆಗೆ ಬಾಡಿಗಾರ್ಡ್ ಎಂಬಂತೆ ಭಾಸವಾಗುತ್ತಾನೆ. 


ಒಮ್ಮೆ ರಾಣಿ ಹಾಗೂ ಆಕೆಯ ಚಿಕ್ಕಮ್ಮ ಮಾತನಾಡುತ್ತಿರುವಾಗ ಅಕಸ್ಮಾತ್ತಾಗಿ ಕೇಳಿ ಬಂದ ವಿಚಾರವೊಂದು ಪಾರ್ವತಿಗೆ ತಿಳಿದಾಗ.. ತನಗೇನಾದರೂ ತೊಂದರೆ ಇಲ್ಲ. ಆದರೆ, ಆಕೆಗೆ ಏನೂ ಆಗಬಾರದೆನ್ನುವ ಮುಂದಾಲೋಚನೆಯಿಂದ.. ಮನೆಯವರೊಡನೆ ವಾಸ್ತವವನ್ನು ಹೇಳಿಕೊಳ್ಳುವ ರಾಣಿಯ ಪ್ರಾಮಾಣಿಕತೆ ಇಷ್ಟವಾಗುತ್ತದೆ.


ಇದ್ದರೆ, ಇಂತಹ ಗೆಳೆಯನೇ ಇರಬೇಕು ಎಂಬಂತಹಾ ಪಾತ್ರ ರಾಗಮೌಳಿಯವರದ್ದು. ಅಣ್ಣ-ತಮ್ಮಂದಿರಲ್ಲೂ ಇಷ್ಟು ಬಾಂಧವ್ಯ ಇರುವುದು ಅಸಾಧ್ಯವೇನೋ.. ಸ್ನೇಹಕ್ಕೆ-ಸ್ನೇಹ.. ಪ್ರೀತಿಗೆ-ಪ್ರೀತಿ ಎನ್ನುವ ಮಾತು ಪರಸ್ಪರರಿಗೆ ಸೂಕ್ತವಾಗಿ ಅನ್ವಯಿಸುತ್ತದೆ.


ರಾಖಿಯ ತಂದೆ ಹೆಗ್ಗಡೆಯವರ ಪಾತ್ರ ಅಸಹಾಯಕ ಪಾತ್ರವೆನಿಸಿದರೂ.. ಸ್ನೇಹಕ್ಕೆ ನೀಡುವಂತಹ ಬೆಲೆಯಂತೂ ಬೆಲೆ ಕಟ್ಟಲಾಗದು. ಮಗಳ ಮೇಲಿನ ಪ್ರೇಮಕ್ಕಿಂತಲೂ.. ಗೆಳೆತನಕ್ಕೇ ಹೆಚ್ಚು ಒತ್ತು ನೀಡಿದವರು. 


ಕೆಲವರು ಸತ್ತ ನಂತರವೂ ಬದುಕುತ್ತಾರೆ ಎನ್ನುತ್ತಾರಲ್ಲಾ.. ಅಂತಹ ಪಾತ್ರ ಸುಲೋಚನಾ ಅವರದ್ದು. ಕಾದಂಬರಿಯಲ್ಲಿ ಎಲ್ಲಿಯೂ ಅವರ ನೇರವಾದ ವಿಚಾರ ಪ್ರಸ್ತಾಪವಾಗುವುದಿಲ್ಲ. ಅವರು ಈಗಾಗಲೇ ನಿಧನರಾಗಿದ್ದರೂ.. ಪ್ರತಿಯೊಬ್ಬರ ಮನಸ್ಸಿನಲ್ಲಿಯೂ.. ಅವರು  ತೋರುತ್ತಿದ್ದ ಅಕ್ಕರೆ, ಬಾಂಧವ್ಯ, ಪ್ರೀತಿ ಹಾಗೂ ಯಜಮಾನಿಕೆ, ತಾಯ್ತನ ಎಲ್ಲದರಿಂದಲೂ ಅಚ್ಚಾಗಿ ಉಳಿದವರು. 


ದೇವದಾಸ್ ಮೇಲ್ನೋಟಕ್ಕೆ ಗಂಭೀರವಾಗಿ ಕಂಡರೂ ಹೂ ಮನಸ್ಸಿನವನೇ.. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ನೋವು ನುಂಗಿ, ಜವಾಬ್ದಾರಿ ಹೊತ್ತು ತಾಳ್ಮೆಯಿಂದ ನಡೆಯುವುದು ಸುಲಭದ ಮಾತಲ್ಲ. ಎಲ್ಲಿಯೂ ಮಿತಿ ಮೀರದೆ ಮನೆಮಗನಂತೆಯೇ ಭಾಸವಾಗುವವ.


ಇನ್ನೂ ಓದುತ್ತಿದ್ದಾಗಲೇ ವಿವಾಹವಾದರೂ.. ವಿವಾಹದ ನಂತರ ಆಕೆ ತೋರುವ ಪ್ರಬುದ್ಧತೆ, ನಿರ್ಧಾರಗಳಲ್ಲಿ ಕಾಣುವ ವೈಶಿಷ್ಟ್ಯತೆ ಹಾಗೂ ಮನೆಯವರಿಗೆಲ್ಲ ತೋರಿಸುವ ಆದರೆ ಅಕ್ಕರೆ, ತಾಯ್ತತನ ಇವೆಲ್ಲವೂ ಆಕೆಯ ಘನತೆಯನ್ನು ಎತ್ತಿ ತೋರುತ್ತವೆ. ಮನಮೆಚ್ಚಿದ ಮಡದಿಯಾಗಿ ಪ್ರೀತಿಯ ಅತ್ತಿಗೆ, ಗೆಳತಿ, ಸುಲೋಚನಾರವರು ಆಶಿಸಿದಂತಹಾ ಸೊಸೆಯಾಗಿ ಬಂದ ಪ್ರೇಮಮಯಿ ಪಾರ್ವತಿ. ತಾಯಿ ಇಲ್ಲದ ಮಕ್ಕಳು ಬೆಳೆಯುವ ರೀತಿಗೂ.. ಪಾರ್ವತಿ ಬೆಳೆದಿದ್ದ ರೀತಿಗೂ ವಿಭಿನ್ನತೆ ಗೋಚರವಾಗುತ್ತದೆ. ಆಕೆಯಲ್ಲಿ ಕಂಡು ಬರುವ ಸಂಸ್ಕಾರ ಹಾಗೂ ಪ್ರಬುದ್ಧತೆ.. ಇಡೀ ಕುಟುಂಬದವರು ಅವಳಿಗೆ ತೋರಿದ್ಧ ಅಕ್ಕರೆಯ ಒಟ್ಟು ಮೊತ್ತವೇ ಇದ್ದಿರಬಹುದೆನ್ನಿಸುತ್ತದೆ. ಒಟ್ಟಿನಲ್ಲಿ.. ಎಲ್ಲರೂ ಆಶಿಸುವಂತಹಾ ಮಗಳು, ಸೊಸೆಯ ರೂಪವಾಗಿ ನಿಂತ ಪಾರ್ವತಿ.. ನಿಜ ವಿಚಾರ ತಿಳಿದ ನಂತರ ಗರ್ಭಿಣಿಯಾಗಿದ್ದರೂ ಆ ಸಮಯದಲ್ಲಿನ ಅವಳ ಸಂಯಮ, ಗಟ್ಟಿತನ,ಧೈರ್ಯ ಎಲ್ಲವೂ ಹೆಣ್ಣು ಮಕ್ಕಳು ರೂಢಿಸಿಕೊಳ್ಳಬೇಕಾದದ್ದೆನಿಸುತ್ತದೆ.


 ವೈದೇಹಿಯವರ ಪಾತ್ರ ನನ್ನನ್ನು ಬಹಳವೇ ಸೆಳೆದಂತಹಾ ಪಾತ್ರ. ತಾನು ವಕೀಲೆಯಾಗಿದ್ದರೂ ಕೆಲಸದ ಕುರಿತ ಬದ್ಧತೆ, ಕರ್ತವ್ಯನಿಷ್ಠೆಗಳಷ್ಟೇ ಕಠಿಣವಾಗಿ ಕಂಡರೂ.. ರಾಗಮೌಳಿಯವರಿಗೆ ತಕ್ಕ ಜೋಡಿ. ತಮಗೆ ಮಕ್ಕಳಿಲ್ಲದ ವಿಚಾರವನ್ನು ಮರೆಯುವುದಕ್ಕೆ ಕೆಲಸದಲ್ಲಿ ಬ್ಯುಸಿಯಾದರೂ.. ಪ್ರತಾಪರ ಮಕ್ಕಳನ್ನೇ ತಮ್ಮ ಮಕ್ಕಳೆಂದುಕೊಳ್ಳೋಣ ಎನ್ನುವ ಹೃದಯವಿಶಾಲತೆ ಹಾಗೂ ಆಕೆ ನಡೆದುಕೊಳ್ಳುವ ಪ್ರತಿ ನಡೆಯೂ ಅದನ್ನು ಎತ್ತಿ ತೋರಿಸುತ್ತದೆ. ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕಾದ ನಿರ್ಧಾರ, ಎಚ್ಚರಿಕೆ, ಇವೆಲ್ಲವೂ ವೃತ್ತಿಗೆ ಹಾಗೂ ವೃತ್ತಿಯ ಹೊರಗೆ ಹೇಗಿರಬೇಕೆನ್ನುವ ಫರ್ಫೆಕ್ಟ್ ಉದಾಹರಣೆ. ಗಂಡನ ಜೊತೆಗೆ ಸರಸ, ಹಾಸ್ಯ, ಲವಲವಿಕೆ, ನವಿರಾದ ಛೇಡಿಸುವಿಕೆ, ಮಕ್ಕಳೊಂದಿಗೆ ಬೆರೆಯುವ ಪರಿ.. ಆಕೆಯ ಜೀವಂತಿಕೆಯನ್ನು ತೋರಿಸುತ್ತದೆ. ಪ್ರತಾಪರ ಜೊತೆಗೆ ಅಷ್ಟು ಸಲುಗೆಯಿಂದಿದ್ದರೂ.. ಆಕೆ ತೋರುವ ಗೌರವ ಅನುಕರಣೀಯ.  ವಯಸ್ಸು ಹಾಗೂ ವ್ಯಕ್ತಿತ್ವ ಎರಡರಿಂದಲೂ ಎತ್ತರವಾಗಿ.. ಗಂಭೀರತೆ, ಸರಳತೆ, ಲವಲವಿಕೆ, ಆತ್ಮೀಯತೆ ಎಲ್ಲವನ್ನೂ ಹದವಾಗಿ ಬೆರೆಸಿಟ್ಟಂತಹಾ ಪ್ರಬುದ್ಧವಾದ ಪಾತ್ರದಿಂದ ನನಗೆ ಬಹಳ ಇಷ್ಟವಾದರು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ