ಶುಕ್ರವಾರ, ಏಪ್ರಿಲ್ 10, 2026

ಅವಳಿಗೂ ಗೊತ್ತು (ಅವಳ ಕವಿತೆಗಳು - 13)

 

ಅವಳಿಗೂ ಗೊತ್ತು

ತಾನೆಷ್ಟು ಬುದ್ಧಿವಂತೆಯೋ

ಹಾಗೆ ಕೆಲ ವಿಚಾರಗಳಲ್ಲಿ ದಡ್ಡಿಯೂ ಎಂದು

ಬುದ್ಧಿವಂತೆ ಎಂದು ಬಿಂಬಿಸಿಕೊಳ್ಳುವುದಿಲ್ಲ

ದಡ್ಡಿ ಎಂದು ಹಳಿದುಕೊಳ್ಳುವುದಿಲ್ಲ

ಸುಮ್ಮನೆ ಜೀವನ ಪಾಠವನ್ನು ಕಲಿಯುತ್ತಾ ಹೋಗುತ್ತಾಳೆ


ಅವಳಿಗೂ ಗೊತ್ತು

ತಾನೆಷ್ಟು ಧೈರ್ಯವಂತೆಯೋ

ಅದಕ್ಕಿಂತಲೂ ಹೆಚ್ಚು ಅಧೈರ್ಯವಂತೆ ಎಂದು 

ಧೈರ್ಯದ ಮುಖವಾಡ ತೊಡುವುದಿಲ್ಲ

ಅಧೈರ್ಯವೆಂದು ಹೊರಗೆ ತೋರಿಸುವುದಿಲ್ಲ

ಸುಮ್ಮನೆ ಎದುರಿಸುತ್ತಾ ಹೋಗುತ್ತಾಳೆ


ಅವಳಿಗೂ ಗೊತ್ತು

ತಾನೆಷ್ಟು ಮೃದು ಹೃದಯಿಯೋ

ಅದಕ್ಕಿಂತಲೂ ಕಲ್ಲು ಮನಸ್ಸಿನವಳೆಂದು

ಮೃದುವಾದಾಗ ಕೆಚ್ಚೆದೆಯಾಗಲೂ ಗೊತ್ತು

ಕಲ್ಲು ಹೃದಯಿಯಾದಾಗ ಕರಗಲೂ ಗೊತ್ತು

ಯಾವಾಗ ಹೇಗಿರಬೇಕೆಂದು ಗೊತ್ತು


ಅವಳಿಗೂ ಗೊತ್ತು

ತಾನೇನೂ ಸುಂದರಿಯಲ್ಲ

ಹಾಗೆಯೇ ಕುರೂಪಿಯೂ ಅಲ್ಲವೆಂದು

ಸುಂದರತೆ ತುಟಿಯಂಚಿನ ಮುಗುಳ್ನಗೆಯಲ್ಲಿ

ಹಾಗೂ ಕುರೂಪ ನೋಡುವವರ ಕಣ್ಣಲ್ಲಿ ಎಂದು

ಸೌಂದರ್ಯದಿಂದ ಅಳೆದುಕೊಳ್ಳಲಾರಳು


ಅವಳಿಗೂ ಗೊತ್ತು

ಅವಳಿಗೇನು ಗೊತ್ತಿದೆ

ಹಾಗೂ ಅವಳಿಗೇನು ಗೊತ್ತಿಲ್ಲವೆಂದು

ತನ್ನ ಅರಿವನ್ನು ಅರಿತಿರುವವಳಿಗೆ

ತನ್ನನ್ನು ತಾನು ಬಿಂಬಿಸಿಕೊಳ್ಳಲೂ ಗೊತ್ತು

ಮರೆಯಾಗಿಸಿಕೊಳ್ಳಲೂ ಗೊತ್ತು


ಅವಳಿಗೂ ಗೊತ್ತು

ಅವಳ ಆಲೋಚನೆಗಳಿಗೂ ಹಾಗೂ

ಇತರರ ಆಲೋಚನೆಗೂ ಇರುವ ವ್ಯತ್ಯಾಸ

ಅವಳಿಗೆ ಬದಲಾಗುವುದೂ ಗೊತ್ತು

ಬದಲಾಯಿಸುವುದೂ ಗೊತ್ತು

ಬದಲಾವಣೆ ಜಗದ ನಿಯಮವೆಂದೂ ಗೊತ್ತು


ಅವಳಿಗೂ ಗೊತ್ತು

ಮತ್ತೊಬ್ಬರು ತಿದ್ದುವ ಮೊದಲೇ

ತನ್ನನ್ನು ತಾನು ತಿದ್ದಿಕೊಳ್ಳುವ ಬಗೆ

ಮತ್ತೊಬ್ಬರು ಬೆರಳು ತೋರದಂತೆ ಬದುಕಲು

ಮತ್ತೊಬ್ಬರಿಂದ ಬದಲಾಗಬೇಕಿಲ್ಲ

ಅವಳ ತಿಳುವಳಿಕೆಯಿಂದಲೇ ಬದಲಾಗುತ್ತಾಳೆ


ಅವಳಿಗೂ ಗೊತ್ತು

ಅವಳು ಅವಳಾಗುವ ಬಗೆ

ಅವಳ ಬಲಾಬಲಗಳು,  ಬುದ್ಧಿವಂತಿಕೆ

ಅವಳ ಮನಸ್ಸನ್ನು ಬಲಗೊಳಿಸುವ ಬಗೆ

ಮತ್ತೊಬ್ಬರಿಂತ ಅವಳನ್ನು ಚೆನ್ನಾಗಿ ಅರಿತದ್ದು

ಅವಳೇ.. ಇದು ಅವಳಿಗೂ ಗೊತ್ತು


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ