ಶುಕ್ರವಾರ, ಏಪ್ರಿಲ್ 10, 2026

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ (ಅವಳ ಕವಿತೆಗಳು - 14)


 ದ್ವೇಷಿಸಿದವರನ್ನು ತನ್ನ ಅಭಿಮಾನಿಸಿಕೊಳ್ಳುವ

ತೆಗಳಿದವರಿಂದಲೇ ತಾನು ಹೊಗಳಿಸಿಕೊಳ್ಳುವ

ತಿರಸ್ಕರಿಸಿದವರಿಂದಲೇ ಪುರಸ್ಕರಿಸಿಕೊಳ್ಳುವ

ಆ ಕಾಲ ಅವಳಿಗೂ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಅವಳಿಗೆ ಮೋಸ ಮಾಡಿದವರೇ ಮಂಡಿಯೂರುವ

ಅವಳಿಂದ ಕಿತ್ತುಕೊಂಡವರೇ ಅವಳ ಬಳಿ ಭಿಕ್ಷೆ ಬೇಡುವ

ಅವಳಿಗೆ ನೋವು ನೀಡಿದವರಿಗೆ ನೋಯಿಸುವ

ಆ ಕಾಲ ಅವಳಿಗೂ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಆದರೆ, ಆ ಕಾಲ ಬಂದಾಗ

ಅವಳಂದುಕೊಂಡಷ್ಟು ಕಠಿಣವಾಗಬಲ್ಲಳೇ

ಬಹುಶಃ, ಅವಳು ಮಾಗಿರುತ್ತಾಳೆ

ಅವರನ್ನು ನಿರ್ಲಕ್ಷ್ಯ ಮಾಡುವ ಕಾಲ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಮತ್ತಷ್ಟು ದಿಟ್ಟವಾಗಿ ಬೆಳೆದಿರುವಾಗ 

ಆಲೋಚನೆಗಳು ಮಗದಷ್ಟು ಪ್ರೌಢವಾಗಿರುವಾಗ

ಅವರಂತೆ ತಾನು ಮಾಡಿಬಿಟ್ಟರೆ

ವ್ಯತ್ಯಾಸವಿಲ್ಲ ಎಂದು ಅರಿಯುವ ಕಾಲ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಅಥವಾ, ನೋವುಗಳಿಂದ ಮನಸ್ಸು ಕಲ್ಲಾಗಿ

ಕಲ್ಲಿನೆದೆಗೆ ಏನೇನೂ ಅಂಟದೆ

ಮತ್ತಷ್ಟು ಕಲ್ಲಾಗಿ ಅವರನ್ನು ಶಿಕ್ಷಿಸಬಹುದು

ಆ ಕಾಲವೂ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಚುಚ್ಚಿದವರನ್ನು ಹಂಗಿಸುತ್ತಲೇ ಸಲಹುವ

ಅವರಿಗಾಗಿ ಉಳಿಸಿಕೊಂಡ ವಿಷವ ಕಕ್ಕುವ

ಕಠೋರವಾಗಿ ತನ್ನಿಂದ ನಿರ್ದಾಕ್ಷಿಣ್ಯವಾಗಿ ದೂರವಿಡುವ

ಆ ಕಾಲವೂ ಬರಲಿದೆ

ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ


ಕಾಲ ಅವರಿವರಿಗಾಗಿ ಕಾಯುತ್ತಿಲ್ಲ

ಓಡುತ್ತಿರುವ ಕಾಲದೊಂದಿಗೆ ಸಾಗುತ್ತಾ

ಅವಳು ಮಾಗಬಹುದು ಅಥವಾ ಮಾಗದಿರಬಹುದು

ಬದಲಾಗಬಹುದು ಅಥವಾ ಆಗದಿರಲೂಬಹುದು

ಆದರೂ, ಅವಳು ಅವಳ ಕಾಲಕ್ಕಾಗಿ ಕಾಯುತ್ತಿದ್ದಾಳೆ

ಕಾಯುತ್ತಾಳೆ.. ಕಾಯುತ್ತಲೇ ಇರುತ್ತಾಳೆ


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ