ಅವಳು ಮರಳಿದ್ದಾಳೆ
ಅರ್ಧಕ್ಕೆ ನಿಲ್ಲಿಸಿದ್ದನ್ನು
ಪೂರ್ಣಗೊಳಿಸಲೇ ಬೇಕೆಂದು
ಮತ್ತೆಂದೂ ಅರ್ಧಕ್ಕೆ
ಕೈ ಬಿಟ್ಟು ಹೋಗಬಾರದೆಂದು
ಅವಳು ಮರಳಿದ್ದಾಳೆ
ಯಾರಿಗೋ ಹೆದರಿ ಸುಮ್ಮನಿದ್ದ
ತನ್ನ ಮೂರ್ಖತನವನ್ನು ಹಳಿದುಕೊಂಡು
ಮತ್ತೆಂದೂ ಯಾರೂ ತನ್ನಂತೆ
ಮೂರ್ಖತನ ಮಾಡದಿರಲೆಂದು
ಅವಳು ಮರಳಿದ್ದಾಳೆ
ಗೆಲುವನ್ನು ಪಡೆಯಲೇಬೇಕೆಂದಲ್ಲ
ಸುಮ್ಮನೆ ಸ್ಪರ್ಧಿಸಲು
ತನ್ನನ್ನು ತಾನು ಪರೀಕ್ಷಿಸಿಕೊಳ್ಳಲು
ತನ್ನನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು
ಅವಳು ಮರಳಿದ್ದಾಳೆ
ಘಾಸಿಗೊಳಿದವರನ್ನೆಲ್ಲಾ ಹಣಿಯಲು
ತನ್ನ ಗಟ್ಟಿ ನಡೆಯಿಂದ
ಅನಿರೀಕ್ಷಿತ ಪೆಟ್ಟು ನೀಡುತ್ತಾ
ಅವರನ್ನೇ ಘಾಸಿಗೊಳಿಸಲು
ಅವಳು ಮರಳಿದ್ದಾಳೆ
ತನ್ನ ಮೇಲೆ ಭರವಸೆ ಇಟ್ಟವರಿಗಾಗಿ
ಪ್ರೀತಿಯಿಂದ ಹಾರೈಸುವವರಿಗಾಗಿ
ತನಗಾಗಿಯೇ ಕಾಯುತ್ತಿರುವವರಿಗಾಗಿ
ಕೇವಲ ತನಗಾಗಿ ಮತ್ತು ತನ್ನವರಿಗಾಗಿ
ಅವಳು ಮರಳಿದ್ದಾಳೆ
ಮತ್ತಷ್ಟು ಅನುಭವ ಹೊತ್ತು
ಮಗದಷ್ಟು ಪ್ರೀತಿ ತುಂಬಿಕೊಂಡು
ಮತ್ತೊಂದಿಷ್ಟು ಕನಸು ಹೊತ್ತು
ಹಲವಾರು ಆಸೆಗಳನ್ನೊತ್ತು
ಅವಳು ಮರಳಿದ್ದಾಳೆ
ಇನ್ನಷ್ಟು ಗಟ್ಟಿಗೊಂಡು
ಅಷ್ಟೇ ಧೈರ್ಯದಿಂದ
ಮುಂದಿಟ್ಟ ಹೆಜ್ಜೆ ಹಿಂಪಡೆಯದಂತೆ
ಇಟ್ಟ ಹೆಜ್ಜೆಯನ್ನು ಅಜರಾಮರವಾಗಿಸಲು
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ