ಪುಸ್ತಕದ ಶೀರ್ಷಿಕೆ : ದರಗುಟ್ಟಿ ಮಳೆ ಸುರಿದು
ಲೇಖಕರು : ಮಮತಾಪ್ರಭು
ಪ್ರಕಾಶಕರು : ಹಾಡ್ಲಹಳ್ಳಿ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2023
ಪುಟಗಳು : 136
ಬೆಲೆ : 140 ರೂ.
ಈ ಅಪರೂಪದ ಪುಸ್ತಕವನ್ನು ನಾನು ಕಾದಂಬರಿಯನ್ನಲೇ.. ಪ್ರೇಮದ ನೀಳ್ಗತೆಯೆನ್ನಲೇ.. ಪತ್ರ ಲೇಖನದ ಪತ್ರಗುಚ್ಛಗಳು ಎನ್ನಲೇ ಅಥವಾ ಪ್ರೀತಿಯಿಂದ ಬರೆದಿರುವ ಜೀವನದ ತುಣುಕುಗಳು ಎಂದೆನ್ನಲೇ.. ಇಲ್ಲಿ ಏನುಂಟು ಎಂದು ನೋಡುವುದಾದರೆ.. ಎಲ್ಲವೂ ಇದೆ. ಏನಿಲ್ಲ ಎನ್ನುವುದಾದರೆ.. ಅದಕ್ಕೆ ಉತ್ತರ ಹುಡುಕುವುದು ಕಷ್ಟ. ಈ ಪುಸ್ತಕವನ್ನು ನಾನು ಯಾಕೆ ಇಷ್ಟು ಲೇಟಾಗಿ ಇಷ್ಟು ದಿನಗಳ ನಂತರ ಓದಿದೆ ಎಂಬ ಭಾವ ಮೂಡಿತು. ಬಹಳ ಮುಂಚೆಯೇ ಓದಬೇಕಿದ್ದ.. ಹಾಗೂ ಮತ್ತೆ ಮತ್ತೆ ಓದುವಂತಹಾ ಪುಸ್ತಕ ಇದು ಎನ್ನುವುದು ನನ್ನ ಅಭಿಪ್ರಾಯ. 2024ರ ನನ್ನ ಇಷ್ಟದ ಕೃತಿಗಳ ಪಟ್ಟಿಯಲ್ಲಿ ಖಂಡಿತವಾಗಿಯೂ ಇರುವ ಇದು ರೈತನ ಪ್ರೇಮಕಥೆ ಮಾತ್ರವಲ್ಲ.. ಭೂಮಿಯ ಕುರಿತಾದ ಅಪ್ಪಟ ಜೀವನಪ್ರೀತಿಯ ಕಥೆ.
ಪ್ರೇಮ ಕಥೆ ಎಂದಾಗ ನಮ್ಮೆಲ್ಲರಿಗೂ ಅದು ಮಾಮೂಲಿಯಾದ ಪ್ರೀತಿಯ ಕಥೆ ಇರಬಹುದು ಅಥವಾ ಯುವ ಪ್ರೇಮ ಕಥೆ ಇರಬಹುದು ಎಂಬ ಅನಿಸಿಕೆ ಉಂಟಾಗಬಹುದು. ಆದರೆ, ಇಲ್ಲಿರುವ ಪ್ರೇಮವನ್ನು ಕಂಡು ಹೀಗೂ ಇರಬಹುದಾ..?! ಎಂದೆನಿಸುವುದು ಸುಳ್ಳಲ್ಲ. "ಮ..." ಹಾಗೂ "ವೀರ್" ಇಬ್ಬರ ಭಾವುಕ ಪತ್ರಗಳು ಅದೆಷ್ಟು ಆಪ್ತವಾಗಿ ಆವರಿಸಿಕೊಂಡವು ಎಂದರೆ ಹಸಿರಿನ ನಡುವೆ ಕುಳಿತಾಗ ತಂಗಾಳಿ ಸೋಕಿ ಅದರ ತನ್ಮಯತೆಯಲ್ಲಿ ನಾವು ಕಳೆದು ಹೋದಂತೆ.. ಪರಿಸರದ ಮಡಿಲಲ್ಲೇ ಕುಳಿತು ಈ ಪುಸ್ತಕವನ್ನು ಓದಿದರಂತೂ ಅದು ಇನ್ನಷ್ಟು ಆಪ್ತವಾಗುವುದರಲ್ಲಿ ಸಂಶಯವೇ ಇಲ್ಲ.
ಗೂಗಲ್ ನಲ್ಲಿ ರೈತನ ಚಿತ್ರವನ್ನು ಹುಡುಕಾಡಿದರೆ ಪಂಚೆ ಬನಿಯನ್ನು ಹಾಕಿಕೊಂಡು ಮೋಡ ನೋಡುತ್ತಿರುವ ರೈತನೇ ಕಾಣಿಸುತ್ತಾನೆ. ಆದರೆ, ಈ ಕಾದಂಬರಿಯಲ್ಲಿ ರೈತನೆಂಬುವವನ ಪರಿಕಲ್ಪನೆಗಳು ಆದೆಷ್ಟು ಅದ್ಭುತ. ಈ ಪರಿಕಲ್ಪನೆಗಳು ನನಸಾದರೆ ರೈತ ಅನ್ನದಾತನೂ ಹೌದು. ಭೂಮಿಯನ್ನು ಉಳಿಸುವುದರಲ್ಲಿ ಆತ ಜೀವದಾತನೂ ಹೌದು.
ರೈತರ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡ ಕಾದಂಬರಿಗಳನ್ನು ನಾನು ಓದಿದ್ದು ತೀರಾ ಕಡಿಮೆ. ರೈತರ ಆತ್ಮಹತ್ಯೆಯ ಕುರಿತಾದ ಪ್ರಕರಣಗಳನ್ನೇ ಹೆಚ್ಚು ಕೇಳುತ್ತಿರುವ ಸಂಧರ್ಭಗಳು ಹಾಗೂ ಅವರ ಆ ಪರಿಸ್ಥಿತಿಗೆ ಕಾರಣರಾರು ಎಂದು ಹುಡುಕುವ ಕಾರ್ಯವೂ ಆಗಿದೆ.
ರೈತರಿಗೆ ಹೆಣ್ಣು ಕೊಡಲು ರೈತರೇ ಸಿದ್ದರಿಲ್ಲ. ಇನ್ನು ಹೆಣ್ಣು ಮಕ್ಕಳಂತೂ ಪಟ್ಟಣದ ಆಸೆಗೆ ಅಥವಾ ಬೇರಾವುದೋ ಕಾರಣಕ್ಕೆ ರೈತನನ್ನು ನಿರಾಕರಿಸುತ್ತಿದ್ದಾರೆ. ಆದರೆ, ಇಲ್ಲಿ ಎಂ.ಬಿ.ಎ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ, ದೊಡ್ಡ ಕಂಪನಿಗಳಲ್ಲಿ ಅತ್ಯುತ್ತಮ ವೇತನ ಸಿಗುವ ಉದ್ಯೋಗದ ಅವಕಾಶಗಳಿದ್ದರೂ.. ಅವೆಲ್ಲವನ್ನು ನಿರಾಕರಿಸಿ ಕೃಷಿಯನ್ನೇ ಆಯ್ಕೆ ಮಾಡಿಕೊಂಡ ಯುವಕ ವೀರ್ ಹಾಗೂ ರೈತನಾದ ಆತನನ್ನೇ ತಾನು ಮದುವೆಯಾಗುತ್ತೇನೆ ಎಂದು ಹಠ ಹಿಡಿದು ಕುಳಿತಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ರೈತನ ಮಗಳು ಮ... ಕಾಣುತ್ತಾಳೆ.
ಮ... ಎಂದರೆ ವೀರ್ ಪಾಲಿಗೆ ಮಂಕಮ್ಮ, ಮಂಕುದಿಣ್ಣೆ, ಮಂಗಮ್ಮನಾಗಿ ರೇಗಿಸುವಾಗ ಕಂಡರೂ.. ಆಕೆ ಆತನ ಪಾಲಿನ ಮಮತೆಯ ಸಂಕೇತ. ಮಳೆ, ಮಣ್ಣು, ಮರಗಳ ಸಂಕೇತ. ವಾಸ್ತವವಾಗಿ ವೀರ್ ಜೊತೆಯಾಗಲು ತುದಿಗಾಲಿನಲ್ಲಿ ಕಾಯುತ್ತಿರುವ ಅವಳು ಭಾವನಾತ್ಮಕವಾದ ಹೆಣ್ಣು. ಅವಳು ಮದುವೆಯಾಗದೆ, ಮನೆಯಲ್ಲಿಯೇ ಇದ್ದರೂ.. ರೈತರ ಮನೆಗೆ ಮಾತ್ರ ಕೊಡುವುದಿಲ್ಲ ಎನ್ನುವ ಅಪ್ಪನ ಮಾತಿನಲ್ಲಿ ರೈತರ ಹೀನಾಯ ಬದುಕಿನ ಬಗೆಗೆ ಆವೇಶವಿದೆ. ಯಾವುದಕ್ಕೂ ಜೊತೆಗೆ ಆತನನ್ನೇ ಮದುವೆಯಾಗುತ್ತೇನೆ ಎಂದು ಕುಳಿತಿರುವ ಮ... ಹಾಗೂ ಆಕೆಯ ತಂದೆ-ತಾಯಿಯನ್ನು ಒಪ್ಪಿಸಿಯೇ ಆಕೆಯನ್ನು ಮದುವೆಯಾಗುತ್ತೇನೆ ಎಂದುಕೊಂಡ ವೀರ್. ಇಬ್ಬರೂ ಯಾವುದೇ ಅಡ್ಡದಾರಿಯನ್ನು ಹಿಡಿಯದಿರುವುದು, ಪ್ರೀತಿಸುವುದು ಮಾತ್ರವಲ್ಲ ಪ್ರೀತಿಯನ್ನು ಸೇರುವುದಕ್ಕೆ ಅದೆಷ್ಟು ಅಗ್ನಿಪರೀಕ್ಷೆಗಳನ್ನು ಎದುರಿಸುತ್ತಾ ಕಾಯಬೇಕು ಎನ್ನುವುದನ್ನು ತಮ್ಮ ಪ್ರೀತಿಯ ಮೂಲಕ, ಹಿರಿಯರಿಗೆ ತೋರುವ ಗೌರವದ ಮೂಲಕ ಯುವಜನತೆಗೆ ಸಂದೇಶ ನೀಡಿದ್ದಾರೆ.
ಮ... ಳ ಅಪ್ಪನಿಗೆ ಆಕೆಯ ನಿರ್ಧಾರವನ್ನು ವಿರೋಧಿಸಲಿ ಅದೆಷ್ಟು ಜನರ ಬೆಂಬಲ ಸಿಗುತ್ತದೆ. ಹಾಗೆಂದು ವೀರ್ ಕೆಟ್ಟವನು ಎಂದಲ್ಲ ಬದಲಾಗಿ ಆತ ರೈತ ಎಂಬುದು. ಮ... ನ ಚಿಕ್ಕಪ್ಪನ ತೋಟದ ಅಡಿಕೆ ಫಸಲು ಇನ್ನೇನು ಕೈಗೆ ಬರಬೇಕು ಎನ್ನುವ ಅದೇ ವರ್ಷ ಬರ ಬಂದು ಇಡೀ ತೋಟ ಒಣಗಿ ಹೋಗಿ, ರಾಗಿ-ಜೋಳ ಮಾಡಿಕೊಂಡು ಜೀವನ ಮಾಡುತ್ತಿರುವ ಪ್ರಕರಣದ ಉದಾಹರಣೆ ಸಿಗುತ್ತದೆ. ಹೊಸದುರ್ಗ ತಾಲೂಕಿನ ಗೊಂಬೆ ಹೊಸಳ್ಳಿ ಎಂಬ ಊರಿನಲ್ಲಿ ಬೆಳೆದಿದ್ದ ಜೋಳದ ತೆನೆಗಳನ್ನು ಜಿಂಕೆ ಹಿಂಡುಹಿಂಡಾಗಿ ಬಂದು ತಿಂದದ್ದು.. ಮುಳ್ಳುಹಂದಿಗಳು ಗಿಡದ ಬುಡವನ್ನು ಕಡಿದು, ಬಗ್ಗಿದಾಗ ತೆನೆ ಸಮೇತ ತಿಂದದ್ದು.. ಹೀಗೆ ಬಹಳಷ್ಟು ಉದಾಹರಣೆಗಳು ರೈತನ ಮೇಲೆ ಪ್ರಕೃತಿ ಮಾಡುವ ಪರಿಣಾಮವನ್ನು ತೋರುತ್ತಾ ಹೋಗುತ್ತದೆ. ಈ ಪ್ರಸಂಗಗಳನ್ನೇ ಉದಾಹರಣೆಯಾಗಿ ಹೇಳುತ್ತಾ.. ರೈತರ ಬದುಕಿನ ಬವಣೆಯನ್ನು ಅರ್ಥ ಮಾಡಿಸಲು ಹೊರಟರೆ, ವೀರ್ ಬಳಿ ಇದೆಲ್ಲದಕ್ಕೂ ತಕ್ಕ ಉತ್ತರವಿದೆ.
ರೈತನಿಗೆ ಕಷ್ಟವೆಂದರೆ ಆತನೊಬ್ಬನೇ ಹೋರಾಡಬೇಕು. ಬೇರೆ ಎಲ್ಲರೂ ಫಲಾನುಭವಿಗಳಾಗಿದ್ದರೂ.. ಯಾರೂ ಆತನ ಸಹಾಯಕ್ಕೆ ನಿಲ್ಲದಿರುವುದಾದರೂ ಏಕೆ..? ಎಂಬುದಕ್ಕೂ ವೀರ್ ಸಮರ್ಪಕವಾದ ಉತ್ತರ ನೀಡುತ್ತಾ ಹೋಗುತ್ತಾನೆ.
ವೀರ್ ಹಾಗೂ ಮ.. ಇಬ್ಬರು ಪರಸ್ಪರ ಪ್ರೀತಿಸಿದ್ದು ಹೇಗೆ ಅವರ ಪ್ರೀತಿ ಅರಳಿದ ದಿನಗಳು, ಅವರ ನಡುವಿನ ಬಾಂಧವ್ಯ, ವೀರ್ ಹಾಗೂ ಮ... ಅವರ ಕನಸಿನ ಕೂಸು "ಭೂಮಿಪುತ್ರ"ವನ್ನು ಯುವ ರೈತರೆಲ್ಲರಿಗೂ ಮಾದರಿಯಾಗುವಂತೆ ತೊಡಗುತ್ತಾರೆ. "ಭೂಮಿಪುತ್ರ" ಅಡಿಯಲ್ಲಿ ರೈತನಿಗೆ ಅವನದ್ದೇ ಆದ ಆಫೀಸ್ ಇರುವುದು ಅವರನ್ನು ಏನೆಲ್ಲಾ ಸಾಧ್ಯತೆಗಳಿಗೆ ತೆರೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಯುವಕ-ಯುವತಿಯರನ್ನು ಅದೆಷ್ಟು ಸೆಳೆಯುತ್ತದೆ ಎಂಬುದರ ಪರಿಕಲ್ಪನೆ. ಅದೆಷ್ಟು ಅದ್ಭುತವಲ್ಲವೇ..!
ವೀರ್ ಕುಟುಂಬ, ಸ್ನೇಹಬಳಗ ಆತನಿಗೆ ಬಹಳಷ್ಟು ಸಹಕಾರಿಯಾಗಿ ನಿಲ್ಲುವಂತಹದ್ದು. ಆತ ಹೇಳಿದನೆಂಬ ಕಾರಣಕ್ಕೆ ಚಾರ್ಟೆಡ್ ಅಕೌಂಟೆಂಟ್ ಆದ ತಂಗಿ ದುಂಧುಬಿ ಆತನ ಸ್ನೇಹಿತನೇ ಆಗಿದ್ದ ರೈತನನ್ನು ವಿವಾಹವಾಗುವುದು. ಅವರ ವಿವಾಹದ ಸಂದರ್ಭವನ್ನು ಕಣ್ಣಿಗೆ ಕಟ್ಟುವಂತಿವೆ ಅದೆಷ್ಟು ಸೊಗಸಾಗಿ, ಆದರ್ಶದ ಜೊತೆಗೆ ಬಹು ಸಂಸ್ಕೃತಿಗಳ ಸಮೂಹದಲ್ಲಿ ಚಿತ್ರಿಸಿರುವಂತಿದೆ. ಅದರ ಬಗ್ಗೆ ನೀವು ಓದಿಯೇ ಅರಿಯಬೇಕು. ಮ... ಳನ್ನು ಬರಮಾಡಿಕೊಳ್ಳಲು ಕಾದು ಕುಳಿತಿರುವ ಆತನ ತಂದೆ-ತಾಯಿ ಆಕೆಯನ್ನು ಮಗಳಂತೆ ಪ್ರೀತಿಸುವ ಪರಿ ಮನತುಂಬಿ ಬರುವಂತೆ ಮಾಡುತ್ತದೆ. ವೀರ್ ಮ... ಕುರಿತು ತೋರುವ ಕಾಳಜಿ, ಗೌರವಗಳು ವೀರ್ ಕುರಿತು ಗೌರವ ಮೂಡಿಸುತ್ತದೆ.
ಪ್ರತಿ ಬಾರಿಯೂ ಪತ್ರ ಬರೆಯುವಾಗ, ವಿಭಿನ್ನವಾದ ಪತ್ರದ ಒಕ್ಕಣೆಗಳಂತೂ ಮನಸ್ಸಲ್ಲುಳಿಯುತ್ತವೆ. ಒಲವಿನ ವೀರ್ ಎಂದರೆ ಮತ್ತೊಮ್ಮೆ ಓಯ್ ದನ ಕಾಯೋನೆ ಎಂದು, ಮಳೆ ಕುಲದವನೇ, ಬಲಾಢ್ಯ ಬಸವನೇ, ನೇಗಿಲ ಕುಲದವನೇ, ಧರಾಧರನೆ ಹೀಗೆ ಅದೆಷ್ಟು ಬಗೆಯ ಚೆಂದದ ಒಕ್ಕಣೆಗಳು..
ಮ.. ತನ್ನ ವಿದ್ಯಾರ್ಥಿಗಳಿಗೆ ಒಬ್ಬಳು ಶಿಕ್ಷಕಿಯಾಗಿ ಯಾವ ರೀತಿಯ ಶಿಕ್ಷಣವನ್ನು ದಾಟಿಸುತ್ತಾಳೆ ಹಾಗೂ ಮಕ್ಕಳಲ್ಲಿ ಕೃಷಿ ಹಾಗೂ ಸಮೂಹ ಸಹಕಾರದ ಪರಿಕಲ್ಪನೆಯನ್ನು ಅಡೆಗೆ ಬಿತ್ತುತ್ತಾಳೆ ಎಂದು ಓದಿದಾಗಲಂತೂ ಇಂತಹಾ ಆದರ್ಶ ಶಿಕ್ಷಕರ ಮೇಲಿನ ಗೌರವ ಇಮ್ಮಡಿಯಾಗುತ್ತದೆ.
ವೀರ್ ಗೆಳೆಯ ಶಂಕ್ರ ಆ ಊರಿನ ಆದರ್ಶ ಯುವಕ. ಆದರೆ, ಆತನಿಗೆ ರೈತನೆಂಬ ಕಾರಣಕ್ಕೆ ಹೆಣ್ಣು ಸಿಗದಿದ್ದಾಗ.. ಆತನ ಖಿನ್ನತೆ, ಆತ್ಮಹತ್ಯೆ ಮಾಡಿಕೊಂಡ ಪರಿಯನ್ನು ಕೇಳಿದಾಗ ವೀರ್ ಮನಸ್ಸಿನ ನೋವು ನಮ್ಮ ಮನಸ್ಸಿನೊಳಗೂ ಇಳಿಯುತ್ತದೆ. ಬೆಂಬಲ ಬೆಲೆ ಸಿಗದಾಗ ಟೊಮೊಟೊವನ್ನು ರಸ್ತೆಗೆ ಸುರಿದು ಪ್ರತಿಭಟಿಸುವ ರೈತರ ನೋವು ನಮ್ಮ ನೋವೂ ಆಗುತ್ತದೆ.
ಭೂಮಿಪುತ್ರ ಆಫೀಸ್ ಅನ್ನು ಸರಳವಾದ ರೀತಿಯಲ್ಲಿ ಹಾಗೂ ನೈಸರ್ಗಿಕವಾಗಿ ತಯಾರು ಮಾಡಲು ಹೊರಟರೂ ಯುವಜನತೆಯನ್ನು ಸೆಳೆಯಲು, ಅದಕ್ಕಾಗಿ ಮಾಡಿಕೊಂಡ ಕೆಲ ಬದಲಾವಣೆಗಳು ಇಂದಿನ ದಿನದ ಆಧುನಿಕತೆಯ ಅಗತ್ಯತೆಯನ್ನು ತಿಳಿಸಿ ಹೇಳುತ್ತವೆ.
ಆಧುನಿಕತೆ ಹಾಗೂ ಸಾಂಪ್ರದಾಯಿಕ ಶೈಲಿ ಎರಡು ಮಿಳಿತವಾಗಿರುವ ಈ ಪುಸ್ತಕದಲ್ಲಿ ತಂತ್ರಜ್ಞಾನ ಹಾಗೂ ಆಧುನಿಕತೆಯ ಬಳಕೆ ಇದ್ದರೂ.. ಈ ಕಾಲದಲ್ಲಿಯೂ ಪತ್ರವಾ ಎಂದು ಅಚ್ಚರಿಕೊಳ್ಳುವುದಾದರೆ ಹೌದು. ಅದಕ್ಕೂ ಒಂದು ಕಾರಣವಿದೆ. ಮ... ಹಾಗೂ ವೀರ್ ಪತ್ರಗಳ ವಿನಿಮಯದ ಕಾರಣಕ್ಕೆ ತಿಳಿದಾಗ ಅಚ್ಚರಿಯಾಗುತ್ತದೆ. ಪತ್ರ ಬರೆಯಲು ಕುಳಿತಾಗ ಉದ್ವೇಗ, ಭಾವುಕತೆಯಿಂದ ಕೈಯೆಲ್ಲಾ ಬೆವರಿನಿಂದ ಒದ್ದೆಯಾಗುವ ಸಮಸ್ಯೆಗೆ ಮ... ಕಂಡುಕೊಳ್ಳುವ ಪರಿಹಾರ, ಆಕೆ ಪತ್ರಗಳನ್ನು ಜತನವಾಗಿ ಕಾಪಿಟ್ಟುಕೊಳ್ಳಲು ಮಾಡಿಸಿಕೊಳ್ಳುವ ಸುಂದರ ಕೆತ್ತನೆಯ ಮರದ ಪೆಟ್ಟಿಗೆ, ಕೈಮಗ್ಗದ ಸೀರೆ, ವೀರನ ಗೆಳೆಯರು ಹೀಗೂ ಸೂಕ್ಷ್ಮ ಭಾವನೆಗಳಿಂದ.. ಎಲ್ಲದರಿಂದಲೂ ಮತ್ತೆ-ಮತ್ತೆ ಆಪ್ತವಾಗುವಂತೆ ಮಾಡುವ ಕಾದಂಬರಿ ಇದು.
ಮಳೆ ರೈತನ ಜೀವನಾಡಿ. ಭೂಮಿಯನ್ನು ಹಸಿರಾಗಿಸಲು ಇದರ ಅವಶ್ಯಕತೆಯಿದೆ. ಆದರೆ, "ದರಗುಟ್ಟಿ ಮಳೆ ಸುರಿದು" ಕೇವಲ ರೈತನಿಗೆ ಬೇಕಾದ ಮಳೆ ಮಾತ್ರವಿಲ್ಲದೆ.. ಭಾವನೆಗಳ ಮಳೆಯೂ ಇದೆ. ಇಲ್ಲಿ ಈ ಭಾವನಾತ್ಮಕ ಮಳೆಗೆ ನಾವು ಉಕ್ಕುವುದಂತೂ ಖಚಿತ. ತೇವವಾಗುವುದೂ ಇದೆ. ಆದರ್ಶ ಶಿಕ್ಷಕಿ ಹಾಗೂ ಆದರ್ಶ ರೈತ ಇವರಿಬ್ಬರ ಪ್ರೇಮಗಾಥೆ ಬರಡು ಹೃದಯದಲ್ಲಿಯೂ ಹುಲುಸಾದ ಬೆಳೆ ಬೆಳೆಸುತ್ತದೆ.
ಈ ಕಾದಂಬರಿ ನನಗೆ ಇಂತಹದ್ದೇ ಕಾರಣಕ್ಕೆ ಇಷ್ಟವಾಯಿತು ಎಂದು ಹೇಳಲು ಹೊರಟರೆ ಅದರ ಪಟ್ಟಿಯೇ ಬೆಳೆಯುತ್ತದೆ. ಇದರ ಕಾವ್ಯಾತ್ಮಕ ಕಥನ ಶೈಲಿ, ಭಾವನಾತ್ಮಕ ಭಾಷೆಯ ಬಳಕೆ, ಕಥಾಹಂದರ, ಕಥೆಯ ಪಾತ್ರಗಳು ಹಾಗೂ ಅವರ ಭಾವನೆಗಳು, ವರ್ತನೆ ಹೀಗೆ ಎಲ್ಲವೂ..
ಈ ಕಾದಂಬರಿಯನ್ನು ಇನ್ನೂ ಓದಿರದಿದ್ದವರು ಖಂಡಿತವಾಗಿಯೂ ಓದಿ ನೋಡಿ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಲೇಖಕಿ ಮಮತಾಪ್ರಭು ಅವರ ಎರಡನೇ ಪುಸ್ತಕ ಹಾಗೂ ಚೊಚ್ಚಲ ಕಾದಂಬರಿ ಇದು. ಆದರೆ, ಚೊಚ್ಚಲ ಕಾದಂಬರಿ ಎನ್ನುವ ಭಾವ ಮೂಡಿಸದೆ.. ಬರಹದಲ್ಲಿ ಬಹಳ ಆಪ್ತವಾದ ಶೈಲಿಯಿಂದ ನಮ್ಮೊಡನೆ ಮಿಳಿತವಾಗುವ ಕಾದಂಬರಿ ನನಗೆ ಬಹಳವೇ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ