ಸೋಮವಾರ, ಏಪ್ರಿಲ್ 13, 2026

ಫಣಿಯಮ್ಮ (ಪುಸ್ತಕ ಯಾನ - 161)


ಪುಸ್ತಕದ ಶೀರ್ಷಿಕೆ : ಫಣಿಯಮ್ಮ

ಲೇಖಕರು : ಎಂ.ಕೆ. ಇಂದಿರಾ

ಪ್ರಕಾಶಕರು : ಇಂದಿರಾ ಪ್ರಕಾಶನ

ಏಳನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 88

ಬೆಲೆ : 80 ರೂ. 


ಎಂ. ಕೆ. ಇಂದಿರಾ ಅವರ ಫಣಿಯಮ್ಮ ಕಾದಂಬರಿಯ ಹೆಸರನ್ನು ಕೇಳದಿರುವವರಾರು..?! ಇದಕ್ಕೂ ಮುಂಚೆ ಈ ಕಾದಂಬರಿಗೆ 'ಕೂಪ' ಎಂಬ ಹೆಸರಿನಿಂದ ಕರೆದಿದ್ದರಂತೆ ಲೇಖಕಿ. ಇದು ಕಾಲ್ಪನಿಕ ಕಾದಂಬರಿಯಲ್ಲ. ಹಾಗಾದರೆ, ಇದು ವಾಸ್ತವದ ಘಟನೆಯನ್ನು ಚಿತ್ರಿಸಿರುವುದಾ..?? ಎಂದರೆ ಅರ್ಧ ಹೌದು, ಅರ್ಧ ಇಲ್ಲ ಎಂಬ ಉತ್ತರ ಬರುತ್ತದೆ ಲೇಖಕಿಯಿಂದ. ಲೇಖಕಿಯಾದ ಎಂ.ಕೆ. ಇಂದಿರಾ ಅವರ ಅಜ್ಜನ ತಂಗಿ ಫಣಿಯಮ್ಮನವರು ಬದುಕಿದ್ದು 112 ವರ್ಷ. ಅಂತಹಾ ದೀರ್ಘ ಜೀವನದ ಪುಣ್ಯಜೀವಿಯ ಕಥನವನ್ನು ನಮ್ಮೆಲ್ಲರಿಗೂ ಪರಿಚಯಿಸಿರುವ ನಿಟ್ಟಿನಲ್ಲಿ ಕಾದಂಬರಿಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕಿ. 1976-77 ರ ಉತ್ತಮ ಕೃತಿ ಎಂದು ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಪಡೆದ ಈ ಕಾದಂಬರಿ ಚಲನಚಿತ್ರವೂ ಆಗಿದೆ.


1844 ರಲ್ಲಿ ಜನಿಸಿ, 1952 ರಲ್ಲಿ ತೀರಿಕೊಂಡ ಅಂಚೆ-ಅತ್ತೆಯ ಇತಿಹಾಸ ಆಗಿನವರಿಗೆ ತೀರ ವಿಶೇಷವೆನ್ನಿಸದಿರಬಹುದು. ಆದರೆ, ಹೆಚ್ಚುಕಡಿಮೆ ಮೂರು ತಲೆಮಾರುಗಳ ಹಿಂದಿನ ಕಥೆಯನ್ನು ಓದುವ ನಮಗೆ ಇದು ಅಚ್ಚರಿಯಂತೆಯೂ.. ಫಣಿಯಮ್ಮ ಒಂದು ವಿಶಿಷ್ಟ ವ್ಯಕ್ತಿತ್ವದಂತೆಯೂ ಕಾಣಸಿಗುತ್ತಾರೆ.


ಅಂಚೆ-ಅತ್ತೆ ಎಂದೆ ಖ್ಯಾತರಾಗಿದ್ದ ಫಣಿಯಮ್ಮ ಹುಟ್ಟಿದ್ದು 1940 ರಲ್ಲಿ. ಅಂಚೆ ತಮ್ಮಯ್ಯನವರ ಮನೆಯಲ್ಲಿ. ಅಂಚೆ ಮನೆತನದವರಿಗಿದ್ದ ಸಕಲ ಸೌಕರ್ಯಗಳು ಹಾಗೂ ಶಾಸ್ತ್ರ, ಸಂಪ್ರದಾಯ, ಮಡಿವಂತಿಕೆ ಕಟ್ಟುನಿಟ್ಟಿನಿಂದ ಅವರು ಆ ಕಾಲದಲ್ಲಿ ಬಹಳ ಹೆಸರುವಾಸಿ. ಆಗ ಹಳ್ಳಿಹಳ್ಳಿಗೂ.. ಮನೆಮನೆಗೂ.. ಅಂಚೆ ತಲುಪಿಸುವ ಏರ್ಪಾಡೇನೂ ಸುಲಭದ್ದಲ್ಲ. ಆಗಿನಿಂದ ಈಗ ಮಾರ್ಪಾಟಾಗಿರುವ ಈ ವ್ಯವಸ್ಥೆ ಎಷ್ಟು ಬದಲಾಗಿದೆ ಎನ್ನಿಸದಿರದು. ಆಗಿನ ಕಾಲದಲ್ಲಿ ಅದನ್ನು ನಿರ್ವಹಿಸುತ್ತಿದ್ದವರ ಶ್ರಮ ಕೂಡ ಕಣ್ಣಿಗೆ ಕಟ್ಟುವಂತಿದೆ. 


ಅಂಚೆ ಮನೆತನದ ಹಿರಿಮೆ ಹೇಳುತ್ತಲೇ.. ಅವರ ಕುಟುಂಬದ ಪರಿಚಯವನ್ನು ಮಾಡಿಕೊಡುತ್ತಾ, ಅಲ್ಲಿ ನೂರಾರು ಜನರ ನಡುವೆ ಸಂಪ್ರದಾಯದ ಜೀವನದಲ್ಲಿ ಶಾಂತವಾಗಿ ಬೆಳೆದ ಫಣಿಯಮ್ಮನ ಪರಿಚಯವನ್ನು ಮಾಡಿಕೊಡುತ್ತಾರೆ. ಆಗಿನಿಂದಲೂ ಅವರ ಶಾಂತ ಸ್ವಭಾವ, ಮೆಲು ಮಾತು, ಮೃದುತ್ವವನ್ನು ಹೇಳುತ್ತಾ ಇರುವಾಗ ಬಾಲ್ಯದಲ್ಲಿಯೇ ಹದವಾದ ವ್ಯಕ್ತಿತ್ವ ಸೆಳೆಯುತ್ತದೆ.  


ಆಗಿನ ಕಾಲಕ್ಕೆ ಹೆಣ್ಣು ಮಕ್ಕಳಿಗೆ ಏಳರಿಂದ ಒಂಬತ್ತು ವರ್ಷದೊಳಗೆ ಮದುವೆ ಮಾಡಿಸುವ ರೂಢಿ. ಫಣಿಯಮ್ಮನಿಗೂ ಅಂತಹದ್ದೇ ವಯಸ್ಸಿನಲ್ಲಿ ಮದುವೆಯಾಗಿತ್ತು. ನೀಲಕಂಠ ಭಟ್ಟರ ಮಗ 15 ವರ್ಷದ ನಂಜುಂಡನ ಜಾತಕಕ್ಕೆ ಸರಿಯಾಗಿ ಹೊಂದಿಕೆಯಾದ ಫಣಿಯಮ್ಮನ ಜಾತಕದಿಂದ ಹೆಬ್ಬಲಿಗೆಯ ಮನೆಯಲ್ಲಿ ವಿವಾಹವು ವಿಜೃಂಭಣೆಯಿಂದಲೇ ನಡೆದಿತ್ತು. 


ಹುಡುಗನ ಪೂರ್ಣಾಯಸ್ಸು, ಹುಡುಗಿಯ ಅಖಂಡ ಸೌಭಾಗ್ಯ ಎಲ್ಲವೂ ಆಕೆ ಮೈ ನೆರೆಯುವುದರೊಳಗೆ ಕಳಚಿ ಬಿದ್ದಾಗಿತ್ತು. ಎಳ್ಳಮಾವಾಸ್ಯೆಯಲ್ಲಿ ನಡೆದ ಘಟನೆ ಅವಳ ನೆನಪಿನಲ್ಲಿ ಕಪ್ಪು ಚುಕ್ಕಿಯಾಗಿ ಉಳಿದುಬಿಟ್ಟಿತು. ಬಾಲ ವಿಧವೆಯಾದ ಫಣಿಯಮ್ಮನ ಬದುಕು ತಂದೆಯ ಮನೆಯಲ್ಲಿಯೇ ಶುರುವಾಗಿತ್ತು.


ಯೌವ್ವನದ ಆ ದಿನಗಳನ್ನು ಫಣಿಯಮ್ಮ ಕಳೆದದ್ದು ಹೇಗೆ..?? ಹಾಗೆಂದು, ಹೆಣ್ಣಿಗೆ ಆ ದಿನಗಳು ತೀರಾ ಸುಲಭವೇನೂ ಆಗಿರಲಿಲ್ಲ. ಆದರೆ, ತೀರಾ ಹಾಲು ಹಸುಳೆಯಂತೆ ಸಂಸಾರದ ಜ್ಞಾನವೇ ಇರದಿದ್ದ ಫಣಿಯಮ್ಮನಿಗೆ ಅದರ ಕುರಿತು ತಿಳಿದಾಗ ಆಕೆಗೆ ವೈರಾಗ್ಯ ಮೂಡಿದ್ದು ಸುಳ್ಳಲ್ಲ. ಅವಳಿಗೆ ಸಂಸಾರದ ಕುರಿತ ಗುಟ್ಟು ತಿಳಿದದ್ದು ಹೇಗೆ..??


ಬಾಲ ವಿಧವೆಯೊಬ್ಬಳು ಬಸುರಾದರೆ ಅವರಿಗೆ ನೀಡುತ್ತಿದ್ದ ಶಿಕ್ಷೆ ಕಡಿಮೆಯದ್ದೇನಲ್ಲ. ಕಟ್ಟುನಿಟ್ಟಾದ ಆ ಬಹಿಷ್ಕಾರ ಮುಂತಾದ ಶಿಕ್ಷೆಯ ಕ್ರಮವಿತ್ತು. 


ಫಣಿಯಮ್ಮ ದಿನವಿಡೀ ದಣಿವಿಲ್ಲದ ದುಡಿತದಂತೆ ತನ್ನ ಚಾಕರಿಯನ್ನು ಮಾಡುತ್ತಿದ್ದಳು. ಅವಳ ನಿರ್ಲಿಪ್ತವಾದ ಸನ್ಯಾಸಿನಿಯಂತಹಾ ಬದುಕು ಅದೆಲ್ಲದಿಂದ ದೂರ ಉಳಿದಿತ್ತು. ಆಕೆಯ ಆ ನಿರ್ಲಿಪ್ತ ಧ್ಯಾನಸ್ಥ ಮನಸ್ಥಿತಿ ಕಡೆಕಡೆಗೆ ಒಪ್ಪತ್ತು ಊಟವನ್ನು ಬಿಟ್ಟದ್ದು ಹೀಗೆ..?? ಹಣ್ಣಾಗುತ್ತಾ.. ಮಾಗುತ್ತಾ ಹೋಗುವ ಫಣಿಯಮ್ಮ ಎಲ್ಲರಿಗೂ ಬೇಕಾದವರಾಗಿ ಹೋಗುತ್ತಾರೆ. ಆದರೆ ಅವರ ಅಂತರಂಗದ ತುಮುಲಗಳು ಏನಿದ್ದವು..??


ಫಣಿಯಮ್ಮ ಅಂಚೆ-ಅತ್ತೆ ಎಂದು ಪ್ರಸಿದ್ಧಿ ಪಡೆದದ್ದು ಹೇಗೆ..?? ಫಣಿಯಮ್ಮನ ಕಾಶಿಯಾತ್ರೆ, ಆಕೆ ಎಲ್ಲರಿಗೂ ಬೇಕಾದ ಬಗೆ.. ಅವರಂತೆಯೇ ಚಿಕ್ಕ ವಯಸ್ಸಿನಲ್ಲಿಯೇ ಬಾಲವಿಧವೆಯಾದ ದಾಕ್ಷಾಯಿಣಿಯ ದಿಟ್ಟ ನಡೆ, ಪ್ರೇಮಾಬಾಯಿಯ ವಿಭಿನ್ನ ಜೀವನ ಎಲ್ಲವೂ ಕಂಡು ಬರುತ್ತದೆ.


ಅನಕ್ಷರಸ್ಥೆಯಾದ ಫಣಿಯಮ್ಮನ ಲೋಕಜ್ಞಾನ, ತಿಳುವಳಿಕೆ, ಬುದ್ಧಿ ಹೇಳುವ ಪರಿ ಎಲ್ಲವೂ ಮೆಚ್ಚಾಗುತ್ತದೆ. ಫಣಿಯಮ್ಮನ ಅಂತ್ಯ ಹೇಗಾಯಿತು..?? ಎಲ್ಲಿ ಆಯಿತು..?? ಫಣಿಯಮ್ಮನ ಈ ಇತಿಹಾಸ, ಮಾಗಿದ ಅಂತರಂಗ ಲೇಖಕಿಗೆ ತಿಳಿದ ಬಗೆ ಹೇಗೆ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು. 


ಈ ಕಾದಂಬರಿಯಲ್ಲಿ ಶಾನುಭೋಗ ಕಿಟ್ಟಪ್ಪನವರು ಹೇಳುತ್ತಿದ್ದ ಮಾತೊಂದಿದೆ. "ನಮ್ಮ ಫಣಿ ಅಂತ ಹೆಂಗ್ಸು ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟೊಲ್ಲ" ಎಂದು. ಆ ಮಾತು ಅತಿಶಯೋಕ್ತಿ ಎಂದೆನಿಸದು ಸಹಾ. ಮಲೆನಾಡಿನ ಜನರ ಸ್ಥಿತಿಗತಿಗಳನ್ನು, ಆಗಿನ ಪರಿಸರವನ್ನು, ಆ ದಿನಗಳ ಸಂಪ್ರದಾಯಗಳನ್ನು, ಅಂದಿನ ಫಣಿಯಮ್ಮನಂತಹಾ ಮಡಿ ಹೆಂಗಸರ ಜೀವನಸ್ಥಿತಿಯನ್ನು ಕಣ್ಮುಂದೆ ಕಟ್ಟಿಕೊಡುವ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ