ಭಾನುವಾರ, ಏಪ್ರಿಲ್ 12, 2026

ಹೃದಯ ರಥದಲ್ಲಿ (ಪುಸ್ತಕ ಯಾನ - 138)


ಪುಸ್ತಕದ ಶೀರ್ಷಿಕೆ : ಹೃದಯ ರಥದಲ್ಲಿ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 106


ದಾಂಪತ್ಯ "ಎತ್ತು ಏರಿಗೆ, ಕೋಣ ನೀರಿಗೆ ಎಳೆದರೆ" ಎಂಬಂತಿದ್ದರೆ ಬಹಳವೇ ಕಷ್ಟ. ದಾಂಪತ್ಯದಲ್ಲಿ ಪತಿಯೇ ಪರದೈವ ಎನ್ನುವ ಕಾಲ ಬದಲಾಗಿ ಜೊತೆಗಿರುವ ಸಂಗಾತಿ ಎಂದು ಪರಸ್ಪರರ ಮೇಲೆ ಅವಲಂಬನೆಯಾಗದೇ ಬದುಕುವ ಕಾಲಘಟ್ಟದಲ್ಲಿದ್ದೇವೆ. ಆದರೆ, ಹೃದಯ ರಥದಲ್ಲಿ ಸ್ಥಾಪನೆಯಾಗುವವರ ಮೇಲೆ ಬದುಕಿನ ಸಾರ್ಥಕತೆ ಹಾಗೂ ದಾಂಪತ್ಯದ ಖುಷಿ ಅವಲಂಬಿತ. ಹೃದಯ ರಥದಲ್ಲಿ ಮಧುರ ಭಾವಗಳು ಹುಟ್ಟಿದರೆ ಆ ಆನಂದಲಹರಿ ಬದುಕಿಡೀ ವ್ಯಾಪಿಸಿ ಬದುಕು ಹಸನಾಗುತ್ತದೆ. 


ಮೋಹನ ಹಾಗೂ ಚಂದ್ರಿಕಾಳ ವಿವಾಹ ಹಿರಿಯರ ಸಂತಸದ ನಿರ್ಧಾರವಂತೂ ಆಗಿರಲಿಲ್ಲ. ಹಾಗೆಂದು ಅದು ಪ್ರೇಮ ವಿವಾಹವೂ ಆಗಿರಲಿಲ್ಲ.


ಗೇರು ಬೀಜದ ಫ್ಯಾಆಕ್ಟರಿಯೊಂದರಲ್ಲಿ ದುಡಿಯುತ್ತಿದ್ದ ಶ್ಯಾಮ ಉಡುಪ ಹಾಗೂ ಸೀತಮ್ಮನವರ ಬಡತನದ ದಾಂಪತ್ಯಕ್ಕೆ ನಾಲ್ಕು ಜನ ಹೆಣ್ಣು ಮಕ್ಕಳು. ಚಂದ್ರಿಕಾ ಮೂರನೇ ಮಗಳು. ಅವಳಿಗೆ ಮದುವೆಯಾದಾಗ ಇಪ್ಪತ್ನಾಲ್ಕು ವರ್ಷ. ಮೊದಲನೆಯವಳು ಚಾರುಮತಿ, ನಂತರ ವಸುಮತಿ, ನಾಲ್ಕನೆಯವಳು ರಾಧಿಕಾ. ರಾಧಿಕಾ ಇದ್ದುದರಲ್ಲಿ ಬುದ್ಧಿವಂತೆ. ಬ್ಯಾಂಕ್ ನಲ್ಲಿ ಕೆಲಸಕ್ಕೆ ಸೇರಿದ್ದ ಅವಳು ಸಹೋದ್ಯೋಗಿ ಮಾಧವನನ್ನೇ ಪ್ರೀತಿಸಿದ್ದರೂ.. ವಿವಾಹವಾಗಲು ಮಾಧವನ ತಂದೆ-ತಾಯಿ ಹಣ ಹಾಗೂ ಚಿನ್ನದ ಬೇಡಿಕೆ ಇಟ್ಟಿದ್ದರಿಂದ ಅದನ್ನು ಕೂಡಿಸುವುದರಲ್ಲಿ ಮಗ್ನಳಾಗಿದ್ದಳು. ಚಾರುಮತಿಯ ವಿವಾಹವೂ ಹೇಗೋ ಕೃಷ್ಣಪ್ಪನೊಡನೆ ನೆರವೇರಿತು. ಆ ವಿವಾಹದಲ್ಲಿ ಹೋಟೆಲ್ ಮಾಲೀಕರ ಪತ್ನಿ ರಮಾಬಾಯಿಯವರ ಕಣ್ಣಿಗೆ ಬಿದ್ದವಳೇ ಚಂದ್ರಿಕಾ.


ರಮಾಬಾಯಿಯವರು ಒಂದು ವಿವಾಹದ ಪ್ರಸ್ತಾಪ ತಂದರು. ಮೊದಲು ಅವರ ಹೋಟೆಲ್ ನಲ್ಲಿಯೇ ಕೆಲಸ ಮಾಡುತ್ತಿದ್ದ ತಮ್ಮ ತಂಗಿಯ ಮಗನಾದ ಮೋಹನ ಈಗ ಅರಬ್ಬೀ ಕಲಿತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಸಂಬಳ ಚೆನ್ನಾಗಿತ್ತಾದರೂ ಹತ್ತು ವರ್ಷದ ನಂತರವಷ್ಟೇ ಅವನು ಅಲ್ಲಿಂದ ಬರಬಹುದಾಗಿತ್ತು. ಎರಡು ವರ್ಷಕ್ಕೊಮ್ಮೆ ಬರುತ್ತಿದ್ದ ಆತ ಮೊದಲ ಸಲ ಬಂದಾಗ ಇಬ್ಬರು ತಂಗಿಯರ ವಿವಾಹ ಮಾಡಿದ್ದ. ಎರಡನೇ ಬಾರಿ ಬಂದಿದ್ದ. ಉಳಿದ ಇನ್ನೊಬ್ಬಳು ತಂಗಿಯನ್ನೂ ವಿವಾಹ ಮಾಡಲಿದ್ದ. ಅದೇ ಹಸೆಯ ಮೇಲೆ ಬಡ ಹುಡುಗಿಯೊಬ್ಬಳನ್ನು ವಿವಾಹವಾಗಲು ಸಿದ್ಧನಿದ್ದ. ಆದರೆ, ಆಕೆ ರೂಪವತಿಯಾಗಿರಬೇಕು ಎಂಬುದಷ್ಟೇ ಆತನ ಕಂಡೀಷನ್. ಅದಕ್ಕೆ ಒಪ್ಪುವಂತಿದ್ದಳು ಚಂದ್ರಿಕಾ.


ಮೋಹನನ ತಂದೆ ಕೃಷ್ಣಮೂರ್ತಿರಾಯರು ಹಾಗೂ ರತ್ನಮ್ಮನವರಿಗೆ ತಮ್ಮನ್ನು ಕೇಳದೆ ಮಗ ರಮಾಬಾಯಿಯವರ ರಾಯಭಾರದಿಂದ ಬಡ ಹುಡುಗಿಯನ್ನು ಒಪ್ಪಿದ್ದು ಇಷ್ಟವಾಗಲಿಲ್ಲ. ಅಲ್ಲದೆ, ಆತ ದುಡಿಯುವ ಹಣದಿಂದ ತಾವು ಉದ್ದಾರವಾಗಬಹುದು ಹಾಗೂ ವರದಕ್ಷಿಣೆ ತರುವ ಹೆಣ್ಣನ್ನು ತರುವ ದುರಾಲೋಚನೆ ಹಾಗೂ ಹೆಣ್ಣುಮಕ್ಕಳ ಉದ್ದಾರದ ಆಲೋಚನೆಗಳು ಸಹಾ ತಲೆಯಲ್ಲಿದ್ದವು. ಆತನ ಓದು ಬಿಡಿಸಿ ಹೋಟೆಲ್ ಕೆಲಸಕ್ಕೆ ಹಚ್ಚಿದ್ದರು. ಹೇಗೋ ಮುಂದುವರಿದು ರಮಾಬಾಯಿ ಹಾಗೂ ಮುಂಬೈನಲ್ಲಿದ್ದ ಚಿಕ್ಕಮ್ಮ ಹೇಮಾವತಿಯ ಪ್ರೋತ್ಸಾಹದಿಂದ ದುಬೈ ಸೇರಿದ್ದ. 


ಆರು ವರ್ಷ ಗಂಡನಿಂದ ದೂರವಿರಬೇಕಾದ ಸಂಧರ್ಭವನ್ನು ಒಪ್ಪಿಕೊಂಡಿದ್ದಳು ಚಂದ್ರಿಕಾ. ಕಾರಣ, ಬಡತನ ಹಾಗೂ ಅಕ್ಕನ ವಿವಾಹ.. ತಂಗಿಯ ವಿವಾಹದ ಪರದಾಟದ ಪರಿಸ್ಥಿತಿ. ಗಂಡಿನ ಮನೆಯವರ ವಿರೋಧದಲ್ಲಿ ಆಕೆ ಬಾಳಲಾರಳು. ಮತ್ತೆ ತವರಿಗೆ ಬಂದು ಸೇರಿದರೆ ಆಕೆಯನ್ನು ತಾವೇ ಸಾಕಬೇಕಾದೀತು ಎಂಬ ಯೋಚನೆಯಿಂದ ಸೀತಮ್ಮನವರು ನೆಪ ಹೇಳಿ ಆಕೆಯ ವಿವಾಹದಿಂದಲೂ ದೂರ ಉಳಿದರು. ಅಕ್ಕ-ಭಾವನೇ ಹಸೆಯ ಮೇಲೆ ಕುಳಿತು ಧಾರೆ ಎರೆದರು.


ಎಲ್ಲರೂ ಇಲ್ಲಿ ತಮ್ಮ ತಮ್ಮ ಭವಿಷ್ಯವನ್ನು ಭದ್ರ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದರು. 

ಮೋಹನ ಹಾಗೂ ಚಂದ್ರಿಕಾ ವಿವಾಹಕ್ಕೂ ಮುನ್ನ ಮೋಹನ ಆಕೆಗೆ ತಿಂಗಳಿಗೆ ಮೂರು ಸಾವಿರ ಕಳಿಸುತ್ತೇನೆ ಎಂಬ ಭರವಸೆ ನೀಡಿ ಒಂದಿಷ್ಟು ಚಿನ್ನದ ಒಡವೆ ತೆಗೆದುಕೊಟ್ಟಿದ್ದ. ಚಾಲಾಕಿ ಚಂದ್ರಿಕಾ ಅಮ್ಮ ಹಾಗೂ ಅತ್ತೆಯ ಚಾಲಾಕುತನದಿಂದ ಅವೆಲ್ಲವನ್ನೂ ಕಳೆದುಕೊಳ್ಳಬೇಕಾದ ಸಂಧರ್ಭ ಬರಬಹುದೆಂದು ಗೆಳತಿ ಸಂಧ್ಯಾಳ ಸಹಾಯದಿಂದ ಅಂತಹದ್ದೇ ನಕಲಿ ಒಡವೆ ಮಾಡಿಸಿಕೊಂಡು, ಅಸಲಿ ಒಡವೆಯನ್ನು ಮಾರಿ ಸಂಧ್ಯಾಳ ಮನೆ ಪಾರ್ಟಿಷನ್ ಮಾಡಿಸಿಕೊಂಡು ಅಲ್ಲಿ ವಾಸವಾಗುವ ಆಲೋಚನೆ ಮಾಡಿದಳು.


ಅತ್ತೆ ಒಳ್ಳೆಯತನದ ಸೋಗು ಹಾಕಿ ಬಂದಾಗ ತಾನೂ ಚಾಲಾಕಿನಿಂದಲೇ ನಿಭಾಯಿಸುತ್ತಾ.. ಅಮ್ಮ ಹಾಗೂ ಅವಿವಾಹಿತೆ ಅಕ್ಕ ಮೂರು ಸಾವಿರದ ಹಣದಾಸೆಗೆ ಅಲ್ಲಿಯೇ ಇರಲು ಕೇಳಿಕೊಂಡರೂ ಇರದೇ.. ವಿವಾಹದ ನಂತರ ಕೊಂಚ ದಿನ ಮೋಹನನೊಡನೆ ಚಿಕ್ಕಮ್ಮ ಹೇಮಾವತಿಯ ಮನೆ ಸೇರಿದಳು. ಹೇಮಾವತಿ ಆಕೆಯನ್ನು ನಯವಾಗಿ ಮಾತನಾಡಿಸುತ್ತಲೇ ಮನೆ ಕೆಲಸದವಳನ್ನಾಗಿ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾಗಲೇ ಮೋಹನ ದುಬೈಗೆ ಹಾರಿದ್ದ. ಚಂದ್ರಿಕಾ ಅತ್ತೆಯೊಡನೆ ಅತ್ತೆ ಮನೆಗೆ ಸೇರಲು ಹೊರಟಳು. ರೈಲಿನಲ್ಲಿ ಬರುವಾಗ ಉಪಾಯ ಮಾಡಿ ಒಡವೆಗಳನ್ನು ಅತ್ತೆಯೇ ಲಪಟಾಯಿಸಿದರೆನ್ನುವ ನೆಪ ಒಡ್ಡಿ ಜಗಳ ಮಾಡಿಕೊಂಡು ಅಮ್ಮನ ಮನೆಗೂ ಬಾರದೇ ಸಂಧ್ಯಾಳ ಮನೆಯ ಬಾಡಿಗೆಗೆ ಹೋದಳು. ಅಮ್ಮನಿಗೆ ತಾನು ಮುಂಬೈನಲ್ಲಿರುವಂತೆ ಬಿಂಬಿಸಿಕೊಂಡಳು.


ಸಂಧ್ಯಾಳ ಜೊತೆಗೂಡಿ ಹೊಲಿಗೆ ಮೆಷಿನ್ ನಲ್ಲಿ ಕೆಲಸ ಮಾಡುತ್ತಾ.. ಒಂಟಿತನವನ್ನು ದೂರವಿಡಲು ಹಾಗೂ ಆರ್ಥಿಕವಾಗಿ ಸಬಲಳಾಗಳು ದುಡಿಮೆಯ ಮಾರ್ಗವನ್ನು ಕಂಡುಕೊಂಡಿದ್ದರು. ಅದು ಸಫಲವಾಗಿ ಒಳ್ಳೆಯ ಗಳಿಗೆಯ ಹಾದಿಯೂ ಆಯಿತು. ಈ ನಡುವೆ ಚಿಕ್ಕಮ್ಮನ ಬಳಿ ಇರುವಂತೆ ಹಾಗೂ ಚಿನ್ನವನ್ನು ಠೇವಣಿ ಇಡುವಂತೆ ಗಂಡನಿಂದ ಬರುತ್ತಿದ್ದ ಬೆದರಿಕೆ ಪತ್ರಗಳನ್ನು ನಿರ್ಲಕ್ಷಿಸಿದಳು. ಮೋಹನ ಹಾಗೂ ಚಂದ್ರಿಕಾರ ಪತ್ರ ಸಂಬಂಧ ನಿಂತಿತ್ತು. ತಮ್ಮ ಬಳಿಗೆ ಬಾರದ ಮಗಳನ್ನು ಅರಸಿಬಂದ ತಾಯಿ ಸಂಧ್ಯಾಳ ಪತಿ ಹಾಗೂ ಚಂದ್ರಿಕಾ ಕುರಿತು ಒಡಕು ನುಡಿಗಳ ಭವಿಷ್ಯವನ್ನು ಆಡಿದಾಗ.. ಗೆಳತಿ ಸಂಧ್ಯಾ ಅಕ್ಕನಂತೆ ಜೊತೆ ನಿಂತು ಧೈರ್ಯ ತುಂಬಿದಳು.


ಚಂದ್ರಿಕಾ ಹಾಗೂ ಮೋಹನರ ವಿವಾಹದ ಫಲವಾಗಿ ರಾಮು ಬಂದಿದ್ದ. ಗಂಡ ಹಿಂದಿರುಗಿ ಬಂದಾಗ ಅವನನ್ನು ಭೇಟಿಯಾಗಿ ಸಂಬಂಧ ಸರಿಪಡಿಸಿಕೊಳ್ಳುವ ಆಸೆಯಲ್ಲಿದ್ದವಳಿಗೆ ಆಘಾತ ಕಾದಿತ್ತು. ಹೇಮಾವತಿಯ ಕುತಂತ್ರದಿಂದ ಮೋಹನ ಲಲಿತಾಳನ್ನು ಮದುವೆಯಾಗಿದ್ದ.


ಹೇಮಾವತಿಯ ಮಗ ಗೋಪಾಲನೊಡಗೂಡಿ ವ್ಯಾಪಾರ ಶುರು ಮಾಡಿದಾಗ ಅವರ ಮೋಸ ಅರಿವಾಯಿತು. ಅಳಿದುಳಿದ ಹಣದಿಂದ ಲಲಿತಾಳ ಚಿಕ್ಕಮ್ಮನ ಸಲಹೆಯಂತೆ ಹೋಟೆಲ್ ಉದ್ಯಮಕ್ಕಿಳಿಯಲು ಹೊರಟವನಿಗೆ ಎದುರಾದದ್ದು ನಷ್ಟ, ಕಷ್ಟಗಳ ಪರಂಪರೆ. ಲಲಿತಾ ಕೂಡಾ ಆತನಿಗೆ ಮೋಸ ಮಾಡಿ ಗೋಪಾಲನ ಜೊತೆಯಾದಳು. ಆದರೆ, ಆಕೆಯ ಜೀವನವೂ ನೆಮ್ಮದಿಯಾಗಿರಲಿಲ್ಲ.


ಇತ್ತ, ಚಂದ್ರಿಕಾ ಸಂಧ್ಯಾಳ ಜೊತೆಯ ಉದ್ಯಮದಲ್ಲಿ ಗೆದ್ದಿದ್ದಳಾದರೂ ಸಂಧ್ಯಾ ಅವಳ ಹಣವನ್ನು ಹಿಂದುರುಗಿಸಿ ತನ್ನದೇ ಸ್ವಂತ ಉದ್ಯೋಗ ಶುರು ಮಾಡುವ ಆಲೋಚನೆ ಮಾಡಿದ್ದಳು.


ಈಗ ಚಂದ್ರಿಕಾ ಮುಂದಿನ ಭವಿಷ್ಯ ಬದಲಿಸಿದವರು ಸಹಾ ರಮಾಬಾಯಿಯೇ.. ಅವಳ ಬಳಿಯಿದ್ದ ಹಣಕ್ಕೆ ಪಾಲುದಾರಿಕೆಯಲ್ಲಿ ತಮ್ಮ ನಂಬುಗೆಯ ಸಂಬಂಧಿ ರಮಾಕಾಂತನನ್ನು ಜೊತೆ ಮಾಡಿಸಿ.. ತಾವು ಮಾರಲಿದ್ದ ಹೋಟೆಲ್ ಅನ್ನು ಅವಳಿಗೇ ಮಾರಿದರು.


ಈ ಮಧ್ಯೆ ಶ್ರೀಮಂತೆಯಾದ ಚಂದ್ರಿಕಾಳಿಗೆ ಬಂಧುಗಳ ಕಾಟ ಶುರುವಾಗಿತ್ತು. ತನ್ನ ತಾಯಿಯ ಅಕ್ಕ ಜಲಜಮ್ಮನವರಿಂದ ಅವಳಿಗೊಂದು ವಿವಾಹದ ಪ್ರಸ್ತಾಪ ಬಂದಿತು. ಆತನೇ ಮಂಜುನಾಥ್.


 ರಮಾಕಾಂತ ಮೋಹನನ ಗೆಳೆಯ. ಮೋಹನನನ್ನು ಮತ್ತೆ ತನ್ನ ಹೋಟೆಲ್ ಗೆ ಸೇರಿಸಿಕೊಂಡ. ಸದ್ಯಕ್ಕೆ ಚಂದ್ರಿಕಾಳಿಂದ ವಿಚಾರ ಮುಚ್ಚಿಟ್ಟಿದ್ದನಾದರೂ.. ಅವರಿಬ್ಬರ ಸಂಬಂಧವನ್ನು ಒಟ್ಟುಗೂಡಿಸುವ ವಿಚಾರವೂ ಅವನಲ್ಲಿತ್ತು.


ಚಂದ್ರಿಕಾಳ ಹೃದಯ ರಥದಲ್ಲಿ ಸ್ಥಾಪನೆಯಾದವರು ಯಾರು..?? ರಾಮುವಿನ ಮುಂದಿನ ಭವಿಷ್ಯವೇನು..?? ಮೋಹನ ಹಾಗೂ ಲಲಿತಾ ಸಂಬಂಧ ಹೇಗಿತ್ತು..?? ಹೇಮಾವತಿಯ ಹಾಗೂ ಆಕೆಯ ಮಗ ಗೋಪಾಲನ ಮೋಸ ಬಯಲಾದದ್ದು ಹೇಗೆ..?? ಈರ್ವರ ತಂದೆ-ತಾಯಿಯರ ನಡೆಯೇನು..?? ಅವಿವಾಹಿತ ಅಕ್ಕ ವಸುಮತಿ ಏನಾದಳು..?? ಸಂಧ್ಯಾಳ ನಡೆಗೆ ಕಾರಣವೇನು..?? ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಹೃದಯ ರಥದಲ್ಲಿ'.


ಈ ಕಾದಂಬರಿಯಲ್ಲಿ ಬಹಳಷ್ಟು ಪಾತ್ರಗಳಿವೆ ಎನ್ನಿಸಿದರೂ.. ಕಥೆಯ ಬಿಗಿ ನಿರೂಪಣೆ ಹಾಗೂ ಎಲ್ಲಿಯೂ ಗುಟ್ಟು ಬಿಟ್ಟುಕೊಡದ ಶೈಲಿಯಿಂದ ಓದಿಸಿಕೊಂಡು ಹೋಗುತ್ತದೆ. ಅಂತ್ಯವನ್ನು ಮಾತ್ರವಲ್ಲ.. ಪಾತ್ರಗಳ ಮುಂದಿನ ನಡೆಯನ್ನೂ ಊಹಿಸುವುದೂ ಇಲ್ಲಿ ಸುಲಭವಿಲ್ಲ. 


ಇಲ್ಲಿ ಚಂದ್ರಿಕಾ ತಂದೆ ಶ್ಯಾಮ ಉಡುಪರ ಪಾತ್ರ ಪರಿಸ್ಥಿತಿಯ ಕೈಗೊಂಬೆಯಂತೆನ್ನಿಸಿತು. ಚಂದ್ರಿಕಾ ಹಾಗೂ ಮೋಹನರ ತಾಯಂದಿರ ಪಾತ್ರಗಳು ಅಮ್ಮ ಎನ್ನುವ ನಿಸ್ವಾರ್ಥದ ಪರಿಧಿಯೊಳಗೆ ಕಂಡದ್ದಕ್ಕಿಂತಲೂ.. ಒಂದು ಕಣ್ಣಿಗೆ ಬೆಣ್ಣೆ ಹಾಗೂ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯುವ ತಾಯಂದಿರ ಹಾಗೆ ಗೋಚರವಾದರು. 


ಸಂಧ್ಯಾ ಒಮ್ಮೆ ಒಳ್ಳೆಯ ಗೆಳತಿಯಂತೆ ಕಂಡರೂ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಸ್ವಾರ್ಥದ ಹೆಣ್ಣಿನಂತೆಯೂ ಭಾಸವಾದಳು. 


ಮೊದಮೊದಲು ಈ ಕಾದಂಬರಿಯಲ್ಲಿ ಬಂದ ಮೋಹನ ಒಳ್ಳೆಯವನಂತೆಯೂ.. ಚಂದ್ರಿಕಾ ಚಾಲಾಕಿ ಹೆಣ್ಣಿನಂತೆಯೂ ಕಂಡರೆ ಹೋಗುತ್ತಾ.. ಹೋಗುತ್ತಾ.. ಪಾತ್ರಗಳ ಬದಲಾದ ನಡವಳಿಕೆಗಳು ಚಂದ್ರಿಕಾಳ ಮುಂದಾಲೋಚನೆ, ಮುನ್ನೆಚ್ಚರಿಕೆಯನ್ನು ಮೆಚ್ಚುವಂತೆ ಮಾಡಿದವು. ಹೆಣ್ಣೊಬ್ಬಳು ಇಷ್ಟು ಎಚ್ಚರಿಕೆಯಿಂದ ಆರ್ಥಿಕ ಸ್ವಾವಲಂಬಿಯಾದರೆ ಸಮಾಜದಲ್ಲಿ ಆಕೆಗೆ ದೊರೆಯುವ ಸ್ಥಾನ ಹಾಗೂ ಗೌರವದ ಚಿತ್ರಣವಿದೆ ಇಲ್ಲಿ. ದಾಂಪತ್ಯ ಎಷ್ಟು ಮುಖ್ಯವೋ.. ತನ್ನ ಕಾಲ ಮೇಲೆ ತಾನು ನಿಂತುಕೊಂಡು ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವುದೂ ಅಷ್ಟೇ ಮುಖ್ಯವೆಂದು ತೋರುತ್ತದೆ. ಚಂದ್ರಿಕಾಳ ಬುದ್ಧಿವಂತಿಕೆ ಹಾಗೂ ನಡೆಗಳನ್ನು ಮೆಚ್ಚದಿರುವುದು ಸಾಧ್ಯವೇ ಇಲ್ಲ. 


ಸಮಾಜದ ಗೋಮುಖ ವ್ಯಾಘ್ರಗಳಿಂದ ತಪ್ಪಿಸಿಕೊಂಡು ಬದುಕುವ ಚಾಲಾಕಿತನ ಹಾಗೂ ಹೆಣ್ಣೊಬ್ಬಳ ದಿಟ್ಟ ನಡತೆಯಿಂದ ಪ್ರೇರಿತರಾಗುವ ಬಗೆ ಇಲ್ಲಿದೆ. ಸಣ್ಣ-ಪುಟ್ಟದಕ್ಕೂ ಹೆದರಿ ಬದುಕಿನಲ್ಲಿ ಬೇರೆಯ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವವರಿಗೆ ಮಾದರಿಯಾಗುವ ಪ್ರೇರಣಾತ್ಮಕ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ