ಪುಸ್ತಕದ ಶೀರ್ಷಿಕೆ : ಅಪೂರ್ವ ಬಳುವಳಿ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ
ಎರಡನೇ ಮುದ್ರಣ : 2023
ತನಗೆ ಕೆಡುಕು ಮಾಡಿದವರಿಗೆ ಒಳ್ಳೆಯದನ್ನೇ ಬಯಸಿದವರಿಗೆ ಬದುಕಿನಲ್ಲಿ ಅಪೂರ್ವ ಬಳುವಳಿಯೇ ಸಿಗುತ್ತದೆ ಎಂಬ ಆಶಯ ಹೊತ್ತ ಚೆಂದದ ಕಾದಂಬರಿ ಹೆಚ್. ಜಿ. ರಾಧಾದೇವಿಯವರ 'ಅಪೂರ್ವ ಬಳುವಳಿ'.
ಶಾರದಮ್ಮ ಹಾಗೂ ಶಾಮಣ್ಣನಿಗೆ ಮೂವರು ಹೆಣ್ಣುಮಕ್ಕಳು, ಶಾಂತ ಶರ್ಮಿಲಾ ಹಾಗೂ ಶಮಂತ. ಮನೆಯಲ್ಲಿ ಅಕ್ಕ-ತಂಗಿಯರ ಮಧ್ಯೆ ಜಗಳವಾದಾಗ ತಾಯಿ ಶಾರದಮ್ಮ ಯಾರ ಪರವನ್ನೂ ವಹಿಸುತ್ತಿರಲಿಲ್ಲ. ಶಾಂತಳಿಗೆ ಅಷ್ಟು ವಿದ್ಯೆ, ರೂಪು ಇರಲಿಲ್ಲ. ಹಾಗಾಗಿ, ಶರ್ಮಿಲಾ ಮೇಲೆ ಕೊಂಚ ಹೆಚ್ಚು ರೇಗುತಿದ್ದಳು ಹಾಗೂ ಜಗಳವಾಡುತ್ತಿದ್ದಳು. ಮೂವರಲ್ಲಿ ಚೆನ್ನಾಗಿ ಓದುತ್ತಿದ್ದದ್ದು ಶರ್ಮಿಲಾ.
ಗೆಳತಿ ತಾರಾಳ ಮಾವನ ದೆಸೆಯಿಂದ ಆಕೆಗೆ 'ಶಾರದಾ ವಿದ್ಯಾ ಸಂಸ್ಥೆ'ಯ ಮಿಡಲ್ ಸ್ಕೂಲ್ ನಲ್ಲಿ ಶಿಕ್ಷಕಿಯ ಕೆಲಸ ಸಿಕ್ಕಿತ್ತು. ಶಿಕ್ಷಕಿಯ ಕೆಲಸ ದೊರೆತ ತಕ್ಷಣ ಆ ಮನೆಯಿಂದ ಹೊರಟು ಸೇರಿದ್ದು ಅಮ್ಮನ ತಂಗಿ ಸಾವಿತ್ರಮ್ಮ ಹಾಗೂ ಆಕೆಯ ಗಂಡ ಸೋಮಪ್ಪನ ಮನೆಗೆ. ಶರ್ಮಿಲಾಳಿಗೆ ಕೆಲಸ ಸಿಕ್ಕಿದ್ದ ಆ ಶಾಲೆಯಲ್ಲಿಯೇ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಇವರಿಗೂ ಮೂವರು ಹೆಣ್ಣುಮಕ್ಕಳು. ಆದರೆ, ಅವರ್ಯಾರೂ ಶರ್ಮಿಲಾಳಷ್ಟು ರೂಪವಂತೆಯರೂ ಅಲ್ಲ.. ವಿದ್ಯಾವಂತೆಯರೂ ಅಲ್ಲ.
'ಬೆಂಕಿಯಿಂದ ಹಾರಿ ಬಾಣಲೆಗೆ ಬಿದ್ದಂತೆ' ಆಗಿತ್ತು ಅವಳ ಸ್ಥಿತಿ. ಮೊದಮೊದಲಿಗೆ ಚಿಕ್ಕಮ್ಮ ಚೆನ್ನಾಗಿಯೇ ನೋಡಿಕೊಂಡರೂ ತಾರತಮ್ಯವಂತೂ ಬಹಳವಿತ್ತು. ಅಲ್ಲದೆ, ಅವರ ಮನೆಯ ಆಗಾಗ ಹೆಚ್ಚಿನ ಹಣ ವಸೂಲಿ ಮಾಡಿಕೊಂಡು.. ಈಕೆಗೆ ಬರುತ್ತಿದ್ದ ಟ್ಯೂಷನ್ ಮಕ್ಕಳಿಗೆ ತಮ್ಮ ಮಕ್ಕಳೂ ಟ್ಯೂಷನ್ ಮಾಡುತ್ತಾರೆಂದು ಹೇಳಿ ಕಳಪೆಯಾಗಿ ಹೇಳಿಕೊಟ್ಟಿದ್ದರಿಂದ ಮಕ್ಕಳೂ ತಪ್ಪಿಹೋಗಿದ್ದರು. ಅರೆಹೊಟ್ಟೆ ಊಟ, ಅರ್ಧ ನೆಮ್ಮದಿಯಿಂದ ಇದ್ದವಳಿಗೆ ಬೇರೆಲ್ಲೂ ಉಳಿಯಲು ಸಾಧ್ಯವಾಗದೆ, ಅಲ್ಲೇ ಇರುವ ಅನಿವಾರ್ಯತೆಯಿತ್ತು. ಅತ್ತೆಯ ಮನೆ ಎಂದರೆ ತಂದೆಯ ತಂಗಿಯ ಮನೆಯೂ ಅದೇ ಊರಿನಲ್ಲಿದ್ದರೂ.. ಅವರ ಸಿರಿವಂತಿಕೆ ಹಾಗೂ ಅವರ ಮನೆಯಲ್ಲಿದ್ದ ಮೂರು ಗಂಡುಮಕ್ಕಳ ಕಾರಣ ಇವಳನ್ನು ಮನೆಯಲ್ಲಿಟ್ಟುಕೊಳ್ಳಲು ಒಪ್ಪಿರಲಿಲ್ಲ.
10 ತಿಂಗಳ ನಂತರ ಪಕ್ಕದ ಮನೆ ಪದ್ದಮ್ಮನ ದೆಸೆಯಿಂದ ಅಲ್ಲಿಂದ ಬಿಡುಗಡೆ ಸಿಕ್ಕಿತ್ತು. ತನ್ನ ವಿದ್ಯಾರ್ಥಿನಿಯಾದ ಚಂದ್ರಮಣಿಯ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದಳು. ಆ ದಂಪತಿಗಳ ಹೆಸರು ಸಹಾ ಶಾರದಮ್ಮ ಹಾಗೂ ಶಾಮಣ್ಣ. ಆದರೆ, ಸಾವಿತ್ರಮ್ಮ ಅಲ್ಲಿಗೂ ಬಂದು ಗಲಾಟೆ ಮಾಡಿದ್ದರಿಂದ ಒಂದು ತಿಂಗಳ ನಂತರ ಮನೆ ಖಾಲಿ ಮಾಡಬೇಕೆಂದರು.
ಪ್ರಿನ್ಸಿಪಾಲ್ ಮೇಡಂ ಬಳಿ ಮೊದಲೇ ಹೋಗಿ ಆಕೆಗೆ ತನ್ನ ಕಷ್ಟವನಲ್ಲ ಹೇಳಿಕೊಂಡು.. ಸೋಮಪ್ಪ ಚಾಡಿ ಹೇಳಿ ತನ್ನ ಕೆಲಸವನ್ನು ಕಳೆಯಬಹುದು. ಆದರೆ, ಅದಕ್ಕೆ ಅವಕಾಶ ಕೊಡಬಾರದೆಂದೂ ಪ್ರಾರ್ಥಿಸಿದ್ದಳು. ಅದೆಲ್ಲವನ್ನೂ ಕೇಳಿದವರು ಸದ್ಯಕ್ಕೆ ಒಪ್ಪಿದ್ದರು. ತಮ್ಮ ದತ್ತು ಪುತ್ರನಂತಿದ್ದ ರಾಬರ್ಟ್ ನನ್ನು ವಿವಾಹವಾಗಲು ಸೂಚಿಸಿದರು. ಆದರೆ, ಅಂತರ್ಜಾತೀಯ ವಿವಾಹದಲ್ಲಿ ಅವಳಿಗೆ ಆಸಕ್ತಿ ಇರಲಿಲ್ಲ.
ಎದುರು ಮನೆ ಇಂದಿರಮ್ಮ ತಮ್ಮ ಮಗ ವಿಶ್ವನಾಥನಿಗೆ ತಂದುಕೊಳ್ಳಲು ಯೋಚಿಸಿದಾಗ.. ಚಿಕ್ಕಮ್ಮ ಶಾಂತಾ ಜೊತೆ ಸೇರಿ ಬೇರೆ ರೀತಿಯ ಪತ್ರ ಬರೆದು ಚಾರಿತ್ರ್ಯಹರಣ ಮಾಡಿ ಅದನ್ನು ತಪ್ಪಿಸಿದ್ದಳು. ಇಂದಿರಮ್ಮನ ಮಗಳು ಹಾಗೂ ಶರ್ಮಿಲಾಳ ವಿದ್ಯಾರ್ಥಿನಿಯಾಗಿದ್ದ ಪದ್ಮಿನಿ ಹೇಳಿದಾಗಲೇ ಅವಳಿಗೆ ಅದರ ಅರಿವಾಗಿದ್ದು.
ಚಂದ್ರಮಣಿಯ ಅಕ್ಕ ಕಾಂತಾಮಣಿಗೆ ಒಂದು ವರವನ್ನು ಸೂಚಿಸಿದ್ದರು ಪರಿಚಿತರು. ಆದರೆ, ಆತನನ್ನು ಮದುವೆಯಾದರೆ ಬೇರೆಯವರ ಮನೆಗೆ ಅಡುಗೆ ಕೆಲಸಕ್ಕೆ ಹೋಗಬೇಕಾಗಿಬರುತ್ತದೆಂದು ಆಕೆ ಅದನ್ನು ನಿರಾಕರಿಸಿದ್ದಳು. ತನ್ನ ಅಕ್ಕ ಶಾಂತಳಿಗೆ ಈ ವರ ಸರಿ ಹೋಗಬಹುದೆಂದು ಪ್ರಯತ್ನಿಸಿದಳು ಶರ್ಮಿಲಾ. ಲಾಯರ್ ಶ್ರೀನಿವಾಸ್ ರಾವ್ ಅವರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ರಾಜಮ್ಮ ಹಾಗೂ ಆಕೆಯ ಮಗ ರಂಗಣ್ಣನನ್ನು ವಿಚಾರಿಸಿದ್ದಳು. ತನಗೆ ಕೆಟ್ಟದ್ದನ್ನು ಬಯಸಿದ್ದ ಅಕ್ಕನಿಗೆ ತಾನೇ ಒಳ್ಳೆ ವರನನ್ನು ಗೊತ್ತು ಮಾಡಿ ಮದುವೆಯಾಗುವಂತೆ ಮಾಡಿದಳು. ತಂದೆ-ತಾಯಿಯನ್ನು, ತಂಗಿಯನ್ನೂ ಅಲ್ಲಿಗೆ ಕರೆಸಿಕೊಂಡು ರಂಗಣ್ಣನ ಜೊತೆಗೆ ಸೇರಿ ಹಾಸ್ಟೆಲ್ ನ ಅಡುಗೆ ಕೆಲಸವನ್ನು ನೋಡಿಕೊಳ್ಳುವಂತೆ ಜೀವನಕ್ಕೊಂದು ದಾರಿ ಮಾಡಿಕೊಟ್ಟಳು.
ಇತ್ತ ಸಾವಿತ್ರಮ್ಮ ಹಾಗೂ ಆಕೆಯ ಮಕ್ಕಳಾದ ಸುಧಾ, ಸುಜಾತ ಎಲ್ಲರೂ ಆಕೆ ತಿರುಗಿ ಬರುತ್ತಾಳೆಂದು ಕಾಯುತ್ತಿದ್ದರೆ, ತಂದೆ-ತಾಯಿಯ ಜೊತೆಗೆ ಶಾಂತವಾಗಿ ಜೀವನ ನಡೆಸುತ್ತಿದ್ದಳು ಶರ್ಮಿಲಾ.
ಇತ್ತ ಶಮಂತಳ ಜೀವನದಲ್ಲಿಯೂ ಪ್ರೇಮ ಪ್ರಕರಣ ನಡೆಯಿತು. ತರಕಾರಿ ತರಲು ತನ್ನ ಗೆಳೆಯನ ಮನೆಯನ್ನು ಶಮಂತಳಿಗೆ ಗೊತ್ತು ಮಾಡಿ ಕೊಟ್ಟಿದ್ದ ರಂಗಣ್ಣ. ಗೋವಿಂದ ಸಾಹುಕಾರರ ಮನೆಯ ತೋಟದ ಉಸ್ತುವಾರಿ ನೋಡಿಕೊಂಡು ತರಕಾರಿ ಮಾರುತ್ತಿದ್ದ. ಒಳ್ಳೆಯ ಕೆಲಸಗಾರನಾದರೂ.. ನೋಡಲು ಕಪ್ಪು. ತಕ್ಕಮಟ್ಟಿಗೆ ಸುಂದರಿಯಾದ ಶಮಂತ ಆತನ ಮನೆಗೆ ಹೋದಾಗ ಆತನ ತಾಯಿ ಬಕುಳಮ್ಮನ ಆತ್ಮೀಯಳಾದಳು. ಹಿಂದೆ 'ರತ್ನ' ಎಂಬ ಹುಡುಗಿಯೂ ಹೀಗಿಯೇ ಆತ್ಮೀಯವಾಗಿದ್ದರೂ.. ಬೇರೆಯವರನ್ನು ಮದುವೆಯಾಗಿದ್ದಳಾದ್ದರಿಂದ ಗೋವಿಂದ ಶಮಂತ ಕುರಿತು ತೀರಾ ಆಸೆಯಿಟ್ಟುಕೊಂಡಿರಲಿಲ್ಲ. ಆದರೆ, ಶಮಂತ ರೂಪಕ್ಕಿಂತ ಗುಣ ಮುಖ್ಯ ಎಂದು ಹೇಳಿ ಆತನನ್ನೇ ವಿವಾಹವಾಗಲು ನಿಶ್ಚಯಿಸಿದ್ದಳು. ಅವರ ವಿವಾಹವೂ ಆಯಿತು.
ಶಮಂತಳ ವಿವಾಹವಾಗಿ ಹೋದ ಮೇಲೆ ಋಣಾನುಬಂಧದಿಂದ ಅವಳ ಕೆಲಸಕ್ಕೆ ಬಂದಿದ್ದು ಲಲಿತಮ್ಮ. ಗೋವಿಂದನ ತಂದೆಯೂ ಆಕೆಯ ತಂದೆಯು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. ಆಕೆ ಸೋದರಮಾವನನ್ನೇ ಮದುವೆಯಾಗಿ ಬದುಕಿನಲ್ಲಿನ ಕಹಿಯಿಂದ ತಾಯಿಯ ಮನೆಯಲ್ಲಿಯೇ ಇದ್ದಳು. ತಮ್ಮ ವಿಜಯ್. ಆಕೆಗೆ ಸಿಕ್ಕ ಶಿಕ್ಷಕಿಯ ಹುದ್ದೆಗೆ ಅವನೂ ಹಂಬಲಿಸಿದ್ದ. ಆದರೆ, ಅದು ಸಿಕ್ಕಿರಲಿಲ್ಲ.
ಶರ್ಮಿಲಾ ಹೈಸ್ಕೂಲ್ ಟೀಚರ್ ಆಗಿ ಭಡ್ತಿ ಹೊಂದಿದಳು. ಒಂದು ದಿನ ಚಿಕ್ಕಮ್ಮ ತಾನೇ ಖುದ್ದಾಗಿ ಬಂದು ಹೈಸ್ಕೂಲ್ ಮಾಸ್ಟರ್ ವರನೊಬ್ಬನನ್ನು ಸೂಚಿಸಿದ್ದರು. ಶರ್ಮಿಲಾ ತೀರಾ ಆಸಕ್ತಿ ತೋರಿಸದಿದ್ದರೂ.. ಅರವಿಂದ್ ತಾನಾಗಿಯೇ ಬಂದು ಪರಿಚಯಿಸಿಕೊಂಡು ಆಕೆಯ ಕುರಿತು ಆಸಕ್ತಿ ತೋರಿದ್ದ.
ಇತ್ತ ಪ್ರಿನ್ಸಿಪಾಲ್ ಮೇಡಂ ತನ್ನ ದತ್ತುಪುತ್ರನಂತಿದ್ದ ವೈಸ್ ಪ್ರಿನ್ಸಿಪಲ್ ಮೋಹನ್ ರಾವ್ ನನ್ನು ಮದುವೆಯಾಗಲು ಪರೋಕ್ಷವಾಗಿ ಒತ್ತಡ ಹೇರುತ್ತಿದ್ದರು. ಹಾಗಾಗದಿದ್ದರೆ ಆಕೆಯನ್ನು ಕೆಲಸದಿಂದ ತೆಗೆದು, ತಂದೆ-ತಾಯಿಗೆ ಕೊಟ್ಟ ಕೆಲಸವನ್ನೂ ಕಿತ್ತುಕೊಳ್ಳಲು ನೋಡುತ್ತಿದ್ದರು.
ಶರ್ಮಿಲಾ ಈ ಉಭಯ ಸಂಕಟದಿಂದ ಪಾರಾದದ್ದು ಹೇಗೆ..?? ಚಿಕ್ಕಮ್ಮ ತಾನಾಗಿಯೇ ತೋರಿಸಿದ ವರ ಅರವಿಂದ್ ಸ್ವಭಾವ ಹೇಗಿತ್ತು..?? ಚಿಕ್ಕಮ್ಮ ಸಾವಿತ್ರಮ್ಮ ಬದಲಾಗಿದ್ದಳೇ..?? ಶರ್ಮಿಲಾ ಬದುಕಿನಲ್ಲಿ ಅಪೂರ್ವ ಬಳುವಳಿ ದೊರೆತದ್ದು ಹೇಗೆ..?? ಶಾಂತ ಹಾಗೂ ಶಮಂತರ ಬದುಕು ಶರ್ಮಿಲಾ ಮೇಲೆ ಪ್ರಭಾವವೇನಾದರೂ ಬೀರಿತೇ..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಅಪೂರ್ವ ಬಳುವಳಿ' ಕಾದಂಬರಿಯನ್ನು.
ಸಾವಿತ್ರಮ್ಮ ಹಾಗೂ ಸೋಮಪ್ಪನಂತೆ ತಮ್ಮ ಸಂಬಂಧಿಕರ ಮಕ್ಕಳನ್ನು ಕೀಳಾಗಿ ಕಾಣುತ್ತಾ.. ತಮಗೆ ಮಾತ್ರ ಒಳ್ಳೆಯದಾಗುವಂತೆ ನೋಡಿಕೊಳ್ಳುತ್ತಾ.. ಅವರಿಗೆ ಕೆಟ್ಟದ್ದನ್ನು ಮಾಡಲು ಹೊರಟವರ ಮಕ್ಕಳ ಬದುಕು ಏನಾಗುತ್ತದೆ ಎಂಬುದರ ನಿದರ್ಶನ ಇಲ್ಲಿದೆ.
ಪ್ರಿನ್ಸಿಪಾಲ್ ಮೇಡಂ ನಂತಹಾ ಗೋಮುಖ ವ್ಯಾಘ್ರದಂತಹವರ ಚಿತ್ರಣವೂ ಸಿಗುತ್ತದೆ. ಶಿಕ್ಷಕಿಯೊಬ್ಬಳು ಹೀಗೂ ಇರುತ್ತಾಳಾ ಎಂದೆನಿಸುತ್ತದೆ. ಇಲ್ಲಿನ ಬೋರ್ಡಿಂಗ್ ನಲ್ಲಿ ಬೆಳೆಯುವ ದತ್ತು ಮಕ್ಕಳ ಸ್ಥಿತಿಯನ್ನು ಕೂಡ ತೆರೆದಿಟ್ಟಿದ್ದಾರೆ ಲೇಖಕಿ.
ಕೆಟ್ಟದ್ದನ್ನು ಬಯಸಿದವರಿಗೆ ಅವರ ಕರ್ಮಫಲ ದೊರೆತು.. ಒಳ್ಳೆಯದನ್ನು ಬಯಸಿದವರಿಗೆ ಒಳಿತೇ ಆಗುವ ಸಂದೇಶ ನೀಡುವ ಚಿಕ್ಕ-ಚೊಕ್ಕ ಕಾದಂಬರಿ ಇಷ್ಟವಾಯಿತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ