ಸೋಮವಾರ, ಏಪ್ರಿಲ್ 13, 2026

ಸುವರ್ಣ ಸೇತುವೆ (ಪುಸ್ತಕ ಯಾನ - 163)


ಪುಸ್ತಕದ ಶೀರ್ಷಿಕೆ : ಸುವರ್ಣ ಸೇತುವೆ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು :ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 148

ಬೆಲೆ : 110 ರೂ.


1975 ರಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಲೇಖಕಿಯೊಬ್ಬರ ಹುಟ್ಟಿಗೆ ಕಾರಣವಾದ ಕಾದಂಬರಿಗೆ 'ಸುವರ್ಣ ಸೇತುವೆ'. ಎಚ್‍. ಜಿ. ರಾಧಾದೇವಿಯವರ ಹಾಗೂ ಓದುಗರ ನಡುವೆ ಬೆಸುಗೆಯಾದ ಸುವರ್ಣ ಸೇತುವೆಯೂ ಹೌದು ಎಂದರೆ ತಪ್ಪಾಗಲಾರದು. ಮೊದಲ ಅಭಿಮಾನಿಯ ಜೊತೆಗೆ ಶುರುವಾದ ಪತ್ರಮೈತ್ರಿ ಸ್ನೇಹವಾಗಿ, ಪ್ರೇಮವಾಗಿ, ವಿವಾಹದ ಮೂಲಕ ಜೊತೆಯಾದರು. ಆಗ ಪ್ರಜಾಮತ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಗುತ್ತಿದ್ದ ಕಾದಂಬರಿ ವಿಷ್ಣುವರ್ಧನ್ ಹಾಗೂ ಆರತಿ ಅಭಿನಯದ ಚಲನಚಿತ್ರವೂ ಆಗಿ ಸಾಕಷ್ಟು ಜನಪ್ರಿಯವಾಗಿದೆ. ಎಂಟು ವಾರಗಳ ಧಾರಾವಾಹಿ ಪ್ರಕಟವಾಗುವಷ್ಟರಲ್ಲಿ ಸಿನಿಮಾ ನಿರ್ಮಾಪಕರು ಹುಡುಕಿಕೊಂಡು ಬಂದದ್ದು ಸಹಾ ವಿಶೇಷವೇ..


ಮಾಧ್ಯಮಿಕ ಶಾಲಾ ಅಧ್ಯಾಪಕಿಯಾಗಿದ್ದ ಸರೋಜಿನಿ ಹಾಗೂ ರಾಜಗೋಪಾಲರ ಮೊದಲ ಭೇಟಿ ಅಷ್ಟೇನೂ ಆತ್ಮೀಯವಾಗಿರಲಿಲ್ಲ, ಹಾರ್ದಿಕವೂ ಆಗಿರಲಿಲ್ಲ. ಆ ಊರಿನಲ್ಲಿಯೇ ಶ್ರೀಮಂತರಾಗಿದ್ದ.. ನಾಲ್ಕು ಊದುಬತ್ತಿ ಕಾರ್ಖಾನೆಗಳು ಇದ್ದ ಜಯರಾಯರ ಮಗನಾಗಿದ್ದ ಆತ ದೇಶ-ವಿದೇಶಗಳಲ್ಲಿ ಡಿಗ್ರಿಗಳನ್ನು ತೆಗೆದುಕೊಂಡು ಎಂ.ಎ, ಎಂ.ಕಾಂ ಮಾಡಿಕೊಂಡು ಬಂದಿದ್ದರೂ ಸಹಾ ಅಧ್ಯಾಪಕಿಯೊಬ್ಬರ ಮನೆಗೆ ತಾನಾಗಿಯೇ ಬಂದದ್ದಕ್ಕೂ ಒಂದು ಕಾರಣವಿತ್ತು. ಅದಕ್ಕೆಲ್ಲಾ ಕಾರಣ ಆತನ ಮುದ್ದಿನ ತಂಗಿ ಚಂಪಾರಾಣಿ. 


ಅಷ್ಟೆಲ್ಲ ಗತ್ತು-ಗೈರತ್ತನ್ನು ಬಿಟ್ಟು ಆತ ಚಂಪಾಳ ಬಗೆಗೆ ಮಾತನಾಡಲು ಬಂದಿದ್ದ. ಚಂಪಾಳ ವರ್ತನೆ ಎಲ್ಲಾ ಹುಡುಗಿಯರಂತಿರಲಿಲ್ಲ. ಶ್ರೀಮಂತಿಕೆಯ ಗತ್ತು ಅವಳಿಗೆ ರತ್ತಗತವಾಗಿಯೇ ಬಂದಿತ್ತು. ಮನೆಯಲ್ಲಿನ ಅತಿಮುದ್ದು ಶಾಲೆಯಲ್ಲಿ ಅವಳ ಉದ್ದಟನಗಳಿಗೆ ಕಾರಣವಾಗಿತ್ತು. ಹಾಗಾಗಿ ಬಹಳ ಸಾರಿ ಸರೋಜಿನಿ ಆಕೆಯ ಮನೆಯಿಂದ ಯಾರಾದರೂ ಬರಬೇಕೆಂದು ಕರೆ ಕಳುಹಿಸಿದ್ದರು. 


ರಾಜಗೋಪಾಲ್ ಬಂದದ್ದು ಆಕೆ ತಪ್ಪು ಮಾಡುವುದಿಲ್ಲ ಎಂದು ಹೇಳುವುದಕ್ಕಲ್ಲ. ಬದಲಾಗಿ, ಚಂಪಾಳನ್ನು ಎಲ್ಲಾ ಮಕ್ಕಳಂತೆಯೇ ಕಾಣದೆ, ಆಕೆಯನ್ನು ವಿಶೇಷವಾಗಿ ಕಾಣುವುದಕ್ಕಾಗಿ ಹೇಳಲು. ಶ್ರೀಮಂತಿಕೆಯ ಪರದೆ ಕಳಚಿ ಕೆಳಗಿಳಿಯಲು ಆತ ಒಪ್ಪಿರಲಿಲ್ಲ. ಈಕೆಯು ತನ್ನ ಸ್ವಾಭಿಮಾನವನ್ನು ಬಿಟ್ಟು ಕೆಳಗಿಳಿಯಲು ಸಿದ್ಧಳಿರಲಿಲ್ಲ. 


ಶ್ರೀಮಂತರ ಅದರಲ್ಲೂ.. ಮನುಷ್ಯನ ಸ್ವಾರ್ಥ ಎಷ್ಟು ಕೀಳು ಮಟ್ಟಕ್ಕಿಳಿಯಬಹುದೇ..?? ಮಗುವನ್ನು ಮುದ್ದು ಮಾಡುವುದಕ್ಕಾದರೂ ಒಂದು ಇತಿಮಿತಿ ಬೇಡವೇ ಎಂದು ಯೋಚಿಸುತ್ತಿದ್ದಳು. ರಾಜಗೋಪಾಲ್ ವರ್ತನೆಯಿಂದ ಆಕೆ ವಿಚಲಿತಳಾಗಿದ್ದಳು. ಆತನಿಗೆ ಒಂದು ರೀತಿಯಲ್ಲಿ ಅವಮಾನವಾಗಿತ್ತು. ಮನಸ್ಸು ಇದರಿಂದ ಉಂಟಾಗುವ ಮುಂದಿನ ಪರಿಣಾಮಗಳನ್ನು ನೆನಪಿಸಿಕೊಳ್ಳುತ್ತಿತ್ತು. 


ಸರೋಜಿನಿಗೆ ತಾಯಿ ಇರಲಿಲ್ಲ. ತಂಗಿ ವಿಜಯ, ಇಬ್ಬರು ತಮ್ಮಂದಿರು ಭರತ-ಶತ್ರುಜ್ಞ. ತಂದೆಯದ್ದು ಖಾಸಗಿ ಎಲೆಕ್ಟ್ರಿಕ್ ವರ್ಕ್ ಶಾಪಿನಲ್ಲಿ ದುಡಿಮೆ. ಈಕೆಯ ದುಡಿಮೆ ಮನೆಗೆ ಬಹಳ ಅಗತ್ಯವಾಗಿತ್ತು. ಮದುವೆಯ ವಯಸ್ಸಾಗಿದ್ದರೂ.. ಆಕೆಗೆ ಈಗಲೇ ವಿವಾಹವಾಗಲು ಮನಸ್ಸಿರಲಿಲ್ಲ. ತಂಗಿ ಹಾಗೂ ತಮ್ಮಂದಿರ ಭವಿಷ್ಯ ರೂಪಿಸಲು ಪಣತೊಟ್ಟಿದ್ದವಳಂತಿದ್ದಳು. ಹಾಗೆಂದು, ವಿರಾಗಿಣಿಯಂತಿರಲಿಲ್ಲ. ರಾಜಗೋಪಾಲ್ ಜೊತೆಗೆ ನಡೆದ ತಿಕ್ಕಾಟದಿಂದ ಅವಳ ಹುದ್ದೆಗೂ ಕುತ್ತು ಬರಬಹುದಿತ್ತು. ಆದರೆ, ಹಾಗಾಗದೇ.. ಚಂಪಾಳ ತರಗತಿಯ ಶಿಕ್ಷಕಿಯಾಗಿದ್ದ ಇವಳ ಸ್ಥಾನ ಬದಲಾಗಿತ್ತು. 


ಚಂಪಾಳ ಶಿಕ್ಷಕಿಯಾಗಿ ಬಂದದ್ದು ಶಾಂತಲಾ. ನಂತರ ಚಂಪಾ ಹಾಗೂ ಸರೋಜಿನಿಗೆ ನೇರ ಮುಖಾಮುಖಿಯೇನೂ ಆಗಲಿಲ್ಲ. ಒಮ್ಮೆ ಚಂಪಾಳ ಹುಟ್ಟುಹಬ್ಬಕ್ಕಾಗಿ ಅವಳ ಮನೆಗೆ ಹೋಗಬೇಕಾಗಿ ಬಂದಾಗ ಅಲ್ಲಿ ಎದುರಾದದ್ದು ರಾಜಗೋಪಾಲ್. ಚಂಪಾಳ ತಂದೆ ಜಯರಾಯರು ಬಂದು ಆತ್ಮೀಯವಾಗಿ ಕರೆದಿದ್ದರಿಂದ ಹಾಗೂ ಹೆಡ್ ಮೇಡಂ ಹೇಳಿದ್ದನ್ನು ನಿರಾಕರಿಸಲಾಗದೇ ಸರೋಜಿನಿ ಅಲ್ಲಿಗೆ ಹೋಗಿದ್ದರು. ಆತ ಅಂದಿನ ಘಟನೆಯನ್ನೇ ಮುಂದಿಟ್ಟುಕೊಂಡು ಸರೋಜಿನಿಯನ್ನು ಕಟಕಿಯಾಡುತ್ತಿದ್ದ. 


ಶಾಂತಲಾ ಚಂಪಾಳ ಮನೆಯ ಆಳು ಎಂಬಂತೆ ನಡೆದುಕೊಳ್ಳುತ್ತಿದ್ದದ್ದು ಸರೋಜಿನಿಗೆ ಅಸಮಾಧಾನವಾಗಿತ್ತು. ಆದರೆ ತಾನು ಆ ಕೆಲಸ ಮಾಡಲಿಲ್ಲ ಎಂಬ ಸಮಾಧಾನ ಅವಳಲ್ಲಿತ್ತು. ಅಲ್ಲದೆ, ತಾನು ಆ ಸ್ಥಾನದಲ್ಲಿ ಇದ್ದಿದ್ದರೆ..! ಎಂದೂ ಆಲೋಚಿಸಿ ಸುಮ್ಮನಾಗಿದ್ದಳು.


ಜಯರಾಯರು ಹಾಗೂ ಅವರ ಕುಟುಂಬದವರನ್ನು ಸನ್ಮಾನಿಸಲು ಶಾಲೆಯ ಕಡೆಯಿಂದ ನಡೆದ ಸಮಾರಂಭದಲ್ಲಿ ಸರೋಜಿನಿಯ ನಟನೆ, ಗಾಯನ ಹಾಗೂ ವೀಣಾವಾದನದ ಪ್ರತಿಭೆ ರಾಜಗೋಪಾಲನಿಗೆ ಪರಿಚಯವಾಗಿತ್ತು. ಅದಾದ ನಂತರ ಸರಸಿ ಸುಗಂಧಿ ಊದುಬತ್ತಿ ಕಾರ್ಖಾನೆಯ ರಜತೋತ್ಸವದ ಪ್ರಯುಕ್ತ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಆ ಸ್ಪರ್ಧೆಯಲ್ಲಿ ಭಾಗವಹಿಸಿ ಲೇಖನ ಹಾಗೂ ಚಿತ್ರಕಲೆಯಲ್ಲಿಯೂ ಸರೋಜಾದೇವಿ ಎಂಬ ಹೆಸರಿನಿಂದ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಳು. 


ಆದರೆ, ಆಕೆಯ ವೈಯಕ್ತಿಕ ಬದುಕು ಅಷ್ಟು ಸುಲಭವಾಗಿರಲಿಲ್ಲ. ಸರೋಜಿನಿ ಮದುವೆಯಾಗಲು ಒಪ್ಪದ ಕಾರಣಕ್ಕಾಗಿ ಆಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿ ಒಪ್ಪಿಸುವ ತಂತ್ರಕ್ಕಾಗಿ ಆಕೆಯ ತಂದೆ ಬೆಂಗಳೂರಿಗೆ ಹೊರಟರು. ಸುರಕ್ಷತೆಯ ದೃಷ್ಟಿಯಿಂದ ವಟಾರದ ಮನೆಗಳ ನಡುವೆ ಉಳಿದರೆ ಕ್ಷೇಮವೆಂದು ತನ್ನ ತಂಗಿ-ತಮ್ಮಂದಿರೊಡನೆ ಅಲ್ಲಿ ಉಳಿದಳು ಸರೋಜಿನಿ. ಆದರೆ, ಅಲ್ಲಿ ಲಕ್ಷ್ಮಮ್ಮನಂತಹಾ ಜೋರು ಬಾಯಿಯ ಹೆಂಗಸು ಆಕೆಯ ಮನೆಯಲ್ಲಿನ ಕುಂದು-ಕೊರತೆಗಳನ್ನು ಬಿಟ್ಟು ಬೇರೆಯವರ ಮನೆಯ ವಿಚಾರಗಳನ್ನು ಆಡಿಕೊಳ್ಳುವಂತೆ ಸರೋಜಿನಿಯ ವಿಚಾರಕ್ಕೂ ಬಂದಾಗ ಆಕೆ ಮಾತಿನಿಂದಲೇ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಳು. ಆದರೆ, ಅಲ್ಲಿ ಆಕೆಯ ಪಾಲಿಗೆ ಮುಳ್ಳಾದದ್ದು ಸೋಮನಾಥ. ಈಕೆಯ ಸ್ವತಂತ್ರ ಪ್ರವೃತ್ತಿಯನ್ನು ತಪ್ಪಾಗಿ ತಿಳಿದು ಸಹಾಯ ಮಾಡುವ ನೆಪದಲ್ಲಿ ಸಲುಗೆ ತೋರಲು ಹೋಗಿ.. ತನ್ನ ಹೆಂಡತಿ ಊರಿಗೆ ಹೋಗಿದ್ದ ದಿನಗಳ ಒಂಟಿತನವನ್ನು ಕಳೆಯಲು ಸರೋಜಿನಿಯನ್ನು ಬೇರೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಯತ್ನಿಸಿದ. ಆದರೆ, ಆತನಿಗೆ ತಕ್ಕ ಪಾಠವನ್ನು ಕಲಿಸಿದ್ದಳು ಸರೋಜಿನಿ.


ವಠಾರದಿಂದ ಮತ್ತೆ ಮನೆಗೆ ವಾಪಸ್ ಆಗಿದ್ದರು ಎಲ್ಲರೂ. ಆದರೆ, ಆಕೆಯ ತಂಗಿ ವಿಜಯಳ ಮನಸ್ಥಿತಿ, ನಡವಳಿಕೆ ಬದಲಾಗಿತ್ತು. ಅಕ್ಕನ ಜೊತೆಗೂ ಅವಳು ನಡೆದುಕೊಳ್ಳುತ್ತಿದ್ದ ರೀತಿ ಬೇರೆಯದ್ದೇ ಆಗಿತ್ತು.


ಶಾಲೆಯಿಂದ ಶೈಕ್ಷಣಿಕ ಪ್ರವಾಸ ಹೊರಟಾಗ ಸರೋಜಿನಿಯೂ ಹೊರಟಿದ್ದಳು. ಚಂಪಾ ತಾನು ಹೋಗಬೇಕೆಂದು ಹಠ ಹಿಡಿದಿದ್ದರಿಂದ ಆಕೆಯನ್ನು ನೋಡಿಕೊಳ್ಳಲು ನೇಮಿಸಿದ್ದ ಮಾದಮ್ಮನೊಂದಿಗೆ ಹಲವು ರೀತಿಯ ನಿಯಮಗಳನ್ನು ಅವಳಿಗಾಗಿ ಸಡಿಲಗೊಳಿಸಿ.. ಶ್ರೀಮಂತಿಕೆಯ ವಾತಾವರಣದಲ್ಲಿ ಕರೆದುಕೊಂಡು ಹೊರಟಿದ್ದರು. ಆದರೆ, ಅಂದು ನಡೆದ ಅವಘಡ ಚಂಪಾಳ ಬದುಕನ್ನು ಬದಲಿಸುವುದರ ಜೊತೆಗೆ ಸರೋಜಿನಿಯ ಬದುಕನ್ನೂ ಬದಲಿಸಿತು.


ಮಾದಮ್ಮನೂ ಹಿಂಜರಿದಾಗ ಅಪಘಾತವಾಗಿದ ಚಂಪಾಳಿಗೆ ರಕ್ತ ನೀಡಿದ್ದು ಕಾಪಾಡಿದ್ದು ಸರೋಜಿನಿ. ಅವಳ ಪ್ರಾಣ ಉಳಿಸಿದ್ದು ಅಲ್ಲಿಯ ಹಳ್ಳಿಯಲ್ಲಿದ್ದ ಡಾಕ್ಟರ್ ಜಗದೀಶ್. ಅಗತ್ಯಕ್ಕಿಂತ ಹೆಚ್ಚಿನ ರಕ್ತದಾನವನ್ನೇ ಮಾಡಿದ್ದಳು ಸರೋಜಿನಿ. ತುರ್ತು ಪರಿಸ್ಥಿತಿಯೇ ಹಾಗಿತ್ತು. 


ಧ್ಯೇಯಗಳನ್ನು ಇಟ್ಟುಕೊಂಡು ಜನ ಸೇವೆ ಮಾಡುತ್ತಿದ್ದ ಡಾಕ್ಟರ್ ಜಗದೀಶ್ ಸರೋಜಿನಿಯ ಆರೋಗ್ಯವನ್ನು ವಿಚಾರಿಸಲು ಬರುತ್ತಿದ್ದರು. ಒಳ್ಳೆಯ ಸ್ನೇಹಿತರೂ ಆದರು. ಆಕೆಯ ಮುಂದೆ ವಿವಾಹದ ನಿವೇದನೆಯನ್ನು ಮಾಡಿದರಾದರೂ.. ಸರೋಜಿನಿ ಅದಕ್ಕೆ ಒಪ್ಪಲಿಲ್ಲ. ವಿಜಯಳ ಮನಸ್ಸು ತಿಳಿದ ಸರೋಜಿನಿ ವಿಚಲಿತಳಾಗಿದ್ದಳು. 


ಡಾಕ್ಟರ್ ಜಗದೀಶ್ ಅವರನ್ನು ಸರೋಜಿನಿ ಒಪ್ಪದಿರಲು ಕಾರಣವೇನು..?? ತನ್ನ ತಂಗಿ ವಿಜಯಳ ನಡವಳಿಕೆಯ ಕುರಿತು ಸರೋಜಿನಿಗೆ ತಿಳಿದುಬಂದ ಕಾರಣವೇನು..?? ಸರೋಜಿನಿಯ ಹದಗೆಟ್ಟ ಆರೋಗ್ಯ ಸ್ಥಿತಿ ಆಕೆಯ ಮೇಲೆ ಮಾಡಿದ ಪರಿಣಾಮಗಳೇನು..?? ಚಂಪಾಳ ಪರಿಸ್ಥಿತಿ ಏನಾಯಿತು..?? ಸರೋಜಿನಿಯ ತ್ಯಾಗ ಹಾಗೂ ಸಹಾಯ ಮನೋಭಾವಕ್ಕೆ ರಾಜಗೋಪಾಲನ ಮನಸ್ಸು ಬದಲಾಯಿತೇ..?? ಆತ ಇದಕ್ಕೆ ಸ್ಪಂದಿಸಿದ ಪರಿ ಹೇಗೆ..?? ಜಗದೀಶ್ ರವರು ಈ ಮನೆಗೆ ಸಂಬಂಧವೇ ಆದರು. ಅದು ಯಾವ ರೀತಿಯಲ್ಲಿ..?? ಸರೋಜಿನಿಯ ಬದುಕಿಗೆ ಚಂಪಾ ಸುವರ್ಣ ಸೇತುವೆಯಾದದ್ದು ಹೇಗೆ..?? ತಿಳಿಯಲು ಓದಿ ಹೆಚ್.ಜಿ ರಾಧಾದೇವಿಯವರ 'ಸುವರ್ಣ ಸೇತುವೆ' ಕಾದಂಬರಿಯನ್ನು.


ಕೆಲವರನ್ನು ಕೆಲ ಸಂದರ್ಭದಲ್ಲಿ ನೋಡಿ ಇವರು ಒಳ್ಳೆಯವರು ಅಥವಾ ಕೆಟ್ಟವರು ಎಂದು ನಿರ್ಧರಿಸುವುದು ತಪ್ಪಾಗುತ್ತದೆ. ಆಯಾ ವ್ಯಕ್ತಿಗಳ ವರ್ತನೆ ಅಲ್ಲಿಯ ಸಂದರ್ಭಕ್ಕೆ ತಕ್ಕಂತೆ ಇರುತ್ತದೆ. ಮೊದಲ ಬಾರಿ ನೋಡಿದಾಗ ಅವರ ಮೇಲೆ ನೆಗೆಟಿವ್ ಆದ ಅಭಿಪ್ರಾಯ ಮೂಡಿದರೆ.. ಅದರಿಂದ ಮುಂಬರುವ ಭೇಟಿಗಳೆಲ್ಲವೂ ಅದೆಷ್ಟು ಪರಿಣಾಮ ಬೀರುತ್ತದೆ ಎನ್ನುವುದು ಅರಿವಾಗುತ್ತದೆ. 


ತನ್ನತನವನ್ನು ಬಿಟ್ಟುಕೊಡದ ಸರೋಜಿನಿ ಬದುಕಿನಲ್ಲಿ ಸೋತೆ ಹೋದಳೇನೋ ಎನ್ನುವಷ್ಟರಲ್ಲಿ ಆಕೆಯ ಪಾಲಿಗೆ ಒದಗಿದವರು ಆಕೆಗೆ ಕೊಡುವ ಗೌರವ ಇಷ್ಟವಾಯಿತು. 


ತಾನು, ತನ್ನವರು ಎಂದು ಒಂದು ಕಡೆಯಿಂದ ಮಾತ್ರವೇ ಪ್ರೀತಿ ಹುಟ್ಟಿದರೆ ಸಾಲದು. ಆ ಪ್ರೀತಿ-ಕಾಳಜಿ ಎರಡೂ ಕಡೆಯಿಂದ ಬಂದಾಗ ಮಾತ್ರವೇ ಆ ಸಂಬಂಧಕ್ಕೊಂದು ಬೆಲೆ. 


ಮಧ್ಯಮ ವರ್ಗದ ಬದುಕಿನಲ್ಲಿ ಸ್ವಾಭಿಮಾನಿ ಅವಿವಾಹಿತ ಹೆಣ್ಣಿನ ಪರಿಸ್ಥಿತಿಯನ್ನು ಇದು ತೋರಿಸಿದರೂ.. ಶಿಕ್ಷಕಿಯಾಗಿ ಆಕೆ ತೋರುವ ಸಂಯಮ, ಪರಿಸ್ಥಿತಿಯನ್ನು ಅರಿತು ನಡೆಯುವ ಜಾಣ್ಮೆ, ಸಾಧ್ಯವಾದಷ್ಟು ಪರಿಸ್ಥಿತಿಯನ್ನು ತಿಳಿಯಾಗಿಸಲು ಪ್ರಯತ್ನಿಸಿದರೂ ಸಾಧ್ಯವಾಗದಾಗ.. ಸತ್ಯವನ್ನು ಇದ್ದಂತೆಯೇ ರಾಚುವ ಹಾಗೂ ಧೈರ್ಯವಾಗಿ ಮುನ್ನುಗ್ಗುವ ಗುಣ ಪ್ರೇರೇಪಿಸುವಂತಿದೆ. ಬಹಳ ಚೆಂದದ ಕಾದಂಬರಿಯ ಓದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ