ಸೋಮವಾರ, ಏಪ್ರಿಲ್ 13, 2026

ಸಂಜೆ ಅರಳಿದ ಹೂವು (ಪುಸ್ತಕ ಯಾನ - 167)


ಪುಸ್ತಕದ ಶೀರ್ಷಿಕೆ : ಸಂಜೆ ಅರಳಿದ ಹೂವು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 1996

ಎರಡನೇ ಮುದ್ರಣ : 2016 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 164

ಬೆಲೆ : 110 ರೂ.


ತಂದೆ-ತಾಯಿಯ ಬಾಳ ಸಂಜೆಯಲ್ಲಿ ಅಂದರೆ ತಡವಾಗಿ ಹುಟ್ಟಿದ ಮಕ್ಕಳ ಭವಿಷ್ಯ ಬೇರೆ ರೀತಿಯಾಗಿರುತ್ತದೆ. ಒಡಹುಟ್ಟಿದವರ ಸಂಸಾರವೇ ಅವರವರಿಗಾಗಿರುವಾಗ, ತಂದೆ-ತಾಯಿಯರು ವೃದ್ಧಾಪ್ಯದ ಸ್ಥಿತಿಯಲ್ಲಿರುವಾಗ.. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುವ ಅಥವಾ ಮತ್ತೊಬ್ಬರ ಕೈ ಕೆಳಗೆ ಹೋಗುವಂತಹಾ ಪರಿಸ್ಥಿತಿ. ಅಂತಹಾ ಪರಿಸ್ಥಿತಿಯಲ್ಲಿಯೂ.. ತಮ್ಮ ಸ್ವಾಭಿಮಾನವನ್ನು ಬಿಡದೆ,ಕೆಚ್ಚೆದೆಯಿಂದ ಬದುಕುವ ಛಲಗಾತಿಯ ಕತೆಯನ್ನು ಹೊಂದಿರುವ ಕಾದಂಬರಿ ಹೆಚ್.ಜಿ. ರಾಧಾದೇವಿಯವರ 'ಸಂಜೆ ಅರಳಿದ ಹೂವು'.


ವಿಶ್ವನಾಥ ಶಾಸ್ತ್ರಿಗಳ ಹೆಂಡತಿಯ ವೈದಿಕದಲ್ಲಿ ಮಾತ್ರವೇ ಈಗ ಮಕ್ಕಳು ತಂದೆಯನ್ನು ನೋಡಲು ಒಟ್ಟಾಗುತ್ತಿದ್ದದ್ದು. ವಿಶ್ವನಾಥ ಶಾಸ್ತ್ರಿಗಳಿಗೆ 8 ಜನ ಮಕ್ಕಳು. ಅದರಲ್ಲಿ 6 ಜನ ಬದುಕಿದ್ದರು. ಮೂವರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು. ಬೇರೆಲ್ಲಾ ಮಕ್ಕಳ ವಿವಾಹವಾಗಿದ್ದರೂ.. ಕೊನೆಯ ಮಗಳಾದ ಲಲಿತಳ ವಿವಾಹವಿನ್ನೂ ಬಾಕಿಯಿತ್ತು. ಲಲಿತಾಳಿಗೆ 16 ವರ್ಷವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಳು. ಈಗ ಅವಳಿಗೆ 26 ವರ್ಷ. ಲಲಿತಾಳಿಗೆ ವಿವಾಹ ಮಾಡಬೇಕೆಂಬ ಶಾಸ್ತ್ರಿಗಳ ಆಸೆ ಆಸೆಯಾಗಿಯೇ ಉಳಿದಿತ್ತು. 


ಶಾಸ್ತ್ರಿಗಳು ರಂಗನಾಥರಾಯರ ಔಟ್ ಹೌಸ್ ನಲ್ಲಿ ವಾಸವಾಗಿದ್ದರು. ಅವರ ಮನೆಯ ಪೂಜೆ ಮಾಡುತ್ತಾ ಮನೆತನದ ಪುರೋಹಿತರೂ ಆಗಿದ್ದರು. ರಂಗನಾಥರಾಯರು ಮಗನ ಮನೆ ಕಾಶಿಗೆ ಹೋಗುತ್ತಿದ್ದರಿಂದ ಅಲ್ಲಿಗೂ ಶಾಸ್ತ್ರಿಗಳನ್ನು ಪೂಜೆಗೆ ಕರೆದೊಯ್ಯಲು ನಿರ್ಧರಿಸಿದ್ದರು. ಶಾಸ್ತ್ರಿಗಳೂ ಒಪ್ಪಿಗೆ ನೀಡಿದ್ದರು. 


ಆದರೆ, ಲಲಿತಳ ಮದುವೆಯ ಜವಾಬ್ದಾರಿ ಬಾಕಿಯಿತ್ತು. ಜಮೀನು ಮಾರಿ ಬಂದ 30,000ವನ್ನು ಅವಳ ಮದುವೆಗೆಂದು ತೆಗೆದಿಟ್ಟಿದ್ದರು. ಒಂದು ವರ್ಷದೊಳಗೆ ಅವಳ ಮದುವೆ ಮಾಡುವ ಮಗನಿಗೆ ಆ ಹಣ ಹಾಗೂ ಮಗಳ ಜವಾಬ್ದಾರಿಯನ್ನು ಒಪ್ಪಿಸಲು ಸಿದ್ದವಿದ್ದರು.


ಶಾಸ್ತ್ರಿಗಳೂ ಅವಳ ಮದುವೆ ಪ್ರಯತ್ನ ಮಾಡಿದ್ದರೂ.. ಅವಳಿಗೆ ಬಂದ ಗಂಡುಗಳನ್ನೆಲ್ಲಾ ನೆಪ ಹೇಳಿ ತಪ್ಪಿಸುತ್ತಿದ್ದರು ಅಚ್ಚಮ್ಮ. ಆದರೆ, ಸ್ವಲ್ಪ ದೂರದಲ್ಲಿದ್ದ ಅನ್ಯ ಜಾತಿಯವರಾಗಿದ್ದ ಹೊನ್ನಮ್ಮ ಹೃದಯವಂತರು.

ಲಲಿತಳಿಗೆ ಅವಳ ಅಣ್ಣಂದಿರು ಮದುವೆ ಮಾಡದಿದ್ದರೆ ಅವರೇ ದಿಕ್ಕು ಎಂದು ಅವರಿಗೆ ಕೊಂಚ ಒಡವೆ ಒಪ್ಪಿಸಿ ಮಗಳ ಬದುಕನ್ನು ಹಸನಾಗಿಸಿ ಎಂದಿದ್ದರು ಶಾಸ್ತ್ರಿಗಳು.

  

ಲಲಿತಳ ದೊಡ್ಡಣ್ಣ ತನ್ನ ಬಡತನವನ್ನೇ ಬಣ್ಣಿಸಿ ಗಂಟು ಕಟ್ಟಿಕೊಂಡು ಹೋಗುತ್ತಿದ್ದ. ಲಲಿತಳ ಎರಡನೇ ಅಣ್ಣ ಉಮೇಶ ಲೆಕ್ಚರರ್ ಆಗಿದ್ದವನು. ತಂದೆ-ತಂಗಿ ಯಾರನ್ನೂ ವಿಶೇಷವಾಗಿ ಹಚ್ಚಿಕೊಂಡಿರಲಿಲ್ಲ. ಅವನ ಹೆಂಡತಿ ಹಣದ ಆಸೆಗಾಗಿ ಒಪ್ಪಿದರೂ.. ಆತನೇ ನಿರಾಕರಿಸಿದ.


ಲಲಿತಳ ಮೂರನೇ ಅಣ್ಣ ಗಿರೀಶ ಅವನು ಹಾಗೂ ಆತನ ಹೆಂಡತಿ ಮೈಸೂರಿನಲ್ಲಿ ವಾಸವಾಗಿದ್ದರು. ಇದ್ದಿದರಲ್ಲಿ ಅವನೇ ಸ್ವಲ್ಪ ವಾಸಿ. ಆತನ ಮನೆಗೆ ಕರೆತಂದನಾದರೂ.. ಬ್ಯಾಂಕ್ ಉದ್ಯೋಗಸ್ಥೆಯಾಗಿದ್ದ ಅವನ ಹೆಂಡತಿ ಲಲಿತಾಳನ್ನು ಮನೆಕೆಲಸದವಳಂತೆ ಮಾಡಿಕೊಳ್ಳಲು ತೀರ್ಮಾನಿಸಿದ್ದಳು. ಆದರೆ, ಲಲಿತಾಳ ನೇರವಂತಿಕೆ, ದಿಟ್ಟತನದೆದುರು ಅವಳ ಆಟ ಸಾಗಲಿಲ್ಲ. 


ಮೊದಲಿಗೆ ತಂಗಿಯನ್ನು ಚೆನ್ನಾಗಿಯೇ ನೋಡಿಕೊಂಡ. ಹೆಂಡತಿಗೆ ಪ್ರಿಯನಾಗಲು ಹೋಗಿ ದ್ವಂದ್ವದಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡ. ಪಾರ್ವತಿ ಹತ್ತಿರದಲ್ಲೇ ಇದ್ದ ತಾಯಿ ಗಂಗಮ್ಮನ ಮನೆಗೆ ಆಗಾಗ ಹೋಗುತ್ತಿದ್ದಳು. ಅವಳ ತಂಗಿ ಭವಾನಿಯನ್ನು ನೋಡಲು ಗಂಡು ಬರುತ್ತಾನೆಂಬ ಕಾರಣಕ್ಕೆ ಲಲಿತಾಳನ್ನು ತಿಂಡಿ ಮಾಡಲು ಕಳುಹಿಸಲು ಹೇಳಿದರು. ಲಲಿತ ಮೊದಲಿಗೆ ಒಪ್ಪಲಿಲ್ಲ. ನಂತರ, ಅಣ್ಣನ ಒತ್ತಾಯಕ್ಕೆ ಅದೊಂದೇ ಬಾರಿ ಎಂದು ಒಪ್ಪುತ್ತಾಳೆ.


ಅಲ್ಲಿ ಹೋದಾಗ ಶ್ರೀಮಂತಿಕೆಯ ದರ್ಪ ತೋರಲು ಹೋದ ಗಂಗಮ್ಮನಿಗೂ ತಕ್ಕ ಪ್ರತ್ಯುತ್ತರ ನೀಡುತ್ತಾಳೆ. ಆಕೆಯ ಮಗ ಸೋಮನಾಥನ ಹೆಣ್ಣಿನ ಕುರಿತ ಚಪಲಕ್ಕೂ ಬಲಿಯಾಗದೇ, ಆತನನ್ನು ಅಂತರದಲ್ಲಿಯೇ ಇಡುತ್ತಾಳೆ.


ಪಕ್ಕದ ಮನೆಯ ಸಮವಯಸ್ಕಳಾದ ಲತಾ ಪರಿಚಯವೂ ಆಗುತ್ತದೆ. ಲತಾಳಿಗೆ ಮಲತಾಯಿ ಗೋದಾವರಿ ಬಾಯಿ ಶಿಕ್ಷಕಿ, ತಂದೆ ಹಾಗೂ ಇಬ್ಬರು ಮಲ ತಮ್ಮಂದಿರು. ಓದಿನಲ್ಲಿ ಆಸಕ್ತಿ ಇಲ್ಲದರಿಂದ ಓದಲಿಲ್ಲ. ರೂಪವೂ ಚೆನ್ನಾಗಿಲ್ಲದರಿಂದ.. ಮದುವೆಯೂ ಆಗಿರಲಿಲ್ಲ. ಮಲತಾಯಿಯ ನೂರೆಂಟು ಕಟ್ಟುಪಾಡುಗಳು. ಆದರೆ, ವಯಸ್ಸಿನ ಪ್ರಭಾವದಿಂದ ಪ್ರೀತಿ-ಪ್ರೇಮದ ಗೀಳಿತ್ತು. ಲಲಿತಾಳಿಗೆ ಜೊತೆಯಾದರೂ.. ಲತಾಳ ಚಿಕ್ಕಮ್ಮ ಹಾಗೂ ಲಲಿತಾಳ ಅತ್ತಿಗೆ ಮಾತನಾಡಿಕೊಂಡಂತೆ ಕಿರುಕುಳ ನೀಡತೊಡಗಿದ್ದರು.ಲಲಿತ ಬದಲಾಗಿ ಲತ ಸೋಮನಾಥನ ಬಲೆಗೆ ಬಿದ್ದಿದ್ದಳು. 


ತಮ್ಮ ಬಳಿಯಿಂದ ಲಲಿತ ಹೋಗಬಾರದೆಂದು..ತಮ್ಮ ಮಾತನ್ನೇ ಕೇಳಬೇಕೆಂದು ಹಿಡಿತದಲ್ಲಿಡಲು ಗಿರೀಶ ಹಾಗೂ ಆತನ ಹೆಂಡತಿ ಸೇರಿ  ಆಕೆಯ 10000ವನ್ನು ದೊಡ್ಡಣ್ಣನಿಗೆ ಕೊಟ್ಟಿದ್ದರು . ಆದರೆ, ಛಲ ಬಿಡದ ಲಲಿತ ಆತನಿಂದ ಆ ಹಣವನ್ನು ವಸೂಲಿ ಮಾಡಿಯೇ ತೀರಿದಳು. ಅದಕ್ಕೆ ಸಹಕಾರ ನೀಡಿದ್ದು ಡಾ. ವಸುಂಧರ.


ಡಾ.ವಸುಂಧರ ಗಂಗಮ್ಮನ ಮನೆಯ ಪಕ್ಕದವರು. ಲಲಿತಾ ಅಣ್ಣನ ಒತ್ತಾಯಕ್ಕೆ ಗಂಗಮ್ಮನ ಮನೆಯಲ್ಲಿ ತಿಂಡಿಗಳನ್ನು ಮಾಡಿದ್ದನ್ನು ಕಂಡು ತಮ್ಮ ಮನೆಗೂ ಆಹ್ವಾನಿಸಿದ್ದರು. ಆದರೆ, ತನ್ನ ಭವಿಷ್ಯವನ್ನು ಕೇವಲ ಅಡುಗೆಯವಳಾಗಿ ರೂಪಿಸಿಕೊಳ್ಳಲು ಇಷ್ಟವಿಲ್ಲವೆಂದಾಗ ತಮ್ಮ ಚಿಕ್ಕಪ್ಪನ ಮಗ ಚಂಧ್ರಧರನನ್ನು ವಿವಾಹ ಮಾಡಲು ಇಚ್ಛಿಸಿದರು.


ಆದರೆ, ವಸುಂಧರ ಉದ್ದೇಶ ಒಳ್ಳೆಯದಿರಲಿಲ್ಲ. ಚಂದ್ರಧರ್ ಗೆ ಅದರ ಅರಿವಿತ್ತು. ಅಕ್ಕ ತೋರಿದ ಹೆಣ್ಣನ್ನು ಮದುವೆಯಾಗಿ ಆಕೆಯ ಮನೆಯ ಊಳಿಗದಲ್ಲಿಯೇ ಇರಲು ಒಪ್ಪದ ಆತ ಲಲಿತಳಿಗೆ ಇದ್ದ ವಿಷಯವನ್ನು ತಿಳಿಸಿದ್ದ. 


ಅಷ್ಟರಲ್ಲಿ, ಅಣ್ಣನಿಂದ ದುಡ್ಡು ವಸೂಲು ಮಾಡಲು ಹೋಗಿದ್ದಾಗ ಕೇಳಿದ ಮಾತುಕತೆಯಿಂದ ವಸುಂಧರಳ ನಿಜಬಣ್ಣ ಲಲಿತಳಿಗೆ ತಿಳಿದಿತ್ತು. ಹೆಣ್ಣುಮಕ್ಕಳನ್ನು ಸಬಲರನ್ನಾಗಿಸುತ್ತೇವೆ, ದೌರ್ಜನ್ಯದಿಂದ ಮುಕ್ತಿಗೊಳಿಸುತ್ತೇವೆ ಎನ್ನುವ ಡಾಕ್ಟರ್ ವಸುಂಧರಾ ನಿಜಬಣ್ಣ ಬೇರೆಯೇ ಇದ್ದಿತು. 


ಪ್ರೀತಿ-ಪ್ರೇಮದ ಹುಚ್ಚಿಗೆ ಬಿದ್ದು ಲತಾ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಡಾ. ವಸುಂಧರ ನೆರವಿನಿಂದ ಲಲಿತ ಆಕೆಯನ್ನು ಕಾಪಾಡುತ್ತಾಳೆ. ಆದರೆ, ವಸುಂಧರಾ ಮಲತಾಯಿಗಿಂತ ಹೆಚ್ಚಿನ ಕಾಟ ಕೊಡುತ್ತಾರೆ. 


ಅಣ್ಣನ ಮನೆಯ ಋಣ ಹರಿದು ಲಲಿತ ಮನೆ ಬಿಟ್ಟು ಹೊರಟ ನಂತರ ಆತನಿಗೆ ತನ್ನ ತಪ್ಪಿನ ಅರಿವು ಚೆನ್ನಾಗಿಯೇ ಆಗಿತ್ತು. ಲಲಿತ ಹೊರಟದ್ದು  ಹೊನ್ನಮ್ಮನ ಆಶ್ರಯಕ್ಕೆ. ಲಲಿತಾಳ ತಂದೆ ಕೊಟ್ಟಿದ್ದ ಚಿನ್ನವನ್ನು ಅವಳ ಒಪ್ಪಿಗೆ ಪಡೆಸು ಅಡವಿಟ್ಟು ಅದರ ಬಂಡವಾಳದಿಂದ ಅವಳ ಪಾಲುದಾರಳನ್ನಾಗಿಸಿ ಅಂಗಡಿ ತೆರೆದಿದ್ದರು. 


ಅವರ ಪಕ್ಕದ ಮನೆಯಲ್ಲಿಯೇ ಸರೋಜಾಳ ಜೊತೆಗೆ ಇರಲು ಲಲಿತಾಳಿಗೆ ವ್ಯವಸ್ಥೆ ಮಾಡಿದ್ದರು. ಸರೋಜಾ ಕೂಡಾ 'ಸಂಜೆ ಅರಳಿದ ಹೂವು'. ಮನೆಯಲ್ಲಿನ ಕಿರುಕುಳದಿಂದ ಬೇಸತ್ತು.. ದಾಸ್ತಾನಿನ ಮಳಿಗೆಯಲ್ಲಿ ಚೀಲಕ್ಕೆ ಧಾನ್ಯ ತುಂಬುವುದು, ಬಾಯಿ ಹೊಲೆಯುವ ಕೆಲಸ ಮಾಡುತ್ತಿದ್ದಳು. ಆದರೆ, ಎಷ್ಟೋ ಜನ ಈಕೆಯನ್ನು ಶಿಕ್ಷಕಿಯೆಂದು ಭಾವಿಸಿದ್ದರು. ರೂಪ ಅಷ್ಟೇನೂ ಚೆನ್ನಾಗಿರಲಿಲ್ಲ, ಕಾಲು ಸ್ವಲ್ಪ ಕುಂಟು. ಆದರೆ, ಜೀವನದಲ್ಲಿ ಬಹಳ ಕಷ್ಟ ಕಂಡವಳು.ಸರೋಜಾಳ ಪ್ರಯಾಣದಲ್ಲಿ ಜೊತೆಯಾಗಿ.. ಲಲಿತಾ ಹಾಗೂ ಸರೋಜಾ ಜೊತೆಗೆ ಜಯಲಕ್ಷ್ಮಿಯೂ ರೂಮ್ ಮೇಟ್ ಆದಳು. 


ಹೊಲಿಗೆ ಹಾಗೂ ಅಂಗಡಿಯ ಬಾಡಿಗೆಯಿಂದ ಜೀವನ ಸರಾಗವಾಗಿ ಸಾಗುತ್ತಿತ್ತು. ಆಗ ತುಂಗಮ್ಮನ ಮಗ ಶ್ರೀಹರಿಗೆ ಆಕೆಯನ್ನು ವಿವಾಹ ಮಾಡಿಕೊಳ್ಳುವ ಪ್ರಸ್ತಾಪ ಬಂದಿತು. ಆದರೆ, ಅದು ಅವಳ ಹಣ ನೋಡಿ.


ಹಾಗೆಯೇ.. ಮತ್ತೊಂದು ಪ್ರಸ್ತಾಪ ಬಂದದ್ದು ವಿಜಯಮ್ಮನಿಂದ ತನ್ನ ಕುಂಟ ಮಗ ವೇಣುವಿಗೆ. 


ಇಬ್ಬರನ್ನೂ ಒಪ್ಪದ ಲಲಿತ ಅವರ ಬಾಳನ್ನೂ ಹಸನಾಗಿದ್ದು ಹೇಗೆ..?? 

ಸರೋಜಳ ಕಂಕಣ ಕೂಡಿ ಬರಲು ಅವಳೇ ಕಾರಣವಾಗುತ್ತಾಳೆ. ಅದು ಹೇಗೆ..?? ತುಂಗಮ್ಮ ಹಾಗೂ ವಿಜಯಮ್ಮನಿಗೆ ಬುದ್ದಿ ಕಲಿಸಿದ್ದು ಹೇಗೆ..?? ಜಯಲಕ್ಷ್ಮೀಯ ದುರಾಲೋಚನೆಯನ್ನು ಲಲಿತ ಮಟ್ಟ ಹಾಕಿದ್ದು ಹೇಗೆ..?? ಲತಾಳಿಗೆ ಬದುಕು ಕಟ್ಟಿಕೊಡಬೇಕೆನ್ನುವ ಅವಳ ಆಲೋಚನೆ ಕಾರ್ಯರೂಪಕ್ಕೆ ಬಂದದ್ದು ಹೇಗೆ..?? ಲಲಿತಾಳ ವಿವಾಹ ಏನಾಯಿತು..?? ಕೇಶವನ ಕೆಟ್ಟ ಆಲೋಚನೆಗೆ ತಡೆ ಹಾಕಿದ್ದು ಹೇಗೆ..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಸಂಜೆ ಅರಳಿದ ಹೂವು' ಕಾದಂಬರಿಯನ್ನು.


ಮುಳ್ಳುಗಳು ಹೂವುಗಳ ರಕ್ಷಣೆಗಾಗಿಯೇ ರೂಪಿತವಾಗಿರುವಂತಹವು. ಅಂತಹಾ ಮುಳ್ಳುಗಳು ಬೇರೆಯವರ ಪಾಲಿಗೆ ಮುಳ್ಳುಗಳಾದರೂ.. ಹೂವಿನ ಪಾಲಿಗೆ ಸುರಕ್ಷಾ ಕವಚವೇ. ಹೆಣ್ಣಿನ ಪಾಲಿಗೆ ಮದುವೆಯಾಗುವವರೆಗೂ ಅಂತಹ ಸುರಕ್ಷೆ ಸಿಗುವುದು ಅಪ್ಪ ಹಾಗೂ ಅಣ್ಣಂದಿರಿಂದ. ಆದರೆ, ಅದಾವುದೂ ಸಿಗದೇ ಬದುಕಿನಲ್ಲಿ ಒಂಟಿ ಹೋರಾಟ ಮಾಡಿದ ದಿಟ್ಟೆ ಲಲಿತಾಳ ಪಾತ್ರ ಬಹಳವಾಗಿ ಇಷ್ಟವಾಯಿತು. ಸ್ನೇಹಕ್ಕೆ ಬೆಲೆ ಕೊಟ್ಟು.. ತನ್ನ ಕುರಿತು ಮಾತ್ರ ಆಲೋಚಿಸಿ ಸುಮ್ಮನಾಗದೆ, ತನ್ನ ಭವಿಷ್ಯವನ್ನು ಮಾತ್ರ ರೂಪಿಸಿಕೊಳ್ಳದೆ, ತನ್ನಂತೆಯೇ 'ಸಂಜೆ ಅರಳಿದ ಹೂವು'ಗಳನ್ನು ಸುರಕ್ಷಿತವಾಗಿರಿಸಿದವಳು. 


ದುಷ್ಟಬುದ್ಧಿಯವರಿಂದ ಪಾರಾಗಿ ಬದುಕಲು ಕೇವಲ ಜಾಣ್ಮೆಯಲ್ಲದೆ, ಧೈರ್ಯವೂ ಬೇಕು. ಅದನ್ನು ನಾವಾಗಿಯೇ ಬೆಳೆಸಿಕೊಳ್ಳಬೇಕು. ತನ್ನ ವ್ಯಕ್ತಿತ್ವದ ಜೊತೆಗೆ ಇತರರ ವ್ಯಕ್ತಿತ್ವಕ್ಕೂ ಹೊಳಪು ನೀಡಿದ ಮಾದರಿ ಕಾದಂಬರಿ ಇದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ