ಪುಸ್ತಕದ ಶೀರ್ಷಿಕೆ :ಈಗಲ್ ಲೈನ್ಸ್
ಲೇಖಕರು : ರಾಜೇಶ್ ಕುಮಾರ್ ಕಲ್ಯಾ
ಪ್ರಕಾಶಕರು : ವೀರಲೋಕ ಬುಕ್ಸ್
ಪ್ರಥಮ ಮುದ್ರಣ : 2023
ಪುಟಗಳು : 184
ಬೆಲೆ : 220 ರೂ.
ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬರಹಗಳೆಂದರೆ ಎಂದೂ ಮುಗಿಯದ ಹುಚ್ಚು ಪ್ರೀತಿ ಎಂದು ಹೇಳಿಕೊಂಡಿರುವ ಲೇಖಕ ರಾಜೇಶ್ ಕಲ್ಯಾ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಲ್ಯಾ ಎಂಬ ಊರಿನವರು. ಪರಿಸರದ ಕುರಿತು ಮುಗಿಯದ ಅಧ್ಯಯನದ ಆಸಕ್ತಿ. ಇಂಜಿನಿಯರ್ ಆದ ಇವರು ವೃತ್ತಿಯ ಜೊತೆಗೆ ಓದು-ಬರಹದ ಸಾಂಗತ್ಯವನ್ನು ಅಂಟಿಸಿಕೊಂಡವರು
ಲೇಖಕರು ಬೆಳೆದ ಪರಿಸರ ಹಾಗೂ ಅವರ ಹವ್ಯಾಸಗಳು ಬರವಣಿಗೆಯಲ್ಲಿ ಮೂಡಿ ಅದರದ್ದೇ ಆದ ಛಾಪು ಮೂಡಿಸುತ್ತವೆ. ರಾಜೇಶ್ ರವರ ಈ ಕಾದಂಬರಿಯಲ್ಲಿ ನನಗೆ ಕಂಡದ್ದು ಅದೇ.. ತೇಜಸ್ವಿಯವರು ಕರೆದೊಯ್ಯುವಂತೆ.. ಪರಿಸರದ ನಡುವಿನಲ್ಲಿ ವಿಹರಿಸುತ್ತಾ ಹೋದಂತಾಯಿತು. ಇಲ್ಲಿ ನಮಗೆ ಕೇವಲ ಮನೋರಂಜನೆ ಮಾತ್ರವಲ್ಲದೇ.. ಪರಿಸರದ ಕುರಿತಾದ ಮಾಹಿತಿಗಳು ದಂಡಿಯಾಗಿ ದೊರಕುತ್ತಾ ಹೋಗುತ್ತವೆ. ಕೆಲವೊಮ್ಮೆ ತೇಜಸ್ವಿಯವರ ಪುಸ್ತಕವನ್ನೇನಾದರೂ ಓದುತ್ತಿದ್ದೇವಾ ಎಂಬ ಅನುಮಾನ ಸುಳಿಯದೇ ಇರದು. ಕಾದಂಬರಿ ಎಂದಾಕ್ಷಣ ನಮಗೆ ಬೇರೆಯದ್ದೆ ನಿರೀಕ್ಷೆ ಇರಬಹುದು. ಆದರೆ, ಪರಿಸರದ ಕುರಿತಾಗಿ ಯಾನ ಹೊರಡಿಸುವ ಈ ಕಾದಂಬರಿಯ ಶೀರ್ಷಿಕೆ 'ಈಗಲ್ ಲೈನ್ಸ್' ತನ್ನ ಗುಟ್ಟು ಬಿಟ್ಟುಕೊಡದಂತೆ ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ.
ತನ್ನ ಹಿರಿಯರು ಅದರಲ್ಲೂ.. ತನ್ನಮ್ಮನ ತವರಿನ ಹಿರಿಯರು ಬಾಳಿ ಬದುಕಿದ ಊರಿಗೆ ತನ್ನ ಡಾಕ್ಟರೇಟ್ ಅಧ್ಯಯನದ ನೆಪದಲ್ಲಿ ಮಾಹಿತಿ ಸಂಗ್ರಹಕ್ಕೆಂದು ಬರುವ ನಾಯಕನ ಎದುರಿಗೆ ತೆರೆದುಕೊಳ್ಳುವ ಲೋಕವೇ ಬೇರೆ. ಅಲ್ಲೊಂದು ಮುಗ್ಧತೆಯಿದೆ. ಹಾಗೆಂದು ಅದು ಕೇವಲ ಮುಗ್ಧತೆಯನ್ನು ಮಾತ್ರ ಪರಿಚಯಿಸದೆ.. ಮುಗ್ಧ ಮನುಷ್ಯರ ಆಲೋಚನಾ ಲಹರಿ, ಊರಿನವರು ಅದನ್ನು ಬಳಸಿಕೊಳ್ಳುವ ರೀತಿ, ಅವರ ನಂಬಿಕೆಗಳು ಹಾಗೂ ಅದಕ್ಕೂ ನಾಯಕನ ಆಲೋಚನಾ ಲಹರಿಯಿಂದ ಎತ್ತಿ ತೋರುವ ವಿಭಿನ್ನತೆಗೂ ತಲೆಮಾರುಗಳ ನಡುವಿನ ಆಲೋಚನೆಯ ಅಂತರವೂ ಕಾಣುತ್ತದೆ. ನಾಯಕನಿಗಿಂತಲೂ ನನಗೆ ಮೊರೋಣಿ ಹಾಗೂ ಮಾಣಿಗನಂತೂ ಬಹಳವೇ ಹಿಡಿಸಿದರು.
ನಾಯಕ ಮಾಳ ಎಂಬ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಕ್ಕೆ ಕಾಲಿಟ್ಟಾಗ ಅಕ್ಟೋಬರ್ ತಿಂಗಳು. ಆಗ ಅಲ್ಲಿನ ವಾತಾವರಣಕ್ಕೂ.. ನಾಯಕ ಬೆಳೆದ ಬೆಂಗಳೂರಿಗೆ ಬೇರೆಯದ್ದೇ ತೆರನಾದ ಪರಿಸರವಿರುತ್ತದೆ. ಮನೆಯ ಮುಂಭಾಗಕ್ಕೆ ರಿಕ್ಷಾದಲ್ಲಿ ಇಳಿದ ತಕ್ಷಣವೇ ಸಿಕ್ಕ ಇಬ್ಬರೂ ಯುವಕರು ಊರಿನ ಪರಿಸರಕ್ಕೆ ನಾಯಕನನ್ನು ಪರಿಚಯಿಸುವ ಕೊಂಡಿಯಾಗಿ ಮಾತ್ರ ಕಾಣದೆ ನಮಗೂ ಆಸಕ್ತಿ ಮೂಡಿಸುತ್ತಾರೆ.
ಡಾಕ್ಟರೇಟ್ ಎಂದರೆ ತಿಳಿದರದ ಅವರು ಡಾಕ್ಟರ್ ಕಲಿಯುವಿಕೆಗೆ ಬಂದವರು ಎಂದು ತಿಳಿದುಕೊಂಡು 'ಪಂಡಿತರಾಗಲು ಬಂದಿದ್ದೀರಾ..?' ಎಂದು ಕೇಳುವ ಮುಗ್ಧತೆಯಿಂದ.. ಅಲ್ಲಿನ ಊರಿನಲ್ಲಿ ಕೆಲವು ಮನೆಗಳಲ್ಲಿ ವಿದ್ಯುತ್ ಇನ್ನೂ ಕಾಲಿಟ್ಟಿರದೆ, ಸಂಜೆಗೆ ಊಟ ಮುಗಿಸುವ ಪರಿಸ್ಥಿತಿಯನ್ನೂ ತೋರಿಸುತ್ತಾರೆ.
ಓಡಾಟಕ್ಕೆ ಅಲ್ಲೇ ಪಿಟ್ಟಿಯ ಗ್ಯಾರೇಜಿನಲ್ಲಿ ಮುಂಭಾಗ ಕೊಂಚ ನುಜುಗುಜ್ಜಾಗಿದ್ದ ಸ್ಕೂಟರ್ ಸಿಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಮೊರೋಣಿ ಹಾಗೂ ಆತನ ಅಣ್ಣ ಮಾಣಿಗನ ಜೊತೆಗಿನ ಒಡನಾಟ.
ಪಿಲಿಪಂಜರ ತೋಕೆ ಎಂದರೆ... ಅಜ್ಜನ ಕಾಲದಲ್ಲಿ ಹುಲಿ ಹಿಡಿಯಲು ಮಾಡಿದ ಕಲ್ಲಿನ ಗೂಡಿನಿಂದ ಶುರುವಾಗುವ ಅವರ ಜೊತೆಯ ಪ್ರಯಾಣ, ನಂತರ ಹಲವಾರು ಸಸ್ಯಗಳನ್ನು ಸಂಗ್ರಹ ಮಾಡುವಲ್ಲಿ ಓಡಾಡುತ್ತಾ, ಅವುಗಳ ಹೆಸರನ್ನು ಹೇಳುತ್ತಿದ್ದ ಮೊರೋಣಿಯನ್ನು ಹೆಚ್ಚು ನಂಬದ ನಾಯಕ.. ಮಾಣಿಗನನ್ನು ಒಮ್ಮೆ ಕೇಳಿ ತನ್ನ ಅನುಮಾನವನ್ನು ಬಗೆಹರಿಸಿಕೊಳ್ಳುತ್ತಾನೆ. ಆದರೆ, ಮಾಣಿಗನಿಗೂ ಸಸ್ಯಗಳ ಕುರಿತ ಜ್ಞಾನ ಚೆನ್ನಾಗಿಯೇ ಇತ್ತು. ತನ್ನ ಡಾಕ್ಟರೇಟ್ ಅಧ್ಯಯನಕ್ಕೆ ಬೇಕಾಗಿರುವ ಸೊಪ್ಪುಗಳನ್ನು ಸಂಗ್ರಹಿಸಿ, ಒಣಗಿಸಿ ಬೆಂಗಳೂರಿಗೆ ಕಳಿಸಬೇಕಾಗಿತ್ತು. ಅದಕ್ಕೆ ಸಹಾಯವಾಗಿ ಸಿಕ್ಕಿದವನೇ ಮಾಣಿಗ.
ಮಾಣಿಗನಂತೂ ಅವನ ಬಹುಮುಖ ಪ್ರತಿಭೆಯಿಂದ ಮುಂದೆ ಪ್ರತಿ ಬಾರಿಯೂ ಕೇವಲ ನಾಯಕನನ್ನಷ್ಟೇ ಅಲ್ಲದೆ ನಮ್ಮನ್ನೂ ಸೆಳೆಯುತ್ತಾ ಹೋಗುತ್ತಾನೆ. ಹಳ್ಳಿಯಲ್ಲಿರುವ ಇಂತಹಾ ಬಹುಮುಖ ಪ್ರತಿಭೆಗಳು ಎಷ್ಟೋ ಬಾರಿ ದೊಡ್ಡವರು ಹಾಗೂ ತಮ್ಮ ನಡುವೆ ಇರುವ ಅಂತರದಿಂದ ಕೊಂಚ ದೂರವೇ ಉಳಿಯುತ್ತಾರೆ.
ಬೇಟೆಗೆ ಹೋಗುವ ಅನುಭವಗಳು, ಮೀನು ಹಿಡಿಯುವ ಅನುಭವ, ನಾಯಕನಿಗೆ ಮುಳ್ಳು ತಾಗಿದಾಗ ಅದಕ್ಕೆ ಅಲ್ಲೇ ಇದ್ದ ಸೊಪ್ಪಿನಿಂದ ರಸ ತೆಗೆದು ಮಾಡುವ ಚಿಕಿತ್ಸೆ, ಚೇಳು ಕಚ್ಚಿದ ಜಾಗಕ್ಕೆ ಮಾಡುವ ಚಿಕಿತ್ಸೆ ಇವೆಲ್ಲದರಿಂದ ಮತ್ತಷ್ಟು ಹತ್ತಿರವಾಗತ್ತಾ ಹೋಗುತ್ತಾನೆ.
ಹಕ್ಕಿಗಳ ಗೂಡು, ಅವುಗಳ ಬೇಟೆ, ಕಾಗೆಗಳ ಉಪದ್ರವ, ಹೆಜ್ಜೇನಿನ ಸವಿ, ಎಳನೀರು, ಉರುಳು ಹಾಕುವುದು, ಮೀನು ಹಿಡಿಯುವುದು, ಪ್ರಾಣಿಗಳ ಉಪಟಳ ತಡೆಯುವುದರ ಜೊತೆಗೆ ಬೇಟೆಗೂ ದಾರಿ ಮಾಡಿಕೊಳ್ಳುತ್ತಾ ಪರಿಸರದ ಜೊತೆಗೆ ಬದುಕುತ್ತಿರುವ ಅವರ ಕೆಲವು ಕ್ರಮಗಳಿಂದ ಪ್ರಾಣಿಗಳಿಗೆ ಉಂಟಾಗಬಹುದಾದ ಹಾಗೂ ಆರೋಗ್ಯದ ಮೇಲು ಉಂಟಾದ ಅಡ್ಡ ಪರಿಣಾಮಗಳನ್ನು ಹೇಳುತ್ತಾ ಹೋಗುತ್ತಾರೆ. ಆದರೆ, ಮೊದಲಿನಿಂದ ರೂಢಿಸಿಕೊಂಡು ಬಂದ ಅಭ್ಯಾಸ, ಹವ್ಯಾಸಗಳನ್ನು ತೊರೆಯುವುದು ಅಷ್ಟು ಸುಲಭವಾ..??
ಯಾರದ್ದೋ ಮನೆಯಲ್ಲಿ ಹಾವು ಹಿಡಿಯಲು ಕರೆದಾಗ ಅಲ್ಲಿ ಹೋಗಿ ಹಾವು ಹಿಡಿದು ದೂರಕ್ಕೆ ಬಿಟ್ಟರೂ.. ಆ ಮನೆಯವರು ಅದನ್ನು ಒಂದು ಉಪಕಾರವೆಂದು ಸ್ಮರಿಸದೆ ಇರುವುದು, ಜಾತಿಯಲ್ಲಿ ಕೆಳಗಿದ್ದವರು ಎಂಬ ಕಾರಣಕ್ಕಾಗಿ ಬೇರೆ ಮನೆಗಳಲ್ಲಿ ಮೊರೋಣಿ ಹಾಗೂ ಮಾಣಿಗನಿಗೆ ಸಿಗುವ ಉಪಚಾ,ರ ಗರ್ಭಿಣಿಯ ಸೀಮಂತದಲ್ಲಿ ದೃಷ್ಟಿ ತೆಗೆಯಲು ಮಾಣಿಗ ಹಾಗೂ ಆತನ ಪತ್ನಿ ಪಿಂಪೀರಿಯನ್ನು ಬಳಸಿಕೊಳ್ಳುವ ಪರಿ, ಕಂಬಳದ ಓಟಕ್ಕೆ ಇವರ ಸಹಕಾರ, ದೈವ ದರ್ಶನ, ಕೋಲಕ್ಕೆ.. ಹೀಗೆ ಊರಿನವರೆಲ್ಲರಿಗೂ ಉಪಕಾರ ಮಾಡುತ್ತಲೇ.. ಅಂತಹಾ ದೊಡ್ಡ ಉಪಕಾರವನ್ನು ತಾವೇನೂ ಮಾಡಿಲ್ಲವೆನ್ನುತ್ತಾ ದೂರ ನಿಲ್ಲುವ ಪರಿ, ಅಂತರ ಕಾಯ್ದುಕೊಳ್ಳುವ ಪರಿಯನ್ನು ಬೇರಾರು ಸ್ಮರಿಸದಿದ್ದರೂ.. ಇಂತಹಾ ಹೀರೋಗಳ ಕುರಿತು ನಾಯಕನ ದೃಷ್ಟಿಕೋನವನ್ನು ಕಂಡು ಹೆಮ್ಮೆಯಾಗುತ್ತದೆ.
ನಾಟಿ ವೈದ್ಯದ ಚಿಕಿತ್ಸೆಯನ್ನು ಮಾಡಿದರೂ ಅದನ್ನ ಗುಟ್ಟು ಬಿಟ್ಟುಕೊಡಲು ಒಪ್ಪದಿದ್ದ ಮಾಣಿಗ ನಶೆ ಏರಿದಾಗಲಾದರೂ ಹೇಳುತ್ತಾನೇನೋ ಎಂದುಕೊಂಡರೆ ಗುಟ್ಟು ಬಿಟ್ಟು ಕೊಡದೆ, ಅದನ್ನು ಜತನದಿಂದ ಕಾಯ್ದುಕೊಂಡ ಪರಿ.. ಆತನ ಪ್ರತಿಭೆಗೆ ಹಾಗೂ ಎಚ್ಚರದ ಸ್ಥಿತಿಗೆ ಹಿಡಿಯುವ ಕೈಗನ್ನಡಿಯಾಗುತ್ತದೆ.
ಗಂಧದ ತುಂಡು ಕೊಯ್ದು ಮಾರುವ ಪ್ರಸಂಗ ಹಾಗೂ ಹಾವಿನ ಚರ್ಮವನ್ನು ಮಾರಾಟ ಮಾಡುವ ವ್ಯಕ್ತಿ, ದೈವದ ಕಲ್ಲು ನಾಪತ್ತೆಯಾದಾಗ ಇಂತಹಾ ಪ್ರಸಂಗಗಳಲ್ಲಿ ತಿಪ್ಪೇಸ್ವಾಮಿ 'ಟೈಗರ್ ಜಯಕರ'ನಾಗಿ ನಮ್ಮನ್ನು ಎದುರುಗೊಳ್ಳುತ್ತಾನೆ.
ಹಳ್ಳಿಯಲ್ಲಿ ತನಗೆ ಅಷ್ಟೊಂದು ಸಹಕಾರ ನೀಡಿದವರಿಗೆ ಇದ್ದ ಆಸೆ ಎಂದರೆ.. ಬೆಂಗಳೂರು ನೋಡುವುದು. ಅದನ್ನು ಮುಂದೆಂದಾದರೂ ಈಡೇರಿಸುತ್ತೇನೆಂದುಕೊಳ್ಳುತ್ತಾರೆ. ಮತ್ತೊಂದು ಆಸೆಯೆಂದರೆ.. ಮಾಣಿಗನಿಗೆ ಇಷ್ಟವಾದ ಚಿನ್ನದ ಜರಿ ಹೊಂದಿರುವ ಬಿಳಿ ಪಂಚೆ, ಶರ್ಟು, ಶಲ್ಯವನ್ನು ಖರೀದಿಸಿ ಅಣ್ಣ-ತಮ್ಮಂದಿರಿಬ್ಬರಿಗೂ ಉಡುಗೊರೆಯಾಗಿ ನೀಡುವ ಸಂಧರ್ಭ ಆಪ್ತವಾಯಿತು.
"ಇಷ್ಟು ವರ್ಷಗಳ ಶ್ರಮಕ್ಕೆ ಸಿಕ್ಕಿದ್ದು ಒಂದು ಜುಜುಬಿ ಡಾಕ್ಟರೇಟ್. ನಾಲೇಜು ಬೇಕಿದ್ದಲ್ಲಿ ಮಾಣಿಗನ ಜೊತೆ ಕಾಡು ಅಲೆದಿದ್ದರೆ ಸಾಕು.. ಬದುಕಿನ ಪಿ.ಹೆಚ್.ಡಿ ಒಂದೇ ವರ್ಷಕ್ಕೆ ಸಿಗುತ್ತಿತ್ತು." ಎನ್ನುವ ಮಾತಿನಲ್ಲಿ ಎಷ್ಟೆಲ್ಲಾ ಅಡಗಿದೆ.
ಅಪ್ಪನಿಗೆ ಮಗನನ್ನು ಡಾಕ್ಟರೇಟ್ ಮಾಡಿಸಲೇಬೇಕೆಂದದ್ದು ಏಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತದೆ. ಮಾಣಿಗ ನೀಡಿದ ಕೊಳಲು ನೀಡುವ ಮುದ.. ಅದೇ ಕೊಳಲಿನಲ್ಲಿ ನುಡಿಸುವುದನ್ನು ಕಲಿತು ಮತ್ತೆ ಮಾಳದತ್ತ ಹೊರಟರೆ ಅಲ್ಲಿ ಕಂಡದ್ದೇನು..?? ಇದೆಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಈಗಲ್ ಲೈನ್ಸ್'.
ಕರಾವಳಿಯ ಪರಿಸರದವರು ನೀವಾಗಿದ್ದರಂತೆ.. ಈ ಕಾದಂಬರಿ ಮತ್ತಷ್ಟು ಹತ್ತಿರವಾಗುತ್ತದೆ. ಪರಿಸರಪ್ರಿಯರಾಗಿದ್ದರೆ ವಿಭಿನ್ನ ಓದು ಸಿಗುತ್ತದೆ. ಕಾದಂಬರಿಯಲ್ಲಿ ಹೆಚ್ಚಿನ ಸ್ವಾರಸ್ಯಕರ ಮಾಹಿತಿಗಳು ಹಾಗೂ ಅನುಭವಗಳು ದೊರೆಯುತ್ತಾ.. ಗೊತ್ತಿಲ್ಲದ ಎಷ್ಟೋ ಸಂಗತಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ನಾನು ಹೇಳಿರುವುದಕ್ಕಿಂತ ಹೆಚ್ಚಿನ ಚೆಂದದ ಕಾದಂಬರಿಯ ಓದಂತೂ ನಿಮ್ಮದಾಗಲಿದೆ. ಕಾದಂಬರಿಯಲ್ಲಿ ಕಥಾಹಂದರಕ್ಕಿಂತ ಕೊಂಚ ಮಾಹಿತಿ ಹೆಚ್ಚಾಯಿತೇನೋ ಎನ್ನಿಸಿದರೂ ಇದು ಕಾದಂಬರಿಯ ಪಾಸಿಟಿವ್ ಪಾಯಿಂಟ್ ಕೂಡ ಆಗಬಹುದು ಎನ್ನಿಸಿತು. ಪರಿಸರದ ಸೋಜಿಗ ತೆರೆದುಕೊಳ್ಳಬಹುದಾದ ಪರಿ ಆವರಿಸುತ್ತದೆ. ಲೇಖಕರ ಸಾಹಿತ್ಯ ಕೃಷಿಗೆ ಶುಭವಾಗಲಿ. ಇನ್ನಷ್ಟು ಚೆಂದದ ಕೃತಿಗಳು ಓದುಗರ ಕೈ ಸೇರಲಿ ಎಂದು ಶುಭ ಹಾರೈಕೆ ನನ್ನದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ