ಪುಸ್ತಕದ ಶೀರ್ಷಿಕೆ : ಕಾಗೆಯ ಕಾಯಕ
ಲೇಖಕರು : ಡಾ|| ಕೃಷ್ಣಾನಂದ ಕಾಮತ್
ಪ್ರಕಾಶಕರು : ಪ್ರಿಸಮ್ ಬುಕ್ಸ್
ಪ್ರಥಮ ಮುದ್ರಣ : 2000
ಪುಟಗಳು : 80
ಬೆಲೆ : 35 ರೂ.
ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಡಾ|| ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದರು. ಕೃಷ್ಣಾನಂದ ಕಾಮತರು ಪ್ರವಾಸಕಥನ, ವಿಜ್ಞಾನ, ಜನಾಂಗೀಯ ಅಧ್ಯಯನ, ಕಲೆ, ಪರಿಸರ ಮೊದಲಾದ ವಿಷಯಗಳ ಬಗ್ಗೆ ಪುಸ್ತಕಗಳನ್ನೂ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಕೃಷ್ಣಾನಂದ ಕಾಮತರ ಪತ್ನಿ ಶ್ರೀಮತಿ ಜ್ಯೋತ್ಸ್ನಾ ಕಾಮತ್ ಅವರು ಸಹ ಸಂಶೋಧಕಿ ಹಾಗೂ ಲೇಖಕಿ.
ಕೃಷ್ಣಾನಂದ ಕಾಮತ್ ಅವರ ಕೃತಿಗಳು- ವಂಗದರ್ಶನ (ಬಂಗಾಲದ ಕುರಿತು), ಪ್ರೇಯಸಿಗೆ ಪತ್ರಗಳು, ಮರುಪಯಣ, ಪತ್ರ-ಪರಾಚಿ, ಭಗ್ನಸ್ವಪ್ನ (ಕಾದಂಬರಿ), ನಾ ರಾಜಸ್ಥಾನದಲ್ಲಿ, ಕಲೆ-ಕಾವಿಕಲೆ, ಅಕ್ಷತ, ಇರುವೆಯ ಇರುವು, The Timeless Theater, ಕಾಗೆಯ ಕಾಯಕ, ಪ್ರವಾಸಿಯ ಪ್ರಬಂಧಗಳು, ಕೊಂಕಣ್ಯಾಲಿ ಕಾವಿಕಲಾ (ಕೊಂಕಣಿ ಭಾಷೆ), ಕಾಲರಂಗ, ಬಸ್ತರ ಪ್ರವಾಸ (ಗಿರಿಜನರ ಪರಿಚಯ), ಮಧ್ಯಪ್ರದೇಶದ ಮಡಿಲಲ್ಲಿ ಮುಂತಾದವು.
ಕಾಗೆಯ ಕುರಿತು ಬರೆದಿರುವ ಇಲ್ಲಿನ ಲೇಖನಗಳಲ್ಲಿ ಮಾಮೂಲಿನಂತೆ ವಿಜ್ಞಾನದ ಥಿಯರಿ ಇರಬಹುದಾ ಎಂದುಕೊಂಡೇ ಶುರು ಮಾಡಿದೆ. ಆದರೆ, ಲೇಖಕರ ಬರಹದ ಶೈಲಿ ವಿಭಿನ್ನವಾಗಿದ್ದು ಅವರು ಕಾಗೆಯ ಜೀವನಶೈಲಿಯನ್ನು ಹತ್ತಿರದಿಂದ ನೋಡಿದ್ದನ್ನು ವಿನೋದಾತ್ಮಕವಾಗಿಯೂ ಹಾಗೂ ಆಸಕ್ತಿ ಮುಡಿಸುವಂತೆಯೂ ಹೇಳುತ್ತಾರೆ. ಈ ಲೇಖನಗಳನ್ನು ಓದಿದ ಹಲವರು ಲೇಖಕರನ್ನು 'ಕಾಗೆ ಕಾಮತ್' ಎಂದು ಕರೆದದ್ದನ್ನು ನೆನಪಿಸಿಕೊಳ್ಳುತ್ತಾರೆ.
ಸಾಮಾನ್ಯವಾಗಿ ನಮ್ಮ ನೆಚ್ಚಿನ ಹಕ್ಕಿಯ ಹೆಸರು ಹೇಳುವಾಗ 'ಕಾಗೆ' ಎಂದು ಹೇಳುವವರು ಎಷ್ಟು ಜನ ಇದ್ದಾರು..?? ಕಡುಗಪ್ಪು ಬಣ್ಣ ಹಾಗೂ ಅವರ ಧ್ವನಿಯಿಂದ, ವ್ಯಾಪಕವಾಗಿರುವ ಮೂಢನಂಬಿಕೆಗಳಿಂದ ಕಾಗೆಯನ್ನು ಇನ್ನಿತರ ಪಕ್ಷಿಗಳಂತೆ ನೋಡುವುದೇ ಇಲ್ಲ. ಕಾಗೆಯನ್ನು ತುಚ್ಛ ಪಕ್ಷಿಯಂತೆ ಕಂಡವರೇ ಅದನ್ನು ಕಾಯುವ (ತಿಥಿಗಳಲ್ಲಿ) ಸಂಧರ್ಭವೂ ಇಲ್ಲದಿಲ್ಲ.
ಕಾಗೆ ಕೂಗುವ ಧ್ವನಿಯನ್ನು ಅವಲೋಕಿಸಿ ಹಳ್ಳಿಯ ಕಡೆಗಳಲ್ಲಿ ಅಂದು ನೆಂಟರು ಬರುವರೆಂದೂ.. ಇಲ್ಲವೇ.. ಯಾರಾದರೂ ತೀರಿ ಹೋಗುವರೆಂದೂ ಹೇಳುವ ಶಕುನವಿದೆ. ಆದರೆ, ಕಾಗೆಯ ಧ್ವನಿಯನ್ನೇ ಅವಲೋಕಿಸಿ ಅದರ ವಯಸ್ಸು, ಮನಸ್ಥಿತಿ, ಲಿಂಗ, ಕಾಡು/ನಾಡು ಕಾಗೆ ಎಂಬುದನ್ನು ಹೇಳುವ ನಿಖರತೆಯ ಕುರಿತು ಉಲ್ಲೇಖಿಸಿದ್ದನ್ನು ಓದಿ ಅಚ್ಚರಿಯಾಯಿತು.
ಕಾಗೆಯನ್ನು ಮನೆಯ ಹತ್ತಿರಕ್ಕೆ ಬಂದಾಗ ಓಡಿಸುವುದನ್ನು ನಾವು ನೋಡಿದ್ದೇವೆ ಹಾಗೂ ರೂಢಿಸಿಕೊಂಡಿದ್ದೇವೆ. ಅದಕ್ಕೆ ಕಾರಣಗಳು ಹಲವಾರು. ಮಕ್ಕಳ ತಿಂಡಿ ಕಿತ್ತುಕೊಳ್ಳುತ್ತದೆ, ಒಣಗಲು ಹಾಕಿರುವುದನ್ನು ಎತ್ತಿಕೊಂಡು ಹೋಗುತ್ತದೆ, ಕಾಗೆ ಮನೆ ಹೊಕ್ಕಬಾರದು, ಮುಟ್ಟಬಾರದು ಎನ್ನುವ ಹಲವು ಆಲೋಚನೆಗಳು. ಆದರೆ, ಇದಕ್ಕೆ ತದ್ವಿರುದ್ಧವಾದ ಘಟನೆಯೊಂದನ್ನು ನಾನು ನೋಡುತ್ತಿದ್ದೆ. ಚೆನ್ನೈನಲ್ಲಿ ನಾನಿದ್ದ ಮನೆಯ ಪಕ್ಕದಲ್ಲಿದ್ದ ಕೇರಳದ ವೃದ್ಧ ದಂಪತಿಗಳು ಮಧ್ಯಾಹ್ನ ಸರಿಯಾಗಿ 1.30 ಕ್ಕೆ ತಮ್ಮ ಮನೆಯ ಹೊರಭಾಗದಲ್ಲಿ ಕಾಗೆಗೆಂದೇ ಊಟ (ಅನ್ನ) ಹಾಕುತ್ತಿದ್ದರು. ಅವರಿಗಾಗಿ ಅಲ್ಲದಿದ್ದರೂ ಆ ಕಾಗೆಗಾಗಿ ಊಟ ಹಾಕಲು ಬೇಗ ಅಡುಗೆ ಮಾಡುತ್ತಿದ್ದರು. ನಾನು ಕುತೂಹಲದಿಂದ ಈ ಕುರಿತು ಕೇಳಿದಾಗ ಅದನ್ನು ತಾವು ಹಿರಿಯರ ರೂಪದಲ್ಲಿ ಕಾಣುವ ನಂಬಿಕೆಯ ಕುರಿತು ಹೇಳಿದರು.
ಇಲ್ಲಿನ ಲೇಖನದಲ್ಲಿ ಕಾಗೆಗಳ ಅನ್ನಾಹಾರದ ಕುರಿತು, ಮತ್ಸ್ಯ ಭೋಜನದ ಕುರಿತು ಬಹಳ ಚೆಂದದ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
ಕಾಗೆ ಎಲ್ಲವೂ ಒಂದೇ ರೀತಿ ಕಾಣುತ್ತವಲ್ಲಾ.. ಕಾಗೆಗಳಲ್ಲಿ ವಿವಿಧ ಕಾಗೆಗಳನ್ನು ಗುರುತಿಸುವುದಾದರೂ ಹೇಗೆ ಎನ್ನುವ ಸಂದೇಹವೂ ಮೂಡಿತ್ತು. ಬೇರೆ ಪ್ರಾಣಿ/ಪಕ್ಷಿಗಳಾದರೆ ಬಣ್ಣ, ಪಟ್ಟೆ, ಚುಕ್ಕಿ ಹೀಗೆ ಏನಾದರೊಂದು ವೈವಿಧ್ಯ ಕಾಣಬಹುದು. ಲೇಖಕರು ಈ ಸಂದೇಹಕ್ಕೂ ಚೆಂದದ ಉತ್ತರವನ್ನು ನೀಡುತ್ತಾರೆ.
ಕಾಗೆ ತನ್ನ ಜೊತೆಗಾರರನ್ನು ಹುಡುಕಿಕೊಳ್ಳುವ ಪರಿ, ಗೂಡು ಕಟ್ಟುವ ಹುಷಾರು, ಅದಕ್ಕಾಗಿ ಆರಿಸುವ ಸ್ಥಳ, ತನ್ನ ಸಂಗಾತಿ ಮೊಟ್ಟೆ ಇಡುವಾಗ ಜೋಪಾನ ಮಾಡುವ ಪರಿ, ಸಂತಾನೋತ್ಪತ್ತಿಯ ಕುರಿತು ತಿಳಿಸುತ್ತಾರೆ. ಕಾಗೆಗಳು ವರ್ಷದಲ್ಲಿ 3-4 ಬಾರಿ ಮೊಟ್ಟೆ ಇಟ್ಟು ಮರಿ ಮಾಡಿದರೂ ಆ ಮರಿಗಳಿಗೆ ಒದಗುವ ಅಪಾಯ.. ಅವುಗಳಿಂದ ಪಾರಾಗಿ ಉಳಿದ ಕೆಲವೇ ಸಂತತಿಗಳ ಕುರಿತು ಹೇಳುತ್ತಾರೆ. ಹಾಗಿಲ್ಲವಾದರೆ, ಭೂಮಿಯೇ ಕಾಗೆಮಯವಾಗುತ್ತಿತ್ತೇನೋ ಎನ್ನುವ ಭವಿಷ್ಯವನ್ನೂ ಹೇಳುತ್ತಾರೆ.
ಕಾಗೆಗಳಿಗೆ ಮನುಷ್ಯರಿಗಿಂತ ಹಾಗೂ ಪರಿಸರದ ಕೆಲ ಅಂಶಗಳಿಗಿಂತ ಅಪಾಯಕಾರಿ ವೈರಿ ಹದ್ದು. ಹದ್ದಿನಿಂದ ಅದು ತನ್ನನ್ನು ರಕ್ಷಿಸಿಕೊಳ್ಳುವ ಬಗೆ ಹಾಗೂ ಮರುದಾಳಿ ಮಾಡುವುದರ ಕುರಿತು ಸಹಾ ಹೇಳುತ್ತಾರೆ. 'ಕಲಹಪ್ರಿಯ' ಕಾಗೆಯ ಕುರಿತು ಹೇಳುತ್ತಲೇ.. ಅವುಗಳ ಒಗ್ಗಟ್ಟಿನ ದರ್ಶನವೂ ಆಗುತ್ತದೆ. ಮನುಷ್ಯನ ಮೇಲೆ ಆಕ್ರಮಣ ಮಾಡಲು ಹೊರಟ ಒಂದೆರಡು ಪ್ರಸಂಗಗಳ ಹಿಂದಿನ ಕಾರಣವನ್ನೂ ಬಿಚ್ಚಿಡುತ್ತಾರೆ.
ಮನುಷ್ಯನ ಸಾಮಾಜಿಕ ಸಂಘಜೀವನದಂತೆಯೇ ಕಾಗೆಯದ್ದನ್ನು ಸಮೀಕರಿಸುತ್ತಾ ಅಂಗವಿಕಲ ಕಾಗೆ.. ಕಾಗೆ ಪಂಚಾಯಿತಿ ಹಾಗೂ ಕಾಗೆಯ ಶಿಕ್ಷೆಗಳ ಕುರಿತು ಸಹಾ ಹೇಳುತ್ತಾರೆ.
ಇದಿಷ್ಟೂ ವೈಜ್ಞಾನಿಕ ದೃಷ್ಟಿಯಿಂದ ನೋಡಿದ್ದಾದರೆ.. ನಾನು ಗಮನಿಸಿರುವ ಒಂದು ಅಂಶವನ್ನು ಹಾಗೂ ಅಲ್ಲಿನ ಸ್ಥಳ ಪುರಾಣದ ಕುರಿತು ಕೇಳಿದ ಘಟನೆಯನ್ನೂ ಹೇಳಲು ಇಚ್ಛಿಸುತ್ತೇನೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಹಿಮವತ್ ಗೋಪಾಲ ಸ್ವಾಮಿ ಬೆಟ್ಟದ ದೇವಾಲಯದ ಸುತ್ತಲೂ ಕಾಗೆಗಳೇ ಕಂಡುಬರುವುದಿಲ್ಲ. ಸ್ಥಳಪುರಾಣವನ್ನು ಕೇಳಿದಾಗ ತಿಳಿದು ಬಂದದ್ದೆಂದರೆ.. ಅಲ್ಲಿನ ಒಂದು ಸರೋವರವನ್ನು ಹಂಸ ತೀರ್ಥ (ಹಂಸ ಸರೋವರ) ಎಂದು ಕರೆಯಲಾಗುತ್ತದೆ. ಈ ಕೆರೆಯ ಕುರಿತು ಒಂದು ಕಥೆಯಿದೆ. ಹಿಂದೊಮ್ಮೆ ಕಾಗೆಯೊಂದು ಈ ಸರೋವರದಲ್ಲಿ ಸ್ನಾನ ಮಾಡಿ ಹಂಸವಾಯಿತು ಎಂದು ಹೇಳಲಾಗುತ್ತದೆ. ಅದೇ ಕಾರಣಕ್ಕೆ ಈ ಸರೋವರಕ್ಕೆ ಹಂಸ ಸರೋವರ ಎನ್ನುವ ಹೆಸರಿದೆ. ಕುತೂಹಲಕಾರಿ ಅಂಶವೆಂದರೆ, ಈ ಸ್ಥಳದ ಸುತ್ತಲೂ ಯಾವುದೇ ಕಾಗೆಗಳು ಕಾಣಿಸಿಕೊಳ್ಳುವುದಿಲ್ಲ ಕೂಡ. ವರವೋ.. ಶಾಪವೋ.. ಪರಿಸರದ ಅಥವಾ ವೈಜ್ಞಾನಿಕ ಕಾರಣವೋ ತಿಳಿದಲ್ಲ. ಒಮ್ಮೆ ಭೇಟಿ ನೀಡಿದ ಸ್ಥಳದ ಕುರಿತು ಈ ಪುಸ್ತಕ ಓದಿದಾಗ ಆ ವೈಚಿತ್ರ್ಯದ ನೆನಪಾಯಿತು. (ಕೆದಕಿದರೂ.. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಅಲ್ಲಿ ಬೇರಾರೂ ಹೇಳಲಿಲ್ಲ.)
ಬಹುಶಃ ಕೆಲವು ವೈಚಿತ್ರ್ಯಗಳಿಗೆ ಉತ್ತರ ದೊರೆಯಲಾರದೇನೋ.. ಕಾಗೆಯ ಗೂಡಿಗೆ ಕೋಗಿಲೆ ತನ್ನ ಮೊಟ್ಟೆ ಸೇರಿಸುವ ಬಗೆಗೂ ಇಲ್ಲಿ ಹೇಗೆ ಎಂದು ತಿಳಿದಿಲ್ಲವೆನ್ನುತ್ತಾರೆ ಲೇಖಕರು.
ಜಾಣ ಕಾಗೆ ಎನ್ನುತ್ತಾ ಕಾಗೆಯ ಚಾಣಾಕ್ಷತೆಯನ್ನು ನೆನಪಿಸುತ್ತಾ ಒಂದೆರಡು ಕತೆಗಳನ್ನೂ ನೆನಪು ಮಾಡುತ್ತಾರೆ. ನೀರು ಎಟುಕದಾದಾಗ ನೀರಿನ ಹೂಜಿಗೆ ಕಲ್ಲು ಹಾಕಿದ ಕಾಗೆ (ಕೇವಲ ಕಾಲ್ಪನಿಕ ಕತೆಯಲ್ಲದೇ.. ಇತ್ತೀಚೆಗೆ ವೀಡಿಯೋ ಕೂಡಾ ವೈರಲ್ ಆಗಿದ್ದು ನೆನಪಾಯಿತು) , ಕಾಗೆ ಮಾಂಸದ ತುಣುಕೊಂದನ್ನು ಬಾಯಲ್ಲಿ ಕಚ್ಚಿಕೊಂಡು ಬಂದಾಗ ಅದನ್ನು ಪಡೆಯಲು ನರಿ ತೋರಿದ ಬುದ್ಧಿವಂತಿಕೆಗಿಂತ ಚಾಣಾಕ್ಷತೆಯನ್ನು ತೋರಿದ ಕಾಗೆಯನ್ನು ನೆನಪಿಸುತ್ತಾರೆ. ಕಾಗೆಯ ಕತೆಗಳನ್ನು ಮಾತ್ರವಲ್ಲದೇ ಅವುಗಳನ್ನು ಗಮನಿಸಿ ಅವು ತೋರುವ ಚಾಣಾಕ್ಷತೆಯನ್ನೂ ಉಲ್ಲೇಖಿಸಿದ್ದಾರೆ.
ಇಷ್ಟೇ ಅಲ್ಲದೇ.. ಅವರ ಮನೆಯ ಹತ್ತಿರ ಕಾಗೆ ಗೂಡು ಕಟ್ಟಿ ಅಲ್ಲಿ ಮರಿ ಮಾಡಿದಾಗ.. ಕಾಗೆಗಳು ಇಲ್ಲದ ಸಂಧರ್ಭದಲ್ಲಿ ಮರಿಕಾಗೆ ಕೆಳಗೆ ಬಿದ್ದಾಗ.. ಬಹುದಿನದ ಆಸೆಯಂತೆ ಕಾಗೆ ಸಾಕುವ ಆಸೆಯನ್ನು ಪೂರೈಸಿಕೊಳ್ಳಲು ಆ ಕಾಗೆಮರಿಯನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ.. ಮುಂದೆ..??
ಏನಾಯಿತೆಂದು ತಿಳಿಯಲು ಈ ಪುಸ್ತಕ ಓದಿ.
ಇಂತಹಾ ಹಲವಾರು ಮೋಜಿನ, ಪೇಚಿನ, ಆಕ್ರಮಣ, ಚಾಣಾಕ್ಷತೆಯ ಕಾಗೆಯ ಜೀವನವನ್ನು ಪರಿಚಯಿಸುತ್ತಾ ಕಾಗೆ ಎಂಬ ಆಸಕ್ತಿಕರ ಪಕ್ಷಿಯ ಕುರಿತು ಚಮತ್ಕಾರಿಕ ಘಟನೆಗಳನ್ನು ಹೇಳುತ್ತಾರೆ. ಹೇಳಿದ ಶೈಲಿ ಬಹಳ ಇಷ್ಟವಾಯಿತು. ಗಹನವಾದ ಇಂತಹಾ ವಿಜ್ಞಾನ ವಿಚಾರಗಳನ್ನು ಇವರಂತೆ ಹೇಳಹೊರಟರೆ ವಿಜ್ಞಾನ, ಪ್ರಾಣಿಪ್ರಪಂಚದ ಕುರಿತು ಅರಿಯುವುದು ಎಷ್ಟು ಸುಲಭವಲ್ಲವಾ ಎನ್ನಿಸಿತು. ಇಂತಹಾ ಮತ್ತಷ್ಟು ಪುಸ್ತಕಗಳನ್ನು ಓದುವ ಆಸಕ್ತಿ ಮೂಡಿದ್ದರ ಜೊತೆಗೆ ಸುತ್ತಮುತ್ತ ಇದ್ದರೂ ನಿರ್ಲಕ್ಷ್ಯಕ್ಕೊಳಗಾಗಿರುವ ಕಾಗೆಯ ಚಲನವಲನಗಳನ್ನು ಗಮನಿಸುವ ಆಸಕ್ತಿ ಬಂದಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ